ಕೃಷಿಕರ ಮಕ್ಕಳಿಗೆ ಮದುವೆ ಭಾಗ್ಯ- ಯಾಕೆ ಕಷ್ಟವಾಗುತ್ತಿದೆ? ಪರಿಹಾರ ಏನು?

ಮದುವೆಯ ಸಂಧರ್ಭ

ಬಹಳ ಜನ ಯುವಕರಿಗೆ ಕೃಷಿ ವೃತ್ತಿಯೇ ಆಗಬಹುದು ಎಂಬ ಆಸೆ ಇದೆ. ಅದರೆ ನಮಗೆ ಹೆಣ್ಣು ಸಿಗದೆ ಮದುವೆ ಭಾಗ್ಯದಿಂದ ವಂಚಿತರಾದೇವೋ ಏನೋ ಎಂಬ ಆತಂಕದಿಂದ, ಬೇರೆ ಉದ್ಯೋಗವನ್ನೇ  ಹುಡುಕುತ್ತಿದ್ದಾರೆ.ವಾಸ್ತವಾಗಿ ಪರಿಸ್ಥಿತಿಯೂ ಹೀಗೇ ಇದೆ. ಬರೇ ಕೃಷಿಕರಿಗೆ ಮಾತ್ರವಲ್ಲ. ಸಮಾಜದಲ್ಲಿ ಯಾರಿಗೆ ಖಾತ್ರಿಯ ಸಂಪಾದನೆ ಮೂಲ ಇಲ್ಲವೋ,ಯಾರಿಗೆ ಮೈ ಕೈ ಕೊಳಕು ಆಗದ ಬಿಳಿಕಾಲರಿನ ಉದ್ಯೋಗ ಇಲ್ಲವೋ, ಅವರಿಗೆಲ್ಲಾ ಈಗ ಮದುವೆಯೆಂಬ ಜೀವನದ ಅತ್ಯಂತ ಪ್ರಮುಖ ಘಟ್ಟ ಅನಿಶ್ಚಿತ. ಸರಕಾರಿ ಉದ್ಯೋಗ, ಸಾಪ್ಟ್ವೇರ್ ಮಂತಾದ ಅಧಿಕ ಸಂಪಾದನೆಯ ವೃತ್ತಿ ಬಿಟ್ಟರೆ  ಉಳಿದೆಲ್ಲಾ ಕ್ಷೇತ್ರಗಳ ವೃತ್ತಿಪರರಿಗೆ ಮದುವೆ ಎಂಬುದು ಒಂದು ಅದೃಷ್ಟ ಎಂಬಂತಾಗಿದೆ.

 • ಕಳೆದ ಎರಡು ದಶಕಗಳಿಂದ ಪ್ರಾರಂಭವಾದ ಈ ಸಮಸ್ಯೆ ಇಂದು ಕೃಷಿಕರ ಮನೆಗಳನ್ನು ಗಂಡು ಸಾಮ್ರಾಜ್ಯವನ್ನಾಗಿ ಮಾಡುತ್ತಿದೆ.
 • ಕೃಷಿಕರ ಮನೆಯಲ್ಲಿ 45-50 ವರ್ಷ ವಯಸ್ಸಿನ ಹಲವಾರು ಯುವಕರು ಮದುವೆಯಾಗದೆ ಉಳಿದಿದ್ದಾರೆ.
 • ಬಹಳಷ್ಟು ಜನ ಮದುವೆಯ ಆಸೆಯನ್ನು ಬಿಟ್ಟಿದರೆ, ಕೆಲವರು ದಲ್ಲಾಳಿಗಳ ಹೊರ ಊರಿನಿಂದ ಹುಡುಗಿ ತಂದು ಮದುವೆಯಾಗಿ ಮದುವೆ ಶಾಸ್ತ್ರ ಮುಗಿಸಿಕೊಂಡವರಿದ್ದಾರೆ.
 • ಮನುಷ್ಯನಾಗಿ ಹುಟ್ಟಿ ದೇಹಾರೋಗ್ಯ ಸರಿಯಾಗಿರುವವರಿಗೆ ಮದುವೆ ಆಗಲೇ ಬೇಕು.
 • ಮದುವೆ ಆದರೆ ಮಾತ್ರ ಅವರ ತಲೆಮಾರು ಮುಂದುವರಿಯುತ್ತದೆ.
 • ಇಲ್ಲವಾದರೆ ಅದು ಅಲ್ಲಿಗೆ ಮುಕ್ತಾಯ.
 • ಇದಕ್ಕೆ ಪರಿಹಾರವನ್ನು  ಬೇರೆಯವರು ಕಂಡು ಹುಡುಕುವುದಲ್ಲ. ಅವರವರೇ ಕಂಡು ಹುಡುಕಬೇಕಾಗಿದೆ.

