ಉತ್ಕೃಷ್ಟ ಗುಣಮಟ್ಟದ ಕರಿಮೆಣಸು ಉತ್ಪಾದನೆ.

ಉತ್ಕೃಷ್ಟ ಗುಣಮಟ್ಟದ ಕರಿಮೆಣಸು ಉತ್ಪಾದನೆ

ಹೆಸರು ಕರಿಮೆಣಸು- ಕಪ್ಪಗಿದ್ದರೆ  ಮಾರುಕಟ್ಟೆಯಲ್ಲಿ ಉತ್ತಮ ಬೆಲೆ – ಬೇಡಿಕೆ. ಬೆಳೆಗಾರರು ಅದನ್ನು ಮನಬಂದಂತೆ ಸಂಸ್ಕರಣೆ  ಮಾಡಿದರೆ ಗುಣಮಟ್ಟ ಬರಲಾರದು. ಸೂಕ್ತ ಸಂಸ್ಕರಣಾ ವಿಧಾನವನ್ನು ಪಾಲಿಸಿದರೆ ಮಾತ್ರ ಗುಣಮಟ್ಟದ ಉತ್ಪನ್ನ ಪಡೆಯಬಹುದು.

  • ಮೆಣಸಿನ ಗುಣಮಟ್ಟದ ಬಗ್ಗೆ ಹೇಳುವುದಾದರೆ ಒಂದು ಲೀ. ಹಿಡಿಯುವ ಪಾತ್ರೆಯಲ್ಲಿ  ಒಣಗಿಸಿದ ಮೆಣಸನ್ನು ಹಾಕಿ ಅದನ್ನು ತೂಗಿದಾಗ ಅದು 600  ಗ್ರಾಂ ನಷ್ಟು ತೂಗಬೇಕು.
  • ತೇವಾಂಶ ಮಾಪಕದಲ್ಲಿ ಹಾಕಿದಾಗ ಅದರಲ್ಲಿ 10 %  ತೇವಾಂಶಕ್ಕಿಂತ ಕಡಿಮೆ ಇರಬೇಕು.
  • ಇದಕ್ಕಿಂತ ಹೆಚ್ಚಾದರೆ ಅದು ಒಣಗಲಿಲ್ಲ ಎಂದರ್ಥ.
  • ಕಡಿಮೆಯಾದರೆ ಹೆಚ್ಚು ಒಣಗಿ ಅದರ ಅಗತ್ಯ (Oleoresin) ಸಾರ ಕಡಿಮೆಯಾಗುತ್ತದೆ.
  • ಇದನ್ನು ಪ್ರತೀಯೊಬ್ಬ ರೈತನೂ ಅರಿಯಬೇಕು.
ಒಣಗಿದಾಗ ಮೆಣಸಿನ ಮೇಲ್ಮೈ ಹೀಗೆ ಇರಬೇಕು
ಒಣಗಿದಾಗ ಮೆಣಸಿನ ಮೇಲ್ಮೈ ಹೀಗೆ ಇರಬೇಕು

 ಕೊಯ್ಲಿನಲ್ಲಿ  ಗುಣಮಟ್ಟ ಪಾಲನೆ:

  • ಮೆಣಸಿಗೆ ಗುಣಮಟ್ಟ ಬರುವುದು ಕೊಯ್ಲಿನ ಕ್ರಮದಲ್ಲಿ. ಬೆಳೆದ ಮೆಣಸನ್ನೇ ಕೊಯಿಲು ಮಾಡಬೇಕು.
  • ಕೊಯ್ಯುವ ಮುಂಚೆ ಕರೆಯಲ್ಲಿ ಒಂದು ಕೆಳ ಭಾಗದ ಒಂದು ಮೆಣಸನ್ನು ಉಗುರಿನಲ್ಲಿ ಒತ್ತಿ ನೋಡಿ.
  • ಉಗುರು ತಾಗಿ ಅದು ತುಂಡಾದರೆ ಅಂತಹ ಮೆಣಸನ್ನು ಕೊಯಿಲು ಮಾಡುವುದನ್ನು ಮುಂದೂಡಿ.
  • ಕೊಯಿಲು ಮಾಡುವಾಗ ಮೆಣಸಿನ ಬಳ್ಳಿಯಲ್ಲಿ ಕನಿಷ್ಟ 20% ದಷ್ಟಾದರೂ ಮೆಣಸು ಹಣ್ಣಾಗಿರಲಿ.
  • ಬೆಳೆದ ಮೆಣಸು ಕಡು ಹಸುರು ಬಣ್ಣದಲ್ಲಿರುತ್ತದೆ. ಎಳೆಯ ಮೆಣಸು ತಿಳಿ ಹಸುರು ಬಣ್ಣದಲ್ಲಿರುತ್ತದೆ.
  • ಕಾಯಿ ಬೆಳೆಯುವ ಸಮಯದಲ್ಲಿ ಒಮ್ಮೆ ಸಲ್ಫೇಟ್ ಆಫ್ ಪೊಟ್ಯಾಶ್ ಸಿಂಪರಣೆ  ಮಾಡಿದರೆ  ಕಾಯಿ ಬೇಗ ಬೆಳೆಯುತ್ತದೆ.
  • ಕಾಯಿಯ ತೂಕ ಹೆಚ್ಚಾಗುತ್ತದೆ.
  • ಚೆನ್ನಾಗಿ ಬೆಳೆದ ಮೆಣಸಿನಲ್ಲಿ ತೇವಾಂಶ ಶೇ.40 ಕ್ಕಿಂತ ಕಡಿಮೆ ಇರುತ್ತದೆ. ಎಳೆಯ ಮೆಣಸಿನಲ್ಲಿ ಅದು 60 % ಕ್ಕಿಂತ ಹೆಚ್ಚು ಇರುತ್ತದೆ.
  • ತೇವಾಂಶ ಕಡಿಮೆ ಇರುವ ಮೆಣಸು ಬೇಗ ಒಣಗುತ್ತದೆ. ಗುಣಮಟ್ಟವೂ ಚೆನ್ನಾಗಿರುತ್ತದೆ.
  • ಶೇ. 50 ಕ್ಕಿಂತ ಹೆಚ್ಚು ಹಣ್ಣಾದುದನ್ನು ಕೊಯಿಲು ಮಾಡಿದರೆ ಅದನ್ನು ಬಿಳಿ ಮೆಣಸು ಮಾಡಬಹುದು.
ಕನಿಷ್ಟ ಇಷ್ಟು ಬೆಳೆದದ್ದನ್ನು ಕೊಯಿಲು ಮಾಡಬೇಕು
ಕನಿಷ್ಟ ಇಷ್ಟು ಬೆಳೆದದ್ದನ್ನು ಕೊಯಿಲು ಮಾಡಬೇಕು

ಕಾಳು ಬೇರ್ಪಡಿಸುವುದು:

  • ಕೊಯಿಲು ಮಾಡಿದ ಮೆಣಸನ್ನು ಕರೆಯಿಂದ ಬಿಡಿಸಬೇಕು. ಇದನ್ನು ಕೆಲವರು ಗೋಣಿ ಚೀಲದಲ್ಲಿ ತುಂಬಿ ನೆಲಕ್ಕೆ  ಬಡಿದು , ಮೆಟ್ಟಿ ಬೇರ್ಪಡಿಸುವವರಿದ್ದಾರೆ.
  • ದೊಡ್ಡ ಬೆಳೆಗಾರರು ಅದನ್ನು ಯಂತ್ರದಲ್ಲಿ ಹಾಕಿ ಕಾಳು ಬೇರ್ಪಡಿಸುತ್ತಾರೆ.ಅವರಿಗೆ ಯಂತ್ರಗಳು ಅಗತ್ಯ.
  • ಸಣ್ಣ ಬೆಳೆಗಾರರಿಗೆ ಹಸಿ ಕಾಳುಗಳನ್ನು ಮೆಟ್ಟಿ ಅಥವಾ ನೆಲಕ್ಕೆ ಹೊಡೆದು ಬೇರ್ಪಡಿಸಿದರೆ  ಸ್ವಲ್ಪ ರಿಕವರಿ ನಷ್ಟವಾಗಬಹುದು.
  • ಸಣ್ಣ ಬೆಳೆಗಾರರು ಈಗಿನ ಧಾರಣೆಯಲ್ಲಿ  ಯಂತ್ರವನ್ನು ಕೊಳ್ಳುವುದು ಲಾಭದಾಯಕವಲ್ಲ.
  • ಕೆಲವು ಸರಳ ಉಪಾಯಗಳಿಂದ ಇದನ್ನು ಯಂತ್ರದಷ್ಟೇ ವೇಗವಾಗಿ ಕರೆ ಬೇರ್ಪಡಿಸಬಹುದು.

ಕಿಲ್ಲಿಂಗ್:

  • ಯಂತ್ರದಿಂದ ಕಾಳು ಬೇರ್ಪಡಿಸಿದ ನಂತರ ಅದನ್ನು ನೇರವಾಗಿ ಬಿಸಿಲಿಗೆ ಹಾಕಿ ಒಣಗಿಸುವ ಬದಲಿಗೆ  ಅದನ್ನು ಕಿಲ್ಲಿಂಗ್ ಮಾಡಿದರೆ ಗುಣಮಟ್ಟ ಉತ್ತಮವಾಗುತ್ತದೆ.
  • ಕಾಳುಗಳನ್ನು ಪ್ಲಾಸ್ಟಿಕ್ ಹಾಳೆಯಲ್ಲಿ ತೆಳುವಾಗಿ ಬಿಡಿಸಿ ಅದರ ಮೇಲೆ  ಪಾರದರ್ಶಕ ಪ್ಲಾಸ್ಟಿಕ್ ಮುಚ್ಚಿ ಒಂದು ದಿನ ಬಿಸಿಲಿನಲ್ಲಿ ಬಿಟ್ಟರೆ ಮೆಣಸಿನ ಬಹುತೇಕ ತೇವಾಂಶ ಬೆವರಿ ಹೋಗುತ್ತದೆ.
  • ಕೆಲವರು ಇದನ್ನು ಬಿಸಿ ನೀರಿನಲ್ಲಿ ಅದ್ದಿ ತೆಗೆಯುತ್ತಾರೆ. ಇದು ಸೌದೆ ನಷ್ಟ ಮತ್ತು ಕೆಲಸ ಹೆಚ್ಚು ಅಪೇಕ್ಷಿಸುತ್ತದೆ.
  • ಇಂತಹ ಮೆಣಸು ಎರಡೇ ದಿನದಲ್ಲಿ ಒಣಗುತ್ತದೆ.

