ಕೇಂದ್ರ ಕೃಷಿ ಖಾತೆಯ ಸಹಾಯಕ ಸಚಿವೆ, ಅಡಿಕೆ ಬೆಳೆಯುವ ಪ್ರದೇಶದಲ್ಲಿ ಹುಟ್ಟಿ ಬೆಳೆದು ರೈತರ ಕಷ್ಟ ಸುಖಗಳನ್ನು ಅರಿತ ಶೋಭಾ ಕರಂದ್ಲಾಜೆ ಯವರು ಅಡಿಕೆಯ ಮಾನ ಹೋಗ ದಂತೆ ರಕ್ಷಿಸಲು ಪ್ರಧಾನಿ ನರೇಂದ್ರ ಮೋದಿಯವರಿಗೆ ತಿಳಿಸಿದ್ದು ಸಂತೋಷದ ವಿಚಾರ. ಆದರೆ ಅದರ ಜೊತೆಗೆ ಅಗತ್ಯವಾಗಿ ಮಾಡಬೇಕಾದ ಕೆಲಸವನ್ನು ಅವರು ಮಾಡಿದ್ದರೆ ಕೋಟ್ಯಾಂತರ ಅಡಿಕೆ ಬೆಳೆಗಾರರ ಮೆಚ್ಚುಗೆಗೆ ಪಾತ್ರರಾಗುತ್ತಿದ್ದರು.
ಕರ್ನಾಟಕದಲ್ಲೇ ಅತ್ಯಧಿಕ ಪ್ರಮಾಣದಲ್ಲಿ ಬೆಳೆಯಲಾಗುವ ಅಡಿಕೆಯ ಮೇಲೆ ಆರೋಗ್ಯ ಎಂಬ ವಿಷಯದಲ್ಲಿ ಭಾರೀ ಗೊಂದಲಗಳಿವೆ. ಕೆಲವು ತಜ್ಞರು ಇದು ಆರೋಗ್ಯಕ್ಕೆ ಹಾನಿ ಎಂದು ಹೇಳುತ್ತಾರೆ.ಕೆಲವರು ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಾರೆ. ಸರಕಾರ ಒಳ್ಳೆಯದು ಎನ್ನುವವರ ವಾದವನ್ನೂ ಪರಿಗಣಿಸಬಹುದು, ಕೆಟ್ಟದು ಎನ್ನುವವರ ವಾದವನ್ನೂ ಪರಿಗಣಿಸಬಹುದು. ಅದು ಅವರವರ ಮನಸ್ಸಿಗೆ ತೋರಿದಂತೆ. ಅಡಿಕೆಯಲ್ಲಿ ಆರೋಗ್ಯಕ್ಕೆ ಹಾನಿಕರವಾದ ಅಂಶಗಳಿಲ್ಲ ಎಂಬುದನ್ನು ಸ್ವತಹ ಅಡಿಕೆ ಬೆಳೆಯಲಾಗುವ ಪ್ರದೇಶದ ಸಂಸದೆ ಹಾಗೂ ಕೇಂದ್ರ ಮಂತ್ರಿಗಳೇ ಪ್ರಧಾನಿ ಮೋದಿಯವರಿಗೆ ಮನವರಿಕೆ ಮಾಡಿಕೊಟ್ಟ ಕಾರಣ ಬಹುಷಃ ಇನ್ನು ಅಡಿಕೆಯ ಸುದ್ದಿಗೆ ಸರಕಾರ ಆರೋಗ್ಯದ ಕಾರಣದಿಂದ ಬರಲಿಕ್ಕಿಲ್ಲ ಎಂದು ಭಾವಿಸಬಹುದು.
- ಅಡಿಕೆಗೆ ಮಾನ ಉಳಿಯುವುದು ತಿನ್ನುವವರನ್ನು ಅವಲಂಭಿಸಿ ಇರುತ್ತದೆ.
- ಅಡಿಕೆ ಬ್ಯಾನ್ ಆದರೂ ತಿನ್ನುವವರ ಬಾಯಿ ಬ್ಯಾನ್ ಮಾಡಲು ಸಾಧ್ಯವಿಲ್ಲ.
- ಆರೋಗ್ಯಕ್ಕೆ ತಂಬಾಕು ಮಿಶ್ರಣ ಮಾಡಿದ ಅಡಿಕೆ ಉತ್ಪನ್ನ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದು ಅನಾದಿ ಕಾಲದಿಂದಲೂ ಜನಕ್ಕೆ ಗೊತ್ತಿರುವಂತದ್ದು.
