ವೀಳ್ಯದೆಲೆ ಬೇಸಾಯ ವಾರದ ಆದಾಯದ ಬೆಳೆಯಾಗಿದ್ದು ಸಾಕಷ್ಟು ರೈತರು ನಿತ್ಯ ಖರ್ಚಿನ ಬೆಳೆಯಾಗಿ ಇದನ್ನು ಬೆಳೆಸುತ್ತಾರೆ. ಕರ್ನಾಟಕದಲ್ಲಿಇದರ ವಿಸ್ತೀರ್ಣ 8288 ಹೆಕ್ಟರ್ ಹಾಗೂ ಇಳುವರಿ 153600 ಮೆ.ಟನ್. ಎಲೆಗಳು ಉತ್ಪತ್ತಿಯಾಗುತ್ತಿದೆ.ಈ ಬೆಳೆಯಲ್ಲಿ ಇತ್ತೀಚೆಗೆ ಕೆಲವು ರೋಗಗಳು ಬೆಳೆಗಾರರನ್ನು ಸೋಲಿಸುತ್ತಿದೆ. ಎಲೆ ಚುಕ್ಕೆ ರೋಗ, ಎಲೆ ಮುರುಟು ರೋಗ, ಹಾಗೆಯೇ ಎಲೆಯ ಸೊರಗು ರೋಗ, ಜೊತೆಗೆ ಬುಡ ಕೊಳೆಯುವ ರೋಗ ಹೆಚ್ಚಿನ ವೀಲ್ಯದೆಲೆ ಬೇಸಾಯಗಾರರು ಅನುಭವಿಸುತ್ತಿರುವ ಸಮಸ್ಯೆ. ಇಂತಹ ವೀಳ್ಯದೆಲೆಗೆ ಮಾರುಕಟ್ಟೆ ಮೌಲ್ಯ ಇರುವುದಿಲ್ಲ.
- ಕರ್ನಾಟಕದ ಪ್ರಮುಖ ವೀಳ್ಯದೆಲೆ ಬೆಳೆಯುವ ಪ್ರದೇಶಗಳಾದ ಹಾವೇರಿ, ದಾವಣಗೇರೆ, ಮೈಸೂರು ಮತ್ತು ಬಾಗಲಕೋಟೆ ಗಳಲ್ಲಿ ಈ ರೋಗವುಅತೀ ಹೆಚ್ಚು ಹಾನಿಯನ್ನುಉಂಟು ಮಾಡುವುದುಕಂಡುಬಂದಿದೆ.
- ಉಳಿದ ಕಡೆಗಳಲ್ಲೂ ಇದರ ತೊಂದರೆ ಸಾಕಷ್ಟು ಇದೆ.
- ವೀಳ್ಯದೆಲೆಗೆ ಉತ್ತಮ ಬೆಲೆ ಮತ್ತು ಬೇಡಿಕೆ ಇರುವ ಕಾರಣ ರೈತರು ಬೆಳೆಯನ್ನು ಜಾಗರೂಕತೆಯಲ್ಲಿ ಉಳಿಸಿಕೊಳ್ಳಬೇಕು.
ರೋಗದ ಲಕ್ಷಣಗಳು:
- ಈ ರೋಗವು ಪ್ರಾರಂಭಿಕ ಹಂತದಲ್ಲಿ ಎಲೆಗಳ ಮೇಲೆ ನೀರಿನಿಂದ ಆವೃತ ಚುಕ್ಕೆಗಳನ್ನು ಹೊಂದಿದ್ದು ಕ್ರಮೇಣ ಅವು ಕಂದು ಬಣ್ಣಕ್ಕೆ ತಿರುಗುತ್ತವೆ.
- ಈ ಚುಕ್ಕೆಗಳ ಸುತ್ತ ಹಳದಿ ಬಣ್ಣವು ಆವೃತಗೊಂಡಿರುತ್ತದೆ.
