ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂಬ ಮಾತಿನಂತೆ ಕಳೆ ಗಿಡವನ್ನು ಇನ್ನೊಂದು ಗಿಡದ ಸಹಾಯದಿಂದ ತೆಗೆಯಲು ಸಾಧ್ಯ. ಅಂಥಹ ಗಿಡಗಳು ನಮ್ಮಲ್ಲಿ ಹಲವು ಇವೆ.
ಒಂದು ಸಸ್ಯವನ್ನು ಮತ್ತೊಂದು ಸಸ್ಯದಿಂದ ನಿಯಂತ್ರಿಸಬಹುದು ಎಂಬುದು ಮನಗೆಲ್ಲಾ ಗೊತ್ತಿದೆ. ರಬ್ಬರ್ ಬೆಳೆಗಾರರು ತೋಟದಲ್ಲಿ ಇತರ ಸಸ್ಯಗಳು ಬೆಳೆಯದೆ ಇರುವ ಸಲುವಾಗಿ ಮುಚ್ಚಲು ಬೆಳೆಯನ್ನು ಬೆಳೆಸುತ್ತಾರೆ. ಅದೇ ಸಿದ್ದಾಂತದಲ್ಲಿ ಹಳದಿ ಸೇವಂತಿಕೆ ಹೂವಿನ ಸಸ್ಯ (Singapore daisy) Scientific name : Sphagneticola trilobata ವನ್ನು ನಿಯಂತ್ರಿಸಬಹುದು. ದ್ವಿದಳ ಜಾತಿಯ ಸಸ್ಯಗಳನ್ನು ಹಳದಿ ಹೂವಿನ ಗಿಡಗಳಿರುವ ಸ್ಥಳದಲ್ಲಿ ಬೆಳೆಸುವುದರಿಂದ ಆ ಸಸ್ಯದ ಬೆಳವಣಿಗೆಗೆ ಬೇಕಾಗುವ ಸೂರ್ಯನ ಬೆಳಕು ಕಡಿಮೆಯಾಗಿ ತನಾಗಿಯೇ ನಿಯಂತ್ರಣಕ್ಕೆ ಬರುತ್ತದೆ.
- ಇದು ಒಂದು ಆಮದು ಕಳೆ.
- ಯಾವುದೋ ಸಸ್ಯ ಮೂಲದ ಜೊತೆಗೋ, ಧಾನ್ಯದ ಜೊತೆಗೋ ನಮ್ಮ ದೇಶಕ್ಕೆ ಪ್ರವೇಶವಾಗಿದ್ದು,
- ಅಲಂಕಾರಿಕ ಗಿಡ ಎಂದು ಜನ ಬೆಳೆಸಿ ಈಗ ಕಳೆಯಾಗಿದೆ.
- ಇದರ ನಿಯಂತ್ರಣ ಕಷ್ಟದ್ದಲ್ಲ. ಇದಕ್ಕಾಗಿ ಕಳೆ ನಾಶಕದ ಬಳಕೆ ಬೇಕಾಗಿಲ್ಲ.
ಕೊಕ್ಕೋ ಗಿಡದ ಅಡಿಯಲ್ಲಿ ಅಥವಾ ಇನ್ನೇನಾದರೂ ಅಧಿಕ ನೆರಳು ಒದಗಿಸುವ ಗಿಡಗಳ ಅಡಿಯಲ್ಲಿ ಯಾವ ಕಳೆ ಗಿಡವೂ ಬೆಳೆಯುವುದಿಲ್ಲ. ಇದು ನಮಗೆ ಒಂದು ಪಾಠ. ಕಳೆ ಸಸ್ಯವಾದ ಸಿಂಗಾಪುರ್ ಡೈಸಿ ಸಸ್ಯವನ್ನು ನಿಯಂತ್ರಿಸಲು ಅದಕ್ಕಿಂತ ಪ್ರಯೋಜನಕಾರಿಯೆನಿಸಿದ ಕೆಲವು ಸಸ್ಯಗಳ ಪರಿಚಯ ಇಲ್ಲಿದೆ.
