ತೋಟಗಾರಿಕಾ ಬೆಳೆಗಳಾದ ಅಡಿಕೆ, ತೆಂಗು ಬೆಳೆಗಳಿಗೆ ಕನಿಷ್ಟ ವರ್ಷದಲ್ಲಿ 3-4 ಕಂತುಗಳಲ್ಲಿ ಗೊಬ್ಬರಗಳನ್ನು ಕೊಡಬೇಕು. ಅದು ರಾಸಾಯನಿಕವೇ ಇರಲಿ, ಸಾವಯವವೇ ಇರಲಿ, ಬೆಳೆಗಳ ಹಸಿವಿಗೆ ಅನುಗುಣವಾಗಿ ಜೂನ್, ಅಕ್ಟೋಬರ್, ಜನವರಿ ಮತ್ತು ಎಪ್ರೀಲ್ ನಲ್ಲಿ ಪೋಷಕಾಂಶಗಳನ್ನು ಕೊಡುವುದು ತುಂಬಾ ಪರಿಣಾಮಕಾರಿ.
ಅಡಿಕೆ ,ತೆಂಗಿನ ಬೆಳೆಗಳಿಗೆ ಸಾಮಾನ್ಯವಾಗಿ ಮೊದಲ ಕಂತು ಗೊಬ್ಬರವನ್ನು ಮಳೆಗಾಲ ಪ್ರಾರಂಭದ ಸಮಯದಲ್ಲಿ ಕೊಡುವುದು ವಾಡಿಕೆ. ನಂತರದ ಕಂತನ್ನು ಮಳೆ ಅವಲಂಭಿಸಿ ಅಕ್ಟೋಬರ್ ತಿಂಗಳ ಒಳಗೆ ಕೊಡಬೇಕು. ಅಡಿಕೆಗೆ ಶಿಫಾರಿತ ಪ್ರಮಾಣವಾದ 100:40:120 ಅನ್ನು ಸರಿಯಾಗಿ ಎರಡು ಭಾಗ ಮಾಡಿ ಜೂನ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಕೊಟ್ಟು ಮುಗಿಸಬೇಕು. ನಂತರದ ಎರಡು ಕಂತುಗಳಲ್ಲಿ ಹೆಚ್ಚುವರಿಯಾಗಿ ಕೊಡುವ ಗೊಬ್ಬರವನ್ನು ಕೊಡಬೇಕು. ಹಾಗೆಯೇ ತೆಂಗಿಗೆ 1000:400:1200 NPK ಪ್ರಮಾಣವನ್ನು ಎರಡು ಭಾಗ ಮಾಡಿ ಕೊಡಬೇಕು.
ಮೇಲಿನ ಶಿಫಾರಸು ಪ್ರಮಾಣ ಸಾಧಾರಣ ಇಳುವರಿಗೆ ಸಾಕಾಗುತ್ತದೆಯಾದರೂ ಅಧಿಕ ಇಳುವರಿಗೆ ಸಾಕಾಗುವುದಿಲ್ಲ. ಇದಕ್ಕೆ 50% ಹೆಚ್ಚುವರಿಯಾಗಿ ಸಮತೋಲನ ಪ್ರಮಾಣದಲ್ಲಿ ಗೊಬ್ಬರ ಕೊಡುವ ಕಡೆ ಉತ್ತಮ ಇಳುವರಿ ಬರುವುದನ್ನು ಕಾಣಬಹುದು. ಜೂನ್ ಅಕ್ಟೋಬರ್ ತಿಂಗಳಲ್ಲಿ ಶಿಫಾರಿತ ಪ್ರಮಾಣ ಮತ್ತು ನಂತರದ ಜನವರಿ, ಮತ್ತು ಎಪ್ರೀಲ್ ಮೊದಲ ವಾರದಲ್ಲಿ ಸಸ್ಯಗಳ ತೀವ್ರ ಹಸಿವಿಗೆ ಅನುಗುಣವಾಗಿ ಮತ್ತೆ ಹಿಂದೆ ಕೊಟ್ಟ ಪ್ರಮಾಣದ ಕಾಲು ಅಥವಾ ಅರ್ಧ ಭಾಗವನ್ನಾದರೂ ಕೊಡಬೇಕು.
