ದ್ರಾಕ್ಷಿ ಥಿನ್ನಿಂಗ್ ಮಾಡಿ – ಗುಣಮಟ್ಟ ಹೆಚ್ಚಿಸಿ.

ಈ ಹಂತದಲ್ಲಿ ಥಿನ್ನಿಂಗ್ ಮಾಡಬೇಕು

ದ್ರಾಕ್ಷಿ ಗೊಂಚಲಿನಲ್ಲಿ ಎಲ್ಲಾ ಒಂದೇ ಗಾತ್ರದ  ಹಣ್ಣುಗಳಿದ್ದರೆ ತುಂಬಾ ಆಕರ್ಷಕವಾಗಿರುತ್ತದೆ. ಅದು ಉತ್ತಮ ಬೆಲೆಗೆ ಮಾರಾಟವಾಗುತ್ತದೆ. ಎಲ್ಲದಕ್ಕೂ  ಗಾತ್ರ ಮತ್ತು ನೋಟವೇ ಮುಖ್ಯ. ಇದು ತನ್ನಷ್ಟಕ್ಕೇ ಆಗುವುದಲ್ಲ. ಬೆಳೆಗಾರರು ಅದಕ್ಕೆ ಬೇಕಾದ ಥಿನ್ನಿಂಗ್ ಮಾಡಿದರೆ ಮಾತ್ರ ಹೀಗೆ ಇರುತ್ತದೆ.

 • ದ್ರಾಕ್ಷಿ ಗೊಂಚಲಿನಲ್ಲಿ ಹೆಚ್ಚಿನ ಹೂವುಗಳು ಪರಾಗಸ್ಪರ್ಶಕ್ಕೊಳಗಾಗಿ ಕಾಯಿಕಚ್ಚುತ್ತವೆ.
 • ಎಲ್ಲವೂ ಕಾಯಿಯಾದರೆ ಕೆಲವು ಬಟಾಣಿ ಗಾತ್ರ , ಮತ್ತೆ ಕೆಲವು ಇನ್ನೂ ಸಣ್ಣ ಗಾತ್ರ ಕೆಲವು ಯೋಗ್ಯ ಗಾತ್ರ, ಹೀಗೆ ಕಾಯಿಗಳಲ್ಲೆಲ್ಲಾ ಆಕಾರ ವೆತ್ಯಾಸ ಇರುತ್ತದೆ.
 • ಹೀಗೆ ಆದರೆ ಒಟ್ಟಾರೆಯಾಗಿ ದ್ರಾಕ್ಷಿ ಗೊಂಚಲು ಹೆಚ್ಚು ಕಾಣಬಹುದಾದರೂ ಲಾಭವಾಗಲಿಕ್ಕಿಲ್ಲ.
 • ಬಹುತೇಕ ಯೋಗ್ಯವಲ್ಲದ ಹಣ್ಣೂಗಳೇ ಇರುವ ಕಾರಣ ಬೆಲೆ- ಬೇಡಿಕೆಯೂ ಕಡಿಮೆಯಾಗುತ್ತದೆ.
 • ಇದನ್ನು ಸರಿಪಡಿಸಲು ದ್ರಾಕ್ಷಿ ಗೊಂಚಲಿನಲ್ಲಿ ಪ್ರೂನಿಂಗ್ ಮಾಡಿ ಎಷ್ಟು ಆ ಗೊಂಚಲಿನಲ್ಲಿ ಕಾಯಿ ಉಳಿಸಬಹುದೋ ಅಷ್ಟನ್ನು ಮಾತ್ರ ಉಳಿಸಬೇಕು.
 • ಗೊಂಚಲಿನ ಸಾಮರ್ಥ್ಯಕ್ಕಿಂತ ಹೆಚ್ಚು ಕಾಯಿಗಳಾದಲ್ಲಿ ಅದರಲ್ಲಿ ಗುಣಮಟ್ಟ ಇರುವುದಿಲ್ಲ.

ಥಿನ್ನಿಂಗ್ ಹೇಗೆ:

 • ಒಂದು ಮೂಲ ದ್ರಾಕ್ಷಿ ಗೊಂಚಲಿನಲ್ಲಿ ಬೇರೆ ಬೇರೆ ಕವಲು ಗೊಂಚಲುಗಳಿರುತ್ತವೆ.
 • ಪ್ರತೀ ಕವಲು ಗೊಂಚಲಿನಲ್ಲಿ 4 ಕ್ಕಿಂತ ಹೆಚ್ಚು ಕಾಯಿಗಳನ್ನು ಉಳಿಸಬಾರದು.
 • 3 ಕಿಂತ ಕಡಿಮೆ ಇದ್ದರೆ ಗಾತ್ರ ದೊಡ್ದದಾಗಬಹುದಾದರೂ ಇಳುವರಿ ಕಡಿಮೆಯಾಗಲೂಬಹುದು.
 • ಹೆಚ್ಚು ಕಾಯಿಗಳಿದ್ದಾಗ ಗೊಂಚಲಿನಲ್ಲಿ ಹಣ್ಣುಗಳು ಬಿರಿಯುತ್ತವೆ ಮತ್ತು ಕೊಳೆಯುತ್ತವೆ.
 • ಕೆಲವು ತಳಿಗಳಲ್ಲಿ ಮತ್ತು ಅವರ ಬೇಸಾಯ ಕ್ರಮದಲ್ಲಿ ಗೊಂಚಲಿನ ಗಾತ್ರವೇ ಕಿರಿದಾಗಿ, ಅದರ ಕವಲು ಗೊಂಚಲಿನ ಉದ್ದವೂ ಕಡಿಮೆ ಇರುತ್ತದೆ.
 • ಬೇಸಾಯ ಕ್ರಮದಲ್ಲಿ ಹೀಗಾದರೆ ಸೂಕ್ತ ಬೇಸಾಯ ಕ್ರಮವನ್ನು ಅನುಸರಿಸಿ ಅದನ್ನು ಸರಿಪಡಿಸಬೇಕು.
 • ತಳಿ ಹೊಂದಿಕೊಂಡು ಒಂದು ಗೊಂಚಲು 300 ರಿಂದ 700 ಗ್ರಾಮ್ ತನಕದ ಹಣ್ಣಿನ ತೂಕವನ್ನು ಹೊಂದಿರಬಹುದು.
 • ಎಲೆ ಅಗಲವಾಗಿದ್ದು, ಬಳ್ಳಿಯ ಆರೋಗ್ಯ ಉತ್ತಮವಾಗಿದ್ದರೆ 600 – 700 ಗ್ರಾಂ ತನಕದ ಹಣ್ಣು ಗೊಂಚಲನ್ನು ಉಳಿಸಬಹುದು.
 • ಆರೋಗ್ಯವಂತ ಬಳ್ಳಿಯಲ್ಲಿ ಕನಿಷ್ಟ 10- 12 ರಷ್ಟಾದರೂ ಎಲೆಗಳಿರಬೇಕು. 15 ಕ್ಕಿಂತ ಹೆಚ್ಚು ಇರಬಾರದು.
 • ಗೊಂಚಲಿನಲ್ಲಿ ಹಣ್ಣುಗಳು ಬಟಾಣಿ ಕಾಳಿನಷ್ಟು ದೊಡ್ಡದಾಗುವ ಸಮಯದಲ್ಲಿ ಆ ಬಳ್ಳಿಯ ತುದಿಯನ್ನು ಚಿವುಟುವುದರಿಂದ ಗೊಂಚಲಿಗೆ ಆಹಾರ ಪೂರೈಕೆ ಹೆಚ್ಚು ದೊರೆತು, ಕಾಯಿ ಪುಷ್ಟಿಯಾಗುತ್ತದೆ.
ಈ ಹಂತದಲ್ಲಿ ಥಿನ್ನಿಂಗ್ ಮಾಡಬೇಕು
ಈ ಹಂತದಲ್ಲಿ ಥಿನ್ನಿಂಗ್ ಮಾಡಬೇಕು

ಯಾವಾಗ ವಿರಳಗೊಳಿಸಬೇಕು:

 • ಕಾಯಿಗಳ ಗಾತ್ರ ಬಟಾಣಿ ಕಾಳಿನಷ್ಟು ಇದ್ದಾಗ ಸಣ್ಣ ಸಣ್ಣ ಗಾತ್ರದ ಕಾಯಿಗಳನ್ನು ತೆಗೆದು ವಿರಳಗೊಳಿಸಬೇಕು.
 • ಆ ನಂತರ ಮಾಡಬಾರದು.ಈ ಸಮಯದಲ್ಲಿ ಇತರ ಕಾಯಿಗಳಿಗೆ ಗಾಯವಾಗಬಾರದು.
 • ಹಣ್ಣುಗಳನ್ನು ತಿನ್ನುವ ಉದ್ದೇಶಕ್ಕೆ ಬಳಕೆ ಮಾಡುವುದಿದ್ದರೂ, ಮಣಕ ಮಾಡುವುದಕ್ಕೆ ಬಳಕೆ ಮಾಡುವುದಿದ್ದರೂ ಕಾಯಿಗಳನ್ನು ವಿರಳಗೊಳಿಸುವುದು ಮುಖ್ಯ.
 • ಹೆಚ್ಚಿನವರು ಮಣಕ( ಒಣಗಿಸುವಿಕೆಗೆ ) ಥಿನ್ನಿಂಗ್ ಮಾಡುವುದಿಲ್ಲ. ಇದರಿಂದ ಗುಣಮಟ್ಟ ಬರುವುದಿಲ್ಲ.
 • ಗೊಂಚಲಿನ ಕೆಳ ಭಾಗದಲ್ಲಿ ಸಣ್ಣ ಗಾತ್ರದ ಹಣ್ಣುಗಳು ಹೆಚ್ಚು ಇರುವ ಕಾರಣ ಕೆಳಭಾಗದ 1/3 ಅಥವಾ 1/4 ಭಾಗವನ್ನು ಕತ್ತರಿಸಿ ತೆಗೆಯಬೇಕು.

