ಬಾಳೆಗೊನೆ ಯಾಕೆ ಹೀಗಾಗುತ್ತದೆ ಗೊತ್ತೇ?.

ಬಾಳೆಗೆ ಎಲ್ಲಾ ಗೊಬ್ಬರ, ನಿರ್ವಹಣೆ ಮಾಡಿದಾಗಲೂ ನಿಸ್ತೇಜವಾಗಿ ಎಲೆ ಹಳದಿಯಾಗುತ್ತಾ ಸಣಕಲು ಕಾಯಿಯ ಗೂನೆ ಬಿಡುವುದು, ಕಾಂಡದ ಭಾಗದಿಂದ ಅಥವಾ ಗೊನೆ ಭಾಗದಿಂದ ಮುರಿದು ಬೀಳುವುದು, ನಾವೆಲ್ಲಾ ಕಂಡ ಸಮಸ್ಯೆ. ಇದು ಗೊಬ್ಬರ ಅಥವಾ ಇನ್ಯಾವುದೇ ನಿರ್ವಹಣೆಯ ಕೊರತೆಯಿಂದ ಆಗುವುದಲ್ಲ. ಕೀಟ ಸಮಸ್ಯೆಯಿಂದ.

ಯಾಕೆ ಹೀಗಾಗುತ್ತದೆ?

  • ಒಂದು ಜಾತಿಯ ದುಂಬಿ ಬಾಳೆಯ ಗಡ್ಡೆಯಲ್ಲಿ ಸೇರಿ ಅಲ್ಲಿ ಮೊಟ್ಟೆ ಇಟ್ಟು ಹುಳವಾಗುತ್ತದೆ.
  • ಈ ಹುಳವು ಮಧ್ಯದ ದಂಟಿನ ಮೂಲಕ ಮೇಲೇರಿ ದಂಟನ್ನು ಭಕ್ಷಿಸಿ ಬೆಳೆಯುತ್ತದೆ.
  • ಮತ್ತೆ ಪುನಹ ಲಾರ್ವಾ ಹಂತವನ್ನು ಬಾಳೆ ದಂಟಿನಲ್ಲೇ ಮುಗಿಸಿ ಹೊರ ಬರುತ್ತದೆ.
  • ಇದು ಕಾಂಡದ ಒಳಗೆ ಸೇರಿದ ನಂತರ ಆ ಕಾಂಡದ ಮೂಲಕ ನೀರು , ಪೋಷಕಾಂಶದ ಪೂರೈಕೆ ಕಡಿಮೆಯಾಗಿ ಬಾಳೆ ಸೊರಗಿ ಕೊನೆಗೆ ಮುರಿದು ಬಿಳುತ್ತದೆ.

  • ಇದಕ್ಕೆ ಬನಾನ ರೈಝೋಮ್ ವೀವಿಲ್ (Banana rhizome weevil,Cosmopolires Sordidus Germer) ಎಂದು ಕರೆಯುತ್ತಾರೆ.
  • ಇದರ ಹುಳ ಹಂತದಿಂದ ದುಂಬಿ ಹಂತದ ತನಕದ ಆಯುಷ್ಯ 30-40 ದಿನಗಳು.

  • ಕೇರಳ ಮತ್ತು ಕರ್ನಾಟಕದ ಭಾಗಗಳಲ್ಲಿ ಇದರ ಹಾವಳಿ ಹೆಚ್ಚು.
  • ನೇಂದ್ರ , ಮೈಸೂರು ತಳಿಗೆ ಅತೀ ಹೆಚ್ಚು. ಕ್ಯಾವೆಂಡಿಶ್ ತಳಿಗಳಿಗೂ ಬರುತ್ತದೆ.
  • ಸಾಮಾನ್ಯವಾಗಿ ಈ ಹುಳವು ಬಾಳೆ ಗೊನೆ ಹಾಕುವ ಹಂತದಲ್ಲಿ ತೊಂದರೆ ಮಾಡುತ್ತದೆ.
  • ಕೊರೆದು ಭಕ್ಷಿಸುವ ಹುಳುಗಳು ಬಾಳೆಯ ಕಾಂಡದಲ್ಲಿ 2-3 ಅಡಿ ಮೇಲೆ ಇರುತ್ತವೆ.
  • 15-20 ದಿನ ಇವುಗಳ ಕೆಲಸ. ಪ್ಯೂಪೆ ಹಂತವು ಬುಡ ಭಾಗದಲ್ಲಿ ನಡೆಯುತ್ತದೆ.
  • ಆದರೆ ಪ್ಯೂಪೆ ಹಂತದಲ್ಲಿ ಇದು 1/2 ಸೆಂ ಮೀ. ಮಾತ್ರ ಇರುವ ಕಾರಣ ಕಾಣಲು ಸಿಗುವುದಿಲ್ಲ. ಇದು ಸುಮಾರು 8 ದಿನ.

