ಉತ್ತಮ ಇಳುವರಿ ಪಡೆಯಲು ರೈತರು ಯಾವ ಗೊಬ್ಬರವನ್ನು ಬಳಸಿದರೆ ಒಳ್ಳೆಯದು ಅದು ಹೇಗೆ ಕೆಲಸ ಮಾಡುತ್ತದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ. ಸಾಮಾನ್ಯವಾಗಿ ಹೆಚ್ಚಿನ ರೈತರು ರಸಗೊಬ್ಬರದ ಜೊತೆಗೆ ಅಲ್ಪ ಸ್ವಲ್ಪವಾದರೂ ಸಾವಯವ ಮೂಲದ ಗೊಬ್ಬರವನ್ನು ಬಳಕೆ ಮಾಡುತ್ತಾರೆ. ಅವುಗಳಲ್ಲಿ ಬೇರೆ ಬೇರೆ ಪ್ರಕಾರದ ಗೊಬ್ಬರಗಳಿದ್ದು ಪೋಷಕಾಂಶ ಮತ್ತು ಅದರ ಬಿಡುಗಡೆ ಹಾಗೂ ಅವುಗಳ ಧೀರ್ಘಕಾಲಿಕ ಪರಿಣಾಮಗಳನ್ನು ತುಲನೆ ಮಾಡಿದಾಗ ಯಾವ ಗೊಬ್ಬರ ಉತ್ತಮ ಎಂಬ ತೀರ್ಮಾನಕ್ಕೆ ಬರಬಹುದು.
ಎಲ್ಲಾ ರೈತರೂ ಮಣ್ಣು ಬೇಕು ಎಂಬ ಕಳಕಳಿಯಿಂದ ಸಾವಯವ ಗೊಬ್ಬರ ಬಳಕೆ ಮಾಡುತ್ತಾರೆ. ಕೆಲವರಲ್ಲಿ ಹಸು ಸಾಕಣಿಕೆ ಇದ್ದು ಕೊಟ್ಟಿಗೆ ಗೊಬ್ಬರವನ್ನು ಉತ್ಪಾದಿಸುತ್ತಾರೆ. ಕೆಲವರು ಕೊಟ್ಟಿಗೆ ಗೊಬ್ಬರವನ್ನು ಕೊಂಡು ತರುತ್ತಾರೆ. ಇನ್ನು ಕೆಲವರು ಚೀಲದಲ್ಲಿ ತುಂಬಿ ಸಿಗುವ ಸಿದ್ದ ರೂಪದ ಸಾವಯವ ಗೊಬ್ಬರ ಬಳಸುತ್ತಾರೆ. ಒಂದಷ್ಟು ಜನ ಕೋಳಿ ಹಿಕ್ಕೆ ಕುರಿ ಗೊಬ್ಬರ ಬಳಕೆ ಮಾಡುತ್ತಾರೆ. ಯಾವುದು ಅವರಿಗೆ ಅನುಕೂಲವೋ ಅದನ್ನು ಬಳಸುವುದೇ ಹೊರತಾಗಿ ಅದರಲ್ಲಿ ಪೋಷಕಾಂಶಗಳು ಏನೇನು ಇರುತ್ತವೆ. ಬೆಳೆಗಳ ಮೇಲೆ ಪರಿಣಾಮ ಹೇಗೆ ಎಂಬುದನ್ನು ಹೆಚ್ಚಿನವರು ತಿಳಿದಿರುವುದಿಲ್ಲ. ಯಾವುದೇ ಗೊಬ್ಬರ ಬಳಸಿದರೂ ಅದರ ಫಲದ ಬಗ್ಗೆ ತಿಳಿದುಕೊಂಡು ಬಳಸಿದರೆ ಉತ್ತಮ. ನಾವೆಲ್ಲಾ ಬಳಸುವ ಕೊಟ್ಟಿಗೆ ಅಥವಾ ಕಾಂಪೋಸ್ಟು ಗೊಬ್ಬರ, ಕೋಳಿ ಗೊಬ್ಬರ, ಕುರಿ ಗೊಬ್ಬರ ಇವುಗಳ ಬಗ್ಗೆ ವಿಸೃತವಾದ ಮಾಹಿತಿ ಇಲ್ಲಿದೆ.
