ಕೇರಳದವರು ಶುಂಠಿ ಬೇಸಾಯದಲ್ಲಿ ಲಾಭ ಮಾಡಿಕೊಳ್ಳುತ್ತಾರೆ ನಮಗೆ ಯಾಕೆ ಆಗುವುದಿಲ್ಲ. ಇಲ್ಲಿದೆ ಕೇರಳದವರು ನಾಟಿ ಮಾಡುವ ಕ್ರಮ. ಈಗಾಗಲೇ ಶುಂಠಿ ಬೆಳೆಯಲಾಗುವ ಪ್ರದೇಶಗಳಲ್ಲಿ ನಾಟಿ ಕೆಲಸ ಪ್ರಾರಂಭವಾಗಿದೆ. ಬೇಗ ನಾಟಿ ಮಾಡಿದರೆ ಎರಡು – ಮೂರು ತಿಂಗಳು ಸ್ವಲ್ಪ ನೀರಾವರಿ, ನಂತರ ಮಳೆಗಾಲ ಹೀಗೆ ಗಡ್ಡೆ ಬೆಳವಣಿಗೆ ಉತ್ತಮವಾಗಿ ಲಭವಾಗುತ್ತದೆ ಎನ್ನುತ್ತಾರೆ ಶಿಕಾರೀ ಪುರದ ಶುಂಠಿ ಬೆಳೆಗಾರ ಸಾಜೂ ಜೋಸ್. ಕುಂಭ ಮಾಸ ಪ್ರಾರಂಭವಾಗುವಾಗ ಗಡ್ಡೆ ಗೆಣಸು ನಾಟಿ ನಾಟಿ ಮಾಡುವುದು ಸಾಂಪ್ರದಾಯಿಕವಾದ ಸೂಕ್ತ ಕಾಲ.
ಕೇರಳದವರು ಯಾವ ಸಮಯದಲ್ಲಿ ನಾಟಿ ಮಾಡುತ್ತಾರೆ:
- ಶುಂಠಿ ನಾಟಿ ಮಾಡುವ ವಿಧಾನದ ಮೇಲೆ ಮುಂದಿನ ಇಳುವರಿ ನಿರ್ಧರಿತವಾಗುತ್ತದೆ.
- ಸಾಂಬಾರ ಬೆಳೆಯಾದರೂ ಗಡ್ಡೆ ಗೆಣಸು ಜಾತಿಗೆ ಸೇರಿದ ಶುಂಠಿ – ಅರಶಿನಗಳು ಈ ಸಮಯದಲ್ಲಿ ಸುಪ್ತಾವಸ್ತೆಯಿಂದ ಮೊಳಕೆ ಬರುವ ಸ್ಥಿತಿಗೆ ಬರುತ್ತವೆ.
- ಯಾವುದೇ ಬೆಳೆಯ ನಾಟಿ ಸಮಯ ಅದರ ಬೇರು ಬಿಡುವಿಕೆಗೆ ಅನುಕೂಲಕರವಾಗಿರಬೇಕು.
- ಈ ಸಮಯದಲ್ಲಿ ಮಣ್ಣಿನಲ್ಲಿ ಬಿಸಿ ಇರುತ್ತದೆ. ಆದ ಕಾರಣ ಬೇರು ಚೆನ್ನಾಗಿ ಮೂಡುತ್ತದೆ.
- ಕೆಲವು ಕಡೆ ಮಳೆಗಾಲದಲ್ಲಿ ನಾಟಿ ಮಾಡುವುದಿದೆ.
- ಆ ಸಮಯದಲ್ಲಿ ಮಣ್ಣು ಶೀತವಾಗುವುದರಿಂದ ಬೇರು ಬೆಳವಣಿಗೆಗೆ ಅನಾನುಕೂಲವಾಗಿ ಹೆಚ್ಚು ಮೊಳಕೆ ಬರುವುದಿಲ್ಲ.
- ಇದರಿಂದ ಇಳುವರಿ ಕುಂಠಿತವಾಗುತ್ತದೆ.
- ಫೆಬ್ರವರಿ ಕೊನೇ ವಾರದಿಂದ ಪ್ರಾರಂಭಿಸಿ ಎಪ್ರೀಲ್ ಕೊನೇ ತನಕವೂ ನಾಟಿ ಮುಂದುವರಿಸಬಹುದು.
