ಅಡಿಕೆ ಬೆಳೆಗಾರರಲ್ಲಿ ಸಿಗುವ ತ್ಯಾಜ್ಯಗಳಾದ ಸುಲಿದ ಅಡಿಕೆ ಸಿಪ್ಪೆ, ಅದರ ಗರಿ, ಹಾಳೆ ಎಲ್ಲವನ್ನೂ ಒಟ್ಟು ಸೇರಿದರೆ ಅದರ ಪ್ರಮಾಣ, ಆ ಅಡಿಕೆ ತೋಟಕ್ಕೆ ಬೇಕಾಗುವ ಎಲ್ಲಾ ಸಾವಯವ ಅಂಶವನ್ನು ಪೂರೈಸುವಷ್ಟು. ಆದರೆ ನಮ್ಮಲ್ಲಿ ಅವುಗಳ ಸದುಪಯೋಗ ಆಗುತ್ತಿಲ್ಲ. ಹೆಚ್ಚಿನ ರೈತರು ಅಡಿಕೆ ತೋಟದಲ್ಲಿ ಸಿಗುವ ತ್ಯಾಜ್ಯಗಳನ್ನು ಸಮರ್ಪಕವಾಗಿ ಬಳಕೆ ಮಾಡದೆ ನಷ್ಟ ಮಾಡಿಕೊಳ್ಳುತ್ತಾರೆ. ಇದನ್ನು ಸ್ವಲ್ಪವೂ ನಷ್ಟವಾಗದಂತೆ ಬಳಸಿ ರಕ್ಷಿಸಿದರೆ ಮಣ್ಣು ಫಲವತ್ತಾಗುತ್ತದೆ.ಬೆಳೆ ನಳನಳಿಸುತ್ತದೆ.
ನೀವೆಂದಾದರೂ ಉತ್ತರ ಕರ್ನಾಟಕ, ಮಲೆನಾಡಿನ ಕಡೆ ಹೋಗಿದ್ದರೆ ಒಮ್ಮೆ ಅಲ್ಲಿನ ಹೊಲ, ಅಲ್ಲಿನ ಮಣ್ಣು ಇವುಗಳ ಕಡೆಗೆ ಸೂಕ್ಷ್ಮ ದೃಷ್ಟಿ ಹರಿಸಿ. ಇಲ್ಲಿನ ಮಣ್ಣಿನಲ್ಲಿ ಮರಳು ಕಲ್ಲುಗಳ ಪ್ರಮಾಣ ತುಂಬಾ ಕಡಿಮೆ. ಕರಾವಳಿಯ ಅಧಿಕ ಮಳೆಯಾಗುವ ಪ್ರದೇಶಗಳಲ್ಲಿ ಯಾದೃಚ್ಚಿಕವಾಗಿ 1 ಕಿಲೋ ಮಣ್ಣನ್ನು ತೆಗೆದುಕೊಂಡು ಅದನ್ನು ನೀರಿನಲ್ಲಿ ಕರಗಿಸಿ. ಅಲ್ಲಿ ಸಿಗುವ ಒಟ್ಟು ಮರಳು, ಮತ್ತು ಹರಳು ಕಲ್ಲುಗಳ ಪ್ರಮಾಣ ನೋಡಿದರೆ ದಂಗಾಗುತ್ತೀರಿ. ಇದು 60% ಕ್ಕೂ ಹೆಚ್ಚು. ಅದರಲ್ಲಿ ಹರಳು ಕಲ್ಲು ಪ್ರಮಾಣವೇ ಜಾಸ್ತಿ. ಅದೇ ಬಯಲು ಸೀಮೆಯ ಪ್ರದೇಶಗಳಲ್ಲಿ ಈ ಕೆಲಸ ಮಾಡಿದರೆ ಅಲ್ಲಿ 80% ಕ್ಕೂ ಹೆಚ್ಚು ಮಣ್ಣು ಮತ್ತು ಉಳಿದವು ಮರಳು ಸಿಗುತ್ತದೆ. ಅಲ್ಲಿ ಮಳೆ ಕಡಿಮೆ ಆದ ಕಾರಣ ಹಾಕಿದ ಸಾವಯವ ವಸ್ತುಗಳು ಮಣ್ಣಿಗೆ ಸೇರಲ್ಪಟ್ಟು ಅದು ಮಣ್ಣನ್ನು ಮತ್ತೂ ಮತ್ತು ಶ್ರೀಮಂತಗೊಳಿಸುತ್ತಾ ಬರುತ್ತದೆ. ಅಲ್ಲಿ ಬೆಳೆಯುವ ಬೆಳಗಳೂ ಸಹ ಅದಕ್ಕೆ ಪೂರಕ. ಉದಾಹರಣೆಗೆ ಜೋಳ. ಒಂದು ಜೋಳದ ಗಿಡ 6 ಅಡಿ ಎತ್ತರಕ್ಕೆ ಬೆಳೆಯುತ್ತದೆ. ನೆಲದ ಮೇಲೆ ಬೆಳೆದ ಆದರ ಗಾತ್ರದ ತೂಕದಷ್ಟೇ ಮಣ್ಣಿನಲ್ಲಿ ಬೇರನ್ನೂ ಬಿಟ್ಟಿರುತ್ತದೆ. ಬೇರನ್ನು ಯಾರೂ ಕೀಳುವುದಿಲ್ಲ.ಅದನ್ನು ಉಳುಮೆ ಮಾಡಿ ಮಣ್ಣಿಗೆ ಸೇರಿಸಲಾಗುತ್ತದೆ. ಅದು ಮಣ್ಣಿಗೆ ಸೇರ್ಪಡೆಯಾಗಿ ಸಾವಯವ ಪೋಷಕವಾಗುತ್ತದೆ. ಕಬ್ಬು, ಹತ್ತಿ, ಎಳ್ಳು, ಎಲ್ಲಾ ಬೆಳೆಗಳಲ್ಲೂ ಹಾಗೆಯೇ. ಇಂತಹ ಸ್ಥಿತಿ ಕರಾವಳಿಯಲ್ಲಿ ಇಲ್ಲ. ಭತ್ತ ಬಿಟ್ಟರೆ ಇಲ್ಲಿ ಬಹುತೇಕ ಧೀರ್ಘಾವಧಿ ಬೆಳೆಗಳು. ಸಾವಯವ ವಸ್ತುಗಳು ಶಿಥಿಲವಾಗಿ ಮಣ್ಣಿಗೆ ಸೇರ್ಪಡೆಯಾಗುವ ಅವಕಾಶ ಕಡಿಮೆ. ಮಣ್ಣಿಗೆ ಎಷ್ಟೇ ಸಾವಯವ ಮೂಲವಸ್ತು ಸೇರಿಸಿದರೂ ಅದು ಮಳೆಯ ಹನಿಗಳ ಹೊಡೆತಕ್ಕೆ ಸಿಕ್ಕಿ ಕರಗಿ ನೀರಿನೊಂದಿಗೆ ಕೊಚ್ಚಣೆಯಾಗಿ ಹೋಗುತ್ತದೆ. ಒಂದು ಅಡಿಕೆ ಹಾಳೆ ಕೊಳೆತು ಗೊಬ್ಬರವಾದಾಗ ಆಗುವ ಪ್ರಮಾಣ ಹೆಚ್ಚೆಂದರೆ 100 ಗ್ರಾಂ ನಷ್ಟು. ಅಷ್ಟು ಪ್ರಮಾಣವು ತೊಳೆದು ಹೋಗಲು ಒಂದು ಎರಡು ಮಳೆ ಸಾಕು.ಹಾಗಾಗಿ ಕರಾವಳಿಯ ಮಣ್ಣಿನಲ್ಲಿ ಹರಳುಕಲ್ಲು,ಮರಳಿನ ಪ್ರಮಾಣ ಹೆಚ್ಚು. ಸಾವಯವ ಸತ್ವ ಕಡಿಮೆಯಾದ ಕಾರಣ ಸೂಕ್ಷ್ಮ ಪೊಷಕಾಂಶಗಳ ಕೊರತೆಯೂ ಹೆಚ್ಚು. ಅದನ್ನು ತಡೆಯಲು ನಾವು ಗರಿಷ್ಟ ಪ್ರಮಾಣದಲ್ಲಿ ಸಾವಯವ ವಸ್ತುಗಗಳಾದ ಅಡಿಕೆ ಸಿಪ್ಪೆ, ಹಾಳೆ, ಗರಿ, ತೆಂಗಿನ ಸಿಪ್ಪೆ ಇತ್ಯಾದಿ ಬಳಸಬೇಕಾಗುತ್ತದೆ. ಸಾವಯವ ವಸ್ತುಗಳು ಕಡಿಮೆಯಾದ ಕಾರಣವೇ ಇಲ್ಲಿ ಮಣ್ಣು ಬೇಸಿಗೆಯಲ್ಲಿ ಗಟ್ಟಿಯಾಗಿರುತ್ತದೆ.