ಪತ್ತೆ ಹೇಗೆ?

  • ಬಾಳೆಯ ಎಲೆಗಳು ಹಳದಿಯಾಗಿ ಕಾಂಡಕ್ಕೆ ಜೋತು ಬಿದ್ದಂತಿರುತ್ತದೆ.
  • ನಿಸ್ತೇಜವಾದ ಬಾಳೆಯ ದಂಟಿನಲ್ಲಿ ಅಂಟಾದ ದಪ್ಪ  ಮೇಣ ಸ್ರವಿಸಿರುವುದು ಕಂಡು ಬರುತ್ತದೆ.
  • ಒಂದು ಸಿಪ್ಪೆಯನ್ನು ಎಳೆದು ನೋಡಿದರೆ ಕಾಂಡದಲ್ಲಿ ತೂತುಗಳು ಇರುವುದು ಕಾಣುತ್ತದೆ.
  • ಕಾಂಡ ಕೊರೆಯುವ ಮೂತಿ ದುಂಬಿಯು ಆ ಬಾಳೆಯ ಬುಡದಲ್ಲಿ ಅಥವಾ ಸಸ್ಯದ ಸಿಪ್ಪೆಯಲ್ಲಿ ಹಗಲು ಹೊತ್ತಿನಲ್ಲಿ ಅವಿತಿರುತ್ತದೆ.

  • ಬೆಳೆದ ದುಂಬಿ ಕಪ್ಪಗೆಯೂ , ಆಗಷ್ಟೇ ಹೊರಬಂದ ದುಂಬಿ  ಬೂದು ಮಿಶ್ರ ಕೆಂಪಾಗಿಯೂ ಇರುತ್ತದೆ.
  • ಇವು ದೂರ ಹಾರುವುದಿಲ್ಲ. ಗಡ್ಡೆಯ ಮೂಲಕ  ಪ್ರಸಾರವಾಗುತ್ತದೆ.
  • ಮೊಟ್ಟೆಯನ್ನು ಹುಡುಕುವುದು ಕಷ್ಟ ಸಾಧ್ಯ. 6-8 ದಿನದಲ್ಲಿ ಮೊಟ್ಟೆ ಒಡೆದು ಮರಿಯಾಗುತ್ತದೆ.
  • ಗೊನೆ ಕಡಿದು ಅಲ್ಲಿಯೇ ಬಾಳೆಯ ದಂಟು, ಎಲೆ ಮುಂತಾದ ತ್ಯಾಜ್ಯಗಳು ಹಾಕಲಾಗುತ್ತದೆಯೋ, ನಿರ್ಲಕ್ಷ ಮಾಡಿದ ಕಡೆ ಇದು ವಾಸವಾಗಿರುತ್ತದೆ.
  • ಕೂಳೆ ಬೆಳೆಗೆ ಹೆಚ್ಚಿನ ತೊಂದರೆ. ನೇಂದ್ರಕ್ಕೆ ಅತೀ ಹೆಚ್ಚು.

ಬಾಳೆ ಗೊನೆ ಸಣಕಾಲಾಗಿರುವುದು, ಬಾಳೆಯ ಗಾತ್ರಕ್ಕೆ ತಕ್ಕುದಾದ ಗೊನೆ ಬಿಟ್ಟಿದ್ದರೂ ಆ ಗೊನೆಯ ಕಾಯಿ ಬೆಳೆಯದೆ ಇರುವುದು, ಎಲೆಗಳು ಹಳದಿಯಾಗಿ ಕಾಂಡಕ್ಕೆ ಜೋತು ಬೀಳುವುದು ಇದರ ಲಕ್ಷಣ.

