ಮಳೆ ಬಂತೆಂದು ಚಿಂತೆ ಮಾಡಬೇಡಿ. ಇದರಿಂದ ಬೆಳೆ ನಷ್ಟ ಆಗದು.

areca palm

ಈಗ ಮಳೆ ಬಂದು ಅಡಿಕೆಯಲ್ಲಿ ಮುಂದಿನ ಫಸಲು ಕಡಿಮೆಯಾಗಿ ನಷ್ಟ ಆಗಬಹುದು ಎಂದು ಆತಂಕದಲ್ಲಿರುವ ಬೆಳೆಗಾರರಿಗೆ ಇದು ಕಿವಿ ಮಾತು.ಬೆಳೆ ನಷ್ಟ ಆಗದು. ಅನುಕೂಲವೇ ಆಗುವುದು.
ಎಪ್ರೀಲ್ ತಿಂಗಳಲ್ಲಿ ಮಳೆ ಬರುವುದು ಇತ್ತೀಚಿನ ದಿನಗಳಲ್ಲಿ ಅಪರೂಪವಾದರೂ ಹಿಂದೆ ಬಹುತೇಕ ವಿಶೇಷ ದಿನಗಳ ಸಂದರ್ಭದಲ್ಲಿ ಮಳೆ ಆಗುತ್ತಿತ್ತು. ಕಳೆದ ವರ್ಷ ಇದಕ್ಕಿಂತಲೂ ಬೇಗ ಮಳೆ  ಬಂದಿದೆ. ಆದರೆ  ಫಸಲಿಗೆ ತೊಂದರೆ ಆಗಿರಲಿಲ್ಲ.  ಈ ವರ್ಷ ಎಪ್ರೀಲ್ ನಲ್ಲಿ ಮಳೆ ಧಾರಾಕಾರವಾಗಿ ಬಂದಿದೆ. ತಾಪಮಾನ  ತುಂಬಾ ಇಳಿಕೆಯಾಗಿದೆ. ಇಂತಹ ವಾತಾವರಣದಿಂದ ಕೃಷಿಗೆ ತೊಂದರೆ ಇಲ್ಲ. ಅನುಕೂಲವೇ ಆಗಿದೆ.   ಈ ಮಳೆಯಿಂದ ಮುಂದಿನ ಫಸಲಿಗೆ ಹಾನಿಯಾಗುತ್ತದೆ ಎಂದು ಗಾಬರಿ ಪಡಬೇಕಾಗಿಲ್ಲ.

  • ಮಳೆ ಬಂದರೆ  ಸಿಂಗಾರ ಒಣಗುತ್ತದೆ ಎಂದು ಬಹಳ ಜನ ಏನು ಸಿಂಪರಣೆ ಮಾಡಬೇಕು ಎಂದು  ಕೇಳುತ್ತಿದ್ದಾರೆ.
ಬೆಳಗ್ಗಿನ ಹೊತ್ತು ಮಳೆ ಬಂದರೆ ಪರಾಗ ವರ್ಗಾವಣೆಗೆ ಅಡ್ಡಿಯಾಗಿ ಇಂತಹ ಮಿಡಿ ಉದುರಬಹುದು.
ಬೆಳಗ್ಗಿನ ಹೊತ್ತು ಮಳೆ ಬಂದರೆ ಪರಾಗ ವರ್ಗಾವಣೆಗೆ ಅಡ್ಡಿಯಾಗಿ ಇಂತಹ ಮಿಡಿ ಉದುರಬಹುದು.

ಈ ಬಗ್ಗೆ ಅಡಿಕೆಯಲ್ಲಿ ಸುಧೀರ್ಘ ಸಂಶೋಧನೆ ನಡೆಸಿದವರಲ್ಲಿ ಕೇಳಿದರೆ ಸಮಂಜಸ ಉತ್ತರ ಸಿಗುತ್ತದೆ ಎಂದು ಆಸ್ಟ್ರೇಲಿಯಾದಲ್ಲಿರುವ ಹಿರಿಯ ಅನುಭವಿ ತೋಟಗಾರಿಕಾ ವಿಜ್ಞಾನಿ ಶ್ರೀಯುತ ವಿವೇಕ್ ಭಟ್ ಇವರನ್ನು ಸಂಪರ್ಕಿಸಿ ಸಲಹೆ ಕೇಳಿದ್ದೇವೆ.

