ಮಣಕ ಅಥವಾ ಒಣ ದ್ರಾಕ್ಷಿ ಮಾಡಿದರೆ ಅದನ್ನು ಹೆಚ್ಚು ಸಮಯದ ತನಕ ದಾಸ್ತಾನು ಇಟ್ಟು ಮಾರಾಟ ಮಾಡಬಹುದು. ಇದಕ್ಕೆ ಮಧ್ಯವರ್ತಿಗಳು, ದಾಸ್ತಾನುಗಾರರು, ಚಿಲ್ಲರೆ ಮಾರಾಟಗಾರರು ಬೇಕಾಗಿಲ್ಲ. ನೀವು ಬುದ್ದಿವಂತರಾಗಿದ್ದರೆ ಆನ್ ಲೈನ್ ಮೂಲಕ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಬಹುದು.
- ಸರಕಾರ ದ್ರಾಕ್ಷಿ ಬೆಳೆಗಾರರ ಸಮಸ್ಯೆ ನಿವಾರಣೆಗೆ ವೈನರಿಯನ್ನು ಎಲ್ಲಾ ತೆರೆಯುವಂತೆ ಸೂಚಿಸಿದೆಯಂತೆ.
- ಈ ವೈನರಿಗಳು ಕೊಡುವ ಬೆಲೆ ಬರೇ ಜುಜುಬಿ.
- ಅದರ ಬದಲು ಮಣಕ ಮಾಡಿದರೆ ಲಾಭ ಹೆಚ್ಚು.
ಉತ್ತರ ಕರ್ನಾಟಕದ ಬಿಜಾಪುರ, ಬಾಗಲಕೊಟೆಯ ದ್ರಾಕ್ಷಿ ಬೆಳೆಗಾರರು ತಾವು ಬೆಳೆದ ದ್ರಾಕ್ಷಿಯನ್ನು ತಾಜಾ ಹಣ್ಣಾಗಿ ಮಾರಾಟ ಮಾಡುವುದಲ್ಲ.
- ಅರ್ಧಕ್ಕೂ ಹೆಚ್ಚಿನ ದ್ರಾಕ್ಷಿಯನ್ನು ಮಣಕ ಅಥವಾ ಒಣ ದ್ರಾಕ್ಷಿ ಮಾಡಿ ನಂತರ ಬೇಡಿಕೆ ಹೊಂದಿ ಮಾರಾಟ ಮಾಡುತ್ತಾರೆ.
- ಬಹುತೇಕ ದ್ರಾಕ್ಷಿ ಬೆಳೆಗಾರರು ಸಮೀಪದ ಕೋಲ್ಡ್ ಸ್ಟೋರೇಜ್ ನಲ್ಲಿ ತಮ್ಮ ಒಣ ದ್ರಾಕ್ಷಿಯನ್ನು ಇಟ್ಟು ಕೊಂಡಿರುತ್ತಾರೆ.
- ಸರಿಯಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರ ಕಾರ್ಯ ಕೈಗೊಂಡರೆ ಒಣ ದ್ರಾಕ್ಷಿ ಮಾರಾಟಕ್ಕೆ ಈಗ ಕಷ್ಟ ಇಲ್ಲ.
ಒಣ ದ್ರಾಕ್ಷಿ ಹೇಗೆ:
- ದ್ರಾಕ್ಷಿ ಹಂದರದಲ್ಲಿ ಸ್ವಲ್ಪ ಬೇಗ ಬೆಳೆ ಬಂದರೆ ಆಗ ಅದಕ್ಕೆ ತಾಜಾ ಹಣ್ಣಾಗಿ ಬೇಡಿಕೆ ಇರುತ್ತದೆ.
- ಮಾರ್ಚ್ ತನಕ ಬಿಜಾಪುರದ ದ್ರಾಕ್ಷಿಗೆ ತಾಜಾ ಹಣ್ಣಾಗಿ ಬೇಡಿಕೆ.
- ನಂತರ ಬೆಂಗಳೂರಿನ ದ್ರಾಕ್ಷಿ ಮಾರುಕಟ್ಟೆಗೆ ಬರುತ್ತದೆ.
- ಇಲ್ಲಿಯ ದ್ರಾಕ್ಷಿ ಮಣಕ ಆಗುತ್ತದೆ.
- ಚೆನ್ನಾಗಿ ಹಣ್ಣಾದ ದ್ರಾಕ್ಷಿಯನ್ನು ಮಾತ್ರ ಮಣಕ ಮಾಡಲು ಬಳಸಲಾಗುತ್ತದೆ.
