ಶುಂಠಿ ಸಸಿಗಳು ಯಾಕೆ ಕೊಳೆಯುತ್ತಿವೆ – ಏನು ಪರಿಹಾರ

ploy mulch of ginger

ಶುಂಠಿ ಬೆಳೆಯ ಅತೀ ದೊಡ್ದ ಸಮಸ್ಯೆ ಎಂದರೆ ಎಲೆ ಕೊಳೆ ಮತ್ತು ಕಾಂಡ ಕೊಳೆ ರೋಗ. ಇದರಿಂದಾಗಿ 25 % ದಿಂದ 75% ತನಕವೂ ಬೆಳೆ ಹಾಳಾಗುತ್ತದೆ. ಇದರ ಮೂಲ ಗಡ್ಡೆ, ವಾತಾವರಣ ಮತ್ತು ನೀರು. ಇದನ್ನು ಮುನ್ನೆಚ್ಚರಿಕೆ ಕ್ರಮದಲ್ಲೇ ನಿಯಂತ್ರಣ ಮಾಡಬೇಕು.

 • ಶುಂಠಿ  ಗಡ್ಡೆ ನಾಟಿ ಮಾಡಿದಲ್ಲಿ ಕೆಲವು ಗಡ್ಡೆಗಳು ಮೊಳಕೆ ಬಾರದೇ ಅಲ್ಲಿಗೆ ಕೊಳೆತು ಹೋಗುವುದಿದೆ.
 • ಮತ್ತೆ ಕೆಲವು ಬಲವಿಲ್ಲದ ಮೊಳಕೆಗಳು, ಇನ್ನು ಕೆಲವು 4-5  ಎಲೆ ಬಂದ ನಂತರ ಹಳದಿಯಾಗುವುದು.
 • ಸಸ್ಯಗಳು ಬೆಳೆಯುತ್ತಿದ್ದಂತೇ  ಅಲ್ಲಲ್ಲಿ ಗಿಡ ಕೊಳೆಯುವುದು ಕೊಳೆ ರೋಗದ ಲಕ್ಷಣ.
starting symptom
ಪ್ರಾರಂಭಿಕ ಲಕ್ಶಣ

   ಶುಂಠಿ ಗಿಡ ಕೊಳೆಯುವುದು ಯಾಕೆ?

 • ಕೊಳೆ ರೋಗ ಎಂಬುದು ಒಂದು ಶಿಲೀಂದ್ರದಿಂದ ಬರುವ ರೋಗ. ಶಿಲೀಂದ್ರದ ಸೋಂಕು  ಬಿತ್ತನೆ ಸಾಮಾಗ್ರಿಯ ಮೂಲಕವೂ ಬರಬಹುದು.
 • ವಾತಾವರಣದ ಕಾರಣದಿಂದಲೂ ಬರಬಹುದು. ಇದಕ್ಕೆಲ್ಲಾ ಪ್ರೇರಣೆ ನೀಡುವಂತದ್ದು ಅಧಿಕ ನೀರು ಅಥವಾ ಬಸಿಯುವಿಕೆ ಸಮರ್ಪಕವಾಗಿರದ ಮಣ್ಣು ಎನ್ನಬಹುದು.
 • ಬೀಜದ ಗಡ್ಡೆಯಲ್ಲಿ ಸಾಸಿವೆಯಷ್ಟು ಚಿಕ್ಕ ಕೊಳೆತ ಭಾಗ ಇದ್ದರೂ ಸಹ ಅದು ಹೆಚ್ಚಾಗಿ ಸಸಿ ಬೆಳೆಯುವ ಹಂತದಲ್ಲಿ ಮೊದಲು ಗಡ್ಡೆ ಕೊಳೆತು ಸಸಿಯ ಎಲೆಗಳು ಹಳದಿಯಾಗಿ ಕೊಳೆಯಬಹುದು.
 • ಬಿತ್ತನೆ ಗಡ್ಡೆಯನ್ನು ಸರಿಯಾಗಿ ಬಿಡಿಸಿ 2.5 ರಿಂದ 5 ಸೆಂ. ಮೀ. ಗಾತ್ರದ ಗಡ್ಡೆಗಳಾಗಿ  ಮಾಡಿಕೊಳ್ಳಬೇಕು. ಆಗ ಗಡ್ಡೆಯ ಎಡೆಯಲ್ಲಿ ಯಾವುದಾದರೂ ಕೊಳೆತ ಭಾಗಗಳಿದ್ದರೆ  ಗೊತ್ತಾಗುತ್ತದೆ.
 • ಗಡ್ಡೆ ತುಂಡು ಮಾಡದೆ ನೆಡುವುದರಿಂದ ಕೊಳೆತ ಭಾಗಗಳಿದ್ದರೂ ಗೊತ್ತಾಗಲಾರದು.
 •  ಪಾತಿಯಲ್ಲಿ ನಾಟಿ ಮಾಡಿ ಅದರ ಮೇಲೆ ಸಾವಯವ ತ್ಯಾಜ್ಯ ಹಾಕಬೇಕು. ಯಾವುದೇ ಕಾರಣಕ್ಕೆ ಸಸ್ಯದ ಎಲೆಗಳಿಗೆ  ನೀರಾವರಿ ಮಾಡುವಾಗ ಮಣ್ಣು ಸಿಡಿಯಬಾರದು. ಮಣ್ಣಿನಿಂದ  ರೋಗಾಣುಗಳು  ಬರುತ್ತದೆ

