ತೆಂಗಿನ ಸಸಿ ಕಳೆಗುಂದಿ ಸಾಯುವುದಕ್ಕೆ ಇದು ಕಾರಣ.

ತೆಂಗಿನ ಮರಗಳು ನೋಡು ನೋಡುತ್ತಿದ್ದಂತೆ ಕಳೆಗುಂದಿ ಸಾಯುತ್ತವೆ.ಇದಕ್ಕೆ ಕಾರಣ ಏನಿರಬಹುದು

ಬಹಳಷ್ಟು ಕೃಷಿಕರ ತೆಂಗಿನ ಮರಗಳು ನೋಡು ನೋಡುತ್ತಿದ್ದಂತೆ ಕಳೆಗುಂದಿ ಸಾಯುತ್ತವೆ.ಇದಕ್ಕೆ ಕಾರಣ ಏನಿರಬಹುದು? ನಮ್ಮ ಹಿರಿಯರು ತೆಂಗಿನ ಮರದ ಯಾವುದೇ ಹಸಿ ಭಾಗ ಕಡಿಯಬಾರದು ಎಂದಿದ್ದಾರೆ. ಹಾಗೆಯೇ ತೆಂಗಿನ ಮರ ಕಡಿಯಬಾರದು ಎಂದು ತಾಕೀತು ಮಾಡಿದ್ದಾರೆ. ಇದು ಯಾಕೆ ಗೊತ್ತೇ? ಒಂದು ಮರ ಕಡಿದರೆ ಅದರ ಫಲವಾಗಿ ನಾಲು ಮರ ಹೋಗುತ್ತದೆ. ಕಾರಣ ಮರದ ರಸದ ಆ ವಾಸನೆಯನ್ನು ಹುಡುಕಿಕೊಂಡು ಕೆಂಪು ಮೂತಿ ಹುಳ ಬರುತ್ತದೆ.ಅದು ಯಾವುದಾದರೂ ಮರದಲ್ಲಿ ತನ್ನ ಸಂತಾನಾಭಿವೃದ್ದಿ ಮಾಡುತ್ತದೆ.

Infected plant

  • ತೆಂಗಿನ  ಮರಗಳಿಗೆ ಕುರುವಾಯಿ ಕೀಟ ಹಾನಿ ಮಾಡುವುದಕ್ಕಿಂತಲೂ ಹೆಚ್ಚಾಗಿ ತೊಂದರೆ ಮಾಡುವ ಮತ್ತೊಂದು ಅಸಾಮಾನ್ಯ ಕೀಟ, ಕೆಂಪು ಕುರುವಾಯಿ.
  • ಮರದ ಶಿರ ಭಾಗಕ್ಕೇ ಹಾನಿ ಮಾಡಿ, ಮರವನ್ನೇ ನಾಶ ಮಾಡುವ ಇದನ್ನು ಹೆಚ್ಚಿನ ರೈತರು ಗಮನಿಸಿರುವುದಿಲ್ಲ.
  • ತೆಂಗು ಬೆಳೆಯಲಾಗುವ ಪ್ರಪಂಚದ ಎಲ್ಲಾ ಕಡೆ ಈ ಕೀಟದ ತೊಂದರೆ ಇದೆ.ಕೆಂಪು ಕುರುವಾಯಿಯು (The red palm weevil Rhynchophorus ferrugineus f) ದುಂಬಿಯ ಹಂತದಲ್ಲಿ ಯಾವುದೇ ಹಾನಿ ಮಾಡುವುದಿಲ್ಲ.
  • ಹೆಣ್ಣು ದುಂಬಿಯು ತೆಂಗಿನ ಮರದ ಮೃದು ಭಾಗದಲ್ಲಿ ಬಂದು ಕುಳಿತು ಮೊಟ್ಟೆ ಇಡುತ್ತದೆ.
  • ಮೊಟ್ಟೆ ಒಡೆದು ಮರಿಯಾದ ನಂತರ ಆ ಮರಿಯು ತೆಂಗಿನ ಮರದ ಶಿರದ ಎಳೆ ಭಾಗವನ್ನೇ ಅಡ್ದಾದಿಡ್ಡಿ ಕೆರೆದು ತಿನ್ನುತ್ತಾ ತನ್ನ  ಜೀವನ ಚಕ್ರವನ್ನು  ಅಲ್ಲೇ ಮುಂದುವರಿಸುತ್ತದೆ.

