“ಜೀವಾಮೃತ” ಇದರಲ್ಲಿ ಏನಿರುತ್ತದೆ ಗೊತ್ತೇ?

ಜೀವಾಮೃತ ಸಾರ

ಜೀವಾಮೃತ ಎಂಬುದು  ಸುಮಾರು 10-15 ವರ್ಷಗಳಿಂದೀಚೆಗೆ ನಮಗೆ ಪರಿಚಯವಾದ  ಹೆಸರು. ಅದಕ್ಕೂ ಮುಂಚೆ ಒಬ್ಬರು ಇಂಥಹ ತಯಾರಿಕೆಯನ್ನು ಅಮೃತ ಪಾನಿ ಎಂದು ಕರೆದಿದ್ದರು. ಈಗ ಮತ್ತೆ ಗೋ ಕೃಪಾಮೃತ ಎಂಬ  ಉತ್ಪನ್ನ ಹೆಚ್ಚು ಸುದ್ದಿಯಲ್ಲಿದೆ. ಇವೆಲ್ಲವೂ ಜೈವಿಕವಾಗಿ ಮಣ್ಣನ್ನು ಶ್ರೀಮಂತಗೊಳಿಸಲು ಇರುವ ಬೆಳೆ ಪೋಷಕಗಳು. ಇದರಲ್ಲಿ ಏನು ಇದೆ ಎನ್ನುದಕ್ಕಿಂತ ಇದನ್ನು ಬಳಕೆ ಮಾಡಿದರೆ ಹಾನೀ ಏನೂ ಇಲ್ಲ ಎಂಬುದಂತೂ ಸತ್ಯವಾದದ್ದು.

 • ಕೃಷಿ ಮಾಡುವ ಮಣ್ಣು ಜೈವಿಕವಾಗಿ ಸಂಪಧ್ಭರಿತವಾಗಿದ್ದರೆ  ಎಲ್ಲಾ ಕೃಷಿಯೂ ಸರಾಗ.
 • ಯಾವುದೇ ಮಣ್ಣು ಜೈವಿಕತೆಯಿಂದ ಕೂಡಿರದಿದ್ದರೆ ಅದರಲ್ಲಿ ಕೃಷಿ ಮಾಡಲು ಆಗುವುದೇ ಇಲ್ಲ.
 • ನೆಲ ಅಗೆಯುವಾಗ ಜೇಡಿ ಎಂಬ ಬಿಳಿ ಮಣ್ಣು ದೊರೆಯುತ್ತದೆ.
 • ಇದರಲ್ಲಿ ಯಾವ ಜೀವಾಣುಗಳೂ  ಇರುವುದಿಲ್ಲ.
 • ಇಂಥಹ ಮಣ್ಣಿನಲ್ಲಿ ಒಂದು ಬೀಜ ಬಿತ್ತಿದರೂ ಮೊಳಕೆ ಒಡೆಯಲಾರದು.
 • ಆದ ಕಾರಣ ಕೃಷಿ ಮಾಡಲು ಬೇಕಾಗುವ ಮಣ್ಣು ಜೈವಿಕವಾಗಿ ಸಬಲವಾಗಿದ್ದರೆ ಮಾತ್ರ ಕೃಷಿ ಸಾಧ್ಯ.

Stirring of Jeevamruta- ಜೀವಾಮೃತವನ್ನು ಕಲಕುವುದು

ಮಣ್ಣಿನಲ್ಲಿ ಜೈವಿಕತೆ  ಎಂದರೆ ಏನು?