ಈ ಸಮಯದಲ್ಲಿ ಗಿಡದ ಎಲೆಗಳು ಹಳದಿಯಾಗಿ ಅದರ ಕಾಂಡ ಕೊಳೆಯುವುದಕ್ಕೆ ಕಾರಣ ಗಡ್ಡೆಯಲ್ಲಿ ಕೊಳೆ ರೋಗದ ರೋಗಾಣುಗಳ ಸೋಂಕು. ಒಂದು ಮಳೆ ಮತ್ತೆ ಬಿಸಿಲು ಬಂದರೆ ಕೊಳೆಯುವಿಕೆ ಹೆಚ್ಚು.  ಶುಂಠಿಯ ಗಡ್ಡೆಯ ಸನಿಹ 30 ನಿಮಿಷಕ್ಕಿಂತ ಹೆಚ್ಚು ನೀರು ಬಸಿಯದೆ ನಿಂತರೆ ಗಿಡ ಕೊಳೆಯುತ್ತದೆ.

spores in rhizome
ಗಡ್ದೆಯಲ್ಲಿ ಶಿಲಿಂದ್ರ ಬೆಳವಣಿಗೆ

ಸಸಿ ಬೆಳೆಯುತ್ತಿರುವಾಗ ಕೊಳೆ ರೋಗ:

RHIZOME ROTTING
ಗಡ್ದೆ ಕೊಳೆತ
 • ಸಸಿಗಳು ಸುಮಾರು 5-6  ಎಲೆ ತನಕ  ಆರೋಗ್ಯವಾಗಿಯೇ ಬೆಳೆದು ಸಾಲಿನಲ್ಲಿ ಅಲ್ಲಲ್ಲಿ ಕೊಳೆಯುತ್ತಾ ಬರುವುದಕ್ಕೆ ಕಾರಣ ನೀರಿನ ಸಮರ್ಪಕ ಬಸಿಯುವಿಕೆ ಇಲ್ಲದಿರುವುದು. ನೀರು ಹೆಚ್ಚಾಗಿ ಗಡ್ಡೆ ಕೊಳೆತು ಸಸಿ ಹಳದಿಯಾಗಿ ಸಾಯುತ್ತದೆ.
 • ಶುಂಠಿಯನ್ನು ಸಮರ್ಪಕ ಬಸಿಗಾಲುವೆ ಮಾಡಿ ಬೆಳೆದ್ದರೆ , ನೀರು ಬಸಿಯುವಂತಹ ಮರಳು ಮಿಶ್ರ ಮಣ್ಣು ಆಗಿದ್ದರೆ ಸಸಿ ಬೆಳೆಯುತ್ತಿರುವಾಗ ಬರುವ ಕೊಳೆ ರೋಗ ಕಡಿಮೆಯಾಗುತ್ತದೆ.

