ಇದು ಟೀಕೆ ಅಲ್ಲ. ಅನಿಸಿಕೆ ಅಷ್ಟೇ. ರೈತರಿಗೆ ಅನುಕೂಲವಾಗುವುದಾದರೆ ಎಲ್ಲವೂ ಸ್ವಾಗತಾರ್ಹ. ಒಮ್ಮೆ ನಮ್ಮ ಹಳ್ಳಿಯ ರೈತನ ಚಿತ್ರಣವನ್ನು ಯೋಚಿಸಿಕೊಳ್ಳಿ. ದೇಶದಲ್ಲಿ 70% ಕ್ಕೂ ಹೆಚ್ಚಿನವರು ಸಣ್ಣ ಮತ್ತು ಅತೀ ಸಣ್ಣ ರೈತರು. ಹಾಗೆಯೇ ಇಷ್ಟೂ ಜನ ರೈತರೂ ಕಡಿಮೆ ವಿಧ್ಯಾವಂತರು. ಇವರಿಗೆ ನೇರ ಮಾರುಕಟ್ಟೆಯ ಅವಕಾಶವನ್ನು ಎಷ್ಟು ಜೀರ್ಣಿಸಿಕೊಳ್ಳಲು ಆದೀತೋ ಗೊತ್ತಿಲ್ಲ. ಆದರೆ ಇದರಿಂದ ರೈತರಿಗೆ ಅನುಕೂಲವಾಗಲಿದೆ ಎನ್ನುತ್ತದೆ ಸರಕಾರ.
- ನಾನು ಒಂದು ಕ್ವಿಂಟಾಲು ಹಣ್ಣು ಬೆಳೆದರೆ ಅದನ್ನು ಹೇಗಾದರೂ ಗ್ರಾಹಕರನ್ನು ಹುಡುಕಿ ಮಾರಾಟ ಮಾಡಬಹುದು.
- ಅದೇ ಟನ್ ಗಟ್ಟಲೆ ಬೆಳೆದರೆ ಅದನ್ನು ಹೇಗೆ ಮಧ್ಯವರ್ತಿಗಳಿಲ್ಲದೆ ನೇರವಾಗಿ ಗ್ರಾಹಕರಿಗೋ ಅಥವಾ ಫ್ಯಾಕ್ಟರಿಗೋ ಅಥವಾ ವಿದೇಶಕ್ಕೆ ರಪ್ಥನ್ನು ಮಾಡುವುದು ಸಾಧ್ಯವಾದೀತೇ?
- ಬಹುತೇಕ ಕೃಷಿ ಉತ್ಪನ್ನಗಳು ಋತುಮಾನಾಧಾರಿತವಾದವುಗಳು.
- ಎಲ್ಲರೂ ಏಕಕಾಕದಲ್ಲಿ ಬೆಳೆಯುವವರು. ಮಾರುಕಟ್ಟೆಗೆ ಆಧರಿಸುವ ಶಕ್ತಿ ಇಲ್ಲದಷ್ಟು ಉತ್ಪಾದನೆಯಾಗುವುದೂ ಇದೆ.
- ಇದನ್ನು ನೇರವಾಗಿ ಮಾರಾಟ ಮಾಡುವುದಾದರೂ ಹೇಗೆ ಎಂಬುದೇ ತಿಳಿಯುತ್ತಿಲ್ಲ.
- ಮಾರಾಟದ ಜಾಗಕ್ಕೆ ಒಯ್ಯುದೆ ಅದನ್ನು ವಿಲೇವಾರಿ ಮಾಡಲು ಸಾಧ್ಯವಾಗದು.
- ಇಲ್ಲಿ ಸಾಗಾಟದ ಖರ್ಚು ಲೆಕ್ಕಾಚಾರ ಹಾಕಬೇಕು.