ಯಾವ ಗೊಬ್ಬರ ಕೊಡಬೇಕು:
ಮಳೆಗಾಲದ ಮೊದಲ ಕಂತು ಗೊಬ್ಬರ ಯಾವುದನ್ನು ಕೊಟ್ಟಿದ್ದೀರಿ ಅದರಲ್ಲಿ NPK ಪ್ರಮಾಣ ಎಷ್ಟು ಇದೆ ಎಂಬುದನ್ನು ಅವಲಂಭಿಸಿ ಎರಡನೇ ಕಂತಿನ ಗೊಬ್ಬರವನ್ನು ಕೊಡಬೇಕು. ಸಾರ್ವತ್ರಿಕವಾಗಿ ಅನ್ವಯವಾಗುವಂತೆ ಇದೇ ಗೊಬ್ಬರ ಹಾಕಿ ಎನ್ನುವುದಕ್ಕೆ ಆಗುವುದಿಲ್ಲ .ಕಾರಣ ಒಬ್ಬೊಬ್ಬರು ಒಂದೊಂದು ಪ್ರಮಾಣದ ಗೊಬ್ಬರವನ್ನು ಕೊಟ್ಟಿರುತ್ತಾರೆ. ಒಟ್ಟಿನಲ್ಲಿ ಮಳೆಗಾಲದ ಮೊದಲ ಕಂತಿನ ಗೊಬ್ಬರ NPK 50% ಕೊಟ್ಟಿದ್ದರೆ ಈಗ ಮತ್ತೆ ಉಳಿದ 50% ಕೊಡಬೇಕು.
15:15:15 ಕೊಟ್ಟಿದ್ದರೆ:
- ಪ್ರತೀ ಅಡಿಕೆ ಮರಕ್ಕೆ 500 ಗ್ರಾಂ ಪ್ರಮಾಣದಲ್ಲಿ ಈ ಗೊಬ್ಬರವನ್ನು ಕೊಟ್ಟಿದ್ದರೆ ಈಗ (ಆಕ್ಟೋಬರ್)ಕೊಡುವ ಗೊಬ್ಬರದಲ್ಲಿ N ಮತ್ತು K ಮಾತ್ರ ಸಾಕು.
- ತೆಂಗಿನ ಮರಕ್ಕೆ 2.5 ಕಿಲೋ ಪ್ರಮಾಣದಲ್ಲಿ ಕೊಟ್ಟಿದ್ದರೆ ಇನ್ನು ಕೊಡುವಾಗ N K ಮಾತ್ರ ಸಾಕು.
- ಆಗಲೇ ಶಿಫಾರಿತ ಪ್ರಮಾಣದಲ್ಲಿ ರಂಜಕ ಗೊಬ್ಬರ ಕೊಡಲಾಗಿದೆ.(ಅಡಿಕೆ 15X5 =75 ಅಂದರೆ 75:75:75 ಕೊಟ್ಟ ಕಾರಣ ಇನ್ನು ರಂಜಕ ಬೇಕಾಗಿಲ್ಲ.
- ತೆಂಗಿಗೆ ರಂಜಕ ( P) ಬಿಟ್ಟು N ಮತ್ತು K ಗಳನ್ನು ಕೊಡಬೇಕು. ಕಡಿಮೆಯಾಗಿರುವ ಸಾರಜನಕ 650 ಗ್ರಾಂ ಮತ್ತು ಪೋಟ್ಯಾಶ್( K) 850 ಗ್ರಾಂ ನಷ್ಟು . ಅದಕ್ಕೆ ಅಕ್ಟೋಬರ್ ತಿಂಗಳಲ್ಲಿ 1.5 ಕಿಲೋ ಯೂರಿಯಾ ಮತ್ತು 1.400 ಗ್ರಾಂ MOP ಕೊಡಬೇಕು.
