ಅಡಿಕೆ ಮರಗಳ ಕಾಂಡವನ್ನು ಬಿಸಿಲಿನ ಘಾಸಿಯಿಂದ ರಕ್ಷಿಸಿದರೆ ಧೀರ್ಘಾವಧಿ ತನಕ ಫಸಲು ಕೊಡುತ್ತದೆ. ವರ್ಷ ವರ್ಷವೂ ಗಾಳಿಗೆ ಮರ ಬೀಳುವುದರಿಂದಾಗಿ ಉಂಟಾಗುವ ನಷ್ಟ ಕಡಿಮೆಯಾಗಿ ಇಳುವರಿ ಸ್ಥಿರವಾಗಿರುತ್ತದೆ . ಮರದ ಕಾಂಡಕ್ಕೆ ಸುಣ್ಣ ಬಳಿದರೆ ಕಾಂಡ ಹಾಳಾಗದೆ ಅಯುಸ್ಸು ಹೆಚ್ಚಿ ಇಳುವರಿಯು ಹೆಚ್ಚುತ್ತದೆ.
- ದಕ್ಷಿಣಾಯನ ಮುಗಿಯುವ ಮಕರ ಸಂಕ್ರಮಣದ ತನಕ ಸೂರ್ಯನ ಬಿಸಿಲು ಮರದ ಕಾಂಡಕ್ಕೆ ನೇರವಾಗಿ ಹೊಡೆದು ಮರ ಕಾಂಡ ಸೂರ್ಯ ಕಿರಣದ ಘ್ಹಾಸಿಗೆ ಒಳಗಾಗುತ್ತದೆ.
- ಅಂತಹ ಮರಗಳು ಬೇಗ ಹಾಳಾಗುತ್ತವೆ. ಒಂದು ವರ್ಷ ನೇರ ಬಿಸಿಲು ಬಿದ್ದರೆ ಸಾಕು, ಮುಂದಿನ ವರ್ಷ ಆ ಭಾಗದಲ್ಲಿನ ತೊಗಟೆ ಸತ್ತು ಹೋಗುತ್ತದೆ.
- ಇದು ಕ್ರಮೇಣ ಹೆಚ್ಚಾಗುತ್ತಾ ಹೋಗಿ ಮರದ ಒಂದು ಭಾಗ ಸಂಪೂರ್ಣ ಘಾಸಿಯಾಗಿ ಯಾವುದೇ ಸಮಯದಲ್ಲಿ ಅದು ಬೀಳಬಹುದು.
- ಈ ಕೆಲಸವನ್ನು ಮಳೆಗಾಲ ಕಳೆದ ತಕ್ಷಣ (ನವೆಂಬರ್ ತಿಂಗಳು) ಮಾಡಬೇಕು.
ಹೇಗೆ ತಡೆಯುವುದು:
- ಕೆಲವರು ಇದಕ್ಕೆ ನೆಡುವ ಕ್ರಮವನ್ನು ಬದಲಿಸಬೇಕು ಎನ್ನುತ್ತಾರೆ.
- ಆದರೆ ಅದರಿಂದ ಅಂಥಃ ಪ್ರಯೋಜನ ಇಲ್ಲ.
- ಅಡಿಕೆ ತೋಟ ಮಾಡುವಾಗ ದಕ್ಷಿಣ ಭಾಗ ಕಟ್ಟಿಕೊಂಡಿರುವ ಸ್ಥಳವನ್ನು ಆಯ್ಕೆ ಮಾಡಬೇಕು ಎಂಬುದು ನಮ್ಮ ಹಿರಿಯರ ಅಭಿಪ್ರಾಯ.
- ಆದರೆ ಈಗ ಅಂತಹ ಸ್ಥಳಗಳು ಕಡಿಮೆ.
- ದಕ್ಷಿಣ ಭಾಗದಲ್ಲಿ ಶೀಘ್ರವಾಗಿ ಬೆಳೆಯುವ ಮರಗಳಾದ ಅಕೇಶಿಯಾ- ಉಪ್ಪಳ್ಳಿಗೆ, ಮಹಾಘನಿ ಮುಂತಾದ ಮರ ಮಟ್ಟುಗಳನ್ನು ಬೆಳೆಸಬಹುದು.
