ಅಕ್ಟೋಬರ್ ತಿಂಗಳಲ್ಲಿ ನವರಾತ್ರೆ. ದೀಪಾವಳಿ ಹಬ್ಬಗಳ ಕಾರಣ ಅಡಿಕೆ ಧಾರಣೆ ಏರಿಕೆ ಕಾಣಬಹುದು ಎಂಬ ಆಶಯ ಇತ್ತು. ಆದರೆ ಅದು ನೀರಸವಾಗಿ ಮುಂದುವರಿದಿದೆ. ಮುಂದೆ ಏರಿಕೆ ಆಗಬಹುದೇ ಅಥವಾ ಇಳಿಕೆಯೇ ಎಂಬ ಅನುಮಾನ ಬೆಳೆಗಾರರನ್ನು ಸಹಜವಾಗಿ ಕಾಡುತ್ತಿದೆ. ಕೆಲವು ಬೆಳವಣಿಗೆಗಳ ಪ್ರಕಾರ ಕೆಂಪಡಿಕೆ ಧಾರಣೆ ಇನ್ನು ಒಂದೆರಡು ತಿಂಗಳ ಕಾಲ ಏರಿಕೆ ಆಗದೆ ಮುಂದುವರಿಯುವ ಸಾಧ್ಯತೆ ಇದೆ. ಚಾಲಿ ಸ್ವಲ್ಪ ಏರಿಕೆ ಆಗುವ ಲಕ್ಷಣ ಕಾಣಿಸುತ್ತಿದೆ.
ಚಾಲಿಗೆ 500 ಆಗುತ್ತದೆ ಎಂದು ಕಾದು ಕಾದು ಕಡೆಗೆ 480-485 ಕ್ಕೆ ಒಂದಷ್ಟು ಜನ ಮಾರಾಟ ಮಾಡಿದ್ದಾರೆ. ಕೆಲವು ಬೆಳೆಗಾರರು ಆದದ್ದು ಆಗಲಿ ಎಂದು ಮಾರದೆ ಉಳಿಸಿಕೊಂಡಿದ್ದಾರೆ. ಕೆಂಪಡಿಕೆಗೆ 60,000 ದಾಟುತ್ತದೆ ಎಂದು ದಾಸ್ತಾನು ಇಟ್ಟವರ ನಿರೀಕ್ಷೆ ಹುಸಿಯಾಗಿದೆ. ದರ ಸುಮಾರು 12% ದಷ್ಟು ಹಿಂದೆ ಬಂದಿದೆ.
ಅಕ್ಟೋಬರ್ ತಿಂಗಳಲ್ಲಿ ಕೆಂಪಡಿಕೆ ಮಾರುಕಟ್ಟೆಯಲ್ಲಿ ಭಾರೀ ಸಂಚಲನ ಉಂಟಾಗಿದೆ. ಬಿಡ್ ಮಾಡುವವರೇ ಇಲ್ಲದ ಸ್ಥಿತಿ ಉಂಟಾಗಿದ್ದು. ಕ್ವಿಂಟಾಲಿಗೆ ಸರಾಸರಿ 50,000 ದಲ್ಲಿ ಇದ್ದುದು ಇಳಿಕೆ ಕಂಡು 47,000 ದ ಸನಿಹಕ್ಕೆ ಬಂದಿದೆ.ಯಾವ ಕಾರಣಕ್ಕೆ ಇಳಿಕೆ ಆಗಿದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲವಾದರೂ, ಕೆಲವು ಮೂಲಗಳ ಪ್ರಕಾರ ಬೆಳೆಗಾರರಲ್ಲಿ ದಾಸ್ತಾನು ಇದೆ. ಇದನ್ನು 60,000 ದಾಟಬಹುದು ಎಂಬ ನಿರೀಕ್ಷೆಯಲ್ಲಿ ಇಟ್ಟುಕೊಂಡಿದ್ದಾರೆ. ಅದನ್ನು ಗುರಿಯಾಗಿಸಿಕೊಂಡೇ ದರ ಏರಿಸದೆ ದಿನದಿಂದ ದಿನಕ್ಕೆ ಸ್ವಲ್ಪ ಸ್ವಲ್ಪ ಕಡಿಮೆ ಮಾಡುತ್ತಾ ಬರಲಾಗುತ್ತಿದೆ ಎನ್ನುತ್ತಾರೆ.
