ಶುಂಠಿಯ ಗಿಡ ಹಳದಿಯಾಗಿ ಕೊಳೆಯುವ Rhizome rot / Soft rot ರೋಗಕ್ಕೆ Pythium aphanidermatum ಶಿಲೀಂದ್ರ, ಕಾರಣ. ಶುಂಠಿ ಬೆಳೆಯಲ್ಲಿ ಇದರಿಂದಾಗಿ 80-90 % ತನಕ ಬೆಳೆ ನಷ್ಟವಾಗುತ್ತದೆ. ಇದನ್ನು ಬೇರೆ ಬೇರೆ ವಿಧಾನದಲ್ಲಿ ಟ್ರಯಲ್ ಎಂಡ್ ಎರರ್ ಮಾದರಿಯಲ್ಲಿ ನಿಯಂತ್ರಿಸುವ ಪ್ರಯತ್ನ ಮಾಡಿ ಸಮಾಧಾನ ಮಾಡಿಕೊಳ್ಳುತ್ತಾರೆ. ಇದು ಬಂದ ನಂತರ ನಿಯಂತ್ರಣ ಅಷ್ಟಕ್ಕಷ್ಟೇ. ಮೊದಲೇ ನಿಯಂತ್ರಣ ಮಾಡಿದರೆ ಪರಿಣಾಮಕಾರಿ.
ಶುಂಠಿ ರೋಗ ಹೇಗೆ ಬರುತ್ತದೆ:
- ಬಿತ್ತನೆ ಗಡ್ಡೆಗಳ ಮೂಲಕ ಈ ರೋಗಕಾರಕ ಶಿಲೀಂದ್ರದ ಪ್ರವೇಶವಾಗುತ್ತದೆ.
- ಗಡ್ಡೆಗಳಲ್ಲಿ ಎಲ್ಲಿಯಾದರೂ ಈ ರೋಗಾಣುಗಳು ಇರುವ ಸಾಧ್ಯತೆ ಇರುತ್ತದೆ.
- ಆದ ಕಾರಣ ಬಿತ್ತನೆ ಗಡ್ಡೆ ಹಂತದಲ್ಲೇ ಇದರ ನಿವಾರಣೋಪಾಯ ಹೆಚ್ಚು ಉತ್ತಮ.
ಬಿತ್ತನೆ ಗಡ್ಡೆ ತರುವಾಗ ಸ್ವಲ್ಪ ಕೊಳೆತ ವಾಸನೆ ಇದೆಯೇ ಎಂದು ಪರೀಕ್ಷಿಸಿರಿ. ಒಂದು ವೇಳೆ ವಾಸನೆ ಏನಾದರೂ ಇದ್ದರೆ ಆ ಗಡ್ಡೆಗಳಲ್ಲಿ ಯಾವುದರಲ್ಲಿಯಾದರೂ ಶಿಲೀಂದ್ರ ಸೋಂಕು ಆಗಿದ್ದಿರಬಹುದು.
- ಗಡ್ಡೆಗಳು ನೋಡುವಾಗ ಚೆನ್ನಾಗಿಯೇ ಕಾಣುತ್ತದೆ.
- ಆದರೆ ಒಳಗೆ ಕೊಳೆತಿರುತ್ತದೆ.
- ಇಂತದ್ದು ಒಂದು ಇದ್ದರೂ ಅದು ಉಳಿದ ಗಡ್ಡೆಗಳಿಗೆ ಅಂಟಿಕೊಂಡು ಅದು ಮೊಳಕೆ ಒಡೆದು ಸಸಿಯಾಗುವಾಗ ಸಸ್ಯ ಕೊಳೆಯುವ ಮೂಲಕ ಗೊತ್ತಾಗುತ್ತದೆ.
- ಗಡ್ಡೆ ಮೊದಲಾಗಿ ಕೊಳೆಯುತ್ತದೆ.
- ನಂತರ ಸಸಿಗೆ ಆಹಾರ ದೊರೆಯದೆ ಕಾಂಡ ಕೊಳೆತು ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತದೆ.
- ಗಡ್ಡೆ ಮೊಳಕೆ ಒಡೆದಂತೆ ಸಸಿಗಳ ಎಲೆ ಹಳದಿಯಾದರೆ ಅಲ್ಲಿ ಈ ಶಿಲೀಂದ್ರ ಇದೆ ಎಂದು ತಿಳಿಯಬಹುದು.
- ಎಲೆ ಹಳದಿಯಾದ ಸಸಿಯ ಕಾಂಡವನ್ನು ಬೆರಳಿನಲ್ಲಿ ಒತ್ತಿದರೆ ಮೆದುವಾಗಿರುತ್ತದೆ.
