ಆಗಸ್ಟ್ ಮೊದಲ ವಾರದಲ್ಲಿ ಮಾರುಕಟ್ಟೆಗೆ ಅಡಿಕೆ ಬರುವ ಪ್ರಮಾಣವೇ ಕಡಿಮೆಯಾದ ಕಾರಣ ಸ್ವಲ್ಪ ಸಂಚಲನ ಆಗುವ ಲಕ್ಷಣ ಕಂಡು ಬಂದಿತ್ತಾದರೂ ಅದಕ್ಕೆ ವಿರುದ್ಧವಾಗಿ ಧಾರಣೆ ಏರಿಕೆಯಾತ್ತ ಸಾಗುತ್ತಿದೆ. ಚಾಲಿ ಮಾರುಕಟ್ಟೆಯಲ್ಲಿ ಎರಡು ತಿಂಗಳಿಂದ ನಿಂತಲ್ಲೇ ಸ್ಥಬ್ಧವಾಗಿದ್ದ ಹೊಸ ಅಡಿಕೆ ಧಾರಣೆಗೆ ಸಂಚಲನ ಸಿಕ್ಕಿತು. ಹಳತು ಸಹ ಸ್ವಲ್ಪ ಏರಿತು. ಕೆಂಪಡಿಕೆಯೂ ಏರಿಕೆಯಾಗಲಾರಂಭಿಸಿತು. ಎಷ್ಟರ ತನಕ ಏರಬಹುದು, ಎಂಬದರ ಯಾವ ಮಾಹಿತಿಯೂ ಇಲ್ಲ. ಪರಿಸ್ಥಿತಿಯನ್ನು ನೋಡಿದರೆ ಇನ್ನು ಏರುತ್ತಾ ಹೂವುದೇ ಒರತು ಇಳಿಕೆ ಸಾಧ್ಯತೆ ತುಂಬಾ ಕಡಿಮೆ. ಕೆಲವು ಮೂಲಗಳ ಪ್ರಕಾರ ಆಗಸ್ಟ್ ಕೊನೆ ಒಳಗೆ ಹೊಸ ಅಡಿಕೆ ಧಾರಣೆ 500 ರ ಸನಿಹ ತಲುಪಬಹುದು ಎಂಬ ನಿರೀಕ್ಷೆ ಇದೆ.
ಸೋಮವಾರ ಕ್ಯಾಂಪ್ಕೋ ತನ್ನ ದರ ಪಟ್ಟಿಯಲ್ಲಿ ಗರಿಷ್ಟ ದರದಲ್ಲಿ ರೂ.5 ಹೆಚ್ಚಿಸಿತು. ಬುಧವಾರ ಮತ್ತೆ ರೂ.5 ಹೆಚ್ಚಿಸಿತು. ಖಾಸಗಿಯವರಿಗೆ ಇದರಿಂದ ಹೊಸ ಭರವಸೆ ಉಂಟಾಗಿ ಸ್ಪರ್ಧೆಗಾಗಿ ಮಾತ್ರ ಸ್ವಲ್ಪ ದರ ಏರಿಸಿದ್ದಾರೆ. ಪರಿಸ್ಥಿತಿ ಏನಿರಬಹುದು ಎಂದು ಕೆಲವು ವರ್ತಕರ ಜೊತೆ ಚರ್ಚಿಸಿದರೆ, ಉತ್ತರ ಭಾರತದ ಬೇಡಿಕೆ ಎನ್ನುತ್ತಾರೆ. ಇನ್ನೂ ದರ ಎರಿಕೆಯ ಸಾಧ್ಯತೆಯನ್ನು ಅವರು ಅಲ್ಲಗಳೆಯುವುದಿಲ್ಲ. ಈಗಾಗಲೇ ಮಳೆಗಾಲ ಮುಗಿಯುತ್ತಾ ಬಂದಿದೆ. ಇನ್ನು ಸಾಲು ಸಾಲು ಹಬ್ಬದ ದಿನಗಳು. ಯಾವಾಗಲೂ ಈ ಸಮಯಕ್ಕೇ ದರ ಏರಿಕೆ ಉಂಟಾಗುವುದು ಎನ್ನುತ್ತಾರೆ. ಹಳೆಯದಕ್ಕೆ ಬೇಡಿಕೆ ಇದೆ. ಆದರೆ ಅದು ಇಲ್ಲದ ಕಾರಣ ಉತ್ತಮ ಗುಣಮಟ್ಟದ ಹೊಸತೂ ಆಗಬಹುದು ಎಂಬ ಸ್ಥಿತಿ ಉಂಟಾಗಿದೆಯಂತೆ. ಮಹಾರಾಷ್ಟ್ರದ ರತ್ನಗಿರಿ ಸುತಮುತ್ತ ಉತ್ಪಾದನೆ ಕಡಿಮೆ ಇದೆಯಂತೆ. ಹಾಗಾಗಿ ಚಾಲಿ ಬೇಕಾಗಿದೆ ಎನ್ನುತ್ತಾರೆ. ಒಮ್ಮೆ ಸ್ವಲ್ಪ ಆಮದು ಅಗಿತ್ತಾದರೂ ನಂತರ ಆಗಿಲ್ಲ. ಮತ್ತೆ ಕೇಂದ್ರ ಸರಕಾರ ಆಮದು ಆಗದಂತೆ ನಿರ್ಧೇಶನ ನೀಡಿರುವ ಸಾಧ್ಯತೆ ಇದೆ ಹಾಗಾಗಿ ಆಮದು ತೊಂದರೆ ಇಲ್ಲ. ಹಾಗಾಗಿ ದರ ಏರಿಕೆ ಆಗುವ ಸಾದ್ಯತೆ ಇದೆ ಎನ್ನುತ್ತಾರೆ.
