ಕೆಲವು ಅಲ್ಪಾವಧಿ ಬೆಳೆಗಳು ಸ್ವಲ್ಪ ಹೆಚ್ಚಿನ ಲಾಭ ತಂದು ಕೊಡುತ್ತವೆ. ಅಂತದ್ದರಲ್ಲಿ ಒಂದು ಹರಿವೆ. ಸೊಪ್ಪು ತರಕಾರಿಗಳಿಗೆ ಕೆಲವು ಸೀಸನ್ ಗಳಲ್ಲಿ ಭಾರೀ ಬೇಡಿಕೆ. ಆ ಸೀಸನ್ ತಿಳಿದುಕೊಂಡು ಅದಕ್ಕನುಗುಣವಾಗಿ ಬೆಳೆ ಬೆಳೆದರೆ ಲಾಭವಾಗುತ್ತದೆ. ಇದನ್ನು ಮಾರುಕಟ್ಟೆಯಲ್ಲಿ ತಿಳಿದುಕೊಂಡು ಸುರೇಶ್ ರವರು ಮಳೆಗಾಲದಲ್ಲಿ ಮತ್ತು ಮಳೆಗಾಲ ಮುಗಿಯುವ ಈ ಸಮಯದಲ್ಲಿ ಹರಿವೆ ಬೆಳೆದಿದ್ದಾರೆ. ಎರಡನೇ ಬೆಳೆ ಕಿತ್ತು ಆಗಿದೆ. ಮೂರನೇ ಬೆಳೆಯನ್ನು ಇನ್ನೇನು ಒಂದು ವಾರದಲ್ಲಿ ಬಿತ್ತನೆ ಮಾಡಲಿದ್ದಾರೆ.
- ಮಳೆಗಾಲ ಕಳೆದ ತಕ್ಷಣ ಹರಿವೆ, ಬಸಳೆ ಮುಂತಾದ ಸೊಪ್ಪು ತರಕಾರಿಗಳಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ.
- ಹಾಗೆಂದು ಉಳಿದ ಸಮಯದಲ್ಲಿ ಇಲ್ಲವೆಂದಲ್ಲ. ಈ ಸಮಯದಲ್ಲಿ ಬೇರೆ ತರಕಾರಿಗಳೂ ದುಬಾರಿಯಾಗಿರುತ್ತವೆ.
- ಜನರ ಒಲವೂ ಸಹ ಈ ಸಮಯದಲ್ಲಿ ಸೊಪ್ಪು ತರಕಾರಿಗಳ ಕಡೆಗೆ ಇರುತ್ತವೆ.
- ಈ ಸಮಯಯಲ್ಲಿ ಬಸಳೆ ಬೆಳೆದರೂ ಲಾಭಬಾಗುತ್ತದೆ. ಹರಿವೆ ಬೆಳೆದರೂ ಲಾಭವಾಗುತ್ತದೆ.
- ಈ ವರ್ಷ ದೊಡ್ಡ ಪ್ರಮಾಣದಲ್ಲಿ ಇದನ್ನು ಬೆಳೆಯುವ ಸಾಹಸಕ್ಕೆ ಕೈ ಹಾಕಿದ ಸುರೇಶ್ ನಾಯಕ್ ರವರು ಹಿಂದೆ (ಅಕ್ಟೋಬರ್ ಮೊದಲವಾರಕ್ಕೆ ಮುಗಿದ ಬೆಳೆ) ಬೆಳೆದ ಬೆಳೆಯಲ್ಲಿ ಸುಮಾರು 10,000 ಖರ್ಚು ಮಾಡಿ, 20,000 ಸಂಪಾದನೆ ಮಾಡಿದ್ದಾರೆ.
- ಈಗ ಒಂದು ಎಕ್ರೆಯಷ್ಟು ಸ್ಥಳದಲ್ಲಿ 50,000 ಖರ್ಚು ಮಾಡಿ ಬೆಳೆದು ಸುಮಾರು 1,00,000 ಆದಾಯದ ನಿರೀಕ್ಷೆ ಯಲ್ಲಿದ್ದಾರೆ.