- ಆ ಮರದ ಬೇರುಗಳು ಅಡಿಕೆ ತೋಟಕ್ಕೆ ಸುಳಿಯದಂತೆ ಕಾಲುವೆ ಮಾಡಿ ಸಂಪರ್ಕ ತಪ್ಪಿಸಬೇಕು.
- ಅಡಿಕೆ ಮರಗಳಿಗಿಂತ ಸಸಿಯನ್ನು ಕನಿಷ್ಜ್ಟ 4 ಮೀ. ದೂರದಲ್ಲಿ ನಾಟಿ ಮಾಡಬೇಕು.ಸಮೀಪ ಇದ್ದರೆ ಅದರ ಗೆಲ್ಲುಗಳು ಅಡ್ಡವಾಗುತ್ತದೆ.
- ವರ್ಷ ವರ್ಷ ಮಳೆಗಾಲ ಪ್ರಾರಂಭವಾಗುವಾಗ ಮರವನ್ನು ಟ್ರಿಮ್ಮಿಂಗ್ ಮಾಡಬೇಕು.
- ಇದೆಲ್ಲದರ ಬದಲಿಗೆ ಸುಲಭದ ವಿಧಾನ ಅಡಿಕೆ ಮರಗಳಿಗೆ ಸುಣ್ಣ ಬಳಿಯುವುದು. ಬಿಳಿ ಬಣ್ಣವನ್ನು ಬಳಿದಾಗ ಆ ಭಾಗದಲ್ಲಿ 5-10 ಡಿಗ್ರಿಯಷ್ಟು ಬಿಸಿ ಕಡಿಮೆಯಾಗುತ್ತದೆ.
- ಇದು ಮರದ ಎಲ್ಲಾ ರೀತಿಯ ಬೆಳವಣಿಗೆ ಅನುಕೂಲ.
- ಚಿಪ್ಪು ಸುಣ್ಣವನ್ನು ನೀರಿನಲ್ಲಿ ಕರಗಿಸಿ ಮರಕ್ಕೆ ಲೇಪನ ಮಾಡುವುದರಿಂದ ಮರದ ಕಾಂಡಕ್ಕೆ ಬಿದ್ದ ಬಿಸಿಲಿನ ಪ್ರಖರತೆ ಘ್ಹಾಸಿಯನ್ನು ತುಂಬಾ ಕಡಿಮೆ ಮಾಡುತ್ತದೆ.
- ಸ್ಪ್ರಿಂಕ್ಲರ್ ನೀರಾವರಿಯಲ್ಲಿ ಈ ರೀತಿಯಲ್ಲಿ ಸುಣ್ಣ ಬಳಿದಾಗ ಅದು ತೊಳೆದು ಹೋಗುತ್ತದೆ.
- ಅದರ ಬದಲಿಗೆ ಬಿಳಿ ಪ್ರೈಮರ್ ಪೈಂಟ್ ಲೇಪಿಸುವುದು ಸುಲಭ. ಇದರಿಂದ ಮರಕ್ಕೆ ಯಾವುದೇ ತೊಂದರೆ ಆಗುವುದಿಲ್ಲ.
- ಇದು ಎರಡು ವರ್ಷ ತನಕ ತೊಳೆದು ಹೋಗುವುದಿಲ್ಲ.
ಅನುಕೂಲಗಳು:
- ಮರದ ಕಾಂಡಕ್ಕೆ ಯಾವುದೇ ಹಾನಿ ಉಂಟಾಗುವುದಿಲ್ಲ.
- ಕಾಂಡದ ಎಲ್ಲಾ ಭಾಗಗಳಿಂದಲೂ ಶಿರಕ್ಕೆ ಆಹಾರ ಸರಬರಾಜು ಆಗುತ್ತದೆ.
- ಕಾಂಡದ ತೊಗಟೆ ತಂಪು ಇರುವ ಕಾರಣ ಮರಕ್ಕೆ ಯಾವುದೇ ಹಾನಿ ಉಂಟಾಗುವುದಿಲ್ಲ.
- ಕಾಂಡದ ಮೂಲಕ ಚಳಿಗಾಲ ಮುಗಿಯುವ ತನಕ ಮರ ಏರಿ ಹೂ ಗೊಂಚಲನ್ನು ಹಾನಿ ಮಾಡುವ ಬಸವನ ಹುಳು ಮೇಲೆ ಹೋಗುವುದಕ್ಕೆ ಆಗುವುದಿಲ್ಲ.