- ಈ ದೇಶದಲ್ಲಿ ಕೊಳ್ಳುವವರು ಕೃಷಿಕನ ಬಳಿಗೇ ಬಂದು ಅವನ ಕೃಷಿ ಉತ್ಪನ್ನ ಕೊಳ್ಳುವಂತಾದರೆ ಅದರಷ್ಟು ಸೌಭಾಗ್ಯ ಬೇರೆ ಇಲ್ಲ.
- ನಮ್ಮಲ್ಲಿ ಒಂದು ಗಾದೆ ಇದೆ, ಎಣ್ಣೆಯಿಂದ ಬಂದ ಲಾಭ ಮತ್ತೆಲ್ಲಿಂದಲೋ ಹೋಯಿತು ಎಂಬಂತಾದರೆ ಕಷ್ಟ.
ಕೃಷಿಕರು ಬಿಡುವು ಉಳ್ಳವರೇ?
- ಕೃಷಿ ಎಂದರೆ ಪೂರ್ಣಾವಧಿ ವೃತ್ತಿ. ಇದು ಸರಕಾರದ 8 ಗಂಟೆಯ ನಿಗದಿತ ಅವಧಿಯ ವೃತ್ತಿ ಅಲ್ಲ.
- ಇಲ್ಲಿ ದೈಹಿಕ ಮತ್ತು ಮಾನಸಿಕ ಎರಡೂ ಶ್ರಮವೂ ಪೂರ್ಣವಾಗಿ ವ್ಯಯವಾಗುತ್ತದೆ.
- ದಿನದ ನಿದ್ದೆಯ ಅವಧಿಯನ್ನು ಬಿಟ್ಟು ಉಳಿದ ಸಮಯದಲ್ಲಿ ಕೃಷಿಯ ಜೊತೆಗೆ ರೈತ ತೊಡಗಿಸಿಕೊಳ್ಳಲೇ ಬೇಕು.
- ಇಲ್ಲವಾದರೆ ಅದು ಆಗುವುದಿಲ್ಲ.
- ಈ ವೃತ್ತಿಯಲ್ಲೇ ಬಿಡುವಿಲ್ಲದಾಗ ಮಾರುಕಟ್ಟೆ ಮಾಡುವುದಕ್ಕೂ ನಾವು ತಲೆ ಹಾಕಬೇಕಾಗಿ ಬಂದರೆ ಮತ್ತೆ ನಿದ್ರೆಯ ಅವಧಿಯನ್ನೂ ಕಳಕೊಳ್ಳಬೇಕಾದೀತು.
ಒಬ್ಬ ರೈತನಾಗಿ ಹಣ್ಣು ತರಕಾರಿ ಬೆಳೆದು ನೇರ ಮಾರಾಟ ಮಾಡಿ ಅನುಭವವನ್ನು ಪಡೆದ ಹಲವು ಕೃಷಿಕರು ಇರಬಹುದು. ಅವರು ಅದರ ಒಳ ಮರ್ಮವನ್ನು ಚೆನ್ನಾಗಿ ಅರಿತಿರಬಲ್ಲರು.
ಮಧ್ಯವರ್ತಿಗಳ ಗತಿ ಏನು?
- ಮಧ್ಯವರ್ತಿಗಳು ಕೃಷಿಕರ ಲಾಭವನ್ನು ತಮ್ಮದಾಗಿಸಿಕೊಳ್ಳುತ್ತಾರೆ ಎಂಬ ಆಪಾದನೆ ನಮ್ಮದು.
- ಹೌದು. ಇದು ನಿಜ. ಮಧ್ಯವರ್ತಿಗಳದ್ದೂ ಒಂದು ವೃತ್ತಿ.
- ಈ ವ್ಯವಸ್ಥೆಯಲ್ಲಿ ಕನಿಶ್ಜ್ಟ 500 ಜನ ರೈತರಿಗೆ ಒಬ್ಬ ಮಧ್ಯವರ್ತಿ ಇರುತ್ತಾನೆ.
- ಇವರಿಗೆ ಅದೇ ಬದುಕುವ ವೃತ್ತಿ. ಅವರು ಈ ವ್ಯವಹಾರದಲ್ಲಿ ಬೀದಿಪಾಲಾಗಬೇಕೆ?