- ಮಳೆಗಾಲ ಬರುವಾಗ ಸಸ್ಯಗಳು ಬೆಳೆದು, ಬೇರು ಉತ್ತಮವಾಗಿ ಬಂದು ಸಹಜವಾಗಿ ರೋಗ ತಡಕೊಳ್ಳುವ ಶಕ್ತಿ ಪಡೆಯುತ್ತವೆ.
- ಈ ರೀತಿ ನಾಟಿ ಮಾಡಿದ ಬೆಳೆಯಲ್ಲಿ ಉತ್ತಮ ಇಳುವರಿ ಬರುತ್ತದೆ.
- ನೀರಾವರಿ ಮಾತ್ರ ಕಡ್ಡಾಯವಾಗಿ ಮಾಡಲೇ ಬೇಕಾಗುತ್ತದೆ.
ಶುಂಠಿ ಬೆಳೆಸಲು ಮಲೆನಾಡು ಕರಾವಳಿ ಪ್ರದೇಶಗಳು ಮಾತ್ರವೇ ಸೂಕ್ತ ಎಂಬ ಮಾತು ಇತ್ತಾದರೂ ಈಗ ಇದು ಬದಲಾಗಿದೆ. ಬಯಲು ಸೀಮೆಯ ಪ್ರದೆಶಗಳಲ್ಲೂ ಇದನ್ನು ಬೆಳೆಸಬಹುದು. ಈಗಾಗಲೇ ಅರಶಿನ ಬೆಳೆಯಲಾಗುತ್ತಿರುವ ಬಾಗಲಕೊಟೆ ಜಿಲ್ಲೆಯಲ್ಲಿ, ಬೀದರ್ ನಲ್ಲಿ ಹಲವಾರು ಜನ ಶುಂಟಿ ಬೆಳೆಸಲು ಪ್ರಾರಂಭಿಸಿದ್ದಾರೆ. ಅದೇ ರೀತಿ ಚಾಮರಾಜನಗರ, ಚಿತ್ರದುರ್ಗದ ಕೆಲವು ಕಡೆಗಳಲ್ಲೂ ಬೆಳೆಸುವುದನ್ನು ಕಾಣಬಹುದು.
ಬಿತ್ತನೆ ಗಡ್ಡೆ:
- ಬಿತ್ತನೆ ಮಾಡುವ ಗಡ್ಡೆ ರೋಗ ಮುಕ್ತವಾಗಿರಬೇಕು.
- ಯಾವುದೇ ಕೊಳೆತ ಚಿನ್ಹೆ ಇರಬಾರದು.
- ಒಂದು ಹೆಕ್ಟೇರ್ ಬಿತ್ತನೆಗೆ 1800 ದಿಂದ 2500 ಕಿಲೋ ತನಕ ಬಿತ್ತನೆ ಗಡ್ಡೇ ಬೇಕಾಗುತ್ತದೆ.
- ಬಿತ್ತನೆ ಗಡ್ಡೆಯನ್ನು ಅವರವರೇ ಮಾಡಿಕೊಂಡಿದ್ದರೆ ಅದನ್ನು ಸ್ವಲ್ಪ ದೊಡ್ಡದಾಗಿಯೇ ಇರುವಂತೆ ನಾಟಿಗೆ ಬಳಕೆ ಮಾಡಿಕೊಳ್ಳಬಹುದು.
- ಒಂದು ವೇಳೆ ಕೊಂಡು ತರುವುದಾದರೆ ಗಡ್ಡೆಯನ್ನು ಕನಿಷ್ಟ 15 ಗ್ರಾಂ ಇರುವಷ್ಟು ದೊಡ್ಡದಿರಬೇಕು.
- ಪ್ರತೀ ಗಡ್ಡೆಯಲ್ಲಿ ಕನಿಷ್ಟ 2 ಆದರೂ ಮೊಳಕೆ ಇರಬೇಕು.
ಬೀಜೋಪಚಾರ:
- ಬಿತ್ತನೆಗೆ ಬಳಕೆ ಮಾಡುವ ಬಿತ್ತನೆ ಗಡ್ಡೆಗಳನ್ನು 30 ನಿಮಿಷ ಕಾಲ ಶೇ. 3ರ ಮ್ಯಾಂಕೋಜೆಬ್ ಅಂಶ ಉಳ್ಳ ದ್ರಾವಣದಲ್ಲಿ ಅದ್ದಬೇಕು.
- ಇದರಿಂದ ಯಾವುದಾರರೂ ಶಿಲೀಂದ್ರ ಸೋಂಕು ಇದ್ದಲ್ಲಿ ಅದರ ನಿವಾರಣೆ ಸಾಧ್ಯ.
