ಕೊಳೆ ರೋಗ ಹೆಚ್ಚಳಕ್ಕೂ ಸಸ್ಯ ಆರೋಗ್ಯಕ್ಕೂ  ಸಂಬಂಧಗಳಿರಬಹುದೇ ಯೋಚಿಸಿ.

ಕೊಳೆರೋಗ ಹೆಚ್ಚಳಕ್ಕೂ ಸಸ್ಯ ಆರೋಗ್ಯ

ಈ ವರ್ಷ ಬಹಳಷ್ಟು ಅಡಿಕೆ ಬೆಳೆಗಾರರು ಅಡಿಕೆ ಕಾಯಿಗಳಿಗೆ ಕೊಳೆ ರೋಗ ಬಂದಿದೆ ಎಂದು ಹೇಳುತ್ತಿದ್ದಾರೆ.  ಹೆಚ್ಚಿನ ಕಡೆ ಕೊಳೆ ರೋಗ ಬಂದಿದೆ. ಇದಕ್ಕೆ ಸಸ್ಯ ಆರೋಗ್ಯ  ಕಾರಣ ಇರಬಹುದೇ? ಕೆಲವು ದೃಷ್ಟಿಕೋನದಲ್ಲಿ ಇದು ನಿಜ ಎನ್ನಿಸುತ್ತದೆ. ಅಡಿಕೆಯ ಕೊಳೆ ರೋಗ ಬಂದಂತೆ ಅಡಿಕೆ ಸಸಿ/ ಮರಗಳಿಗೆ , ತೆಂಗಿನ ಮರಗಳಿಗೆ ಸುಳಿ ಕೊಳೆ ರೋಗವೂ  ಇತ್ತೀಚೆಗೆ ಬಹಳಷ್ಟು ಹೆಚ್ಚಾಗುತ್ತಿದೆ. ಪೋಷಕಾಂಶಗಳು ಅಸಮತೋಲನವಾಗಿ ಸಸ್ಯಕ್ಕೆ ಲಭ್ಯವಾಗದಿರುವುದೇ ಇದಕ್ಕೆ ಒಂದು ಕಾರಣ ಇರಬಹುದೇ ಎಂಬ ಬಗ್ಗೆ ಸಂಶಯವಿದೆ.

 ನಾವೆಲ್ಲಾ ಬೆಳೆಗಳಿಗೆ ಸಾರಜನಕ, ರಂಜಕ, ಪೊಟ್ಯಾಶ್ ಈ ಮೂರು ಪೋಷಕ ಕೊಡುವುದನ್ನು ಅಭ್ಯಾಸ ಮಾಡಿಕೊಂಡಿದ್ದೇವೆ. ಇವು ಮೂರು ಅಗತ್ಯವಾದ ಮುಖ್ಯ ಪೋಷಕಗಳು ನಿಜ. ಆದರೆ ಅವು ಮೂರೇ ಸಾಕಾಗುವುದಿಲ್ಲ ಎನ್ನುತ್ತದೆ ವಿಜ್ಞಾನ. ಸಸ್ಯ ಪೋಷಕಗಳಾಗಿ ಸಾರಜನಕ, ರಂಜಕ ಮತ್ತು ಪೊಟ್ಯಾಶ್ ಗಳ ಜೊತೆಗೆ ಕ್ಯಾಲ್ಸಿಯಂ, ಮೆಗ್ನೀಶಿಯಂ ಮತ್ತು ಗಂಧಕ ಗಳು ಎರಡನೇ ಅಗತ್ಯ ಪೋಷಕವಾಗಿರುತ್ತದೆ( Secenday nutrients)  ಬಹಳಷ್ಟು ರೈತರು NPK  ಈ ಮೂರು ಮುಖ್ಯ ಪೋಷಕಾಂಶಗಳನ್ನು ಹೇರಳವಾಗಿ ಕೊಡುತ್ತಾರೆ. ಆದರೆ ಅದಕ್ಕೆ ಬೆಂಬಲವಾಗಿ ಕೊಡಲೇ ಬೇಕಾದ ಮೂರು ದ್ವಿತೀಯ ಪೋಷಕಾಂಶವನ್ನು ಕೊಡುವುದು ಕಡಿಮೆ. ಈ ಆರು ಅಲ್ಲದೆ ಇನ್ನೂ 7 ಲಘು ಪೊಷಕಾಂಶಗಳು ಬೇಕಾಗುತ್ತವೆಯಾದರೂ ಅವುಗಳ ಬಗ್ಗೆ ನಂತರ ತಿಳಿಯೋಣ.