ಈ ರೀತಿ ಕಿಲ್ಲಿಂಗ್ ಮಾಡುವುದರಿಂದ ಮೆಣಸಿನಲ್ಲಿ ಯಾವುದೇ ರಾಸಾಯನಿಕ ಉಳಿಕೆಗಳಿದ್ದರೂ ಸಹ ಅದು ಹೋಗುತ್ತದೆ. ಕಪ್ಪು ಕಪ್ಪಾದ ಉತ್ತಮ ನೋಟದ ಮೆಣಸು ದೊರೆಯುತ್ತದೆ.

ಸಣ್ಣ ಬೆಳೆಗಾರರಿಗಾಗಿ:

  • ಕೊಯಿಲು ಮಾಡಿದ ಮೆಣಸಿನ ಕರೆಯನ್ನು ಹಾಗೆಯೇ ಪ್ಲಾಸ್ಟಿಕ್ ಶೀಟುನಲ್ಲಿ ತೆಳುವಾಗಿ ಹರಡಿ.
  • ಅದರ ಮೇಲೆ ಪಾರದರ್ಶಕ ಪ್ಲಾಸ್ಟ್ಕ್ ಮುಚ್ಚಿ. ಒಂದು ದಿನ ಬಿಸಿಲಿನಲ್ಲಿ ಬಿಡಿ.
  • ಆಗ ನೀರು ಇಳಿದು ಹೋಗುತ್ತದೆ. ಮರುದಿನ ಅದನ್ನು ಹಾಗೆಯೇ ಒಣಗಲು ಹಾಕಿ.
  • ಎರಡು ದಿನ ಒಣಗಿದ ನಂತರ ಅದನ್ನು ಬೆಳಗ್ಗಿನ ಹೊತ್ತು ಅಗಲದ ಬುಟ್ಟಿಯಲ್ಲಿ ಹಾಕಿ ಕಾಲಿನಲ್ಲಿ ಹಿಚುಕಿ ಮೆಟ್ಟಿದರೆ  ಕಾಳುಗಳು ಬಿಡುತ್ತವೆ.
  • ಸುಮಾರು 25 ಕಿಲೋ  ಒಣ ಮೆಣಸನ್ನು ಅರ್ಧ ಗಂಟೆಯಲ್ಲಿ ಮೆಟ್ಟಿ ಕಾಳು ಬೇರ್ಪಪಡಿಸಬಹುದು.

ಮೆಟ್ಟುವಾಗ ಕಾಲಿಗೆ ಅದರ ರಸ ಅಂಟಿ ಕಪ್ಪಗಾಗುವುದಿಲ್ಲ. ಉತ್ತಮ ಗುಣಮಟ್ಟದ ಸಿಪ್ಪೆ ಸ್ವಲ್ಪವೂ ಹೋಗದ ಮೆಣಸು ದೊರೆಯುತ್ತದೆ.ಈ ರೀತಿ ಸಂಸ್ಕರಿಸಿದ ಮೆಣಸು ಮಾರುಕಟ್ಟೆಯಲ್ಲಿ  ಉತ್ತಮ ಬೆಲೆಗೆ ಮಾರಾಟವಾಗುತ್ತದೆ. ಕಿಲ್ಲಿಂಗ್ ಮಾಡೀದ ಮೆಣಸು ಸುರಿ ಬೀಳುವುದು, ಡಂಕಿ ಬರುವುದು, ಬೂಸ್ಟ್ ಬರುವುದು ಇಲ್ಲ.

ಈ ವರ್ಷ ಮಳೆ ತಡವಾಗಿ ಬಂದ ಕಾರಣ ಮೆಣಸು ಎಲ್ಲಾಕದೆ ಬೆಳೆದಿಲ್ಲ. ಮೊದಲೇ ಬೆಲೆ ಕುಸಿತವಾಗಿದೆ. ಗುಣಮಟ್ಟ ಇದ್ದರೆ ದಾಸ್ತಾನು ಇಟ್ಟು ಮಾರಾಟಮಾಡಬಹುದು.

Leave a Reply

Your email address will not be published. Required fields are marked *

error: Content is protected !!