ಉತ್ತರ ಕನ್ನಡದ ವಿಶೇಷ ಮಾವು- ಕರೇ ಈಶಾಡ್.

by | May 13, 2020 | Horticulture Crops (ತೋಟದ ಬೆಳೆಗಳು), Mango(ಮಾವು) | 0 comments

ಕುಮಟಾ ಅಂಕೋಲಾ ಮಧ್ಯೆ ಹೆಚ್ಚಿನವರ ಮನೆ ಬಾಗಿಲಿನಲ್ಲಿ ಒಂದೆರಡು ಮಾವಿನ ಮರ ಇದ್ದೇ ಇರುತ್ತದೆ. ಇಲ್ಲಿ ಜನ ಯಾವುದಾದರೂ ಮರ ಕಡಿದಾರು ಆದರೆ ಮನೆ ಹಿತ್ತಲಿನಲ್ಲಿರುವ ಕರೇ ಈಶಾಡ್ ಮಾವಿನ ಮರಕ್ಕೆ  ಕೊಡಲಿ ಇಡಲಾರರು. ಕಾರಣ ಇದು ಆ ಪ್ರದೇಶದ ಪ್ರಸಿದ್ದ ಮಾವಿನ ತಳಿ. ಜೊತೆಗೆ ಹಣ್ಣಿನ ಸೀಸನ್‍ನಲ್ಲಿ ಸ್ವಲ್ಪ ಉತ್ಪತ್ತಿ ತಂದುಕೊಡುವ ಬೆಳೆ.   

 • ಕರೇ ಈಶಾಡ್ ಎಂಬುದು ಕುಮಟಾ ಅಂಕೋಲಾ ಮಧ್ಯದ ಪ್ರದೇಶಗಳಲ್ಲಿ ಬೆಳೆಯಲ್ಪಡುವ ಸ್ಥಳೀಯ ಮಾವಿನ ತಳಿ.
 • ಸುಮಾರಾಗಿ ಮುಂಡಪ್ಪದ ಗಾತ್ರದಲ್ಲಿರುವ ಈ ಮಾವಿನ ತಳಿ ಹಿರಿಯರು ಹೇಳುವಂತೆ ನೂರಾರು ವರ್ಷಗಳಿಂದ ಇಲ್ಲಿ  ಬೆಳೆಯುತ್ತಿತ್ತಂತೆ.
 • ಇನ್ನು  ಕೆಲವು ಕಡೆ ಬಿಳೇ ಈಶಾಡ್ ಎಂಬ ಮಾವಿನ ತಳಿಯೂ ಇದ್ದು, ಈ ಮಾವಿನ ಕಾಯಿ ಸ್ವಲ್ಪ ಸಣ್ಣದು.
 • ಈ ಮಾವು ತಳಿ  ಕುಮಟಾ- ಅಂಕೋಲಾ ಭಾಗಗಳ ಹೆಮ್ಮೆ ಎಂದರೂ ತಪ್ಪಾಗಲಾರದು.

ಏನಿದು ಕರೇ ಈಶಾಡ್:

Kare Ishaad mango

 • ಕರೇ ಈಶಾಡ್ ಎಂದರೆ ಈ ಮಾವಿನ ಕಾಯಿಯ ಸಿಪ್ಪೆ ದಟ್ಟ ಹಸುರು ಬಣ್ಣದಲ್ಲಿರುವ ಕಾರಣ ಇದಕ್ಕೆ ಈ ಹೆಸರು ಬಂದಿರಬೇಕು.
 • ಬಿಳೇ ಈಶಾಡ್ ಮಾವಿನ ಸಿಪ್ಪೆ  ತೆಳು ಮತ್ತು ತಿಳಿ ಹಸುರು ಬಣ್ಣದಲ್ಲಿರುವ ಕಾರಣ ಈ ಹೆಸರು ಬಂದಿರಬೇಕು.
 • ಈ ಬಗ್ಗೆ ಹಲವು ಜನರಲ್ಲಿ ವಿಚಾರಿಸಿದಾಗ ತಿಳಿದು ಬಂದದ್ದು ಇದು.

