ಸಸ್ಯಗಳು ಪೋಷಕಾಂಶಗಳನ್ನು ಬೇರಿನ ಮೂಲಕ ಹೀರಿಕೊಳ್ಳುತ್ತವೆ. ಬೇರಿನ ಸಾಂದ್ರತೆ, ಮತ್ತು ಅವುಗಳ ಹೀರಿಕೊಳ್ಳುವ ಸಾಮರ್ಥ್ಯದ ಮೇಲೆ ಪೋಷಕಗಳು ಬೆಳೆಗೆ ಲಭ್ಯವಾಗುತ್ತದೆ. ಎಲೆಗಳಿಗೆ ಗೊಬ್ಬರ ಸಿಂಪರಣೆ ಎಂಬುದು ಒಂದು ಶಾರ್ಟ್ಕಟ್.ಇಲ್ಲಿ ಬೇರುಗಳ ಸ್ಥಿತಿ ಹೇಗೂ ಇರಲಿ, ಒಮ್ಮೆಗೆ ಸಸ್ಯಕ್ಕೆ ಪೋಷಕಗಳು ಲಭ್ಯವಾಗಿ ಲವಲವಿಕೆ ಉಂಟಾಗುತ್ತದೆ.
ಹಲವಾರು ಸಸ್ಯ ಪೋಷಕಾಂಶಗಳನ್ನು ಎಲೆ ಮತ್ತು ಕಾಂಡಗಳ ಮೂಲಕ ಬೆಳೆಗಳಿಗೆ ಒದಗಿಸಬಹುದು. ಈ ರೀತಿ ಎಲೆ ಮತ್ತು ಕಾಂಡಗಳ ಮೇಲೆ ಸಿಂಪಡಿಸಿದಾಗ ಸಸ್ಯಗಳು ಅವನ್ನು ಹೀರಿಕೊಂಡು ಉಪಯೋಗಿಸುತ್ತವೆ. ಸಸ್ಯ ಪೋಷಕಾಂಶಗಳನ್ನು ಪ್ರತ್ಯೇಕವಾಗಿಯೂ ಅಥವಾ ಒಟ್ಟಾಗಿಯೂ ಬೆರೆಸಿ ಸಿಂಪಡಿಸಬಹುದು. ಇತ್ತೀಚೆಗೆ ಹಲವಾರು ದ್ರವ ರೂಪದ ಗೊಬ್ಬರಗಳು ಬಳಕೆಗೆ ಬಂದಿವೆ. ಇವನ್ನು ಸಿಂಪರಣೆಯ ಮೂಲಕ ಒದಗಿಸಬಹುದು. ಎಲೆ ಮತ್ತು ಕಾಂಡಗಳ ಮೂಲಕ ರಸಗೊಬ್ಬರಗಳನ್ನು ಒದಗಿಸಿದಾಗ ಸಸ್ಯವು ಅದನ್ನು ಬಹು ಶೀಘ್ರವಾಗಿ ಬಳಸಿಕೊಳ್ಳುತ್ತದೆ. ಬೆಳೆಯಲ್ಲಿ ಕಂಡುಬರುವ ಪೋಷಕಾಂಶಗಳ ಕೊರತೆಯನ್ನು ಈ ಕ್ರಮಗಳಿಂದ ಶೀಘ್ರವಾಗಿ ಸರಿಪಡಿಸಬಹುದು. ಜೊತೆಗೆ ಸಂದಿಗ್ಧ ಪರಿಸ್ಥಿತಿಯಲ್ಲಿ ಬೆಳೆಗೆ ಬೇಕಾಗುವ ಆಹಾರಾಂಶಗಳನ್ನು ಈ ಪದ್ಧತಿಯಲ್ಲಿ ಸುಲಭವಾಗಿ ಒದಗಿಸಬಹುದು. ಪೋಷಕಗಳು ಸಮರ್ಪಕವಾಗಿ ಬೆಳೆಗಳಿಗೆ ದೊರೆಯದೆ ಸಸ್ಯಗಳು ಸೊರಗಿದಂತಿದ್ದರೆ ಎಲೆಗಳಿಗೆ ರಸಗೊಬ್ಬರಗಳನ್ನು ಒದಗಿಸಿ ಅದನ್ನು ಸರಿಪಡಿಸಬಹುದು.