- ಕೆಲವು ಮೂಲಗಳ ಪ್ರಕಾರ ಹಳೆಯ ದೊಡ್ದ ದೊಡ್ಡ ಖರೀದಿದಾರರು ಈಗ ತೆರೆಮರೆಗೆ ಸರಿದಿದ್ದಾರೆ.
- ಮಾರುಕಟ್ಟೆಯಲ್ಲಿ ಖರೀದಿಗೆ ಏಕಸ್ವಾಮ್ಯ ಉಂಟಾಗಿದೆ. ಹಾಗಾಗಿ ಅವರ ಸ್ಟಾಕು ಕ್ಲೀಯರ್ ಮಾಡಬೇಕಾದ ಸಮಯದಲ್ಲಿ ಮಾತ್ರ ದರ ಏರಿಕೆ ಆಗುತ್ತದೆ.
- ಕೆಂಪಡಿಕೆ ಮಾರುಕಟ್ಟೆ ಸಂಪೂರ್ಣವಾಗಿ ಸಟ್ಟಾ ವ್ಯಾಪಾರವಾಗಿದೆ ಎನ್ನುತ್ತಾರೆ.
- ಯಾರ ಕಲ್ಪನೆಗೆ ಸಿಗದ ತರಹ ಏರಿಕೆ ಆಗಿ ಇಳಿಕೆಯಾಗುತ್ತದೆ. ( ಈ ಹಿಂದೆ ಆದಂತೆ).
- ದಿನಕ್ಕೆ 1 ಲೋಡ್ (20 ಟನ್) ಅಡಿಕೆ ಖರೀದಿ ಆಗಬೇಕಿದ್ದರೆ ಸುಮಾರು 10 ಕೋಟಿ ಬೇಕಾಗುತ್ತದೆ ಎಂದಿಟ್ಟುಕೊಳ್ಳೋಣ.
- ತಿಂಗಳಿಗೆ 300 ಕೋಟಿ. ಸುಮಾರು 1000 ಕೋಟಿ ಇಟ್ಟುಕೊಂಡು 3-4 ತಿಂಗಳ ಕಾಲ ಖರೀದಿಸುತ್ತಾ ದಾಸ್ತಾನು ಇಟ್ಟುಕೊಂಡರೆ, ಕ್ವಿಂಟಾಲಿಗೆ 5000 ಏರಿಕೆ ಕಂಡರೂ 12% ಲಾಭವಾಗುತ್ತದೆ.
- ಸಟ್ಟಾ ವ್ಯಾಪಾರ ಎಂದರೆ ಇದೇ. ಸ್ಟಾಕು ಕ್ಲೀಯರ್ ಮಾಡುವಾಗ ದರ ಏರಿಕೆ ಮಾಡಿದರೆ ಬೆಳೆಗಾರರಿಂದ ಅಡಿಕೆ ಬರುವುದಿಲ್ಲ.
- ದಾಸ್ತಾನು ಇಟ್ಟವರು ಸಲೀಸಾಗಿ ಮಾರಾಟ ಮಾಡಲಿಕ್ಕಾಗುತ್ತದೆ.
- ಇದೇ ತಂತ್ರದಲ್ಲಿ ಈಗ ಕೆಂಪಡಿಕೆ ವ್ಯಾಪಾರ ಆಗುತ್ತಿದೆ ಎಂಬುದಾಗಿ ಹೇಳುವವರೂ ಇದ್ದಾರೆ.
- ಇಷ್ಟೊಂದು ದುಡ್ಡು, ಹಾಗೂ ಭಾರೀ ಮೊತ್ತದ ದಾಸ್ತಾನುಗಳ ಹಿಂದೆ ರಾಜಕೀಯ ಶಕ್ತಿಗಳೂ ಕೆಲಸ ಮಾಡುತ್ತಿರಬಹುದು.
- ಇದೇ ಕಾರಣಕ್ಕೆ ಈಗ ಇಳಿಕೆ ಪ್ರಾರಂಭವಾಗಿ 1 ತಿಂಗಳು ಆಗಿದೆ. ಇನ್ನು 3-4 ತಿಂಗಳ ತನಕ ಏರಿಕೆ ಅಗದೆ ಹೀಗೆ ಮುಂದುವರಿಯಬಹುದು.
- ಈಗಾಗಲೇ ಕೊಯಿಲು ಪ್ರಾರಂಭವಾಗಿದ್ದು, ಮಾರುಕಟ್ಟೆಗೆ ಅಡಿಕೆ ಬರಲಾರಂಭಿಸಿದೆ.