ಕೃಷಿಯಲ್ಲಿ ಹಠವಾದಿ ಇವರು:
- ಹಿರಿಯಡ್ಕದ ಬೊಮ್ಮರಬೆಟ್ಟುವಿನ ಸುರೇಶ್ ನಾಯಕ್ ಎಂಬ ಯುವ ಕೃಷಿಕ ಕೃಷಿಯನ್ನು ಒಂದು ಚಾಲೆಂಜ್ ವೃತ್ತಿಯಾಗಿ ಸ್ವೀಕರಿಸಿದವರು.
- ಇವರು ಕೈಯಾಡಿಸದ ಕೃಷಿಯೇ ಇಲ್ಲ ಎಂದೇ ಹೇಳಬಹುದು.
- ವರ್ಷವೂ ಕಲ್ಲಂಗಡಿ ಬೆಳೆಯುತ್ತಾರೆ. ಸೌತೇ ಕಾಯಿ, ಮೂಲಂಗಿ ಹೀಗೆಲ್ಲಾ ಬೆಳೆಗಳನ್ನು ಬೆಳೆಸುತ್ತಾರೆ.
- ಕರಾವಳಿಯಲ್ಲಿ ಕರಬೂಜವನ್ನೂ ಯಶಸ್ವಿಯಾಗಿ ಬೆಳೆದವರು.
ಈ ವರ್ಷ ಮಾರ್ಚ್ ಎಪ್ರೀಲ್ ಮೇ ತಿಂಗಳಲ್ಲಿ (ಕೊರೋನಾ ಅವಧಿಯಲ್ಲಿ) ಇವರು ತಮ್ಮ ತರಕಾರಿಗಳನ್ನೂ ಸೇರಿದಂತೆ ಬಹಳಷ್ಟು ರೈತರು ಬೆಳೆದ ತರಕಾರಿ, ಕಲ್ಲಂಗಡಿ, ಅನನಾಸು ಈರುಳ್ಳಿ, ಮಾವು ಎಲ್ಲವನ್ನೂ ತಮ್ಮದೇ ಹೊಲದ ಒಂದು ಭಾಗದಲ್ಲಿ ತಾತ್ಕಾಲಿಕ ಶೆಡ್ ಮಾಡಿ ಮಾರಾಟ ಮಾಡಿ ಬೆಳೆದವರಿಗೆ ನ್ಯಾಯಯುತವಾದ ಬೆಲೆಯನ್ನು ದೊರಕಿಸಿಕೊಟ್ಟವರು.
ಯಾವ ತಳಿಯ ಹರಿವೆ:
- ಹರಿವೆಯಲ್ಲಿ ಬೇಡಿಕೆ ಇರುವುದು ಕೆಂಪು ಹರಿವೆಗೆ. ಸ್ಥಳೀಯವಾಗಿ ಈ ಕೆಂಪು ಹರಿವೆಯ ತಳಿ ಇದೆಯಾದರೂ ವಾಣಿಜ್ಯ ಬೇಸಾಯಕ್ಕೆ ಬೇಕಾಗುವಷ್ಟು ಬೀಜದ ಉತ್ಪಾದನೆ ಇಲ್ಲ.
- ಆದ ಕಾರಣ ಇಂತಹ ಗುಣವನ್ನೇ ಪಡೆದ ಕೆಂಪು ಹರಿವೆಯನ್ನು ಉತ್ಪಾದಿಸುವ ಬೆಂಗಳೂರಿನ ಇಂಡೋ ಅಮೇರಿಕ ಹೈಬ್ರೀಡ್ ಸೀಡ್ಸ್ ಇವರ ಬೀಜ ಮತ್ತು ಸ್ವಲ್ಪ ಕೇರಳದ ಕೆಂಪು (ರೆಡ್ ಅಮರಾಂತಸ್) ಹರಿವೆ ಬೀಜವನ್ನು ಬೆಳೆಸಿದ್ದಾರೆ.
- ಎಲೆ ಮತ್ತು ದಂಟು ಕೆಂಪು ಇರುವ ಈ ಹರಿವೆ ವೇಗವಾಗಿ ಬೆಳೆಯುತ್ತದೆ.
- ಒಂದು ತಿಂಗಳ ಒಳಗೆ ಸುಮಾರು 1 ಅಡಿ ಎತ್ತರಕ್ಕೆ ಬೆಳೆಯುತ್ತದೆ.
- ಸ್ವಲ್ಪವೂ ನಾರು ಹುಟ್ಟುವುದಿಲ್ಲ.
