ರೈತರೇ ಮುಂದಿನ ವರ್ಷದ ಪರಿಸ್ಥಿತಿ ತುಂಬಾ ಅನಿಶ್ಚಿತವಾಗಿದ್ದು, ಕೆಲವು ಆಯ್ದ ಬೆಳೆಗಳನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯಬೇಕೇ ಬೇಡವೇ ಎಂದು ಎರಡೆರಡು ಬಾರಿ ಯೋಚಿಸಿ ಮುನ್ನಡೆಯಿರಿ.
ಒಂದೆಡೆ ಕೊರೋನಾ ಮಹಾಮಾರಿ ಮನುಕುಲವನ್ನು ಅಟ್ಟಾಡಿಸುವಂತೆ ಕಾಣಿಸುತ್ತದೆ. ಇದು ಕಳೆದ ವರ್ಷಕ್ಕೆ ಮುಗಿಯಲಿಲ್ಲ, ಈ ವರ್ಷವೂ ವಕ್ಕರಿಸಿದೆ. ಇದು ಬೇಗ ಮುಗಿಯುವಂತೆ ಕಂಡು ಬರುವುದಿಲ್ಲಅ ಮುಂದೆ ಏನು ಎಂದು ಪ್ರಶ್ಣೆಯಾಗಿಯೇ ಇದೆ. ಹವಾಮಾನ ಸಹ ತನ್ನ ಮಾಮೂಲು ಚಕ್ರವನ್ನು ಬದಲಿಸಿದಂತಿದೆ. ಮುಂಗಾರು ಸಹ ಕೈಕೊಡಬಹುದೇನೋ ಅನ್ನಿಸುತ್ತಿದೆ. ಪೆಟ್ರೋಲ್ –ಡೀಸೆಲ್ ಬೆಲೆ ಗಗನಕ್ಕೇರಿದೆ.ಸರಕಾರವೂ ಆರ್ಥಿಕವಾಗಿ ಕುಗ್ಗಿದೆ.ಮುಂದೆ ಕೃಷಿ ಒಳಸುರಿಗಳಿಗೆ GST ಸಹ ಹೆಚ್ಚಳ ಆಗಬಹುದು. ಜನ ಜೀವನ ದುಬಾರಿಯಾಗುತ್ತದೆ. ಹೀಗಿರುವಾಗ ರೈತರು ಯಾವ ರೀತಿ ಹೆಜ್ಜೆ ಇಡಬೇಕು ಎಂಬುದು ಇಲ್ಲಿ ಪ್ರಾಮುಖ್ಯ ವಿಚಾರ. ಬಹುಷಃ ರೈತರು ಆಯ್ದ ಹೆಚ್ಚು ಸಮಯದ ದಾಸ್ತಾನು ಇಡಲು ಸಾಧ್ಯವಿಲ್ಲದ ಬೆಳೆಗಳನ್ನು ದೊಡ್ದ ಪ್ರಮಾಣದಲ್ಲಿ ಬೆಳೆಸಬೇಕೇ ಬೇಡವೇ ಯೋಚಿಸಿ,
ರೈತರಿಗೆ ಖರ್ಚು ಕಡಿಮೆ ಆಗಬೇಕು. ಮಾರುಕಟ್ಟೆಯಲ್ಲಿ ಕೊರತೆಯ ಸ್ಥಿತಿ ಉಂಟಾಗಬೇಕು.ಬೇಡಿಕೆ ಸೃಷ್ಟಿಯಾಗಬೇಕು. ಆಗ ಬೆಳೆದವರಿಗೆ ನಿರೀಕ್ಷೆಯ ಬೆಲೆ ದೊರೆಯಲು ಸಾಧ್ಯ.
ಯಾವುದೂ ಮಿಗತೆ ಆಗದಿರಲಿ:
- ಈ ವರ್ಷ ಅಕ್ಕಿಯ ಬೆಲೆ ಕಡಿಮೆಯಾಗಿದೆ. ಅಕ್ಕಿ ಗಿರಣಿಗಳಿಗೆ ಭತ್ತ ಸಾಕಷ್ಟು ಬರುತ್ತಿದೆ.
- ಭತ್ತದ ಉತ್ಪಾದನೆ ಹೆಚ್ಚಳವಾದ ಕಾರಣ ಹೀಗೆ ಆಗಿದೆ.
- ಒಂದು ವೇಳೆ ಸರಕಾರ BPL ಕಾರ್ಡ್ ಗಳಿಗೆ ಅಕ್ಕಿ ವಿತರಣೆ ಮಾಡದೆ ಇರುತ್ತಿದ್ದರೆ, ಅಕ್ಕಿ ಮಿಗತೆಯಾಗಿ ದರ ಭಾರೀ ಇಳಿಕೆಯಾಗುತ್ತಿತ್ತು.