- ಅಥವಾ ಸರಕಾರ ಇವರಿಗೆ ಮಾಸಾಶನ ನೀಡುವುದೇ? ಕಾದು ನೋಡಬೇಕಾಗಿದೆ.
- ಇಷ್ಟಕ್ಕೂ ಮಧ್ಯವರ್ತಿಗಳು ಕೆಲವೊಮ್ಮೆ ಲಾಭ ಮಾಡಿಕೊಂಡರೆ ಕೆಲವೊಮ್ಮೆ ನಷ್ಟವನ್ನೂ ಅನುಭವಿಸುತ್ತಾರೆ.
- ಮಾರುಕಟ್ಟೆಯಲ್ಲಿ ತೀವ್ರ ಬೆಲೆ ಏರಿಕೆ – ಕುಸಿತ ಉಂಟಾಗುವುದು ಮಧ್ಯವರ್ತಿಗಳ ಲಾಭ ನಷ್ಟದ ಕಾರಣದಿಂದಲೇ.
ಉತ್ಪನ್ನಕ್ಕೆ ಬೆಲೆ ನಿರ್ಧರಣೆ ಮಾಡಲಿಕ್ಕಾಗದೇ?
- ರೈತರು ಬೆಳೆದ ಉತ್ಪನ್ನಕ್ಕೆ ನ್ಯಾಯಯುತ ಬೆಲೆ ಸಿಗುವುದಕ್ಕೆ ಮಧ್ಯವರ್ತಿಗಳು ಅಡ್ಡಿ ನಿಜ.
- ಅವರ ಈ ಕುತಂತ್ರವನ್ನು ಶಾಸನಾತ್ಮಕವಾಗಿ ನಿಯಂತ್ರಿಸಲು ಸರಕಾರಕ್ಕೆ ಸಾಧ್ಯವಿಲ್ಲವೇ? ಮನಸ್ಸು ಮಾಡಿದರೆ ಖಂಡಿತವಾಗಿಯೂ ಸಾಧ್ಯವಿದೆ.
- ನಮ್ಮ ಸರಕಾರದಲ್ಲಿ ಉತ್ಪಾದನೆಯ ಲೆಕ್ಕಾಚಾರ ಇಲ್ಲ.
- ಬೇಡಿಕೆಯ ಲೆಕ್ಕಾಚಾರ ಇಲ್ಲ. ಆದ ಕಾರಣ ಬೆಲೆ ನಿರ್ಧರಣೆ ಮಾಡಲಾಗುತ್ತಿಲ್ಲ.
- ಮಧ್ಯವರ್ತಿಗಳಿಗೂ ಕೆಲವು ನಷ್ಟಗಳಿರುತ್ತದೆ. ಅವರ ವ್ಯವಹಾರದಲ್ಲಿ ರಿಸ್ಕ್ ಪ್ಯಾಕ್ಟರ್ ಸಹ ಸಾಕಷ್ಟು ಇರುತ್ತದೆ.
- ಉದಾಹರಣೆಗೆ ನಾನು ಒಂದು ಲೊಡು ಮಾವಿನ ಹಣ್ಣು ಉತ್ಪಾದಿಸುತ್ತೇನೆ.
- ಇದನ್ನು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುವುದೇ ಆದರೆ ಮಾರಾಟಕ್ಕೆ ಸಿಗುವ ಹಣ್ಣು ಬರೇ ಅರ್ಧ ಲೊಡು. ಉಳಿದವು ಹಾಳಾಗುತ್ತದೆ.
- ಆದರೆ ಒಬ್ಬ ದಲ್ಲಾಳಿಗೆ ಈ ಹಣ್ಣನ್ನು ಕೊಡುವುದಾದರೆ ಕೊಯಿಲು ಮಾಡುವುದು ಲೋಡು ಮಾಡುವುದು ಕೊಡುವುದು ಕೈ ತೊಳೆದು ಕೊಳ್ಳುವುದು.