ಅಡಿಕೆ ದಾಸ್ತಾನು ಇಲ್ಲ:
ವರ್ಷದಿಂದ ವರ್ಷಕ್ಕೆ ಗುಟ್ಕಾ ಬಳಕೆ ಪ್ರಮಾಣ ಹೆಚ್ಚೇ ಆಗುತ್ತಿದೆ ಹೊರತು ಕಡಿಮೆಯಾಗುವುದಿಲ್ಲ. ಹಾಗಾಗಿ ಬೇಡಿಕೆ ಚೆನ್ನಾಗಿಯೇ ಇದೆ. ಈ ವರ್ಷದ ಕೆಂಪಡಿಕೆ ಉತ್ಪಾದನೆ ಕಡಿಮೆ ಇತ್ತು. ಆದರೂ ನಿರೀಕ್ಷೆಯಷ್ಟು ದರ ಏರಿಕೆ ಆಗಲಿಲ್ಲ. ಗುಟ್ಕಾ ತಯಾರಿಕೆಗೆ ಕೆಂಪಡಿಕೆಗಿಂತ ಚಾಲಿಯೇ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುತ್ತಿರುವ ಕಾರಣ ಚಾಲಿ ಕೊರತೆ ಆಗಿದೆ. ನಮ್ಮಲ್ಲಿಂದ ಕೆಲವು ರಾಷ್ಟ್ರಗಳಿಗೆ ಅಡಿಕೆ ರಪ್ತು ಸಹ ಆಗುತ್ತಿದೆ. ಈ ರಪ್ತು ಪ್ರಮಾಣ 2018 ರಿಂದ ಸ್ವಲ್ಪ ಸ್ವಲ್ಪ ಹೆಚ್ಚಳವಾಗುತ್ತಾ ಇದೆ. ಹಾಗಾಗಿ ಬೇಡಿಕೆ ಹೆಚ್ಚಳವಾಗಿದ್ದಿರಬಹುದು. ಪ್ರಪಂಚದಲ್ಲೇ ಅತ್ಯಧಿಕ ಉತ್ಪಾದನಾ ದೇಶ ಭಾರತ. ಭಾರತದಲ್ಲಿ ಕರ್ನಾಟಕವೇ ಅತ್ಯಧಿಕ ಉತ್ಪಾದಕ ರಾಜ್ಯ. ಹಾಗಾಗಿ ಯಾವುದೇ ಆಮದು ಮಾಡಿಕೊಳ್ಳುವವರೂ ಆಯ್ಕೆ ಮಾಡುವುದು ಅಧಿಕ ಉತ್ಪಾದನೆ ಇರುವ ರಾಷ್ಟ್ರಗಳನ್ನು. ಅದೇ ಕಾರಣಕ್ಕೆ ಅಡಿಕೆ ರಪ್ತು ಹೆಚ್ಚಳವಾಗಿದ್ದಿರಬೇಕು. ರಪ್ತು ಪ್ರಮಾಣ ಹೆಚ್ಚಾದರೆ ಬೇಡಿಕೆ ಹೆಚ್ಚಾಗುತ್ತದೆ. ಇಷ್ಟಕ್ಕೂ ಇದು ಚಟದ ವಸ್ತುವಾದ ಕಾರಣ ಯಾವುದೇ ಹಣಕಾಸಿನ ಅಡಚಣೆ ಇದಕ್ಕೆ ತೊಂದರೆ ಉಂಟು ಮಾಡುವುದಿಲ್ಲ.
