ಜರ್ಸಿ – ಎಚ್ ಎಪ್  ಹಸುವಿನ ಸಗಣಿಯಲ್ಲಿ  ಪೋಷಕಾಂಶ ಹೆಚ್ಚು.

ಜರ್ಸಿ – ಎಚ್ ಎಪ್ ಹಸುವಿನ ಸಗಣಿಯಲ್ಲಿ ಪೋಷಕಾಂಶ ಹೆಚ್ಚು

ಜರ್ಸಿ – ಎಚ್ ಎಫ಼್  ಹಸುಗಳು ಹಾಕುವ ಸಗಣಿಯಲ್ಲಿ ಹೆಚ್ಚು ಪೋಷಕಾಂಶಗಳು ಇರುತ್ತವೆ ಎಂದರೆ ಬೇಸರ ಮಾಡಿಕೊಳ್ಳಬೇಡಿ. ನಿಜವಾಗಿಯೂ ಇದು ಸತ್ಯ. ಈ ಹಸುಗಳು  ವಿದೇಶಿ ತಳಿಗಳಾದರೂ  ಅವು ಹಾಕುವ ಸಗಣಿಯಲ್ಲಿ ಪೋಷಕಾಂಶ  ಚೆನ್ನಾಗಿಯೇ ಇರುತ್ತದೆ. ಹಾಗೆಂದು ನಾಟೀ ಹಸುಗಳ ಸಗಣಿಯಲ್ಲಿ ಇಲ್ಲ ಎಂದಲ್ಲ. ಯಾವ ಹಸುಗಳಿಗೆ ಅಧಿಕ ಸತ್ವದ ಆಹಾರ ಕೊಡಲಾಗುತ್ತದೆಯೋ ಅವುಗಳು ವಿಸರ್ಜಿಸುವ ತ್ಯಾಜ್ಯದಲ್ಲಿ  ಆ ಸತ್ವಗಳ ಉಳಿಕೆ ಇರುತ್ತವೆ.