  • ಮಣ್ಣಿನಲ್ಲಿ ಎಲ್ಲಾ ಪೋಷಕಾಂಶಗಳು  ಸಮತೋಲನದಲ್ಲಿದ್ದರೆ ಸಸ್ಯಗಳು ಅದನ್ನು ಸಮರ್ಪಕವಾಗಿ ಬಳಸಿಕೊಂಡದ್ದೇ ಆದರೆ ಅದಕ್ಕೆ ರೋಗ, ಕೀಟಗಳ ಬಾಧೆಯನ್ನು ತಡೆದುಕೊಳ್ಳುವ ಶಕ್ತಿ ಬರುತ್ತದೆ.
  • ಇದು ಸಸ್ಯಕ್ಕೂ ಅನ್ವಯ. ಮನುಷ್ಯ ಪ್ರಾಣಿಗಳಿಗೂ ಅನ್ವಯ.
  • ಇದಲ್ಲದೆ ಕೆಲವು ತಳಿಗುಣವೂ ಸಹ ರೋಗ ಕೀಟ ಬಾಧೆಗೆ ಕಾರಣವಾಗುತ್ತದೆ.
  • ತೋಟದಲ್ಲಿ ಎಲ್ಲಾ ಮರಗಳಿಗೂ ರೋಗ ಬರುವುದಿಲ್ಲ. ಕೆಲವು ಮರಗಳು ರೋಗ ಅಂಟಿಸಿಕೊಂಡವುಗಳ ಜೊತೆಗೆ ಇದ್ದರೂ ಸಹ ಅವು ರೋಗ ಮುಕ್ತವಾಗಿರುತ್ತವೆ.
  • ಕೆಲವರ ತೋಟಕ್ಕೆ ಯಾವಾಗಲೂ ಕೊಳೆರೋಗ ಕರೆದಾಗ ಬಂದಂತೆ ಬರುತ್ತದೆ.
  • ಕೆಲವರಲ್ಲಿ ತುಂಬಾ ಕಡಿಮೆ. ಈ ಎಲ್ಲವನ್ನು ನೋಡಿದಾಗ ರೋಗ ಹೆಚ್ಚಳಕ್ಕೆ ಕಾರಣ ಮಳೆ ಮಾತ್ರವಲ್ಲ.
  • ಅದರ ಜೊತೆಗೆ ಇನ್ನೂ ಕೆಲವು ಅಂಶಗಳು ಸಹಕಾರಿಯಾಗುತ್ತವೆ. ಈ ಬಗ್ಗೆ ಸಂಶೋಧನೆಗಳು ಆಗಬೇಕಾಗಿದೆ.

ನಾವೆಲ್ಲಾ ತಜ್ಞರ ಜೊತೆಗೆ ಬೇರೆ ಬೇರೆ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತೇವೆ. ಹೆಚ್ಚಿನವರು ಮನೆಯಲ್ಲಿ ಕುಳಿತು  ತಜ್ಞರನ್ನು ಸಾಕಷ್ಟು ಜರೆಯುತ್ತಾರೆ. ಆದರೆ ರೋಗ ಮೂಲ ಅಥವಾ ರೋಗಕ್ಕೆ ಕಾರಣಗಳ ಬಗ್ಗೆ ಮುಖ ಮುಖ ಎದುರಾದಾಗ  ಚರ್ಚಿಸುವುದಿಲ್ಲ. ಸಸ್ಯಗಳಿಗೆ NPK ಹೊರತಾಗಿ ದ್ವಿತೀಯ ಪೋಷಕಗಳ, ಲಘು ಪೋಷಕಾಂಶಗಳು ಅಗತ್ಯ ಎಂದು ಸಂಶೋಧನೆಗಳು ಹೇಳುತ್ತವೆ. ಹಾಗಾದರೆ ಅಡಿಕೆ, ತೆಂಗು ಬೆಳೆಗಳಿಗೆ ಇದು ಎಷ್ಟು ಬೇಕು ಅಥವಾ ಬೇಡವೇ ಎಂಬ ಬಗ್ಗೆ ಚರ್ಚೆ ಆಗಬೇಕಿದೆ. 

