ತರಕಾರಿ ಬೆಳೆ ಒಂದು ತಪಸ್ಸು. ಶ್ರದ್ಧೆಯಿಂದ ಮಾಡಿದರೆ ಅದು ಒಲಿಯುತ್ತದೆ. ಹೆಚ್ಚು ಕಾಲಾವಧಿ ಬೇಕಾಗಿಲ್ಲ. ತಪಸ್ಸು ಮಾಡಿ ಫಲ ಪಡೆಯಲು ಋಷಿ ಮುನಿಗಳು ವರ್ಷಾನು ವರ್ಷ ಕಷ್ಟಪಡಬೇಕು. ಆದರೆ ಕೃಷಿಯಲ್ಲಿ ತಪಸ್ಸು ಮಾಡಲು ವರ್ಷ ಗಟ್ಟಲೆ ಕಾಯಬೇಕಾಗಿಲ್ಲ. ಮಾಡಬೇಕಾದುದು ಒಂದೇ, ಸರಿಯಾದ ಹೆಚ್ಚು ಆದಾಯ ಕೊಡಬಲ್ಲ ಬೆಳೆಯ ಆಯ್ಕೆ ..
ತರಕಾರಿ ಬೆಳೆಯ ಅನುಕೂಲಗಳು:
- ಧೀರ್ಘಾವಧಿ ಬೆಳೆಗಳಿಗೆ ಹೆಚ್ಚು ಸಮಯ ಕಾಯಬೇಕು.
- ಆದರೆ ತರಕಾರಿಗೆ ಹಾಗಿಲ್ಲ. ಬೇಗ ಇಳುವರಿ- ಬೇಗ ಆದಾಯ.
- ಬಹುತೇಕ ತರಕಾರಿ ಬೆಳೆಗಳು ನಾಟಿ ಮಾಡಿ 2 ತಿಂಗಳಿಗೆ ಫಸಲು ಕೊಡಲು ಪ್ರಾರಂಭವಾಗುತ್ತದೆ.
- ಕೆಲವು 3 ತಿಂಗಳಿಗೆ ಫಲ ಕೊಟ್ಟು ಮುಗಿಯುತ್ತದೆ.
- ಇನ್ನು ಕೆಲವು 7-8 ತಿಂಗಳ ತನಕವೂ ಫಲ ಕೊಡುತ್ತಾ ಇರುತ್ತದೆ.
- ಅಲ್ಪಾವಧಿಯ ತರಕಾರಿ ಬೆಳೆಗಳಿಗೆ ಸ್ವಲ್ಪ ನಿಗಾ ಹೆಚ್ಚು ಕೊಡಬೇಕು.
- ಅದಕ್ಕನುಗುಣವಾಗಿ ಅದರಲ್ಲಿ ಪ್ರತಿಫಲವೂ ಹೆಚ್ಚು.
- ನಿರೀಕ್ಷೆಯ ಫಲ ಪಡೆಯಲು ಸಾಧನೆ ಅಗತ್ಯ.
ನಾವು ಹಿಂದೆ ಇದ್ದೇವೆ:
- ನಾವು ಹೀಗೇ ಲೋಕಾಭಿರಾಮ ಮಾತನಾಡುವುದುಂಟು.
- ಆಂಧ್ರದವರು ಭತ್ತ ಬೆಳೆದರೆ ಅವರು ಹೇಗಪ್ಪಾ ಎಕ್ರೆಗೆ -40-50 ಕ್ವಿಂಟಾಲಿಗೂ ಹೆಚ್ಚು ಇಳುವರಿ ಪಡೆಯುತ್ತಾರೆ.
- ಅವರಿಗೇ ಆಗಬಹುದು, ನಮ್ಮಿಂದಾಗಲಿಕ್ಕಿಲ್ಲ ಎಂದು. ಇದುವೇ ನಮ್ಮ ಅಸಹಾಯಕತೆ.
- ಕೇರಳಿಗರು ಶುಂಠಿ ಬೆಳೆದರೆ ನಾವು ಪಡೆಯುವುದಕಿಂತ ದುಪ್ಪಟ್ಟು ಇಳುವರಿ ಪಡೆಯುತ್ತಾರೆ.