- ಇಷ್ಟಲ್ಲದೆ ಯಾವುದಾದರೂ ಕೀಟ ಸೋಂಕು ಇರುವ ಸಾಧ್ಯತೆಗಾಗಿ05 % ಮೆಲಾಥಿಯಾನ್ ಕೀಟನಾಶಕ ಮತ್ತು ಬ್ಯಾಕ್ಟೀರಿಯಾ ಸೋಂಕು ಇದ್ದಲ್ಲಿ 200 ಪಿ ಪಿ ಎಂ ನ ಸ್ಟೆಪ್ಟೋಸೈಕ್ಲಿನ್ ದ್ರಾವಣದಲ್ಲಿ ಅದ್ದಬೇಕು.
- ಅದನ್ನು ನೆರಳಿನಲ್ಲಿ 2-3 ಗಂಟೆ ಕಾಲ ಒಣಗಿಸಿ ನಂತರ ನಾಟಿ ಮಾಡಬೇಕು.
ಭೂಮಿ ಸಿದ್ದತೆ:
- ನಾಟಿಗೆ ಮುಂಚೆ ಭೂಮಿಯನ್ನು ಚೆನ್ನಾಗಿ ಉಳುಮೆ ಮಾಡಿ ಮಣ್ಣನ್ನು ಸಡಿಲ ಮಾಡಿಕೊಳ್ಳಬೇಕು.
- 4-5 ಬಾರಿಯಾದರೂ ಭೂಮಿಯ ಉಳುಮೆ ಅಗತ್ಯ.
- ಭೂಮಿ ಉಳುಮೆ ಮಾಡಿ ಜೋಡಿ ಸಾಲು ಪದ್ದತಿಯಲ್ಲಿ ಅಥವಾ ಏಕ ಸಾಲು ಪದ್ದತಿಯಲ್ಲಿ ಸಾಲುಗಳನ್ನು ತೆಗೆಯಬೇಕು.
- ಸ್ಪಿಂಕ್ಲರ್ ನೀರಾವರಿ ಮಾಡುವವರು ಜೊಡಿ ಸಾಲು ಪದ್ದತಿಯನ್ನು ಅನುಸರಿಸುವುದು ಉತ್ತಮ.
- ಹನಿ ನೀರಾವರಿ ಮಾಡುವವರು ಒಂಟಿ ಸಾಲುಗಳನ್ನು ಮಾಡಿಕೊಳ್ಳಬೇಕು.
- ಜೋಡಿ ಸಾಲು ಪದ್ದತಿಯನ್ನು 3ಮೀ ಅಗಲ ಮತ್ತು ಮಧ್ಯಂತರದಲ್ಲಿ 1 ಮೀ. ಖಾಲಿ ಸ್ಥಳ ಇರುವಂತೆ ಮಾಡಿಕೊಳ್ಳಿ. 1
- ಒಂಟಿ ಸಾಲುಗಳನ್ನು1X1 ಮೀ ಅಂತರದಲ್ಲಿ ಮಾಡಿಕೊಳ್ಳಬೇಕು.
- ಮಳೆಗಾಲದಲ್ಲಿ ನೀರು ಹೆಚ್ಚು ನಿಲ್ಲುವ ಸ್ಥಳವಾದರೆ ಎರಡು ಸಾಲುಗಳ ಮಧ್ಯೆ 2 ಅಡಿ ಆಳದ ಬಸಿಗಾಲುವೆ ಮಾಡಿಕೊಳ್ಳಬೇಕು.
ಬಿತ್ತನೆ ಕ್ರಮ:
- ಸಾಲು ಮಾಡಿದ ನಂತರ 20-25 ಸೆಂ. ಮೀ. ಅಂತರದಲ್ಲಿ ಕೈಯಿಂದ ಮಣ್ಣು ತೆಗೆದು ಸಣ್ಣ ಗುಳಿ ಮಾಡಿ.
- ಅದಕ್ಕೆ ಕಾಮ್ಪೋಸ್ಟು ಗೊಬ್ಬರ ಹಾಕಿ ಅದರ ಮೇಲೆ ಬಿತನೆ ಗಡ್ಡೆಯನ್ನು ನಾಟಿ ಮಾಡಬೇಕು.