 • ಬೆಳೆ ಬೆಳೆಸುವ ಮಣ್ಣಿಗೆ ಒಂದು ಗೆಲ್ಲು ಹಸಿ ಸೊಪ್ಪನ್ನು ಹಾಕಿದರೆ ಅದು ಕರಗಿ  ಸಾವಯವ  ಸಂಮೃದ್ಧ ಆಗಬೇಕಿದ್ದರೆ ಅದಕ್ಕೆ ಜೀವಾಣುಗಳು ಸಹಕರಿಸಬೇಕು.
 • ಮಣ್ಣಿನಲ್ಲಿ  ಉಪಕಾರೀ ಮತ್ತು ಉಪದ್ರಕಾರೀ ಎಂಬ ಎರಡೂ ಬಗೆಯ ಕೋಟ್ಯಾಂತರ ಜೀವಿಗಳು ಇರುತ್ತವೆ.
 • ಮಣ್ಣಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇರುವ ಜೀವಿಗಳು ಸಸ್ಯವರ್ಗಕ್ಕೆ ಸೇರಿದವುಗಳು.
 • ಜೊತೆಗೆ ಪ್ರಾಣಿ ವರ್ಗಕ್ಕೆ ಸೇರಿದವುಗಳೂ  ಸಾಕಷ್ಟು ಇವೆ.
 • ಮಣ್ಣನ್ನು ಆಶ್ರಯಿಸಿ ಇರುವ ಎಲ್ಲಾ ಜೀವಿಗಳೂ ಅವು ಕೊನೆಗೆ ಮಣ್ಣಿನ ಜೀವಾಣುಗಳ ಪೋಷಕಗಳು.
 • ಇಲಿ ಹೆಗ್ಗಣ, ಅಳಿಲು, ಮೊಲ, ಮುಂಗುಸಿ, ಕಪ್ಪೆ, ಏಡಿ, ಚಕ್ಕ, ನರಿ, ಇರುವೆ, ಗೆದ್ದಲು, ಎರೆಹುಳು, ಶತಪದಿಗಳು, ಸಹಸ್ರಪದಿಗಳು,ಬಸವನ ಹುಳು, ಕಪ್ಪ ಚಿಪ್ಪಿನ ಹುಳು, ಕಣ್ಣಿಗೆ ಕಾಣುವ ಜೀವಿಗಳಾದರೆ ಕಣ್ಣಿಗೆ ಕಾಣದೆ ಇರುವ ಅಸಂಖ್ಯಾತ ಜೀವಿಗಳು ಇವೆ.
 • ಇವುಗಳಿಗೆ ಬದುಕಲು ಆಹಾರ ಬೇಕು. ಆಹಾರ ದೊರೆಯದಿದ್ದ ಪಕ್ಷದಲ್ಲಿ ಅವು ನಾಶವಾಗಬಹುದು.
 • ಅವುಗಳ ಬದುಕಿಗೆ ಬೇಕಾದಷ್ಟು ಪುಷ್ಕಳ ಆಹಾರ  ದೊರೆತು ಅವು ಸ್ವಚ್ಚಂದವಾಗಿ ಬದುಕುತ್ತಿದ್ದರೆ ಅಂತಹ ಮಣ್ಣು ಜೈವಿಕವಾಗಿ ಶ್ರೀಮಂತವಾಗಿರುತ್ತದೆ.

ಜೀವಾಮೃತ, ಅಮೃತ ಪಾನಿ, ಗೋ ಕೃಪಾಮೃತ ಇವುಗಳು ಮಣ್ಣಿನ ಜೀವಿಗಳ ಆಹಾರವಾಗಿ ಅವುಗಳಿಗೆ ಹೆಚ್ಚಿನ ಚೈತನ್ಯವನ್ನು ಕೊಡುತ್ತವೆ.

