ಕೊರೋನಾ ರೋಗದ ವಿರುದ್ಧ ದೇಹದ ಅಂತಃ ಶಕ್ತಿ ಹೆಚ್ಚಿಸಲು ವರ್ಜಿನ್ ಕೋಕೋನಟ್ ಆಯಿಲ್ ಒಳ್ಳೆಯದು ಎಂದು ಪ್ರಚಾರ ಪ್ರಾರಂಭವಾಗಿದೆ. ಅದರ ಜೊತೆಗೆ ಈ ಎಣ್ಣೆಗೆ ಬೇಡಿಕೆ ಹೆಚ್ಚಿದೆ. ನಿಜವಾಗಿ ವರ್ಜಿನ್ ಕೋಕೋನಟ್ ಆಯಿಲ್ ಮತ್ತು ತೆಂಗಿನೆಣ್ಣೆಗೆ ಏನು ವ್ಯತ್ಯಾಸ.
- ತೆಂಗಿನ ಕಾಯಿಯಿಂದಲೇ ಹಿಂದಿನಿಂದಲೂ ಎಣ್ಣೆ ತೆಗೆಯುತ್ತಿದ್ದುದು.
- ಇತ್ತೀಚಿನ ಕೆಲವು ವರ್ಷಗಳ ಹಿಂದೆ ನಮ್ಮಲ್ಲಿ ಶತಮಾನಗಳಿಂದ ಪ್ರಚಲಿತದಲ್ಲಿದ್ದ ಗಾಣದಿಂದ ಎಣ್ಣೆ ತೆಗೆಯುವ ತಂತ್ರಜ್ಞಾನ ವನ್ನು ಓವರ್ ಟೇಕ್ ಮಾಡಿ ಬಂದ ತಂತ್ರಜ್ಞಾನವೇ ವರ್ಜಿನ್ ಕೋಕೋನಟ್ ಆಯಿಲ್.
- ತೆಂಗಿನ ಕಾಯಿಯಿಂದ ಅದನ್ನು ಒಣಗಿಸದೆ ಕೆಲವು ವಿಧಾನಗಳಿಂದ ಎಣ್ಣೆ ತೆಗೆದರೆ ಅದು ವರ್ಜಿನ್ ಕೊಕೊನಟ್ ಆಯಿಲ್ ಆಗುತ್ತದೆ.
- ಇಲ್ಲಿ ಹಸಿ ತೆಂಗಿನ ಕಾಯಿಯನ್ನು ಎಣ್ಣೆ ತಗೆಯಲು ಬಳಸಲಾಗುತ್ತದೆ.
ಹೇಗೆ ಎಣ್ಣೆ ತೆಗೆಯುವುದು:
- ತೆಂಗಿನ ಕಾಯಿಯ ನೀರನ್ನು ಅದರ ಒಂದು ಕಣ್ಣಿನ ಮೂಲಕ ಹೊರತೆಗೆಯುತ್ತಾರೆ.
- ಆ ಕಾಯಿಯನ್ನು ಒಂದು ಯಂತ್ರಕ್ಕೆ ಹಿಡಿದು ಅದರ ಬ್ಲೇಡುಗಳ ಮೂಲಕ ಚಿಪ್ಪನ್ನು ತೆಗೆಯುತ್ತಾರೆ.
- ನಂತರ ಆ ಕಾಯಿಯ ಹೊರ ಭಾಗದ ಕಪ್ಪು ಸಿಪ್ಪೆಯನ್ನು ತೆಗೆಯಲಾಗುತ್ತದೆ.
- ಆಗ ತೆಂಗಿನ ಕಾಯಿ ಬಿಳಿ ಬಣ್ಣದ ಬಾಲ್ ತರಹ ಆಗುತ್ತದೆ.
- ಆ ಕಾಯಿಯನ್ನು ಒಂದು ಯಂತ್ರಕ್ಕೆ ಹಾಕಿ ಅದರ ಹಾಲನ್ನು ಪ್ರತ್ಯೇಕಿಸುತ್ತಾರೆ.
- ಆಗ ಸಿಗುವ ಹುಡಿಯನ್ನು ಡೆಸಿಕೇಟೆಡ್ ಕೋಕೋನಟ್ ಮಾಡುತ್ತಾರೆ.
