ನೀರಿಗೆ ಬರ ಬಂದರೆ ? ಕಡಿಮೆ ನೀರಿನಲ್ಲಿ ಹೇಗೆ ಬೆಳೆ ಉಳಿಸಿಕೊಳ್ಳುವುದು?  

ನೀರಿಗೆ ಬರ ಬಂದರೆ ? -. ಕಡಿಮೆ ನೀರಿನಲ್ಲಿ ಹೇಗೆ ಬೆಳೆ ಉಳಿಸಿಕೊಳ್ಳುವುದು

2023 ನೇ ಇಸವಿ ನಮಗೆ ಮಳೆ ಇಲ್ಲದೆ ಬರಗಾಲದ ಸನ್ನಿವೇಶವನ್ನು ತೋರಿಸಿಯೇ ಬಿಡುತ್ತದೆಯೋ ಎಂಬ ಅನುಮಾನ ಮೂಡುತ್ತಿದೆ. ಜುಲೈ ತಿಂಗಳ ಕೊನೆಗೆ ಕಾಣೆಯಾದ ಮಳೆ ಮತ್ತೆ ಬಂದುದು ಆಗಾಗ ನೆಂಟರಂತೆ.  ಹೀಗೆ ಮುಂದುವರಿದರೆ ಬರಗಾಲ ಗ್ಯಾರಂಟಿ. ಯಾವುದಕ್ಕೂ ನಾವು ಸಿದ್ದರಾಗಿರಬೇಕು. ಕೆಲವು ಮೂಲಗಳ ಪ್ರಕಾರ ಇನ್ನು ಬರುವ  ಮಳೆ ಅಲ್ಪ ಸ್ವಲ್ಪ ಪ್ರಮಾಣದ್ದೇ ಹೊರತು, ತಳಕ್ಕಿಳಿದ ನೀರಿನ ಮಟ್ಟವನ್ನು ಮತ್ತೆ ಮೇಲಕ್ಕೇರಿಸುವಷ್ಟು  ಬಲವಾಗಿರುವುದಿಲ್ಲ. ಹಾಗಾಗಿ ನೀರಿನ ಕ್ಷಾಮ ಉಂಟಾಗಲೂಬಹುದು. ಅದಕ್ಕಾಗಿ ಈಗಲೇ ಸಿದ್ದರಾಗೋಣ.

ಪ್ರಕೃತಿಯ ಮುಂದೆ ಮಾನವ ತೃಣ. ಬರಗಾಲ, ಕ್ಷೇಮಕಾಲ ಇವೆಲ್ಲಾ ಪ್ರಾಕೃತಿಕ ಏರುಪೇರುಗಳು. ಹಾಗಾಗಿ ಪಾಲಿಗೆ ಬಂದದ್ದು ಪಂಚಾಮೃತ ಎಂದು ಸ್ವೀಕರಿಸಲೇ ಬೇಕು. ಹೊಂದಾಣಿಕೆ ಮಾಡಿಕೊಂಡು ಹೋದರೆ ಕಷ್ಟಗಳಿಂದ ಪಾರಾಗಲು ಸಾಧ್ಯ. ನೀರಿನ ಕೊರತೆ ಉಂಟಾದರೆ ಅದರ ಚಿತ್ರಣ ರೌದ್ರವೇ ಆಗಿರುತ್ತದೆ.ಮಳೆ ಕಡಿಮೆ ಆದರೆ ಬಾವಿಯ ನೀರು ಬೇಗ ಆರುತ್ತದೆ. ಅಂತರ್ಜಲ ಮಟ್ಟ ಕುಸಿಯುತ್ತದೆ. ಕೆರೆ ಕಟ್ಟೆಗಳು ಬತ್ತುತ್ತವೆ. ಇರುವ ನೀರಿನ ಮೂಲಕ್ಕೆ ಒತ್ತಡ ಹೆಚ್ಚಾಗಿ ಅದು ಮತ್ತಷ್ಟು ಶೋಷಣೆಗೆ ಒಳಗಾಗುತ್ತದೆ. ಕೊಳವೆ ಬಾವಿಗಳು ಬರುವ ಮುಂಚೆ ಬೇಸಿಗೆಯ ಸಮಯದಲ್ಲಿ  ನೀರಿಗಾಗಿ ಹೆಚ್ಚಿನವರು ಅನುಭವಿಸುತ್ತಿದ್ದ ಕಷ್ಟಗಳನ್ನು ನೆನೆಪಿಸಿಕೊಳ್ಳೋಣ.ಈಗಂತೂ ನೀರಿನ ಕ್ಷಾಮ ಉಂಟಾದರೆ ಅದಕ್ಕಿಂತಲೂ ಪರಿಸ್ಥಿತಿ ಕಠಿಣವಾಗಬಹುದು.