- ನಮಗೆ ಆಗುವುದಿಲ್ಲ ಯಾಕೋ ಗೊತ್ತಿಲ್ಲ.
ಆಗದು ಎಂಬ ಮಾತು ನಮ್ಮ ಹಿನ್ನಡೆ. ಯಾರೇ ಆದರೂ ಅದಕ್ಕೆ ಹಾಕುವ ಶ್ರಮ ಮತ್ತು ಬೆಳೆಯುವ ವಿಧಾನದಲ್ಲಿ ಅದರ ಅಧಿಕ ಇಳುವರಿ ನಿರ್ಧಾರವಾಗುವುದು. ಯಾರೂ ಉತ್ಪಾದನಾ ವೆಚ್ಚವನ್ನು ಸಾಧ್ಯವಾದಷ್ಟು ಕಡಿಮೆ ಮಾಡಿಕೊಂಡೇ ಇಳುವರಿ ಪಡೆಯುವುದು.
- ಹಾಗೆ ಮಾಡದಿದ್ದರೆ ಕೃಷಿ ಲಾಭಾಯಕವಾಗುವುದಿಲ್ಲ.
- ಬಿತ್ತನೆ ಮಾಡುವ ಮುಂಚೆ ಸೂಕ್ತ ತಳಿ , ಫಸಲು ಬರುವ ತನಕ ಹೊಲದಲ್ಲೇ ಮೊಕ್ಕಾಂ ಹೂಡುವುದರಿಂದ ಸಾಧಿಸಲು ಸಾಧ್ಯವಾಗುತ್ತದೆ.
- ಮೇಲೆ ಹೇಳಿದ ಬೇರೆ ರಾಜ್ಯದವರು ಮಾಡುವುದು ಅದನ್ನೇ.
ತರಕಾರಿ ಬೇಸಾಯದಲ್ಲೂ ನಮ್ಮವರಿಗಿಂತ ಆಂಧ್ರ ಹಾಗೂ ತಮಿಳುನಾಡಿನ ರೈತರು ಇಲ್ಲಿ ಸಾಧನೆ ಮಾಡಿ ಬಂದು ಬೆಳೆ ಬೆಳೆದು ಅಧಿಕ ಇಳುವರಿ ಪಡೆಯುತ್ತಾರೆ.
ತಾಂತ್ರಿಕತೆ ಇದೆ- ಬಳಸಿಕೊಳ್ಳುತ್ತಿಲ್ಲ.
- ನಮ್ಮಲ್ಲಿ ಅಧಿಕ ಇಳುವರಿ ಪಡೆಯುವ ತಾಂತ್ರಿಕತೆ ಇದೆ.
- ಆ ಪ್ರಕಾರ ಬೇಸಾಯ ವಿಧಾನವನ್ನು ಅನುಸರಿಸಿದ್ದೇ ಆದರೆ ಗರಿಷ್ಟ ಇಳುವರಿ ಪಡೆಯಲು ಸಾಧ್ಯವಾಗುತ್ತದೆ.
ಬೆಂಗಳೂರು ಕೃಷಿ ವಿಶ್ವ ವಿಧ್ಯಾನಿಲಯದ ವಿಜ್ಞಾನಿಗಳು ಇಂತಹ ಅಧಿಕ ಆದಾಯದ ಅಲ್ಪಾವಧಿ ತರಕಾರಿ ಬೆಳೆ ಬೆಳೆಸುವ ತಾಂತ್ರಿಕತೆಯನ್ನು ತೋರಿಸಿಕೊಟ್ಟಿದ್ದಾರೆ.
- ಇವರ ಪ್ರಕಾರ ಮೀಟರ್ ಹುರುಳಿ ಅಥವಾ ಮೀಟರು ಅಲಸಂಡೆ ಬೆಳೆದರೆ ಒಂದು ಎಕ್ರೆಗೆ ಕೇವಲ 110 ದಿನದಲ್ಲಿ 25 -30 ಟನ್ ಉತ್ಪಾದನೆ ಮಾಡಬಹುದು ಎಂಬುದನ್ನು ಮಾಡಿ ತೋರಿಸಿದ್ದಾರೆ.