- ಹಾಲನ್ನು ವಿಷೇಷ ಪಾತ್ರೆಯಲ್ಲಿ ಹಾಕಿ ತೇವಾಂಶ ಆರುವ ತನಕ ಕುದಿಸಿ ಪಡೆಯುವ ಎಣ್ಣೆಯೇ ವರ್ಜಿನ್ ಕೊಕೋನಟ್ ಆಯಿಲ್.
ಕೆಲವರು ಇದನ್ನು ಕೋಲ್ಡ್ ಪ್ರೆಸ್( ಹೆಪ್ಪುಗಟ್ಟಿಸುವಿಕೆ) ಮೂಲಕ ತೆಗೆಯುತ್ತಾರಂತೆ.
ಮತ್ತೆ ಕೆಲವರು ಪ್ರೆಸ್ಸಿಂಗ್ ಮೂಲಕ ತೆಗೆಯುತ್ತಾರಂತೆ.
ಹೆಚ್ಚಾಗಿ ಎಲ್ಲರೂ ಕುದಿಸಿಯೇ ಎಣ್ಣೆ ತೆಗೆಯುತ್ತಾರೆ. ಇದರಲ್ಲಿ ತೇವಾಂಶ ಇಲ್ಲದ ಕಾರಣ ಬೇಗ ಕೆಡದು.
ತೆಂಗಿನೆಣ್ಣೆ ಗೂ ಇದಕ್ಕೂ ವ್ಯತ್ಯಾಸ:
- ಸಾಂಪ್ರದಾಯಿಕ ತೆಂಗಿನೆಣ್ಣೆ ಯನ್ನು ಒಣಗಿದ ಕೊಬ್ಬರಿಯಿಂದ ಅಥವಾ ಬಲಿತ ತೆಂಗಿನ ಕಾಯಿಯನ್ನು ಒಡೆದು ಒಣಗಿಸಿ ಕೊಬ್ಬರಿ ಮಾಡಿ ಎಣ್ಣೆ ತೆಗೆಯುತ್ತಾರೆ.
- ಗಾಣ ಅಥವಾ ಎಕ್ಸ್ ಪೆಲ್ಲರ್ ಎಂಬ ಯಂತ್ರದಲ್ಲಿ ಹಾಕಿ ಅರೆದು ಹಿಂಡಿ ಹಿಪ್ಪೆ ಮಾಡಿ ಅದರ ಎಣ್ಣೆ ಅಂಶ ತೆಗೆಯಲಾಗುತ್ತದೆ.
- ಈ ವಿಧಾನದಲ್ಲಿ ಗಾಣ ಅಥವಾ ಎಕ್ಸ್ ಪೆಲ್ಲರ್ ಎಣ್ಣೆ ಹಿಂಡುವಾಗ ಅದು ಬಿಸಿಯಾಗುತ್ತದೆ ಎಂಬ ಅಪವಾದ ಇದೆ.
- ಸಾಂಪ್ರದಾಯಿಕ ಎಣ್ಣೆ ತೆಗೆಯುವ ವಿಧಾನದಲ್ಲಿ ತೆಂಗಿನ ಕೊಬ್ಬರಿಯ ಹೊರ ತೊಗಟೆ ( ಬೂದು ಬಣ್ಣದ ಭಾಗ) ತೆಗೆಯಲಿಕ್ಕಿಲ್ಲ.
- ಹೆಚ್ಚಾಗಿ ಸೂರ್ಯನ ಬೆಳಕಿನಲ್ಲಿ ಒಣಗಿಸುತ್ತಾರೆ. ಕೆಲವರು ಡ್ರೈಯರ್ ನಲ್ಲೂ ಒಣಗಿಸುತ್ತಾರೆ.
- ಆ ಸಮಯದಲ್ಲಿ ಒಡೆದ ಕೊಬ್ಬರಿಯ ಮೇಲೆ ಅಲ್ಪ ಸ್ವಲ್ಪ ಧೂಳು ಇರಬಹುದು ಎಂಬ ಅಪವಾದ ಇದೆ.
- ವರ್ಜಿನ್ ಕೋಕೋನಟ್ ಆಯಿಲ್ ಹಾಗಲ್ಲ. ಒಣಗಿಸಲಿಕಿಲ್ಲ. ದೂಳು ಇಲ್ಲ. ಆದ ಕಾರಣ ಪರಿಶುದ್ಧ ಎನ್ನಲಾಗುತ್ತದೆ.