- ಕೆಂಪು ಮತ್ತು ಹಸುರು ಹರಿವೆಯ ತಳಿ ಅರ್ಕಾ ಅರುಣಿಮಾ ಮತ್ತು ಅರ್ಕಾ ಸುಗುಣ ಎಂಬ ತಳಿಗಳನ್ನು ಭಾರತೀಯ ತೋಟಗಾರಿಕಾ ಸಂಶೋಧಾನಾ ಸಂಸ್ಥೆ ಅಭಿವೃದ್ದಿಪಡಿಸಿದೆ.
- ಇದು ಸಹ ಉತ್ತಮ ಇಳುವರಿ ಕೊಡುತ್ತದೆ. ಬೀಜದ ಲಭ್ಯತೆ ಇಲ್ಲದ ಕಾರಣ ಬೇರೆ ಬೀಜ ಆಯ್ಕೆ ಮಾಡಿದ್ದಾರೆ.
ಖರ್ಚು ವೆಚ್ಚಗಳು:
- ಹೊಲದವನ್ನು ಟ್ರಾಕ್ಟರ್ ನಲ್ಲಿ ಚೆನ್ನಾಗಿ ಉಳುಮೆ ಮಾಡಬೇಕು.
- ಸುಮಾರು 100 ಚದರ ಅಡಿಯ ಬೆಡ್ ಗಳನ್ನು ಮಾಡ ಬೇಕು.
- ಮಳೆಗಾಲದಲ್ಲಿ ನೀರು ಬಸಿಯುವಿಕೆಗೂ ಇದು ಅನುಕೂಲ, ಸಸಿಗಳಿಗೆ ನೀರುಣಿಸಲು, ಅತ್ತಿತ್ತ ಹೋಗಲು ಸಹ ಇದು ಅಗತ್ಯ.
- ಬೆಡ್ ಗೆ ಮಣ್ಣಿನ ಅರ್ಧ ಪಾಲು ಭತ್ತದ ಸುಟ್ಟ ಬೂದಿಯನ್ನು ಮಿಶ್ರಣ ಮಾಡಬೇಕು.
- ಉಳುಮೆ ಮಾಡುವಾಗಲೇ ಎಕ್ರೆಗೆ 1 ಕ್ವಿಂಟಾಲು 15:15:15 ಗೊಬ್ಬರವನ್ನು ಹಾಕಬೇಕು.
- ಸುಮಾರು ಒಂದು ಎಕ್ರೆಗೆ 5-6 ಕಿಲೋ ಬಿತ್ತನೆ ಬೀಜ ಬೇಕಾಗುತ್ತದೆ.
- ಬೀಜಕ್ಕೆ ಕಿಲೋ ರೂ. 600 ರಿಂದ 3000 ತನಕ ಬೆಲೆ ಇರುತ್ತದೆ.
- ಬೀಜವನ್ನು ಸಮ ಪ್ರಮಾಣದಲ್ಲಿ ಮರಳು ಮಿಶ್ರಣ ಮಾಡಿ ತೆಳುವಾಗಿ ಬಿತ್ತನೆ ಮಾಡಿದರೆ ಉತ್ತಮ.
- ಇವರು ಉಳುಮೆ ಮಾಡುವಾಗ ಮಣ್ಣನ್ನು ದೂಳು ಆಗುವ ತರಹ ಹುಡಿ ಮಾಡಿ ಬಿತ್ತಿದ್ದಾರೆ.
- ಬೀಜಗಳು ಅದರಲ್ಲಿ ಕೆಳಕ್ಕೆ ತಂಗುತ್ತವೆ. ಮೇಲೆ ಏನೂ ಹಾಕಲಿಲ್ಲ.
- ಬಿತ್ತನೆ ಮಾಡಿ ತೆಳುವಾಗಿ ಭತ್ತದ ಸುಟ್ಟ ಕರಿ ಅಥವಾ ಹುಡಿ ಮಣ್ಣನ್ನು ಹರಡಡಬಹುದು.
- ನಂತರ ಮಣ್ಣು ಚದುರದಂತೆ ನೀರಾವರಿ ಮಾಡಬೇಕು. ಬೇಸಿಗೆಯಲ್ಲಿ ಮೈಕ್ರೋ ಸ್ಪ್ರಿಂಕ್ಲರ್ ಮಾಡಿದರೆ ಅನುಕೂಲ.