ಅಡಿಕೆ ಸಿಪ್ಪೆಯ ಬಳಕೆ ಸಹ್ಯವೇ?
- ಅಡಿಕೆ ಸಿಪ್ಪೆಯಲ್ಲಿ ಎರಡು ವಿಧ. ಕರಾವಳಿ ಭಾಗಗಳಲ್ಲಿ ಲಭ್ಯವಿರುವುದು ಒಣ ಅಡಿಕೆಯ ಸಿಪ್ಪೆ.
- ಇದನ್ನು ಬೆಳೆಗಳ ಬುಡಕ್ಕೆ ಬಳಸಿದರೆ ರೋಗ ಬರುತ್ತದೆ, ಹಾಗಾಗುತ್ತದೆ, ಹೀಗಾಗುತ್ತದೆ ಎಂದೆಲ್ಲಾ ಮಾತುಗಳನ್ನಾಡುತ್ತಾರೆ.
- ವಾಸ್ತವವಾಗಿ ಇದರಲ್ಲಿ ಲಿಗ್ನಿನ್ ಅಂಶ ಸ್ವಲ್ಪ ಹೆಚ್ಚು ಇರುವ ಕಾರಣ ನೇರವಾಗಿ ಬೆಳೆಗಳ ಬುಡಕ್ಕೆ ಹಾಕುವುದು ಅಷ್ಟು ಯೋಗ್ಯವಲ್ಲ.
- ಹಾಗೆಂದು ಹಾಕಿದರೆ ಅಂತಹ ತೊಂದರೆ ಏನೂ ಇಲ್ಲ.
- ಹಾನಿಯಾದ ನಿದರ್ಶನವೂ ಇಲ್ಲ. ಇದನ್ನು ಕಾಂಪೋಸ್ಟು ಮಾಡಿಯೂ ಬಳಕೆ ಮಾಡಬಹುದು.
- ರಾಶಿ ಹಾಕಿ ಕೆಲವು ದಿನ ಮಳೆಗೆ ನೆನೆದ ನಂತರ ಬಳಕೆ ಮಾಡಬಹುದು.
- ಅಡಿಕೆ ಸಿಪ್ಪೆಯನ್ನು ಒಂದೆಡೆ ರಾಶಿ ಹಾಕಿ ಅದಕ್ಕೆ ನೀರಿನ ಸಂಪರ್ಕ ಆದ ತಕ್ಷಣ ಅದರಲ್ಲಿ ಒಂದು ವಾಸನೆ ಹುಟ್ಟಿಕೊಳ್ಳುತ್ತದೆ.
- ಹಾಗೆಯೇ ಅದರಲ್ಲಿ ಅಣಬೆಗಳು ಬೆಳೆಯಲಾರಂಭಿಸುತ್ತದೆ.
- ಆ ಸಮಯಕ್ಕೆ ಅದು ಕಾಂಪೋಸ್ಟು ಕ್ರಿಯೆಗೆ ಒಳಪಟ್ಟಿತು ಎಂದರ್ಥ.
- ಈ ಸಿಪ್ಪೆಗೆ ಎರೆಹುಳುಗಳ ಪ್ರವೇಶ ಕಡಿಮೆ ಇರುತ್ತದೆ. ಕಾರಣ ಅದರಲ್ಲಿ ಲಿಗ್ನಿನ್ ಪ್ರಮಾಣ ಹೆಚ್ಚಾಗಿರುತ್ತದೆ.
- ಕಳಿತ ತರುವಾಯ ( ಅಣಬೆ ಬೆಳೆದು ಶಿಥಿಲ ಗೊಂಡ ನಂತರ) ಅದಕ್ಕೆ ಎರೆಹುಳುಗಳು ಬರುತ್ತವೆ.
- ಆದಾಗ್ಯೂ ಎರೆಹುಳುಗಳಿಗೆ ಅವು ಇಷ್ಟವಾಗಬೇಕಾದರೆ ಅದಕ್ಕೆ ಸ್ಲರಿ ದ್ರಾವಣವನ್ನು ಮಿಶ್ರಣ ಮಾಡಬೇಕು.
- ಆ ನಂತರ ಅದನ್ನು ಬೆಳೆಗಳ ಬುಡಕ್ಕೆ ಸಾವಯವ ತ್ಯಾಜ್ಯವಾಗಿ ಬಳಕೆ ಮಾಡಬಹುದು.
- ಅದು ಒಂದು ವರ್ಷದ ಸೀಸನ್ ಒಳಗೆ ಸಂಪೂರ್ಣ ಕರಗಲ್ಪಟ್ಟು ಗೊಬ್ಬರವಾಗಿ ಮಣ್ಣಾಗುತ್ತದೆ.
