ಇತ್ತೀಚಿಗೆ ಮಲೆನಾಡು ಮತ್ತು ಬಯಲುಸೀಮೆಯ ಕೆಲವು ತೋಟಗಳಲ್ಲಿ ಅಡಿಕೆ ಮರದಕಾಂಡ ಮತ್ತು ಸೋಗೆಯ ದಿಂಡಿನಿಂದ ಅಂಟು (ಮೇಣದಂತಹ ಪದಾರ್ಥ) ಸೋರುತ್ತಿರುವುದು ಕಂಡುಬಂದಿದೆ.ಇದನ್ನು ಎಂದೂ ಕಂಡಿಲ್ಲದ ಬೆಳೆಗಾರರು ಸಹಜವಾಗಿ ಗೊಂದಲಕ್ಕೀಡಾಗಿದ್ದಾರೆ. ಈ ವಿದ್ಯಮಾನದ ಬಗ್ಗೆ ಲಭ್ಯವಿರುವ ವೈಜ್ಞಾನಿಕ ಮಾಹಿತಿಯನ್ನು ಈ ಲೇಖನದ ಮೂಲಕ ಬೆಳೆಗಾರ ಅನುಕೂಲಕ್ಕಾಗಿ ನೀಡಲಾಗಿದೆ.
ಅಂಟು ಸೋರಲು ಕಾರಣವೇನು?
- ಕೇವಲ ಅರ್ಧ ಸೆಂಟಿಮೀಟರ್ ಉದ್ದವಿರುವ ಯೂಪ್ಲಾಟಿಪಸ್ ಪ್ಯಾರಲ್ಲೆಲಸ್ ಎಂಬ ಕೀಟ.
- ಇದು ಅಡಿಕೆ ಮರದಕಾಂಡ ಮತ್ತು ಸೋಗೆಯ ದಿಂಡನ್ನು ಕೊರೆದು ಒಳಗೆ ಪ್ರವೇಶಿಸಿಸುತ್ತದೆ.
- ಕೀಟವು ಪ್ರವೇಶಿಸಿದ ಜಾಗದಿಂದ ಅಂಟುಹೊರ ಸೂಸುತ್ತದೆ.
- ಕೀಟದ ಬಾಧೆಗೆ ಒಳಗಾದ ಅಂಗಾಂಶಗಳು ಘಾಸಿಗೊಂಡ ಕಾರಣದಿಂದ ಅಂಟುಸ್ರಾವವಾಗುತ್ತದೆ.
- ಅಂಟು ಸ್ರಾವವಾದ ಭಾಗವನ್ನುಒರೆಸಿ ನೋಡಿದಾಗ ಅಲ್ಲಿ ಸಣ್ಣ ರಂಧ್ರವು ಕಾಣಿಸುತ್ತದೆ.
- ಕಾಂಡ ಅಥವಾ ಸೋಗೆಯ ದಿಂಡನ್ನುಅಡ್ಡಲಾಗಿ ಸಿಗಿದು ನೋಡಿದಾಗ 1.5-5 ಸೆಂ.ಮೀ.ಉದ್ದದ ಸಣ್ಣ ಸುರಂಗಗಳು ಕಾಣುತ್ತವೆ.
- ಇವುಗಳ ಒಳಗೆ ಕೀಟದ ಮೊಟ್ಟೆ, ಮರಿಹುಳುಗಳು, ಕೋಶ ಮತ್ತು ಪ್ರೌಢ ಕೀಟಗಳು ಕಾಣಲು ಸಿಗುತ್ತವೆ.
- ಈ ಕೀಟವು ಎಳೆಯ ಮತ್ತು ಆರೋಗ್ಯವಾಗಿರುವ ಗಿಡಗಳಿಗೆ ತೊಂದರೆ ಮಾಡಿ ಅಂಟು ಸ್ರಾವ ಆಗುವಂತೆ ಮಾಡುತ್ತದೆ,
- ಹಳೆಯ, ಒತ್ತಡಕ್ಕೊಳಗಾದ (ಗಾಯಗಳಾದ, ನೀರುಕಡಿಮೆಯಾದ) ಹಾಗೂ ರೋಗಗ್ರಸ್ಥ ಮರಗಳ ಕಾಂಡದ ಮೇಲೆಯೂ ತೊಂದರೆ ಮಾಡುತ್ತದೆ.
ಯಾವ ಪ್ರದೇಶಗಳಲ್ಲಿ ಹೆಚ್ಚು:
- ಕರ್ನಾಟಕ ರಾಜ್ಯದಲ್ಲಿ ಈ ಕೀಟದ ಇರುವಿಕೆಯನ್ನು ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು (CPCRI) 2018 ರಲ್ಲಿ ಪತ್ತೆ ಮಾಡಿದ್ದಾರೆ.