ಹಿಂದಿನ ಪರಿಸ್ಥಿತಿ:                                           

ಪರಸ್ಪರ ಜೀವಮಾನ ಪರ್ಯಂತ ಕೈಹಿಡಿದು ಸಾಗುವ ಬಾಂಧವ್ಯ ಮದುವೆ.
ಪರಸ್ಪರ ಜೀವಮಾನ ಪರ್ಯಂತ ಕೈಹಿಡಿದು ಸಾಗುವ ಬಾಂಧವ್ಯ ಮದುವೆ.
 • ಹಿಂದೆ ಗಂಡಸಾದವನು ಹೇಗಾದರೂ ಅನ್ನ ಕೊಟ್ಟಾನು ಎಂಬ ಭಾವನೆಯಲ್ಲಿ ಹೆಣ್ಣು ಕೊಡುವುದು ಇತ್ತು.
 • ಕೊನೆಗೆ ಅಂತಹ ಕಷ್ಟ ಪರಿಸ್ಥಿತಿಯಲ್ಲಿ ಬದುಕಲು ಏನಾದರೂ ವ್ಯವಸ್ಥೆ ಮಾಡಿಕೊಡುವ ಉದಾರ ಮನೋಸ್ಥಿತಿ ಹೆಣ್ಣು ಕೊಟ್ಟವರಿಗೂ ಇತ್ತು.
 • ಈಗ ಅದೆಲ್ಲಾ ಬದಲಾಗಿದೆ. ನಮ್ಮ ಹೆಣ್ಣನ್ನು ರಾಣಿಯಂತೆ ನೋಡಿಕೊಳ್ಳುವ ಯೋಗ್ಯತೆ ಇದ್ದವರಿಗೆ ಮಾತ್ರ ಹೆಣ್ಣು ಕೊಡುವುದು ಎಂದು ಹೆಣ್ಣು ಹೆತ್ತವರು ಪಟ್ಟು ಹಿಡಿದು ಕುಳಿತರೆ,
 • ಗಂಡು ಹೆತ್ತವವರು ನಮ್ಮ ಮಕ್ಕಳ ಯೋಗ ಹೇಗಿರುತ್ತದೆಯೋ ಹಾಗೆ ಆಗಲಿ ಎಂದು ಸುಮ್ಮನಿದ್ದಾರೆ.
 • ಇತ್ತಂಡಗಳ ಮನೋಸ್ಥಿತಿಯಲ್ಲಿ ಯಾವುದೇ ತಪ್ಪು ಇಲ್ಲ.
 • ಇದೊಂದೇ ಕಾರಣಕ್ಕೆ ಎಷ್ಟೇ ಹೊಲ, ತೋಟ ಇದ್ದರೂ ನಮ್ಮ ಮಕ್ಕಳು ಮಾತ್ರ ಕೃಷಿಯಲ್ಲಿ ಇರುವುದು ಬೇಡ.
 • ಏನಾದರೂ ಓದಿ ವ್ಯವಹಾರ ಮಾಡಿಕೊಂಡಿರಬೇಕು ಎಂದು ಹೆತ್ತವರು ಬಯಸುತ್ತಿದ್ದಾರೆ.
 • ಅದಕ್ಕನುಗುಣವಾಗಿ ವಿಧ್ಯೆ ಕಲಿಸಿ ಉದ್ಯೋಗಕ್ಕೆ ಹಾಕುತ್ತಿದ್ದಾರೆ.