ಅನುಕೂಲಗಳು:
- ಎಲೆ ಮತ್ತು ಕಾಂಡಗಳು ಸಸ್ಯ ಪೋಷಕಾಂಶಗಳನ್ನು ನೇರವಾಗಿ ಹೀರಿಕೊಳ್ಳುತ್ತವೆ.
- ಈ ರೀತಿ ಸಸ್ಯದ ಭಾಗಗಳು ಆಹಾರಾಂಶವನ್ನು ಹೀರಿಕೊಳ್ಳುವುದರಿಂದ ಅಲ್ಪಾವಧಿಯಲ್ಲೇ ಅದರ ಉಪಯೊಗವನ್ನು ಕಾಣಬಹುದು.
- ಎಲೆಗಳ ಬಣ್ಣದಲ್ಲಾಗುವ ಬದಲಾವಣೆಯು ಈ ಉಪಯೋಗವನ್ನು ಸೂಚಿಸುತ್ತದೆ.
- ಮಣ್ಣಿನ ಮೂಲಕ ರಸಗೊಬ್ಬರಗಳನ್ನು ಒದಗಿಸಿದಾಗ ರಸಗೊಬ್ಬರಗಳು ಮಣ್ಣಿನಲ್ಲಾಗುವ ರಾಸಾಯನಿಕ ಕ್ರಿಯೆಗೊಳಪಟ್ಟು ನಂತರ ಬೇರಿಗೆ ದೊರೆಯುತ್ತದೆ.
- ಒಣ ಬೇಸಾಯದಲ್ಲಿ ಶುಷ್ಕ ವಾತಾವರಣದಿಂದ ಮಣ್ಣಿನಲ್ಲಿ ಸೇರಿಸಿದ ಗೊಬ್ಬರಗಳು ಸಸ್ಯಗಳಿಗೆ ಸುಲಭವಾಗಿ ಒದಗುವುದಿಲ್ಲ.
- ಇದೇ ರೀತಿ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಆಹಾರಾಂಶಗಳೇ ನೀರಿನಲ್ಲಿ ಕರಗಿ ನಷ್ಟವಾಗುವುದರಿಂದ ಹೆಚ್ಚಿನ ಪೊಷಕಗಳು ಬೆಳೆಗೆ ಒದಗುವುದಿಲ್ಲ.
- ಇಂತಹ ಪರಿಸ್ಥಿತಿಯಲ್ಲಿ ಸಿಂಪರಣೆ ಮೂಲಕ ಬೆಳೆಗೆ ಬೇಕಾದ ಆಹಾರಾಂಶವನ್ನು ಒದಗಿಸಿ ಕೊರತೆ ನೀಗಿಸಬಹುದು.
- ಒಮ್ಮೊಮ್ಮೆ ಹವಮಾನ ವೈಪರೀತ್ಯದಿಂದ ಬಹಳ ದಿನಗಳವರೆಗೆ ಶೀತ ವಾತಾವರಣವಿದ್ದಾಗ ಬೆಳೆಗಳ ಅವಶ್ಯಕತೆಗೆ ತಕ್ಕಂತೆ ಬೇರಿನಿಂದ ಪೋಷಕಾಂಶಗಳನ್ನು ಪೂರೈಸಲು ಸಾಧ್ಯವಾಗುವುದಿಲ್ಲ.
- ಇದರಿಂದಾಗಿ ವಿವಿಧ ಬೆಳೆಗಳಲ್ಲಿ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತದೆ, ಬಾಡುವುದೂ ಇರುತ್ತದೆ.
- ಇಂತಹ ಸಂದರ್ಭದಲ್ಲಿ ಯೂರಿಯಾ ಮತ್ತು ಡಿ.ಎ.ಪಿ. ಸಿಂಪರಣೆ ಮಾಡಿದರೆ ಎಲೆಗಳು ಹಸಿರಾಗುತ್ತದೆ.
- ಸಸ್ಯಗಳ ಬೆಳವಣಿಗೆಗೆ ಹಲವು ಪೋಷಕಾಂಶಗಳು ಅವಶ್ಯಕವಿರುತ್ತದೆ.
- ಯಾವುದಾದರೂ ಒಂದು ಅಥವಾ ಎರಡು ಆಹಾರಾಂಶಗಳ ಕೊರತೆಯ ಲಕ್ಷಣಗಳು ಕಾಣದಿದ್ದರೂ ನಿರೀಕ್ಷಿತ ಇಳುವರಿ ಬರಲಾರದು.