- ಕಾಂಪೆÇಸ್ಟು ಗೊಬ್ಬರಕ್ಕೆ ಒಂದು ಟನ್ ಗೆ 1 ಕಿಲೋ ಪ್ರಮಾಣದಲ್ಲಿ ಟ್ರೈಕೋ ಡರ್ಮಾ ಮತ್ತು 1 ಕಿಲೋ ವ್ಯಾಂ ಜೀವಾಣು ಗೊಬ್ಬರ, 2ಟನ್ ಬೇವಿನ ಹಿಂಡಿ ಮಿಶ್ರಣ ಮಾಡಿದರೆ ಗಡ್ಡೆಯ ಬೆಳವಣಿಗೆಗೆ ತುಂಬಾ ಅನುಕೂಲವಾಗುತ್ತದೆ.
- ಇದರಿಂದ ಕೊಳೆ ರೋಗ, ಜಂತು ಹುಳ ಕಡಿಮೆಯಾಗುತ್ತದೆ.
- ಬಿತ್ತನೆ ಸಮಯದಲ್ಲಿ ಸಾಲುಗಳ ಉದ್ದ ಅಗಲವನ್ನು ಅಂದಾಜು ಮಾಡಿ ಹೆಕ್ಟೇರಿಗೆ 50 ಕಿಲೋ ರಂಜಕ ಗೊಬ್ಬರ, 25 ಕಿಲೋ ಪೊಟ್ಯಾಶಿಯಂ ಗೊಬ್ಬರವನ್ನು ಮಣ್ಣಿಗೆ ಸೇರಿಸಿರಬೇಕು.
- ಗಡ್ಡೆಯ ಮೊಳಕೆ ಮೇಲ್ಭಾಗಕ್ಕಿರುವಂತೆ ನಾಟಿ ಮಾಡಬೇಕು.
- ಗಡ್ಡೆ ಇಟ್ಟು ಅದರ ಮೇಲೆ ಒಂದೊಂದು ಮುಷ್ಟಿಯಷ್ಟು ಮತ್ತೆ ಕಾಂಪೋಸ್ಟು ಗೊಬ್ಬರವನ್ನು ಹಾಕಿ ಅಗತ್ಯವಿದ್ದರೆ ತೆಳುವಾಗಿ ಮಣ್ಣು ಏರಿಸಬಹುದು.
- ನಂತರ ಅದರ ಮೇಲೆ ತರಗೆಲೆ ಅಥವಾ ಭತ್ತದ ಹುಲ್ಲನ್ನು ಹಾಕಿ ಮುಚ್ಚಬೇಕು.
- ನಾಟಿ ಮಾಡುವ ಮುನ್ನ ನೀರಾವರಿ ಮಾಡಿ ಮಣ್ಣು ನೆನೆನೆಸಿರಬೇಕು.
- ನಾಟಿ ಮಾಡಿದ ನಂತರ ನೀರಾವರಿ ಮಾಡಬೇಕು.
ನಾಟಿ ಮಾಡುವ ಸಮಯದಲ್ಲಿ ಕಳಿತ ಕಾಂಪೋಸ್ಟು ಗೊಬ್ಬರವನ್ನು ಹೆಕ್ಟೇರಿಗೆ 20-25 ಟನ್ ನಷ್ಟು ಕೊಡಬೇಕು. ನಾಟಿ ಮಾಡಿದ ನಂತರ 40 ದಿನಕ್ಕೆ – 60 ದಿನಕ್ಕೆ ಕಳೆ ತೆಗೆದು ಗೊಬ್ಬರ ಕೊಡಬೇಕು. ನೀರಾವರಿ ಕಡಿಮೆ ಇರುವ ಕಡೆ ಸಾಲುಗಳಿಗೆ ಪಾಲಿಥೀನ್ ಶೀಟು ಹೊದಿಸಿ ಗಡ್ಡೆ ನಾಟಿ ಮಾಡಿದರೆ ಇಳುವರಿ ಉತ್ತಮವಾಗುತ್ತದೆ.
ಶುಂಠಿಗೆ ಪೂರ್ಣ ಬಿಸಿಲೇ ಆಗಬೇಕೆಂದಿಲ್ಲ.ತೆಂಗು, ಮಾವು ತೋಟದಲ್ಲೂ ಬೆಳೆಸಬಹುದು. ಜೈವಿಕ ಗೊಬ್ಬರ ಕೊಟ್ಟರೆ ರೋಗ ಕಡಿಮೆ.ಶುಂಠಿಗೆ ಪೋಷಕಾಂಶ ಕೊಟ್ಟಷ್ಟೂ ಉತ್ತಮ ಇಳುವರಿ ದೊರೆಯುತ್ತದೆ.