ಜಂತು ಹುಳದ ಬಾಧೆ:

 • ಸಾಮಾನ್ಯವಾಗಿ ಶುಂಠಿಗೆ ಜಂತು ಹುಳ (ನಮಟೋಡು ) ಬಾಧೆ ಇದ್ದೇ ಇರುತ್ತದೆ. ಕೆಲವೊಮ್ಮೆ ಹೆಚ್ಚು ಇರಬಹುದು ಕೆಲವೊಮ್ಮೆ ಕಡಿಮೆಯೂ ಇರಬಹುದು.
 • ಜಂತು ಹುಳ ಹೆಚ್ಚು ಇದ್ದಲ್ಲಿ ಗಡ್ಡೆಗಳು ಪುಷ್ಟಿಯಾಗಿರುವುದಿಲ್ಲ.
 • ಬೇರು ಗಂಟು ಜಂತು ಹುಳ, ಬೇರಿನ ಒಳ ಭಾಗವನ್ನು ಕೊರೆಯುವ ಜಂತು ಹುಳ , ಮತ್ತು ಮಚ್ಚೆ ಜಂತು ಹುಳಗಳು ಶುಂಠಿಯ ಬೆಳೆಯಲ್ಲಿ ಬಹಳಷ್ಟು ಕಡೆ ಕಂಡು ಬಂದಿದೆ.
 • ಅದರ  ಬಾಧೆ ಉಳ್ಳ ಶುಂಠಿಯ ಗಿಡದ ಎಲೆಗಳು ತೆಳು ಹಳದಿಯಾಗಿ ಅತ್ತ ಸಾಯದೆಯೂ, ಇತ್ತ ಚೆನ್ನಾಗಿ ಬೆಳೆಯದೆಯೂ ಇರುತ್ತದೆ.
 •   ಶುಂಠಿಯಲ್ಲಿ ಕಂದುಗಳು ಕಡಿಮೆಯಾಗಲು ಈ ಜಂತು ಹುಳ  ಕಾರಣ.
 • ಜಂತು ಹುಳದ ಬಾಧೆಗೆ ತುತ್ತಾದ ಶುಂಠಿಯ ಗಡ್ಡೆ ನೀರಿನಲ್ಲಿ ತೇಲುತ್ತದೆ. ಹೆಚ್ಚು ಜಂತು ಹುಳ ಇದ್ದರೆ ಬೇರಿನ ಬೆಳವಣಿಗೆ ಇಲ್ಲದೆ ಗಡ್ಡೆ ಒಳೆಯಲು  ಪ್ರಾರಂಭವಾಗುತ್ತದೆ.

ನಿಯಂತ್ರಣ:

rotted plant
ಕೊಳೆತ ಗಿಡ
 • ಬಿತ್ತನೆ ಗಡ್ಡೆಯನ್ನು ಚೆನ್ನಾಗಿ ಪರಿಶೀಲಿಸಿಯೇ  ನಾಟಿ ಮಾಡಿದರೆ 50% ಬೆಳೆ ಯಶಸ್ಸು ಸಾಧ್ಯ.
 • ಸಸಿ ಬೆಳೆಯುವಾಗ ಏನಾದರೂ ಎಲೆ ಹಳದಿ ಚಿನ್ಹೆ ಕಂಡುಬಂದ ತಕ್ಷಣ ಕಾಂಡವನ್ನು ಪರಿಶೀಲಿಸಿರಿ.
 • ಯಾವುದಾದರೂ ತೂತು ಇದೆಯೋ ಅಥವಾ ಕಾಂಡದ ಮಧ್ಯದಿಂದ ಸುಳಿ ಕಿತ್ತು ಬರುತ್ತದೆಯೇ ಎಂದು ನೊಡಿ.
 • ಸುಳಿ ಕಿತ್ತು ಬಂದರೆ ಅದು ಕೊಳೆ ರೋಗ. ತಕ್ಷಣ ಗಡ್ಡೆ ಸಮೇತ  ತೆಗೆದು ಅದನ್ನು ಸುಟ್ಟರೆ  ಮಾತ್ರ ಬೇರೆ ಸಸಿಗೆ ರೋಗ ಹರಡದು.
 • ಆ ಭಾಗದ ಸುತ್ತಮುತ್ತಲಿನ ಸಸ್ಯಗಳಿಗೆ ಮ್ಯಾಂಕೋಜೆಬ್ ಮತ್ತು  (ಶೇ. 1 1 ಗ್ರಾಂ 1ಲೀ. ನೀರು)ಕಾರ್ಬನ್ ಡೈಜಿಮ್ ಉಳ್ಳ (SAAF) ಶಿಲೀಂದ್ರ  ನಾಶಕ ದ್ರಾವಣವನ್ನು ಡ್ರೆಂಚಿಂಗ್ ಮಾಡಬೇಕು. ಇದು ರೋಗ ಹರಡದಂತೆ ತಡೆಯುತ್ತದೆ.
 • ನಮಟೋಡು ಬಾಧೆ ಇದೆಯೋ  ಇಲ್ಲವೋ ಎಂದು ಹೊರ ನೋಟಕ್ಕೆ ತಿಳಿಯುವುದು ಕಷ್ಟ.ನೆಡು ವ ಗಡ್ಡೆಯನ್ನು ಒಮ್ಮೆ ಸ್ನಾನ ಮಾಡುವಷ್ಟು ಬಿಸಿ ಉಳ್ಳ ನೀರಿನಲ್ಲಿ ಹಾಕಿರಿ. ತೇಲುವ ಗಡ್ಡೆಯನ್ನು ಬಿಡಿ.
TEST BY HYDROGEN PEROXIDE
ಹೈಡ್ರೋಜನ್ ಪೆರಾಕ್ಸೈಡ್ ನಲ್ಲಿ ಅದ್ದಿದಾಗ ನೊರೆ ಬಂದರೆ ಅದು ಬ್ಯಾಕ್ಟೀರಿಯಾ ಬಾಧಿತ

ನಂತರ ಮುಂಜಾಗ್ರತಾ ಕ್ರಮವಾಗಿ ಶುಂಠಿ ಹೊಲದ ಪಾತಿಗೆ ನಾಟಿ ಮಾಡಿದ ಕೆಲವೇ ದಿನಗಳಲ್ಲಿ ಪೊಚೋನಿಮ್ ಕ್ಲಮೇಡೋಸ್ಪೋರಿಯಾ ಜೈವಿಕ ಜಂತು ಹುಳ ನಾಶಕವನ್ನು 1  ಕಿಲೊ, 200 ಲೀ. ನೀರು.  ಬೆರೆಸಿ ಪಾತಿಗೆ ಹವಾಮಾನ ತಣ್ಣಗೆ ಇರುವ ಸಂಜೆ ಹೊತ್ತು  ಚಿಮುಕಿಸಿ.  ಟ್ರೈಕೋಡರ್ಮಾ ಹಾರ್ಜಿಯಾನಮ್ ಎಂಬ ಜೀವಾಣು ಗೊಬ್ಬರವನ್ನು ಬಳಸಿದರೆ ಕೊಳೆ ರೋಗ ಕಡಿಮೆಯಾಗುತ್ತದೆ. ಜಂತು ಹುಳ ನಾಶಕ್ಕೆ ಸಾಲಿನಲ್ಲಿ ಮಧ್ಯ ಮಧ್ಯೆ  ಚೆಂಡು ಹೂವಿನ ಗಿಡ ನೆಡಬೇಕು.

ಕೊಳೆ ರೋಗ – ಜಂತು ಹುಳ ಬಾಧೆ ಮತ್ತು ಬ್ಯಾಕ್ಟೀರಿಯಾ ರೋಗಗಳಿಂದ ಮಳೆಗಾಲದಲ್ಲಿ ಬೆಳೆ  ಉಳಿಸಿಕೊಂಡರೆ ಶುಂಠಿ ಬೆಳೆ  ಪಾಸ್. ಅದಕ್ಕೆ ನಿತ್ಯ ಹೊಲದ ಪರಿವೀಕ್ಷಣೆ ಮಾಡುವುದೇ ಮುನ್ನೆಚರಿಕೆ ವಿಧಾನ.

Leave a Reply

Your email address will not be published. Required fields are marked *

error: Content is protected !!