- ರೋಗವು ಪಸರಿಸುತ್ತ ಎಲೆಯ ಹೆಚ್ಚಿನ ಭಾಗವನ್ನು ಆವರಿಸಿ ರೋಗ ಪೀಡಿತ ಭಾಗದಲ್ಲಿ ಸುಟ್ಟಂತೆ ಕಾಣುತ್ತದೆ.
- ರೋಗ ಪೀಡಿತ ಎಲೆಗಳು ತನ್ನ ಹೊಳೆತನ್ನು ಕಳೆದುಕೊಂಡು ಹಳದಿ ಬಣ್ಣಕ್ಕೆ ತಿರುಗಿ ಉದುರಿ ಬೀಳುತ್ತದೆ.
- ವಾತಾವರಣದಲ್ಲಿಆದ್ರ್ರತೆ ಹೆಚ್ಚಾದಂತೆ ರೋಗದ ಸೊಂಕು ಕಾಂಡದ ಮೇಲೆ ಕಾಣಿಸಿಕೊಳ್ಳುತ್ತದೆ.
- ಎಣ್ಣೆಯುಕ್ತ / ನೀರಿನಿಂದ ಆವೃತವಾದಂತಹ ಕಪ್ಪು ಮಚ್ಚೆಗಳು ಕೆಳ ಭಾಗದಕಾಂಡ ಮತ್ತು ಗಿಣ್ಣು / ಕಣ್ಣುಗಳ ಮಧ್ಯದಲ್ಲಿ ಕಾಣಿಸಿಕೊಳ್ಳುತ್ತದೆ.
- ಇಂತಹ ಮಚ್ಚೆಗಳು ಗಾತ್ರ ಹೆಚ್ಚಾದಂತೆ ಎರಡು ದಿಕ್ಕಿನಲ್ಲೂ ಪಸರಿಸಿ ಗಿಡದಕಾಂಡದ ತುಂಬೆಲ್ಲಾ ಹರಡುತ್ತದೆ.
- ರೋಗ ಪೀಡಿತ ಕಾಂಡಗಳು ನಿಶಕ್ತಗೊಂಡು ಗಿಣ್ಣು/ಕಣ್ಣುಗಳ ಜಾಗದಲ್ಲಿ ಸುಲಭವಾಗಿ ಮುರಿದು ಹೋಗುತ್ತದೆ ಹಾಗೂ ಗಿಡಗಳು ಪೂರ್ತಿಒಣಗುತ್ತವೆ.
ರೋಗಾಣು:
- ಈ ರೋಗವು ಜಾಂಥೊಮೋನಾಸ್ಆಕ್ಸೋನೊಪೋಡಿಸ್ ಪಿ.ವಿ ಬಿಟ್ಲಿಕೋಲ ಎಂಬ ದುಂಡಾಣುವಿನಿಂದ ಬರುತ್ತದೆ.
- ರೋಗವು ಹೆಚ್ಚಿನ ಆದ್ರ್ರತೆಯಿದ್ದಂತಹ ವಾತಾವರಣ ಅಥವಾ ಮಳೆಗಾಲದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.
- ಮಳೆ ಹನಿಯಿಂದ ಮತ್ತು ಹಿಮ ಹೆಚ್ಚಾಗಿ ಬೀಳುವಾಗ ಅದರ ನೀರಿನಿಂದ ಹೆಚ್ಚಾಗಿ ಹರಡುತ್ತದೆ.
ಅನುಕೂಲಕರ ವಾತಾವರಣ:
- 2-3 ದಿನಗಳವರೆಗೆ ಮೋಡಕವಿದ ವಾತಾವರಣ,28-320 ಸೆ. ಉಷ್ಣಾಂಶ, 85% ಕ್ಕಿಂತ ಆದ್ರ್ರತೆ ಹೆಚ್ಚದಲ್ಲಿ ತೀವ್ರತೆ ಹೆಚ್ಚುತ್ತದೆ.