- ಆದರೂ ಅದನ್ನು ತಿನ್ನುತ್ತಾರೆ. ಅದು ತಿನ್ನುವವನ ಐಚ್ಚಿಕ
- ಬ್ಯಾನ್ ಇತ್ಯಾದಿ ಆಗು ಹೋಗುವ ವಿಚಾರ ಅಲ್ಲ.
- ಸರಕಾರ ಅಡಿಕೆ ಬ್ಯಾನ್ ಮಾಡಿ ಏನನ್ನೂ ಸಾಧಿಸಲಾಗುವುದಿಲ್ಲ.
- ಅದರ ಬದಲಿಗೆ ಬೆಲೆ ಸ್ಥಿರತೆಯ ಬಗ್ಗೆ ಏನಾದರೂ ಮಾಡಿದರೆ ಒಳ್ಳೆಯದು.
ಮಾನಸಿಕವಾಗಿ ಕುಗ್ಗಿಸುತ್ತದೆ ಈ ಸಮಸ್ಯೆ :
- ಇಷ್ಟೊಂದು ಒಳ್ಳೆಯ ಕೆಲಸ ಮಾಡಿದ ಕೇಂದ್ರ ಮಂತ್ರಿಗಳು ಅಡಿಕೆ ಬೆಳೆಗಾರರು ನಿತ್ಯ ಅನುಭವಿಸುವ ಮಾನಸಿಕ ದುಗುಡದ ನಿವಾರಣೆಗಾಗಿ ಗಮನಹರಿಸಿದ್ದರೆ ಎಷ್ಟು ಅನುಕೂಲ ಇತ್ತು.
- ಇವರಿಗೆ ಇದರ ಅರಿವು ಇದೆಯೋ ಇಲ್ಲವೋ ? ತಿಳಿಯದು.
- ಅಡಿಕೆ ಬೆಳೆಯುವ ಪ್ರತೀಯೊಬ್ಬನೂ ಅನುಭವಿಸುವ ಈ ಮಾನಸಿಕ ಒತ್ತಡವನ್ನು ಸರಕಾರ ಗಮನಹರಿಸಿ ಪರಿಹರಿಸಿಕೊಟ್ಟರೆ ಅವರು ನಿತ್ಯ ಸ್ಮರಣೀಯರಾಗುತ್ತಾರೆ.
- ಯಾವನಾದರೂ ಒಬ್ಬ ಅಡಿಕೆ ಬೆಳೆಗಾರ ಅಡಿಕೆಗೆ ಈ ವರ್ಷ ಈ ದರ ನಿಲ್ಲಬಹುದು. ನಾನು ಆ ದರಕ್ಕೆ ಮಾರಾಟ ಮಾಡಿ ತೃಪ್ತನಾಗಿರುತ್ತೇನೆ ಎಂದು ಅಂದಾಜು ಮಾಡಲು ಸಾಧ್ಯವಿದೆಯೇ? ಇಲ್ಲ.
- ದರ ಎಂಬುದು ಯಾವ ಬೆಳೆಗಾರನಿಗೂ ನಿಲುಕದ ವಿಷಯ.
- ಇನ್ನು ದರ ಏರಿಕೆ ಆಗದು, ಕೊಟ್ಟು ಬಿಡೋಣ ಎಂದು ಮಾರಿದ ಮರುದಿನದಿಂದ ಏರಿಕೆ ಪ್ರಾರಂಭವಾಗುತ್ತದೆ.
- ದರ ಏರಬಹುದು ಎಂದು ಎಷ್ಟು ಸಮಯ ಮಾರಾಟ ಮಾಡದೆ ಉಳಿಸಿದರೂ ದರ ಏರಿಕೆ ಆಗುವುದೇ ಇಲ್ಲ.
- ಯಾವಾಗಲೂ ಅದೇ ಉತ್ಪತ್ತಿಯನ್ನು ನಂಬಿ ಬದುಕುವವರಿಗೆ ಸಿಗುವುದು ಕಡಿಮೆ ದರವೇ.
- ಯಾರಿಗೆ ಅದರ ದುಡ್ಡಿನ ಅವಶ್ಯಕತೆಯೇ ಇಲ್ಲವೋ ಅವರು ದಾಸ್ತಾನು ಇಟ್ಟರೆ ಉತ್ತಮ ದರ ಪಡೆಯುವುದಿದೆ.