ಯೂರಿಯಾ+ರಾಕ್+MOP ಕೊಟ್ಟಿದ್ದರೆ;
- ಸಾಮಾನ್ಯವಾಗಿ ಈ ಗೊಬ್ಬರ ಹಾಕುವವರು 1 ಚೀಲ ಯೂರಿಯಾ, 2 ಚೀಲ ರಾಕ್ ಫೋಸ್ಫೇಟ್ ಮತ್ತು 2 ಚೀಲ MOP ಮಿಶ್ರಣ ಮಾಡಿ ½ ಕಿಲೋ ಅಥವಾ 1 ಕಿಲೋ ಪ್ರಮಾಣದಲ್ಲಿ ಹಾಕುತ್ತಾರೆ.
- ½ ಕಿಲೋ ಹಾಕಿದ್ದರೆ 10.8:30 NPK ಕೊಟ್ಟಂತಾಗುತ್ತದೆ.
- 1 ಕಿಲೋ ಕೊಟ್ಟಿದ್ದರೆ 21:16:60 NPK ಆಗುತ್ತದೆ.
- ಅಕ್ಟೋಬರ್ ನಲ್ಲಿ ಕೊಡಬೇಕಾದದ್ದು 3 ಚೀಲ ಯೂರಿಯಾ, 3 ಚೀಲ ರಾಕ್ ಫೋಸ್ಫೇಟ್ ಮತ್ತು 2 ಚೀಲ MOP ಮಿಶ್ರಣ ಮಾಡಿ ಅದನ್ನು ಹಿಂದೆ ಹಾಕಿದ ಪ್ರಮಾಣ ನೋಡಿಕೊಂಡು ಸರಿ ಸುಮಾರು 100-120 N, 40 -60 P, ಮತ್ತು 120-150 ಗ್ರಾಂ K ಗಳು ಹೊಂದಾಣಿಕೆ ಆಗುವಂತೆ ಬಳಸಬೇಕು. (ಯೂರಿಯಾ 48% N, ರಾಕ್ ಫೋಸ್ಫೇಟ್ 16% -18 % P ಮತ್ತು MOP 60% K ಪ್ರಮಾಣ ಇರುತ್ತದೆ)
- ತೆಂಗಿನ ಮರಕ್ಕೆ 1000 N: 400 P ಮತ್ತು 1200 ಗ್ರಾಂ K ಆಗುವಂತೆ ಇವುಗಳನ್ನು ಮಿಶ್ರಣ ಮಾಡಿ ಹಾಕಬೇಕು. (ಹಿಂದೆ ಹಾಕಿದ್ದನ್ನು ಕಳೆದು ಹಾಕಿ)
10:26:26 ಗೊಬ್ಬರ ಕೊಟ್ಟಿದ್ದರೆ:
- ಸಾಮಾನ್ಯವಾಗಿ ಹೆಚ್ಚಿನ ಕೃಷಿಕರು ಈ ಗೊಬ್ಬರವನ್ನು ಕೊಡುವುದು ವಾಡಿಕೆ.
- ಒಂದು ವೇಳೆ ಈ ಗೊಬ್ಬರವನ್ನು ಅಡಿಕೆ ಮರವೊಂದಕ್ಕೆ 300 ಗ್ರಾಂ ಪ್ರಮಾಣದಲ್ಲಿ ಕೊಟ್ಟಿದ್ದರೆ, ಈಗ ಕೊಡುವ ಗೊಬ್ಬರದಲ್ಲಿ ರಂಜಕ (P) ಬೇಡ.
- ಬರೇ N K ಮಾತ್ರ ಕೊಡಿ. ರಂಜಕ ಶಿಫಾರಿಸಿಗಿಂತಲೂ ಹೆಚ್ಚಾಗಿ ಬಳಕೆ ಆಗಿರುತ್ತದೆ.