- ಎಲೆ ಬಳ್ಳಿಯಲ್ಲಿ ಕಾಣಿಸಿಕೊಳ್ಳುವ ಇತರ ರಸ ಹೀರುವ ಕೀಟಗಳಿಂದ ಈ ರೋಗವು ಒಂದು ಎಲೆಯಿಂದ ಮತ್ತೊಂದು ಗಿಡಕ್ಕೆ ಹರಡಲು ಉತ್ತೇಜನ ನೀಡುತ್ತದೆ.
- ಉದುರಿ ಬಿದ್ದರೋಗಗ್ರಸ್ತ ಎಲೆಗಳು ಸೊಂಕು ಹರಡುವ ರೋಗಾಣುವಾಗಿ ಉಳಿಯುತ್ತವೆ.
- ಇಂತಹ ಎಲೆಗಳಲ್ಲಿ ದುಡಾಂಣುವು ಬದುಕುಳಿದಿದ್ದು ಮುಂದಿನ ಬೆಳೆಗೆ ಮಳೆಯ ನೀರಿನ ಸಿಡಿತದೊಂದಿಗೆ ಪಸರಿಸುತ್ತದೆ.
- ತುಂತುರು ನೀರಾವರಿ, ಹರಿ ನೀರಾವರಿ ಆಳವಡಿಸಿದ ತೋಟದಲ್ಲಿ ಈ ರೋಗದ ತೀವ್ರತೆ ಹೆಚ್ಚಾಗಿ ಕಂಡು ಬಂದಿದೆ.
ಸಮಗ್ರರೋಗ ಹತೋಟಿಕ್ರಮ:
ಒಂದು ವೇಳೆ ನಿಮ್ಮ ವೀಳ್ಯದೆಲೆ ಬಳ್ಳಿಗಳಲ್ಲಿ ಈ ರೋಗ ಇದ್ದರೆ ಅಲ್ಲಿಂದ ಹೊಸ ನೆಡು ಬಳ್ಳಿಯನ್ನು ಆಯ್ಕೆ ಮಾಡುವಾಗ ತುಂಬಾ ಜಾಗರೂಕತೆ ವಹಿಸಬೇಕು. ಈ ರೋಗ ಬಂದಿದ್ದರೆ ಅದನ್ನು ನಿಯಂತ್ರಣ ಮಾಡಿ ಅದು ಹೋದ ನಂತರವೇ ಬಳ್ಳಿ ತುಂಡುಗಳನ್ನು ನಾಟಿಗೆ ಬಳಸಬೇಕು.
- ರೋಗರಹಿತ ತೋಟದಿಂದ ಆರೋಗ್ಯಕರ ಬಳ್ಳಿ ತುಂಡುಗಳನ್ನು ನಾಟಿಗೆ ಉಪಯೋಗಿಸಬೇಕು.
- ವೀಳ್ಯದೆಲೆ ತೋಟವನ್ನು ಕಳೆಮುಕ್ತವಾಗಿ ಇಡಬೇಕು.
- ರೋಗಪೀಡಿತ ಎಲೆ ಹಾಗೂ ಬಳ್ಳಿಯನ್ನು ಕಿತ್ತು ಸರಿಯಾದ ರೀತಿಯಲ್ಲಿ ನಾಶಪಡಿಸಲು ಭೂಮಿಯಲ್ಲಿ ಗುಂಡಿತೊಡಿ ಹೂತುಹಾಕಬೇಕು.
- ಅಥವಾ ಸುಟ್ಟು ಹಾಕಬೇಕು ಇದರಿಂದ ಎಲೆಗಳಲ್ಲಿ ಮತ್ತು ಬಳ್ಳಿಗಳಲ್ಲಿ ಉಳಿದುಕೊಂಡು ಪಸರಿಸುವ ಸೊಂಕನ್ನು ನಾಶಗೊಳಿಸಬಹುದು.
- ತುಂತುರು ನೀರಾವರಿ ಪದ್ದತಿ ಅಳವಡಿಸಬಾರದು.