- ಇಂತಹ ಪರಿಸ್ಥಿತಿಯಲ್ಲೂ ಸಹ ಕೊರತೆಯನ್ನು ಸಿಂಪರಣೆಯ ಮೂಲಕ ಬೆಳೆಗಳಿಗೆ ಒದಗಿಸುವುದರಿಂದ ಇಳುವರಿ ಮಟ್ಟವನ್ನು ಕಾಯ್ದುಕೊಳ್ಳಬಹುದು.
- ಕೆಲವು ಸಂದರ್ಭಗಳಲ್ಲಿ ರಸಸಾರದಲ್ಲಾಗುವ ವ್ಯತ್ಯಾಸಗಳಿಂದಾಗಿ ಮಣ್ಣು ಮಾಧ್ಯಮ ನೀಡಿದ ಆಹಾರಾಂಶಗಳು ಬೆಳೆಗೆ ಒದಗುವುದಿಲ್ಲ.
- ಇಂತಹ ಪರಿಸ್ಥಿಯಲ್ಲಿ ಸಿಂಪರಣೆ ಮೂಲಕ ಆಹಾರಾಂಶಗಳನ್ನು ಒದಗಿಸುವುದು ಬಹುಮುಖ್ಯ.
- ರಸಗೊಬ್ಬರಗಳನ್ನು ಸಸ್ಯ ಸಂರಕ್ಷಣಾ ದ್ರಾವಣದೊಡನೆ ಬೆರೆಸಿ ಸಿಂಪಡಿಸುವುದರಿಂದ ಸಿಂಪರಣೆಯ ವೆಚ್ಚದಲ್ಲೂ ಉಳಿತಾಯವಾಗುತ್ತದೆ.
ಅನಾನುಕೂಲತೆಗಳು:
- ಸಿಂಪಡಿಸುವ ಈ ಕ್ರಮದಲ್ಲಿರುವ ಒಂದು ಅನಾನುಕೂಲತೆಯೆಂದರೆ ಬೆಳೆಗೆ ಬೇಕಾದ ಸಂಪೂರ್ಣ ಆಹಾರಾಂಶಗಳನ್ನು ಸಿಂಪರಣೆಯ ಮೂಲಕವೇ ಒದಗಿಸಲಾಗುವುದಿಲ್ಲ.
- ಈ ರೀತಿ ಪೂರ್ತಿಯಾಗಿ ಒದಗಿಸಬೇಕಾದಲ್ಲಿ ಕೊಡಬೇಕಾದ ಸಿಂಪರಣೆಗಳ ಸಂಖ್ಯೆ ಮತ್ತು ದ್ರಾವಣದ ಪ್ರಮಾಣವನ್ನು ಹೆಚ್ಚು ಮಾಡಬೇಕಾಗುತ್ತದೆ.
- ಆದ್ದರಿಂದ ಮಣ್ಣಿನ ಮೂಲಕವೂ ರಸಗೊಬ್ಬರಗಳನ್ನು ಒದಗಿಸಿ, ಸ್ವಲ್ಪ ಭಾಗವನ್ನು ಮಾತ್ರ ಸಿಂಪರಣೆ ಮೂಲಕ ಒದಗಿಸುವುದು ಸೂಕ್ತ.
- ಇದುವರೆಗೂ ನಡೆದಿರುವ ಸಂಶೋಧನೆಯ ಆಧಾರದ ಮೇಲೆ ಎಲ್ಲಾ, ಮುಖ್ಯ ಆಹಾರಾಂಶಗಳು ಮತ್ತು ಲಘು ಪೋಷಕಾಂಶಗಳನ್ನು ವಾರ್ಷಿಕ ಮತ್ತು ಹಣ್ಣಿನ ಬೆಳೆಗಳಿಗೆ ಒದಗಿಸಿ ಉತ್ತಮ ಫಲಿತಾಂಶ ಪಡೆಯಬಹುದೆಂದು ತಿಳಿದು ಬಂದಿದೆ.
- ವೈಜ್ಞಾನಿಕ ಬೆಳವಣಿಗೆಯಿಂದಾಗಿ ಮುಖ್ಯ ಆಹಾರಾಂಶಗಳ, ಲಘು ಪೋಷಕಾಂಶಗಳ ಮತ್ತು ಬೆಳವಣಿಗೆಯನ್ನು ಉತ್ತೇಜಿಸುವ ವಸ್ತುಗಳೆಲ್ಲವೂ ಒಟ್ಟಾಗಿರುವ ಹಲವು ರಾಸಾಯನಿಕ ವಸ್ತುಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ.