  • ಅವರು ಹೇಳುವಂತೆ ಅಡಿಕೆ , ತೆಂಗು ಮುಂತಾದ ಬೆಳೆಗಳಿಗೆ ಒಣ ವಾತಾವರಣದ ಈ ಚಳಿಗಾಲದಲ್ಲಿ ಮಳೆ ಸಿಂಚನ ಆದರೆ ಅದು ವಾತಾವರಣದಲ್ಲಿರುವ ಪೋಷಕಾಂಶಗಳು ಪತ್ರ ಸಿಂಚನದಂತೆ ಆಗಿ ಅನುಕೂಲವಾಗುತ್ತದೆ.
  • ಸಸ್ಯಗಳು ಹಸುರಾಗುತ್ತವೆ. ಹೆಚ್ಚು ಚಟುವಟಿಕೆ ಹೊಂದುತ್ತವೆ. ನೀರಾವರಿಗಿಂತ ಇದು ಪರಿಣಾಮಕಾರಿ.
  • ತಾಪಮಾನದ ಇಳಿಕೆ ಉಂಟಾದ ಕಾರಣ ಅನುಕೂಲವೇ ಆಗಿದೆ ಎನ್ನುತ್ತಾರೆ.
  • ಅನವಶ್ಯಕ ಸಿಂಪರಣೆ ಮಾಡಬೇಡಿ ಎಂಬ ಸಲಹೆಯನ್ನೂ ಕೊಟ್ಟಿದ್ದಾರೆ.
  • ಹಿರಿಯ ತೋಟಗಾರಿಕಾ  ವಿಜ್ಞಾನಿಗಳಾದ ಶ್ರೀ ವಿವೇಕ್ ಭಟ್ ಇವರು ಸ್ವತಹ ಅಡಿಕೆ ಬೆಳೆಗಾರರು. ಅನುಭವ ಉಳ್ಳವರು.

ಅಡಿಕೆ  ಮತ್ತು ತೆಂಗಿಗೆ ಅನುಕೂಲ:

this will not drop
ಇಂತಹ ಕಾಯಿಗಳು ಉದುರಲಾರವು
  • ಅಡಿಕೆ, ತೆಂಗು ಮುಂತಾದ  ತಾಳೆ ಜಾತಿಯ ಮರಗಳಿಗೆ  ಸಹ್ಯ ತಾಪಮಾನ ಸುಮಾರು 30-32 ಡಿಗ್ರಿಯಷ್ಟು. 30 ಡಿಗ್ರಿ ಆಸುಪಾಸು ಉತ್ತಮ.
  • ಅದಕ್ಕಿಂತ ಹೆಚ್ಚಾದಾಗ  ಬೇರೆ ಬೇರೆ ಸಮಸ್ಯೆಗಳು ಉಂಟಾಗುತ್ತವೆ.
  • ಇಲ್ಲಿ ಒಂದು ಸಂಗತಿಯನ್ನು ಗಮನಿಸಿ, ಕೆಲವು ನೆರಳಿನ ತೋಟ ದಕ್ಷಿಣ ಉತ್ತರ ಕೂಡಿರುವ ಕಣಿವೆ ಸ್ಥಳಗಳಲ್ಲಿ ತಾಪಮಾನ ಉಳಿದೆಡೆ ಎಷ್ಟು ಏರಿಕೆಯಾದರೂ ಇಲ್ಲಿ ಆ ಮಟ್ಟಿಗೆ ಏರಿಕೆಯಾಗುವುದಿಲ್ಲ.
  • ಅಲ್ಲಿ ಫಸಲೂ ಚೆನ್ನಾಗಿರುತ್ತದೆ.
  • ಇದಕ್ಕೆ  ಬೇರೆ ಯಾವ ಕಾರಣವೂ ಆಲ್ಲ. ಅನುಕೂಲಕರ ತಾಪಮಾನ ಅಷ್ಟೇ.
  • ಸೂಕ್ತ ತಾಪಮಾನದಲ್ಲಿ ಮಾತ್ರ ಪರಾಗ ಸ್ಪರ್ಶ ಕ್ರಿಯೆ ಚೆನ್ನಾಗಿ ನಡೆಯುತ್ತದೆ.
  • ಅಡಿಕೆಯಲ್ಲಿ ಪರಾಗಸ್ಪರ್ಶ ಕ್ರಿಯೆ ಗಾಳಿಯ ಮೂಲಕವೇ  ನಡೆಯುವುದು.
  • ಇಲ್ಲಿ ಪರಾಗದಾನಿಗಳಾದ ಜೇನು ನೊಣ ಇತ್ಯಾದಿಗಳ  ಪಾತ್ರ ಸ್ವಲ್ಪ ಅಷ್ಟೇ.
  • ವಾತಾವರಣ ತಂಪು ಇರುವಾಗ ಪರಾಗ ವರ್ಗಾವಣೆಗೆ, ಪರಾಗದಾನಿಗಳ ಚಟುವಟಿಕೆಗೂ ಅನುಕೂಲವಾಗುತ್ತದೆ.
  • ತಂಪು  ವಾತಾವರಣದಲ್ಲಿ  ಹೂ ಗೊಂಚಲಿನ ಉತ್ಪಾದನೆಗೆ ಸಹಾಯಕವಾಗುತ್ತದೆ.
  • ಈಗ ಬರುವ ಹೂ ಗೊಂಚಲು ಕಳೆದ ಋತುಮಾನದಲ್ಲಿ ಮೂಡಿದವು.
  • ಅದಕ್ಕೆ ಈ ಹಿಂದಿನ ಋತುಮಾನದ ವಾತಾವರಣ ಪ್ರೇರಣೆ.It gets determined by previous seasonal factors.

 ಹೂಗೊಂಚಲು ಒಣಗುವ  ಸಮಸ್ಯೆ ಕಡಿಮೆಯಾಗುತ್ತದೆ:

  • ಅತಿಯಾದ ಪ್ರಮಾಣದಲ್ಲಿ ಸಿಂಗಾರ ( ಹೂ ಗೊಂಚಲು) ಒಣಗುವ ಸಮಸ್ಯೆಗೆ ಹೆಚ್ಚಿನ ತಾಪಮಾನವು ಕಾರಣ.
  • ತಾಪಮಾನ ಏರಿಕೆಯಾದ ಸಮಯದಲ್ಲಿ ಪರಾಗ ಸ್ಪರ್ಷಕ್ಕೂ  ತೊಂದರೆ ಆಗುತ್ತದೆ.
  • ಕೆಲವು ಅಧಿಕ ತಾಪಮಾನದಲ್ಲಿ ಚಟುವಟಿಕೆ ನಡೆಸುವ ಕೀಟಗಳು  ಹೆಚ್ಚು ಚುರುಕಾಗುತ್ತವೆ.
  • ಅಡಿಕೆ ಸಸಿ, ಮರಗಳ ಎಲೆ ಒಣಗುವ ಸಮಸ್ಯೆ ನಿವಾರಣೆ ಆಗುತ್ತದೆ.
  • 2020 ರಲ್ಲಿ ಈ ಸಮಸ್ಯೆ ಅಧಿಕವಾಗಿ ಭಾರಿ ನಷ್ಟ ಉಂಟಾಗಿತ್ತು.
  • ಮಿಡಿ ಕಾಯಿಗೂ ಮೈಟ್ ಹಾವಳಿ ಉಂಟಾಗಿತ್ತು.
  • ಈ  ವರ್ಷವೂ ಕೆಲವು ಕಡೆ ಎಲೆಗಳಿಗೆ ಕೆಂಪು ಮೈಟ್, ಬಿಳಿ ಮೈಟ್ ( Mite) ಹಾವಳಿ ಪ್ರಾರಂಭವಾಗಿತ್ತು.
  • ಈ ಮಳೆ ಅದನ್ನು ತನ್ನಷ್ಟಕ್ಕೇ ದೂರ ಮಾಡುತ್ತದೆ.
ಈ ರೀತಿ ಎಲೆ ಒಣಗುವ  ಮೈಟ್ ಹಾವಳಿ ಕಡಿಮೆಯಾಗುವುದು
ಈ ರೀತಿ ಎಲೆ ಒಣಗುವ ಮೈಟ್ ಹಾವಳಿ ಕಡಿಮೆಯಾಗುವುದು

ಸಿಂಪರಣೆ ಬೇಕಾಗಿಲ್ಲ:

  • ಮಳೆ ಬಂದಿದೆ ಎಂದು ಮನ ಬಂದಂತೆ ಕೀಟನಾಶಕ, ರೋಗನಾಶಕಗಳನ್ನು ಸಿಂಪರಣೆ ಮಾಡಬೇಡಿ.
  • ಇದರಿಂದ ಅನವಷ್ಯಕ  ಖರ್ಚು  ಅಲ್ಲದೆ ಪ್ರಯೋಜನ ಕಡಿಮೆ.
  • ಈಗಾಗಲೇ ಸಾಕಷ್ಟು ಪರೋಪ ಜೀವಿಗಳು ನಮ್ಮ ಪರಿಸರದಲ್ಲಿ ನಾಶವಾಗಿದ್ದು, ಇನ್ನೂ ಹೆಚ್ಚಿನ ನಾಶಕ್ಕೆ ಕಾರಣರಾಗಬೇಡಿ.
  • ಅಡಿಕೆಗೆ ಅಂತಹ ಕೀಟ ರೋಗ ಸಮಸ್ಯೆ ಬೇಸಿಗೆಯಲ್ಲಿ ಇರುವುದಿಲ್ಲ.
  • ಪರಾಗಸ್ಪರ್ಶ ಅದ ನಂತರ ಕಾಯಿ ಕಚ್ಚಿದ ಮೇಲೆ ಬೇಕಾದರೆ ಮಾತ್ರ ಸಿಂಪರಣೆ ಮಾಡಬಹುದು.
  • ಏಕದಳ ಸಸ್ಯವಾದ ಕಾರಣ ಮೇಲ್ಭಾಗದಲ್ಲೇ ಬೇರುಗಳು ಇರುತ್ತದೆ.
  • ಇದಕ್ಕೆ ಬುಡಕ್ಕೆ ಪೋಷಕಾಂಶಗಳು ಮತ್ತು ಸೂಕ್ಷ್ಮ ಪೋಷಕಾಂಶಗಳನ್ನು ಕೊಡುವಾಗ ಜಾಗರೂಕತೆ ಬೇಕು.
  • ಅದು ಅತೀ ಕನಿಷ್ಟ ಪ್ರಮಾಣದಲ್ಲಿ ಬೇಕಾಗುವಂತದ್ದು. ಅದನ್ನು  ತಜ್ಞರ ಸಲಹೆ ಮೇರೆಗೆ ಬಳಕೆ ಮಾಡುವುದು ಸೂಕ್ತ.
  • ಅನವಶ್ಯಕ ಕೀಟನಾಶಕ ಬಳಕೆ ಯಾರಿಗೂ ಒಳ್ಳೆಯದಲ್ಲ.
  • ಇದರಿಂದ ಮೊದಲ ತೊಂದರೆ ಬಳಕೆ ಮಾಡುವವರಿಗೆ.
  • ಆದ ಕಾರಣ ಮಳೆ ಬಂತು ಎಂದು ಸಿಂಗಾರಕ್ಕೆ ಸಿಂಪರಣೆ ಮಾಡಲು ಅಧಿಕ ಖರ್ಚು ಮಾಡಬೇಡಿ.
  • ಒಂದು ವೇಳೆ ಈ ಸಮಯದಲ್ಲಿ ಪರಾಗ ಸ್ವೀಕರಿಸಲು ಸಿದ್ದವಾದ ಹೂವುಗಳಿದ್ದರೆ ಅದಕ್ಕೆ ಪರಾಗ ಸಿಗದೆ ನಷ್ಟವಾಗಬಹುದು.
  • ಎಲ್ಲವೂ ಒಂದೇ ದಿನ ಪರಾಗ ಸ್ವೀಕರಿಸುವ ಹಂತದಲ್ಲಿ ಇರುವುದಿಲ್ಲ. ಕೆಲವು ಉಳಿಯಬಹುದು.
  • ಚಳಿಗಾಲದ ಬಿಸಿಗೆ ಸ್ವಲ್ಪ ಮೈಟ್ ಹಾವಳಿ ಇದ್ದರೆ ಈ ಮಳೆ ಮತ್ತು  ತಂಪು ವಾತಾವರಣದಲ್ಲಿ ಅದು ನಿಶ್ಕ್ರಿಯವಾಗುತ್ತದೆ.
  • ಹಾಳೆಯ ಒಳಗೆ ನೀರು ಹೋಗುವುದು, ಅದು ಬಿಸಿಯಾಗುವುದು ಇದೆಲ್ಲಾ ಕಲ್ಪನೆ.
  • ಹಾಳೆಯ ಒಳಗೆ ನೀರು ಹೋದರೆ ಹೂ ಗೊಂಚಲಿಗೆ ರಕ್ಷಾ ಕವಚ ಇರುತ್ತದೆ.
  • ಅದರ ಒಳಗೆ ನೀರು ಹೋಗದು. ಹಾಗೆ ನೋಡಿದರೆ ಇಬ್ಬನಿಯ ನೀರೂ ಸಹ ಎಲೆ ಕಂಕುಳದ ಮೂಲಕ  ಒಳಗೆಹೋಗುತ್ತದೆ. ಆದರೂ ಏನೂ ಆಗುವುದಿಲ್ಲ.
ತಾಪಮಾನ ಹೆಚ್ಚಾದಾಗ ಮಿಡಿಗು ಮೈಟ್ ಹಾವಳಿ  ಉಂಟಾಗುತ್ತದೆ
ತಾಪಮಾನ ಹೆಚ್ಚಾದಾಗ ಮಿಡಿಗು ಮೈಟ್ ಹಾವಳಿ ಉಂಟಾಗುತ್ತದೆ