- ತಡವಾಗಿ ಕೊಯಿಲು ಮಾಡಬೇಕು. ಆಗ ಅದರ TSS ( ಸಕ್ಕರೆ ಪ್ರಮಾಣ) ಉತ್ತಮವಾಗಿರುತ್ತದೆ.
- ಕೊಯಿಲು ಮಾಡಿದ ದ್ರಾಕ್ಷಿಯಲ್ಲಿ ಹಾಳಾದುದನ್ನು ಪ್ರತ್ಯೇಕಿಸಿ ನೀರಿನಲ್ಲಿ ತೊಳೆದು ನಂತರ 100 ಲೀ ನೀರಿಗೆ 1 ಲೀ. ಈಥೇಲ್ ಓಲಿಯೇಟ್ ಮತ್ತು 2 ಕಿಲೊ ಪೊಟ್ಯಾಶಿಯಂ ಕಾರ್ಬೋನೇಟ್ ನಲ್ಲಿ 2-3 ನಿಮಿಷ ಅದ್ದಿ ( ಈಗ ಡಿಪ್ಪಿಂಗ್ ಆಯಿಲ್ ಎಂಬುದು ಸಿಗುತ್ತದೆ).
- ಅದನ್ನು ಒಣಗಿಸುವ ಚಪ್ಪರದಲ್ಲಿ ಗೊಂಚಲುಗಳನ್ನು ತೆಳುವಾಗಿ ಹರಡಬೇಕು.
- ಹೀಗೆ ಇಟ್ಟಂತದ್ದನ್ನು ಅಗತ್ಯ ಇದ್ದರೆ ಮೇಲೆ ಕೆಳಗೆ ವರ್ಗಾಯಿಸಬೇಕಾಗುತ್ತದೆ.
- ಸುಮಾರು 15-20 ದಿನಗಳಲ್ಲಿ ಇದು ಒಣಗುತ್ತದೆ.
ಎರಡನೆಯ ಪದ್ದತಿ ಕೊಯಿಲು ಮಾಡಿದ ದ್ರಾಕ್ಷಿಯನ್ನು ಯಾವುದೇ ರಾಸಾಯನಿಕ ದ್ರಾವಣದಲ್ಲಿ ಅದ್ದದೆ ನೀರಿನಲ್ಲಿ ತೊಳೆದು ಒಣಗಿಸುವುದು. ಇದಕ್ಕೆ ಕೆಲವು ಕಡೆ ಮಾರುಕಟ್ಟೆ ಇದೆ. ಇದು ಉತ್ತಮ ಗುಣಮಟ್ಟದ ದ್ರಾಕ್ಷಿಯಗಿರುತ್ತದೆ.
- ಮೊದಲ ಕ್ರಮದಲ್ಲಿ ಒಣಗಿಸಲ್ಪಟ್ಟ ದ್ರಾಕ್ಷಿ ಹಳದಿ ಬಣ್ಣದಲ್ಲಿ ಪಾರದರ್ಶಕವಾಗಿರುತ್ತದೆ.
- ಎರಡನೇ ವಿಧಾನದಲ್ಲಿ ಒಣಗಿಸಿದ ದ್ರಾಕ್ಷಿ ಹಸುರು ನೈಸರ್ಗಿಕ ಬಣ್ಣದಲ್ಲಿರುತ್ತದೆ.
ವಿಜಯಪುರ ಒಣ ದ್ರಾಕ್ಷಿಗೆ ಪ್ರಸಿದ್ಧಿ:
- ಒಣಗಿಸಲ್ಪಟ್ಟ ದ್ರಾಕ್ಷಿ ಗೂಂಚಲು ಕಬ್ಬ್ಬಿಣದ ಮೆಶ್ ನ ಹಂದರದಲ್ಲಿರುವಾಗ ಎರಡು ಕಬ್ಬಿಣದ ಪಟ್ಟಿ ರಾಡ್ ಅನ್ನು ಕೀಳಗೆ ಮೇಲೆ ಇಟ್ಟು ಎರಡೂ ಕಡೆಯಲ್ಲಿ ಹಿಡಿದು ಎಳೆದಾಗ ಗೊಂಚಲಿನಿಂದ ದ್ರಾಕ್ಷಿ ಹಣ್ಣುಗಳು ಬಿಡುತ್ತವೆ.
- ಇದನ್ನು ನಂತರ ಬೇರೆ ವ್ಯವಸ್ಥೆಗೆ ಸಾಗಿಸಲಾಗುತ್ತದೆ.