- ಆದ್ದರಿಂದ ಬೆಳೆಗೆ ಬೇಕಾದ ಎಲ್ಲಾ ಆಹಾರಾಂಶಗಳನ್ನು ಒಂದೇ ಸಿಂಪರಣೆಯ ಮೂಲಕ ಬೆಳೆಗೆ ಒದಗಿಸಬಹುದು.
ಲಘುಪೋಷಕಾಂಶಗಳು:
- ಅಧಿಕ ಇಳುವರಿ ಕೊಡುವ ತಳಿಗಳು ಹೆಚ್ಚಿನ ಮಟ್ಟದಲ್ಲಿ ರಸಗೊಬ್ಬರಗಳನ್ನು ಬಳಸಿಕೊಳ್ಳುವ ಶಕ್ತಿಯನ್ನು ಹೊಂದಿವೆ.
- ಅದರಿಂದಾಗಿ ಇವು ಮಣ್ಣಿನಿಂದ ಹೆಚ್ಚಿನ ಮಟ್ಟದಲ್ಲಿ ಮುಖ್ಯ ಆಹಾರಾಂಶಗಳನ್ನು ಮತ್ತು ಲಘು ಪೋಷಕಾಂಶಗಳನ್ನು ಬಳಸಿಕೊಂಡು ಅಧಿಕ ಇಳುವರಿ ಕೊಡುತ್ತವೆ.
- ಮಾರುಕಟ್ಟೆಯಲ್ಲಿ ದೊರೆಯುವ ರಸಗೊಬ್ಬರಗಳಿಂದ ಬೆಳೆಗೆ ಬೇಕಾಗುವ ಮುಖ್ಯ ಆಹಾರಾಂಶಗಳಾದ ಸಾರಜನಕ, ರಂಜಕ ಮತ್ತು ಪೊಟ್ಯಾಶ್ ಮಾತ್ರ ಒದಗುತ್ತದೆ.
- ಆದರೆ ಈ ರಸಗೊಬ್ಬರಗಳಲ್ಲಿ ಲಘು ಪೋಷಕಾಂಶಗಳಾವುವೂ ಇರುವುದಿಲ್ಲ.
- ಮಣ್ಣಿನಿಂದ ಪ್ರತಿ ಬೆಳೆಯಲ್ಲೂ ಉಪಯೋಗಿಸಿಕೊಂಡ ಲಘು ಪೋಷಕಾಂಶಗಳನ್ನು ಪುನ: ಮಣ್ಣಿನಲ್ಲಿ ಸೇರಿಸುವುದರ ಕಡೆಗೆ ನಮ್ಮ ಗಮನ ಅಷ್ಟಾಗಿ ಹರಿದಿಲ್ಲ.
- ಇದರಿಂದಾಗಿ ಬೆಳೆಗೆ ಬೇಕಾಗುವ ಲಘು ಪೋಷಕಾಂಶಗಳ ಪೂರೈಕೆ ಬೆಳೆ ಕೊಯ್ಲಾದ ಮೇಲೆ ಅಳಿದು ಉಳಿದ ಹಿಂದಿನ ಬೆಳೆಯ ಭಾಗಗಳಿಂದಲೇ ಒದಗಬೇಕಾಗಿದೆ.
- ಬೆಳೆಯನ್ನು ತೆಗೆದಂತೆಲ್ಲಾ ಮಣ್ಣಿನಲ್ಲಿರುವ ಲಘು ಪೋಷಕಾಂಶಗಳ ಪ್ರಮಾಣ ಕಡಿಮೆಯಾಗುತ್ತಾ ಬರುತ್ತದೆ.
- ಈ ಲಘು ಪೋಷಕಾಂಶಗಳ ಕೊರತೆಯನ್ನು ಹೆಚ್ಚಾಗಿ ಪ್ರತಿ ವರ್ಷವೂ ಹೆಚ್ಚು ಇಳುವರಿ ಕೊಡುವ ಬೆಳೆಗಳನ್ನು ಸತತವಾಗಿ ಬೆಳೆಯುತ್ತಿರುವ ಕ್ಷೇತ್ರಗಳಲ್ಲಿ ಕಾಣಬಹುದು.