- ಇದು ಅಡಿಕೆ ಬೆಲೆಯ ಚರಿತ್ರೆಯನ್ನು ನೋಡಿದಾಗ ಎಲ್ಲಾ ಸಮಯದಲ್ಲೂ ನಡೆದು ಬಂದದ್ದೇ ಆಗಿದೆ.
- ಇದನ್ನು ಸರಿಪಡಿಸಿದರೆ ಸಾಕು ಅಡಿಕೆ ಬೆಳೆಗಾರರು ನೆಮ್ಮದಿಯಲ್ಲಿ ಇರಲು ಸಾಧ್ಯ.
- ಅಡಿಕೆ ಬೆಳೆಗಾರರು ಅಡಿಕೆ ಬೆಳೆದ ಮೇಲೆ ಮಾರಾಟ ಮಾಡುವರೇ ಯಾವಾಗಲೂ ಸತ್ವ ಪರೀಕ್ಷೆಗೇ ಒಳಗಾಗುತ್ತಾರೆ.
- ನಮ್ಮ ದೇಶದಲ್ಲಿ ಬಹುತೇಕ ಒಂದು ಕೃಷಿ ಉತ್ಪನ್ನಕ್ಕೆ ಸಾಮಾನ್ಯ ದರ ಎಂಬುದು ಇದೆ.
- ಆದರೆ ಅಡಿಕೆಗೆ ಇಲ್ಲ. ಯಾವಾಗಲೂ ಇದು ಉತ್ತುಂಗಕ್ಕೆ ಏರಬಹುದು.
- ಪಾತಾಳಕ್ಕೂ ಇಳಿಯಬಹುದು. ಈ ಏರಿಳಿತದ ಯಾವ ಮುನ್ಸೂಚನೆಯೂ ಬೆಳೆಗಾರರಿಗೆ ಗೊತ್ತೇ ಆಗುವುದಿಲ್ಲ.
- ಕಳೆದ ವರ್ಷದ ಕೊರೋನಾ ಲಾಕ್ ಡೌನ್ ಹಾಗೂ ಆಮದು ಕಠಿಣವಾದ ಕಾರಣ ಅಡಿಕೆಗೆ ಬೆಲೆ ಇದೆ ಎಂದು ಗೊತ್ತಾಯಿತು.
- ಆದರೆ ಪೂರ್ಣ ಚಿತ್ರಣ ಸಿಕ್ಕಿಯೇ ಇಲ್ಲ. ಈ ವರ್ಷ ಕೆಂಪಡಿಕೆಗೆ ಒಮ್ಮೆ ದರ ಏರುಗತಿಯಲ್ಲಿ ಸಾಗಿತು.
- ಬೆಳೆಗಾರರು ಸಹಜವಾಗಿ ಇನ್ನೂ ಏರಬಹುದೇನೋ ಎಂದು ಮಾರಾಟ ಮುಂದೂಡಿದರು.
- ದರ ಇಳಿಕೆಯ ಹಾದಿ ಹಿಡಿಯಿತು. ಬೆಳೆಗಾರರು ಹೆದರಿ ಮಾರಾಟ ಮಾಡಿದರು.
- ಅದೇ ರೀತಿಯಲ್ಲಿ ಚಾಲಿಯೂ ಸಹ. ದರ ಏರಿಕೆಯ ತುದಿ ಎಲ್ಲಿ, ಬುಡ ಎಲ್ಲಿ ಎಂದು ಯಾರಿಗೂ ಗೊತ್ತಿಲ್ಲ. ಮಾರುಕಟ್ಟೆಯಲ್ಲಿ ದರ ಇಂದು ಇದ್ದುದು ನಾಳೆ ಇರಬೇಕಾಗಿಲ್ಲ.
- ಇಂತಹ ಸ್ಥಿತಿ ಹಿಂದೆಯೂ ಇತ್ತು ಈಗಲೂ ಹಾಗೆಯೇ ಇದೆ.
- ಬೆಳೆಗಾರರು ಉತ್ತಮ ಬೆಲೆಯನ್ನು ನಿರೀಕ್ಷಿಸುತ್ತಾರೆಯಾದರೂ ಅದಕ್ಕಿಂತಲೂ ಹೆಚ್ಚಾಗಿ ಸ್ಥಿರತೆಯ ದರವನ್ನು ನಿರೀಕ್ಷಿಸುತ್ತಾನೆ.