ಜೀವಾಮೃತದಲ್ಲಿ ಇರುವುದೇನು:

jeevaamruta for all crops- ಬಳಕೆಗೆ ಸಿದ್ದವಾದ ಜೀವಾಮೃತ

 • ಜೀವಾಮೃತ  ತಯಾರಿಸಲು ಬಳಸುವ ಮೂಲವಸ್ತುಗಳು ಹಸುವಿನ ಮೂತ್ರ, ಹಸುವಿನ ಸಗಣಿ, ದ್ವಿದಳ ಧಾನ್ಯದ ಹಿಟ್ಟು, ಬೆಲ್ಲ  ಹಾಗೂ ಫಲವತ್ತಾದ ಮೇಲ್ಮಣ್ಣು.  ಮೇಲ್ಮಣ್ಣಿನಲ್ಲಿ ಅಸಂಖ್ಯಾತ ಜೀವಾಣುಗಳು ಇರುತ್ತವೆ.
 • ಸಾಮಾನ್ಯವಾಗಿ ಸಾಗುವಳಿಗೆ ಒಳಪಡದ ಕಾಡು ಮಣ್ಣು ಅದರಲ್ಲೂ ಮಳೆಕಾಡಿನ ಮಣ್ಣು ಅತ್ಯಧಿಕ ಜೀವಾಣುಗಳನ್ನು ಒಳಗೊಂಡಿರುತ್ತದೆ.
 • ಮರದ ಬುಡದ ಮೆಕ್ಕಲು ಮಣ್ಣಿನಲ್ಲೂ ಇದು ಇರುತ್ತದೆ. ಹಸುವಿನ ಸಗಣಿಯಲ್ಲಿ ಮತ್ತು ಮೂತ್ರದಲ್ಲಿ  ಸಾರಜನಕದ ಅಂಶ ಇರುತ್ತದೆ.
 • ಜೊತೆಗೆ ಕೆಲವು ಕಳಿಯಲು ಸಹಾಯಕವಾಗುವ ಬ್ಯಾಕ್ಟೀರಿಯಾ ಇರುತ್ತದೆ.
 • ಈ ಸಾರಜನಕ ಜೀವಾಣುಗಳಿಗೆ ಶಕ್ತಿ ದಾಯಕವಾಗಿ ಕೆಲಸ ಮಾಡುತ್ತದೆ.
 • ನಾಟಿ ಹಸುಗಳು ಆಗಬೇಕು ಎನ್ನುವುದಕ್ಕೆ  ಕಾರಣ ಮತ್ತೇನೂ ಅಲ್ಲ.
 • ಅದಕ್ಕೆ ಸಾಮಾನ್ಯವಾಗಿ ಎಲ್ಲರೂ ಭಾರೀ ಆಹಾರವನ್ನು ಕೊಡುವುದಿಲ್ಲ, ಸಾತ್ವಿಕ ಆಹಾರ, ಸೊಪ್ಪು, ಕಳೆ ಹುಲ್ಲು ಮೆಂದ ಹಸುಗಳಾಗಿರುತ್ತವೆ.
 • ಅಧಿಕ ಹಾಲೂಡುವ ಹಸುಗಳಿಗೆ ಪೌಷ್ಟಿಕ ಆಹಾರ ಕೊಡುವ ಕಾರಣ ಅದರಲ್ಲಿ ಮಿಶ್ರಣವಾಗಿರುವ ಕೆಲವು ವಸ್ತುಗಳು ಜೀವಾಣುಗಳಿಗೆ ತೊಂದರೆ ಆಗಬಹುದು ಎಂಬ ಕಾರಣದಿಂದ ಇರಬಹುದು.
 • ದ್ವಿದಳ ದಾನ್ಯದ ಹಿಟ್ಟು ಮತ್ತು ಬೆಲ್ಲದಲ್ಲಿ ಮತ್ತು ಕಾರ್ಬೋ ಹೈಡ್ರೇಟುಗಳು , ಪ್ರೋಟೀನುಗಳು, ಇರುತ್ತವೆ.
 • ಇವೆಲ್ಲ ಶಕ್ತಿಯ ಮೂಲಗಳು. ಇದು ಸೂಕ್ಷ್ಮಾಣು ಜೀವಿಗಳಿಗೆ ಆಹಾರವಾಗಿ ಕೆಲಸ ಮಾಡುತ್ತದೆ.
 • ಬೆಲ್ಲವು ಹುಳಿ ಬರುತ್ತದೆ. ಹುಳಿಬಂದ ಪದಾರ್ಥದಲ್ಲಿ ಜೀವಾಣುಗಳು ಉತ್ತಮವಾಗಿ ಕೆಲಸ ಮಾಡುತ್ತದೆ.
 • ಆ ಕಾರಣಕ್ಕೆ ಜೀವಾಮೃತವನ್ನು ಬಳಸಿದರೆ ಮಣ್ಣು ಜೈವಿಕವಾಗಿ ಸಧೃಢವಾಗುತ್ತದೆ.
 • ಮಣ್ಣಿನಲ್ಲಿ ಜೀವಾಣುಗಳು ಬೇಸಾಯ ವಿಧಾನ ಮತ್ತು ಮಳೆ, ಮಣ್ಣು ಕೊಚ್ಚಣೆ, ಹಾಗೂ ಬಿಸಿಗೆ ನಷ್ಟವಾಗುತ್ತದೆ.
 • ಇದನ್ನು ಭರ್ತಿ ಮಾಡಲು ಈ ಜೀವಾಮೃತ ಸಹಕಾರಿ.