ನೀರು ಇಲ್ಲದಿದ್ದರೆ ಯಾವುದೂ ಇಲ್ಲ:

 • ಎಲ್ಲಾ ನೀರಿನ ಮೂಲಕ್ಕೂ ಮಳೆ ನೀರೇ ಆಧಾರ. ಮಳೆ ಕಡಿಮೆಯಾದರೆ ಕೃಷಿ ಬಳಕೆಗೂ ನೀರು ಇಲ್ಲ.
 • ದಿನಬಳಕೆಯ ಉದ್ದೇಶಕ್ಕೆ ನೀರು ಇಲ್ಲವಾಗುತ್ತದೆ. ಆ ಸ್ಥಿತಿಯನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ.
 • ನೀರು ಎಂದರೆ ಜೀವ ರಕ್ಷಕ.
 • ಅಂತರ್ಜಲ ತಳಕ್ಕಿಳಿದರೆ, ಕೆರೆ ಕಟ್ಟೆ ಬರಿದಾದರೆ, ಹೊಳೆ ಹಳ್ಳಗಳಲ್ಲಿ ನೀರಿಲ್ಲದಿದ್ದರೆ ದಿನಬಳಕೆಗೆ ನೀರಿಗೆ ಕಷ್ಟವಾಗುತ್ತದೆ.
 • ದಿನಬಳಕೆಯ ಅವಷ್ಯಕತೆ ತೀರಿದ ನಂತರ ಕೃಷಿ ಉದ್ದೇಶ. ವ್ಯಕ್ತಿಯೊಬ್ಬ ಬೆಲೆಬಾಳುವ ವಸ್ತು ಉಳ್ಳ ಮೂಟೆ ಹೊತ್ತುಕೊಂಡು ಹೊಳೆ ದಾಟುತ್ತಿದ್ದನಂತೆ.
 • ತನ್ನ ಮೂಟೆಯಲ್ಲಿರುವ ವಸ್ತು ಹಾನಿಯಾಗದಿರಲಿ ಎಂದು ಜಾಗರೂಕತೆಯಲ್ಲಿ  ತಲೆಯಲ್ಲಿ ಹೊರುತ್ತಿದ್ದ ವ್ಯಕ್ತಿ
 • ನೀರು ಹೆಚ್ಚಾಗುತ್ತಾ ಬಂದು ತಾನು ಮುಳುಗುವ ಹಂತಕ್ಕೆ ಬಂದಾಗ ತನ್ನ ಮೂಟೆಯ ಅಸೆ ಬಿಟ್ಟು ಅದನ್ನು
 • ಕಾಲಡಿಗೆ ಹಾಕಿ ಅದರ ಮೇಲೆ ನಿಂತಾದರೂ ಬದುಕಿಕೊಳ್ಳುವ ಪ್ಯಯತ್ನ ಮಾಡುತ್ತಾನೆ.
 • ಹಾಗೆಯೇ,ದಿನಬಳಕೆಯ ಉದ್ಡೇಶ ತೀರಿದ ಮೇಲೆ ಕೃಷಿ ನೀರಾವರಿ.
 • ಈ ವರ್ಷ ಕೃಷಿ ನೀರಾವರಿಗೆ ನೀರು ಖಂಡಿತವಾಗಿಯೂ ಕಷ್ಟವಾಗಲಿದೆ.
 • ದಿನಬಳಕೆಗೆ ತೊಂದರೆ ಆಗದಿರಲಿ ಎಂದು ಆಶಿಸೋಣ.
ಅಡಿಕೆ ತೋಟಗಳ ಸ್ಥಿತಿ ಹೀಗಾಗಬಹುದು
ಅಡಿಕೆ ತೋಟಗಳ ಸ್ಥಿತಿ ಹೀಗಾಗಬಹುದು

