ಕಾರ್ತಿಕ ಮಾಸದ ನಂತರ ಜೇನು ಕುಟುಂಬ ಸಂಖ್ಯಾಭಿವೃದ್ದಿಯಾಗುತ್ತದೆ. ಸಂಖ್ಯೆ ಹೆಚ್ಚಾದಾಗ ಪಾಲಾಗುತ್ತದೆ. ಪಾಲಾದಾಗ ಅರ್ಧ ಪಾಲು ನೊಣಗಳು ವಾಸಸ್ಥಳದಿಂದ ವಿಭಾಗಗೊಂಡು ಹೊರ ಬಂದು ಎಲ್ಲಾದರೂ ವಿಶ್ರಮಿಸಿ ಹೊಸ ವಾಸ ಸ್ಥಳವನ್ನು ಹುಡುಕುತ್ತವೆ. ಆಗ ನಿಮ್ಮ ತೋಟದಲ್ಲಿ ಖಾಲಿ ಜೇನು ಪಟ್ಟಿಗೆ ಇದ್ದರೆ ಅಲ್ಲಿ ಅವು ವಾಸ ಅಯ್ಕೆ ಮಾಡಬಹುದು.
- ಈ ಸಮಯದಲ್ಲಿ ಜೇನು ಕುಟುಂಬಗಳು ಹೊರಗೆ ಹಾರಾಡುವುದು ಹೆಚ್ಚು. ಈಗ ಅವುಗಳಿಗೆ ಪುಷ್ಪಗಳೂ ಲಭ್ಯ.
- ಸಾಮಾನ್ಯವಾಗಿ ಅವು ತಂಪು ಇರುವಲ್ಲಿ ವಾಸಸ್ಥಾನ ಹುಡುಕುತ್ತವೆ.
- ವಿಭಾಗ ಆಗಿ ಹೊರಟು ಬಂದ ತಕ್ಷಣ ಹೊಲದ ಮರದ ಕೊಂಬೆಯಲ್ಲಿ ಕುಳಿತು ಕೆಲವು ನೊಣಗಳು ಹೊಸ ವಾಸ ಸ್ಥಳವನ್ನು ಪತ್ತೆ ಮಾಡುತ್ತವೆ.
- ಈ ಸಮಯದಲ್ಲಿ ನಾವು ಅದನ್ನು ಹಿಡಿಯಲೂ ಬಹುದು ಅಥವಾ ಅವುಗಳೇ ಪೆಟ್ಟಿಗೆಯನ್ನು ವಾಸಕ್ಕೆ ಆಯ್ಕೆ ಮಾಡಲೂ ಬಹುದು.
- ಅವುಗಳಿಗೆ ಅದು ಸುರಕ್ಷಿತ ಎಂದು ಕಂಡು ಬರಬೇಕು.
- ಉತ್ತಮ ಮನೆಯಲ್ಲಿ ( ಪೆಟ್ಟಿಗೆಯಲ್ಲಿ ) ಹಿಡಿದು ಹಾಕಿದರೆ ಅಲ್ಲೇ ಅವು ಶಾಶ್ವತವಾಗಿ ಉಳಿದು ಅಭಿವೃದ್ದಿ ಹೊಂದುತ್ತವೆ.

ಮರದ ಪೊಟರೆಯಲ್ಲಿ ಜೇನು ಕುಟುಂಬ
ಜೇನು ನೊಣ ಹಿಡಿಯುವುದು:
- ಗೆಲ್ಲುಗಳಲ್ಲಿ ಏನಾದರೂ ನೊಣ ಕುಳಿತಿದ್ದು ಕಂಡು ಬಂದರೆ ಪೆಟ್ಟಿಗೆಯ ಮುಚ್ಚಳಕ್ಕೆ ಜೇನು ಸವರಿ ಗೆಲ್ಲಿನ ಮೇಲ್ಭಾಗದಲ್ಲಿ ಇಡಿ. 1-2 ತಾಸಿನಲ್ಲಿ ಅವು ಆಹಾರ ತಿನ್ನಲು ಅದರ ಮೇಲೆ ಬರುತ್ತವೆ.
- ಹೆಚ್ಚಿನ ನೊಣಗಳು ಮುಚ್ಚಳಕ್ಕೆ ಬಂದ ನಂತರ ಅದನ್ನು ನಿಧಾನವಾಗಿ ತೆಗೆದು ಪೆಟ್ಟಿಗೆಗೆ ಮುಚ್ಚಿ.