- ಆ ನಂತರ ಅದು ಹಾಳಾದರೂ ಕೊಳೆತರೂ ಅದಕ್ಕೂ ಮಾರಾಟ ಮಾಡಿದ ರೈತನಿಗೂ ಯಾವ ಸಂಬಂಧವೂ ಇಲ್ಲ.
- ಒಂದು ವೇಳೆ ರೈತ ನೇರವಾಗಿ ಮಾರಾಟ ಮಾಡಿ ಗ್ರಾಹಕನಿಗೆ ಕೊಳೆತ ಹುಳವಾದ ಹಣ್ಣು ಮಾರಾಟ ಮಾಡಲಿಕ್ಕಾಗುತ್ತದೆಯೇ?
ತಯಾರಿ ಇಲ್ಲವೆಂದು ಕಾಣುತ್ತದೆ:
- ನಮ್ಮ ದೇಶದಲ್ಲಿ ಕಾನೂನನ್ನು ಹೇರುವ ಮುನ್ನ ಅದರ ಪರಿಣಾಮ ಮತ್ತು ಅನುಷ್ಟಾನದ ಬಗ್ಗೆ ಧೀರ್ಘಾವಧಿಯ ಚಿಂತನೆ ಮಾಡುವುದಿಲ್ಲ.
- ಉದಾಹರಣೆಗೆ ಈ ಹಿಂದೆ GST ಯನ್ನು ಜ್ಯಾರಿಗೆ ತರಲಾಯಿತು.
- ಆದರೆ ಅದರ ಪೂರ್ವ ಸಿದ್ದತೆ ಸರಿಯಾಗಿಲ್ಲದೆ ಎಷ್ಟೋ ಜನರಿಗೆ ತೊಂದರೆ ಆಗುತ್ತಿದೆ.
- ಆದನ್ನು ಸರಿಪಡಿಸುವ ಅಥವಾ ಸತ್ಯವಿಚಾರವನ್ನು ಅರ್ಥ ಮಾಡಿಕೊಳ್ಳುವಲ್ಲಿ ಕಾನೂನಿಗೆ ಕಣ್ಣೇ ಇಲ್ಲದಂತಿರುತ್ತದೆ.
- ಮುಂದೆ ನಾವು ಕೃಷಿ ಉತ್ಪನ್ನವನ್ನು ನೇರವಾಗಿ ಮಾರಾಟ ಮಾಡುವಾಗ ಕೊಳ್ಳುವವರಿಗೆ GST ಬಿಲ್ ಬೇಕೆಂದಾದರೂ ಆಚ್ಚರಿ ಇಲ್ಲ.
- ಆಗ ರೈತರೆಲ್ಲರೂ GST ನೋಂದಣೆ ಮಾಡಬೇಕಾಗಿ ಬಂದರೂ ಬರಬಹುದು.
ದೇಶದ ರೈತರ ಉತ್ಪನ್ನಕ್ಕಿಂತ ವಿದೇಶದ ಆಮದು ಉತ್ಪನ್ನ ಅಗ್ಗ ಎಂದು ಕೊಳ್ಳುವ ಜನ ಆಮದು ಮಾಡುವುದಕ್ಕೆ ಹೆಚ್ಚು ಒತ್ತು ಕೊಡುವ ಸಾಧ್ಯತೆ ಇದೆ. (ಕರಿಮೆಣಸು ಎಂಬ ಸಾಂಬಾರ ದೇಶೀಯ ಬಳಕೆಗೆ ಸಾಲುವಷ್ಟು ಇಲ್ಲದಿದ್ದರೂ ಆಮದು ಮಾಡಿಕೊಳ್ಳಲಾಗುತ್ತಿದೆ)
ಎಪಿಎಂಸಿಯಲ್ಲೇ ಸುಧಾರಣೆ ಮಾಡಬಹುದಿತ್ತು.
- ಈಗಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಮೂಲಕ ಮಾರಾಟ ಮಾಡುವುದನ್ನೇ ಹೆಚ್ಚು ಬಲಪಡಿಸಿದ್ದರೆ ಸಾಕಾಗುತ್ತಿತ್ತು.