ಯಾಕೆ ಹೆಣ್ಣು ಕೊಡುತ್ತಿಲ್ಲ:

 • ಕೃಷಿಕರಿಗೆ  ಹೆಣ್ಣು ಕೊಡದೆ ಇರುವುದಕ್ಕೆ ಕಾರಣ ಅವನ ಆದಾಯ ಅಲ್ಲ.
 • ಸೂಕ್ತ ಬೆಳೆ ಮತ್ತು ಸಾಕಷ್ಟು ಹೊಲ ಇದ್ದರೆ ಆದಾಯಕ್ಕೆ ಅಂತಹ ತೊಂದರೆ ಇಲ್ಲ.
 • ಅದರೆ ಕೃಷಿಕರು ಅವರ ವೃತ್ತಿಯಲ್ಲಿ ತೊಡಗಿಸಿಕೊಳ್ಳುವ ರೀತಿ ಮಾತ್ರ ಬದಲಾಗಬೇಕು.
 • ಕೃಷಿಕರಾದವರು ಅರೆನಗ್ನ ವಸ್ತ್ರದಲ್ಲಿ ತಮ್ಮನ್ನು ಪ್ರದರ್ಶಿಸಿಕೊಳ್ಳಬಾರದು.
 • ಒಬ್ಬ ಕೂಲಿ ಕೆಲಸ ಮಾಡುವವ, ಒಬ್ಬ ಪೈಂಟಿಂಗ್ ಮಾಡುವವ ಅವನು ತನ್ನ ವೃತ್ತಿ ಮಾಡುವಾಗ ಮಾತ್ರ ಅದಕ್ಕೆ ಬೇಕಾದ ಬಟ್ಟೆ ಬರೆ ಉಟ್ಟುಕೊಂಡು ಕೆಲಸ ಮಾಡುತ್ತಾನೆ.
 • ಉಳಿದ ಸಮಯದಲ್ಲಿ ಅವನನ್ನು ನೋಡಿದರೆ ಯಾವುದೋ ಉದ್ಯೋಗದಲ್ಲಿ ಇರುವವನಂತೆ ಕಾಣುತ್ತಾನೆ. 
 • ಒಬ್ಬ ಅಟೋ ಡ್ರೈವರ್ ತನ್ನ ವೃತ್ತಿಯನ್ನು ಮಾಡುವಾಗ ಮತ್ತು ವೃತ್ತಿ ಬಿಟ್ಟು ಬೇರೆ ಕೆಲಸ ಮಾಡುವಾಗ ಹೇಗಿರುತ್ತಾನೆ ಎಂದು ಗಮನಿಸಿ.
 • ಯಾರಾದರೂ ಒಬ್ಬ ಅಟೋ ಡ್ರೈವರ್ ಅಥವಾ ಕೂಲಿ ಕೆಲಸದವನು ಮದುವೆ ಆಗದೆ ಬಾಕಿಯಾದದ್ದು ಉಂಟೇ? ಇಲ್ಲ.
 • ಇವರ ಜೀವನ ಮತ್ತು ವೃತ್ತಿಯನ್ನು ನಿಭಾಯಿಸಿಕೊಳ್ಳುವ ಕ್ರಮದಲ್ಲಿ ಅವರು  ಪಾಸ್ ಅಗಿದ್ದಾರೆ.
 • ಆದರೆ ಕೃಷಿಕರು ಆಗಿಲ್ಲ. ನಮ್ಮದು ಇದೇ ಸ್ಟೈಲ್ ಎಂದು ನಮ್ಮನ್ನೇ ನಾವು ಹೊಗಳಿಕೊಳ್ಳಬೇಕು.
 • ದಯವಿಟ್ಟು ಯಾವ ಕೃಷಿಕರೂ ಬೇಸರಪಟ್ಟುಕೊಳ್ಳಬೇಡಿ.
 • ಕಾಲಕ್ಕೆ ತಕ್ಕಂತೆ ನಾವೂ ಬದಲಾಗದಿದ್ದರೆ ನಾವು ಹಿಂದುಳಿಯುತ್ತೇವೆ!
 • ನಾವು ಸಾಮಾಜಿಕ ವ್ಯವಸ್ಥೆಯ ಒಂದು ಅಂಗದಿಂದ ವಂಚಿತರಾಗುತ್ತೇವೆ.
ಹೆಣ್ಣು ಹೆತ್ತವರು ಸಂತೋಷದಿಂದ ಧಾರೆ ಎರೆದು ಮಗಳನ್ನು ಒಪ್ಪಿಸುವ ಕ್ಷಣ
ಹೆಣ್ಣು ಹೆತ್ತವರು ಸಂತೋಷದಿಂದ ಧಾರೆ ಎರೆದು ಮಗಳನ್ನು ಒಪ್ಪಿಸುವ ಕ್ಷಣ