- ಇವರ ಸಮೀಕ್ಷೆ ಪ್ರಕಾರ ಈ ಕೀಟವು ಮಲೆನಾಡು ಹಾಗೂ ಕರಾವಳಿ ಪ್ರದೇಶಗಳಲ್ಲಿ ಮಾತ್ರಕಂಡು ಬಂದಿದೆ. ದೇಶದ ಬೇರೆಯಾವುದೇ ಅಡಿಕೆ ಬೆಳೆಯುವ ಪ್ರದೇಶಗಳಲ್ಲಿ ಕಂಡುಬಂದಿಲ್ಲವೆಂದು ವರದಿ ಇದೆ.
- ನಮ್ಮ ಸಮೀಕ್ಷೆಯಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕು ಹಾಗೂ ಹೊಳಲ್ಕರೆಯ (ಚಿತ್ರದುರ್ಗ ಜಿಲ್ಲೆ) ಕೆಲವು ತೋಟಗಳಲ್ಲಿ ಈ ಕೀಟದ ಬಾಧೆ ಕಂಡುಬಂದಿದೆ.
ಈ ಕೀಟವು ಅಮೆರಿಕ, ಕೆರಿಬಿಯನ್ ದ್ವೀಪಗಳು, ಆಫ್ರಿಕ, ಮಡಗಾಸ್ಕರ್, ದಕ್ಷಿಣ ಏಷ್ಯಾ, ಇಂಡೋನೇಷಿಯ, ಆಸ್ಟ್ರೇಲಿಯ, ಶ್ರೀಲಂಕ ಮತ್ತು ಬಾಂಗ್ಲಾದೇಶಗಳಲ್ಲಿ ನೆಲೆಸಿರುವುದು ಕಂಡುಬಂದಿದೆ. ಬ್ರೆಜಿಲ್ನಲ್ಲಿ ರಬ್ಬರ್, ಬಾಂಗ್ಲಾದೇಶದಲ್ಲಿ ಬೀಟೆ, ಥೈಲಾಂಡ್ನಲ್ಲಿ ಹೊನ್ನೆ ಮರವನ್ನು ಬಾಧಿಸುತ್ತದೆ.
ಈ ಕೀಟವುಅಡಿಕೆಗೆ ಮಾರಕವೆ?
- ಸುಮಾರು 20 ಕ್ಕೂ ಹೆಚ್ಚು ಸಸ್ಯ-ಕುಟುಂಬಗಳಿಗೆ ಸೇರಿದ ಮರ-ಗಿಡಗಳನ್ನು ಈ ಕೀಟವು ಬಾಧಿಸುತ್ತದೆ.
- ಅಡಿಕೆ ಸೋಗೆಯ ದಿಂಡನ್ನು ಬಾಧಿಸಿದಾಗ ಗರಿಯ ಬೆಳವಣಿಕೆ ಕುಂಠಿತವಾಗಿ ಎಲೆಗಳು ಹಳದಿಯಾಗಿ ಒಣಗುತ್ತವೆ.
- ಚಿಕ್ಕ ವಯಸ್ಸಿನ ಗಿಡಗಳ ಕಾಂಡವನ್ನು ಬಾಧಿಸಿದಾಗ ಸುಳಿ ಒಣಗುತ್ತದೆ.
- ಹಳೆ ಮರಗಳನ್ನು ಬಾಧಿಸಿದಾಗ ಆಗುವ ಪರಿಣಾಮಗಳು ಸ್ಪಷ್ಟವಾಗಿ ತಿಳಿದಿಲ್ಲ.
- ಸಾಮಾನ್ಯವಾಗಿ ಈ ಕೀಟವು ಅತಿವೃಷ್ಟಿ, ಅನಾವೃಷ್ಟಿ, ರೋಗಬಾಧೆ ಇತ್ಯಾದಿ ಕಾರಣಗಳಿಂದ ಒತ್ತಡಕ್ಕೊಳಗಾದ ಅಡಿಕೆ ಮರಗಳನ್ನು ಬಾಧಿಸುತ್ತದೆ.
- ಇತ್ತೀಚೆಗೆ ಆರೋಗ್ಯವಂತ ಎಳೆ ಗಿಡಗಳನ್ನೂ ಬಾಧಿಸುತ್ತಿರುವುದು ರೈತರಲ್ಲಿಆತಂಕ ಮೂಡಿಸಿದೆ.
ಈ ಕೀಟದ ಹತೋಟಿ ಹೇಗೆ?
ಈ ಕೀಟವು ಅಡಿಕೆಯನ್ನು ಯಾವ ಸಮಯದಲ್ಲಿ ಬಾಧಿಸುತ್ತದೆ, ಕೀಟದ ಜೀವನಚರಿತ್ರೆ, ಅಡಿಕೆಗೆ ಆಗುವ ಹಾನಿಯ ಪ್ರಮಾಣ, ಈ ಕೀಟದ ಸ್ವಾಭಾವಿಕ ಶತೃಗಳು ಮುಂತಾದ ನಿಖರ ವಿಷಯಗಳ ಬಗ್ಗೆ ಸೂಕ್ತ ಮಾಹಿತಿ ಇಲ್ಲದಿರುವ ಕಾರಣ ಈ ಕೀಟದ ಹತೋಟಿ ಸದ್ಯದ ಪರಿಸ್ಥಿತಿಯಲ್ಲಿ ಕಷ್ಟಕರ.