- ಬಿಜಾಪುರ ರಾಜ್ಯದ ಒಣ ಪ್ರದೇಶ.ಇಲ್ಲಿ ಅತಿಯಾದ ಬಿಸಿಲು ಇರುವ ಕಾರಣ ಇಲ್ಲಿನ ದ್ರಾಕ್ಷಿ ಮಣಕ ಮಾಡಲು ಚೆನ್ನಾಗಿ ಹೊಂದಿಕೆಯಾಗುತ್ತದೆ.
- ಇಲ್ಲಿ ಮಣಕ ಮಾಡುವ ವ್ಯವಹಾರವನ್ನೇ ಮಾಡುವ ಹಲವು ಜನ ಇದ್ದಾರೆ.
- ಕೆಲವು ರೈತರೂ ಸಹ ಮಾಡುತ್ತಾರೆ. ಬೇರೆ ಬೇರೆ ಊರುಗಳಿಂದ ತಂದು ಇಲ್ಲಿ ಒಣಗಿಸುವುದೂ ಇದೆ.
ಚಪ್ಪರ:
- ಇದು ಕಬ್ಬಿಣದ ರಾಡ್ ಮತ್ತು ಮೆಶ್ ಹಾಕಿ ಮಾಡಿದ ಚಪ್ಪರ.
- ಇದರ ಮೇಲೆ ಕಪ್ಪು ನೆರಳು ಬಲೆಯನ್ನು ಹಾಕಿರುತ್ತಾರೆ.
- 12 ಅಂತಸ್ತು ತನಕ ದ್ರಾಕ್ಷಿಯನ್ನು ಹಾಕುತ್ತಾರೆ.
- ಕೆಲವರ ಒಣಗಿಸುವ ಚಪ್ಪರ ಅರ್ಧ ಎಕ್ರೆಗೂ ಹೆಚ್ಚು ವಿಸ್ತಾರದಲ್ಲಿರುತ್ತದೆ.
ಒಣಗಿದ ನಂತರ ಹಣ್ಣುಗಳನ್ನು ಯಂತ್ರಕ್ಕೆ ಹಾಕಿ ಅದನ್ನು ಗಾರ್ಬಲಿಂಗ್ ಮಾಡಲಾಗುತ್ತದೆ. ಗಾರ್ಬಲಿಂಗ್ ಮಾಡಿದಾಗ ದೊರೆಯುವ ಬೇರೆ ಬೇರೆ ಗುಣಮಟ್ಟದ್ದನ್ನು ಪ್ರತ್ಯೇಕ ಪ್ರತ್ಯೇಕ ಪ್ಯಾಕ್ ಮಾಡಿ ಬೇರೆ ಬೇರೆ ಬಳಕೆಗೆ ವರ್ಗಾಯಿಸುತ್ತಾರೆ.
- ಮಣಕ ಮಾಡಿದ ದ್ರಾಕ್ಷಿಯನ್ನು ನಮ್ಮ ಸಾಮಾನ್ಯ ವಾತಾವರಣದಲ್ಲಿ ಇಡಲಿಕ್ಕೆ ಆಗುವುದಿಲ್ಲ.
- ಅದಕ್ಕೆ ಶಿಲೀಂದ್ರ ಬರುತ್ತದೆ. ಅದನ್ನು 5 ಡಿಗ್ರಿ ತಂಪು ಇರುವ ಶೀತಲ ಗ್ರಹದಲ್ಲಿ ದಾಸ್ತಾನು ಇಡುತ್ತಾರೆ.
- ಇದು ವರ್ಷಗಳ ತನಕವೂ ಹಾಳಾಗುವುದಿಲ್ಲ.
ಕರ್ನಾಟಕ ಸರಕಾರವು ರೈತರು ಬೆಳೆದ ಉತ್ಪನ್ನವನ್ನು ಶೀತಲ ಗೃಹದಲ್ಲಿ ಇಡುವರೇ ಈ ವರ್ಷ ಯಾವುದೇ ಶುಲ್ಕ ವಿಧಿಸಬಾರದು ಎಂದಿರುವ ಕಾರಣ ಇದು ರೈತರಿಗೆ ಅನುಕೂಲಕರ. ಹಣ್ಣು ದ್ರಾಕ್ಷಿಯಲ್ಲಿ ನಷ್ಟವಾದುದನ್ನು ಇದರಲ್ಲಿ ಪಡೆಯುವ ಗುರಿಯನ್ನು ಇಟ್ಟುಕೊಳ್ಳಿ.