ಹೇಗೆ ಬದಲಾಗಬೇಕು:

 • ಕೃಷಿಕರ ಮಕ್ಕಳು ಮೊದಲಾಗಿ ಇತರ ವೃತ್ತಿಯಲ್ಲಿ ಇರುವವರು ಹೇಗೆ ತಮ್ಮ ಜೀವನ ಶೈಲಿಯನ್ನು ಪಾಲಿಸುತ್ತಿರುತ್ತಾರೆ ಎಂಬುದನ್ನು ಸ್ವಲ್ಪ ಗಮನವಿಟ್ಟು ನೋಡಬೇಕು.
 • ಅನವಶ್ಯಕವಾಗಿ ಸಿಕ್ಕ ಸಿಕ್ಕವರ ಜೊತೆ ಬೆರೆಯಬೇಡಿ.
 • ಎಲ್ಲಿಗೇ ಹೋಗಲಿ ಟಿಪ್ ಟಾಪ್ ಉಡುಗೆ ತೊಟ್ಟು ನಡೆ ನುಡಿಯಲ್ಲಿ ಗಾಂಭೀರ್ಯತೆ ಇರಲಿ.
 • ಎಲ್ಲಿಯೂ ಮಕ್ಕಳಾಟಿಕೆಯ ಮಾತುಗಳನ್ನಾಡುವುದು ಬೇಡ.ತಮ್ಮ ಆದಾಯವನ್ನು ಜಿಪುಣತನ ಮಾಡಿ ಉಳಿಸಿಕೊಂಡು ತಮ್ಮನ್ನೇ ತಾವು ಶೋಷಿಸಿಕೊಳ್ಳಬೇಡಿ.
 • ಯಾವಾಗಲೂ ಇರುವ ಆದಾಯವನ್ನು ಇಲ್ಲ ಎಂದು ಹೇಳಬೇಡಿ.
 • ಆದಾಯ ಹೆಚ್ಚೇ ಹೇಳಿ. ನೀವು ಯಾರಿಗೂ ಕೊಡಬೇಕಾಗಿಲ್ಲ.
 • ನಿಮಗೆ ಯಾರು ಕೊಡುವುದು ಇಲ್ಲ.
 • ಜೀವನ ಬಧ್ರತೆಗಾಗಿ ನಿಮ್ಮ  ಕೃಷಿಯನ್ನು ಆಧುನಿಕ ರೀತಿಯಲ್ಲಿ ಅಭಿವೃದ್ದಿಪಡಿಸಿ.
 • ಒಬ್ಬ ಸಾಪ್ಟ್ ವೇರ್ ಉದ್ಯೋಗಿಯೇ ಆದರೂ ನಮ್ಮ ವ್ಯವಸ್ಥೆಗಿಂತ ಈ ವ್ಯವಸ್ಥೆ ಒಳ್ಳೆಯದು ಎಂಬಂತೆ ನಿಮ್ಮ ಹೊಲದ ಮತ್ತು ಅದರ ನಿರ್ವಹಣಾ ವ್ಯವಸ್ಥೆ ಇರಲಿ.  
 • ಮನೆಗೆ ಅಗತ್ಯವಿರುವ ಎಲ್ಲಾ ಸವಲತ್ತುಗಳನ್ನೂ ಮಾಡಿಕೊಳ್ಳಲು ಜಿಪುಣತನ  ಮಾಡಬೇಡಿ. 
 • ನಿಮ್ಮ ಮನೆಗೆ ಯಾರಾದರೂ ಬಂದರೆ ಇವರು ನಮಗಿಂತ ಪರವಾಗಿಲ್ಲ ಎಂಬಂತೆ ನಿಮ್ಮ ವ್ಯವಸ್ಥೆಗಳು ಇರಲಿ.
 • ಕೃಷಿಕ ಎಂದ ಮಾತ್ರಕ್ಕೆ ಬಡವ, ಎಲುಬು ಕಾಣುತ್ತಾ ಇರುವವ, ಮೈಗೆ ಬಟ್ಟೆ ಹಾಕದೆ ಬರಿ ಮೈಯಲ್ಲಿ ಇರುವವ ಎಂದು ಸಮಾಜ ಹೇಳುತ್ತಿರಲಿ.