ಜೀವನ ಚಕ್ರ:

Pest attach at bottom

  • ಹೆಣ್ಣು ಕೆಂಪುಮೂತಿ ದುಂಬಿಯು ಹಾರುತ್ತಾ ಬಂದು, ಕುರುವಾಯಿ ಕೀಟ ಅಥವಾ ಇನ್ಯಾವುದೇ ಕೀಟ ತೆಂಗಿನ ಮರದಲ್ಲಿ ಮಾಡಿದ ಗಾಯವನ್ನು ವಾಸನೆಯ ಮೂಲಕ ಗ್ರಹಿಸಿ ಅಲ್ಲಿ ತನ್ನ ಮೊಟ್ಟೆ ಇಡುತ್ತದೆ.
  • ಒಮ್ಮೆ ಮೊಟ್ಟೆ ಇಡುವಾಗ  ಗರಿಷ್ಟ  300 ರಷ್ಟು ಮೊಟ್ಟೆಗಳನ್ನು ಇಡುತ್ತದೆ.
  • 3-5 ದಿನಗಳಲ್ಲಿ  ಮೊಟ್ಟೆ ಒಡೆದು ಮರಿಯಾಗುತ್ತದೆ.
  • ಈ ಮರಿಗಳು ತಕ್ಷಣದಿಂದಲೇ ಆಹಾರಕ್ಕಾಗಿ ರಸಭರಿತ ಎಳೆ ಭಾಗವನ್ನು ತಿನ್ನುತ್ತಾ, ಅಡ್ದಕ್ಕೂ ,ಕೆಳಕ್ಕೂ, ಮೇಲಕ್ಕೂ ಹೋಗುತ್ತದೆ.
  • ಹುಳು ಸಣ್ಣದಿರುವಾಗ ಬಿಳಿಯಾಗಿದ್ದುದು ಬೆಳೆಯುತ್ತಿದ್ದಂತೇ ಕೆನೆ ಬಣ್ಣಕೆ ತಿರುಗಿ ಸುಮಾರು 3-5 ಸೆ.ಮೀ. ಉದ್ದವಾಗುತ್ತದೆ.
  • ಹುಳುಗಳಿಗೆ ಹರಿತವಾದ ಎರಡು ಜೊತೆ ಹಲ್ಲುಗಳಿರುತ್ತದೆ.
  • ಶಿರಭಾಗದ ಎಳೆ ಕಾಂಡವನ್ನು ಕೊರೆಯುತ್ತಾ 36-78 ದಿನದಲ್ಲಿ ಹುಳದ ಹಂತ ಮುಗಿದು ಪ್ಯೂಪೆ (pupal)ಹಂತಕ್ಕೆ  ಬರುತ್ತದೆ.
  • ಅದು ಚೀಪಿದ ಚೂರುಗಳನ್ನು ತನ್ನ ಸುತ್ತ ಗೂಡಿನಂತೆ ರಚಿಸಿಕೊಂಡು 10 ರಿಂದ 15 ದಿನಕ್ಕೆ ಈ ಹಂತ ಮುಗಿಸಿ ದುಂಬಿಯಾಗುತ್ತದೆ.
  •  ಹೆಣ್ಣು 5 ದಿನದಲ್ಲಿ ಪುನಹ ಇನ್ನೊಂದು ಮರವನ್ನು ಹುಡುಕಿ ಮೊಟ್ಟೆ ಇಡಲಾರಂಭಿಸುತ್ತದೆ.
  • ಈ ದುಂಬಿಯು ಗರಿಷ್ಟ 4 ತಿಂಗಳ  ತನಕ ಬದುಕಿರುತ್ತದೆ. ಹಗಲು, ರಾತ್ರೆ  ಎರಡೂ ಹೊತ್ತಿನಲ್ಲೂ ಕೊರೆಯುತ್ತಿರುತ್ತದೆ.