ಈ ವರ್ಷದ ಕೊಳೆ ರೋಗದ ಪರಿಣಾಮ
ಈ ವರ್ಷದ ಕೊಳೆ ರೋಗದ ಪರಿಣಾಮ

ದ್ವಿತೀಯ ಪೋಷಕಾಂಶಗಳು ಮತ್ತು ಸಸ್ಯಗಳ ಶಕ್ತಿ:

  • ಸಸ್ಯಗಳಿಗೆ ಶಕ್ತಿ ಕೊಡಬೇಕಾದರೆ ಸಮತೋಲನದ ಪೋಷಕಗಳನ್ನು ಕೊಡಬೇಕು.
  • ಅದು ಸಾವಯವ ರೂಪದಲ್ಲಿ ಇರಲಿ, ರಾಸಾಯನಿಕ ರೂಪದಲ್ಲೇ ಇರಲಿ. ಸಸ್ಯಗಳಿಗೆ ಅದು ಬೇಕು ಎಂಬುದರ ಬಗ್ಗೆ ಯಾರಲ್ಲೂ ಭಿನ್ನ ಮತ ಇರಲಿಕ್ಕಿಲ್ಲ. 
  • ಸಮತೋಲನದ ಆಹಾರ ಇಲ್ಲದಿದ್ದರೆ ಅಲ್ಲಿ ಔಷದೋಪಚಾರವೂ ಪರಿಣಾಮಕಾರಿಯಾಗಿ ಕೆಲಸ ಮಾಡುವುದಿಲ್ಲ.
  • ದ್ವಿತೀಯ ಪೋಷಕಾಂಶಗಳಾದ ಕ್ಯಾಲ್ಸಿಯಂ, ಮೆಗ್ನೀಶಿಯಂ ಮತ್ತು ಗಂಧಕಗಳು ಸಸ್ಯಗಳ ರೋಗ ನಿರೋಧಕ ಶಕ್ತಿಯನ್ನುಹೆಚ್ಚಿಸಿಕೊಡಬಲ್ಲವು.
  • ಅಲ್ಪಾವಧಿ ಬೆಳೆಗಳನ್ನು ಬೆಳೆಸುವ ಬೆಳೆಗಾರರು ಇವುಗಳನ್ನು ತಪ್ಪದೆ ಬಳಕೆ ಮಾಡುತ್ತಾರೆ ಮತ್ತು ಅದರಿಂದ ಅಧಿಕ ಮತ್ತು ಗುಣಮಟ್ಟದ ಇಳುವರಿಯನ್ನು ಪಡೆಯುತ್ತಾರೆ.
  • ಈ ಬೆಳೆಗಳಿಗೆ ಇವುಗಳ ಶಿಫಾರಸು ಸಹ ಇದೆ. ಆದರೆ ಧೀರ್ಘಾವಧಿ ಬೆಳೆಯಾದ ಅಡಿಕೆ, ತೆಂಗು ಮುಂತಾದವುಗಳಿಗೆ ಇದರ ಶಿಫಾರಸು ಸಹ ಇಲ್ಲ.
  • ರೈತರು ಬಳಕೆ ಮಾಡುವುದೂ ತೀರಾ ಕಡಿಮೆ.