ಇಂತಹ ಕಳೆಗಳಿಗೆ ಕಳೆ ನಾಶಕ ಸಿಂಪಡಿಸಿದರೆ ಸಾಯುವುದಿಲ್ಲ. ಎಲೆ ಎಲ್ಲಾ ಒಣಗುತ್ತದೆ. ಗಂಟು ಬೇರುಗಳು ಬಾಗಶಹ ಸಾಯುತ್ತವೆ. ಆದರೆ ಬಳ್ಳಿಯ ದಂಟು ಸಾಯುವುದಿಲ್ಲ. ಈ ಹಂತದಲ್ಲಿ ಇದನ್ನು ಕಿತ್ತು ತೆಗೆಯಲು ಸುಲಭವಾಗಿ ಬರುತ್ತದೆ. ಹೀಗೆ ಇದನ್ನು ನಿಯಂತ್ರಣ ಮಾಡಬಹುದು
ತೋಟದಲ್ಲಿ ಸೆಣಬು ಬಿತ್ತಬಹುದು:
- ಸೆಣಬು ಎಂಬುದು ಒಂದು ದ್ವಿದಳ ಸಸ್ಯವಾಗಿದ್ದು, ಇದರ ಎಲೆಗಳು ಬೇರುಗಳು ಮತ್ತು ಬೇರಿನಲ್ಲಿ ಬೆಳೆಯುವ ಗಂಟುಗಳು ಮಣ್ಣಿಗೆ ಸಾರಜನಕ ಸತ್ವವನ್ನು ವಾತಾವರಣದಿಂದ ದೊರಕಿಸಿಕೊಡುತ್ತದೆ.
- ಇದು ದಪ್ಪವಾಗಿ ಬೆಳೆದಲ್ಲಿ ಅದರ ನೆರಳಿಗೆ ನೆಲಭಾಗದಲ್ಲಿ ಇತರ ಯಾವ ಸಸ್ಯವೂ ಬೆಳೆಯಲಾರದು.
- ಇದು 6-7 ವಾರದಲ್ಲಿ ಹೂ ಬಿಡಲು ಪ್ರಾರಂಭವಾಗುತ್ತದೆ.
- ಈ ಸಮಯಕ್ಕೆ ಸಸ್ಯವನ್ನು ಬ್ರಷ್ ಕಟ್ಟರ್ ಮೂಲಕ ತುಂಡರಿಸಿ ತೆಗೆದರೆ ಅದು ತೋಟಕ್ಕೆ ಹಸುರೆಲೆ ಗೊಬ್ಬರವಾಗುತ್ತದೆ.
- ಮಳೆಗಾಲ ಪ್ರಾರಂಭದಲ್ಲಿ ನೆಲವನ್ನು ಸ್ವಲ್ಪ ಅಗೆತ ಮಾಡಿ ಬೀಜವನ್ನು ಬಿತ್ತನೆ ಮಾಡಬೇಕು.
- ಬಿತ್ತನೆ ಮಾಡುವಾಗ ರಂಜಕ ಗೊಬ್ಬರವನ್ನು ಕೊಡುವುದರಿಂದ ಬೇಗ ಮೊಳಕೆ ಬಂದು ಬೇಗ ಬೆಳೆಯುತ್ತದೆ.
- ಎರಡೇ ವಾರದಲ್ಲಿ ಇದು ನೆಲವನ್ನು ಮುಚ್ಚುವಷ್ಟು ಬೆಳೆಯುತ್ತದೆ.
ಅಲಸಂಡೆ ಬೆಳೆಸಿ:
- ತರಕಾರಿಗಾಗಿ ಬೆಳೆಯುವ ಅಲಸಂಡೆ ಅಥವಾ ಮೇವಿನ ಅಲಸಂಡೆಯನ್ನು (ಪೊದೆಯಂತೆ ಬೆಳೆಯುವ ಸಸ್ಯ) ತೋಟದಲ್ಲಿ ದಪ್ಪಕ್ಕೆ ಬೆಳೆಯುವುದರಿಂದ ಅದರ ಅಡಿಯಲ್ಲಿರುವ ಕಳೆ ಸಸ್ಯ ಸಿಂಗಾಪುರ್ ಡೈಸಿ ಗಿಡವನ್ನು ಅದು ಸಾಯುವಂತೆ ಮಾಡುತ್ತದೆ.
- ಈ ಸಸ್ಯವನ್ನು 1-2 ತಿಂಗಳ ನಂತರ ಪಶುಗಳಿಗೆ ಮೇವಾಗಿ ಬಳಕೆ ಮಾಡಬಹುದು.
- ತರಕಾರಿ ಅಲಸಂದೆಯಾಗಿದರೆ ಬೆಳೆ ತೆಗೆಯಬಹುದು.