- ಪೆಟ್ಟಿಗೆಗೆ ಗೇಟು ಹಾಕಿ. ಅವು ಒಮ್ಮೆ ಒಳ ಹೊರಗೆ ಹಾರಿ ರಾಣಿ ಇದ್ದರೆ ಅಲ್ಲೇ ವಾಸ ಮಾಡುತ್ತವೆ.
- ಇದು ಅಸಾಧ್ಯವಾದರೆ ನೋಣ ಓಡಿ ಹೋಗಿ ಪೆಟ್ಟಿಗೆ ಖಾಲಿಯಾಗಿದ್ದರೆ, ಹೊಸ ಪೆಟ್ಟಿಗೆ ಇದ್ದರೆ, ಜೇನು ಪೆಟ್ಟಿಗೆಯನ್ನು ಸ್ವಚ್ಚಗೊಳಿಸಿ.
- ಅದರ ಚೌಕಟ್ಟು ಹಾಗೂ ಪ್ರೇಮುಗಳಿಗೆ ಜೇನು ಮೇಣ ಸವರಿ.
- ಪ್ರೇಮುಗಳಿಗೆ ಮೇಣದ ಹಾಳೆಯನ್ನು ಅಂಟಿಸಿ.
- ಪೆಟ್ಟಿಗೆಯನ್ನು ನೆರಳಿನ ಜಾಗದಲ್ಲಿ ಇಡಿ. ಅದಕ್ಕೆ ಜೇನು ಕುಟುಂಬಗಳು ತನ್ನಿಂದ ತಾನೇ ಬಂದು ಸೇರುತ್ತವೆ.
- ಇದು ಸುಲಭದಲ್ಲಿ ಜೇನು ಕುಟುಂಬ ಕೂಡಿಸುವ ವಿಧಾನ.
- ಬೇಸಿಗೆಯಲ್ಲಿ ಬೆಳಗ್ಗಿನ ಹೊತ್ತು,ಸಂಜೆಯ ಹೊತ್ತು ಜೇನು ನೊಣಗಳ ಹಾರಾಟ ಕಂಡು ಬಂದರೆ ಅಲ್ಲಿ ಎಲ್ಲಿಯಾದರೂ ಜೇನು ಕುಟುಂಬ ವಾಸಿಸಿರಬಹುದು. ಅದನ್ನು ಹುಡುಕಿ ಪೆಟ್ಟಿಗೆಗೆ ಸೇರಿಸಿರಿ. ಅನುಭವ ಇದ್ದರೆ ಮಾತ್ರ ಇದನ್ನು ಮಾಡಬಹುದು.

ಯಾವಾಗ ಹಿಡಿಯಬೇಕು:
- ಜೇನು ಕುಟುಂಬಗಳನ್ನು ಯಾವಾಗಲೂ ಬಿಸಿಲು ಇರುವ ಸಮಯದಲ್ಲಿ ಹಿಡಿಯಬೇಕು.
- ಮೋಡ ಕವಿದ ವಾತಾವರಣದಲ್ಲಿ ಹಿಡಿಯಲು ಹೋಗಬಾರದು.
- ಬೆಳಗ್ಗಿನ ಹೊತ್ತು ಜೇನು ಕುಟುಂಬ ಹಿಡಿಯಲು ಸೂಕ್ತವಲ್ಲ.
- ಮಧ್ಯಾನ್ಹದ ನಂತರದ ಅವಧಿ ಪ್ರಶಸ್ತ. ಜೇನು ಕುಟುಂಬವನ್ನು ಹಿಡಿಯಲು ಹೋದರೆ ಅದು ಸಂಜೆ ತನಕದ ಕೆಲಸ.
- ಸಂಜೆಯಾಗದೇ ಜೇನು ನೊಣಗಳು ಗೂಡನ್ನು ಸೇರುವುದಿಲ್ಲ. ಸಂಜೆ, ಹೊತ್ತು ಕವಿಯುವಾಗ ಎಲ್ಲವೂ ಗೂಡು ಸೇರುತ್ತವೆ.
- ಈ ಸಮಯಕ್ಕೆ ಎಲ್ಲ ನೊಣಗಳೂ ಪೆಟ್ಟಿಗೆಯೊಳಕ್ಕೆ ಬಂದು ಸೇರಿರುತ್ತವೆ. ಬೆಳಗ್ಗೆ ಹಿಡಿಯಲು ಹೋದರೆ ನಾವು ಎಲ್ಲ ತಯಾರಿ ಮಾಡಿಕೊಳ್ಳುವಾಗ ಅವು ಹಾರಿ ಹೋಗಲೂ ಬಹುದು.
