ಅಡಿಕೆ ಗಿಡ ಮಾಡುವಾಗ ಬೀಜದ ಗೋಟು ಅಥವಾ ಹಣ್ಣು ಅಡಿಕೆಯನ್ನು ಗರಿಷ್ಟ ಪ್ರಮಾಣದಲ್ಲಿ ಮೊಳಕೆ ಬರುವಂತೆ ಮಾಡಲು ಕೆಲವು ಸರಳ ಕ್ರಮಗಳನ್ನು ಅನುಸರಿಸಬೇಕು. ಸಾಮಾನ್ಯವಾಗಿ ನಾವು 100 ಬೀಜಗಳನ್ನು ಮೊಳಕೆ ಬರಿಸಲು ಇಟ್ಟರೆ ಅದರಲ್ಲಿ 60-80 ರಷ್ಟು ಮಾತ್ರ ಮೊಳಕೆ ಪಡೆಯುತ್ತೇವೆ. ಇದು ನಾವು ಮೊಳಕೆಗೆ ಇಡುವ ಕ್ರಮ ಸರಿಯಿಲ್ಲದೆ ಆಗುವ ಸಮಸ್ಯೆ. ಸರಿಯಾದ ಮೊಳಕೆಗೆ ಇಡುವ ವಿಧಾನ ಹೀಗಿದೆ.
ಅಡಿಕೆ ತೋಟ ಇದ್ದವರು ಹಣ್ಣಾಗಿ ಬಿದ್ದು, ಹೆಕ್ಕಲು ಸಿಕ್ಕದೆ ಅವಿತುಕೊಂಡು ಬಾಕಿಯಾದ ಅಡಿಕೆ ಹೇಗೆ ತನ್ನಷ್ಟೆಕ್ಕೆ ಹುಟ್ಟಿಕೊಳ್ಳುತ್ತದೆ ಎಂಬುದನ್ನು ಒಮ್ಮೆ ಗಮನಿಸಿ. ಇದೇ ತತ್ವದ ಮೇಲೆ ನಾವು ಮೊಳಕೆ ಬರಿಸಿದರೆ 90% ಕ್ಕೂ ಹೆಚ್ಚು ಮೊಳಕೆ ಪಡೆಯಬಹುದು ಹಾಗೆಯೇ ಬೇಗನೆ ಮೊಳಕೆ ಒಡೆಯುವುದನ್ನು ಗಮನಿಸಬಹುದು. ಯಾವುದೇ ಒಂದು ಬೀಜ ನಾವು ಅದಕ್ಕೆ ಎಷ್ಟು ಸೋಪಾನ ಮಾಡಿ ಮೊಳಕೆ ಬರಿಸಲು ಪ್ರಯತ್ನಿಸುತ್ತೇವೆಯೋ ಅದು ಮೊಳಕೆ ಬಾರದೆ ಇರುವುದು ಜಾಸ್ತಿ. ಅದಕ್ಕೆ ಹಳ್ಳಿಯಲ್ಲಿ ಒಂದು ಮಾತು ಇದೆ. “ ಸಾಕಿದವನು ಸೇಕುವುದು ಹೆಚ್ಚು” ಎಂದು. ಹೆಚ್ಚು ಅನುಪಾನದಲ್ಲಿ ಬೆಳೆಸಿದರೆ ಅವರಿಗೆ ರೋಗ ರುಜಿನಗಳು ಹೆಚ್ಚು ಎಂದು.
ಎಂತಹ ಬೀಜ ಆಗಬೇಕು:
ಬೀಜ ಸಂಪೂರ್ಣವಾಗಿ ಹಣ್ಣಾಗಿರಬೇಕು. ಚೆನ್ನಾಗಿ ಹಣ್ಣಾದ ಅಡಿಕೆ ಗೋಟು ಕೇಸರಿ ಅಥವಾ ಕಿತ್ತಳೆ ಬಣ್ಣದಲ್ಲಿ ಇರುತ್ತದೆ. ಅರೆ ಹಣ್ಣಾದ ಗೋಟು ಹಳದಿ ಬಣ್ಣದಲ್ಲಿರುತ್ತದೆ. ಕೇಸರಿ ಬಣ್ಣ ಬರುವ ತನಕ ಬೆಳೆಯಲು ಬಿಟ್ಟು ನಂತರ ಅದನ್ನು ಬೀಜಕ್ಕೆ ಆಯ್ಕೆ ಮಾಡಬೇಕು. ಮೊದಲ ಕೊಯಿಲಿನ ಅಡಿಕೆ ಬೇಡ. ಎರಡನೇ ಗೊನೆ ಅಂದರೆ ಹೆಚ್ಚು ಕಾಯಿಗಳು ಇರುವ ಗೊನೆ ಆದರೆ ಒಳ್ಳೆಯದು. ಮೂರನೇ ಗೊನೆ ಚೆನ್ನಾಗಿದ್ದರೆ ಅದನ್ನೂ ಬಳಕೆ ಮಾಡಬಹುದು. ನಾಲ್ಕನೇ ಗೊನೆ ಬೇಡ. ಎರಡನೇ ಕೊಯಿಲಿನ ಅಡಿಕೆ ಮೊಳಕೆ ಬರುವುದು ಸ್ವಲ್ಪ ನಿಧಾನ.ಮೂರನೆಯದ್ದು ಬೇಗ. ಕಾರಣ ಚಳಿ ವಾತಾವರಣ ಇರಬಹುದು. ಆಯ್ಕೆ ಮಾಡುವ ಮರದ ಗರಿಗಳನ್ನು ಗಮನಿಸಿ. ಎಲೆ ಚುಕ್ಕೆ ರೋಗ ಚಿನ್ಹೆ ಇದ್ದರೆ ಆ ಮರದ ಬೀಜ ಬೇಡ. ಹೆಚ್ಚಾಗಿ ಹೇಳಬೇಕೆಂದರೆ ಆ ತೋಟದ ಬೀಜವೂ ಬೇಡ.