ಸಾವಯವ ಗೊಬ್ಬರಗಳಲ್ಲಿ ಎರಡು ಪ್ರಕಾರ.ಒಂದನೆಯದ್ದು ಸ್ಥೂಲ (Bulk manure) ಗೊಬ್ಬರ. ಇನ್ನೊಂದು ತೀಕ್ಷ್ಣ ಗೊಬ್ಬರ. ಅಧಿಕ ಪ್ರಮಾಣದಲ್ಲಿ ಬುಟ್ಟಿ ಲೆಕ್ಕದಲ್ಲಿ ಹಾಕುವಂತದ್ದನ್ನು ಸ್ಥೂಲ ಗೊಬ್ಬರ ಎನ್ನುತ್ತಾರೆ. ಕಡಿಮೆ ಪ್ರಮಾಣದಲ್ಲಿ ಕಿಲೋ ಲೆಕ್ಕದಲ್ಲಿ ಹಾಕುವಂತದ್ದು ತೀಕ್ಷ್ಣ ಗೊಬ್ಬರ. ರಸಗೊಬ್ಬರಗಳು ಅತೀ ತೀಕ್ಷ್ಣ ಗೊಬ್ಬರಗಳು.ಸ್ಥೂಲ ಗೊಬ್ಬರಗಳಲ್ಲಿ ಪೋಷಕಾಂಶ ಪ್ರಮಾಣ ಕಡಿಮೆ. ತೀಕ್ಷ್ಣ ಗೊಬ್ಬರಗಳಲ್ಲಿ ಹೆಚ್ಚು ಹಾಗೂ ರಸಗೊಬ್ಬರಗಳಲ್ಲಿ ಅತೀ ಹೆಚ್ಚು.
ಕೊಟ್ಟಿಗೆ ಗೊಬ್ಬರ ಬಳಸಿದರೆ ಹೇಗೆ?
ಕೊಟ್ಟಿಗೆ ಗೊಬ್ಬರ ಅಥವಾ ಕಾಂಪೋಷ್ಟು ಗೊಬ್ಬರ FYM (Farm yard Manure) ಎರಡು ಒಂದೇ ಎನ್ನಬಹುದು. ಸರಿಯಾಗಿ ಹುಡಿ ರೂಪಕ್ಕೆ ಬಂದಿದ್ದರೆ ಅದರ ಸಾಂದ್ರತೆ ಸ್ವಲ್ಪ ಹೆಚ್ಚು ಇರುತ್ತದೆ. ಇವೆರಡೂ ಸ್ಥೂಲ ಗೊಬ್ಬರಗಳು. ಇದನ್ನು ಮಣ್ಣಿಗೆ ಗರಿಷ್ಟ ಪ್ರಮಾಣದಲ್ಲಿ ಹಾಕಬಹುದು. ಎಕ್ರೆವಾರು ಹಾಕುವುದಾದರೆ ಇದನ್ನು ಟನ್ ಲೆಕ್ಕದಲ್ಲಿ ಹಾಕಲು ಶಿಫಾರಸು ಮಾಡುತ್ತಾರೆ. ಹೆಚ್ಚಿನ ಪ್ರಮಾಣದಲ್ಲಿ ಹಾಕುವ ಗೊಬ್ಬರಕ್ಕಿಂತ ಕಡಿಮೆ ಪ್ರಮಾಣದಲ್ಲಿ ಹಾಕುವ ಗೊಬ್ಬರ ಒಳ್ಳೆಯದಲ್ಲವೇ? ಸಸ್ಯಗಳಿಗೆ ಬೇಕಾಗುವುದು ಪೋಷಕಾಂಶ ಅಲ್ಲವೇ ಎಂದು ವಾದ ಮಾಡಬಹುದು. ವಾದ ಸರಿಯಾದರೂ FYM ಅದರಲ್ಲೂ ಸ್ಥೂಲ ಗೊಬ್ಬರಕ್ಕೆ ಅದರದ್ದೇ ಆದ ಸ್ಥಾನ ಇದೆ. ಇವುಗಳಲ್ಲಿ ಪೋಷಕಾಂಶ ಕಡಿಮೆ ಇರಬಹುದು. ಆದರೆ ಅದರಲ್ಲಿ ಇರುವ ಎಲ್ಲಾ ಪೋಷಕಗಳೂ ಸಾವಯವ ರೂಪದಲ್ಲೇ ಇರುತ್ತದೆ. ಅದನ್ನು ಮಣ್ಣಿಗೆ ಸೇರಿಸಿದಾಗ ಅದು ಸೂಕ್ಷ್ಮಾಣು ಜೀವಿಗಳ ಕ್ರಿಯೆಯಿಂದ ನಿರವಯವ ರೂಪಕ್ಕೆ ಪರಿವರ್ತನೆಯಾದ ಮೇಲೆ ಸಸ್ಯಗಳಿಗೆ ಲಭ್ಯವಾಗುತ್ತದೆ. ಈ ಕ್ರಿಯೆಗೆ ಸಾಕಷ್ಟು ಸಮಯ ಬೇಕಾಗುತ್ತದೆ. ಸೂಕ್ಷ್ಮಾಣು ಜೀವಿಗಳು ಬದುಕಲು ಆಹಾರ ಈ ಗೊಬ್ಬರಗಳು ಅಗತ್ಯ. ಧೀರ್ಘಾವಧಿ ತನಕ ನಡೆಯುವ ಈ ಕ್ರಿಯೆಯಿಂದ ಮಣ್ಣಿನ ಭೌತಿಕ ಮತ್ತು ಜೈವಿಕ ಗುಣಧರ್ಮಗಳು ಉನ್ನತಮಟ್ಟಕ್ಕೆ ಏರುತ್ತದೆ.ದೊಡ್ಡ ಪ್ರಮಾಣದ (bulk) ಗೊಬ್ಬರಗಳಿಗೆ ಮಾತ್ರ ಈ ಸಾಮರ್ಥ್ಯ ಇರುವುದು. ಹಾಗಾಗಿ ಯಾವುದೇ ಇತರ ಸಾವಯವ ಗೊಬ್ಬರ ಇದ್ದರೂ FYM ಅಥವಾ ದೊಡ್ಡ ಪ್ರಮಾಣದ ಗೊಬ್ಬರಕ್ಕೆ ಅದು ಹೊಲಿಕೆ ಅಲ್ಲ. ಹಿಂದೆ ಹಸು, ಎಮ್ಮೆ ಸಾಕುವ ಕೊಟ್ಟಿಗೆಗೆ ಅವುಗಳು ನಿಲ್ಲುವ ಮತ್ತು ಮಲಗಿ ವಿಶ್ರಮಿಸುವ ಸ್ಥಳಕ್ಕೆ ಮೇವಿಗೆ ಯೋಗ್ಯವಲ್ಲದ ಸೊಪ್ಪು, ಹುಲ್ಲು ಇತ್ಯಾದಿ ಹಾಕುವ ಪದ್ದತಿ ಇತ್ತು. ಅದು ತುಂಬಿದಾಗ ತೆಗೆದು ಒಂದೆಡೆ ರಾಶಿ ಹಾಕಲಾಗುತ್ತಿತ್ತು. ಹಾಗಾಗಿ ಇದಕ್ಕೆ ಕೊಟ್ಟಿಗೆ ಗೊಬ್ಬರ ಎಂದು ಹೆಸರು. FYM ನಲ್ಲಿ 0.4-0.5 ಸಾರಜನಕ 0.2-0.25 ರಂಜಕ ಮತ್ತು 0.3-1% ಪೊಟ್ಯಾಶ್ ಅಂಶ ಇರುತ್ತದೆ.
ಈಗ ಈ ಪದ್ದತಿ ಅಪರೂಪ. ಹಾಗೆಂದು ಹೆಸರು ಅದೇ. ಶೆಡ್ ನಲ್ಲಿ ಸಿಗುವ ಸಗಣಿ ಮತ್ತು ಅವು ತಿನ್ನದೆ ಬಿಟ್ಟ ಹುಲ್ಲು ಚೂರುಗಳು ಮಿಶ್ರಣವಾಗಿರುವ ಗೊಬ್ಬರ ಈಗಿನ ಕೊಟ್ಟಿಗೆ ಗೊಬ್ಬರ. ಇದನ್ನು ಹಿಂದಿನಂತೆ ಎರಡು ಮೂರು ಬುಟ್ಟಿಯಂತೆ ಸಸ್ಯಗಳಿಗೆ ಹಾಕಲು ಸಾಲದು. ಅದಕ್ಕಾಗಿ ಹೊಲ ತೋಟಗಳಿಗೆ ಅಲ್ಲಿ ಸಿಗುವ ತ್ಯಾಜ್ಯ ಗಳು ಸೊಪ್ಪು ಸದೆ, ತರಗೆಲೆ ಎಲ್ಲವನ್ನೂ ಮಣ್ಣಿಗೆ ಹಾಕಿ ಅದಕ್ಕೆ ಲಭ್ಯವಿರುವ ಸಗಣಿ ಗೊಬ್ಬರವನ್ನು ಮಿಶ್ರಣ ಮಾಡಿ ಕೊಡುವುದೇ FYM ಮಣ್ಣಿನ ರಚನೆ ಸುಧಾರಿಸಲು ಇದು ಬೇಕೇ ಬೇಕು.