ಹಸುಗಳಲ್ಲಿ ನಾಟಿ ಮತ್ತು ವಿದೇಶೀ ತಳಿ ಎಂಬ ಎರಡು ವಿಧಗಳು. ನಾಟಿ ತಳಿಗೆ ಕೃತಕ ಗರ್ಭಧಾರಣೆ ಮೂಲಕ ತಳಿ ಉನ್ನತೀಕರಣ ಮಾಡುತ್ತಾ ಬಂದದ್ದಕ್ಕೆ ಮಿಶ್ರ ತಳಿ ಎನ್ನುತ್ತಾರೆ. ಹಿಂದೆ ನಮ್ಮಲ್ಲಿ ನಾಟಿ ಹಸುಗಳೇ  ಇದ್ದವು. ಕ್ಷೀರೋತ್ಪಾದನೆ ಲಾಭದಾಯಕವಾಗಲಿ ಎಂಬ ಕಾರಣಕ್ಕೆ ಸುಮಾರು 40 ವರ್ಷಗಳ ಹಿಂದೆ ಹಾಲ್ ಸ್ಟಿನ್ ಪ್ರೀಝನ್ (H F) ಮತ್ತು ಜರ್ಸಿ, ರೆಡ್ದೆನ್ ಮುಂತಾದ ಆಕಳ ತಳಿಗಳನ್ನು ವಿದೇಶದಿಂದ ಆಮದು ಮಾಡಿಕೊಂಡೆವು. ಇವು ಇಲ್ಲಿನ ವಾತಾವರಣಕ್ಕೆ ಹೊಂದಿಕೊಂಡು  ನಮ್ಮಲ್ಲಿ ಕ್ಷೀರಕ್ರಾಂತಿ ಆಯಿತು.  ಕುಡ್ತೆ ಲೆಕ್ಕದಲ್ಲಿ ಹಾಲು ಒಯ್ಯುತ್ತಿದ್ದವರು,ಲೀ. ಲೆಕ್ಕದಲ್ಲಿ ಒಯ್ಯುವಂತಾಯಿತು. ಅತ್ಯಲ್ಪ ಹಾಲು ಬಳಸಿ ಕಾಫೀ, ಚಹ, ಕಷಾಯ ಕುಡಿಯುತ್ತಿದ್ದ ನಾವು ಧಾರಾಳವಾಗಿ ಬಳಸುವಂತಾಯಿತು. ಹಾಲು ಮಾರಾಟ ಕೇಂದ್ರಗಳಾದವು. ಹಸು ಪಾಲನೆ ಹೋಗಿ ಹೈನುಗಾರಿಕೆ ಆಯಿತು. ಈ ಮಧ್ಯೆ ನಮ್ಮ ಸ್ಥಳೀಯ ತಳಿಗಳು ನಿರ್ಲಕ್ಷ್ಯಕ್ಕೊಳಗಾದವು. ವಿದೇಶೀ ತಳಿಗಳು ಬಂದ ನಂತರ ಹಾಲಿನ ಉತ್ಪಾದನೆ ಜೊತೆಗೆ ಗೊಬ್ಬರದ ಉತ್ಪಾದನೆಯೂ ಹೆಚ್ಚಾಯಿತು. ಹಾಗೆಂದು ನಮ್ಮ ಹಿರಿಯರು ಹಸು ಸಾಕುತ್ತಿದ್ದ ಉದ್ದೇಶವೇ ಗೊಬ್ಬರಕ್ಕೆ. ಆದರೆ ಹತ್ತಾರು ಹಸುಗಳಿಂದ ಉತ್ಪಾದನೆಯಾಗುತ್ತಿದ್ದ ಗೊಬ್ಬರ ವಿದೇಶೀ ತಳಿಗಳ ಕಾರಣದಿಂದ 2-3  ಹಸುಗಳಿಂದಲೇ ಆಯಿತು. ಕ್ರಮೇಣ ಎಲ್ಲದರಲ್ಲೂ ಕೆಲವು ನ್ಯೂನ್ಯತೆಗಳು ಗಮನಕ್ಕೆ ಬಂದಂತೆ ಕೆಲವರಿಗೆ ವಿದೇಶೀ ತಳಿಗಳ ವ್ಯಾಮೋಹ ಕಡಿಮೆಯಾಗಿ ನಾಟಿ ತಳಿಗಳೇ ಶ್ರೇಷ್ಟ ಎಂಬ ಭಾವನೆ ಬಂತು. ಅದರ ಒಂದು ಆಂದೋಲನವೇ ಪ್ರಾರಂಭವಾಯಿತು. ತಳಿಗಳ ಉಳಿವಿನ ದೃಷ್ಟಿಯಿಂದ ಇದು ಅನಿವಾರ್ಯವೇ ಆಗಿತ್ತು. ಈ ಮಧ್ಯೆ ವಿದೇಶೀ ತಳಿಗಳ ಸಗಣಿಗೂ ಕಳಂಕ ಬರಲಾರಂಭಿಸಿತು. ದೇಶೀ ತಳಿಗಳ ಸಗಣಿ ಶ್ರೇಷ್ಟ. ವಿದೇಶೀ ತಳಿಗಳ ಹಾಲೂ, ಸಗಣಿಯೂ ಎರಡೂ ಉತ್ತಮವಲ್ಲ ಎಂಬ ಹೇಳಿಕೆಗಳು ಬರಲಾರಂಭಿಸಿದವು. ವಾಸ್ತವವಾಗಿ ಹಸುಗಳು ಏನು ತಿನ್ನುತ್ತವೆಯೋ ಅದರ ಸತ್ವಗಳ ಮೇಲೆ ಅದರ ಸಗಣಿಯ ಪೋಷಕಗುಣ ಅವಲಂಭಿಸಿರುತ್ತದೆ.   

ಜರ್ಸಿ ಆಕಳ ತಳಿ

ಯಾವ ಕಾರಣಕ್ಕೆ ಪೋಷಕಕಾಂಶಗಳು ಹೆಚ್ಚು?

