ಹೈನುಗಾರರು ಉತ್ಪಾದಿಸಿದ ಹಾಲನ್ನು ಸ್ಥಳೀಯ ಉತ್ಪಾದಕ ಖರೀದಿಸುವುದಿಲ್ಲ ಎಂದಾಕ್ಷಣ ಹೈನುಗಾರರು ಯಾಕೆ ಕಂಗಾಲಾಗಬೇಕು. ಹಾಲು ತಾಜಾ ರೂಪದಲ್ಲಿ ಮಾತ್ರ ಮಾರಲು ಇರುವ ವಸ್ತು ಅಲ್ಲ. ಇದರಿಂದ ಬೇರೆ ಬೇರೆ ಉತ್ಪನ್ನಗಳನ್ನೂ ಮಾಡಬಹುದು. ಇದು ಎಲ್ಲಾ ಹೈನುಗಾರರಿಗೂ ತಿಳಿದಿರಬೇಕು.
- ಯಾವಾಗಲೂ ನಮ್ಮ ರೈತರಿಗೆ ಬೇರೆ ಬೇರೆ ಆಯ್ಕೆಗಳಿರಬೇಕು.
- ಒಂದೇ ಆಯ್ಕೆ ಆದರೆ ಹೀಗೇ ಆಗುವುದು. ಹಾಲಿನ ಬೇಡಿಕೆ ಕಡಿಮೆಯಾದ ಕಾರಣ, ಅಥವಾ ಹಾಲು ಸಂಗ್ರಹಣೆ ಇಂಥಹ ಸಮಯದಲ್ಲಿ ಕಷ್ಟವಾದ ಕಾರಣ.
- ಮಹಾಮಂಡಲದ ಆದೇಶದಂತೆ ಹಾಲು ಕೊಳ್ಳುವುದನ್ನು ಸ್ಥಗಿತಗೊಳಿಸಿರಬಹುದು.
- ಸರಿ ಹಾಗಿದ್ದರೆ ಹಾಸುವಿನ ಹಾಲು ಕರೆಯದಿರಲಿಕ್ಕಾಗುತ್ತದೆಯೇ? ಕರೆದ ಹಾಲನ್ನು ಚೆಲ್ಲಲಿಕ್ಕಾಗುತ್ತದೆಯೇ ? ಎರಡೂ ಸಾಧ್ಯವಿಲ್ಲ.
- ಆದರೆ ಒಂದು ಸಾಧ್ಯ -ಅದೆಂದರೆ ಹಾಲಿನ ಮೌಲ್ಯವರ್ಧನೆ.
ಹಾಲಿನಿಂದ ಬೆಣ್ಣೆ ತಯಾರಿಕೆ:
- ಇದು ಬಹುಷಃ ಹೆಚ್ಚು ಸಮಯದ ತನಕ ದಾಸ್ತಾನು ಇಡಲು ಸಾಧ್ಯವಿಲ್ಲದ ಮೌಲ್ಯವರ್ಧನೆ.
- ಇದನ್ನು ಯಾರೂ ಮಾಡುವುದು ಸೂಕ್ತವಲ್ಲ.
ತುಪ್ಪ ತಯಾರಿಕೆ:
- ಹಾಲು ಉತ್ಪಾದಕ ಮಹಾಮಂಡಲಗಳು ಹಾಲಿನಿಂದ ತುಪ್ಪ ಮಾಡಿ ತಮ್ಮದೇ ಬ್ರಾಂಡ್ ನಲ್ಲಿ ಮಾರಾಟ ಮಾಡುತ್ತವೆ.
- ಇದು ರೈತರೇ ಉತ್ಪಾದಿಸಿದ ಹಾಲಿನ ತುಪ್ಪವಾಗಿರುತ್ತದೆ.
- ಇದೇ ಕೆಲಸವನ್ನು ಹಾಲು ಉತ್ಪಾದಕರೇ ಮಾಡಿದರೆ ಹಾಲಿನ ಬೆಲೆಯನ್ನು ತುಪ್ಪದ ಮೂಲಕ ಪಡೆಯಲು ಸಾಧ್ಯವಿದೆ.
- ಒಂದು ಲೀಟರ್ ಹಾಲಿನಲ್ಲಿ ಅದರ ಕೊಬ್ಬಿನ ಅಂಶಕ್ಕಗುಣವಾಗಿ 50-75 ಮಿಲಿ. ಲೀ. ತುಪ್ಪ ಉತ್ಪಾದನೆ ಮಾಡಲು ಸಾಧ್ಯವಿದೆ.