ಕ್ಯಾಲ್ಸಿಯಂ ಪೋಷಕ ಏನು ಮಾಡುತ್ತದೆ:

  • ಮಣ್ಣು ಮಾಧ್ಯಮವಾಗಿ ಬಳಸಿ ನಾವು ಕೃಷಿ ಮಾಡುತ್ತೇವೆ. ಮಣ್ಣಿನಲ್ಲಿ ಕೃಷಿ ಮಾಡುವಾಗ ಅಲ್ಲಿ ಪೋಷಕಾಂಶಗಳ ಬಳಕೆ ಆಗುತ್ತದೆ.
  • ಬಳಕೆ ಆಗುವಾಗ ಅದರ ಕೊರತೆ ಉಂಟಾಗುತ್ತದೆ. ಬರೇ ಸಸ್ಯಗಳು ಬಳಕೆ ಮಾಡಿದಾಗ ಮಾತ್ರ ಪೋಷಕಗಳ ಕೊರತೆ ಉಂಟಾಗುವುದಲ್ಲ.
  • ಮಳೆ ಮತ್ತು ನೀರಾವರಿಯ ಮೂಲಕವೂ ಪೋಷಕಗಳ ಕೊರತೆ ಉಂಟಾಗುತ್ತದೆ.
  • ಆಗ ಮಣ್ಣಿನಲ್ಲಿ ರಸಸಾರದ ವ್ಯತ್ಯಯವಾಗಿ ಮಣ್ಣು ಆಮ್ಲೀಯ(ಹುಳಿ)ವಾಗುತ್ತದೆ.
  • ಆಮ್ಲತೆಯನ್ನು ಸರಿಮಾಡುವುದಕ್ಕೆ ಕ್ಯಾಲ್ಸಿಯಂ ಬಿಟ್ಟರೆ ಬೇರೆ ಪರಿಹಾರ ಇರುವುದಿಲ್ಲ.
  • ಕ್ಯಾಲ್ಸಿಯಂ ಎಷ್ಟು ಹಾಕಿದರೆ ಮಣ್ಣು ಸರಿಯಾಗುತ್ತದೆ ಎಂಬುದು ಸಹ ಸಮರ್ಪಕ ಅಧ್ಯಯನ ಆದ ವಿಷಯ ಅಲ್ಲ. 
  • ಒಂದು ಚದರ ಅಡಿ ಆಮ್ಲ ಮಣ್ಣಿಗೆ ಅದರ ರಸ ಸಾರ 5.5 ಇದ್ದಾಗ ಅದಕ್ಕೆ ಎಷ್ಟು ಸುಣ್ಣ ಅಥವಾ ಕ್ಯಾಲ್ಸಿಯಂ ಹಾಕಿದರೆ ಅದು ತಟಸ್ಥ ಆಗುತ್ತದೆ ಎಂಬ ಬಗ್ಗೆ ನಿಖರ ಅಧ್ಯಯನ ಇಲ್ಲದ ಕಾರಣ ನಾವು ಒಂದು ಮುಷ್ಟಿ, ಎರಡು ಮುಷ್ಟಿ, ಎಕ್ರೆಗೆ 250 ಕಿಲೋ, 500 ಕಿಲೋ ಪ್ರಮಾಣವನ್ನು ಅನುಸರಿಸುತ್ತೇವೆ.
  • ಇದು ಸಾಕಾಗುತ್ತದೆಯೇ ಎಷ್ಟು ಸಮಯದ ತನಕ ಅದು ರಸಸಾರವನ್ನು ತಟಸ್ಥ ಸ್ಥಿತಿಯಲ್ಲಿ ಇಡುತ್ತದೆ ಎಂಬ ಬಗ್ಗೆ ನಿಖರ ಅದ್ಯಯನ ಇಲ್ಲ.
  • ಹಾಗಾಗಿ ನಾವು ಬಳಸುವ ಕ್ಯಾಲ್ಸಿಯಂ ಹೆಚ್ಚಾಗುತ್ತದೆಯೇ , ಕಡಿಮೆಯಾಗುತ್ತದೆಯೇ ಎಂಬುದು ಗೊತ್ತಿಲ್ಲ.