- ಈ ಲಘು ಪೋಷಕಾಂಶಗಳ ಕೊರತೆಯಿಂದಾಗಿ ಸಸ್ಯ ಬೆಳವಣಿಗೆ ಕುಂಠಿತವಾಗುವುದು ಸಾಮಾನ್ಯ ಲಕ್ಷಣ.
- ಕೆಲವು ಸಂದರ್ಭಗಳಲ್ಲಿ ಇದು ಇಳುವರಿಯ ಮೇಲೂ ಪರಿಣಾಮವಾಗಿ ಶೇ.೫೦ಕ್ಕೂ ಹೆಚ್ಚು ಇಳುವರಿಯಲ್ಲಿ ಕಡಿಮೆಯಾಗಿರುವುದು ಹೆಚ್ಚಿನ ಪ್ರದೇಶಗಳಲ್ಲಿ ಕಂಡುಬAದಿದೆ.
- ಬೋರಾನ್, ಕ್ಲೋರಿನ್, ತಾಮ್ರ, ಕಬ್ಬಿಣ, ಮ್ಯಾಂಗನೀಸ್, ಮಾಲಿಬ್ಡಿನಂ ಮತ್ತು ಸತು ಎಂಬವುಗಳು ಸಸ್ಯದ ಬೆಳವಣಿಗಯಲ್ಲಿ ಅತಿ ಸ್ವಲ್ಪ ಪ್ರಮಾಣದಲ್ಲಿ ಅಗತ್ಯವಾಗಿ ಒದಗಿಸಬೇಕಾದ ಲಘು ಪೋಷಕಾಂಶಗಳು.
- ಸಸ್ಯ ಬೆಳವಣಿಗೆಯಲ್ಲಿ ಈ ಪ್ರತಿ ಲಘು ಪೋಷಕಾಂಶವೂ ಒಂದು ನಿರ್ದಿಷ್ಟ ರೀತಿಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.
- ಒಂದಕ್ಕೂ ಹೆಚ್ಚಾಗಿ ಲಘು ಪೋಷಕಾಂಶಗಳ ಕೊರತೆಯಾದಲ್ಲಿ ಇಳುವರಿಯ ಮೇಲೆ ಅದರ ಪರಿಣಾಮ ಹೆಚ್ಚು.
- ಸತುವಿನ ಕೊರತೆ ಸಾಮಾನ್ಯವಾಗಿ ಎಲ್ಲ ಕಡೆಗಳಲ್ಲೂ ಕಂಡುಬರುವ ಅಂಶ.
- ಈ ರೀತಿಯ ಲಘು ಪೋಷಕಾಂಶಗಳ ಕೊರತೆಯನ್ನು ನಿವಾರಿಸುವುದಕ್ಕೆ ಮೊದಲು ಮಣ್ಣನ್ನು ಪರೀಕ್ಷಿಸಿ ಯಾವ ಪೋಷಕಾಂಶಗಳ ಕೊರತೆ ಎಷ್ಟು ಎಂಬುದನ್ನು ತಿಳಿಯುವುದು ಮೊದಲನೆ ಹೆಜ್ಜೆ.
- ಅದು ತಿಳಿದ ನಂತರ ಆ ನಿರ್ದಿಷ್ಟ ಲಘು ಪೋಷಕಾಂಶದ ಕೊರತೆಯನ್ನು ಸಿಂಪರಣೆಯ ಮೂಲಕವಾಗಲೀ ಅಥವಾ ಮಣ್ಣಿನಲ್ಲಿ ಸೇರಿಸುವ ಮೂಲಕವಾಗಲೀ ಪರಿಹರಿಸಬಹುದು.
- ಒಂದು ಬಾರಿ ಮಣ್ಣಿನಲ್ಲಿ ಈ ಲಘು ಪೋಷಕಾಂಶಗಳನ್ನು ಸೇರಿಸಿದಲ್ಲಿ ನಂತರದ ೩-೪ ವರ್ಷಗಳ ಕಾಲ ಅದನ್ನು ಪುನ: ಕೊಡುವ ಅವಶ್ಯಕತೆ ಇಲ್ಲ.
- ಸಿಂಪರಣೆ ಮೂಲಕ ಲಘು ಪೋಷಕಾಂಶಗಳನ್ನು ಬೆಳೆಯಲ್ಲಿ ಕೊರತೆಯ ಲಕ್ಷಣ ಕಂಡುಬಂದಾಗ ಮಾತ್ರ ಒದಗಿಸಬೇಕಾಗುತ್ತದೆ.