ಈ ಮಾವು ದಪ್ಪ ಸಿಪ್ಪೆಯ ಪ್ರತೀ ವರ್ಷ ಹೆಚ್ಚು ಕಡಿಮೆ ಇಳುವರಿ ನೀಡಬಲ್ಲ ತಳಿ. ಒಳ್ಳೆ ಬೆಳೆದರೆ ಸಹಜವಾಗಿ ಹಣ್ಣಾಗಲು 8 ದಿನ ಬೇಕು. ನಂತರ 2-3 ದಿನ ಇಟ್ಟರೂ ಹಾಳಾಗಲಾರದು. ಸ್ವಲ್ಪ ಎಳೆಯದಾದರೆ 15 ದಿನ ಬೇಕು.

ಎಲ್ಲಿ ಬೆಳೆಯುತ್ತದೆ:

Inside the mango

ಮಾವಿನ ಹಣ್ಣಿನ ಒಳ ತಿರುಳು

 •  ಕುಮಟಾದಿಂದ ಮುಂದೆ ಹೋದಂತೆ ಗುಡ್ಡ ಬೆಟ್ಟಗಳು ಸಿಗುತ್ತವೆ.
 • ಹಾಸು ಜಂಬಿಟ್ಟಿಗೆ ಕಲ್ಲಿನ ಭೂಮಿ. ಈ ಭೂಮಿಯಲ್ಲಿ ಇದರ ಮರಗಳು ಜಾಸ್ತಿ.
 • ಮಾವು ಗೇರು ಹೆಚ್ಚಾಗಿ ಇಲ್ಲಿನ ಬೆಳೆಗಳು.
 • ರತ್ನಗಿರಿ, ವೆಂಗುರ್ಲಾ ಸುತ್ತಮುತ್ತ ಆಪೂಸು (ಅಲ್ಫೋನ್ಸ್) ಕೇಸರ ಮಾವಿನ ಬೆಳೆ ಬೆಳೆಯುವ ಭೂ ಪ್ರಕೃತಿಯೂ ಇಲ್ಲಿನ ಭೂ ಪ್ರಕೃತಿಯೂ ಒಂದೇ ರೀತಿ ಎಂದರೂ ತಪ್ಪಾಗಲಾರದು.
 • ಅಲ್ಲಿಯೂ ಹಾಸು ಜಂಬಿಟ್ಟಿಗೆ ಕಲ್ಲಿನ ಭೂಮಿಯಲ್ಲಿ ಬೆಳೆಯುವ ಮಾವಿಗೆ ವಿಷಿಷ್ಟ ರುಚಿ. ಇಲ್ಲಿಯೂ ಹಾಗೆಯೇ ಅಂತೆ.

ಈ ಪ್ರದೇಶದಲ್ಲೆಲ್ಲಾ ಜಂಬಿಟ್ಟಿಗೆ ಕಲ್ಲಿನ ಭೂಮಿ. ಎಲ್ಲೆಲ್ಲೂ ಕಲ್ಲಿನ ಕೋರೆಗಳು. ಜಂಬಿಟ್ಟಿಗೆ ಕಲ್ಲಿನ ಭೂಮಿಯಲ್ಲಿ ಹೊಂಡತೋಡಿ ಮಾವಿನ ಸಸಿಯನ್ನು ನೆಡುತ್ತಾರೆ. ಬಹುತೇಕ ಹೆಚ್ಚಿನವರು ತಮ್ಮ ಮಾವಿನ ಮರವನ್ನು ಗುತ್ತಿಗೆಗೆ ಕೊಡುತ್ತಾರೆ. ಆವರ್ಸೆ ಸಮೀಪ ರೈಲ್ವೇ ಮೇಲು ಸೇತುವೆ ಕೆಳಗೆ ಇದರ ಮಾರುಕಟ್ಟೆ ಇದ್ದು, ಇಲ್ಲಿ ಇದನ್ನು ಸ್ಥಳೀಯ ಜನ ಬುಟ್ಟಿಯಲ್ಲಿ ತಂದು ಮಾರಾಟ ಮಾಡುತ್ತಾರೆ. ಈ ದಾರಿಯಲ್ಲಿ ಸಂಚರಿಸುವ ಪ್ರವಾಸಿಗರು ಸ್ಥಳೀಯರು ಎಲ್ಲರೂ ಇದನ್ನು  ಒಯ್ಯುತ್ತಾರೆ.