- ಯಾವಾಗಲೂ ಕೆಲವು ಕೃಷಿ ಉತ್ಪನ್ನಗಳು ದೇಶೀಯವಾಗಿ ಎಷ್ಟು ಬೇಡಿಕೆ ಇದೆಯೋ ಅದಕ್ಕಿಂತ ಮಿಗತೆ ಆಗಲೇ ಬಾರದು.
- ಹಣ್ಣು ಹಂಪಲುಗಳಿಗೆ ಹೆಚ್ಚಿನ ಬೇಡಿಕೆ ಇರುವ ಈ ಸಮಯದಲ್ಲಿ ಬಂದ ಕೊರೋನಾ ದಂತಹ ಸಮಸ್ಯೆ ಎಷ್ಟೊಂದು ನಷ್ಟವನ್ನು ತಂದೊಡ್ಡಿತು?
- ಹೂಡಿದ ಬಂಡವಾಳಕ್ಕೆ ಮತ್ತು ಶ್ರಮಕ್ಕೆ ತಕ್ಕಂತೆ ಪ್ರತಿಫಲ ಸಿಗದ ಸನ್ನಿವೇಶ ಇರುವಾಗ ರೈತರು ಬಹಳ ಜಾಗರೂಕತೆಯಲ್ಲಿ ಹೆಜ್ಜೆ ಇಡಬೇಕು.
- ಮಾರುಕಟ್ಟೆಯಲ್ಲಿ ಕೊರತೆಯ ವಾತಾವರಣ ಸೃಷ್ಟಿಯಾದರೆ ರೈತನ ಉತ್ಪನ್ನಗಳಿಗೆ ಉತ್ತಮ ಬೇಡಿಕೆಯೂ ಇರುತ್ತದೆ, ಬೆಲೆ ಬೆಲೆಯೂ ಸಿಗುತ್ತದೆ.
ಅಧಿಕ ಉತ್ಪಾದನೆ ಮತ್ತು ತೊಂದರೆ:
- ರೈತರು ತಮ್ಮ ವೃತ್ತಿಗೆ ರಜೆ ಕೊಡುವಂತಿಲ್ಲ. ಹಾಗೆ ಮಾಡಿದರೆ ಅದು ಅವನ ಹೊಟ್ಟೆಗೆ ಕಲ್ಲು ಹಾಕಿಕೊಂಡಂತೆ.
- ಆದರೆ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳಬಹುದು.
- ರೈತರು ತಮ್ಮ ಅದೃಷ್ಟ ಪರೀಕ್ಷೆಗಾಗಿ ಹೆಚ್ಚು ಹೆಚ್ಚು ಬೆಳೆ ಬೆಳೆಯುತ್ತಾರೆ.
- ಕಳೆದ ವರ್ಷ ಕೊರೋನಾ ಕಾರಣದಿಂದ (Covid -19 effect)ಬಹಳಷ್ಟು ಜನ ಬೇಸಾಯ ಮಾಡದೆ ಬಿಟ್ಟಿದ್ದ ಹೊಲಗಳಲ್ಲಿ ಬೆಳೆ ಬೆಳೆದರು.
- ಆದರೆ ಭತ್ತದ ಬೇಡಿಕೆ ಕಡಿಮೆಯಾಗಿ ರೈತರಿಗೆ ನಷ್ಟವೇ ಆದದ್ದು.
- ಭತ್ತದ ಬೆಳೆಯ ಈಗಿನ ಬೆಲೆ ಅದರ ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ. ಹೀಗೆ ಪ್ರತೀಯೊಂದು ಬೆಳೆಯೂ ಸಹ.
- ಈ ವರ್ಷದ ಶುಂಠಿ ಬೆಳೆಯ ಪರಿಸ್ಥಿತಿ ಏನಾಯಿತು ತಮಗೆಲ್ಲಾ ಗೊತ್ತಿದೆ. ಬಹುಶಃ ಈ ವರ್ಷ ಶುಂಠಿ ಬೆಳೆಗಾರರು ಅನುಭವಿಸಿದ ನಷ್ಟ ಅಪಾರ.
- ಬಾಳೆ ಹಾಗೆಯೇ ಇನ್ನಿತರ ಹಣ್ಣು ಹಂಪಲುಗಳು ಸಹ ಎಲ್ಲಾ ಎಲ್ಲವೂ ಸರಿಯಾಗಿದ್ದರೆ ಮಾತ್ರ ಬೇಡಿಕೆಯೂ ಇರುತ್ತದೆ.