ಅಧಿಕ ಹಾಲೂಡುವ ಎಚ್ ಎಫ್, ಜರ್ಸಿ, ತಳಿಗಳನ್ನು ಸಾಕುವುದು ಅಧಿಕ ಹಾಲಿಗೋಸ್ಕ್ರರ. ಹಾಲು ಹೆಚ್ಚು ಬೇಕು. ಸಾಕಿದ್ದಕ್ಕೆ ನಮಗೆ ನಷ್ಟವಾಗಬಾರದು. ಈ ಉದ್ದೇಶ ಇಟ್ಟುಕೊಂಡು ಸಾಕುವಾಗ ಅಧಿಕ ಹಾಲಿಗಾಗಿ ಏನೆಲ್ಲಾ ತಿಂಡಿ ತಿನಿಸುಗಳನ್ನು ಕೊಡಬೇಕೋ ಅದನ್ನೆಲ್ಲಾ ಕ್ರಮಪ್ರಕಾರ ಕೊಡಲಾಗುತ್ತದೆ. ಶರೀರ ತೂಕಕ್ಕನುಗುಣವಾಗಿ ಹಾಲಿಗೆ ಇಷ್ಟು, ದೇಹ ಪೋಷಣೆಗೆ ಇಷ್ಟು ಎಂದು ಸ್ವಲ್ಪವೂ ರಾಜಿಮಾಡಿಕೊಳ್ಳದೆ  ಆಹಾರ ನೀಡಲಾಗುತ್ತದೆ. ಅಧಿಕ ಸತ್ವದ ಬೇರೆ ಬೇರೆ ದಾಣಿ ಮಿಶ್ರಣಗಳು, ಮೇವು ಇರುತ್ತದೆ. ಪ್ರಾಣಿಗಳು ತಾವು ಸೇವಿಸಿದ ಮೇವಿನ, ದಾಣಿ ಮಿಶ್ರಣದ  ಸ್ವಲ್ಪ ಭಾಗವನ್ನು ಬಳಸಿಕೊಂಡು ಉಳಿದ ಭಾಗವನ್ನು ಮಲ ಮೂತ್ರದ ರೂಪದಲ್ಲಿ ಹೊರ ಹಾಕುತ್ತವೆ.ಹೊರ ಬಂದ ತ್ಯಾಜ್ಯದಲ್ಲಿ  ಉಳಿದ ಸಾರಗಳು ಬೆಳೆ ಪೋಷಕಗಾಳಾಗಿರುತ್ತವೆ. ಪಶುಗಳು ತಾವು ಸೇವಿಸಿದ ಆಹಾರದಲ್ಲಿ ಶೇ.25 ನ್ನು  ಹೊರ ಹಾಕುತ್ತವೆಯಂತೆ. ಪಶು ಆಹಾರ-ಮೇವಿನಲ್ಲಿ ಇರುವುದು  ಸಾರಜನಕ, ರಂಜಕ ಮತ್ತು ಪೊಟ್ಯಾಶ್ ಅಲ್ಲದೆ ಅಲ್ಪ ಸ್ವಲ್ಪ ಲಘು ಪೊಷಕಗಳು. ಹುಲ್ಲು ಈ ಸತ್ವಗಳಿಂದ ಕೂಡಿದ್ದರೆ ಅದರ ಸಗಣಿಯಲ್ಲೂ ಅದು ಇರುತ್ತದೆ. ದಾಣಿಯಲ್ಲಿ ಇದ್ದರೆ ಅದೂ ಸಗಣಿಯಲ್ಲಿ ಸಿಗುತ್ತದೆ.  ಅಧಿಕ ಹಾಲಿಗೆ ಸಾಕುವ ಹಸುಗಳಿಗೆ ಪೌಷ್ಟಿಕ ಮೇವು ಹಾಗೂ  ಸಮತೋಲನ ಪಶು ಆಹಾರವನ್ನು ನೀಡಲಾಗುತ್ತದೆ. ಹಾಗಾಗಿ  ಅದರ ತ್ಯಾಜ್ಯ ಸಗಣಿಯಲ್ಲಿ ಸೇವಿಸಿದ ಆಹಾರದ ಉಳಿಕೆಗಳು ಇರುತ್ತವೆ.