ಕೋಳಿ ಗೊಬ್ಬರ ಬಳಸಿದರೆ ಹೇಗೆ?
ಮಣ್ಣಿನ ರಚನೆ ಸುಧಾರಿಸುವಲ್ಲಿ ಕೊಟ್ಟಿಗೆ ಗೊಬ್ಬರದ ಪಾತ್ರಕ್ಕೆ ಈ ಗೊಬ್ಬರ ಹೋಲಿಕೆ ಅಲ್ಲ. ಇದರಲ್ಲಿ ಪೋಷಕಗಳು ಹೆಚ್ಚು ಇರುತ್ತವೆ. ಪೋಷಕ ಪೂರೈಕೆ ದೃಷ್ಟಿಯಿಂದ ಇದು ಉತ್ತಮ. ಈ ಗೊಬ್ಬರದಲ್ಲಿ ಶೇ.1- 1.8 ಸಾರಜನಕ, 1.4-1.8 ರಂಜಕ ಮತ್ತು 0.8-0.9 ಪೊಟ್ಯಾಶ್ ಇರುತ್ತದೆ. ಇದನ್ನು ಮಣ್ಣಿಗೆ ಸೇರಿಸಿದ 1-2 ವಾರದಲ್ಲಿ ಶೇ.65-70 ಸಾರಜನಕ ಬೆಳೆಗೆ ದೊರೆಯುತ್ತದೆ. ಇದರಲ್ಲಿ ಲಿಗ್ನಿನ್ ಪ್ರಮಾಣ ಕಡಿಮೆ ಇರುವುದರಿಂದ ಬೇಗ ಸಸ್ಯಗಳಿಗೆ ದೊರಕುತ್ತದೆ. ಹಾಗೆಯೇ ಬಹಳ ಬೇಗ ಅದು ಮುಗಿದು ಹೋಗುತ್ತದೆ. ಸ್ವಲ್ಪ ಭಾಗ ಮಾತ್ರ ಉಳಿಕೆಯಾಗಿ ಅದು ಹ್ಯೂಮಸ್ ಆಗಿ ಇರುತ್ತದೆ. ಹಾಗಾಗಿ ಕೋಳಿ ಗೊಬ್ಬರ ಮಣ್ಣಿನ ಜೈವಿಕ ಮತ್ತು ಭೌತಿಕ ಗುಣಧರ್ಮ ಸುಧಾರಣೆ ದೃಷ್ಟಿಯಿಂದ ಇದು ಕೊಟ್ಟಿಗೆ ಗೊಬ್ಬರದಷ್ಟು ಉತ್ತಮವಲ್ಲ. ಈ ಗೊಬ್ಬರವನ್ನು ಬಳಸಿದಾಗ ಒಮ್ಮೆಲೇ ಸಸ್ಯಗಳು ಹಸಿರಾಗುತ್ತದೆ. ಹಾಗೆಯೇ ಒಂದೆರಡು ತಿಂಗಳಲ್ಲಿ ಮತ್ತೆ ಬಡವಾಗುತ್ತದೆ. ಇದರಲ್ಲಿ ಹಕ್ಕಿಯ ಮೂತ್ರವೂ ಸೇರಿರುವುದರಿಂದ ಸಾರಜನಕ ತಕ್ಷಣ ಲಭ್ಯವಾಗಿ ಬೆಳೆ ಸೊಕ್ಕಿ ಬೆಳೆಯುತ್ತದೆ. ಶಕ್ತಿ ಕಡಿಮೆ ಇರುತ್ತದೆ. ಇದು ಮಣ್ಣಿನ ರಾಸಾಯನಿಕ ಗುಣಧರ್ಮ ಮಾತ್ರ ವೃದ್ದಿಸುತ್ತದೆ.