ಮೆಗ್ನೀಶಿಯಂ ಪೋಷಕಾಂಶ:

  • ಇದು ಅಗತ್ಯ ಪೋಷಕವಾಗಿದ್ದು, ಇದರಿಂದ ಸಸ್ಯದ ಆಹಾರ ತಯಾರಿಕಾ ಕ್ರಿಯೆ ಉತ್ತಮವಾಗಿ  ಆರೋಗ್ಯ ಉತ್ತಮವಾಗುತ್ತದೆ.
  • ಇದರ ಕೊರತೆಯಿಂದ ಸಸ್ಯಗಳು ರೋಗ/ಕೀಟಗಳ ಸೋಂಕಿಗೆ ಬಲಿಯಾಗುತ್ತದೆ ಎಂಬ ಬಗ್ಗೆ ಅಷ್ಟೊಂದು ಪುರಾವೆಗಳಿಲ್ಲ.
  • ಆದರೂ ಸಸ್ಯಗಳು ಚೆನ್ನಾಗಿ ಬೆಳೆಯುವಂತೆ ಮಾಡುವ ಪತ್ರಹರಿತ್ತು ಅಭಿವೃದ್ದಿಗೆ ಮತ್ತು ಕೆಲವು ಕಿಣ್ವಗಳ ತಯಾರಿಕೆಗೆ ಇದು ಅಗತ್ಯವಾಗಿ ಬೇಕು ಎನ್ನುತ್ತದೆ  ವಿಜ್ಞಾನ.
  • ಅಡಿಕೆ ಅಥವಾ ತೆಂಗು ಬೆಳೆಗೆ ಮೆಗ್ನೀಶಿಯಂ ಬೇಕೇ, ಬೇಕಾದರೆ ಎಷ್ಟು ಬೇಕು ಯಾವ ರೂಪದಲ್ಲಿ ಕೊಡಬೇಕು ಎಂಬುದು ಸಹ ಅಧ್ಯಯನ ಆಗಬೇಕಾದ ವಿಚಾರ.
ಕೊಳೆ ರೋಗ ಹೆಚ್ಚಾದರೆ ಮರ  ಹೀಗೆ ಆಗುತ್ತದೆ
ಕೊಳೆ ರೋಗ ಹೆಚ್ಚಾದರೆ ಮರ ಹೀಗೆ ಆಗುತ್ತದೆ

ಗಂಧಕ ಪೋಷಕ:

  • ಕ್ಯಾಲ್ಸಿಯಂ, ಮೆಗ್ನೀಶಿಯಂ, ಮತ್ತು ಗಂಧಕ ಈ ಮೂರು ಮುಖ್ಯ ಪೋಷಕಗಳಾದ NPK ಯಷ್ಟು ಪ್ರಮಾಣದಲ್ಲಿ ಬೇಕಾಗುವುದಿಲ್ಲ.
  • ಆದರೆ ಅವು ಸಸ್ಯಗಳಿಗೆ ಅಗತ್ಯವಾಗಿ ಬೇಕು ಎನ್ನುತ್ತದೆ ಅಧ್ಯಯನಗಳು.
  • ಗಂಧಕ ಎಂಬುದು ಸಾರಜನಕ ಪೋಷಕದ ಸಮರ್ಪಕ ಲಭ್ಯತೆಗೆ ಬೇಕಾಗುತ್ತದೆ.
  • ಕಿಣ್ವಗಳ ಚಟುವಟಿಕೆಗೆ ಹಾಗೆಯೇ ಫಸಲಿನ ಗುಣಮಟ್ಟಕ್ಕೆ ಗಂಧಕ ಬೇಕು.
  • ಇದು ಸ್ವಲ್ಪ ಮಟ್ಟಿಗೆ ಸಸ್ಯಗಳಿಗೆ ರೋಗ ನಿರೋಧಕ ಶಕ್ತಿಯನ್ನೂ ಕೊಡುತ್ತವೆ.
  • ಹಾಗಾಗಿ ಇದನ್ನು ಕೊಡಬೇಕೇ, ಕೊಡಬೇಕಾದರೆ ಹೇಗೆ , ಎಷ್ಟು ಕೊಡಬೇಕು ಎಂಬ ಬಗ್ಗೆ ಸಂಶೋಧನೆಗಳು ಆಗಬೇಕಿದೆ.