ಏನು ವೈಶಿಷ್ಠ್ಯ:

Every year yield

ಪ್ರತಿ ವರ್ಷವೂ ಇಳುವರಿ

 • ಈ ಮಾವಿನ ವೈಶಿಷ್ಟ್ಯವೆಂದರೆ ಸಿಪ್ಪೆ ದಪ್ಪ.ಈ ಕಾರಣದದಿಂದ ಇದಕ್ಕೆ ಹಣ್ಣು ನೊಣದ ಬಾಧೆ ತುಂಬಾ ಕಡಿಮೆ.
 • ಯಾವುದೇ ರೈತ ಹಣ್ಣು ನೊಣದ ಉಪಟಳವನ್ನು ಗಮನಿಸಿದ್ದಿಲ್ಲ.
 • ಸುಮಾರು 300- 400 ಗ್ರಾಂ ತನಕ ತೂಗಬಲ್ಲುದು. ಕಾಯಿಗಳು ವಿರಳವಾಗಿ ಹಿಡಿದರೆ ಇನ್ನೂ ಸ್ವಲ್ಪ ತೂಕ ಹೆಚ್ಚಳವಾಗುತ್ತದೆ.
 • ತಿರುಳಿನ ಬಣ್ಣ ಕಡು ಕೇಸರಿ. ಗೊರಟು( ಓಟೆ) ಸಣ್ಣದು. ಅಲ್ಪ ಸ್ವಲ್ಪ ನಾರು ಇದೆಯಾದರೂ ಅದು ದೊಡ್ದ ಪ್ರಮಾಣದಲ್ಲಿಲ್ಲ.
 • ತುಂಬಾ ಸಿಹಿಯಾದ ಮಾವು. ಗೊರಟಿನಲ್ಲಿ ಸ್ವಲ್ಪವೂ ರಸ ಉಳಿಯದಂತೆ ತಿನ್ನಬಹುದು.

ಒಳ್ಳೆಯ ಆಕರ್ಷಕ ಸುವಾಸನೆ. ಮನೆಯೊಳಗೆ ಕರೇ ಈಶಾಡ್ ನ ಒಂದು ಮಾವಿನ ಹಣ್ಣು ಇದ್ದರೆ ಯಾರೇ ಮನೆಗೆ ಬಂದರೂ ಅದು ನಾನಿದ್ದೇನೆ ಎಂದು ಗೊತ್ತು ಮಾಡಬಲ್ಲ ಘಾಢ ಸುವಾಸನೆಯನ್ನು ಹಬ್ಬಿಸುವಂತದ್ದು. ಕೊರೆದು ತಿಂದರೆ ಸುಮಾರು ಹೊತ್ತು ಇದರ ಪರಿಮಳದ ತೇಗು ಬರುತ್ತಿರುತ್ತದೆ.

 • ಈ ತಳಿ ಇಲ್ಲಿನ ಸ್ಥಳೀಯ ತಳಿಯಾದರೂ ಇದರ ಮಹತ್ವವನ್ನು ಅರಿತು ಕುಮಟಾದ ತೋಟಗಾರಿಕಾ ಇಲಾಖೆಯವರು ಇದನ್ನು ಅಲ್ಪ ಸ್ವಲ್ಪ ಪಮಾಣದಲ್ಲಿ ನಿರ್ಲಿಂಗ ರೀತಿಯಲ್ಲಿ ಸಸ್ಯಾಭಿವೃದ್ದಿಯನ್ನೂ ಮಾಡುತ್ತಾರೆ.
 • ಕುಮಟಾದ ತೋಟಗಾರಿಕಾ ಇಲಾಖೆಯ ಫಾರಂ ನಲ್ಲೂ ಇದರ ಮರಗಳು ಇವೆ.
Bile Ishade