- ಗಿಡಗಳಿಗೆ ಕೀಟನಾಶಕದ ಸಿಂಪಡಣೆಯ ಅವಶ್ಯಕತೆ ಇರುವುದಿಲ್ಲ.
- ಆದರೂ, ಅಂಟು ಸೋರುತ್ತಿರುವ ರಂಧ್ರಗಳನ್ನು ಮುಚ್ಚುವುದರಿಂದ ಕೀಟದ ಬೆಳವಣಿಗೆ ಮತ್ತು ಹರಡುವಿಕೆಯನ್ನು ತಡೆಗಟ್ಟಬಹುದು.
- ಮೊದಲು ತೋಟದಲ್ಲಿ ಕೀಟದ ಬಾಧೆಯನ್ನು ನಿಯಮಿತವಾಗಿ ಗುರುತಿಸಬೇಕು.
- ಚಿಕ್ಕ ವಯಸ್ಸಿನ ಗಿಡಗಳಲ್ಲಿ ಹಾನಿಯು ಕಂಡಾಗ ಚೂಪಾದಂತಿಯಿಂದ ರಂಧ್ರದೊಳಗಿರುವ ಅಂಟನ್ನು ತೆಗೆಯಬೇಕು.
- ಇಂಜಕ್ಷನ್ ಸಿರಿಂಜ್ನಿಂದ 5 ಮಿ.ಲಿ . ಡೈಕ್ಲೊರೋವಾಸ್ ಕೀಟನಾಶಕವನ್ನು (2 ಮಿ.ಲಿ. (ಕೀಟನಾಶಕವನ್ನುಒಂದುಲೀಟರ್ ನೀರಿನಲ್ಲಿ ಬೆರೆಸಿ ದ್ರಾವಣವನ್ನು ಸಿದ್ಧಪಡಿಸಿ ಅದರಿಂದ 5 ಮಿ.ಲಿ. ಔಷಧವನ್ನು ಬಳಸಬೇಕು) ರಂಧ್ರದೊಳಗೆ ಹಾಕಬೇಕು.
- ನಂತರ ರಂಧ್ರವನ್ನು ಕೀಟನಾಶಕದಿಂದ ನೆನಸಿದ ಸಣ್ಣ ಹತ್ತಿ ತುಂಡುಗಳಿಂದ ಮುಚ್ಚಬೇಕು.
- ಕೆಲವು ವೇಳೆ ಕೀಟನಾಶಕವು ರಂಧ್ರದೊಳಗೆ ಸಲೀಸಾಗಿ ಹೋಗದಿರಬಹುದು.
- ಬೇಸಾಯ ಕ್ರಮಗಳಲ್ಲಿ ಸೂಕ್ತ ಮಾರ್ಪಾಡು ಮಾಡುವುದರಿಂದ ಗಿಡಗಳು ಒತ್ತಡಕ್ಕೀಡಾಗುವುದನ್ನು ತಪ್ಪಿಸಬಹುದು.
ಅಡಿಕೆ ಬೆಳೆಗಾರರು ಈ ಕೀಟದ ಸಮಸ್ಯೆ ಕಂಡು ಬಂದರೆ ಅಂತಹ ಗಿಡದ ಒಳಗೆಯೇ ಕೀಟ ಸಾಯುವಂತೆ ಮಾಡಿ ಹೆಚ್ಚು ಮರಗಳಿಗೆ ಹಾನಿಯಾಗದಂತೆ ತಪ್ಪಿಸಬಹುದು. ನಿರ್ಲಕ್ಷ್ಯ ಮಾಡಿದರೆ ಹೆಚ್ಚಾಗಬಹುದು.
ಡಾ.ಕೆ.ವಿ.ಪ್ರಕಾಶ್ ಮತ್ತುಡಾ.ಎಚ್.ಎಮ್.ಯಶ್ವಂತ್ ಅಖಿಲ ಭಾರತ ಮಣ್ಣು ಸಂಧಿಪದಿಪೀಡೆಗಳ (ಬೇರುಹುಳು) ಪ್ರಾಯೋಜನೆ .ಕೀಟಶಾಸ್ತ್ರ ವಿಭಾಗ, ಕೃಷಿ ವಿಶ್ವವಿದ್ಯಾನಿಲಯ, ಗಾಂಧಿ ಕೃಷಿ ವಿಜ್ಞಾನಕೇಂದ್ರ, ಬೆಂಗಳೂರು- 560 065 ಮೊಬೈಲ್: +91 9448997061 ಮಿಂಚಂಚೆ: kvpento@gmail.com