ನೀರಿನ ಕೊರತೆ ನೀಗಿಸಲು ಮಿತವ್ಯಯ ಒಂದೇ ಮಾರ್ಗ:  

 • ಕೃಷಿಕರು ಬೆಳೆಗಳಿಗೆ ಉಣಿಸಲು ಅಧಿಕ ನೀರನ್ನು  ಬಳಸುವವರು ಎಂಬುದು ರೂಢಿಯಲ್ಲಿರುವ ಮಾತು.
 • ಆಧುನಿಕ ನೀರಾವರಿ ವ್ಯವಸ್ಥೆಗಳು ಬಂದ ನಂತರ ಸಾಕಷ್ಟು ನೀರಿನ ಬಳಕೆ ಕಡಿಮೆಮಾಡಿಕೊಂಡವರಿದ್ದಾರೆ.
 • ಆದರೂ ಕೆಲವರು ಇನ್ನೂ  ನೀರಿನ ಬಳಕೆಯಲ್ಲಿ ಮಿತವ್ಯಯದ ಸುದ್ದಿಗೆ ಹೋಗಿಲ್ಲ.
 • ಅಂತವರು ತುರ್ತಾಗಿ ತಮ್ಮ ಒಳಿತಿಗಾಗಿ ಮಿತ ನೀರಾವರಿಗೆ ಬದಲಾವಣೆ ಮಾಡಿಕೊಳ್ಳಬೇಕು. 
 • ನಾವು ಒಟ್ಟಾರೆಯಾಗಿ ನೋಡಿದರೆ  ಬೆಳೆಗಳಿಗೆ ಬೇಕಾದ ಪ್ರಮಾಣಕ್ಕಿಂತ ಹೆಚ್ಚಿನ ನೀರನ್ನು ಉಣಿಸುವವರು.
 • ಅದು ಮಿತನೀರಾವರಿ ವ್ಯವಸ್ಥೆ ಮಾಡಿಕೊಂಡರೂ , ಮಾಡಿಕೊಳ್ಳದವರೂ ಸಹ. 
 • ಸಸ್ಯಗಳಿಗೆ ನೀರು ಹೆಚ್ಚು  ಬೇಕಾಗುವುದಿಲ್ಲ.
 • ಎಲೆಗಳು ಬಾಶ್ಪೀಭವನದ ಮೂಲಕ ಹೊರ ಹಾಕುವ ನೀರು ಎಷ್ಟೋ ಅಷ್ಟು ಮಾತ್ರ ಆ ಸಸ್ಯಕ್ಕೆ ಬೇಕಾಗುವ ದೈನಿಕ ನೀರು.( ಹೆಚ್ಚು ನೀರಾವರಿ ಮಾಡಿದಾಗ ಹೆಚ್ಚು ಬಾಷ್ಪೀಭವನ ಆಗುತ್ತದೆ)
 • ನಾವು ಪೂರೈಕೆ ಮಾಡುವ ನೀರಿನಲ್ಲಿ ಮುಕ್ಕಾಲು ಪಾಲು ನೆಲದಿಂದ ಆವೀಕರಣ ಮೂಲಕ ನಷ್ಟವಾಗುತ್ತದೆ.
 • ಅದನ್ನು ನಿಯಂತ್ರಿಸಿದರೆ  ಈಗ ನಾವು ಮಾಡುವ ನೀರಾವರಿಯಲ್ಲಿ 50% ಉಳಿತಾಯ ಮಾಡಬಹುದು.