 • ಅದರೆ ನಾವು ಮಾತ್ರ ಹಾಗೆ ಇರಲೇ ಬಾರದು. ಮೈ, ಕೈ ಕಾಲು ಸ್ವಚ್ಚವಾಗಿಟ್ಟುಕೊಂಡಿರಬೇಕು.
 • ಹಳೆಯ ಆಮ್ನಿ, 800 ಕಾರು ಕೃಷಿಕರಿಗಾಗಿ ಮೀಸಲಿಟ್ಟ ವಾಹನ ಎಂದು ಅದನ್ನು ಹಿಡಿದುಕೊಂಡು ಪ್ರದರ್ಶಿಸಬೇಡಿ.
 • ಅದು ಎಲ್ಲಿಗೆ ಬೇಕೋ ಅಲ್ಲಿಗೆ ಮಾತ್ರ ಇರಲಿ. ತೋರಿಕೆಗೆ ಕಾಲಮಾನಕ್ಕೆ ತಕ್ಕುದಾದ ವಾಹನ ಇರಲಿ. 
 • ಹರುಕಲು ಚಪ್ಪಲಿ, ಹಾವಾಯಿ ಚಪ್ಪಲಿ ಇವನ್ನೆಲ್ಲಾ ಬಿಟ್ಟು ಉತ್ತಮ ಬೂಟುಗಳನ್ನೋ , ಚಪ್ಪಲಿಗಳನ್ನೋ ಹಾಕಿ ತಮ್ಮ ಗೆಟ್ ಆಪ್ ಅನ್ನು ಸಮಾಜಕ್ಕೆ ತೋರಿಸಿರಿ.
 • ಹೀಗೆಲ್ಲಾ ಖರ್ಚು ಮಾಡಿದರೆ ನಾಳೆಗೆ ಏನು, ನಮ್ಮ ಮಕ್ಕಳಿಗೆ ಏನು ಎಂದು ಚಿಂತೆ ಮಾಡಬೇಡಿ.
 • ನಿಮ್ಮದನ್ನು ನೀವು ಚೆನ್ನಾಗಿ ಅನುಭವಿಸಿ.
 • ನಿಮ್ಮದೇ ಮಕ್ಕಳು ನೀವು ಮಾಡಿದ್ದಕ್ಕಿಂತ ಹೆಚ್ಚು ಸಂಪಾದನೆ ಮಾಡಿಯೇ ತೀರುತ್ತಾರೆ.
 • ನಿಮ್ಮ ಗೆಟ್ಆಪ್ ನಿಮಗೆ ಸಮಾಜದಲ್ಲಿ ಉನ್ನತ ಸ್ಥಾನವನ್ನು ಕೊಡುತ್ತದೆ.
 • ಮನೆಯಲ್ಲಿ ಇತರರ ಮನೆಯಲ್ಲಿರುವ ಸವಲತ್ತುಗಳಾದ ಬಟ್ಟೆ ಒಗೆಯುವ ಯಂತ್ರ, ಪೀಠೋಪಕರಣಗಳು, ಟಿವಿ, ಪ್ರಿಡ್ಜ್ ಎಲ್ಲವನ್ನೂ ಇಟ್ಟುಕೊಡಿರಿ.
 • ಅತ್ಯಾಧುನಿಕ ಅಲ್ಲದಿದ್ದರೂ ಸಾಧಾರಣ ಮನೆ ವ್ಯವಸ್ಥೆಗಳು ಇರಬೇಕು.
 • ಇದೆಲ್ಲವೂ ನಿಮ್ಮ ಮನೆಯ ಘನಸ್ಥಿಕೆಯನ್ನು ತೋರಿಸುತ್ತದೆ.
 • ಅಲ್ಲಿಗೆ ನಿಮ್ಮನ್ನು ಎಲ್ಲರೂ ಇಚ್ಚೆ ಪಡುತ್ತಾರೆ.
 • ಹೆಣ್ಣು ಕೊಡುವವರೂ ಸಹ ತಮ್ಮ ಮಗಳಿಗೆ ಇಲ್ಲಿ ಸುಖ ಇದೆ ಮನವರಿಕೆಯಾಗಿ ಹೆಣ್ಣು ಕೊಡಲು ಮನಸ್ಸು  ಮಾಡಬಹುದು.

