ಅಡಿಕೆ ಧಾರಣೆ ಇನ್ನೇನು ನೆಗೆದು ಬೀಳುತ್ತದೆಯೋ ಎಂಬ ಅನುಮಾನ ಉಂಟಾಗಿತ್ತು.ಅದರೆ ಕೆಲವೇ ದಿನದಲ್ಲಿ ಮತ್ತೆ ಏರಿಕೆಯತ್ತ ಮುಖ ಮಾಡಿದೆ. ಜೊತೆಗೆ ಕರಿಮೆಣಸೂ ಸಹ. ನಿನ್ನೆಯೇ ಖಾಸಗಿ ವರ್ತಕರು ಹಳೆ ಅಡಿಕೆ, ಡಬ್ಬಲ್ ಚೋಳ್ ಹಾಗೂ ಹೊಸ ಅಡಿಕೆಗೆ ದರ ಎರಿಸಿದ್ದಾರೆ. ಇಂದು ಕ್ಯಾಂಪ್ಕೋ ಸಹ ಏರಿಕೆ ಮಾಡಿದೆ. ಕೆಂಪಡಿಕೆ ಮಾರುಕಟ್ಟೆ ಸ್ಥಿರವಾಗಿದ್ದು, ಮುಂದಿನ ದಿನಗಳಲ್ಲಿ ಅದೂ ಸ್ವಲ್ಪ ಏರಿಕೆ ಆಗುವ ಸಂಭವ ಇದೆ. ಏರಿಕೆಗೆ ಕಾರಣ ಅಡಿಕೆ ಅವಕ ಕಡಿಮೆಯಾದದ್ದು ಎನ್ನುತ್ತಾರೆ ವರ್ತಕರು.
ಅಡಿಕೆ ಧಾರಣೆ ಇಳಿಕೆಯಾದಾಗ ಬೆಳೆಗಾರರು ದುಂಬಾಲು ಬಿದ್ದು ಮಾರಾಟ ಮಾಡುತ್ತಾರೆ. ಇದರಿಂದ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಮಾಲು ಬರುತ್ತದೆ. ಏರಿಕೆಯಾದಾಗ ಯಾವ ಬೆಳೆಗಾರರೂ ಮಾರಾಟ ಮಾಡುವ ಮನಸ್ಸು ಮಾಡುವುದಿಲ್ಲ. ಇನ್ನೂ ಏರಿಕೆಯಾಗಲಿ ಎಂದು ಕಾಯುತ್ತಾರೆ. ಏರುವಿಕೆ – ಇಳಿಕೆ ಎರಡೂ ಸನ್ನಿವೇಶಗಳೂ ಖರೀದಿದಾರರಿಗೆ ಅನುಕೂಲಕರ. ಇದೇ ಕಾರಣಕ್ಕೆ ಇದು ಆಗುತ್ತಾ ಇರುತ್ತದೆ. ಈ ಮಧ್ಯೆ ಅಗತ್ಯಕ್ಕನುಗುಣವಾಗಿ ಮಾರಾಟ ಮಾಡಿದವರು ಗೆಲ್ಲುತ್ತಾರೆ. ಈ ವರ್ಷ ಕೆಂಪಡಿಕೆ ಮಾರುಕಟ್ಟೆ ಇನ್ನೂ ತೇಜಿಯಾಗುವ ಸೂಚನೆ ಇದೆ ಎನ್ನುತ್ತಾರೆ ಚಿತ್ರದುರ್ಗದ ವ್ಯಾಪಾರಿಗಳೊಬ್ಬರು. ಖರೀದಿದಾರರು ಹೆಚ್ಚು ಆಸಕ್ತಿಯಲ್ಲಿ ಖರೀದಿಸುತ್ತಿದ್ದಾರೆ. ಹಾಗಾಗಿ ರಾಶಿ ದರ ಕ್ವಿಂಟಾಲಿಗೆ 50,000 ಆಗಬಹುದು ಎನ್ನುತ್ತಾರೆ. ಕರಿಮೆಣಸಿನ ಉತ್ಪಾದನೆ ಒಟ್ಟಾರೆಯಾಗಿ ಕಳೆದ ವರ್ಷದಷ್ಟು ಇಲ್ಲ ಎಂಬ ಸುದ್ದಿಗಳಿವೆ. ಇದೆಲ್ಲಕ್ಕಿಂತಲೂ ಮುಖ್ಯವಾಗಿ ಅಂತರರಾಷ್ಟ್ರೀಯ ಸ್ಪರ್ಧಿಗಳಲ್ಲಿ ಉತ್ಪಾದನೆ ಕಡಿಮೆ ಇರುವ ಕಾರಣ ಬೇಡಿಕೆ ಚೆನ್ನಾಗಿದೆ. ಕರಿಮೆಣಸು ಕೊಯಿಲಿನ ಸಮಯದಲ್ಲಿ ದರ ಸ್ಥಿರವಾಗಿರುವ ಕಾರಣ ಈ ವರ್ಷ ಮೆಣಸಿಗೆ ಬೆಲೆ ಏರಿಕೆ ಆಗಬಹುದು ಎಂಬ ಸೂಚನೆ ಇದೆ.
ಇಂದು ಚಾಲಿ ಅಡಿಕೆ ಧಾರಣೆ:
ಚಾಲಿ ಅಡಿಕೆ ದರ ಏರಲು ಪ್ರಾರಂಭವಾಗುವುದು ಬೆಳ್ಳಾರೆಯ ವ್ಯಾಪಾರಿಗಳಿಂದ. ಇಲ್ಲಿ ದರ ಹೆಚ್ಚಾದರೆ ಉಳಿದವರೂ ಸ್ವಲ್ಪ ಸ್ವಲ್ಪ ಹೆಚ್ಚಿಸಲು ಪ್ರಾರಂಭಿಸುತ್ತಾರೆ.ನಿನ್ನೆ ತನಕ ಕ್ಯಾಂಪ್ಕೋ ದರ 40500-41000 ರ ಸುಮಾರಿನಲ್ಲಿ ಇದ್ದುದು ಇಂದು ಹಠಾತ್ತನೆ 41500- 42,000 ಕ್ಕೆ ಏರಿಸಲಾಗಿದೆ. ಬೇಡಿಕೆ ಖಾತ್ರಿ ಇರುವ ಕಾರಣವೇ ಸಾಂಸ್ಥಿಕ ಖರೀದಿದಾರರು ಬೆಲೆ ಏರಿಸಲು ಸಾಧ್ಯ. ಆದ ಕಾರಣ ಮುಂದೆ ಸ್ವಲ್ಪ ಬೆಲೆ ಚೇತರಿಸುವ ಸಾಧ್ಯತೆ ಇದೆ. ಖಾಸಗಿ ವರ್ತಕರು ಸಾಂಸ್ಥಿಕ ಖರೀದಿದಾರರಿಂದ ರೂ. 500 ಮುಂದೆ ಇದ್ದಾರೆ.