- ಈಗ 200- ಗ್ರಾಂ ಯೂರಿಯಾ ಮತ್ತು 150 ಗ್ರಾಂ ಪೊಟ್ಯಾಶ್ ಗೊಬ್ಬರ ವನ್ನು ಕೊಡಬೇಕು. ಆಗ NPK ಪ್ರಮಾಣ 125:78:168 ಗ್ರಾಂ ಆಗುತ್ತದೆ.
- ತೆಂಗಿನ ಮರಗಳಿಗೆ ಆಗಲೇ 2 ಕಿಲೋ ಪ್ರಮಾಣದಲ್ಲಿ ಕೊಟ್ಟಿದ್ದರೆ , ಇನ್ನು ಬರೇ ಯೂರಿಯಾ ಮತ್ತು MOP ಗೊಬ್ಬರವನ್ನು ಕೊಟ್ಟರೆ ಸಾಕಾಗುತ್ತದೆ.
- ಸುಮಾರು 2 ಕಿಲೋ ಯೂರಿಯಾ ಮತ್ತು 1.25 ಕಿಲೊ MOP ಕೊಡಬೇಕು.
- ಆಗ ಪ್ರತೀ ಮರಕ್ಕೆ 960 :0:750 N ಮತ್ತು K ಕೊಟ್ಟಂತಾಗುತ್ತದೆ.
- ಹಿಂದೆ ಶಿಫಾರಿತ ರಂಜಕ 520 ಗ್ರಾಂ ಕೊಟ್ಟಾಗಿರುವ ಕಾರಣ ಮತ್ತೆ ಕೊಡುವುದು ಬೇಡ.
ಇತರ ಸಂಯುಕ್ತ ಗೊಬ್ಬರ ಕೊಟ್ಟಿದ್ದರೆ ಅದರಲ್ಲಿ ನಮೂದಿಸಿದ NPK ಪ್ರಮಾಣವನ್ನು ನೋಡಿ ಅದರಲ್ಲಿ ಕೊರತೆ ಇರುವಂತದನ್ನು ಮಾತ್ರ ಕೊಡಿ. ಅನವಶ್ಯಕ ಹೆಚ್ಚುವರಿ ಗೊಬ್ಬರ ಕೊಡಬೇಡಿ. ಇದರಿಂದ ಖರ್ಚೂ ಹೆಚ್ಚಾಗುತ್ತದೆ. ದುಶ್ಪರಿಣಾಮ ಸಹ ಉಂಟಾಗುತ್ತದೆ. ವಿಷೇಷವಾಗಿ ರಂಜಕ ಹೆಚ್ಚಾಗಬಾರದು.
ಮ್ಯೂರೇಟ್ ಆಫ್ ಪೊಟ್ಯಾಶ್ ಲಭ್ಯತೆ ಇಲ್ಲದ ಕಾರಣ ಈಗ ಅಡಿಕೆಗೆ 20 ಗ್ರಾಂ ಮತ್ತು ತೆಂಗಿಗೆ 100 ಗ್ರಾಂ ಸಲ್ಫೇಟ್ ಆಫ್ ಪೊಟ್ಯಾಶ್ (SOP) ಸೇರಿಸಿರಿ. MOP ಒಂದು ತಿಂಗಳ ಒಳಗೆ ಬರುತ್ತದೆ. ಆಗ ಉಳಿದ ಪೊಟ್ಯಾಶ್ ಚೆಲ್ಲಿದರೆ ಸಾಕು. ಇದು ಆವಿ ಆಗುವುದಿಲ್ಲ. ನೀರಿನಲ್ಲಿ ಕರಗಿ ಬೆಳೆಗಳಿಗೆ ಸಿಗುತ್ತದೆ. SOP ಯಲ್ಲಿ 50% ಪೊಟ್ಯಾಶ್ ಇರುತ್ತದೆ.ಮರ ಸುಟ್ಟ ಬೂದಿಯಲ್ಲಿ 7-15 % ತನಕ ಪೊಟ್ಯಾಶ್ ಇರುವ ಕಾರಣ ಒಂದು ಕಿಲೋ ಬೂದಿಯಲ್ಲಿ 70-150 ಗ್ರಾಂ ಪೊಟ್ಯಾಶ್ ಸಿಗುತ್ತದೆ. ಅಡಿಕೆಗೆ 2-3 ಕಿಲೊ ಮತ್ತು ತೆಂಗಿಗೆ 5-8 ಕಿಲೊ ತನಕ ಕೊಟ್ಟರೆ ಬೇರೆ ಪೊಟ್ಯಾಶ್ ಬೇಡ.