ಗಡ್ಡೆಗಳ ಉಪಚಾರ:
- ತರುವ ಗಡ್ಡೆಗಳನ್ನು ನೆಡುವ ಮುಂಚೆ ನೆಡಲು ಎಷ್ಟು ದೊಡ್ಡ ಗಾತ್ರದ ಗಡ್ಡೆ ಬಳಸುತ್ತೀರೋ ಅಷ್ಟು ಗಾತ್ರಕ್ಕೆ ತುಂಡು ಮಾಡಬೇಕು.
- ತುಂಡು ಮಾಡುವಾಗ ಎಲ್ಲಿಯಾದರೂ ಕೊಳೆತದ್ದು ಇದ್ದರೆ ಗೊತ್ತಾಗುತ್ತದೆ.
- ಅಂತದ್ದು ಇದ್ದರೆ ಅದನ್ನು ನೆಡಲು ಬಳಸಬಾರದು.
- ಗಡ್ಡೆಯನ್ನು ಸ್ಪರ್ಶಿಸಿ ಮತ್ತೊಂದು ಗಡ್ಡೆಯನ್ನು ಮುಟ್ಟಬೇಕಿದ್ದರೆ ಕೈಯನ್ನು ಮತ್ತು ಕತ್ತರಿಸುವ ಸಾಧನವನ್ನು ಕೃಷಿ ಬಳಕೆಯ ಹೈಡ್ರೋಜನ್ ಪೆರಾಕ್ಸೈಡ್ ದ್ರಾವಣದಲ್ಲಿ ಅದ್ದಿ ಸಾನಿಟೈಸ್ ಮಾಡಿಕೊಳ್ಳಬೇಕು.
- ಎಲ್ಲಾ ಗಡ್ಡೆಗಳನ್ನೂ ಗಾತ್ರಕ್ಕೆ ಕತ್ತರಿಸಿಕೊಂಡು ಅದನ್ನು ಎರಡು ದಿನವಾದರೂ ಹದ ಬಿಸಿಲಿನಲ್ಲಿ ಒಣಗಿಸಬೇಕು.
- ಸಾಧ್ಯವಾದರೆ ಗಡ್ಡೆ ತುಂಡುಗಳನ್ನು ಹೈಡ್ರೋಜನ್ ಪೆರಾಕ್ಸೈಡ್ ನಲ್ಲಿ ಅದ್ದಿ ತೆಗೆದರೆ ಒಳ್ಳೆಯದು. ಆಗ ನೊರೆ ನೊರೆ ಬಂದು ಶಿಲೀಂದ್ರ, ಬ್ಯಾಕ್ಟೀರಿಯಾ ಹೊರ ಬರುತ್ತದೆ.
- ಆ ನಂತರ ಗಡ್ಡೆಗಳನ್ನು ಮ್ಯಾಂಕೋಜೆಬ್ ಶಿಲೀಂದ್ರ ನಾಶಕದಲ್ಲಿ ಉಪಚರಿಸಿ ಇಡಬೇಕು.
- ನೆಡುವಾಗಲೂ ಪ್ರತೀ ಗಡ್ಡೆಯನ್ನೂ ಒತ್ತಿ ನೋಡಿ ಸರಿಯಾಗಿ ಗಮನಿಸಿ ನಾಟಿ ಮಾಡಬೇಕು.
ರೋಗ ಕಾಣಿಸಿಕೊಂಡ ನಂತರ ಉಪಚಾರ:
- ನಾಟಿ ಮಾಡಿದ ಹೊಲದಲ್ಲಿ ಈ ರೋಗ ಬಂದರೆ ಉಪಚಾರ ಎಷ್ಟಾದರೂ ಅಷ್ಟೇ. ಇದರಲ್ಲಿ ಫಲಿತಾಂಶ ಕಡಿಮೆ.
- ಗಡ್ಡೆಗಳಲ್ಲಿ ಸೋಂಕು ಇಲ್ಲವಾದರೆ ಮತ್ತೆ ಸಸಿಗೆ ಸೋಂಕು ಬರುವುದು ಕಡಿಮೆ.
- ನೆಡುವ ಸ್ಥಳದ ಮಣ್ಣಿಗೆ ನೀರು ಬಿಟ್ಟುಕೊಡುವ ಶಕ್ತಿ ಇಲ್ಲದಿದ್ದರೆ , ಸರಿಯಾದ ಬಸಿಗುಣ ಇಲ್ಲದಿದ್ದರೆ ಅಲ್ಪ ಸ್ವಲ್ಪ ಸೋಂಕು ಇದ್ದರೂ ಸಹ ಅದು ಉಲ್ಬಣವಾಗುತ್ತದೆ.