ಕುರಿ ಗೊಬ್ಬರ ಬಳಸಿದರೆ ಹೇಗೆ:
ಕುರಿ ಹಿಕ್ಕೆಯಲ್ಲಿ ಕೋಳಿ ಹಿಕ್ಕೆಯಲ್ಲಿ ಇರುವಷ್ಟು ಪೋಷಕಾಂಶಗಳು ಇರುವುದಿಲ್ಲ. ಕೊಟ್ಟಿಗೆ ಗೊಬ್ಬರಕ್ಕೆ ಸರಿಸಮನಾದ ಫೋಷಕಾಂಶಗಳಿರುತ್ತವೆ. ರಂಜಕ ಅಂಶ ಮಾತ್ರ ಸ್ವಲ್ಪ ಹೆಚ್ಚು ಇರುತ್ತದೆ. ಒಣ ತೂಕದಲ್ಲಿ ಇರುವ ಕಾರಣ ಹಿಕ್ಕೆಗಳಲ್ಲಿ ಸಾವಯವ ಅಂಶ ನೀರಿನಲ್ಲಿ ನೆನೆದಾಗ ಹೆಚ್ಚಾಗುತ್ತದೆ. ಇದರ ಸಾರಗಳೂ ಒಂದಷ್ಟು ಭಾಗ ಸಸ್ಯಗಳಿಗೆ ವೇಗವಾಗಿ ದೊರೆಯುತ್ತದೆ. ಉಳಿದ ಸಾವಯವ ಅಂಶ ಹೆಚ್ಚು ಸಮಯದ ತನಕ ಉಳಿಯುವ ಕಾರಣ ಸೂಕ್ಷ್ಮಾಣು ಜೀವಿಗಳಿಗೆ ಆಹಾರವಾಗಿ ಮತ್ತೆ ದೊರೆಯುತ್ತದೆ. ತ್ವರಿತವಾಗಿ ಮತ್ತು ನಿಧಾನವಾಗಿ ಸಾರ ಸಸ್ಯಗಳಿಗೆ ದೊರೆಯುವ ಕಾರಣ ನಿರಂತರ ಪೂರೈಕೆಯಿಂದ ಇಳುವರಿ ಹೆಚ್ಚುತ್ತದೆ. ಕೋಳಿ ಗೊಬ್ಬರಕ್ಕೆ ಹೋಲಿಸಿದರೆ ಕುರಿ ಹಿಕ್ಕೆಯಲ್ಲಿ ಉಳಿಕೆ ಸಾವಯವ ಅಂಶ ಅಧಿಕ.
ಕೊಟ್ಟಿಗೆ ಗೊಬ್ಬರ ಎಲ್ಲಾ ಸಾವಯವ ಗೊಬ್ಬರಗಳಲ್ಲಿ ಉತ್ತಮ. ಇದು ನಿಧಾನವಾಗಿ ಪೊಷಕಗಳನ್ನು ಕೊಡುತ್ತಾ ಮಣ್ಣಿನ ರಚನೆ ಸುಧಾರಿಸುವಂತದ್ದು. ಅದರ ಜೊತೆಗೆ ಪೋಷಕ ಮೂಲವಾಗಿ ವಿಭಜಿತ ಕಂತುಗಳಲ್ಲಿ ಸ್ವಲ್ಪ ಸ್ವಲ್ಪವೇ ಕೊಡಲು ಕೋಳಿ ಗೊಬ್ಬರ ಉತ್ತಮ. ಕುರಿ ಗೊಬ್ಬರ ಈಗ ದುಬಾರಿಯಾಗುತ್ತಿದ್ದು, ಉತ್ತಮ ಮೂಲದಲ್ಲಿ ಮೂಟೆಗೆ 200-225 ರೂ. ದರದಲ್ಲಿ, ಅಥವಾ ಬುಟ್ಟಿಗೆ 50-75 ರೂ. ಅಸುಪಾಸಿನಲ್ಲಿ ಸಿಕ್ಕರೆ ಅದನ್ನು ಬಳಕೆ ಮಾಡಬಹುದು. ಕೊಂಡು ತರುವ ಸಾವಯವ ಗೊಬ್ಬರದಲ್ಲಿ ತೇವಾಂಶ ಪ್ರಮಾಣ ಕಡಿಮೆ ಇದ್ದು (ಶೇ.10) ಮತ್ತು ಬೆಲೆ ಅನುಕೂಲತೆ ಇದ್ದರೆ ಬಳಸಬಹುದು. ಮಣ್ಣಿನ ಸ್ಥಿತಿ ಸುಧಾರಣೆ ಮಾಡಿ ಬೆಳೆ ಫಸಲು ಸುಸ್ಥಿರವಾಗಿ ಹೆಚ್ಚಾಗಲು ಬೇಕಾಗುವುದು ದೊಡ್ಡ ಪ್ರಮಾಣದಲ್ಲಿ ಬಳಸುವ ಗೊಬ್ಬರ.