DAP ಕೊಟ್ಟವರು ಹೇಗೆ ಮಾಡಬೇಕು:
DAP ಗೊಬ್ಬರ ಕೊಟ್ಟವರು ಸಾಮಾನ್ಯವಾಗಿ ಜೊತೆಗೆ MOP ಸಹ ಸೇರಿಸಿರುತ್ತಾರೆ. ಮಳೆಗಾಲ ಪೂರ್ವದಲ್ಲಿ 150 ಗ್ರಾಂ DAP, 100 ಗ್ರಾಂ MOP ಕೊಟ್ಟಿದ್ದರೆ ಈಗ ರಂಜಕ ಗೊಬ್ಬರ ಬೇಕಾಗಿಲ್ಲ. ಬರೇ N K ಮಾತ್ರ ಸಾಕು. ಆಗಲೇ 27 ಗ್ರಾಂ ಸಾರಜನಕ DAP ಜೊತೆಗೆ ಕೊಟ್ಟಿರುತ್ತೀರಿ. ಇನ್ನು 200 ಗ್ರಾಂ ಯೂರಿಯಾ, ಮತ್ತು 125 ಗ್ರಾಂ ಪೊಟ್ಯಾಶ್ ಕೊಡಬೇಕು.
ತೆಂಗಿನ ಮರಗಳಿಗೆ 1 ಕಿಲೋ ಪ್ರಮಾಣದಲ್ಲಿ DAP ಮತ್ತು MOP ಕೊಟ್ಟಿದ್ದರೆ ಈಗ ರಂಜಕ ಕೊಡಬೇಕಾಗಿಲ್ಲ. ಬರೇ ಯೂರಿಯಾ ಮತ್ತು MOP ಕೊಟ್ಟರೆ ಸಾಕು. 1.2 ಕಿಲೋ ಯೂರಿಯಾ ಮತ್ತು 1 ಕಿಲೊ MOP ಕೊಡಬೇಕು. ಮುಂದೆ ಜನವರಿ ಮತ್ತು ಮಾರ್ಚ್ ಎಪ್ರೀಲ್ ತಿಂಗಳಲ್ಲಿ ತಲಾ 500 ಗ್ರಾಂ ನಂತೆ ಯೂರಿಯಾ ಮತ್ತು MOP ಕೊಡಬಹುದು.
ಮೂರು ಮತ್ತು ನಾಲ್ಕನೇ ಸಲ ಗೊಬ್ಬರ ಕೊಡುವಾಗ:
ಜನವರಿ ಮತ್ತು ಎಪ್ರಿಲ್ ತಿಂಗಳಲ್ಲಿ ಮೂರು ಮತ್ತು ನಾಲ್ಕನೇ ಸಲ ಕೊಡುವ ಗೊಬ್ಬರ ಶಿಫಾರಸಿಗಿಂತ ಹೆಚ್ಚುವರಿ ಗೊಬ್ಬರವಾಗಿರುತ್ತದೆ. ಇದು ಹೂ ಗೊಂಚಲು ಬರುವ ಸಮಯದಲ್ಲಿ ಟಾನಿಕ್ ಆಗಿ ಕೆಲಸ ಮಾಡುತ್ತದೆ. ಈ ಸಮಯದಲ್ಲಿ ಪ್ರತೀ ಮರಕ್ಕೆ ಒಮ್ಮೆ ತಲಾ 50 ಗ್ರಾಂ ಬರುವಂತೆ ಯೂರಿಯಾ ಮತ್ತು ಪೊಟ್ಯಾಶ್ ಕೊಟ್ಟರೆ ಸಾಕಾಗುತ್ತದೆ.