ಸಂಗದಂತೆ ಬುದ್ಧಿ ತಿಂಡಿಯಂತೆ ಲದ್ದಿ:

ಇದು ಒಂದು ನಾಳ್ನುಡಿಯಾದರೂ ಇದಕ್ಕೆ ತುಂಬಾ ಅರ್ಥ ಇದೆ. ಗೊಬ್ಬರಗಳಲ್ಲಿ ಚಿನ್ನದ ಗೊಬ್ಬರ ಎಂಬ ಹೆಸರು ಇರುವುದು ಮಾನವ ಮಲಕ್ಕೆ. ಕಾರಣ ಮನುಷ್ಯ ಎಲ್ಲಾ ಪ್ರಾಣಿಗಳಿಗಿಂತ  ಉತ್ಕೃಷ್ಟ ಗುಣಮಟ್ಟದ ಆಹಾರ ಸೇವಿಸುತ್ತಾನೆ. ಆ ಕಾರಣದಿಂದ ಅವನು ವಿಸರ್ಜಿಸುವ ತ್ಯಾಜ್ಯದಲ್ಲಿ  ಪೋಷಕಗಳು ಹೆಚ್ಚು ಇರುತ್ತವೆ. ಹಾಗಾಗಿ ಇದಕ್ಕೆ ಚಿನ್ನದ ಗೊಬ್ಬರ ಎನ್ನುತ್ತಾರೆ. ಅದೇ ಪ್ರಕಾರ ಅಮಾನವ ಮೂತ್ರವೂ. ಹಿಂದೆ ಇದನ್ನು ಗೊಬ್ಬರವಾಗಿ ಬಳಸುವ ಕ್ರಮ ಇತ್ತು. ಈಗ ಇಲ್ಲ. ಹಿಂದೆ ಹಳ್ಳಿಯಲ್ಲೆಲ್ಲಾ  ಬಯಲು ಬಹಿರ್ದೆಸೆ ಇತ್ತು. ಆಗ ಮಾನವ ತ್ಯಾಜ್ಯವು ಮಣ್ಣಿಗೆ ಪೋಷಕ ಮೂಲವಾಗಿ ಸಿಗುತ್ತಿತ್ತು.

ಅಧಿಕ ಹಾಲಿಗಾಗಿ ಏನೆಲ್ಲಾ ತಿಂಡಿ ತಿನಿಸುಗಳನ್ನು ಕೊಡಬೇಕೋ ಅದನ್ನೆಲ್ಲಾ ಕ್ರಮಪ್ರಕಾರ ಕೊಡಲಾಗುತ್ತದೆ
ಅಧಿಕ ಹಾಲು ಕೊಡುವ ತಳಿಗಳಿಗೆ ಎಲ್ಲಾ ಸತ್ವಗಳುಳ್ಳ ಆಹಾರವನ್ನು ನೀಡಲಾಗುತ್ತದೆ