- ವಾತಾವರಣ ಕೊಯಿಲಿಗೆ ಅನುಕೂಲಕರವಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಎಲ್ಲಾ ಕಡೆಯಲ್ಲೂ ಒಂದು ತಿಂಗಳು ಮುಂಚೆ ಕೊಯಿಲು ಪ್ರಾರಂಭವಾಗುವ ಸಾಧ್ಯತೆ ಇದೆ.
- ಹಾಗಾಗಿ ಮಾರುಕಟ್ಟೆಯ ಕ್ರಮದಂತೆ ಕೊಯಿಲಿನ ಸಮಯದಲ್ಲಿ ದರ ಏರಿಕೆ ಸಾಧ್ಯತೆ ಕಡಿಮೆ.
- ಕೆಂಪಡಿಕೆ ಬೆಳೆ ಪ್ರದೇಶ ಹೆಚ್ಚಳವಾಗಿದ್ದು, ಕಳೆದ ಒಂದೆರಡು ವರ್ಷಗಳಿಂದ ಮಾರುಕಟ್ಟೆಗೆ ಗರಿಷ್ಟ ಪ್ರಮಾಣದಲ್ಲಿ ಅಡಿಕೆ ಬರುತ್ತಿದೆ.
- ವ್ಯಾಪಾರದ ಆಟಗಳು ಹೆಚ್ಚಾಗಿ ಕೆಂಪಡಿಕೆಯಲ್ಲೇ ನಡೆಯುವುದು.
- ಕಾರಣ ಇದರ ಉತ್ಪಾದನೆ ಹೆಚ್ಚು ಹಾಗೆಯೇ ವಿಲೇವಾರಿಯೂ ಸುಲಭ.ಕೆಲವೇ ಕೆಲವು ಗುಟ್ಕಾ ಫ್ಯಾಕ್ಟರಿಗಳು ಇರುವ ಕಾರಣ ಅಲ್ಲಿಗೆ ಒಂದೊಂದಕ್ಕೆ ದಿನಕ್ಕೆ 1-2 ಲೋಡ್ ಗೂ ಹೆಚ್ಚು ಅಡಿಕೆ ಬೇಕಾಗುತ್ತದೆ.
ಮುಂದೆ ದರ ಏನಾಗಬಹುದು?
- ಚಾಲಿ ಮಾರುಕಟ್ಟೆಯಲ್ಲಿ ಹೆಚ್ಚಿನ ಆಟಗಳು ನಡೆಯುವುದಿಲ್ಲ. ಇದು ಹೆಚ್ಚಾಗಿ ಚಿಲ್ಲೆರೆ ಚಿಲ್ಲರೆ ಮಾರಾಟವಾಗುವ ಕಾರಣ ಅದು ಸ್ವಲ್ಪ ಕಷ್ಟದ ವ್ಯವಹಾರ.
- ಹಾಗಾಗಿ ದರ ಇಳಿಕೆ ಸಾಧ್ಯತೆ ಕಡಿಮೆ. ಈ ನವೆಂಬರ್ ಡಿಸೆಂಬರ್ ತಿಂಗಳಲ್ಲಿ ಸ್ವಲ್ಪ ಏರಿಕೆ ಆಗುವ ಸಂಭವ ಹೆಚ್ಚು ಇದೆ.
- ಈಗಾಗಲೇ ಎರಡು ತಿಂಗಳಿಂದ ಮಾರುಕಟ್ಟೆ ಸ್ಟಡಿಯಾಗಿ ಮುಂದುವರಿದಿದ್ದು, ಸಾಂಸ್ಥಿಕ ಖರೀದಿದಾರರಲ್ಲಿ ದಾಸ್ತಾನು ಇದೆ.
- ಖಾಸಗಿಯವರ ದರಕ್ಕೂ ಸಾಂಸ್ಥಿಕ ಖರೀದಿದಾರರಿಗೂ ದರ ವ್ಯತ್ಯಾಸ ಇಲ್ಲದೆ ಸಮ ಸಮ ಇದೆ.
- ಕೆಲವು ಖಾಸಗಿ ಖರೀದಿದಾರರು ಹೆಚ್ಚು ಬೆಲೆ ಸೂಚಿಸುತ್ತಿದ್ದಾರೆಯಾದರೂ ಸಾರಾಸರಿ ದರ ಸಾಂಸ್ಥಿಕ ಖರೀದಿದಾರರಿಗೆ ಸಮನಾಗಿಯೇ ಇದೆ.