- ಮಾರುಕಟ್ಟೆಯಲ್ಲಿ 1 ಲೀ. ತುಪ್ಪಕ್ಕೆ 400 ರೂ. ಬೆಲೆ ಇದ್ದು, ಇಷ್ಟು ತುಪ್ಪದ ಉತ್ಪಾದನೆಗೆ 10-12 ಲೀ. ಹಾಲು ಬೇಕಾಗುತ್ತದೆ.
- ಅಂದರೆ ಹಾಲು ಉತ್ಪಾದಕರು ಒಂದು ಲೀ. ಹಾಲಿಗೆ ಸರಾಸರಿ 30 ರೂ. ಸಂಪಾದನೆ ಮಾಡಿದಂತಾಗುತ್ತದೆ.
ತುಪ್ಪ ಉತ್ಪಾದನೆ ಮಾಡುವಾಗ ಅದಕ್ಕೆ ಉರುವಲು ಬೇಕು. ಹಾಗೆಯೇ ಸಮಯವೂ ಬೇಕು. ತಾಜಾ ಹಾಲು ಮಾರಾಟ ಮಾಡುವಾಗ ಇದು ಇಲ್ಲ. ನಿಜ. ಆದರೆ ಹಾಲನ್ನು ಅನವಶ್ಯಕ ಹಾಳು ಮಾಡುವ ಬದಲಿಗೆ ಇದು ಉತ್ತಮ ಪರಿಹಾರ.
- ತುಪ್ಪ ಉತ್ಪಾದನೆ ಇದು ಸ್ವಲ್ಪ ನಾಜೂಕಿನ ಕೆಲಸ ಆದ ಕಾರಣ ಯಾವುದೇ ಕಾರಣಕ್ಕೆ ಇದರಲ್ಲಿ ಸ್ವಚ್ಚತೆಯೊಂದಿಗೆ ರಾಜಿ ಮಾಡಿಕೊಳ್ಳಬಾರದು.
- ತೂಕ ಹೆಚ್ಚು ಬರಬೇಕೆಂದು ಹದವಾಗಿ ಕಾಯಿಸಿ ಗುಣಮಟ್ಟವನ್ನು ಹಾಳು ಮಾಡಬಾರದು.
ಹೈನುಗಾರರು ಒತ್ತಾಯಿಸಿ:
- ಹಾಲು ಉತ್ಪಾದಕರು ಉತ್ಪಾದಿಸಿದ ಹಾಲನ್ನು ಮಾರಾಟ ಮಾಡಿ ಅದರ ಮೂಲದಲ್ಲೇ ಅತೀ ದೊಡ್ಡ ವ್ಯವಸ್ಥೆಯನ್ನು ಹುಟ್ಟು ಹಾಕಲಾಗಿದೆ.
- ಇದು ಹಾಲು ಉತ್ಪಾದಕರಿಗಿಂತ ಹಿರಿದಾಗಿ ಬೆಳೆದಿದೆ.
- ಇವರು ಇಂತಹ ಸಂದಿಗ್ಧ ಸಮಯದಲ್ಲಿ ಹಾಲು ಕೊಳ್ಳುವುದು ನಿಲ್ಲಿಸಿದ್ದರೂ ನಾಳೆ ಎಲ್ಲವೂ ಸರಿಯಾದ ನಂತರ ಹಾಲು ಉತ್ಪಾದಕರು ತಯಾರಿಸಿದ ತುಪ್ಪವನ್ನು ಕೊಂಡು ಅದನ್ನು ತಮ್ಮ ಬ್ರಾಂಡ್ ಮೇಲೆ ಮಾರಾಟ ಮಾಡಬಹುದು.
ಈ ಬಗ್ಗೆ ಹಾಲು ಉತ್ಪಾದಕರೆಲ್ಲರೂ ಒಟ್ಟು ಸೇರಿ ರಾಜ್ಯದ ಮುಖ್ಯ ಮಂತ್ರಿಗಳು ಮತ್ತು ಸಂಬಂಧಿಸಿದ ಪಶುಸಂಗೋಪನಾ ಸಚಿವರಲ್ಲಿ ವಿನಂತಿ ಮಾಡಿಕೊಳ್ಳಬಹುದು.