ಬಹುತೇಕ ಕೃಷಿಕರ ಮಕ್ಕಳು ಕನಿಷ್ಟ ಪದವಿಯನ್ನಾದರೂ ಪಾಸ್ ಮಾಡಿರುತ್ತಾರೆ. ಪದವಿ ಪಾಸಾದ ಮೇಲೆ ಕೃಷಿ ಕೆಲಸ ಎಂದು ತಾವು ಕಲಿತದ್ದನ್ನು ಮೂಲೆ ಗುಂಪು ಮಾಡಬೇಡಿ. ಓದುವುದು, ಬರೆಯುವುದು, ಸಾಧ್ಯವಿರುವ ವ್ಯವಹಾರ,  ಹಾಗೆಯೇ ಸ್ಥಳೀಯ ಮುಖಂಡತ್ವವನ್ನು ಬೆಳೆಸಿಕೊಳ್ಳಿ. ಬಾವಿಯೊಳಗಿನ ಕಪ್ಪೆಯಾಗದೆ ಬದುಕಿರಿ. ಯಾವಾಗಲೂ ಪಬ್ಲಿಕ್ ಫಿಗರ್ ಆಗಿ  ಇರಿ. ಕೃಷಿಕರದಾವರು ಪ್ರಾಮಾಣಿಕವಾಗಿ ದುಡಿದು, ಹಣ ಸಂಪಾದನೆ ಮಾಡುವವರು. ಆದ ಕಾರಣ ಸಮಾಜದಲ್ಲಿ ಯಾರಲ್ಲಿಯೂ ಅಳುಕಿ  ಮಾತಾಡಬೇಡಿ. ಅಳುಕಿಲ್ಲದ ಮಾತುಗಳು ನಿಮ್ಮನ್ನು ಮೇಲಕ್ಕೇರಿಸುತ್ತದೆ.

 • ಯಾವಾಗಲೂ ಗಡ್ದ, ತಲೆಕೂದಲು ಹಾಗೂ ಉಗುರಿನ ಸ್ವಚ್ಚತೆ ಬಗ್ಗೆ ಗಮನಹರಿಸಿ.
 • ಇದು ನಿಮ್ಮನ್ನು ಒಬ್ಬ ಡೀಸೆಂಟ್ ವ್ಯಕ್ತಿಯನ್ನಾಗಿ ಕಾಣುವಂತೆ ಮಾಡುತ್ತದೆ.