- ಹಾಗಾಗಿ ಈಗ ಖರೀದಿ ಮಾಡಿದ್ದನ್ನು ಲಾಭದಾಯಕವಾಗಿ ಮಾರಾಟ ಮಾಡಬೇಕಿದ್ದರೆ ಇನ್ನು ಸ್ವಲ್ಪ ದರ ಏರಿಕೆ ಮಾಡಲೇ ಬೇಕು.
- ಜೊತೆಗೆ ಮಾರುಕಟ್ಟೆಗೆ ಮಾಲು ಬರುತ್ತಿಲ್ಲ. ಆದ ಕಾರಣ ಎರಡು ತಿಂಗಳಲ್ಲಿ ಕಿಲೊ ಮೇಲೆ ರೂ. 10 ರಷ್ಟು ಏರಿಕೆ ಆಗುವ ಸಾಧ್ಯತೆ ಇದೆ.
ಕೆಂಪಡಿಕೆ ಮಾರುಕಟ್ಟೆ ಖರೀದಿದಾರರ ಸ್ಟಾಕು ಭರ್ತಿ ಆದ ತಕ್ಷಣ ಏರಿಕೆ ಪ್ರಾರಂಭವಾಗುತ್ತದೆ.ಇದು ಯಾವಾಗಲೂ ಆಗಬಹುದು. ಆ ತನಕ ಹೊಸ ಹೊಸ ಸುದ್ದಿಗಳ ಮೂಲಕ ಬೆಳೆಗಾರರನ್ನು ಗೊಂದಲಕ್ಕೆ ಈಡು ಮಾಡಲೂ ಬಹುದು. ಈ ಹಿಂದಿನ ಮಾರುಕಟ್ಟೆ ಚಿತ್ರಣವನ್ನು ಗಮನಿಸಿದಾಗ ಯಾವಾಗ ಧಾರಣೆ ಏರಿಕೆ ಆಗುತ್ತದೆಯೋ ಆಗ ಬೇರೆ ದೇಶದಿಂದ ಆಮದು ಆದ ಸುದ್ದಿಯಾಗುತ್ತದೆ. ಪ್ರತೀ ಸಾರಿಯೂ ಒಂದೊಂದು ಹೊಸ ಸುದ್ದಿಗಳು. ಈ ಸುದ್ದಿಗಳ ಸತ್ಯಾಸತ್ಯತೆ ಎಷ್ಟು ಎಂಬುದು ಯಾರಿಗೂ ತಿಳಿಯದು. ಈಗಿನ ದರಕ್ಕಿಂತ 10-12% ಏರಿಕೆ ಆಗುವ ಸಾಧ್ಯತೆ ಇದೆ.
ಸುದ್ದಿಗಳು ಮತ್ತು ಅಡಿಕೆ ಮಾರುಕಟ್ಟೆ:
- ಸುದ್ದಿಗಳ ಮೂಲಕ ಬೆಳೆಗಾರರಿಗೆ ಗೊಂದಲ ಉಂಟಾಗುವಂತೆ ಮಾಡುವುದು ಬಹಳ ಹಿಂದಿನಿಂದಲೂ ನಡೆದುಬಂದ ಕ್ರಮ.
- ಈ ಸುದ್ದಿಗಳನ್ನು ಯಾರು ಹರಿ ಬಿಡುತ್ತಾರೆಯೋ ಇದೂ ಸಹ ಅಜ್ಞಾತ. ಗುಟ್ಕಾ ನಿಷೇಧ, ಆಮದು, ಹಸಿಅಡಿಕೆ ಇವೆಲ್ಲಾ ಬರೇ ಸುದ್ದಿಗಳು ಮಾತ್ರ .
- ಇದರಿಂದ ಬೆಲೆಯ ಮೇಲೆ ತಾತ್ಕಾಲಿಕ ಪರಿಣಾಮ ಉಂಟಾಗುತ್ತದೆಯೇ ಹೊರತು ಬೇರೇನೂ ಆಗುವುದಿಲ್ಲ.
- ಸುದ್ದಿಗಳ ಸೃಷ್ಟಿಯೇ ದರ ಇಳಿಕೆ ಮಾಡುವುದೇ ಆಗಿರುತ್ತದೆ.
- ಅಡಿಕೆ ಬೆಳೆಯ ಹಿಂದೆ ಬರೇ ಸಮಾನ್ಯ 1-2 ಎಕರೆ ಬೆಳೆ ಪ್ರದೇಶ ಹೊಂದಿದ ರೈತರಲ್ಲದೆ ನೂರಾರು ಎಕ್ರೆ ಹೊಂದಿದ ರಾಜಕಾರಣಿಗಳೂ ಇದ್ದಾರೆ.