- ಮೊಳಕೆ ಬಂದ ನಂತರ ಸಸಿ ವೇಗವಾಗಿ ಬೆಳೆಯುತ್ತದೆ. ಯಾವುದೇ ಕೀಟ ನಾಶಕದ ಅಗತ್ಯ ಇಲ್ಲ.
- ಏನಾದರೂ ನುಸಿಗಳು ಇದ್ದರೆ ಬೇವು ಆಧಾರಿತ ಬೇವಿನ ಸೋಪು ಇತ್ಯಾದಿ ಕೀಟ ನಾಶಕ ಸಿಂಪಡಿಸಿದರೆ ಸಾಕು.
- ತೆಳುವಾಗಿ ಬಿತ್ತನೆ ಮಾಡಿದರೆ ಸಸಿಗಳೆಲ್ಲಾ ಪುಷ್ಟಿ ಯಾಗಿ ಬೆಳೆಯುತ್ತವೆ. ಎಲ್ಲವೂ ಒಟ್ಟಿಗೆ ಕೀಳಲು ಸಿಗುತ್ತವೆ.
ಮಾರಾಟ ವ್ಯವಸ್ಥೆ:
- ಪ್ರಾರಂಭದಲ್ಲೇ ಹೇಳಿದಂತೆ ಸುರೇಶ್ ನಾಯಕ್ ರವರು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವ ವಿಧಾನವನ್ನು ಕೊರೋನಾ ಅವ್ಯಯಸ್ಥೆಯ ಕಾಲದಲ್ಲಿ ಕರಗತ ಮಾಡಿಕೊಂಡಿದ್ದಾರೆ.
- ಇವರು ತಮ್ಮ ಹೊಲದಲ್ಲೇ ಒಂದು ತೂಕದ ಯಂತ್ರ ಇಟ್ಟು ನಿಂತರೆ ಸಾಕು ರಸ್ತೆಯಲ್ಲಿ ಹೋಗುವವರೆಲ್ಲಾ ಒಂದು ಎರಡು ಕೀಲೋ ಪ್ರಮಾಣದಲ್ಲಿ ಒಯ್ಯುತ್ತಾರೆ.
- ದಿನಾಂಕ ೦6-11-2020 ರಂದು ಹೊಲದಲ್ಲೇ ಬೆಳಗ್ಗೆಯಿಂದ ಸಂಜೆ ತನಕ 3-4 ಕ್ವಿಂಟಾಲು ಹರಿವೆ ಮಾರಾಟ ಮಾಡಿದ್ದಾರೆ.
- ಹಾಗೆಯೇ ಹಿರಿಯಡ್ಕ,ಮಣಿಪಾಲ, ಉಡುಪಿಯ ಬೇರೆ ಬೇರೆ ಅಂಗಡಿಗಳಿಗೆ ದಿನಾ 50-100 ಕಿಲೋ ಪ್ರಮಾಣದಲ್ಲಿ ಮಾರಾಟ ಮಾಡುತ್ತಾರೆ.
- ಇದು ಎರಡು ಮೂರು ದಿನದ ಒಳಗೆ ಮಾರಾಟ ಮಾಡಿ ಮುಗಿಯಬೇಕಾದ ತರಕಾರಿ ಆದ ಕಾರಣ ಎಷ್ಟು ತ್ವರಿತವಾಗಿ ಮಾರಾಟ ಸಾಧ್ಯವೋ ಅಷ್ಟು ತ್ವರಿತವಾಗಿ ಮಾರಾಟ ಮಾಡಬೇಕು.
- ಈ ಎಲ್ಲಾ ಕೃಷಿಗೆ ಸ್ಥಳೀಯ ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದದ ವಿಜ್ಞಾನಿಗಳ ಸಹಕಾರ ಮತ್ತು ಮಾರ್ಗದರ್ಶನ ಇರುತ್ತದೆ.
ಲೇಖಕರು: ಡಾ. ಬಿ ಧನಂಜಯ , (ಮುಖ್ಯಸ್ಥರು)ಡಾ. ಎಚ್ ಎಸ್ ಚೈತನ್ಯ ( ತೋಟಗಾರಿಕಾ ತಜ್ಞ) ಮತ್ತು ಡಾ. ಸಚಿನ್ ಯು ಎಸ್ ( ಕೀಟ ಶಾಸ್ತ್ರ) ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ. ಉಡುಪಿ.