ಪೊಟ್ಯಾಶ್ ಇಲ್ಲ- ಏನು ಹಾಕುವುದು:
ಮ್ಯುರೇಟ್ ಅಫ್ ಪೊಟ್ಯಾಶ್ ಬದಲಿಗೆ ಒಂದು ಅಡಿಕೆ ಮರಕ್ಕೆ 4-5 ಕಿಲೊ ಪ್ರಮಾಣದಲ್ಲಿ ಮರ ಸುಟ್ಟ ಬೂದಿಯನ್ನು ಬಳಸಬಹುದು. ಇದನ್ನು ತಿಂಗಳಿಗೆ 1 ಕಿಲೋ ದಂತೆ ವಿಭಜಿತ ಕಂತಿನಲ್ಲಿ ಕೊಡಬಹುದು. ಮರವನ್ನು ಹೊಂದಿ ಇದರಲ್ಲಿ 3% -10% ತನಕ ಪೊಟ್ಯಾಶಿಯಂ ಇರುತ್ತದೆ. ಒಮ್ಮೆಲೇ ಹಾಕಿದರೆ ಮಣ್ಣು ಕ್ಷಾರವಾಗುತ್ತದೆ.
ರಾಸಾಯನಿಕ ಗೊಬ್ಬರವಾಗಿ SOP (0:0:50) 50 ಗ್ರಾಂ ನಂತೆ ಹಾಕಬಹುದು. ಇದರಲ್ಲಿ ನೀರಿನಲ್ಲಿ ಕರಗುವ ಹಾಗೆಯೇ ಮಣ್ಣಿಗೆ ಸೇರಿಸುವ (Soil soluble) ಎರಡೂ ಪ್ರಕಾರದವು ಲಭ್ಯ. ಕಿಲೋ ಗೆ 50-60 ರೂ. ದರ ಇರುತ್ತದೆ. ಇದರಲ್ಲಿ 50% ಪೊಟ್ಯಾಶಿಯಂ ಮತ್ತು 17 % ಗಂಧಕ ಇರುತ್ತದೆ. ಇದಲ್ಲದೆ ಪೊಟ್ಯಾಶಿಯಂ ನೈಟ್ರೇಟ್ (13:0:45) ಸಹ ಇದೇ ಪ್ರಮಾಣದಲ್ಲಿ ಹಾಕಬಹುದು.ಇದರಲ್ಲಿ ಸಾರಜಕನ 13 % ಇರುವ ಕಾರಣ ಯೂರಿಯಾ ಕಡಿಮೆ ಮಾಡಬೇಕು. ಇವು ಮಣ್ಣಿನ pH ಅನ್ನು ವ್ಯತ್ಯಯ ಮಾಡುವುದಿಲ್ಲ.
ಅಧಿಕ ಇಳುವರಿಗೆ ಹೆಚ್ಚು ಪೊಷಕಾಂಶ ಬೇಕು:
ಎರಡು ಕಂತುಗಳಲ್ಲಿ ಕೊಡುವ ಗೊಬ್ಬರ ಪೂರ್ಣ ಶಿಫಾರಿತ ಪ್ರಮಾಣದ ಗೊಬ್ಬರವಾಗಿದ್ದರೂ ಅವು ಸ್ವಲ್ಪ ಆವಿಯಾಗಿ ಅಥವಾ ಇಳಿದು ಹೋಗಿ ನಷ್ಟ ಆಗಬಹುದು. ಆದ ಕಾರಣ ಮತ್ತೆ ಸ್ವಲ್ಪ ಪ್ರಮಾಣವನ್ನು ಬೇಸಿಗೆಯ ಸಮಯದಲ್ಲಿ ನೀಡಿದರೆ ಫಲಿತಾಂಶ ಉತ್ತಮವಾಗಿರುತ್ತದೆ. ಬೇಸಿಗೆಯಲ್ಲಿ ಗೊಬ್ಬರ ಕೊಡುವಾಗ ಅಧಿಕ ನೀರು ಕೊಡಬೇಡಿ.