ಅಧಿಕ ಹಾಲೂಡುವ ಹಸುಗಳಿಗೆ ದ್ವಿದಳ ಹಿಂಡಿಗಳು, ಏಕದಳ ಹಿಂಡಿಗಳು, ಜೋಳ, ಮುಂತಾದವುಗಳನ್ನು ಸೇರಿಸಿದ ದಾಣಿ ಮಿಶ್ರಣ ಕೊಡಲಾಗುತ್ತದೆ. ಜೊತೆಗೆ ಈಗ ಮಾರುಕಟ್ಟೆಯಲ್ಲಿ ಸಿದ್ದ ರೂಪದಲ್ಲಿ ಸಿಗುವ ಸಮತೋಲನ ಪಶು ಆಹಾರದಲ್ಲಿ ಇವೆಲ್ಲದರ ಜೊತೆಗೆ ಸಾರಜನಕ, ಕಾಕಂಬಿ ಇತ್ಯಾದಿಗಳನ್ನೂ ಸೇರಿಸಿರುತ್ತಾರೆ.  ಇವು ಹಸುಗಳಲ್ಲಿ ಹೇಗೆ ಹಾಲಿನ ಇಳುವರಿ ಹೆಚ್ಚು ಮಾಡುತ್ತವೆಯೋ ಹಾಗೆಯೇ ಅದರ ಸಗಣಿಯಲ್ಲೂ ಅದರ ಶೇ.20-25 ರಷ್ಟನ್ನು  ಹೊರ ಹಾಕುತ್ತವೆ. ಕೆಲವು ಹೈನುಗಾರರು  ಲೆಕ್ಕಕ್ಕಿಂತ ಹೆಚ್ಚು ಆಹಾರ ಕೊಡುವುದೂ ಉಂಟು. ಮನುಷ್ಯನೂ ಸೇರಿದಂತೆ ಪ್ರಾಣಿಗಳಿಗೂ ಆ ದೇಹಕ್ಕೆ ಇಂತಿಷ್ಟೇ ಆಹಾರ ಜೀರ್ಣಿಸಿಕೊಳ್ಳುವ ಶಕ್ತಿ ಇರುತ್ತದೆ. ಅದಕ್ಕಿಂತ ಹೆಚ್ಚು ತಿಂದದ್ದು ತ್ಯಾಜ್ಯದ ಮೂಲಕ ಹೊರ ಬರುತ್ತದೆ. ಅದು ಮಲವೂ ಆಗಿರಬಹುದು. ಮೂತ್ರವೂ ಆಗಿರಬಹುದು, ಬೆವರೂ ಆಗಿರಬಹುದು. ಅಧಿಕ ಹಾಲೂಡುವ ಹಸುಗಳಿಗೆ ಕೊಡುವ ಮೇವು ಸಹ ಅಧಿಕ ಸತ್ವದ್ದು. ಕೆಲವರು ಹೈಬ್ರೀಡ್ ನೇಪಿಯರ್ ನಂತಹ ಹುಲ್ಲನ್ನು ಕೊಡುತ್ತಾರೆ.ಕೆಲವರು ಜೋಳದ ದಂಟನ್ನು ಕೊಡುತ್ತಾರೆ ಮತ್ತೆ ಕೆಲವರು  ರಸ  ಮೇವನ್ನು ಕೊಡುತ್ತಾರೆ. ತೋಟದ ಹುಲ್ಲು ಕೊಡುವುದು ಕಡಿಮೆ. ಜೊತೆಗೆ ಹೆಚ್ಚು ಇಳುವರಿ ಕೊಡುವ ಹಸುಗಳಿಗೆ ಖನಿಜ ಮಿಶ್ರಣ ( Micro nutrients) ವನ್ನೂ ಕೊಡಲಾಗುತ್ತದೆ. ಅದೂ ಸಹ ದೇಹಕ್ಕೆ ಬಳಕೆ ಆಗಿ ಮಿಕ್ಕವು ತ್ಯಾಜ್ಯದಲ್ಲಿ ಸೇರಿರುತ್ತದೆ ಹಾಗಾಗಿ ಜರ್ಸಿ- ಎಚ್ ಎಫ಼್ ಮುಂತಾದ ಹಸುಗಳ ಸಗಣಿಯಲ್ಲಿ ಪೋಷಕಾಂಶ ಹೆಚ್ಚು.

ನಾಟಿ ಹಸುಗಳದ್ದು ಭಿನ್ನ:

ನಾಟಿ ಹಸುಗಳಿಗೆ ಗುಡ್ಡದ ಹುಲ್ಲುಗಾವಲಿನ  ಹಸುರೇ ಪ್ರಮುಖ ಮೇವು.
ನಾಟಿ ಹಸುಗಳಿಗೆ ಗುಡ್ಡದ ಹುಲ್ಲುಗಾವಲಿನ ಹಸುರೇ ಪ್ರಮುಖ ಮೇವು.