- ಸರಕಾರ ಪ್ರತೀ ಕೃಷಿ ಉತ್ಪನ್ನಕ್ಕೆ ಇಂತಿಷ್ಟು ಬೆಲೆಯನ್ನು ನಿರ್ಧರಿಸಿದರೆ, ಆ ಬೆಲೆಗೆ ರೈತರಿಂದ ಎಪಿಎಂಸಿಯೇ ಖರೀದಿ ಮಾಡಿ ಅದನ್ನು ಗ್ರಾಕರಿಗೋ, ಸಗಟು, ಚಿಲ್ಲರೆ ವ್ಯಾಪಾರಿಗಳಿಗೋ ಮಾರಾಟ ಮಾಡಬಹುದು.
- ಬಹುಷಃ ಅದರ ರಿಸ್ಕ್ ಅನ್ನು ಅರಿತ ಕಾರಣ ಸರಕಾರ ಇದಕ್ಕೆ ಕೈಹಾಕಲಿಲ್ಲವೇನೋ.
- ಇಡೀ ಕೃಷಿ ಉತ್ಪನ್ನ ವ್ಯವಹಾರದಲ್ಲಿ ಮಾರಾಟ ಮಾಡುವುದು ದೊಡ್ಡದಲ್ಲ. ಅದರ ಹಣ ವಸೂಲಾತಿ ದೊಡ್ಡ ವಿಚಾರ.
- ದಲ್ಲಾಳಿ ಕಮಿಷನ್ 2.5% ಎನ್ನಲಾಗುತ್ತಿದೆ. ಅದನ್ನೇ ಇಳಿಸಿದ್ದರೆ ಅವರ ಲಾಭಬಡುಕತನಕ್ಕೆ ಕಡಿವಾಣ ಹಾಕಬಹುದಿತ್ತು.
- ಹಾಗೆ ನೋಡಿದರೆ E- NAM ಮಾರಾಟ ವ್ಯವಸ್ಥೆ ಕೇಳಲು ಚೆನ್ನಾಗಿದ್ದರೂ ಅದು ವಿಫಲವೇ ಆಯಿತು.
ಮಾತನಾಡಲು ಎಲ್ಲವೂ ಚೆನ್ನಾಗಿರುತ್ತದೆ. ಒಬ್ಬ ದುಡಿಮೆ ಮಾಡದ ರೈತನಿಗೆ ಎಲ್ಲವೂ ಸುಂದರವಾಗಿ ಕಾಣುತ್ತದೆ. ನಮ್ಮ ದೇಶದಲ್ಲಿ ಇನ್ನೂ ಬಹಳಷ್ಟು ರೈತರು ಮಧ್ಯವರ್ತಿಗಳಿಂದ ಸಾಲ ಪಡೆದು ಕೃಷಿ ಮಾಡುವವರಿದ್ದಾರೆ. ಬೇರೆ ಮೂಲದ ಆದಾಯ ಉಳ್ಳವರಿಗೆ ಕಷ್ಟದ ಅರಿವಾಗುವುದಿಲ್ಲ. ಅನುಭವ ಪಡೆದವನಿಗೆ ಮಾತ್ರ ಅದರ ಒಳಮರ್ವ ತಿಳಿದಿರುತ್ತದೆ. ಒಬ್ಬ ಕೃಷಿ ಮಾಡಿದ ಅನುಭವ ಉಳ್ಳವ ಮಾತ್ರ ಕೃಷಿಕನ ನೈಜ ಕಷ್ಟವನ್ನು ಅರಿತುಕೊಳ್ಳಬಲ್ಲ.
ಓದುಗರು ಮುಕ್ತವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಬಹುದು.
End of the article:—————————————————————————–
Search words: APMC system# Commission agents in Agriculture commodities # Direct marketing# Agriculture produces# Farmers of India# PM Modi# Indian kisan bill# Dubbling of farmer’s income#