- ಕಾಂಡದ ಸಂರಕ್ಷಣೆ ಮಾಡಿದರೆ ಮರದ ಬಾಳ್ವಿಕೆ ಹೆಚ್ಚುತ್ತದೆ.
- ಇದರಿಂದ ಹೆಚ್ಚು ಸಮಯದ ತನಕ ಇಳುವರಿ ಪಡೆಯುತ್ತಿರಬಹುದು.
- ಗಾಳಿಗೆ ಮರ ಬೀಳುವುದು ಕಡಿಮೆಯಾಗುತ್ತದೆ.
- ಮರದ ಕಾಂಡ ಬಿಸಿ ಆಗದೇ ಇದ್ದರೆ ಅಡಿಕೆ ಮರದ ಹೂ ಗೊಂಚಲು ಒಣಗುವುದು, ಮಿಡಿ ಉದುರುವುದು ಮುಂತಾದ ಸಮಸ್ಯೆಗಳು ಕಡಿಮೆಯಾಗಿ ಇಳುವರಿ ಹೆಚ್ಚುತ್ತದೆ.
- ನೆಟ್ಟ ವರ್ಷದಿಂದಲೇ ಲೇಪನ ಮಾಡುವುದು ಅಗತ್ಯ. ಎಳೆಸಸಿಗೂ ಬಿಸಿಲಿನ ಘಾಸಿ ಆದರೆ ಅದರ ಬುಡ ಭಾಗವೇ ಹಾಳಾಗುತ್ತದೆ.ನೆರಳು ಬೀಳುವ ಕಡೆ ಲೇಪನ ಬೇಕಾಗಿಲ್ಲ. ಅನುಕೂಲ ಇದ್ದರೆ ಮಾಡಿದರೆ ಲಾಭವೇ ಹೊರತು ನಷ್ಟವಿಲ್ಲ.ಅಡಿಕೆ ಮರ ಮಾತ್ರವಲ್ಲ, ತೆಂಗು , ಇನ್ನಿತರ ಮರಮಟ್ಟುಗಳಿಗೂ ಈ ಸಮಯದಲ್ಲಿ ಕಾಂಡಕ್ಕೆ ಬಿಸಿಲಿನ ಶಾಖದಿಂದ ಆಗುವ ಘಾಸಿ ತಪ್ಪಿಸಿದರೆ ಮರಕ್ಕೆ ಒಳ್ಳೆಯದು.
ಹೇಗೆ ಲೇಪಿಸುವುದು:
- ಕೈಗೆಟಕುವವರೆಗೆ ಬ್ರಷ್ ಮೂಲಕ ಲೇಪನ ಮಾಡಬಹುದು.
- ನಂತರ ಗೋಡೆಗೆ ಕೊಡುವ ರೋಲರ್ ಬ್ರಷ್ ಅನ್ನು ಮರದ ಕಾಂಡಕ್ಕೆ ಸಮನಾಗಿ ಅರ್ಧ ಚಂದ್ರಾಕಾರದಲ್ಲಿ ಬಾಗಿಸಿ ಕೋಲಿಗೆ ಸಿಕ್ಕಿಸಿ ಲೇಪನ ಮಾಡಬಹುದು.
- ಗೋಡೆಗೆ ಲೇಪನ ಮಾಡುವಂತೆ ಎರಡು ಬಾರಿ ಕೋಟಿಂಗ್ ಮಾಡಿದರೆ ಅನುಕೂಲ ಹೆಚ್ಚು.
ಒಂದು ಅಡಿಕೆ ಮರ ನೆಟ್ಟು ಫಸಲು ಬರಲು ಸುಮಾರು 4 ವರ್ಷ ಬೇಕು.ಅದನ್ನು ಕೊಲ್ಲಲು ಒಂದು ಸೀಸನ್ ನ ಬಿಸಿಲು ಸಾಕು.ಆದ ಕಾರಣ ಬಿಸಿಲಿಂದ ರಕ್ಷಿಸುತ್ತಿದ್ದರೆ ಬಹಳ ಸಮಯದ ತನಕ ಮರದಿಂದ ಫಸಲು ಪಡೆಯುತ್ತಿರಬಹುದು.