ಹತೋಟಿ:

  • ಹತೋಟಿಗೆ ಗಡ್ಡೆಯನ್ನು ನೆಡುವಾಗಲೇ ಯಾವುದೇ ರೀತಿ ಕೀಟ  ಸೋಕು ಇಲ್ಲದಂತದ್ದನ್ನು  ಆರಿಸಬೇಕು.
  • ಗಡ್ಡೆಯನ್ನು ಕೀಟನಾಶಕದಲ್ಲಿ ಅದ್ದಿ ನೆಡಬೇಕು,. ನೆಡುವ ಗಡ್ಡೆಯ ಬುಡಕ್ಕೆ 5-10 ಗ್ರಾಂ ನಷ್ಟು ಪೋರೇಟ್  ಹರಳನ್ನು ಗಡ್ಡೆಯ ಬುಡ ಭಾಗಕ್ಕೆ  ಹಾಕಿ ನೆಡಬೇಕು.
  • ಒಂದು ಈ ದುಂಬಿ ತೋಟದಲ್ಲಿ ಕಂಡು ಬಂದರೆ ಯಾವುದದರೂ ಬಾಳೆಗೆ ಬಾದಿಸಿದೆ ಎಂದರ್ಥ.
  • ಅಕ್ಟೋಬರ್ ತಿಂಗಳಿನಿಂದ ಜನವರಿ ತನಕ ಇದರ ಹಾವಳಿ ಅಧಿಕ.
  • ಇದರ ನಿಯಂತ್ರಣಕ್ಕೆ ಪರಾವಲಂಬಿ ಜೀವಿಯನ್ನು ಕಂಡು ಹುಡುಕಲಾಗಿದೆ.
  • ಆದಾಗ್ಯೂ ಬಾಳೆ ಕಡಿದು ಅಲ್ಲಿ ಸ್ವಲ್ಪವೂ ಶೇಷ ಉಳಿಸದೇ ಸ್ವಚವಾಗಿಡುವುದು ಎಲ್ಲಕ್ಕಿಂತ ಒಳ್ಳೆಯದು.


 

  • ಪ್ಯುರಡಾನ್ ಕೀಟನಾಶಕ ಪರಿಣಾಮಕಾರಿಯಾದರೂ ಇದನ್ನು ಬಾಳೆಗೆ ಬಳಸದಿರಿ. ಡೆಲ್ಟ್ರಾ ಮೆಥ್ರಿನ್, ಕ್ಲೋರೋಫೆರಿಫೋಸ್, ಅಥವಾ ಡೈಮಿಥೋಯೇಟ್ ಕೀಟನಾಶಕವನ್ನು ಕಾಂಡಕ್ಕೆ ತೋಯುವಂತೆ ಸಿಂಪಡಿಸಿ.

ಬಾಳೆ ಗೊನೆ ಹಾಕುವಾಗ ಯಾವುದೇ ಬಾಳೆಯಾದರೂ ಸಿಂಪರಣೆ ಮಾಡುವುದು ಉತ್ತಮ. ಬುಡಕ್ಕೂ ಸ್ವಲ್ಪ  ಎರೆಯಬೇಕು.

ನಿರೋಧಕ ತಳಿ: 

ಈ ಕೀಟ ಸಮಸ್ಯೆಗೆ ನಿರೋಧಕ ಶಕ್ತಿ ಪಡೆದ ತಳಿಗಳು ಇಲ್ಲ. ಆದಾಗ್ಯೂ ಕ್ಯಾವೆಂಡೀಶ್ ಮತ್ತು ಜಾಂಜೀಬಾರ್ ನೇಂದ್ರ. ಸ್ಥಳೀಯ  ಗಾಳಿ, ಕದಳಿ, ಮಿಟ್ಲಿ ಕರ್ಪೂರವಳ್ಳಿ  ತಳಿಗಳು ಸ್ವಲ್ಪ ನಿರೋಧಕ ಶಕ್ತಿ ಪಡೆದಿವೆ.

ವಿಷೇಶ ಎಂದರೆ ಈ ಹುಳು ಬರುವುದೇ ಬಾಳೆಯಲ್ಲಿ ದಂಟು ಬರುವಾಗ. ದಂಟನ್ನೇ ತಿನ್ನುವ ಕಾರಣ ಬಾಳೆಯ ಕಥೆ ಮುಗಿದಂತೆ. ಬಾಳೆ ಗೊನೆ ಹಾಕುವ ಹಂತದಲ್ಲಿ ಈ ಹುಳದ ಮುನ್ನೆಚ್ಚರಿಕೆ ವಹಿಸದೆ ಇದ್ದರೆ ಗೊನೆಗಳು ಹಾಳಾಗುತ್ತವೆ.

 

Leave a Reply

Your email address will not be published. Required fields are marked *

error: Content is protected !!