ಕೆಂಪಡಿಕೆ ಯಾಕೆ ಏರಿಕೆ ಆಗಿಲ್ಲ:
ಈ ವರ್ಷದ ಕೆಂಪಡಿಕೆ ಉತ್ಪಾದನೆ ಪ್ರಮಾಣ ಗಮನಿಸಿದರೆ ಈಗಾಗಲೇ ಕ್ವಿಂಟಾಲಿಗೆ 60000 ರೂ. ದಾಟ ಬೇಕಿತ್ತು. ಆದರೆ 50000 ಕ್ಕಿಂತ ಹೆಚ್ಚು ಆಗುತ್ತಲೇ ಇಲ್ಲ. ಒಂದು ಕಾರಣ ಗುಟ್ಕಾ ತಯಾರಿಕೆಗೆ ಚಾಲಿಯ ಬಳಕೆ.ಕಳೆದ ಎರಡು ವರ್ಷಗಳಿಂದಲೂ ಇದೇ ರೀತಿಯಾಗಿ ನಡೆದು ಬಂದಿದೆ. ದೊಡ್ಡ ಗಾತ್ರದ ಉತ್ತಮ ಅಡಿಕೆ ಮಾತ್ರ ಕಚ್ಚಾ ಸುಪಾರಿಗೆ ಬಳಕೆಗೆ ಉಳಿದವುಗಳೆಲ್ಲಾ ಗುಟ್ಕಾ ತಯಾರಿಕೆಗೇ ಹೋಗುತ್ತಿವೆ. ಹಾಗಾಗಿ ಕೆಂಪಡಿಕೆ ನಿರೀಕ್ಷೆಯಂತೆ ಏರಿಕೆ ಆಗಿಲ್ಲ. ಚಾಲಿಗೂ ಕೆಂಪಡಿಕೆಗೂ ಸುಮಾರು 4000 ರೂ. ಬೆಲೆ ಅಂತರ (ಕೆಂಪಡಿಕೆಗೆ ಹೆಚ್ಚು) ಇರುತ್ತಿದ್ದುದು ಈಗ ಸಮ ಸಮ ಅಥವಾ ಚಾಲಿಗಿಂತಲೂ ಕಡಿಮೆ ಇರುವ ಸ್ಥಿತಿ ಉಂಟಾಗಿದೆ. ಆದರೂ ಈ ವಾರದಲ್ಲಿ ಮತ್ತೆ ಚೇತರಿಕೆಯತ್ತ ಮುಖ ಮಾಡಿದೆ.
ಕಳೆದ ಕೆಲವು ವರ್ಷಗಳಿಂದ ಗುಟ್ಕಾ ದರ ಸಮರ ಉಂಟಾಗಿದ್ದು, ಕಡಿಮೆ ಬೆಲೆಗೆ ಸಿಗುವ ಗುಟ್ಕಾ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಪಡೆದಿವೆ. ಹಾಗಾಗಿ ಹೆಚ್ಚಿನ ಗುಟ್ಕಾ ತಯಾರಕರು ಉತ್ತಮ ಗುಣಮಟ್ಟದ ಕೆಂಪಡಿಕೆ ಬಳಕೆ ಮಾಡದೆ ಸಾಮಾನ್ಯ ಅಡಿಕೆಯಿಂದ ತಯಾರಿಸಿ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ವ್ಯವಹಾರ ಕುದುರಿಸುವುದಕ್ಕೆ ಮುಂದಾಗಿದ್ದಾರೆ. ಕಡಿಮೆ ಬೆಲೆಗೆ ಮಾರಾಟ ಮಾಡಬೇಕಾದರೆ ಕಡಿಮೆ ಬೆಲೆಯ ಕಚ್ಚಾ ಸಾಮಾಗ್ರಿಯನ್ನೇ ಬಳಕೆ ಮಾಡಬೇಕು. ಹಾಗಾಗಿ ಉತ್ತಮ ಗುಣಮಟ್ಟದ ರಾಶಿ , ಬೆಟ್ಟೆ ಇತ್ಯಾದಿಗಳ ಬೆಲೆ ಏರಿಕೆ ಕಾಣುತ್ತಿಲ್ಲ.