- ಮೀಟರು ಹುರುಳಿ ಅಧಿಕ ಇಳುವರಿ ಕೊಡುವ ಯಾವಾಗಲೂ ಬೇಡಿಕೆ ಇರುವ ತರಕಾರಿ.
- ಇದಕ್ಕೆ ಏನಿಲ್ಲವೆಂದರು ಕಿಲೋಗೆ 25 ರೂ ಧಾರಣೆ ಇರುತ್ತದೆ.
- ಎಕ್ರೆಗೆ 30 ಟನ್ ಉತ್ಪಾದನೆ, ಇದರಲ್ಲಿ ದೊಡ್ದ ವಿಚಾರ ಅಲ್ಲ.
- ಸುಮಾರು 20 ಅಲಸಂಡೆ 1ಕಿಲೋ ತೂಗುತ್ತದೆ.
- ನೆಟ್ಟು 40-50 ದಿನಕ್ಕೆ ಇಳುವರಿಗೆ ಪ್ರಾರಂಭವಾಗುತ್ತದೆ.
- ನಂತರ ಅದು ಸುಮಾರು 110 ದಿನಗಳ ತನಕ ಇಳುವರಿ ಕೊಡುತ್ತಿರುತ್ತದೆ.
ರೀನೂ ತಳಿಯ ಅಲಸಂಡೆಯನ್ನು ಬೆಳೆಸಿದ್ದು , ಅದರಲ್ಲಿ ಕೆಂಪು ಹಾಗೂ ಹಸುರು ಎರಡೂ ಏಕ ಪ್ರಕಾರವಾಗಿ ಇಳುವರಿ ಕೊಡುತ್ತದೆಯಂತೆ.
- ಮೀಟರು ಹುರುಳಿಯಷ್ಟು ಅಧಿಕ ಇಳುವರಿ ನೀಡಬಲ್ಲ ಬೇರೆ ಯಾವುದೇ ಅಲಸಂಡೆ ಇಲ್ಲ.
- ಇದು ಬೇಗನೆ ಬೆಳೆಯುವುದಿಲ್ಲ. ನಾರು ಕಡಿಮೆ.
- ತೆರೆದ ವಾತಾವರಣದಲ್ಲೂ ಬೆಳೆಯಬಹುದು, ಪಾಲೀ ಹೌಸ್ ನಲ್ಲೂ ಬೆಳೆಯಬಹುದು.
- ನೆಲದಲ್ಲಿ ಬೆಡ್ ಮಾಡಿ ಪಾಲಿಥೀನ್ ಶೀಟು ಹೊದಿಸಿ 60X 40 ಅಂತರದಲ್ಲಿ ಬೀಜ ಬಿತ್ತನೆ ಮಾಡಬೇಕು.
- ಹನಿ ನೀರಾವರಿ ಮಾಡಿ ಶಿಫಾರಿತ ಪ್ರಮಾಣದ ಗೊಬ್ಬರ ಮತ್ತು ಕಾಲಮಾನಕ್ಕನುಗುಣವಾಗಿ ಬೆಳೆ ಸಂರಕ್ಷಕಗಳನ್ನು ಬಳಸಿದಾಗ ಈ ಇಳುವರಿಯನ್ನು ಪಡೆಯಬಹುದೆನ್ನುತ್ತಾರೆ.
ಇದು ಒಂದು ಬೆಳೆಯಿಂದ ಪಡೆಯಬಹುದಾದ ಇಳುವರಿ . ಆ ಜಾಗದಲ್ಲಿ ಮುಂದೆ ಬೆಳೆ ಪರಿವರ್ತನೆ ಮಾಡಿ ಟೊಮಾಟೋ ಅಥವಾ ಮೆಣಸಿನ ಕಾಯಿ ಬೆಳೆದರೆ ಅದರಲ್ಲೂ ಸುಮಾರು 2-3 ಲಕ್ಷ ಆದಾಯ ಪಡೆಯಬಹುದು. ಈ ಲೆಕ್ಕಾಚಾರದಲ್ಲಿ ಒಂದು ಎಕ್ರೆಯ ವಾರ್ಷಿಕ ಉತ್ಪಾದಕತೆ ಸುಮಾರು 10 ಲಕ್ಷಗಳಷ್ಟು.