ಕಾಯಿ ಪುಷ್ಟಿಯಾಗಿಸುವುದು:

ಥಿನ್ನಿಂಗ್ ಮಾಡದಿದ್ದರೆ ಕಾಯಿಗಳು ಒಳ್ಳೆಯ ಗಾತ್ರ ಬರಲಾರದು
ಥಿನ್ನಿಂಗ್ ಮಾಡದಿದ್ದರೆ ಕಾಯಿಗಳು ಒಳ್ಳೆಯ ಗಾತ್ರ ಬರಲಾರದು
 • ಬಳ್ಳಿಯ ಎಲೆಗನುಗುಣವಾಗಿ ಕಾಯಿ ಬಿಡಬೇಕು. ಎಲೆಗಳ ಗಾತ್ರ ಹೆಚ್ಚಿಸಲು ಪೊಟಾಶಿಯಂ ಮತ್ತು ಸಾರಜನವನ್ನು ಒದಗಿಸಿ ಸಾಕಷ್ಟು ನೀರನ್ನು ಕೊಡಬೇಕು.
 • ಒಂದು ಎಲೆಗೆ 8 ಹಣ್ಣುಗಳು ಎಂದು ಲೆಕ್ಕ. ಹಣ್ಣುಗಳ ಗಾತ್ರವನ್ನು ಹೆಚ್ಚಿಸಲು ಸೂಕ್ತ ಸಮಯದಲ್ಲಿ ಜಿಬ್ಬರಲಿಕ್ ಆಮ್ಲವನ್ನು ಸಿಂಪಡಿಸಬೇಕು.
 • ಹೂ ಅರಳಿ ಮುಗಿದ ನಂತರ ಮತ್ತು ಪ್ರೂನಿಂಗ್ ಮಾಡಿದ 25 ರಿಂದ 30 ದಿನಗಳ ಅವಧಿಯಲ್ಲಿ ಜಿಬ್ಬರಲಿಕ್ ಆಮ್ಲದ ಸಿಂಪರಣೆ ಮಾಡಬೇಕು.
 • ಗಾತ್ರ ಹೆಚ್ಚಳಕ್ಕೆ ಮತ್ತು ಉದ್ದ ಹೆಚ್ಚಳಕ್ಕೆ ಜಿಬ್ಬರಲಿಕ್ ಆಮ್ಲ ಸಹಕಾರಿಯಾದರೂ ಈ ರಾಸಾಯನಿಕಗಳನ್ನು ತಪ್ಪಾಗಿ ಬಳಸಿದರೆ ತೊಂದರೆಯೂ ಆಗುತ್ತದೆ.
 • ಕಾಯಿ ಕಚ್ಚುವ ಹಂತದಿಂದ ಜೋಳದ ಕಾಳಿನಷ್ಟು ಗಾತ್ರಕ್ಕೆ ಬರುವ ತನಕ ಜಿಬ್ಬರಲಿಕ್ ಆಮ್ಲ ಸಿಂಪಡಿಸಬಾರದು.
 • ಜಿಬ್ಬರಲಿಕ್ ಆಮ್ಲ ಹಣ್ಣುಗಳಿಗೆ ಸಮಪ್ರಮಾಣದಲ್ಲಿ  ದೊರೆಯುವಂತೆ ಸಿಂಪರಣೆ ಮಾಡಬೇಕು.
 • ಸಲ್ಫೇಟ್ ಆಫ್ ಪೊಟ್ಯಾಶ್  (SOP) ಕೊಡುವುದರಿಂದ ಗೊಂಚಲಿನ ಗಾತ್ರ ಹೆಚ್ಚತ್ತದೆ.
 • ಗುಣಮಟ್ಟ ಉತ್ತಮವಾಗುತ್ತದೆ. ಇದನ್ನು ಬ್ಯಾಕ್ ಪ್ರೂನಿಂಗ್ ಮಾಡಿ 60- 90 ದಿನದಲ್ಲಿ ಕೊಡಬೇಕು.

ದ್ರಾಕ್ಷಿ ಬೆಳೆಗೆ ಅಧಿಕ ಬಂಡವಾಳ ಹಾಕಿ ಕೃಷಿ ಮಾಡುತೇವೆ. ಅದರಲ್ಲಿ ಅಷ್ಟೇ ಉತ್ಪತ್ತಿಯೂ ಬರಬೇಕು. ಹಣ್ಣುಗಳ ನೊಟ ಮತ್ತು ಗುಣಮಟ್ಟ ಉತ್ತಮವಾಗಿದ್ದರೆ ಅದಕ್ಕೆ ಉತ್ತಮ ಬೆಲೆಯೂ, ಮಾರುಕಟ್ಟೆಯೂ ಲಭ್ಯ.

Leave a Reply

Your email address will not be published. Required fields are marked *

error: Content is protected !!