- ಇವರೂ ಲಾಭದ ಉದ್ದೇಶಕ್ಕಾಗಿಯೇ ತೋಟಮಾಡಿದವರಾಗಿರುತ್ತಾರೆ.
- ಹಾಗಾಗಿ ಬೆಳೆಗಾರರಿಗೆ ರಾಜಕೀಯ ಬೆಂಬಲವೂ ಇದೆ. ಬೇಡಿಕೆ ಇದೆ. ಬಳಕೆದಾರರೂ ಕಡಿಮೆ ಆಗಿಲ್ಲ. ದರ ಕುಸಿತದ ಭಯವೂ ಇಲ್ಲ.
ಎಲ್ಲೆಲ್ಲಿ ಯಾವ ದರ ಇತ್ತು:
- ರಾಜ್ಯದ ಬೇರೆ ಬೇರೆ ಕಡೆ ಚಾಲಿಅಡಿಕೆ ಮಾರುಕಟ್ಟೆ ಧಾರಣೆ ಸ್ಥಿರವಾಗಿ ಇತ್ತು. ದಕ್ಷಿಣ ಕನ್ನಡದ ಕಾರ್ಕಳ, ಬೆಳ್ತಂಗಡಿ, ಬಂಟ್ವಾಳ, ಪುತ್ತೂರು, ಸುಳ್ಯ, ಮಂಗಳೂರು, ಕುಂದಾಪುರ ಇಲ್ಲೆಲ್ಲಾ ಹೊಸತು ಕ್ವಿಂಟಾಲಿಗೆ 38000 -38,500 ತನಕವೂ, ಸಿಂಗಲ್ ಚೋಲ್ ಕ್ವಿಂಟಾಲಿಗೆ 48000-49000 ತನಕವೂ ಡಬ್ಬಲ್ ಚೊಲ್ 55,000-56000 ತನಕವೂ ಇತ್ತು.
- ಕೆಂಪಡಿಕೆ ದರ ಇಳಿಕೆ ಆದ ಕಾರಣ ಪಟೋರಾ, ಉಳ್ಳಿಗಡ್ಡೆ, ಕರಿಕೋಕಾ ದರಗಳು ಸ್ವಲ್ಪ ಇಳಿಕೆಯೇ ಆಗಿದೆ.ಪಟೋರಾ ದರ 25,000-38,500 ತನಕ ಉಳ್ಳಿಗಡ್ಡೆ 15,000-28,500 ಕರಿಕೋಕಾ ದರ 18,000-27,500 ಇದೆ.ಖಾಸಗಿಯವರ ದರ ಕೆಲವು ಕಡೆ ಗುಣಮಟ್ಟದ ನೆವದಲ್ಲಿ ಕಡಿಮೆ ಇದೆ.
- ಕೆಂಪಡಿಕೆ ಮಾರುಕಟ್ಟೆಯಾದ ಚಿತ್ರದುರ್ಗ( ಭೀಮಸಮುದ್ರ) ದಾವಣಗೆರೆ, ಚೆನ್ನಗಿರಿ, ಭದ್ರಾವತಿ, ಸಿದ್ದಾಪುರ, ಶಿರಸಿ, ಸಾಗರ, ತೀರ್ಥಹಳ್ಳಿ, ಶಿವಮೊಗ್ಗಗಳಲ್ಲಿ ಇಂದು ರಾಶಿ ದರ ಸ್ವಲ್ಪ ಇಳಿಕೆಯಾಗಿದೆ.