ಈ ವರ್ಷ ಅಡಿಕೆ ಧಾರಣೆ ಏನಾಗಬಹುದು?
ಇಳಿಕೆಯಾಗುವ ಸಾಧ್ಯತೆ ಇಲ್ಲ. ಅಂತಹ ಸಾಧ್ಯತೆಗಳಿದ್ದರೆ ಹಳೆಯದಕ್ಕೆ ಧಾರಣೆ ಇಷ್ಟು ಏರುತ್ತಿರಲಿಲ್ಲ. ಕಳೆದ ವರ್ಷ ಉತ್ಪಾದನೆ ಸ್ವಲ್ಪ ಹೆಚ್ಚು ಇತ್ತು. ಆ ಕಾರಣ ಈ ವರ್ಷ ಸ್ವಲ್ಪ ಕಡಿಮೆಯಾಗುವುದು ಸಹಜ. ಈ ವರ್ಷದ ಬೆಳೆಗೆ ಭಾರೀ ಪ್ರಮಾಣದಲ್ಲಿ ಕೊಳೆ ಬಾಧಿಸಿದ ವರದಿ ಇದೆ. ಹಾಗಾಗಿ ಕಳೆದ ವರ್ಷಕ್ಕಿಂತ 5-10% ಉತ್ಪಾದನೆ ಕಡಿಮೆ ಇರಬಹುದು ಎಂಬ ಅಂದಾಜು ಇದೆ. ಚಾಲಿ ಆಗಸ್ಟ್ ಕೊನೆ ಒಳಗೆ ವಾರಕ್ಕೆ ರೂ.10 ರಂತೆ ಏರಿಸುತ್ತಾ ಬಂದರೂ ರೂಪಾಯಿ. 500 ಮುಟ್ಟಬಹುದು. ಇಂದು ಕೆಂಪಡಿಕೆಯ ಧಾರಣೆ ಅಹುತೇಕ ಎಲ್ಲಾ ಮಾರುಕಟ್ಟೆಯಲ್ಲೂ ರೂ.1000 ದಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ನಿನ್ನೆ ತುಮಕೂರಿನಲ್ಲಿ ರಾಶಿ 52,000-53,000 ತನಕ ಖರೀದಿ ಆದ ವರದಿ ಇದೆ. ಯಲ್ಲಾಪುರದಲ್ಲಿ 52,800 ರಿಂದ 55,500 ತನಕ ಏರಿಕೆ ಆಗಿದೆ. ಹಾಗಾಗಿ ಉಳಿದೆಡೆಯಲ್ಲೂ ದರ ಏರಿಕೆ ಆಗಲಿದೆ ಎನ್ನುತ್ತಾರೆ ವರ್ತಕರು.
ಇಂದು ಅಡಿಕೆ ದರ:
ಕರಾವಳಿಯ ಚಾಲಿ ಅಡಿಕೆ:
- ಕ್ಯಾಂಪ್ಕೋ: ದರ 37,500-46,000 (ಸರಾಸರಿ ದರ 45,500)
- ಖಾಸಗಿ: 45,000 -46200 (ಸರಾಸರಿ ದರ 46,000)
- ಕೆಲವರು ಉತ್ತಮ ಗುಣಮಟ್ಟ ಇದ್ದರೆ 200 ರೂ. ಹೆಚ್ಚು ಹಾಕುವವರೂ ಇದ್ದಾರೆ.
- ಹಳೆಯದು :49500-56,000 ಕ್ಯಾಂಪ್ಕೋ ದರ.
- ಖಾಸಗಿ 50,000 -57,000
- ಹಳೆಯದಕ್ಕೆ ದರ ಏರಿಕೆಯಾಗಿಲ್ಲ.
- ಪಟೋರಾ ದರ : 30,000-36,500
- ಉಳ್ಳಿಗಡ್ಡೆ:20,000-27.000
- ಕರಿಗೋಟು:20,000-27,000.
ಮಲೆನಾಡಿನ ಚಾಲಿ;
- ಸಾಗರ; 37769- 38569
- ಕುಮಟಾ; 39,500 -40,200 ಹೊಸತು
- 46800- 47099 ಹಳೆಯದು.