ಸ್ಥಿರ ಬೆಲೆ ಎಂಬುದೇ ಇಲ್ಲ:
- ನಮ್ಮಲ್ಲಿ ಉತ್ಪಾದನೆಯಾಗುವ ಅಡಿಕೆ ನಮ್ಮ ದೇಶದಲ್ಲೇ ಬಳಕೆಯಾಗುವುದು.
- ಇದೇ ನೆಲದಲ್ಲಿ ಬೆಳೆಯುವ ಅಡಿಕೆಯ ಪ್ರಮಾಣದ ಲೆಕ್ಕಾಚಾರ ಪಡೆಯುವುದೂ ಕಷ್ಟ ಇಲ್ಲ.
- ಹೀಗಿರುವಾಗ ಉಳಿದ ಕೃಷಿ ಉತ್ಪನ್ನದಂತೆ ಇದಕ್ಕೆ ಸರಾಸರಿ ಸ್ಥಿರ ದರ ನಿರ್ಧಾರ ಮಾಡುವುದಕ್ಕೆ ಯಾವ ಕಷ್ಟವೂ ಇಲ್ಲ.
- ಆದರೆ ಅದನ್ನು ಯಾರೂ ಮಾಡುತ್ತಿಲ್ಲ. ಕಾರಣ ಇಷ್ಟೇ ಇಲ್ಲಿ ಯಾವುದೋ ದೊಡ್ಡ ಕುಳಗಳು ಸಟ್ಟಾ ವ್ಯಾಪಾರವನ್ನು ಮಾಡುತ್ತಿವೆ.
- ಸಟ್ಟಾ ವ್ಯಾಪಾರ ಒಂದು ಅನಧಿಕೃತ ವ್ಯವಹಾರವಾಗಿದ್ದು, ಇದನ್ನು ತಡೆಯುವರೇ ಸರಕಾರ ಕ್ರಮ ಕೈಗೊಳ್ಳಬಹುದು.
- ಇದಕ್ಕೆ ಕಡಿವಾಣ ಹಾಕಿದರೆ ಸರಿಸುಮಾರು ಏಕ ಪ್ರಕಾರದ ಬೆಲೆ ಇರುತ್ತದೆ.
- ಬೆಳೆಗಾರರು ಮೊದಲಾಗಿ ಸ್ಥಳೀಯ ಸಂಸದರು ಹಾಗು ಶಾಸಕರ ಮೂಲಕ ಸರಕಾರದ ಮುಂದೆ ಬೇಡಿಕೆ ಇಡಬೇಕಾದು ಇದನ್ನು.
- ಅಡಿಕೆಗೆ ಒಂದು ನಿರ್ದಿಷ್ಟ ಬೆಲೆ ನಿಗದಿ ಮಾಡಿ. ಅದು ಕಿಲೊ 10-20 ವ್ಯತ್ಯಾಸ ಆಗಲಿ.
- ದಿನ ಬೆಳೆಗಾಗುವುದರೊಳಗೆ ಏರಿಕೆ ಇಳಿಕೆ. ಕಿಲೋ ಮೇಲೆ 100ರೂ. ತನಕವೂ ಏರಿಕೆ ಇಂತದ್ದೆಲ್ಲಾ ಆದರೆ ರೈತ ನೆಮ್ಮದಿಯಿಂದ ನಿದ್ರೆ ಮಾಡಲು ಸಾಧ್ಯವೇ?
- ಬೆಳೆಗಾರರು ಯಾವಾಗ ಬೆಲೆ ಬರುತ್ತದೆ ಎಂದು ಕಾಯುವುದಕ್ಕಾಗುತ್ತದೆಯೇ?
- ತಾಪತ್ರಯಗಳು ಹೇಳಿ ಕೇಳಿ ಬರುತ್ತವೆಯೇ? ಸಾಲ ಸೋಲಗಳ ವಾಯಿದೆ ಆಗುವಾಗ ಬೆಲೆ ಅನುಕೂಲಕರವಾಗಿ ಇರುತ್ತದೆಯೇ?
- ಇದ್ಯಾವುದೂ ಇಲ್ಲ. ಬರೇ ಅದೃಷ್ಟದ ಮೇಲೆ ಬೆಲೆ ಅನುಕೂಲ ಸಿಗುವಂತ ಪರಿಸ್ಥಿತಿ ಇದೆ.