ಬೀಜಕ್ಕೆ ಇಡುವ ಮುಂಚೆ ಏನು ಮಾಡಬೇಕು:
ಬೀಜದ ಅಡಿಕೆಯನ್ನು ಸಾಧ್ಯವಾದರೆ ಒಂದು ಎರಡು ದಿನ ನೆರಳಿನಲ್ಲಿ ಒಣಗಿಸಿ. ಆ ನಂತರ ಅದನ್ನು ಪಾತಿಯಲ್ಲಿ ಬಿತ್ತುವುದು. ಬೀಜಗಳಲ್ಲಿ ದೋಷ ಕಂಡು ಬಂದರೆ ಅದನ್ನು ಬಿತ್ತನೆಗೆ ಬಳಸಬೇಡಿ.ಸಧ್ಯದ ಪರಿಸ್ಥಿತಿಯಲ್ಲಿ ಯಾವುದಾದರೂ ಶಿಲೀಂದ್ರ ನಾಶಕ ದ್ರಾವಣದಲ್ಲಿ (ಬಾವಿಸ್ಟಿನ್) ಅದ್ದಿ 5 ನಿಮಿಷ ಕಳೆದು ಪಾತಿಯಲ್ಲಿ ಬಿತ್ತನೆ ಮಾಡುವುದು ಉತ್ತಮ. ಬೀಜದ ಅಡಿಕೆಯನ್ನು ಪಾಲಿಥೀನ್ ಚೀಲದಲ್ಲಿ ನೇರವಾಗಿ ಬಿತ್ತನೆ ಮಾಡುವುದು ಬೇಡ. ಪಾತಿಯಲ್ಲೇ ಬೆಳೆಸಿ ಮೊಳಕೆ ಸ್ವಲ್ಪ ಕಣ್ಣಿಗೆ ಕಾಣುವ ಹಂತಕ್ಕೆ ಬಂದಾಗ ಅದನ್ನು ಪಾಲಿಥೀನ್ ಚೀಲಕ್ಕೆ ವರ್ಗಾಯಿಸಬೇಕು.

ಪಾತಿ ಮತ್ತು ಬಿತ್ತನೆ:
ಪಾತಿ ಹೇಗಿರಬೇಕು ಎಂಬುದೇ ಇಲ್ಲಿ ಇರುವ ಪ್ರಮುಖ ವಿಚಾರ. ಬೀಜದ ಅಡಿಕೆ ಮೊಳಕೆ ಬರಲು ಪಾತಿ ಎಂದರೆ ಅದು ಬರೇ ನೆಲವಾದರೂ ಸಾಕು. ತೋಟದಲ್ಲಿ ದಿನಾ ನೀರು ಬೀಳುವ ಜಾಗದಲ್ಲಿ ಅಡಿಕೆಯನ್ನು ಹತ್ತಿರ ಹತ್ತಿರ ಇಟ್ಟು ಅದರ ಮೇಲೆ ಬಾಳೆಯ ಒಣಗಿದ ಗರಿಯನ್ನು,ಅಥವಾ ನೆನೆದ ಅಡಿಕೆ ಗರಿಯನ್ನು ಮುಚ್ಚಿ. ನೆಲ ಗಟ್ಟಿಯಾಗಿದ್ದರೆ ಸ್ವಲ್ಪ ಕೆರೆದು ಮೆದು ಮಾಡಿಕೊಳ್ಳಬಹುದು. ಮೊಳಕೆಗೆ ಇಟ್ಟದ್ದು ಮೊಳಕೆ ಹೊರಗೆ ಕಾಣುವಾಗ ಬೇರು ಸುಮಾರು 3-4 ಇಂಚು ಬೆಳೆದಿರುತ್ತದೆ. ಆ ಬೇರುಗಳು ತುಂಡಾಗದಿರುವಂತೆ ತಳ ಭಾಗದ ಮಣ್ಣು ಸಡಿಲವಾಗಿದ್ದರೆ ಉತ್ತಮ. ಪಾತಿಯಲ್ಲಿ ಬಿತ್ತನೆ ಮಾಡುವಾಗ ನೇರವಾಗಿ ಇಡುವ ಬದಲು ಅಡ್ಡಕ್ಕೆ ಇಡುವುದು ಉತ್ತಮ. ಬಿದ್ದ ಅಡಿಕೆ ಹೇಗೆ ಇರುತ್ತದೆಯೋ ಅದೇ ರೀತಿ ಇದ್ದರೆ ಮೊಳಕೆ ಬರಲು ಅನುಕೂಲವಾಗುತ್ತದೆ. ನೀರು ಹೆಚ್ಚಾದರೆ ಬ್ರೂಣ ಭಾಗ ಕೊಳೆಯುವ ಸಾಧ್ಯತೆ ಹೆಚ್ಚು. ಅಡ್ದಲಾಗಿ ಇಟ್ಟರೆ ಆ ಸಾಧ್ಯತೆ ಕಡಿಮೆ. ಅಡಿಕೆಯ ಮೇಲ್ಭಾಗವನ್ನು ಮಣ್ಣಿನಿಂದ ಮುಚ್ಚಬಾರದು. ಅಡಿಕೆ ಹೊರಗೆ ಕಾಣುವಂತೆ ಮೊಳಕೆಗೆ ಇಡಬೇಕು.ಮೇಲ್ಭಾಗ ಒಣಗದಂತೆ ಒಣ ಬಾಳೆ ಗರಿ ಮುಚ್ಚಿದರೆ ಸಾಕು. ಮಣ್ಣು ಮುಚ್ಚಿದರೆ ಮೊಳಕೆ ಬರುವ ಪ್ರಮಾಣ ಕಡಿಮೆಯಾಗುತ್ತದೆ.