ಅಡಿಕೆ ಫಸಲಿಗೆ ಕೊಳೆ ರೋಗ ಬಂದು ಫಸಲು ಸ್ವಲ್ಪ ನಷ್ಟ ಆದರೆ ಅದನ್ನು ಮುಂದಿನ ವರ್ಷ ಹೊಂದಿಸಿಕೊಳ್ಳಬಹುದು. ಆದರೆ ವರ್ಷ ವರ್ಷವೂ ರೋಗ ಬರುವುದು, ಈ ರೋಗದ ಕಾರಣದಿಂದಾಗಿ ಮರ ಸಾಯುವುದು ಹೀಗೆಲ್ಲಾ ಆಗುವುದರಿಂದ ನಷ್ಟ ಹೆಚ್ಚು. ರೋಗ ನಿಯಂತ್ರಣಕ್ಕೆ ಔಷದೋಪಚಾರ ಇದೆಯಾದರೂ ಮಳೆಯ ವಾತಾವರಣ, ಜೊತೆಗೆ ಮರ ಹತ್ತುವ ಕೆಲಸ ಇವೆಲ್ಲಾ ಔಷದೋಪಚಾರವನ್ನು ಸಮರ್ಪಕವಾಗಿ ಮಾಡಲು ಅಡ್ಡಿಯಾಗುತ್ತದೆ. ಅದಕ್ಕಾಗಿ ಸಸ್ಯಗಳಿಗೆ ರೋಗ ನಿರೋಧಕ ಶಕ್ತಿ  ಕೊಡುವ ಬಗ್ಗೆ ಸಂಶೋಧನೆಗಳು ಆಗಬೇಕಾಗಿದೆ.

ಈ ಎಲ್ಲಾ ಅಂಶಗಳನ್ನು ತಾವು ಸ್ಥಳೀಯ ವಿಜ್ಞಾನಿಗಳೊಂದಿಗೆ ಚರ್ಚಿಸಿ ನಿಖರವಾದ ಪ್ರಮಾಣದಷ್ಟನ್ನು ಮಣ್ಣಿಗೆ ಸೇರಿಸುತ್ತಾ ಬಂದರೆ ಸಸ್ಯಕ್ಕ್ಕೆ ರೋಗ ನಿರೋಧಕ ಶಕ್ತಿ ಬರಬಹುದೇ ಎಂದು ನೋಡಬಹುದು. ರೋಗ ಬಂತು, ಬೋಡೋ ದ್ರಾವಣ ಸಿಂಪಡಿಸುವ. ತುತ್ತೆ ಹೆಚ್ಚು ಮಾಡುವ, ಸುಣ್ಣ ಹೆಚ್ಚು ಮಾಡುವ ಎಂದು ನಾವು ನಾವೇ ನಿರ್ಧಾರ ಮಾಡುವುದಲ್ಲ. ಈ ತುತ್ತೆಯಿಂದಾಗಿ ಮಣ್ಣಿನಲ್ಲಿ ಘನ ಲೋಹವಾದ ತಾಮ್ರದ ಅಂಶ ಹೆಚ್ಚಾಗುತ್ತಾ ಬರಲಾರಂಭಿಸಿದೆ. ತಾಮ್ರದ ಅಂಶ ಹೆಚ್ಚಳವಾದರೆ ಏನಾಗುತ್ತದೆ, ಅದನ್ನು ಕರಗಿಸಲು ಏನು ಮಾಡಬೇಕು ಎಂಬುದನ್ನೂ ಅಧ್ಯಯನ ಮಾಡಬೇಕಾಗಿದೆ. ತುತ್ತೆ ಅಲ್ಲದೆ ಬೇರೆ ಯಾವುದೂ ಅಂತಹ ಫಲಿತಾಂಶ ಕೊಟ್ಟಿಲ್ಲದ ಕಾರಣ ತುತ್ತೆ  ಬಿಡುವಂತಿಲ್ಲ. ಸಾಧ್ಯವಾದಷ್ಟು ಕಡಿಮೆ ಮಾಡುವುದು ಅಗತ್ಯ. ಅದಕ್ಕೆ ನಾವು ಸಸ್ಯಕ್ಕೆ ರೋಗ ನಿರೋಧಕ ಶಕ್ತಿ ಬರುವಂತೆ ಮಾಡಬೇಕಾದದ್ದು ಅನಿವಾರ್ಯ.

Leave a Reply

Your email address will not be published. Required fields are marked *

error: Content is protected !!