ಹಾನಿಯನ್ನು ಗುರುತಿಸುವುದು:

Symptoms of pest attach

  • ಸಾಮಾನ್ಯವಾಗಿ ಕೆಂಪು ಮೂತಿ ಹುಳ ಭಾಧಿಸಿರುವುದು ಗೋಚರವಾಗುವಾಗ, ಆ ಮರ  ಬಹುತೇಕ ಅಂತಿಮ ಹಂತಕ್ಕೆ  ತಲುಪಿರುತ್ತದೆ.
  • ಹೆಚ್ಚಿನವರು ತೆಂಗಿನ ಮರದ  ಶಿರಭಾಗ ಕಾಂಡಕ್ಕೆ ಜೋತು ಬೀಳುವುದನ್ನು ಕಂಡಿರಬಹುದು.
  • ಇದನ್ನು ಸಿಡಿಲು ಇಲ್ಲವೇ ಇನ್ಯಾವುದೋ ರೋಗ ಎಂದು ಭಾವಿಸುತ್ತಾರೆ.
  • ಆದರೆ ಇದು ಕೆಂಪು ಮೂತಿ ಹುಳದ ಉಪಟಳದಿಂದಾದ ಸಮಸ್ಯೆಯಾಗಿದೆ.
  • ಮೊದಲೇ ಹೇಳಿದಂತೇ, ಒಂದೇ ಒಂದು ಬೆಳವಣಿಗೆಯ ಅಂಗ ಇರುವ ತೆಂಗಿಗೆ ಅದೇ ಭಾಗಕ್ಕೆ ಹಾನಿಯಾದರೆ ಅದು ಅಂತ್ಯವಾದಂತೇ.
  • ಸಾಮಾನ್ಯವಾಗಿ ಎಲ್ಲಾ ಕಡೆಯಲ್ಲೂ ಕೆಂಪು ಮೂತಿ ದುಂಬಿ ಇರುತ್ತದೆ.
  • ಇದು ಮೃದುವಾದ ತೆಂಗಿನ ಮರದ ಶಿರ ಭಾಗಕ್ಕೇ ಹಾನಿ ಮಾಡುವುದು.

Feeder larvae of Red palm weevil

ತೆಂಗಿನ ಮರದ ಗರಿಗಳಲ್ಲಿ, ಗರಿ ದಂಟಿನಲ್ಲಿ ತೂತುಗಳು ಕಂಡು ಬಂದರೆ, ಕಾಂಡದಲ್ಲಿ ಗರಿಗಳು ಉದುರಿರುವ ಭಾಗದಲ್ಲಿ , ಚಪ್ಪರಿಕೆಗಳ ಭಾಗದಲ್ಲಿ  (ಗರಿಗಳನ್ನು ಪರಸ್ಪರ ಹೆಣೆದುಕೊಂಡ ರಚನೆ (fibrous network of light brown stipules)  ಕೆಂಪಗೆ ಮೇಣ  ಸ್ರವಿಸಿದಂತಃ ಚಿನ್ಹೆ ಕಂಡು ಬಂದರೆ ಅಲ್ಲಿ ದುಂಬಿ ಮೊಟ್ಟೆ ಇಟ್ಟು ಮರಿಯಾಗಿರುವ ಸಾಧ್ಯತೆ ಇರುತ್ತದೆ. ಅದನ್ನು ಅನುಭವ ಉಳ್ಳವರು ಮರ ಏರಿ, ಕೊರೆಯುವ ಶಬ್ಧವನ್ನು ಆಲಿಸಬಹುದು. ಇದಕ್ಕೆ ಈಗ ಎಲೆಕ್ಟ್ರೋನಿಕ್ ಸಾಧನ ವ್ಯವಸ್ಥೆಯೂ ಇದೆ.