- ಬೆಲೆಯೂ ಇರುತ್ತದೆ. ಈ ವರ್ಷ ನೇಂದ್ರ ಬಾಳೆ ಬೆಳೆದವರು ಪಡೆದ ಬೆಲೆ ಕೇಳಿದರ ಮುಂದೆ ಅವರು ಬೆಳೆ ಬೆಳೆಯಲೇ ಮುಂದಾಗಲಾರರು.
ಅನನಾಸು ಬೆಳೆದವರ ಕಥೆಯೂ ವ್ಯಥೆಯೇ ಆಗಿದೆ. ದ್ರಾಕ್ಷಿ ಬೆಳೆಗಾರರರದ್ದೂ ಇದೇ ಕಥೆ. ಎಲ್ಲದಕ್ಕೂ ಅನುಕೂಲಕರ ವಾತಾವರಣ ಬೇಕು. ಆದರೆ ಮುಂದಿನ ಒಂದೆರಡು ವರ್ಷ ತುಂಬಾ ಕಷ್ಟದ ದಿನಗಳೇ ಆಗಲಿವೆ ಎನ್ನುತ್ತಾರೆ ಕೆಲವು ತಜ್ಞರು.
- ಜನರ ಕೈಯಲ್ಲಿ ಖರೀದಿ ಸಾಮರ್ಥ್ಯ ಇರುವ ತನಕ ಬೇಡಿಕೆ ಇರುತ್ತದೆ ಎಂಬುದು ಈ ತನಕದ ಬೇಡಿಕೆ ಸಿದ್ದಾಂತ.
- ಈಗಿನ ಕಾಲ ಸ್ಥಿತಿಯಲ್ಲಿ ಅದು ಸ್ವಲ್ಪ ಬದಲಾಗಿದೆ.
- ಈಗ ಖರೀದಿ ಸಮಾರ್ಥ್ಯಕ್ಕಿಂತಲೂ ಅನುಕೂಲಕರ ಸನ್ನಿವೇಶವೇ ಪ್ರಾಮುಖ್ಯ.
- ಎಲ್ಲೆಲ್ಲೋ ಬೇಡಿಕೆ ಇದ್ದರೆ ಅಲ್ಲಿಗೆ ತಲುಪಿಸಲು ಸಾಗಾಣಿಕೆ ವೆಚ್ಚ.
- ಅಲ್ಲದೆ ಕೊರೋನಾ ದಂತಹ ಸಂಧಿಗ್ಧ ಪರಿಸ್ಥಿತಿಗಳು.
- ಕಳೆದ ವರ್ಷಕ್ಕೆ ಏನೋ ಹೀಗಾಯಿತು ಎಂದು ಮುಂದೆ ಎಲ್ಲಾ ಸರಿಯಾಗುತ್ತದೆ ಎಂದುೇಕಾಗಿಲ್ಲ.
- ಈ ವರ್ಷ ಮತ್ತೆ ಬೇಡಿಕೆ ಹೆಚ್ಚು ಇರುವ ಈ ಸಮಯದಲ್ಲೇ ಮತ್ತೆ ಸಮಸ್ಯೆ ಉಂಟಾಗಿದೆ.
ಸ್ವಲ್ಪ ಸ್ವಲ್ಪ ಬೆಳೆಯಿರಿ:
- ಒಂದೇ ಕಾಲಕ್ಕೆ ಬೆಳೆ ಕಠಾವಿಗೆ ಬರುವಂತೆ ಬೆಳೆ ಯೋಜನೆ ಹಾಕಿಕೊಳ್ಳಬೇಡಿ.
- ಬಾಳೆ ಬೆಳೆಯುವುದಿದ್ದರೆ ಪ್ರತೀ ತಿಂಗಳೂ ಕೊಯಿಲಿಗೆ ಸಿಗುವಂತೆ ಬೆಳೆ ಯೋಜನೆ ಹಾಕಿಕೊಳ್ಳಿ.
- ತರಕಾರಿಗಳನ್ನೂ ಹಾಗೆಯೇ ಬೆಳೆಸಿ.
- ಸಾಧ್ಯವಾದಷ್ಟು ಸ್ವಲ್ಪ ಸಮಯದ ತನಕ ದಾಸ್ತಾನು ಇಡಬಹುದಾದ ಬೆಳೆಗಳನ್ನು ಬೆಳೆಸಿ.
- ಭತ್ತ ಬೆಳೆಯುವವರು ಉತ್ತಮ ಫಲವತ್ತತೆ ಇರುವ ಹೊಲದಲ್ಲಿ ಮಾತ್ರ ಬೆಳೆಯಿರಿ.