ಎಲ್ಲೆಲ್ಲಿ ಆಗತ್ಯವೆನಿಸುತ್ತದೆ:
- ಅಧಿಕ ಮಳೆಯಾಗುವ ಕರಾವಳಿ ಮಲೆನಾಡು ಪ್ರದೇಶಗಳಲ್ಲಿ ಮಣ್ಣಿಗೆ ಎಷ್ಟೋ ಪೋಷಕಾಂಶ ನೀಡಿದರೂ ಸಹ ಅವು ಮಳೆಯ ಕಾರಣದಿಂದ ತೊಳೆದು ಹೋಗುವುದರಿಂದ ಲಭ್ಯವಾಗದಿರುತ್ತದೆ.
- ಅಧಿಕ ಮಳೆ ಬೀಳುವಲ್ಲಿ ಮಣ್ಣು ಆಮ್ಲೀಯವಾಗಿದ್ದು ಬಳಸಿದ ಪೋಷಕಗಳು ಸರಿಯಾಗಿ ಸಸ್ಯಗಳಿಗೆ ಲಭ್ಯವಾಗುವುದೂ ಇಲ್ಲ.
- ಇಲ್ಲಿ ಲಘು ಪೋಷಕಾಂಶಗಳ ಜೊತೆಗೆ ಮುಖ್ಯ ಪೋಷಕಾಂಶಗಳ ಕೊರತೆ ಮತ್ತು ಅಸಮತೋಲನ ಉಂಟಾಗುವುದು ಸರ್ವೇಸಾಮಾನ್ಯ.
- ಇದರಿಂದಾಗಿ ಇಲ್ಲಿ ಫಸಲು ಕ್ಷೀಣಿಸುವುದು, ಅನಾರೋಗ್ಯದ ಬೆಳೆ ಕಂಡುಬರುತ್ತದೆ.
- ಇಲ್ಲಿಯ ರೈತರು ಅವರು ಬೆಳೆಯುವ ಬೆಳೆ ಯಾವುದೇ ಇರಲಿ, ಅದಕ್ಕೆ ಎಲೆ, ಕಾಂಡಕ್ಕೆ ಪೋಷಕ ಸಾರಗಳನ್ನು ವರ್ಷಕ್ಕೆ ಎರಡು ಮೂರು ಬಾರಿ ಸಿಂಪಡಿಸುವುದು ಉತ್ತಮ.
- ನೀರಿನಲ್ಲಿ ಸಂಪೂರ್ಣವಾಗಿ ಕರಗುವ ಸ್ಪ್ರೇ ಗ್ರೇಡ್ ಲಘು ಪೋಷಕಾಂಶಗಳು, ಪೊಟ್ಯಾಷಿಯಂ ಕೊರತೆಗೆ ಪೊಟ್ಯಾಷಿಯಂ ನೈಟ್ರೇಟ್, ಸಾರಜನಕದ ಕೊರತೆಗೆ ಯೂರಿಯಾ, ಮೂರೂ ಪೊಷಕಾಂಶಗಳು ಅಗತ್ಯವಾದಲ್ಲಿ 19:19:19 ಅಥವಾ ನ್ಯಾನೋ ಯೂರಿಯಾ, ನ್ಯಾನೋ DAP ಬಳಸಬೇಕು.
- ಯಾವುದರ ಕೊರತೆ ಇದೆ ಅದನ್ನು ಮಾತ್ರ ಬಳಕೆ ಮಾಡಬೇಕು.
- ಅನವಶ್ಯಕವಾದುದನ್ನು ಬಳಸುವುದು ಕ್ಷೇಮಕರವಲ್ಲ. ಎಲೆಗಳ ಎರಡೂ ಬದಿಗೂ ಬೀಳುವಂತೆ ಸಿಂಪಡಿಸಬೇಕು.
- ಔಷಧಿ ಸಿಂಪರಣೆಗಿAತ ಇದು ಸುಲಭ. ಕಾಂಡಕ್ಕೆ ಸಿಂಪಡಿಸುವಾಗ ಅದು ಹಸಿರಾಗಬೇಕು.