ರೈತರು ಅವರವರಿಗೆ ಬೇಕಾದಷ್ಟು ಗಿಡಮಾಡಿಕೊಳ್ಳಬೇಕಾದರೆ ಆಯಾ ಮರದ ಬುಡದಲ್ಲಿ ಅಡಿಕೆ ಇಟ್ಟು ಅದಕ್ಕೆ ಗರಿ ಮುಚ್ಚಿಟ್ಟರೆ ಚೆನ್ನಾಗಿ ಮೊಳಕೆ ಬರುತ್ತದೆ. ಹನಿ ನೀರಾವರಿ ವಿಧಾನ ಇದ್ದವರಿಗೆ ಇದು ಕಷ್ಟವಾದೀತು. ಸ್ಪ್ರಿಂಕ್ಲರ್ ನೀರಾವರಿ ಹೊಂದಿದವರಿಗೆ ಅನುಕೂಲ.

ಯಾವ ಮೊಳಕೆ ಉತ್ತಮ:
ಪಾತಿಯಲ್ಲಿ ಹಾಕಿದ ಅಡಿಕೆ ಸರಿಯಾಗಿ ತೇವಾಂಶ ಒದಗಿಸುತ್ತಾ ಇದ್ದರೆ 40-50 ದಿನಕ್ಕೆ ಮೊಳಕೆ ಬರುತ್ತದೆ. ಒಟ್ಟಿಗೆ ಮೊಳಕೆಗೆ ಇಟ್ಟದ್ದು ಒಟ್ಟಿಗೆ ಗರಿಷ್ಟ ಪ್ರಮಾಣದಲ್ಲಿ ಮೊಳಕೆ ಬಂದಿರುತ್ತದೆ. ಮೊಳಕೆ ಸುಮಾರು ½ ಇಂಚು ಕಂಡಾಕ್ಷಣ ಅದನ್ನು ತೆಗೆದು ಪಾಲಿಥೀನ್ ಚೀಲಕ್ಕೆ ವರ್ಗಾಯಿಸಬೇಕು. ಅಡಿಕೆಯಲ್ಲಿ ಎರಡು ಅಥವಾ ಮೂರು ಬೇರುಗಳು ಇರುತ್ತವೆ. ಆ ಬೇರುಗಳು ತುಂಡಾಗದಂತೆ ನೋಡಿಕೊಳ್ಳಿ. ಹಾಗೆಯೇ ಬೀಜವನ್ನು ಇಟ್ಟು ಬೇರುಗಳು ಮುಳುಗುವಂತೆ ಮಣ್ಣು ಹಾಕಿ. ಆಡಿಕೆಯನ್ನೇ ಒತ್ತಿ ಇಡಬೇಡಿ. ಇಲ್ಲಿಯೂ ಅಡಿಕೆ ಪೂರ್ತಿ ಮುಳುಗಿರಬಾರದು ¼ ಭಾಗ ಅಡಿಕೆ ಮೇಲೆ ಕಾಣುವಂತೆ ಇಡಬೇಕು. ನಂತರ ಒಂದು ಎಲೆ ಬಂದ ಮೇಲೆ ಬೇಕಾದರೆ ಸ್ವಲ್ಪ ಕಾಂಪೋಸ್ಟು ಹಾಕಬಹುದು. 40-60 ದಿನಗಳ ಒಳಗೆ ಮೊಳಕೆ ಬಂದದ್ದನ್ನು ಮಾತ್ರ ಸಸಿ ಮಾಡಿಕೊಳ್ಳಿ. ನಂತರ ಬಂದದ್ದನ್ನು ಬಳಸಬೇಡಿ.