- ಮಳೆಯಾಶ್ರಿತ ಹೊಲದಲ್ಲಿ ತರಕಾರಿ , ಸಿರಿ ಧಾನ್ಯ, ಗಡ್ಡೆ ಗೆಣಸು ಮುಂತಾದ ಬೆಳೆಗಳನ್ನು ಬೆಳೆಸುವ ಮೂಲಕ ಬದಲಿ ಆದಾಯದ ಬೆಳೆಗಳ ಬಗ್ಗೆ ಗಮನ ಹರಿಸಿ. ಈ ವರ್ಷ ಮಾವು ಬೆಳೆಗಾರರು ತಮ್ಮ ಬೆಳೆಯಲ್ಲಿ ಒಂದು ಬದಲಾವಣೆ ಮಾಡಿಕೊಂಡಿರುವುದನ್ನು ಗಮನಿಸಿದ್ದೀರಾ? ಮಳೆಗಾಲ ಕಳೆಯುವಾಗ ಮಾರುಕಟ್ಟೆಯಲ್ಲಿ ಮಾವು ಇತ್ತು. ಪ್ರಸಿದ್ದ ನಾಟಿ ಮಾವು, ಸಕ್ಕರೆ ಮಾವು ಈ ವರ್ಷ ಜನವರಿಯಲ್ಲೇ ಮಾರುಕಟ್ಟೆಗೆ ಬಂದಿದೆ. ಇದೆಲ್ಲಾ ತಂತ್ರಜ್ಞಾನ ಅಳವಡಿಸಿಕೊಂಡು ಬೇಗ ಬೆಳೆ ಪಡೆದದ್ದು. ಆ ಸಮಯದಲ್ಲಿ ಅಕಾಲದ ಮಾವು ಆದ ಕಾರಣ ಬೆಲೆಯೂ ಸಿಕ್ಕಿದೆ. ಹೀಗೆ ರೈತರು ಮುಂದಿನ ಅನಿಶ್ಚಿತತೆಯ ದಿನಗಳಲ್ಲಿ ತಮ್ಮ ಬಚಾವಿನ ದಾರಿಯನ್ನು ಕಂಡುಕೊಳ್ಳಬೇಕಾಗಿದೆ.
ದಾಸ್ತಾನು ಇಡುವ ಬೆಳೆ ಬೆಳೆಯಿರಿ:
- ಬೇಗ ಕೆಡುವ ಹಣ್ಣು ತರಕಾರಿಗಳ ಬೆಳೆಯನ್ನು ಹೆಚ್ಚು ಮಾಡಬೇಡಿ.
- ತೀರಾ ಕಡಿಮೆಯೂ ಮಾಡಬೇಡಿ. ಒಂದು ತಿಂಗಳ ತನಕವಾದರೂ ದಾಸ್ತಾನು ಇಡಬಹುದಾದ ಬೆಳೆಗಳನ್ನು ಆಯ್ಕೆ ಮಾಡಿ.
- ಸ್ಥಳೀಯವಾಗಿ ಬೇಡಿಕೆ ಬೇಡಿಕೆ ಇರುವ ( ರಾಜ್ಯದ ಒಳಗಡೆ )ಕೃಷಿ ಉತ್ಪನ್ನಗಳನ್ನು ಬೆಳೆಸಿದರೆ ಉತ್ತಮ.
ಇದು ಒಬ್ಬರು ಇಬ್ಬರು ಮಾಡುವಂತದ್ದಲ್ಲ. ಸಾಮೂಹಿಕವಾಗಿ ಎಲ್ಲಾ ರೈತರೂ ಇದನ್ನು ಯೋಚಿಸಬೇಕು. ಒಂದು ಎಕ್ರೆ ಬೆಳೆಯುವವರು ಅದಕ್ಕಿಂತ ಹೆಚ್ಚು ಮಾಡಬೇಡಿ. ಸಾಧ್ಯವಾದರೆ ಕಡಿಮೆ ಮಾಡಿ. ಮುಂದಿನ ದಿನಗಳಲ್ಲಿ ಕಷ್ಟದ ದಿನಗಳನ್ನು ಎದುರಿಸುವವರು ಕೃಷಿಕರು ಮಾತ್ರ. ಅತ್ತ ಬಡವರೂ ಅಲ್ಲ, ಇತ್ತ ಧನಿಕರೂ ಅಲ್ಲದ ಅಸಂಘಟಿತ ವರ್ಗದ ಮೇಲೆ ಅಪರೋಕ್ಷವಾಗಿ ಎಲ್ಲಾ ಪ್ರಹಾರಗಳೂ ಬೀಳುತ್ತಲೇ ಇರುತ್ತದೆ. ಜಾಗರೂಕರಾಗಿರಿ.