- ಬಳ್ಳಿ ಇಳಿಸಿದ ನಂತರ ರೋಗಗ್ರಸ್ಥ ಎಲೆಗಳು / ಬಳ್ಳಿಗಳು ಇದ್ದಲ್ಲಿ ರಸಸಾರ 7 ಇರುವ ಶೇಕಡ 1 ರ ಬೋರ್ಡೊದ್ರಾವಣವನ್ನು ನೆನೆಯುವಂತೆ ಸುರಿಯಬೇಕು.
- ಎಲೆ ಬಳ್ಳಿಯಲ್ಲಿ ಬರುವ ಕೀಟಗಳ ಹತೋಟಿ ಮಾಡಿದಾಗ ಈ ರೋಗದ ಪ್ರಸರಣೆಯನ್ನು ಕಡಿಮೆಗೊಳಿಸಬಹುದು.
- ಎಲೆಯನ್ನುಕೊಯ್ಯುವಾಗ ರೋಗಗ್ರಸ್ಥ ಎಲೆಗಳಿಗೆ ಉಪಯೋಗಿಸುವ ಕಬ್ಬಿಣದ ಉಗುರನ್ನು (ಬ್ಲೇಡನ್ನು) ರೋಗರಹಿತ ಎಲೆಗಳನ್ನು ಕಟಾವು ಮಾಡಲು ಉಪಯೋಗಿಸಬಾರದು.
- ರೋಗ ಕಾಣಿಸಿಕೊಂಡ ಪ್ರಾರಂಭಿಕ ಹಂತದಲ್ಲಿ ರೋಗಗ್ರಸ್ಥ ಎಲೆಗಳನ್ನು ತೆಗೆದು ಹಾಕಿ ನಂತರ ಅಂತಹ ಬಳ್ಳಿಗಳಿಗೆ ಸ್ಟ್ರೆಪ್ಟೋಸೈಕ್ಲೀನ್5 ಗ್ರಾಂ.+ ತಾಮ್ರದ ಆಕ್ಸಿಕ್ಲೋರೈಡ್ 3ಗ್ರಾಂ. ಪ್ರತಿ ಲೀಟರ್ ನೀರಿಗೆ ಬೆರೆಸಿ 12 ರಿಂದ 15 ದಿನಗಳ ಅಂತರದಲ್ಲಿ ಸಿಂಪಡಿಸಬೇಕು.
ಜೈವಿಕ ನಿಯಂತ್ರಕಗಳನ್ನು ಕೊಟ್ಟಿಗೆ ಗೊಬ್ಬರದಜೊತೆ ಸೇರಿಸುವುದರಿಂದ ಬಳ್ಳಿಗಳಲ್ಲಿ ರೋಗನಿರೋದಕತೆ ಹೆಚ್ಚಾಗುತ್ತದೆ. ವೀಳ್ಯೆದೆಲೆ ಬಳ್ಳಿಗೆ ಟ್ರೈಕೋಡರ್ಮಾ, ಸೂಡೋಮೋನಸ್, ಮತ್ತು ವ್ಯಾಂ ಜೈವಿಕ ನಿಯಂತ್ರಕಗಳನ್ನು ಬಳಕೆ ಮಾಡಬೇಕು. ವೀಳ್ಯದೆಲೆ ಬಳ್ಳಿ ನೆಡುವಾಗ ಬಸಿ ವ್ಯವಸ್ಥೆಯನ್ನು ಅಗತ್ಯವಾಗಿ ಮಾಡಬೇಕು.
ಲೇಖಕರು: ಮಧುಶ್ರೀ ಕೆರಕಲಮಟ್ಟಿ (ತೋಟಗಾರಿಕಾ ಮಹಾವಿದ್ಯಾಲಯ, ಬಾಗಲಕೋಟ) ಮತ್ತು ಶೃತಿ ಟಿ. ಎಚ್. (ಕೃಷಿ ವಿಶ್ವವಿದ್ಯಾಲಯ ರಾಯಚೂರು)