Pupae of larvae

ಪರಿಹಾರ: 

  • ಕೆಂಪು ಮೂತಿ ಹುಳ ಆಕ್ರಮಣ ಮಾಡಿದ ನಂತರ ಉಂಟಾಗುವ ಹಾನಿಯನ್ನು ಪ್ರಾರಂಭದ ಹಂತದಲ್ಲಿ ಮಾತ್ರ ತಪ್ಪಿಸಬಹುದು.
  • ಮೊಟ್ಟೆ ಮರಿಯಾಗಿ ಮುಂದುವರಿದರೆ ಅದು ಮರವನ್ನೇ ಬಲಿತೆಗೆದುಕೊಳುತ್ತದೆ.
  • ಇದಕ್ಕಾಗಿ  ಮುಂಜಾಗ್ರತಾ ಕ್ರಮವನ್ನು ಅನುಸರಿಸುವುದು ಉತ್ತಮ.
  • ಗಂಡು  ಕೆಂಪು ಮೂತಿ ಹುಳವನ್ನು ಬಂಧಿಸಿ  ಹೆಣ್ಣು  ಸಂತಾನಾಭಿವೃದ್ದಿಯಾಗದಂತೆ ಮಾಡಲು ಲಿಂಗಾಕರ್ಷಕ ಬಲೆಗಳು ಇವೆ.
  • ಇವುಗಳನ್ನು ತೆಂಗಿನ ಹೊಲದಲ್ಲಿ ನೇತಾಡಿಸಿದರೆ  ಬಿಲ್ಲೆಯ ವಾಸನೆಯನ್ನು ಅರಸಿ ಗಂಡು ದುಂಬಿಗಳು ½  ಕಿಲೋ ಮೀಟರ್ ಸುತ್ತಳತೆಯಿಂದಲೂ ಬರುತ್ತವೆ.
  • ಪಾತ್ರೆಯೊಳಗೆ ಬಿದ್ದು ಗಂಡು ದುಂಬಿಯ ಸಂತತಿ ಕ್ಷೀಣಿಸಿ ಹೆಣ್ಣು, ಮೊಟ್ಟೆ ಇಡಲಾರದ ಸ್ಥಿತಿ ಉಂಟಾಗುತ್ತದೆ.
  • ಇಂತಹ ಮೋಹಕ ಬಲೆಗಳನ್ನು ಹಲವರು ತಯಾರಿಸಿ ಒದಗಿಸುತ್ತಾರೆ.
  • ಬಾಧಿಸಿದ ಮರಗಳನ್ನು ಉಪಚಾರ ಮಾಡದೇ ಹಾಗೇ ಬಿಟ್ಟರೆ ದುಂಬಿಯು ಬೇರೆ ಮರಗಳಿಗೂ ಹಾನಿ ಮಾಡಬಹುದು
  • .ಭಾಧಿಸಿದ ಮರದ ಅಂಗಾಂಗಳನ್ನು ತೆಗೆದು ಸುಟ್ಟು ನಾಶ ಮಾಡಬೇಕು.
  • ಮರದ ಭಾಧಿತ ಭಾಗಕ್ಕೆ(3 mili/lit) ಕ್ಲೋರೋಫೆರಿಫೋಸ್ , ಅಥವಾ  ಡೆಲ್ಟ್ರಾಮೆಥ್ರಿನ್ 2.5% (3 gram/lit) ಕೀಟನಾಶವನ್ನು ಹಾನಿಯಾದ   ಹಾಕಬೇಕು. ಆಗ ಮೊಟ್ಟೆ, ಹುಳು ಸಾಯುತ್ತದೆ