- ಮೇವಿನ ಅಲಸಂದೆಯಾದರೆ ಇದು ಉತ್ತಮ ಪೌಷ್ಟಿಕ ಮೇವು ಆಗಿರುತ್ತದೆ.
- ಇದು ದ್ವಿದಳ ಸಸ್ಯವಾಗಿದ್ದು, ಇದನ್ನು ಮಣ್ಣಿಗೆ ಸೇರಿಸುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ.
ಕ್ರೊಟಲೇರಿಯಾ ಬೀಜ ಬಿತ್ತಿ:
- ಇದು ಒಂದು ಅಲ್ಪಾವಧಿಯ ಸಸ್ಯವಾಗಿದ್ದು , ಮಳೆಗಾಲದಲ್ಲಿ ಬೀಜ ಬಿತ್ತನೆ ಮಾಡಿದರೆ ಸೆಣಬಿನಂತೆ 1-2 ತಿಂಗಳಲ್ಲಿ ಹುಲುಸಾಗಿ ಬೆಳೆದು ನೆಲವನ್ನು ಮುಚ್ಚುತ್ತದೆ.
- ಇದನ್ನು ಕಡಿದು ತೆಗೆಯಬಹುದು ಇಲ್ಲವೇ ಕಿತ್ತು ತೆಗೆಯಲೂ ಕಷ್ಟವಿಲ್ಲ.
- ಇದು ದ್ವಿದಳ ಸಸ್ಯವಾಗಿದ್ದು, ತೋಟದಲ್ಲಿ ಮಣ್ಣು ಉತ್ತಮವಾಗುತ್ತದೆ.
ಒಂದೆರಡು ಜಾತಿಯ ಹುಲ್ಲುಗಳನ್ನು ಬೆಳೆಸುವುದರಿಂದ ಅದು ಈ ಸಸ್ಯದ ಬೆಳೆವಣಿಗೆಯನ್ನು ನಿಯಂತ್ರಿಸುತ್ತದೆ. ಅದು ನಮ್ಮ ಸುತ್ತಮುತ್ತ ಇದ್ದು, ಅದನ್ನು ಗುರುತಿಸಿ ಸೇವಂತಿಗೆ ಸಸ್ಯಗಳಿರುವಲ್ಲಿ ಬೆಳೆಸಿ ಅದರ ಬೆಳವಣಿಗೆಯನ್ನು ನಿಯಂತ್ರಿಸಬಹುದು. ಇದು ಹಸುಗಳಿಗೆ ಮೇವಾಗುತ್ತದೆ. ಧೀರ್ಘ ಕಾಲದ ತನಕ ಬದುಕಿರುತ್ತದೆ.
- ನಿರುಪಯುಕ್ತ ಗೋಣಿ ಚೀಲಗಳನ್ನು ಈ ಕಳೆಯ ಮೇಲೆ ಹಾಸುವುದರಿಂದ ಕಳೆ ಸತ್ತು ಹೋಗುತ್ತದೆ.
- ಕುರಿ, ಕೋಳಿ ಗೊಬ್ಬರ ತಂದ ಗೋಣಿ ಚೀಲಗಳನ್ನು ಇದಕ್ಕೆ ಬಳಕೆ ಮಾಡಬಹುದು.
- ಇದು ಸೂರ್ಯನ ಶಾಖಕ್ಕೆ ಕರಗಿ ಹೋಗಲು ಇದು ಸಹಾಯಕ.
- ಇನ್ನು ಹಣ ಕೊಟ್ಟು ಖರೀದಿ ಮಾಡಬಹುದಾದ ಕಳೆ ನಿಯಂತ್ರಕ ಮ್ಯಾಟ್ , ಮಲ್ಚಿಂಗ್ ಶೀಟು ಹಾಕಿದರೂ ಈ ಕಳೆ ಸಸ್ಯ ಸತ್ತು ಹೋಗುತ್ತದೆ.
ಹಳದಿ ಹೂವಿನ ಈ ಸಸ್ಯ ತುಂಬಾ ಉಪಯುಕ್ತ ಗೊತ್ತೇ:
- ಹಳದಿ ಸೇವಂತಿಗೆ ಹೂವಿನ ಸಸ್ಯವು ಉತ್ತಮ ಪಶು ಮೇವು.
- ಇದನ್ನು ತಿಂದರೆ ಹಾಲು ಹೆಚ್ಚು ಕೊಡುತ್ತದೆ.