- ಶಿರಸಿ ;40,300 -41,351
- ಸಿದ್ದಾಪುರ; 39,500 -40,400
- ಯಲ್ಲಾಪುರ; 39,400-40,800
ಕೆಂಪಡಿಕೆ ಧಾರಣೆ:
ನಿನ್ನೆ ಮಾರುಕಟ್ಟೆ ರಜೆ ಇದ್ದು. ಸೋಮವಾರ ದರ ಹಿಂದಿನ ವಾರದದಂತೆ ಇತ್ತು. ಚಾಲಿ ದರ ಮೇಲಕ್ಕೇರುವ ಸೂಚನೆಯಿಂದ ಇಂದು ಸ್ವಲ್ಪ ರಾಶಿ ದರ ಏರಿಕೆಯಾಗುವ ಸಾದ್ಯತೆ ಇದೆ.
- ಚಿತ್ರದುರ್ಗ:50369, 50199
- ಭದ್ರಾವತಿ: 50299, 49096
- ಚೆನ್ನಗಿರಿ: 50450, 50096
- ಹೊಸನಗರ : 50999, 50369
- ಸಾಗರ:50799, 49799
- ಶಿರಸಿ: 52699, 49328
- ಸಿದ್ದಾಪುರ: 51109, 50299
- ಸಿರಾ:49000, 44214
- ಶಿವಮೊಗ್ಗ: 50419, 50099
- ತುಮಕೂರು:52500-53,000
- ಯಲ್ಲಾಪುರ: 55568, 52899
- ತೀರ್ಥಹಳ್ಳಿ:50489, 50009
- ಸರಕು ದರ 73,000-81,000 ತನಕ ಇದೆ.
- ಬೆಟ್ಟೆ: 54,000 ರೂ. ತನಕ ಇದೆ.
ಬೆಳೆಗಾರರು ಏರಿಕೆ ಆದ ತಕ್ಷಣ ಅಡಿಕೆ ಮಾರಾಟ ಮಾಡಬೇಕಾಗಿಲ್ಲ. 1-2 ವಾರ ಕಾಯುವುದು ಉತ್ತಮ. ಬೆಲೆ ಏರಿಕೆ ಸಮಯದ ಲಾಜಿಕ್ ಹೀಗಿರುತ್ತದೆ. ಯಾವಾಗಲೂ ವಸ್ತು ಮಾರುಕಟ್ಟೆಗೆ ಬರುವುದಿಲ್ಲವೋ ಆ ಸಮಯದಲ್ಲಿ ಸಾಂಸ್ಥಿಕ ಖರೀದಿದಾರರು ಬೆಲೆ ಹೆಚ್ಚಳಕ್ಕೆ ಪ್ರಾರಂಭಮಾಡುತ್ತಾರೆ.ಹೊರಗಡೆಯಿಂದ ಬೇಡಿಕೆಯೂ ಇರುತ್ತದೆ. ಬೆಲೆ ಏರಿಕೆ ಪ್ರಾರಂಭವಾದ ತಕ್ಷಣ ಬೆಳೆಗಾರರು ಮಾರಾಟ ಮುಂದೂಡುತ್ತಾರೆ. ಅವರಲ್ಲಿ ಸ್ಟಾಕು ಇರುತ್ತದೆ. ಸ್ಟಾಕು ನಿಧಾನ ಖಾಲಿಯಾಗಲಾರಂಭಿಸುತ್ತದೆ. ಖಾಸಗಿಯವರಲ್ಲಿ ಅಂತಹ ಸ್ಟಾಕು ಇರುವುದಿಲ್ಲ. ಆಗ ಸಮಯದಲ್ಲಿ ಖಾಸಗಿಯವರು ಸ್ವಲ್ಪ ಹಿಂದೇಟು ಹಾಕುತ್ತಾರೆ. ಖರೀದಿದಾರರು ಸಾಂಸ್ಥಿಕ ವರ್ತಕರಿಂದಲೇ ಖರೀದಿ ಮಾಡುವ ಸ್ಥಿತಿ ಬರುತ್ತದೆ. ಇದರಿಂದ ಸಂಸ್ಥೆಗೆ ಲಾಭವಾಗುತ್ತದೆ. ಇದರಿಂದ ಬೆಳೆಗಾರರಿಗೂ ಲಾಭವಾಗುತ್ತದೆ.ಈಗ ಅದೇ ಪರಿಸ್ಥಿತಿ ಉಂಟಾಗಿದೆ. ಸಧ್ಯ ಇಳಿಕೆ ಸಂಭವ ಇಲ್ಲದ ಕಾರಣ ಕಾದು ಮಾರಾಟ ಮಾಡಿ.