ಹಿಂದೆ ನಾಟೀ ಹಸುಗಳನ್ನು  ಮೇಯಲು ಬಿಟ್ಟು ಸಾಕುತ್ತಿದ್ದರು. ಮೇಯುವ ಸ್ಥಳದಲ್ಲಿ ಸಿಗುವ ಆಹಾರ ತಿಂದರೆ ಮತ್ತೆ ಕೊಟ್ಟಿಗೆಯಲ್ಲಿ ರಾತ್ರೆ ಸ್ವಲ್ಪ ಹಸಿ ಅಥವಾ ಒಣ ಮೇವು. ಹಿಂಡಿ ಕೊಡುವ ಪ್ರಮಾಣ ಕಡಿಮೆ. ಅಕ್ಕಿ ತೊಳೆದ ಅಕ್ಕಚ್ಚು, ಉಳಿಕೆಯಾದ ಅನ್ನ  ಹಾಗೂ ಭತ್ತದ ಗದ್ದೆ ಇದ್ದವರು ಅಕ್ಕಿ ತೌಡು ನೀಡುವುದು ಇತ್ತು. ಅದರಲ್ಲಿ ಪೋಷಕಾಂಶಗಳ ಪ್ರಮಾಣ ಕಡಿಮೆ ಇರುತ್ತಿತ್ತು. ಜೊತೆಗೆ ಮೇಯಲು ಹೊರಗೆ ಬಿಡುವ ಪ್ರಾಣಿಗಳಲ್ಲಿ ಆಹಾರದ ವ್ಯಯ ಹೆಚ್ಚು. ತ್ಯಾಜ್ಯದ ಮೂಲಕ ಹೊರ ಹಾಕುವುದು ಕಡಿಮೆ. ಹಾಗೆಂದು ಅವು ತಿನ್ನುವ ಮೇವಿನಲ್ಲಿ ಕೆಲವು ಔಷಧೀಯ ಗುಣ ಇರುತ್ತಿತ್ತು.  ಕಡಿಮೆ ಆಹಾರವನ್ನು ಸೇವಿಸುವ ಕಾರಣ ಸೇವಿಸಿದ್ದನ್ನು ಪೂರ್ಣವಾಗಿ ಜೀರ್ಣಿಸಿಕೊಂಡು  ಹೊರ ಹಾಕುತ್ತವೆ. ಹಾಗಾಗಿ ಸಗಣಿಯಲ್ಲಿ  ಹಳಸಲು ವಾಸನೆ ಇಲ್ಲ. ಅದು ಗಟ್ಟಿಯಾಗಿ  ಮುದ್ದೆ ತರಹ ಇರುತ್ತಿತ್ತು.  ಈಗ ಮೇಯಲು ಬಿಡುವ ಕ್ರಮ ಕಡಿಮೆ. ನಾಟಿ ಹಸುಗಳೂ ಆಹಾರ ಹೆಚ್ಚು ಕೊಟ್ಟರೆ ಹೆಚ್ಚು  ಹಾಲು ಕೊಡುತ್ತವೆ ಎಂದು ಮನವರಿಕೆಯಾಗಿ  ಜನ ಸಿದ್ದ ರೂಪದ ಪಶು ಚಿನ್ನದ ಗೊಬ್ಬರ, ಹಿಂಡಿ ಮುಂತಾದವುಗಳನ್ನು ನೀಡುತ್ತಾರೆ. ನೆಟ್ಟು ಬೆಳೆಸಿದ ಹುಲ್ಲು ನೀಡುತ್ತಾರೆ. ತೋಟಕ್ಕೆ ಗೊಬ್ಬರ ಇತ್ಯಾದಿ ಕೊಡುವ ಕಾರಣ ಆ ಹುಲ್ಲಿನಲ್ಲೂ ಸತ್ವಾಂಶಗಳು ಇರುತ್ತವೆ. ಜೊತೆಗೆ ಬಹುತೇಕ ನಾಟಿ ಎಂದು  ಹೇಳುವವು ಮಿಶ್ರ ತಳಿಗಳೇ ಆಗಿರುವ ಕಾರಣ ಜರ್ಸಿ – ಎಚ್ ಎಫ಼್ ನಷ್ಟು ಆಲ್ಲದಿದ್ದರೂ ಅದಕ್ಕೆ ಸ್ಪರ್ಧಾತ್ಮಕವಾಗಿ ಪೋಷಕಗಳನ್ನು ಹೊಂದಿರುತ್ತದೆ.

