ಶುಂಠಿ ಕೊಳೆ ರೋಗಕ್ಕೆ ಒಂದೇ ಪರಿಹಾರ.

ಶುಂಠಿ ಕೊಳೆ ರೋಗಕ್ಕೆ ಪರಿಹಾರ

ಶುಂಠಿಯ ಗಿಡ ಹಳದಿಯಾಗಿ ಕೊಳೆಯುವ Rhizome rot / Soft rot ರೋಗಕ್ಕೆ Pythium aphanidermatum ಶಿಲೀಂದ್ರ,  ಕಾರಣ. ಶುಂಠಿ ಬೆಳೆಯಲ್ಲಿ ಇದರಿಂದಾಗಿ 80-90 % ತನಕ ಬೆಳೆ ನಷ್ಟವಾಗುತ್ತದೆ.  ಇದನ್ನು ಬೇರೆ ಬೇರೆ ವಿಧಾನದಲ್ಲಿ ಟ್ರಯಲ್ ಎಂಡ್ ಎರರ್ ಮಾದರಿಯಲ್ಲಿ ನಿಯಂತ್ರಿಸುವ ಪ್ರಯತ್ನ ಮಾಡಿ ಸಮಾಧಾನ ಮಾಡಿಕೊಳ್ಳುತ್ತಾರೆ. ಇದು ಬಂದ ನಂತರ ನಿಯಂತ್ರಣ ಅಷ್ಟಕ್ಕಷ್ಟೇ. ಮೊದಲೇ ನಿಯಂತ್ರಣ ಮಾಡಿದರೆ ಪರಿಣಾಮಕಾರಿ.

ಶುಂಠಿ ರೋಗ ಹೇಗೆ ಬರುತ್ತದೆ: 

  •  ಬಿತ್ತನೆ ಗಡ್ಡೆಗಳ ಮೂಲಕ ಈ ರೋಗಕಾರಕ ಶಿಲೀಂದ್ರದ ಪ್ರವೇಶವಾಗುತ್ತದೆ.
  • ಗಡ್ಡೆಗಳಲ್ಲಿ ಎಲ್ಲಿಯಾದರೂ ಈ ರೋಗಾಣುಗಳು ಇರುವ ಸಾಧ್ಯತೆ ಇರುತ್ತದೆ.
  • ಆದ ಕಾರಣ ಬಿತ್ತನೆ ಗಡ್ಡೆ ಹಂತದಲ್ಲೇ ಇದರ ನಿವಾರಣೋಪಾಯ ಹೆಚ್ಚು ಉತ್ತಮ.

ಬಿತ್ತನೆ ಗಡ್ಡೆ ತರುವಾಗ ಸ್ವಲ್ಪ ಕೊಳೆತ ವಾಸನೆ ಇದೆಯೇ ಎಂದು ಪರೀಕ್ಷಿಸಿರಿ. ಒಂದು ವೇಳೆ ವಾಸನೆ ಏನಾದರೂ ಇದ್ದರೆ ಆ ಗಡ್ಡೆಗಳಲ್ಲಿ ಯಾವುದರಲ್ಲಿಯಾದರೂ ಶಿಲೀಂದ್ರ ಸೋಂಕು ಆಗಿದ್ದಿರಬಹುದು.

  • ಗಡ್ಡೆಗಳು ನೋಡುವಾಗ ಚೆನ್ನಾಗಿಯೇ  ಕಾಣುತ್ತದೆ.
  • ಆದರೆ ಒಳಗೆ ಕೊಳೆತಿರುತ್ತದೆ.
  • ಇಂತದ್ದು ಒಂದು ಇದ್ದರೂ ಅದು ಉಳಿದ ಗಡ್ಡೆಗಳಿಗೆ ಅಂಟಿಕೊಂಡು ಅದು ಮೊಳಕೆ ಒಡೆದು ಸಸಿಯಾಗುವಾಗ  ಸಸ್ಯ ಕೊಳೆಯುವ ಮೂಲಕ ಗೊತ್ತಾಗುತ್ತದೆ.
  • ಗಡ್ಡೆ ಮೊದಲಾಗಿ ಕೊಳೆಯುತ್ತದೆ.
  • ನಂತರ ಸಸಿಗೆ ಆಹಾರ ದೊರೆಯದೆ ಕಾಂಡ ಕೊಳೆತು ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತದೆ.
  • ಗಡ್ಡೆ ಮೊಳಕೆ ಒಡೆದಂತೆ ಸಸಿಗಳ ಎಲೆ ಹಳದಿಯಾದರೆ ಅಲ್ಲಿ ಈ ಶಿಲೀಂದ್ರ ಇದೆ ಎಂದು ತಿಳಿಯಬಹುದು.
  •  ಎಲೆ ಹಳದಿಯಾದ ಸಸಿಯ ಕಾಂಡವನ್ನು ಬೆರಳಿನಲ್ಲಿ ಒತ್ತಿದರೆ ಮೆದುವಾಗಿರುತ್ತದೆ.

ಗಡ್ಡೆಯಲ್ಲಿ ರೋಗ ಇದ್ದರೆ ಹೀಗೆ ಇರುತ್ತದೆ

ಗಡ್ಡೆಗಳ ಉಪಚಾರ:

  • ತರುವ ಗಡ್ಡೆಗಳನ್ನು ನೆಡುವ ಮುಂಚೆ ನೆಡಲು ಎಷ್ಟು ದೊಡ್ಡ ಗಾತ್ರದ ಗಡ್ಡೆ ಬಳಸುತ್ತೀರೋ ಅಷ್ಟು ಗಾತ್ರಕ್ಕೆ ತುಂಡು ಮಾಡಬೇಕು.
  • ತುಂಡು ಮಾಡುವಾಗ ಎಲ್ಲಿಯಾದರೂ ಕೊಳೆತದ್ದು ಇದ್ದರೆ ಗೊತ್ತಾಗುತ್ತದೆ.
  • ಅಂತದ್ದು ಇದ್ದರೆ ಅದನ್ನು ನೆಡಲು ಬಳಸಬಾರದು.
  • ಗಡ್ಡೆಯನ್ನು ಸ್ಪರ್ಶಿಸಿ ಮತ್ತೊಂದು ಗಡ್ಡೆಯನ್ನು ಮುಟ್ಟಬೇಕಿದ್ದರೆ  ಕೈಯನ್ನು ಮತ್ತು ಕತ್ತರಿಸುವ ಸಾಧನವನ್ನು ಕೃಷಿ ಬಳಕೆಯ  ಹೈಡ್ರೋಜನ್  ಪೆರಾಕ್ಸೈಡ್ ದ್ರಾವಣದಲ್ಲಿ ಅದ್ದಿ ಸಾನಿಟೈಸ್ ಮಾಡಿಕೊಳ್ಳಬೇಕು.
  • ಎಲ್ಲಾ ಗಡ್ಡೆಗಳನ್ನೂ ಗಾತ್ರಕ್ಕೆ ಕತ್ತರಿಸಿಕೊಂಡು ಅದನ್ನು ಎರಡು ದಿನವಾದರೂ  ಹದ ಬಿಸಿಲಿನಲ್ಲಿ ಒಣಗಿಸಬೇಕು.
  • ಸಾಧ್ಯವಾದರೆ ಗಡ್ಡೆ ತುಂಡುಗಳನ್ನು ಹೈಡ್ರೋಜನ್ ಪೆರಾಕ್ಸೈಡ್ ನಲ್ಲಿ ಅದ್ದಿ ತೆಗೆದರೆ ಒಳ್ಳೆಯದು. ಆಗ ನೊರೆ ನೊರೆ ಬಂದು ಶಿಲೀಂದ್ರ, ಬ್ಯಾಕ್ಟೀರಿಯಾ ಹೊರ ಬರುತ್ತದೆ.
  • ಆ ನಂತರ ಗಡ್ಡೆಗಳನ್ನು ಮ್ಯಾಂಕೋಜೆಬ್ ಶಿಲೀಂದ್ರ ನಾಶಕದಲ್ಲಿ ಉಪಚರಿಸಿ ಇಡಬೇಕು.
  • ನೆಡುವಾಗಲೂ ಪ್ರತೀ ಗಡ್ಡೆಯನ್ನೂ ಒತ್ತಿ ನೋಡಿ ಸರಿಯಾಗಿ ಗಮನಿಸಿ ನಾಟಿ ಮಾಡಬೇಕು.
ಹಳದಿಯಾದ ಸುಳಿಯನ್ನು ಎಳೆದರೆ ಕಿತ್ತು ಬರುತ್ತದೆ. ಕೆಳಭಾಗ ಕೊಳೆತ ವಾಸನೆ ಇರುತ್ತದೆ.
ಹಳದಿಯಾದ ಸುಳಿಯನ್ನು ಎಳೆದರೆ ಕಿತ್ತು ಬರುತ್ತದೆ. ಕೆಳಭಾಗ ಕೊಳೆತ ವಾಸನೆ ಇರುತ್ತದೆ.

ರೋಗ ಕಾಣಿಸಿಕೊಂಡ ನಂತರ ಉಪಚಾರ:

  • ನಾಟಿ ಮಾಡಿದ ಹೊಲದಲ್ಲಿ ಈ ರೋಗ ಬಂದರೆ ಉಪಚಾರ ಎಷ್ಟಾದರೂ ಅಷ್ಟೇ. ಇದರಲ್ಲಿ ಫಲಿತಾಂಶ ಕಡಿಮೆ.
  • ಗಡ್ಡೆಗಳಲ್ಲಿ ಸೋಂಕು ಇಲ್ಲವಾದರೆ ಮತ್ತೆ ಸಸಿಗೆ ಸೋಂಕು ಬರುವುದು ಕಡಿಮೆ.
  • ನೆಡುವ ಸ್ಥಳದ ಮಣ್ಣಿಗೆ ನೀರು ಬಿಟ್ಟುಕೊಡುವ ಶಕ್ತಿ ಇಲ್ಲದಿದ್ದರೆ , ಸರಿಯಾದ ಬಸಿಗುಣ ಇಲ್ಲದಿದ್ದರೆ ಅಲ್ಪ ಸ್ವಲ್ಪ ಸೋಂಕು ಇದ್ದರೂ ಸಹ ಅದು ಉಲ್ಬಣವಾಗುತ್ತದೆ.
  • ಮರಳು ಮಿಶ್ರ ನೀರು ಹಿಡಿದಿಟ್ಟುಕೊಳ್ಳದ ಮಣ್ಣಿನಲ್ಲಿ ಬೆಳೆ ಬೆಳೆಯಬೇಕು.
  • ರೋಗಾಣು ಅಲ್ಪ ಸ್ವಲ್ಪ ಪ್ರಮಾಣದಲ್ಲಿ ಇದ್ದರೆ, ಅದು ನಾಟಿ ಮಾಡಿ ತುಂಬಾ ಸಮಯದ ತನಕ ಸಸ್ಯಗಳಲ್ಲಿ ರೋಗ ಕಾಣಿಸಿಕೊಳ್ಳದೆ ಇರುತ್ತದೆ.
  • ರೋಗಾಣು ಬೆಳೆಯಲು ಅನುಕೂಲವಾಗುವ ಸ್ಥಿತಿ ಒದಗಿದಾಗ  ಅದು ಕಾಣಿಸಿಸಿಕೊಳ್ಳುತ್ತದೆ.
  • ಬರೇ ರೋಗ ಸೋಂಕು ಇದ್ದ ಗಡ್ಡೆ ಒಂದರಿಂದಲೇ ಬರುವುದಿಲ್ಲ.
  • ಕೆಲವೊಮ್ಮೆ ವಾತಾವರಣದ ಅನುಕೂಲ ಸ್ಥಿತಿ ಇದ್ದರೆ ರೋಗ ಬರುತ್ತದೆ.
  • ಸ್ವಲ್ಪ ಗಿಡಗಳಿಗೆ ರೋಗ ಬಂದಿದ್ದರೆ ಅದನ್ನು ತೆಗೆದು ಸುಟ್ಟು, ಕಿತ್ತು ತೆಗೆದ ಜಾಗಕ್ಕೆ ಬ್ಲೀಚಿಂಗ್ ಪೌಡರ್ ದ್ರಾವಣ (3 ಗ್ರಾಂ 1 ಲೀ. ನೀರಿಗೆ) ಬೆರೆಸಿ ಆ ಜಾಗಕ್ಕೆ  ಸುಮಾರು 2 ಲೀ. ನಷ್ಟು ಹೊಯ್ಯುವುದು ರೋಗ ಬೇರೆ ಗಿಡಗಳಿಗೆ ಹಬ್ಬದಂತೆ ತಡೆಯಲು ಸಹಕಾರಿ

ಯಾವುದೇ  ಗಿಡ ಹಳದಿಯಾದರೂ ಸಹ ಅದನ್ನು ತಕ್ಷಣ ತೆಗೆದು ಸುಟ್ಟು ನಾಶಮಾಡಬೇಕು. ಆ ಭಾಗಕ್ಕೆ ಮ್ಯಾಂಕೋಜೆಬ್ ಶಿಲೀಂದ್ರ ನಾಶಕ ಅಥವಾ ಬ್ಲೀಚಿಂಗ್ ಪೌಡರ್  (bleaching powder) ದ್ರಾವಣ (3 ಗ್ರಾಂ 1 ಲೀ. ನೀರಿಗೆ)ಎರೆಯಬೇಕು.

ಹೊಲದಲ್ಲಿ ನಿಯಂತ್ರಣ ಮಾಡುವುದು ತುಂಬಾ ಕಷ್ಟದ ಕೆಲಸವಾಗಿದ್ದು, ನೀರು ಎಲ್ಲಿಯೂ ನಿಲ್ಲದಂತೆ ನೊಡಿಕೊಳ್ಳಬೇಕು. ಮಣ್ಣನ್ನು ಮುಷ್ಟಿಯಲ್ಲಿ ಹಿಡಿದು ಹಿಂಡಿದರೆ ನೀರು ತೊಟ್ಟಿಕ್ಕದಂತೆ ಇದ್ದರೆ ಆ ಮಣ್ಣಿನಲ್ಲಿ ಗಡ್ಡೆ ಸ್ವಚ್ಚವಾಗಿದ್ದರೆ ರೋಗ ಬಾರದು.

ಹೊಲದಲ್ಲಿ ಬಂದ ರೋಗವನ್ನು ಎಷ್ಟೇ ಉಪಚಾರ ಮಾಡಿದರೂ  ಹಾಳಾದುದನ್ನು ಸರಿ ಮಾಡಲು ಸಾಧ್ಯವಿಲ್ಲ. ಆರೋಗ್ಯವಂತ ಸಸಿಗೆ ಬಾರದಂತೆ ಸ್ವಲ್ಪ ಮಟ್ಟಿಗೆ ಮಾತ್ರ ರಕ್ಷಣೆ  ಕೊಡಬಹುದು. ಅದು ಮತ್ತೆ ಮತ್ತೆ ಬರಬಹುದು.

Leave a Reply

Your email address will not be published. Required fields are marked *

error: Content is protected !!