ಬಿಳೇ ( ಬಿಳಿ) ಈಶಾ

ಮಾರಾಟ:

 • ಸ್ಥಳೀಯ ಮಾವು ವ್ಯಾಪಾರಿಗಳು ಗುತ್ತಿಗೆ  ವಹಿಸಿಕೊಳ್ಳುತ್ತಾರೆ.
 • ಮರದಿಂದ ಸ್ವಲ್ಪ ಸ್ವಲ್ಪವೇ ಕೊಯಿಲು ಮಾಡಿ ಅದನ್ನು ಕೋಣೆಯೋಳಗೆ ಭತ್ತದ ಹುಲ್ಲಿನ ಎಡೆಯಲ್ಲಿ ಮುಚ್ಚಿ ಹಣ್ಣು ಮಾಡುತ್ತಾರೆ.
 • ಇದರಲ್ಲೇ ಇದಕ್ಕೆ  ಆಕರ್ಷಕ ಹಳದಿ ಬಣ್ಣ ಬರುತ್ತದೆ.
No pulp in seed

ಗೊರಟಿನಲ್ಲಿ ಸ್ವಲ್ಪವೂ ಉಳಿಯದು

 • ಹಣ್ಣಿನಲ್ಲಿ ಹುಳವಾಗುವಿಕೆ ಸಾಧ್ಯತೆ ತುಂಬಾ ಕಡಿಮೆಯಾದ ಕಾರಣ ಯಾವುದೇ ರಾಸಾಯನಿಕ ಬಳಕೆ  ಮಾಡುವುದಿಲ್ಲ ಎನ್ನುತ್ತಾರೆ ವರ್ತಕರು.
 • ಇದರ ಹೆಚ್ಚಿನ ಮಾರಾಟ ಸ್ಥಳೀಯ ರೈಲ್ವೇ ಮೇಲ್ಸೇತುವೆಯ ಬಳಿಯೂ, ಕುಮಟಾ, ಅಂಕೋಲಾ ಮಾರುಕಟ್ಟೆಯಲ್ಲಿಯೂ ನಡೆಯುತ್ತದೆ.
 • ಅಲ್ಪ ಸ್ವಲ್ಪ ನೆರೆಯ ಶಿರಸಿ, ಕಾರವಾರಗಳಿಗೆ ಹೋಗುತ್ತದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ದಿನಾ ಸಂಚರಿಸುವ ಸಾವಿರಾರು  ವಾಹನಗಳ ಜನ ಹಣ್ಣು ಖರೀದಿಸುತ್ತಾರೆ.
 • ಬಹಳಷ್ಟು ರಾಜ್ಯ ಸಾರಿಗೆ ಬಸ್ಸುಗಳೂ ಸಹ ಇಲ್ಲಿ ನಿಲ್ಲಿಸಿ ಮಾವಿನ ಹಣ್ಣು ಖರೀದಿ ಮಾಡುವುದುಂಟು.

ಈ ಭಾಗಕ್ಕೆ ಹೋಗುವಾಗ ಈ ಹಣ್ಣು  ಒಯ್ಯುವುದೆಂದರೆ  ಹೆಮ್ಮೆ. ಈ ವರ್ಷ ಕರೇ ಈಶಾಡ್ ಬಹಳ ತುಟ್ಟಿ. ಡಜನ್‍ಗೆ ರೂ. 300 ಹೇಳುತ್ತಾರೆ. ಹೇಗಾರರೂ ತಿನ್ನಬೇಕಲ್ಲವೇ ಎಂದು ಅರ್ಧ ಡಜನ್ ತಂದೆ ಕಣೇ ಎಂದು ಹೆಚ್ಚಿನವರು ಮನೆಗೆ ಒಯ್ದು ಹೆಂಡತಿಯ ಜೊತೆ  ಹೇಳುವುದು ಮಾಮೂಲು. ಈ ಮಾವಿಗೆ ಬೌಗೋಳಿಕ ಸ್ಥಾನಮಾನದ ಬಗ್ಗೆ ಒತ್ತಾಯಗಳೂ ಇವೆ.

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!