ಮನೆ ಬಳಕೆಯ ನೀರು ಉಳಿತಾಯ:

 • ಪ್ರತೀಯೊಂದು ಮನೆಗೂ ದಿನಕ್ಕೆ ಏನಿಲ್ಲವೆಂದರೂ  ಕನಿಷ್ಟ 500 ಲೀ. ನೀರು ಬೇಕು.
 • ಇದು ನಮಗೆ ರೂಢಿಯಾದದ್ದು. ಇದಕ್ಕಿಂತ ಹೆಚ್ಚಿನ ಪ್ರಮಾಣವನ್ನು ಬಳಕೆ ಮಾಡುವ ಸಾಕಷ್ಟು ಮನೆಗಳಿವೆ.
 • ಸ್ನಾನ, ಬಟ್ಟೆ ಒಗೆಯುವಿಕೆ, ಪಾತ್ರೆ ತೊಳೆಯಲು ಹಿಂದೆ ಮಿತವಾಗಿ ನೀರು ಬಳಸುತ್ತಿದ್ದೆವು.
 • ಈಗ ಸಾರ್ವಜನಿಕ ನೀರು ವಿತರಣೆ, ಹಾಗೂ ಕೊಳವೆ ಬಾವಿ ಬಂದು ಬಳಕೆ ಪ್ರಮಾಣ ಹೆಚ್ಚಿದೆ.
 • ನೀರಿನ ಬಳಕೆ ಇಲ್ಲಿ ಅನಿವಾರ್ಯವಾದರೂ ಇಲ್ಲಿಯೂ ಮಿತ ಬಳಕೆ ಮಾಡಬಹುದು.
 • ಹೀಗೆ ಬಳಕೆ ಮಾಡಿದ ತ್ಯಾಜ್ಯ ನೀರನ್ನು  ಬೆಳೆಗಳಿಗೆ ಬಳಕೆ ಮಾಡಿ ಸದುಪಯೋಗ ಮಾಡಬಹುದು.
 • ಎಷ್ಟು ಬೇಕೋ ಅಷ್ಟು ಮಾತ್ರ ನೀರನ್ನು ಉಪಯೋಗಿಸುವ ಅಭ್ಯಾಸವನ್ನು ಮಾಡಬೇಕು.
 • ದೊಡ್ಡ ದೊಡ್ಡ ಪಾತ್ರೆಗಳಲ್ಲಿ ನೀರನ್ನು  ಬಳಕೆ ಮಾಡುವ ಬದಲು ಸಣ್ಣ ಪಾತ್ರೆ ( ಮಗ್ ಇತ್ಯಾದಿ) ಗಳ ಮೂಲಕ ಉಪಯೋಗಿಸಿದಾಗ ನೀರಿನ ಉಳಿತಾಯ ಆಗುತ್ತದೆ.
ಕೆರೆಗಳಲ್ಲಿ ನೀರಿಲ್ಲ- ಪಶುಗಳಿಗೆ ಮೇವೂ ಇಲ್ಲದ ಸ್ಥಿತಿ ಉಂಟಾಗಬಹುದು
ಕೆರೆಗಳಲ್ಲಿ ನೀರಿಲ್ಲ- ಪಶುಗಳಿಗೆ ಮೇವೂ ಇಲ್ಲದ ಸ್ಥಿತಿ ಉಂಟಾಗಬಹುದು

ಕೊಳವೆ ಬಾವಿ ನೀರೇ? ಬಹಳ ಜಾಗ್ರತೆ:

 • ಕೊಳವೆ ಬಾವಿ ನೀರನ್ನು ಬಳಸುವ ಎಲ್ಲಾ ಬೆಳೆಗಾರರೂ ಈ ವರ್ಷ ಬಹಳ ಜಾಗರೂಕತೆಯಿಂದ ನೀರನ್ನು ಬಳಕೆ ಮಾಡಬೇಕು.
 • ಕೊಳವೆ ಬಾವಿಯ ನೀರು ಬತ್ತಿದರೆ ಮತ್ತೆ ಹೊಸತು ತೋಡಿದರೂ  ನೀರಿನ ಮೂಲ ಅಷ್ಟಕ್ಕಷ್ಟೇ. 
 • ಕರಾವಳಿಯ ಎಲ್ಲಾ ಭಾಗಗಳಲ್ಲೂ ಅಂತರ್ಜಲಮಟ್ಟ ತುಂಬಾ ಕೆಳಗೆ ಇಳಿದಿದ್ದು,
 • ಬಹುಶಃ ಇನ್ನು ಕೆಲವೇ ವರ್ಷಗಳಲ್ಲಿ ಸಾವಿರ ಅಡಿಗಿಂತ ಕಡಿಮೆಗೆ ನೀರು ಸಿಗದ ಸ್ಥಿತಿ ಉಂಟಾಗುವುದು ನಿಶ್ಚಿತ.
 • ಇದಕ್ಕೆಕ್ಕಾ ಕಾರಣ ನಮ್ಮ ಅನಿಯಮಿತ  ನೀರಿನ ಬಳಕೆ.
 • ಕರಾವಳಿಯ ಹೆಚ್ಚಿನ ಬೆಳೆಗಾರರು ಇಂದಿಗೂ ಮಿತ ನೀರಾವರಿ ವ್ಯವಸ್ಥೆಗೆ ಒಗ್ಗಿಕೊಂಡಿಲ್ಲ.
 • ಸ್ಪ್ರಿಂಕ್ಲರ್ ನೀರಾವರಿ ಮೂಲಕ ಗಂಟೆಗಟ್ಟಲೆ ನೀರಾವರಿ ಮಾಡದಿದ್ದರೆ  ನಮಗೆ ತೃಪ್ತಿಯೇ ಆಗುವುದಿಲ್ಲ.
 • ಬಯಲು ಸೀಮೆಯ ಪ್ರದೇಶಗಳಲ್ಲಿ ಕೆರೆ  ಕಟ್ಟೆ ತುಂಬಿದರೆ ಅಂತರ್ಜಲ ಮಟ್ಟ ಏರಿಕೆ ಆಗುತ್ತದೆ.
 • ಆದರೆ  ಕರಾವಳಿಯಲ್ಲಿ ಅಂತರ್ಜಲಮಟ್ಟ ಬೇಗನೆ ಏರಿಕೆ ಆಗುವುದಿಲ್ಲ.
 • ಇದಕ್ಕೆ ಕಾರಣ ಇಲ್ಲಿನ ಭೂ ಪ್ರಕೃತಿ ಮತ್ತು ಮಣ್ಣಿನ ಗುಣ. ಇದನ್ನು ಪ್ರತೀಯೊಬ್ಬ ಬೆಳೆಗಾರನೂ ಅರಿತುಕೊಳ್ಳಬೇಕು.
 • ಒಬ್ಬ  ರೈತ ನೀರಿನ ಮಿತ ಬಳಕೆ ಮಾಡಿದರೆ ಸಾಲದು.
 • ಎಲ್ಲಾ ರೈತರೂ ಇದು ನಮ್ಮ ಕೃಷಿ ಭವಿಷ್ಯಕ್ಕಾಗಿ  ಎಂದು ಮನವರಿಕೆ ಮಾಡಿಕೊಂಡು ಬೆಳೆಗಳಿಗೆ ಬೇಕಾದಷ್ಟೇ ನೀರನ್ನು ಬಳಕೆ ಮಾಡಬೇಕು.
 • ಕೆರೆ ಇತ್ಯಾದಿ ಇರುವವರು ಸಾಧ್ಯವಾದಷ್ಟು ಅಲ್ಲಿ ಇರುವ ನೀರನ್ನು ಬಳಸಿ ಆಪತ್ಕಾಲದಲ್ಲಿ ಮಾತ್ರ ಕೊಳವೆ ಬಾವಿ ನೀರನ್ನು  ಉಪಯೋಗಿಸಬೇಕು.