ಅಧಿಕ ಪ್ರಮಾಣದಲ್ಲಿ ಸಾವಯವ ಗೊಬ್ಬರಗಳನ್ನು ಕೊಡುವವರು ಎರಡು ಮುಖ್ಯ ಕಂತಿನ ಗೊಬ್ಬರದಲ್ಲಿ 25-50 % ಕಡಿಮೆ ಮಾಡಬಹುದು. ಬೇಸಿಗೆಯ ಕಂತಿನ ಗೊಬ್ಬರ ಕೊಡದೆಯೂ ಬೆಳೆ ತೆಗೆಯಬಹುದು. ಬೇಸಿಗೆಯಲ್ಲಿ ಗೊಬ್ಬರ ಕೊಡುವಾಗ ನೀರಾವರಿ ಬೇಕು. ನೀರಿನಲ್ಲಿ ಕರಗಿಸಿ ಕೊಡುವುದು ಉತ್ತಮ. ಮುಂದಿನ ವರ್ಷದ ಫಸಲು ಏಕ ಪ್ರಕಾರವಾಗಿ ಬರಲು ಇದು ಅತೀ ಅಗತ್ಯ
ಪೊಟ್ಯಾಶ್ ಗೊಬ್ಬರವನ್ನು ಸಾಧ್ಯವಾದಷ್ಟು ವಿಭಜಿತ ಕಂತುಗಳಲ್ಲಿ ಕೊಡುವುದು ಉತ್ತಮ. ಇದು ಬೇರಿನ ಸನಿಹದಿಂದ ½ ಇಂಚು ಕೆಳಗೆ ಹೋದರೂ ಸಸ್ಯಗಳಿಗೆ ಲಭ್ಯವಾಗುವುದಿಲ್ಲ. ಮಾರುಕಟ್ಟೆಯಲ್ಲಿ ಕೊರತೆ ಇರುವಾಗ ವಿಭಜಿಸಿ ಹಾಕಿ. ಇದರಿಂದ ಒಮ್ಮೆಲೇ ಹೆಚ್ಚು ಖರ್ಚು ಸಹ ಆಗುವುದಿಲ್ಲ.
ಉತ್ತಮ ಇಳುವರಿ ಪಡೆಯಲು ಸಾಕಶ್ಟು ಗೊಬ್ಬರವನ್ನು ಕೊಡಬೇಕು. ಹಾಗೆಯೇ ವರ್ಷ ವರ್ಷವೂ ಏಕಪ್ರಕಾರವಾಗಿ ಇಳುವರಿ ಬರುತ್ತಿರಲೂ ಸಹ ಚೆನ್ನಾಗಿ ಗೊಬ್ಬರ ಕೊಡಬೇಕು. ನಿರಂತರ ಪ್ರತೀ ತಿಂಗಳೂ ಕಂತು ಕಂತುಗಳಲ್ಲಿ ಗೊಬ್ಬರಗಳನ್ನು ಕೊಡುತ್ತಾ ಇದ್ದರೆ ಪ್ರತೀ ಹೂ ಗೊಂಚಲಿಗೂ ಆಹಾರ ದೊರೆತು ಕಾಯಿ ಕಚ್ಚುವಿಕೆ ಚೆನ್ನಾಗಿ ನಡೆದು ಫಸಲು ಹೆಚ್ಚಳವಾಗುತ್ತದೆ. ಹಾಲೀ ಫಸಲು ಎಷ್ಟೇ ಇರಲಿ, ಮುಂದಿನ ಫಸಲಿನ ಭಾಗ ಮಾತ್ರ ಸಣಕಲಾಗದಂತೆ ಪೊಷಕಾಂಶಗಳ ನಿರಂತರ ಪೂರೈಕೆ ಇರಬೇಕು.