ಮಳೆಗಾಲ ಮಾಮೂಲಿನಂತೆ ಜೂನ್ ಎರಡನೇ ವಾರಕ್ಕೆ ಬರುವುದು ಎಂಬ ಮುನ್ಸೂಚನೆ ಇದೆ. ಹಾಗಾಗಿ ಆಗಾಗ ಬರುವ ಮಳೆ ಕೊಳೆ ರೋಗ ತರಲಾರದು. ಯಾವಾಗಲೂ ತಾಪಮಾನ ಏರಿದಾಕ್ಷಣ ಮಳೆ ಬಂದರೆ ಎಲ್ಲಾ ಬೆಳೆಗಳಿಗೂ ಒಳ್ಳೆಯದು. ಅದರಲ್ಲೂ ಅಡಿಕೆ, ತೆಂಗಿಗೆ ಅನುಕೂಲವೇ. ಸಾಮಾನ್ಯವಾಗಿ ಈ ಸಮಯದಲ್ಲಿ ಮಾವಿನ ಕಾಯಿ ಹಣ್ಣಾಗುವ ಸಮಯ. ಮಳೆ ಬಂದರೆ ಕಾಯಿ ಪಕ್ವತೆಗೆ ಬಂದು ಸಿಹಿ ಹೆಚ್ಚಾಗುತ್ತದೆ. ಹಾಗೆಯೇ ಬೇರು ಹಲಸು, ದಿವ್ವಿ ಹಲಸು ಸಹ ಈಗ ಮಿಡಿ ಬಿಟ್ಟಿರುತ್ತದೆ. ಮಳೆ ಬಾರದೆ ಇದ್ದರೆ ತಾಪಮಾನದ ಕಾರಣಕ್ಕೆ ಮುಕ್ಕಾಲು ಪಾಲು ಬೆಂದು ಉದುರುತ್ತದೆ. ಮಳೆ ಬಂದರೆ ಮುಕ್ಕಾಲು ಪಾಲು ಉಳಿಯುತ್ತದೆ. ಇದೇ ರೀತಿ ಅಡಿಕೆ ಮರದ ಬೆಳವಣಿಗೆಗೂ, ಕಾಯಿ ಕಚ್ಚಿ ಕಾಯಿ ಬೆಳವಣಿಗೆ ಆಗಲೂ ಸಹ ಮಳೆ ಅನುಕೂಲಕರ.

ಕಳೆ ಸ್ವಲ್ಪ ಹೆಚ್ಚು ಬೆಳೆಯುತ್ತದೆ. ಮಳೆಗಾಲಕ್ಕೆ ಮುಂಚೆ ಬಿಸಿಲು ಇರುವ ದಿನ ಅದನ್ನು ವೀಡ್ ಕಟ್ಟರ್ ನಿಂದ ಸವರಿ. ಕಳೆ ನಾಶಕ ಬೇಡ. ಇದರಿಂದ ಮಳೆಗಾಲದಲ್ಲಿ ಮೇಲು ಮಣ್ಣು ಕೊಚ್ಚಣೆಯಾಗಿ ಭಾರೀ ನಷ್ಟ ಉಂಟಾಗುತ್ತದೆ.

ಅಕಾಲಿಕ ಮಳೆ ಅಡಿಕೆ ಬೆಳೆಗಾರರಿಗೆ ಪ್ಲಸ್. ಸಸ್ಯದ ಬೆಳವಣಿಗೆಗೆ ಅನುಕೂಲವಾಗುತ್ತದೆ. ಮಣ್ಣಿನ ಪೋಶಕಾಂಶಗಳನ್ನು ಬೇರುಗಳು ಹೆಚ್ಚುವರಿಯಾಗಿ ಪಡೆದುಕೊಳ್ಳಲು ಅನುಕೂಲವಾಗುತ್ತದೆ. ಮಳೆಯಿಂದ ತೊಂದರೆ ಇಲ್ಲ. ಯಾವ ಸಿಂಪರಣೆ ಮಾಡುವ ಅಗತ್ಯವೂ ಇಲ್ಲ. ಮೂಂದೆ ಡೈ ಬ್ಯಾಕ್ ಮತ್ತು ಟಿ ಸೊಳ್ಳೆ ತೊಂದರೆ ಉಂಟಾದಾಗ ಸಿಂಪರಣೆ ಅಗತ್ಯವಿದ್ದರೆ ಮಾಡಬೇಕಾಗುತ್ತದೆ.

error: Content is protected !!