- ಮರಳು ಮಿಶ್ರ ನೀರು ಹಿಡಿದಿಟ್ಟುಕೊಳ್ಳದ ಮಣ್ಣಿನಲ್ಲಿ ಬೆಳೆ ಬೆಳೆಯಬೇಕು.
- ರೋಗಾಣು ಅಲ್ಪ ಸ್ವಲ್ಪ ಪ್ರಮಾಣದಲ್ಲಿ ಇದ್ದರೆ, ಅದು ನಾಟಿ ಮಾಡಿ ತುಂಬಾ ಸಮಯದ ತನಕ ಸಸ್ಯಗಳಲ್ಲಿ ರೋಗ ಕಾಣಿಸಿಕೊಳ್ಳದೆ ಇರುತ್ತದೆ.
- ರೋಗಾಣು ಬೆಳೆಯಲು ಅನುಕೂಲವಾಗುವ ಸ್ಥಿತಿ ಒದಗಿದಾಗ ಅದು ಕಾಣಿಸಿಸಿಕೊಳ್ಳುತ್ತದೆ.
- ಬರೇ ರೋಗ ಸೋಂಕು ಇದ್ದ ಗಡ್ಡೆ ಒಂದರಿಂದಲೇ ಬರುವುದಿಲ್ಲ.
- ಕೆಲವೊಮ್ಮೆ ವಾತಾವರಣದ ಅನುಕೂಲ ಸ್ಥಿತಿ ಇದ್ದರೆ ರೋಗ ಬರುತ್ತದೆ.
- ಸ್ವಲ್ಪ ಗಿಡಗಳಿಗೆ ರೋಗ ಬಂದಿದ್ದರೆ ಅದನ್ನು ತೆಗೆದು ಸುಟ್ಟು, ಕಿತ್ತು ತೆಗೆದ ಜಾಗಕ್ಕೆ ಬ್ಲೀಚಿಂಗ್ ಪೌಡರ್ ದ್ರಾವಣ (3 ಗ್ರಾಂ 1 ಲೀ. ನೀರಿಗೆ) ಬೆರೆಸಿ ಆ ಜಾಗಕ್ಕೆ ಸುಮಾರು 2 ಲೀ. ನಷ್ಟು ಹೊಯ್ಯುವುದು ರೋಗ ಬೇರೆ ಗಿಡಗಳಿಗೆ ಹಬ್ಬದಂತೆ ತಡೆಯಲು ಸಹಕಾರಿ
ಯಾವುದೇ ಗಿಡ ಹಳದಿಯಾದರೂ ಸಹ ಅದನ್ನು ತಕ್ಷಣ ತೆಗೆದು ಸುಟ್ಟು ನಾಶಮಾಡಬೇಕು. ಆ ಭಾಗಕ್ಕೆ ಮ್ಯಾಂಕೋಜೆಬ್ ಶಿಲೀಂದ್ರ ನಾಶಕ ಅಥವಾ ಬ್ಲೀಚಿಂಗ್ ಪೌಡರ್ (bleaching powder) ದ್ರಾವಣ (3 ಗ್ರಾಂ 1 ಲೀ. ನೀರಿಗೆ)ಎರೆಯಬೇಕು.
ಹೊಲದಲ್ಲಿ ನಿಯಂತ್ರಣ ಮಾಡುವುದು ತುಂಬಾ ಕಷ್ಟದ ಕೆಲಸವಾಗಿದ್ದು, ನೀರು ಎಲ್ಲಿಯೂ ನಿಲ್ಲದಂತೆ ನೊಡಿಕೊಳ್ಳಬೇಕು. ಮಣ್ಣನ್ನು ಮುಷ್ಟಿಯಲ್ಲಿ ಹಿಡಿದು ಹಿಂಡಿದರೆ ನೀರು ತೊಟ್ಟಿಕ್ಕದಂತೆ ಇದ್ದರೆ ಆ ಮಣ್ಣಿನಲ್ಲಿ ಗಡ್ಡೆ ಸ್ವಚ್ಚವಾಗಿದ್ದರೆ ರೋಗ ಬಾರದು.
ಹೊಲದಲ್ಲಿ ಬಂದ ರೋಗವನ್ನು ಎಷ್ಟೇ ಉಪಚಾರ ಮಾಡಿದರೂ ಹಾಳಾದುದನ್ನು ಸರಿ ಮಾಡಲು ಸಾಧ್ಯವಿಲ್ಲ. ಆರೋಗ್ಯವಂತ ಸಸಿಗೆ ಬಾರದಂತೆ ಸ್ವಲ್ಪ ಮಟ್ಟಿಗೆ ಮಾತ್ರ ರಕ್ಷಣೆ ಕೊಡಬಹುದು. ಅದು ಮತ್ತೆ ಮತ್ತೆ ಬರಬಹುದು.