- ಇಲ್ಲವಾದರೆ ಪರಿಣಾಮ ಕಡಿಮೆ. ಬಾಳೆ, ಕಬ್ಬು, ಭತ್ತ, ತರಕಾರಿಗೆ ಎಲೆ, ಕಾಂಡ ಸೂಕ್ತ. ಅಡಿಕೆ, ತೆಂಗಿಗೆ ಎಲೆ, ಎಲೆ ದಂಟು ಮತ್ತು ಹಸಿರು ಭಾಗಗಳಿಗೆ ಸಿಂಪಡಿಸಬೇಕು.
ನಮ್ಮ ರಾಜ್ಯದಲ್ಲಿರುವ ಮಣ್ಣುಗಳಲ್ಲಿ ದೊರೆಯುವ ಲಘು ಪೋಷಕಾಂಶಗಳ ಬಗ್ಗೆ ನಡೆದಿರುವ ಅಧ್ಯಯನದ ಪ್ರಕಾರ ಕಪ್ಪು ಮಣ್ಣುಗಳಲ್ಲಿ ಸತು, ಕಬ್ಬಿಣ ಮತ್ತು ಮ್ಯಾಂಗನೀಸ್ ಕೊರತೆ ಇರುವುದು ಕಂಡುಬAದಿದೆ. ಕೆಂಪು ಮಣ್ಣಿನ ಪ್ರದೇಶಗಳಲ್ಲಿ ಸತು, ಬೋರಾನ್ ಮತ್ತು ಕೆಲವು ಕಡೆಗಳಲ್ಲಿ ಮಾಲಿಬ್ಡಿನಂ ಕೊರತೆಯೂ ಸಹ ವರದಿಯಾಗಿದೆ. ಕೊರತೆಯಿರುವ ಕಡೆ ಈ ಲಘು ಪೋಷಕಾಂಶಗಳನ್ನು ಒದಗಿಸುವುದು ಮುಖ್ಯ. ಮಣ್ಣಿನಲ್ಲಿ ಪೋಷಕಾಂಶಗಳ ಕೊರತೆಯ ಪ್ರಮಾಣ ಕಡಿಮೆಯಾಗುವುದರಿಂದ ಸ್ವಲ್ಪ ಪ್ರಮಾಣದಲ್ಲಿ ಇವುಗಳನ್ನು ಒದಗಿಸಿದರೆ ಸಾಕಾಗುತ್ತದೆ.
ರೋಗ ಗ್ರಸ್ತ ಸಸ್ಯಗಳನ್ನು ಚೇತರಿಸಬಹುದು: ಕೆಲವು ಬೆಳೆಗಳು ನಾವು ಮಾಡುವ ನೀರಾವರಿ, ಮಳೆ, ಮುಂತಾದ ಸನ್ನಿವೆಶಗಳಿಂದ ಕೆಲವೊಮ್ಮೆ ಬೇರಿಗೆ ಹಾನಿಯಾಗಿ ಭಾಗಶಃ ರೋಗಪಿಡಿತವಾದಂತೆ ಗೋಚರಿಸುತ್ತದೆ.ಅಂತಹ ಸಮಯದಲ್ಲಿ ಒಂದೆರಡು ಬಾರಿ ಎಲೆಗಳಿಗೆ ಪೋಷಕಾಂಶಗಳನ್ನು ಸಿಂಪರಣೆ ಮಾಡಿದರೆ ಅದು ಚೇತರಿಸಿಕೊಳ್ಳುತ್ತದೆ. ಬೇರಿನ ಮೂಲಕ ಸರಬರಾಜು ಆಗಬೇಕಾದ ಆಹಾರದ ಒತ್ತಡ ಕಡಿಮೆಯಾಗುತ್ತದೆ. ಆಗ ಬೇರುಗಳೂ ಸ್ವಲ್ಪ ಮಟ್ಟಿಗೆ ಚೇತರಿಸಿಕೊಳ್ಳುತ್ತವೆ. ಸಸ್ಯ ಸಹಜ ಸ್ಥಿತಿಗೆ ಬರುತ್ತದೆ. ಕರಿಮೆಣಸು, ಅಡಿಕೆ, ತರಕಾರಿ ಮುಂತಾದ ಬೆಳೆಗಳಲ್ಲಿ ಹೀಗೆ ಮಾಡಿದರೆ ಉತ್ತ್ತಮ ಫಲಿತಾಂಶ ನಿರೀಕ್ಷಿಸಬಹುದು.