- ಕರಗಿ ಮಣ್ಣಾಗುವಿಕೆ ಸ್ವಲ್ಪ ನಿಧಾನ. ನೆಲಕ್ಕೆ ಮೇಲ್ಹಾಸಲು, ತೇವಾಂಶ ರಕ್ಷಣೆಗೆ ಅನುಕೂಲ.
ರೋಗ ಬರುವ ಸಾಧ್ಯತೆ:
- ಒಣ ಅಡಿಕೆ ಸಿಪ್ಪೆಯಲ್ಲಿ ಯಾವುದೇ ರೋಗಕಾರಕ ಶಿಲೀಂದ್ರಗಳ ಅವಶೇಷ ಇರುವುದಿಲ್ಲ.
- ರೋಗ ಎಂದರೆ ಅಡಿಕೆಗೆ ಬರುವ ಕ್=ಕಾಯಿ ಕೊಳೆ, ಬೇರು ಕೊಳೆ, ಸುಳಿ ಕೊಳೆಗೆ ಸಂಬಶಿಸಿದ ಶಿಲೀಂದ್ರ.
- ಈ ಶಿಲೀಂದ್ರ ಒಣ ವಸ್ತುಗಳಲ್ಲಿ ಬದುಕುವುದಿಲ್ಲ ಅದರ ಬೀಜಾಣುಗಳೂ ಬದುಕುವುದಿಲ್ಲ.
- ಹಾಗಾಗಿ ರೋಗ ಬರುವ ಯಾವ ಸಾಧ್ಯತೆಯೂ ಇಲ್ಲ.
- ಅಡಿಕೆ ಸಿಪ್ಪೆ ಕಳಿಯಲು ಮೊದಲು ಸಹಸ್ರಪದಿಗಳು, ಗಂಗೆ ಹುಳು ಸಹಕರಿಸಿ, ಕೊನೆಗೆ ಎರೆಹುಳುಗಳು ಬರುತ್ತವೆ.
- ಅಡಿಕೆ ಬೆಳೆಗಾರರು ಬೇಸಿಗೆಯಲ್ಲಿ ಸಿಪ್ಪೆ ಸುಲಿದು ಅದನ್ನು ಅಂಗಳದಲ್ಲಿ ಹಾಕುತ್ತಾರೆ.
- ಮಳೆ ಬಂದು ಒದ್ದೆ ಆದ ನಂತರ ಅದರಲ್ಲಿ ತರಕಾರಿ ಬೆಳೆಯುತ್ತಾರೆ.
- ಎಲ್ಲಾ ತರಕಾರಿಗಳೂ ಚೆನ್ನಾಗಿ ಬೆಳೆಯುತ್ತವೆ. ಯಾವುದೇ ರೋಗಗಳು ಬರುವುದಿಲ್ಲ.
- ಬೇರು ಚೆನ್ನಾಗಿ ಬರಲು ಇದು ಸಹಕಾರಿ.
ಹಸಿ ಅಡಿಕೆ ಸಿಪ್ಪೆ:
- ಹಸಿ ಅಡಿಕೆ ಸಿಪ್ಪೆಯನ್ನು ನೇರವಾಗಿ ಯಾವುದೇ ಬೆಳೆಯ ಬುಡಕ್ಕೆ ಬಳಕೆ ಮಾಡುವುದು ಸೂಕ್ತವಲ್ಲ.
- ಅದನ್ನು ಒಂದೆಡೆ ರಾಶಿ ಹಾಕಿ ಅದು ಒಣಗಲು ಅನುವು ಮಾಡಿಕೊಡಬೇಕು.
- ಒಣಗಿದ ನಂತರ ಅದಕ್ಕೆ ಡಿ ಕಂಪೋಸಿಂಗ್ ಬ್ಯಾಕ್ಟೀರಿಯಾಗಳನ್ನು ಸೇರಿಸಿ ಕಾಂಪೋಸ್ಟು ಮಾಡಿ ಬಳಕೆ ಮಾಡಿದರೆ ಯಾವುದೇ ತೊಂದರೆ ಇಲ್ಲ.
- ವೇಸ್ಟ್ ಡಿ ಕಂಪೋಸರ್ ಸಹ ಇದನ್ನು ಕಳಿಯುವಂತೆ ಮಾಡುತ್ತದೆ.