         ಪ್ರಾರಂಭಿಕ ಹಂತದಲ್ಲೇ ಹಾನಿಯನ್ನು ಗುರುತಿಸಿದರೆ ಅಂಥ ಮರದ ಭಾಧಿತ ಭಾಗವನ್ನು ಸ್ವಚ್ಚಗೊಳಿಸಿ, ಸುಳಿಗೂ ಸೇರಿಸಿ  ಇದೇ ಕೀಟನಾಶಕವನ್ನು ಹೊಯ್ದು ಹುಳುಗಳನ್ನು ಸಾಯಿಸಬಹುದು. ಮರದ ಕಾಂಡದಲ್ಲಿ ತೂತು ಮಾಡಿ ಮರಕ್ಕೆ 2 ರಂತೆ ಅಲ್ಯೂಮೀನಿಯಂ ಫೋಸ್ಫೇಟ್ ಗುಳಿಗೆ  ಹಾಕಬಹುದು.

  •    ತೆಂಗಿನ ತೋಟದ ನೈರ್ಮಲ್ಯ ಅತೀ ಮುಖ್ಯ. ಸುಳಿ ಕೊಳೆತು, ಸಿಡಿಲು ಬಡಿದು ಅಥವಾ ಇನ್ಯಾವುದಾದರೂ ಕಾರಣಗಳಿಂದ ಮರ ಸತ್ತರೆ ಅದರ ರಸ ವಾಸನೆಗೆ  ಹುಳ ಬಂದು ಅದರ ಸಂತಾನಾಭಿವೃದ್ದಿಯಾಗುತ್ತದೆ.
  • ಅಂಥ ಮರಗಳನ್ನು ಅಲ್ಲೇ ಬಿಡದೆ ಸೂಕ್ತ ವಿಲೇವಾರಿ ಮಾಡಿ. ತೆಂಗಿನ ಮರ ಕಡಿಯದಿರಿ.
  • ಕಡಿದರೂ ತಕ್ಷಣ  ವಿಲೇವಾರಿ ಮಾಡಿ ಕ್ಲೋರೋಫೆರಿಫೋಸ್ ದ್ರಾವಣ ಹೊಯ್ದು ಕೀಟಗಳು ಬಾರದಂತೆ ಮಾಡಿ.
  • ಸಿಡಿಲು ಬಡಿದ ಮರ ನಿಮ್ಮ ಹೊಲ ಇಲ್ಲವೇ ಬೇರೆಯವರ ಹೊಲದಲ್ಲಿದ್ದರೂ ಅದರ ರಸ ಸ್ರವಿಸಿದ ವಾಸನೆಗೆ ಹುಳ ಬರುತ್ತದೆ.
  • ಕುರುವಾಯಿ ಕೀಟದ ಅತಿಯಾದ ಉಪಟಳ ಇದ್ದರೂ  ಬರುತ್ತದೆ.
  • ಎಟಕುವ/ ಸಸಿ ಮರಗಳಿಗೆ ಪ್ರತೀ ವರ್ಷ ಮಳೆಗಾಲ ಪ್ರಾರಂಭದಲ್ಲಿ ಮತ್ತು ಮಳೆ ಮುಗಿಯುವ ಸಮಯದಲ್ಲಿ ಸುಳಿ ಭಾಗ ತೋಯುವಂತೆ ಕ್ಲೊರೋಫೆರಿಫೋಸ್  ದ್ರಾವಣ ಸಿಂಪಡಿಸಿರಿ.

ಇತ್ತೀಚಿನ ವರ್ಷಗಳಲ್ಲಿ ಈ ಕೀಟದ ಹಾವಳಿ ಹೆಚ್ಚಾಗಿದ್ದು ರೈತರು ಮರ ಉಳಿಸಿಕೊಳ್ಳುವುದಕ್ಕೆ ಸಾಹಸ ಪಡುವಂತಾಗಿದೆ.  ರೈತರು ಎಚ್ಚರಿಕೆಯಿಂದ ಇರಬೇಕು.    

Leave a Reply

Your email address will not be published. Required fields are marked *

error: Content is protected !!