- ಬದಿಯಡ್ಕ: ಹೊಸತು:35000-37500. ಹಳತು:40000-42500 ಡಬ್ಬಲ್: 44000
- ಪುತ್ತೂರು: ಹೊಸತು:35000-37000. ಹಳತು:40000-42000 ಡಬ್ಬಲ್: 44000
- ವಿಟ್ಲ: ಹೊಸತು:35000-37500. ಹಳತು:40000-42500 ಡಬ್ಬಲ್: 44000
- ಕಬಕ: ಹೊಸತು:35000-37000. ಹಳತು:40000-42500 ಡಬ್ಬಲ್: 44000
- ಬೆಳ್ಳಾರೆ: ಹೊಸತು:35000-37500. ಹಳತು:40000-42500 ಡಬ್ಬಲ್: 44000
- ಬೆಳ್ತಂಗಡಿ: ಹೊಸತು:35000-36500. ಹಳತು:40000-42000 ಡಬ್ಬಲ್: 43500
- ಬಂಟ್ವಾಳ: ಹೊಸತು:35000-36000. ಹಳತು:40000-42000 ಡಬ್ಬಲ್: 44000
- ಮಂಗಳೂರು: ಹೊಸತು:35000-37000. ಹಳತು:40000-42000 ಡಬ್ಬಲ್: 44000
- ಕಾರ್ಕಳ: ‘ಹೊಸತು:35000-36500. ಹಳತು:40000-42000 ಡಬ್ಬಲ್: 44000
- ಕುಂದಾಪುರ: ಹೊಸತು:35000-36000. ಹಳತು:40000-41500 ಡಬ್ಬಲ್: 43500
- ಶಿರ್ಸಿ:38700-39800
- ಸಾಗರ: 37800-38900
- ಸಿದ್ದಾಪುರ:37600-38600
- ಹೊನ್ನಾವರ:36500-38000
- ಕುಮಟಾ:38500-39000
- ಯಲ್ಲಾಪುರ: 38500-39200
ಕೆಂಪಡಿಕೆ ಧಾರಣೆ:
ರಾಶಿ ಅಡಿಕೆ ಧಾರಣೆ ಕಳೆದ ವಾರದಿಂದ ಹೆಚ್ಚಾಗಲು ಪ್ರಾರಂಭವಾಗಿರುವುದು ನಮಗೆಲ್ಲಾ ಗೊತ್ತಿರುವಂತದ್ದು. ಈಗಸರಾಸರಿ ದರಕ್ಕೂ ಗರಿಷ್ಟ ದರಕ್ಕೂ ತುಂಬಾ ವ್ಯತ್ಯಾಸ ಕಡಿಮೆಯಾಗಿದೆ. ಬಹುತೇಕ ಕಡೆ ಗರಿಷ್ಟ ದರ ಮತ್ತು ಸರಾಸರಿ ದರ ಸಮನಾಗಿ ಇದೆ. ಹಾಗಾಗಿ ಬೇಡಿಕೆ ಚೆನ್ನಾಗಿದೆ. ಯಾರೋ ಒಬ್ಬರು ಹೊಸ ಪಾರ್ಟಿ ಟೆಂಡರ್ ಗೆ ಧುಮಿಕಿರುವ ಕಾರಣ ದರ ಏರಿಕೆಯಾಗುತ್ತಿದೆ ಎಂಬ ವದಂತಿ ಇದೆ. ಅಡಿಕೆ ಬೆಳೆ ವಿಸ್ತರಣೆ ಆಗಿದ್ದರೂ ಚಿತ್ರದುರ್ಗ, ಚೆನ್ನಗಿರಿ ಮುಂತಾದ ಕಡೆ ಇಳುವರಿ ಕಡಿಮೆ ಎಂಬ ಸುದ್ದಿ ಇದೆ. ಇಂದು ಕರ್ನಾಟಕದ ವಿವಿಧ ಮಾರುಕಟ್ಟೆಯಲ್ಲಿ ಕ್ವಿಂಟಾಲೊಂದರ ರಾಶಿ ಅಡಿಕೆಯ ಬೆಲೆ ಹೀಗಿದೆ.