- ಆದ ಕಾರಣ ಮಧ್ಯಾನ್ಹದ ಸಮಯದಲ್ಲಿ ಹೋದರೆ ಎರಿಗಳನ್ನೆಲ್ಲಾ ಜೋಡಿಸಿಯಾಗುವಾಗ ಗಂಟೆ ನಾಲ್ಕು ಆಗಿರುತ್ತದೆ. ಆ ನಂತರ ಅವು ಹಾರಿ ಹೋಗುವುದು ಕಡಿಮೆ. ಒಂದು ವೇಳೆ ಹಾರಿದರೂ ಸಮೀಪವೇ ಅವು ಕುಳಿತುಕೊಳ್ಳುತ್ತವೆ.

ಆಹಾರದ ಲಭ್ಯತೆ ಇದ್ದಾಗ ಜೇನು ನೊಣಗಳು ಮಧು ಹಾಗೂ ಮಕರಂದಗಳನ್ನು ಹುಡುಕಿ ತಂದು ತಮ್ಮ ಎರಿಗಳಲ್ಲಿ ಶೇಖರಿಸಲು ಪ್ರಾರಂಭಿಸುತ್ತವೆ.
ಮಕರಂದ ದೊರೆತ ತಕ್ಷಣದಿಂದಲೇ ರಾಣಿನೊಣ ಮೊಟ್ಟೆ ಇಡಲಾರಂಭಿಸುತ್ತದೆ.
ರಾಣಿ ಮೊಟ್ಟೆ ಇಡಲು ಪ್ರಾರಂಭಿಸಿತೆಂದರೆ ಕುಟುಂಬ ವೃದ್ದಿಯಾಗಲು ಶುರುವಾಯಿತೆಂದರ್ಥ.
ನೊಣಗಳ ಸಂಖ್ಯೆ ಹೆಚ್ಚಿದೊಡನೆ ಹೆಚ್ಚುವರಿ ಎರಿಗಳನ್ನು ಮಾಡಲು ಪ್ರಾರಂಭಿಸುತ್ತದೆ. ಇದೆಲ್ಲವೂ ಜೇನು ಕುಟುಂಬ ವೃದ್ದಿಯಾಗುವ ಲಕ್ಷಣ.
- ಪೆಟ್ಟಿಗೆಗೆ ಸೇರಿಸಿದ ಸಮಯದಲ್ಲಿ ಒಂದು ವೇಳೆ ಆ ತಕ್ಷಣ ಆಹಾರ ರೂಪದ ಹೂವುಗಳು ಪರಿಸರದಲ್ಲಿ ದೊರೆಯದಿದ್ದಲ್ಲಿ ಪಟ್ಟಿಗೆಯ ಒಳಗೆ ಒಂದು ತೆಂಗಿನ ಕಾಯಿ ಗೆರಟೆಯಲ್ಲಿ 2 ಚಮಚ ಸಕ್ಕರೆ ಹಾಗೂ 10 ಚಮಚ ನೀರು ಹಾಕಿ ಕದಕಿ ದ್ರಾವಣದ ಮೇಲೆ ಬಟ್ಟೆ ಇಲ್ಲವೇ ಹುಲ್ಲಿನ ತುಂಡುಗಳನ್ನು ಇಟ್ಟು ನೊಣಗಳು ಕುಡಿಯುವಂತೆ ಮಾಡಬೇಕು.
- ಟೊಳ್ಳು ಮರ ಇದ್ದರೆ, ಅದನ್ನು ಸ್ವಚ್ಚ ಮಾಡಿ ಅದನ್ನು ಒಂದು ಭಾಗ ಮುಚ್ಚಿ ನೆರಳಿನ ಜಾಗದಲ್ಲಿ ಪೊದರಿನ ಎಡೆಯಲ್ಲಿ ಇಟ್ಟರೆ ಅಲ್ಲಿಗೆ ಜೇನು ಕುಟುಂಬಗಳು ಬಂದು ಕುಳಿತುಕೊಳ್ಳುತ್ತವೆ.
ತರಬೇತಿ ಇಲ್ಲದವರು ಜೇನು ನೊಣವನ್ನು ಹಿಡಿಯಲು ಇದು ಸುಲಭ ವಿಧಾನ. ನೊಣಗಳು ಅಲ್ಲಿ ಸೆಟ್ ಆದ ಮೇಲೆ ತರಬೇತಿ ಇದ್ದವರ ಮೂಲಕ ಎರಿಗಳನ್ನು ಸರಿಯಾಗಿ ಮಾಡಿಸಿದರೆ ಜೇನು ಉತ್ಪಾದನೆ ಆಗುತ್ತದೆ.