- ಇದರಷ್ಟು ವೇಗವಾಗಿ ಬೆಳೆಯುವ ಬೇರೆ ಮೇವು ಇಲ್ಲ ಎಂದರೂ ತಪ್ಪಾಗಲಾರದು. (ಬೆಳೆಗಳಿಗೆ ಕೊಡುವ ಪೋಷಕಗಳನ್ನು ಇದು ಬಳಸಿ ಬೆಳೆಯುವ ಕಾರಣ ಇದು ಪೌಷ್ಟಿಕ ಮೇವಾಗಿರುತ್ತದೆ)
- ಪಶು ಮೇವಿಗೆ ಪದೇ ಪದೇ ಕಠಾವು ಮಾಡುತ್ತಿರುವುದರಿಂದ ಇದು ಹುಲುಸಾಗಿ ಬೆಳೆಯದು.
- ಇಷ್ಟಕ್ಕೂ ಈ ಸಸ್ಯ ಅಡಿಕೆ ತೋಟದಲ್ಲಿ ಅಡಿಕೆ ಹೆಕ್ಕಲು ಮಾತ್ರ ತೊಂದರೆ ಕೊಡುವಂತದ್ದು.
- ಉಳಿದೆಡೆ ಓಡಾಡಲು ರಗಳೆ ಎನ್ನಿಸುತ್ತದೆ ಅಷ್ಟೇ.
- ಇದು ಒಂದು ಉತ್ತಮ ಮುಚ್ಚಿಗೆ ಸಸ್ಯ ( Ground cover) ಆಗಿದ್ದು, ಇದು ಇದ್ದರೆ ಮಣ್ಣು ಸವಕಳಿ ಕಡಿಮೆಯಾಗುತ್ತದೆ.
- ಪೋಷಕಾಂಶಗಳನ್ನು ಸ್ವಲ್ಪ ಮಟ್ಟಿಗೆ ಹೀರಿಕೊಳ್ಳುತ್ತದೆಯಾದರೂ ಸವರುವಿಕೆಯಿಂದ ಸ್ವಲ್ಪ ಪೋಷಕಾಂಶವನ್ನು ಮರಳಿ ಕೊಡುತ್ತದೆ.
- ಸವರುವ ಸಮಯದಲ್ಲಿ ಚೆನ್ನಾಗಿ ಬಿಸಿಲು ಇರಬೇಕು.
- ಮೂರು ಆಲ್ಕು ದಿನ ನೀರಾವರಿ ಮಾಡದೆ ಇದ್ದರೆ ಸವರಿದ ತುಂಡುಗಳು ಒಣಗಿ ಅವು ಬದುಕಲಾರವು.
- ಗ್ಲೆರಿಸೀಡಿಯಾ ಸೊಪ್ಪನ್ನು ದಪ್ಪಕ್ಕೆ ಹಾಸಿದರೆ ಅದೇ ರೀತಿಯಾಗಿ ಇತರ ಸೊಪ್ಪುಗಳನ್ನೂ ದಪ್ಪಕ್ಕೆ ಹಾಸಿದರೆ ಅಲ್ಲಿ ಈ ಕಳೆ ಸತ್ತು ಹೋಗುತ್ತದೆ.
- ಹೊಲಕ್ಕೆ ಫಲವತ್ತತೆ ಸಹ ಸೇರಿಕೊಳ್ಳುತ್ತದೆ.
ರೈತರು ಹಳದಿ ಹೂವು ಸಸ್ಯ ನಿಯಂತ್ರಣ ಹೇಗೆ ಎಂದು ಪದೇ ಪದೇ ಕೇಳುತ್ತಿರುತ್ತಾರೆ. ಇದನ್ನು ಕೆಲವು ಉಪಾಯಗಳ ಮೂಲಕ ನಿಯಂತ್ರಿಸಬಹುದು, ಈ ಹಿಂದೆ ಕಮ್ಯೂನಿಸ್ಟ್ ಕಳೆ (Siam weed) ನಿಯಂತ್ರಣಕ್ಕೆ ಜನ ಬಹಳ ಚಿಂತೆ ಮಾಡಿದ್ದುಂಟು. ಆದರೆ ಆ ಕಳೆ ಈಗ ತನ್ನಿಂದ ತಾನೆ ನಿಯಂತ್ರಣಕ್ಕೆ ಬಂದಿದೆ. ಇದೂ ಇನ್ನು ಕೆಲವೇ ಸಮಯದಲ್ಲಿ ಸಹಜವಾಗಿ ನಿಯಂತ್ರಣಕ್ಕೆ ಬರಲಿದೆ.