ಮಣ್ಣಿನಲ್ಲಿ ಶಿಲೀಂದ್ರಗಳು, ಬ್ಯಾಕ್ಟೀರಿಯಾಗಳು, ಶೈವಾಲಗಳು ( ಹಾವಸೆ ನೀಲಿ ಹಸುರು ಪಾಚಿ)  ಪ್ರೋಟೋಝೋವಾಗಳು, ಮೈಕೋರೈಜಾಗಳು,  ಆಕ್ಟಿನೋಮೈಸೀಟುಗಳು, ಮುಂತಾದ ಜೀವಿಗಳಿರುತ್ತವೆ. ಇವುಗಳ ಸಮರ್ಪಕ ಕಾರ್ಯ ನಿರ್ವಹಣೆಗೆ ಈ ದ್ರಾವಣ ಆಹಾರ ರೂಪದಲ್ಲಿ ಸಹಕಾರಿಯಾಗಿ ಅವುಗಳನ್ನು ಬೆಳೆಸುತ್ತವೆ. ಆದ ಕಾರಣ ಇದರ ಬಳಕೆಯಲ್ಲಿ ಯಾವುದೇ ದೋಷ ಇರುವುದಿಲ್ಲ.
 ಕೃಷಿಕರಲ್ಲಿ ಇರುವ ಹಸು, ಅದರ ಮಲ ಮೂತ್ರಗಳನ್ನು ಸ್ವಲ್ಪ ಸಾರ ವರ್ಧನೆ ಮಾಡಿ ಬೆಳೆಗಳಿಗೆ ಕೊಡುವ ಒಂದು ಖರ್ಚಿಲ್ಲದ ವ್ಯವಸ್ಥೆ. ಆದ ಕಾರಣ ಇದನ್ನು ಅನುಕೂಲ ಇದ್ದವರು ಮಾಡಿಕೊಳ್ಳಬಹುದು. ಇದರಲ್ಲಿ ಸೋಸುವ ವ್ಯವಸ್ಥೆಗಳೂ  ಇದ್ದು, ಹನಿ ನೀರಾವರಿಯ ಮೂಲಕವೂ ಬೆಳೆಗಳಿಗೆ ಕೊಡಬಹುದು. ಹೊಲದಲ್ಲಿ ಎರೆಹುಳುಗಳು ಹೆಚ್ಚಾಗುತ್ತದೆ.
end of the article:——————————————————————————
search words: jeevaamruta# Indiginious cow# cow urine# cow dung# liquid Oraganic manure# low cost manure prepration# Amruta paani# Go Kruipamruta #  Soil microbs# Soil fertility#

Leave a Reply

Your email address will not be published. Required fields are marked *

error: Content is protected !!