ಮಣ್ಣಿನಲ್ಲಿ ತೇವಾಂಶ ಉಳಿಸುವ ಕಡೆಗೆ ಗಮನ ಕೊಡಿ:

 • ಮಣ್ಣು ತನ್ನ ತೇವಾಂಶವನ್ನು  ಕಳದುಕೊಳ್ಳುವುದು ಹೇಗೆ ಎಂಬುದು ಎಲ್ಲಾ ರೈತರಿಗೂ ತಿಳಿದಿರಬೇಕು.
 • ಅಂತರ್ಜಲ, ಮಣ್ಣಿನ ಒರತೆ ಎಲ್ಲವೂ ಅದರ ಮೇಲ್ಭಾಗದ ಮಣ್ಣಿಗೆ ತನ್ನ ತೇವಾಂಶವನ್ನು  ಬಿಟ್ಟುಕೊಡುತ್ತದೆ.
 • ಆದರೆ ನೆಲದ ಮೇಲೆ ಸೂರ್ಯನ ಬಿಸಿಲು ಬಿದ್ದಾಗ ಅದರ ಶಾಖಕ್ಕೆ ಗರಿಷ್ಟ ಪ್ರಮಾಣದಲ್ಲಿ ನೀರು ಆವೀಕರಣ ಹೊಂದುತ್ತದೆ.
 • ಇದು ತೇವಾಂಶ ನಷ್ಟ ಮತ್ತು  ಸೇರ್ಪಡೆಯ ತತ್ವ.
 • ಮಣ್ಣಿನ ಮೇಲ್ಭಾಗಕ್ಕೆ ಹೊದಿಕೆ ಇದ್ದಾಗ ನೀರಿನ ಆವೀಕರಣ ಕಡಿಮೆಯಾಗುತ್ತದೆ.
 • ಆಗ ಪೂರೈಕೆ ಮಾಡಬೇಕಾದ ನೀರಿನ ಪ್ರಮಾಣ ಕಡಿಮೆಯಾಗುತ್ತದೆ.
 • ಸೊಪ್ಪು, ತರಗೆಲೆ,ತೆಂಗಿನ ಗರಿ, ಅಡಿಕೆ ಗರಿ, ಸಿಪ್ಪೆ, ಕೃಷಿ ಉದ್ದಿಮೆಗಳ ತ್ಯಾಜ್ಯ( ಕಬ್ಬಿನ ಸಿಪ್ಪೆ, ತೆಂಗಿನ ಸಿಪ್ಪೆ ಹುಡಿ) ಆಧುನಿಕ ತೇವಾಂಶ ಸಂರಕ್ಷಕಗಳಾದ ಮಲ್ಚಿಂಗ್ ಶೀಟ್, ವೀಡ್ ಮಾಟ್, ಇತ್ಯಾದಿಗಳನ್ನು ನೆಲಕ್ಕೆ  ಹೊದಿಸಿದರೆ  50% ದಷ್ಟು ನೀರಿನ ಬಳಕೆ ಕಡಿಮೆ ಮಾಡಬಹುದು.
 • ಬೇಸಿಗೆಯ ದಿನಗಳಲ್ಲಿ ತೋಟಗಳಲ್ಲಿ ಕಳೆಗಳನ್ನು ತೆಗೆಯದೆ ಮಣ್ಣಿಗೆ ಹೊದಿಕೆಯಾಗಿ ಉಳಿಸುವುದು ಅಗತ್ಯ. 
 • ಎಲ್ಲಾ ರೈತಾಪಿ ವರ್ಗದವರೂ ಈಗಿಂದಲೇ ಇದಕ್ಕೆ ಸಿದ್ದತೆ ಮಾಡಿಕೊಳ್ಳಬೇಕು.  

ಮಣ್ಣಿಗೆ ನೀರು ಹಿಡಿದಿಟ್ಟುಕೊಳ್ಳವ ಶಕ್ತಿ  ಬರುವಂತೆ ಮಾಡುವುದು ಬಹಳ ಅಗತ್ಯ. ಮಣ್ಣಿನಲ್ಲಿ ಸಾವಯವ ಅಂಶಗಳು ಹೆಚ್ಚಾದರೆ ಮಣ್ಣು ಅಂಟಾಗುತ್ತದೆ. ಅದಕ್ಕೆ ನೀರು ಹಿಡಿದಿಟ್ಟುಕೊಳ್ಳುವ ಶಕ್ತಿ ಬರುತ್ತದೆ. ಇದಕ್ಕೆ ಎಲದಕ್ಕಿಂತ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು.