ಸೂಕ್ಷ್ಮಾಣು ಜೀವಿಗಳು ಮತ್ತು ಸಗಣಿ:

ಎಚ್ ಎಫ್ – ಜರ್ಸಿ ತಳಿಗಳು  ಹಾಕುವ ಸಗಣಿ ಸ್ವಲ್ಪ ತೆಳುವಾಗಿರುತ್ತದೆ. ಅದರಲ್ಲಿ ಮೇವಿನ ಮತ್ತು ಆಹಾರದ  ಉಳಿಕೆಗಳ ಚೂರುಗಳೂ ಕಾಣಿಸುತ್ತದೆ. ಇದು ಅಧಿಕ ಆಹಾರ ಒದಗಿಸಿದ ಕಾರಣ ಜೀರ್ಣವಾಗದೆ ಹೊರಬಂದದ್ದು. ಇದನ್ನು ತಕ್ಷಣಕ್ಕೆ (ಕೆಲವು ದಿನ) ಸೂಕ್ಷ್ಮಾಣು ಜೀವಿಗಳು ಆಕ್ರಮಿಸಿಕೊಳ್ಳದಿರಬಹುದು.ಆದರೆ ಒಂದೆರಡು ದಿನ ತಡವಾಗಿಯಾದರೂ ಅದನ್ನು ವಿಭಜಿಸಿ ಕಳಿಯಿಸಿಕೊಡುತ್ತವೆ. ನಾಟಿ ಹಸುಗಳ ಸಗಣಿ ಬೆಳಗ್ಗೆ ನೆಲಕ್ಕೆ ಬಿದ್ದರೆ ಮಧ್ಯಾನ್ಹ ಹೊತ್ತಿಗೆ ಅದಕ್ಕೆ ಸೂಕ್ಷ್ಮಾಣು ಜೀವಿ ಪ್ರವೇಶವಾಗುತ್ತದೆ.  ಹಾಗಾಗಿ ಬೇಗ ಅದು ಕಳಿಯುತ್ತದೆ.

ರೈತರು ಈ ವಿಚಾರದಲ್ಲಿ  ಗೊಂದಲಕ್ಕೆ ಒಳಗಾಗಬೇಕಾಗಿಲ್ಲ. ನಾವು ಸಾಕಿದ ಕ್ರಮದಲ್ಲಿ  ಅವುಗಳ ತ್ಯಾಜ್ಯ ಪೋಷಕಗಳಿಂದ ಕೂಡಿರುತ್ತವೆ. ಕಟ್ಟಿ ಸಾಕುವ ಕಾರಣ ನಾಟಿ ಹಸುಗಳಿಗೂ ಸಮತೋಲನ ಆಹಾರ ಈಗ ಅಗತ್ಯ. ಅದನ್ನೆಲ್ಲಾ ಅಗತ್ಯವಿದ್ದಷ್ಟು ಕೊಟ್ಟು ನಾಟೀ ಹಸುಗಳಿಂದಲೂ ಸಂಪಧ್ಭರಿತ ಗೊಬ್ಬರ ಪಡೆಯಬಹುದು.   

Leave a Reply

Your email address will not be published. Required fields are marked *

error: Content is protected !!