- ಚಿತ್ರದುರ್ಗದಲ್ಲಿ ಕನಿಷ್ಟ 46099, ಗರಿಷ್ಟ 49159, ಸರಾಸರಿ 47673
- ಭದ್ರಾವತಿ: ಕನಿಷ್ಟ 45199, ಗರಿಷ್ಟ 48629, ಸರಾಸರಿ 48022
- ಚೆನ್ನಗಿರಿ: ಕನಿಷ್ಟ 46099, ಗರಿಷ್ಟ 49159, ಸರಾಸರಿ 47673
- ಸಾಗರ: ಕನಿಷ್ಟ 36899, ಗರಿಷ್ಟ 49019, ಸರಾಸರಿ 48699
- ಶಿರಸಿ: ಕನಿಷ್ಟ 44689, ಗರಿಷ್ಟ 48099, ಸರಾಸರಿ 47315
- ಶಿವಮೂಗ್ಗ: ಕನಿಷ್ಟ 44009, ಗರಿಷ್ಟ 49129, ಸರಾಸರಿ 47690
- ತೀರ್ಥಹಳ್ಳಿ: ಕನಿಷ್ಟ 37099, ಗರಿಷ್ಟ 48499, ಸರಾಸರಿ 48319
- ಯಲ್ಲಾಪುರ: ಕನಿಷ್ಟ 48001, ಗರಿಷ್ಟ 53919, ಸರಾಸರಿ 50969
- ಗುಣಮಟ್ಟದ ಸರಕು ಸ್ವಲ್ಪ ದರ ಕುಸಿತವಾಗಿದೆ.ರೂ. 60019, 796400, 69069 ಖರೀದಿ ನಡೆದಿದೆ. ಯಲ್ಲಾಪುರದಲ್ಲಿ ಅಪಿ ಕ್ವಿಂಟಾಲಿಗೆ ರೂ. 54179, 82099, 57369 ಇತ್ತು. ಯಲ್ಲಾಪುರದಲ್ಲಿ ಅಡಿಕೆ ಬರುವ ಪ್ರಮಾಣ ತುಂಬಾ ಕಡಿಮೆ ಮತ್ತು ಇಲ್ಲಿನ ಗಾತ್ರ ದೊಡ್ಡದಾದ ಕಾರಣ ದರ ಸ್ವಲ್ಪ ಹೆಚ್ಚು ಇರುತ್ತದೆ.
ಬೆಳೆಗಾರರು ಏನು ಮಾಡಬೇಕು:
ಅಡಿಕೆ ಮಾರುಕಟ್ಟೆಗೆ ದೊಡ್ಡ ದೊಡ್ಡ ಕುಳಗಳು ಪ್ರವೇಶ ಆದಂತೆ ಕಾಣಿಸುತ್ತದೆ. ಈಗಿನ ದರದಲ್ಲಿ ದಿನಕ್ಕೆ 5-10 ಕೋಟಿಗೂ ಹೆಚ್ಚಿನ ಮೊತ್ತವನ್ನು ಹೂಡಿಕೆ ಮಾಡಿ, ದಾಸ್ತಾನು ಇಟ್ಟು,ಕನಿಷ್ಟ 10% ದಷ್ಟಾದರೂ ಲಾಭದಲ್ಲಿ ಮಾರಾಟ ಮಾಡಬೇಕಿದ್ದರೆ ನೂರಾರು ಕೋಟಿ ಬೇಕಾಗುತ್ತದೆ.ಇಷ್ಟಕ್ಕೂ ವ್ಯಾಪಾರ ಬಹುತೇಕ ದೋ ನಂಬ್ರ ವ್ಯವಹಾರವೇ ಆಗಿರುತ್ತದೆ. ಮುಂಗಡ ಪಾವತಿಸಿ ವ್ಯವಹಾರ ನಡೆಯುವುದು ತೀರಾ ಕಡಿಮೆ. ಹೀಗಿರುವಾಗ ಇದಕ್ಕೆ ಇಳಿಯುವ ವ್ಯಾಪಾರಿಗಳೂ ಅಷ್ಟೇ ಚಾಣಾಕ್ಷರಿರುತ್ತಾರೆ. ಇವರ ನಡೆಯನ್ನು ಸಾಮಾನ್ಯ ರೈತರು ಲೆಕ್ಕಾಚಾರ ಹಾಕಲು ಸಾಧ್ಯವಾಗದು. ಹೀಗಿರುವಾಗ ಧಾರಣೆ 3-4% ಏರಿಕೆ ಆಗುತ್ತಿದ್ದಂತೇ ಸ್ವಲ್ಪ ಸ್ವಲ್ಪವೇ ಮಾರಾಟ ಮಾಡುತ್ತಾ ಇರುವುದು ಉತ್ತಮ. ಮಾರುಕಟ್ಟೆಯಲ್ಲಿ ಏರಿಕೆಗೆ ತುದಿ ಎಲ್ಲಿ, ಇಳಿಕೆಗೆ ನೆಲೆ ಎಲ್ಲಿ ಎಂದು ತಿಳಿಯದ ಕಾರಣ ಬೆಳೆಗಾರರಿಗೆ ಇರುವ ಆಯ್ಕೆ ಇದೊಂದೇ.