- ಹಸಿಯಾದ ಸಿಪ್ಪೆಯಲ್ಲಿ ಇರುವ ರಸ (ಟ್ಯಾನಿನ್) ಮಣ್ಣಿಗೆ ಅಷ್ಟು ಉತ್ತಮವಲ್ಲ ಹಾಗಾಗಿ ನೇರವಾಗಿ ಸುಲಿದ ತಕ್ಷಣ ಬಳಕೆ ಮಾಡುವುದು ಬೇಡ.
ಅಡಿಕೆ ಸಿಪ್ಪೆ- ಸೋಗೆ- ಹಾಳೆಯಲ್ಲಿ ಪೊಷಕಾಂಶಗಳು:
- ಯಾವುದೇ ಬೆಳೆ ಉಳಿಕೆಗಳಿರಲಿ ಅದರಲ್ಲಿ ಬೆಳೆಗಳಿಗೆ ಬಳಕೆಯಾಗಿ ಉಳಿದ ಕೆಲವು ಪೋಷಕಗಳು ಇರುತ್ತವೆ.
- ಇದೇ ಕಾರಣಕ್ಕೆ ಹಸುಗಳಿಗೆ ಅಡಿಕೆ ಹಾಳೆ , ಸೋಗೆ ತಿನ್ನಿಸಿದಾಗ ಸ್ವಲ್ಪ ಹೆಚ್ಚು ಹಾಲು ಕೊಡುತ್ತವೆ.
- ಅವುಗಳು ರುಚಿ ಇದ್ದ ಆಹಾರವನ್ನು ತಿನ್ನುತ್ತವೆ ತಾನೇ. ರುಚಿ ಇರಬೇಕಾದರೆ ಅದರಲ್ಲಿ ಏನಾದರೂ ಸತ್ವಗಳು ಇರಬೇಕಾಗುತ್ತದೆ.
- ಅಡಿಕೆ ಸಿಪ್ಪೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಸುಣ್ಣದ ಅಂಶವೂ , ತಾಮ್ರದ ಅಂಶವೂ ಇರುತ್ತದೆ.ಅದರಿಂದ ಅಂತಹ ಹಾನಿ ಇಲ್ಲ.
- ಅಡಿಕೆ ಸಿಪ್ಪೆಯನ್ನು ಬಯೋಚಾರ್ ಮಾಡಿ ಬೆಳೆಗಳಿಗೆ ಬಳಸಬಹುದು. ಇದು ಬಹಳ ಉತ್ತಮ ಪೋಷಕವಾಗಿ ಕೆಲಸ ಮಾಡುತ್ತದೆ.
- ಹೆಚ್ಚಾಗಿ ಅಡಿಕೆ ಸಿಪ್ಪೆಯಲ್ಲಿ ಜೀವಾಣುಗಳಿಗೆ ಬೇಕಾದ ಆಹಾರ ಕಡಿಮೆ.
- ಆದರೂ ಅದು ಶಿಥಿಲಗೊಂಡಾಗ ಜೀವಾಣಿಗಳಿಗೆ ಹೊಂದಿಕೆಯಾಗುತ್ತದೆ.
ಬಹಳಷ್ಟು ಅಡಿಕೆ ಬೆಳೆಗಾರರು ಅಡಿಕೆ ಸಿಪ್ಪೆಯನ್ನು ಸುಡುತ್ತಾರೆ. ಸುಡುವುದರಿಂದ ಸ್ಥೂಲ ಪ್ರಮಾಣ (Bulk) ಕಡಿಮೆಯಾಗುತ್ತದೆ. ಹಲವು ಬಗೆಯ ಅನುಕೂಲಗಳನ್ನು ಕಳೆದುಕೊಳ್ಳುತ್ತೇವೆ. ನೀರಿನ ಒತ್ತಾಯ ಮುಂತಾದ ಸಂದರ್ಭಗಳಲ್ಲಿ ಸ್ಥೂಲ ಸಾವಯವ ವಸ್ತುಗಳನ್ನು ನೆಲಕ್ಕೆ ಹೊದಿಕೆ ಹಾಕಿದರೆ ನೀರಿನ ಉಳಿತಾಯ ಸಹ ಮಾಡಬಹುದು. ಹಾಗಾಗಿ ಸುಡಬೇಡಿ. ಒಂದೆಡೆ ರಾಶಿ ಹಾಕಿ 5-6 ತಿಂಗಳು ಬಿಟ್ಟು ನೆಲಕ್ಕೆ ಸೇರಿಸಿ ಮಣ್ಣನ್ನು ಶ್ರೀಮಂತಗೊಳಿಸಿ.