- ಚೆನ್ನಗಿರಿ:48,100-48,900
- ಬಧ್ರಾವತಿ: 48,300-48,600
- ಶಿವಮೊಗ್ಗ: 47,800-48,500 : ಬೆಟ್ಟೆ:54,000: ಸರಕು:84,000: ಗೊರಬಲು:40,000
- ಶಿರ್ಸಿ:46,100-47,800 : ಕೆಂಪುಗೋಟು:45,000 : ಬಿಳೇಗೋಟು:34,000
- ಸಿದ್ದಾಪುರ:47,600-47,900
- ಸಾಗರ:47,800-48,400
- ತೀರ್ಥಹಳ್ಳಿ:48,000-48,500 ಇಡಿ: 48,700
- ಕೊಪ್ಪ:47,700-48,400
- ಚಿತ್ರದುರ್ಗ:47,500-48,000
- ದಾವಣಗೆರೆ:47,600-47,800
- ಹೊಳಲ್ಕೆರೆ:47,600-48,300
- ಹೊಸನಗರ: 48,500-49,000
- ಶಿಕಾರಿಪುರ: 47,000-47,400
- ಯಲ್ಲಾಪುರ: 49,800-54,600 ಬೆಟ್ಟೆ: 45,000: ಕೆಂಪುಗೋಟು: 36,200
ಕರಿಮೆಣಸು ಧಾರಣೆ:
ಕೊಚ್ಚಿ ಮಾರುಕಟ್ಟೆಯಲ್ಲಿ ಹೊಸ ಮೆಣಸಿನ ಧಾರಣೆ :58800 ರಲ್ಲಿ ಇದೆ. ಹಳತು ಆಯದೆ ಇದ್ದದ್ದು 59800 ಆಯ್ದ ಮೆಣಸಿನ ಧಾರಣೆ 61800 ಕ್ಕೆ ಏರಿಕೆಯಾಗಿದೆ. ಈ ಕಾರಣದಿಂದ ಕಳೆದ ಮೂರು ದಿನಗಳಿಂದ ಸ್ಥಳೀಯವಾಗಿ ದರ ಏರಿಕೆಯಾಗಿದೆ. ಕೇರಳದಲ್ಲಿ ಕೊಯಿಲು ಪ್ರಾರಂಭವಾಗಿದೆ. ಕರ್ನಾಟಕದ ಕರಾವಳಿಯಲ್ಲಿಯೂ ಅಲ್ಪ ಸ್ವಲ್ಪ ಕೊಯಿಲು ಪ್ರಾರಂಭವಾಗಿದೆ. ಕರ್ನಾಟಕದ ವಿವಿಧ ಕರಿಮೆಣಸು ಮಾರುಕಟ್ಟೆಯಲ್ಲಿ ಕ್ವಿಂಟಾಲೊಂದರ ಇಂದಿನ ದರ ಹೀಗಿದೆ.
- ಮಂಗಳೂರು:59,000-60,000
- ಪುತ್ತೂರು:55,000-59,000
- ಕಾರ್ಕಳ: 59,000-60,000
- ಸಕಲೇಶಪುರ:59,500-60,500
- ಸಿರ್ಸಿ:58,000-60,000
- ಮೂಡಿಗೆರೆ:59,00-60,500-61,000
- ಚಿಕ್ಕಮಗಳೂರು:59,000-60,000-60,500
- ಕಳಸ:59,500-60,000
- ಹಾಸನ:58,000-59,500
ಚುನಾವಣೆ ಘೋಷಣೆ ಆಗುವ ತನಕ ದರ ಇಳಿಕೆ ಸಾಧ್ಯತೆ ಕಡಿಮೆ. ಆ ನಂತರವೂ ಹೆಚ್ಚು ದರ ಇಳಿಯುವುದಿಲ್ಲ. ಈಗ ಬಹುತೇಕ ವ್ಯಾಪಾರಿಗಳು ನಗದು ವ್ಯವಹಾರವನ್ನು ನಿಲ್ಲಿಸಿದ್ದಾರೆ. ಹಾಗಾಗಿ ವ್ಯವಹಾರಕ್ಕೆ ಚುನಾವಣೆ ಅಡ್ಡಿಯಾಗದು. ಕೊರೋನಾ ಜಾಸ್ತಿಯಾದರೆ ಆಮದು ಕಡಿಮೆಯಾಗಿ ದರ ಏರಲು ಸಾಧ್ಯವಿದೆ. ಹಾಗೆಂದು ಹಿಂದೆ ಕಂಡ ದರ 50,000 ದ ನಿರೀಕ್ಷೆ ಬೇಡ.