- ಬೆಲೆ ಚೆನಾಗಿದ್ದರೂ ಆ ಬೆಲೆಯನ್ನು ಪಡೆಯುವ ಅವಕಾಶ ಬಹಳ ಜನರಿಗೆ ಇಲ್ಲದಾಗುತ್ತಿದೆ.
- ಇದು ಬೆಳೆಗಾರರ ಒಂದು ರೀತಿಯ ಮಾನಸಿಕ ನೆಮ್ಮದಿಯನ್ನು ಹಾಳು ಮಾಡುತ್ತದೆ.
- ಸರಕಾರ ಅಡಿಕೆ ಬೆಳೆಗಾರರ ಹಿತ ಕಾಯುವ ನೈಜ ಕಾಳಜಿ ಇದ್ದರೆ ಇದನ್ನು ಮೊದಲಾಗಿ ನಿವಾರಿಸುವ ಪ್ರಯತ್ನವನ್ನು ಮಾಡಬೇಕು.
ಯಾಕೆ ಹೀಗಾಗುತ್ತದೆ?
- ಸರಕಾರ ಯಾವುದೇ ಕಾನೂನುಗಳನ್ನು ಮಾಡಿದರೂ ಸಹ ಅಡಿಕೆ ಇಂದಿಗೂ 50% ಕ್ಕೂಹೆಚ್ಚು, ದೋ ನಂಬರ್ ವ್ಯವಹಾರದ ಮೂಲಕವೇ ವ್ಯಾಪಾರ ಆಗುತ್ತಿದೆ.
- ಅಡಿಕೆಯ ಎಲ್ಲಾ ಉತ್ಪನ್ನಗಳೂ ಸಹ ನೈಜ ಬಿಲ್ ವ್ಯವಹಾರದಲ್ಲಿ ಮಾರಾಟವಾಗುವಂತದ್ದಲ್ಲ.
- ಗುಟ್ಕಾ ಮಾರಾಟಗಾರರಲ್ಲಿ ಅದಕ್ಕೆ ಬಿಲ್ ಇತ್ಯಾದಿ ಏನಾದ್ರೂ ಇರುತ್ತದೆಯೇ.
- ಯಾವುದೂ ಇಲ್ಲ. ಇಲ್ಲಿ ಯಾವುದೂ ಎಂ ಆರ್ ಪಿ ದರದಲ್ಲಿ ಮಾರಾಟ ಆಗುವುದೇ ಇಲ್ಲ.
- ಇದೆಲ್ಲಾ ಅಧಿಕೃತ ಮತ್ತು ಜಗಜ್ಜಾಹೀರಾತಾದ ಕಳ್ಳ ವ್ಯವಹಾರ.
- ಇದು ಸರಕಾರಕ್ಕೆ ಗೊತ್ತಿದೆಯೋ ಗೊತ್ತಿಲ್ಲವೋ ದೇವರೇ ಬಲ್ಲ.
- ಅಂಗಡಿಯವ ಯಾವುದೋ ಗೌಪ್ಯ ಕೋಣೆಯಿಂದ ಚೀಲ ಚೀಲ ಗುಟ್ಕಾ ತಂದು ಕೊಡುತ್ತಾನೆ.
- ಅವನಿಗೂ ಹಾಗೆಯೇ ಬರುತ್ತದೆ.
- ಬಹುಷಃ ಗುಟ್ಕಾ ತಯಾರಕರು ತಮ್ಮ ಉತ್ಪಾದನೆಯಲ್ಲಿ 50% ಕ್ಕಾದರೂ ಅಬಕಾರಿ ಸುಂಕ ಇತ್ಯಾದಿ ಪಾವತಿಸುತ್ತಾರೆಯೋ ಇಲ್ಲವೋ ತಿಳಿಯದು.
- ಬಳಕೆಯ ಲೆಕ್ಕಾಚಾರವೇ ಇಲ್ಲದ ಮೇಲೆ ದರ ನಿಗದಿ ಮಾಡುವುದಾದರೂ ಹೇಗೆ?
ಮುಂದೆ ಇದೆ ಮಹಾ ಗಂಡಾಂತರ:
- ಈಗಾಗಲೇ ರಾಜ್ಯದ ಹೊಸ ಹೊಸ ಪ್ರದೇಶದ ರೈತರು ನಾವು ಏನಾದರೂ ಕೃಷಿಯಲ್ಲಿ ಸಂಪಾದನೆ ಕಾಣಬೇಕು ಎಂಬ ಆಕಾಂಕ್ಷೆಯಲ್ಲಿ ಅಡಿಕೆ ಬೆಳೆಸುತ್ತಿದ್ದಾರೆ.
- ಇದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಆಂದ್ರಪ್ರದೇಶ,, ತಮಿಳುನಾಡು, ಗುಜರಾತ್ ರಾಜ್ಯಗಳಲ್ಲಿ ಅಡಿಕೆ ಬೆಳೆ ವಿಸ್ತರಣೆ ಆಗುತ್ತಿದೆ.
- ಕಾಡು ಗುಡ್ದಗಳು ಅಡಿಕೆ ತೋಟಗಳಾಗುತ್ತಿವೆ.
- ಅಡಿಕೆ ಬೆಳೆಗಾಗಿ ಕೊಳವೆ ಬಾವಿಗಳು ಎಗ್ಗಿಲ್ಲದೆ ಕೊರೆಯಲ್ಪಡುತ್ತಿದೆ.
- ಮುಂದೊಂದು ದಿನ ಈ ರೀತಿ ಅಂತರ್ಜಲವನ್ನು ಬಳಸಿದರೆ ಕುಡಿಯುವ ನೀರಿಗೂ ಕಷ್ಟವಾಗಬಹುದು.
- ಇದೆಲ್ಲಾ ಮುಂದೆ ಏನಾಗುತ್ತದೆಯೋ ಯಾರಿಗೂ ಗೊತ್ತಿಲ್ಲ.
- ನೆಟ್ಟಿರುವ ಅಡಿಕೆ ಗಿಡಗಳಲ್ಲಿ ನಿರೀಕ್ಷೆಯ ಫಸಲು ಬಂದರೆ, ಆ ಸಮಯದಲ್ಲಿ ದರ ಭಾರೀ ಕುಸಿತವಾದರೆ ಅಗ ರೈತರ ಪರಿಸ್ಥಿತಿ ಏನಾಗಬಹುದು?
- ಸಾಲದ ಹೊರೆ ತಾಳಲಾಗದೆ ಸರಣಿ ಆತ್ಮಹತ್ಯೆಗಳಾದರೂ ಅಚ್ಚರಿ ಇಲ್ಲ.
- ರೈತರ ಆರ್ಥಿಕ ಪರಿಸ್ಥಿತಿ ಹದಗೆಟ್ಟರೆ ದೇಶದ ದಿವಾಳಿತನಕ್ಕೂ ಕಾರಣ ಆಗಬಹುದು.
- ಆದ ಕಾರಣ ಸರಕಾರದ ಮಂತ್ರಿ ಮಹೋದಯರು ಅಡಿಕೆಯ ಮಾನವನ್ನು ಉಳಿಸುತ್ತಾ ರೈತರ ಕಷ್ಟವನ್ನು ಅರಿತು ಅದರ ನಿವಾರಣೆಗೆ ಬೇಕಾದ ಅಗತ್ಯ ಕ್ರಮ ಕೈಗೊಳ್ಳುವುದು ಅಗತ್ಯ ಎನ್ನಿಸುತ್ತದೆ.
ತಕ್ಷಣ ಸರಕಾರ ಮಧ್ಯೆ ಪ್ರವೇಶಿಸಿ ಅಡಿಕೆಗೆ ನ್ಯಾಯಯುತವಾದ ಬೆಲೆಯನ್ನು ನಿರ್ಧರಿಸದೇ ಇದ್ದರೆ ಮೂಂದೆ ದೊಡ್ಡ ಗಂಡಾಂತರವೇ ಉಂಟಾಗಬಹುದು. ಯಾವ ಬೆಳೆಗಾರರೂ ಈ ರೀತಿಯ ಬೆಲೆಯ ನಿರೀಕ್ಷೆಯಲಿಲ್ಲ. ಆದರೆ ಸ್ಥಿರ ಬೆಲೆಯ ನಿರೀಕ್ಷೆಯಲ್ಲಿದ್ದಾರೆ. ಇದನ್ನು ರೈತರೂ ಸರಕಾರದ ಮಂತ್ರಿಮಹೋದಯರುಗಳಿಗೆ ಮನವರಿಕೆ ಮಾಡಿಕೊಡಬೇಕು. ಅವರೂ ಅರ್ಥ ಮಾಡಿಕೊಳ್ಳಬೇಕು.