ಈ ವರ್ಷ ಯಾವುದೂ ನಮಗೆ ಬೆಂಬಲಕ್ಕಿಲ್ಲ:

 • ಒಂದೆಡೆ ಮಳೆ ನಮಗೆ ಕೈಕೊಟ್ಟಿದೆ. ಇರುವಷ್ಟು ಸಮಯ ಕೆರೆ, ಬಾವಿಯಿಂದ ನೀರೆತ್ತಿ ಬೆಳೆಗಳಿಗೆ ಉಳಿಸಬೇಕು.
 • ಆದರೆ ನೀರೆತ್ತಲು ವಿದ್ಯುತ್ ಶಕ್ತಿ! ಕೆಲವು ಮೂಲಗಳ ಪ್ರಕಾರ ಉಚಿತ ವಿದ್ಯುತ್ ದೆಶೆಯಿಂದ ಈ ಕ್ಷೇತ್ರದಲ್ಲಿ  ಯಾವುದೇ ಅಭಿವೃದ್ಧಿಗೆ ಅವಕಾಶ ಇಲ್ಲದಾಗಿದೆಯಂತೆ.
 • ವಿದ್ಯುತ್ ಕೊರತೆ ಆದರೆ ಲೋಡ್ ಶೆಡ್ಡಿಂಗ್ ಒಂದೇ ಪರಿಹಾರ ಎನ್ನುವ ಮಟ್ಟಕ್ಕೆ ಬರಲಾಗಿದೆ.
 • ಹೊರಗಡೆಯಿಂದ ಖರೀದಿ ಮಾಡಲಿಕ್ಕೆ ಹಣ ಇಲ್ಲ. ಹೆಚ್ಚುವರಿ ಸಬ್ ಸ್ಟೇಶನ್ ಇತ್ಯಾದಿಯೂ ಇಲ್ಲ.
 • ನೌಕರರು ತಮ್ಮ ಸಂಬಳಕ್ಕೆ ಪರದಾಡುವ ಸ್ಥಿತಿ ಉಂಟಾಗಿದೆ. ಹಾಗಾಗಿ  ಬೇಕಾಬಿಟ್ಟಿ ನೀರುಣಿಸಲು ಅಸಾಧ್ಯ.
 • ಹಾಗಾಗಿ ಕಡಿಮೆ ನೀರಿನಲ್ಲಿ  ಬೆಳೆ ಉಳಿಸಿಕೊಳ್ಳುವ ಯೋಚನೆ ಮಾಡಲೇ ಬೇಕು.

ನಮ್ಮಲ್ಲಿ ಹೆಚ್ಚಿನ ಕೃಷಿಕರು ಎಲ್ಲವೂ ಗೊತ್ತಿರುವ ತರಹ ಮಾತಾಡುತ್ತಾರೆ. ಆದರೆ ಕೃಷಿಯ ಮೂಲಭೂತ  ಸಂಗತಿಗಳ ಬಗ್ಗೆ ಗೊತ್ತಿಲ್ಲದವರ ಪ್ರಮಾಣ ಇನ್ನೂ 50% ಕ್ಕೂ ಹೆಚ್ಚು ಇದೆ. ಯಾವುದೇ ಒಂದು ವೃತ್ತಿ ಇದ್ದರೂ ಅದರ ಬೇಕು ಬೇಡಗಳ ಬಗ್ಗೆ ಸ್ವತಹ ತಿಳಿದಿರಬೇಕು. ಹೀಗೆ ಮಾಡಿದರೆ ಹೀಗೆ ಫಲಿತಾಂಶ ಬರುತ್ತದೆ ಎಂಬಷ್ಟು ಜ್ಞಾನ  ಪ್ರತೀ ಕೃಷಿಕರಿಗೆ ಬಂದಾಗ ಎಲ್ಲವೂ ಸರಿಯಾಗುತ್ತದೆ.

Leave a Reply

Your email address will not be published. Required fields are marked *

error: Content is protected !!