ಇದೆಲ್ಲಾ ಎಷ್ಟು ನಿಜ:
- ವರ್ಜಿನ್ ಕೋಕೋನಟ್ ಆಯಿಲ್ ಮತ್ತು ಸಾಮಾನ್ಯ ತೆಂಗಿನ ಎಣ್ಣೆಗೆ ಅಂಥಹ ವೆತ್ಯಾಸ ಇಲ್ಲ.
- ಹೆಚ್ಚಿನವರು ವರ್ಜಿನ್ ಕೋಕೋನಟ್ ಆಯಿಲ್ ಅನ್ನು ಸಹ ಬಿಸಿ ಮಾಡಿಯೇ ತೆಗೆಯುತ್ತಾರೆ.
- ವರ್ಜಿನ್ ನಲ್ಲಿ ಪೋಷಕಾಂಶ ಹೆಚ್ಚು ಇದೆ, ತೆಂಗಿನೆಣ್ಣೆಯಲ್ಲಿ ಇಲ್ಲ ಎಂಬುದು ಒಂದು ವ್ಯಾಪಾರಿ ತಂತ್ರ.
- ವರ್ಜಿನ್ ಕೋಕೋನಟ್ ಆಯಿಲ್ ಎಂಬುದು ನಮ್ಮ ದೇಶದ ತಾಂತ್ರಿಕತೆ ಅಲ್ಲ. ಆದ ಕಾರಣ ನಮಗೆ ಪ್ರಿಯವಾಗಿದೆ.
- ಬಳಕೆದಾರರು ಕೊಬ್ಬರಿ ಎಣ್ಣೆಗೆ ಕೊಡುವ ಹಣದ ಎರಡು ಪಾಲು ಇದಕ್ಕೆ ಕೊಡಬೇಕಾಗುತ್ತದೆ.
- ತಜ್ಞರು ಹೇಳುವಂತ ಔಷಧೀಯ ಗುಣ ಸಾಮಾನ್ಯ ತೆಂಗಿನೆಣ್ಣೆಯಲ್ಲೂ ಇದೆ. ಇದನ್ನು ಬ್ಲೀಚ್ ಮಾಡಲಾಗುತ್ತದೆ ಎಂಬುದೆಲ್ಲಾ ಹಾಸಿ ಸುಳ್ಳು.
ನೀವು VCO ಮಾಡಬಹುದು:
- ಇಷ್ಟಕ್ಕೂ ವರ್ಜಿನ್ ಕೋಕೋನಟ್ ಆಯಿಲ್ ಅಥವಾ ತೆಂಗಿನ ಕಾಯಿಯ ಎಣ್ಣೆ ನಾವೇ ಮನೆಯಲ್ಲಿ ತೆಗೆಯಬಹುದು.
- ತೆಂಗಿನ ಕಾಯಿಯನ್ನು ತುರಿದು ಅರೆದು ಅದರ ಎಲ್ಲಾ ಹಾಲನ್ನೂ ಹಿಂಡಿ ತೆಗೆಯಿರಿ.
- ಆ ಹಾಲನ್ನು ತೇವಾಂಶ ಆರುವ ತನಕ ಕುದಿಸಿ. ಆಗ ದೊರೆಯುವ ಎಣ್ಣೆಯೇ ವರ್ಜಿನ್ ಕೋಕನಟ್ ಆಯಿಲ್.
- ಹೆಚ್ಚು ಕಾಯಿಸಿದರೆ ಅದರ ಬಣ್ಣ ಸ್ವಲ್ಪ ಬದಲಾಗುತ್ತದೆ.
- ವರ್ಜಿನ್ ಕೋಕೋನಟ್ ಆಯಿಲ್ ನಮಗೆ ಹೊಸತಲ್ಲ.
ನಮ್ಮ ಹಿರಿಯರು ಹಿಂದೆ ಗಾಣಕ್ಕೆ ಹೋಗಿ ಎಣ್ಣೆ ಮಾಡುವಷ್ಟು ಕಾಯಿ ಇಲ್ಲದಾಗ ಈ ರೀತಿಯಲ್ಲಿ ಎಣ್ಣೆ ತೆಗೆದು ಬಳಸುತ್ತಿದ್ದರು. ಕೆಲವೇ ಕೆಲವು ಜನ ಉತ್ತಮ ವಿಧಾನದಲ್ಲಿ ವರ್ಜಿನ್ ಕೋಕೋನಟ್ ಆಯಿಲ್ ತೆಗೆಯುವವರಿರಬಹುದು.