ಹೆಣ್ಣು ಹೆತ್ತವರು ನಾವೇ ಆದರೆ ಏನು ಮಾಡುತ್ತೇವೆ. ನಾವು ಕೃಷಿಕರಿಗೆ ಕೊಡಲು ತಯಾರಿರುವುದಿಲ್ಲ. ಹಾಗಿರುವಾಗ ಬೇರೆಯವರು ನಮಗೆ ಹೆಣ್ಣು ಕೊಡಬೇಕು ಎಂಬುದರಲ್ಲ್ಲಿ ಯಾವ ನ್ಯಾಯ ಇದೆ? ಹೆಣ್ಣನ್ನು ಮನೆಯ ದೀಪ,ಎಂದು ಪರಿಗಣಿಸಿ ಸಹನೆ, ಪ್ರೀತಿ ಗೌರವಗಳಿಂದ ನಾವು ನೋಡುವ ಮನೋಸ್ಥಿತಿಯಲ್ಲಿರಬೇಕು.

ಪ್ರಾಯಕ್ಕೆ ಬಂದ ಮಕ್ಕಳಿಗೆ  ಹೆತ್ತವರು ಅಗತ್ಯ ಕಂಡರೂ ಕಾಣದಿದ್ದರೂ  ಜಾಗದ ಹಿಸ್ಸೆ ಕೊಟ್ಟು ಅವರನ್ನು ಸ್ವತಂತ್ರವಾಗಿ ಬದುಕಲು ಅವಕಾಶ ಮಾಡಿಕೊಡಿ.  ಮನೆಯ ಗರಿಷ್ಟ ಜವಾಬ್ಧಾರಿ ವಹಿಸಿಕೊಡಿ. ಎಲ್ಲಿಯೂ ಗಂಡು ಮಕ್ಕಳ ಸ್ವಾತಂತ್ರ್ಯಕ್ಕೆ ಅಡ್ಡಿ  ಮಾಡಬೇಡಿ.

ಅಂತರ್ ಜಾತಿ ವಿವಾಹಕ್ಕೆ ಹೆದರಬೇಡಿ:

 • ಕೆಲವರು ಜಾತಿ ಒಳಗೆ ಮದುವೆ ಆಗಬೇಕೆಂದು ಹಂಬಲಿಸುತ್ತಾರೆ.
 • ಆದರೆ ಕಾಲಮಾನಕ್ಕೆ ತಕ್ಕಂತೆ ನಾವು ನಮ್ಮ ನಡೆ ನುಡಿ ಆಚಾರ ವಿಚಾರಗಳಲ್ಲಿ ಸ್ವಲ್ಪ ರಾಜಿ ಮಾಡಿಕೊಳ್ಳಲೇ ಬೇಕಾಗುತ್ತದೆ.
 • ಇದು ತಪ್ಪಲ್ಲ. ಕಪ್ಪು ಬೇಡ ಬಿಳಿಯೂ ಬೇಡ. ಬೂದುವಿನೊಂದಿಗೆ ರಾಜಿ ಮಾಡಿಕೊಳ್ಳಿ.
 • ಜಾತಿಯೊಳಗೆ ಹೆಣ್ಣು ಕೊಡುವವರು ಇಲ್ಲ ಎಂದು ಅರಿವಿಗೆ ಬಂದರೆ ಸಾಕು ಮತ್ತೆ ಪ್ರಯತ್ನಕ್ಕೆ ಹೋಗಬೇಡಿ.
 • ಬೇರೆ ಜಾತಿಯವರನ್ನು ಮದುವೆಯಾಗಿ. ತಮಾಷೆ ಎಂದೆಣಿಸದಿರಿ.
 • ಇದು ನಿಮ್ಮ ಮುಂದಿನ ತಲೆಮಾರನ್ನು ಉತ್ತುಂಗಕ್ಕೆ ಏರಿಸುತ್ತದೆ.
 • ಮುಂದಿನ ನಿಮ್ಮ ತಲೆಮಾರು ನಿಮಗೆ ಕೀರ್ತಿ ತರುತ್ತದೆ.
 • ಸಮಾಜಕ್ಕೆ ಅಂಜಬೇಡಿ. ನಿಮ್ಮ ನಡೆ ನುಡಿ, ಹಾಗಿ ನಿಮ್ಮ ಗಾಂಭೀರ್ಯದ ಮೇಲೆ ಸಮಾಜ ನಿಮ್ಮ ಮೇಲೆ ಟೀಕೆ ಟಿಪ್ಪಣಿ ಮಾಡುತ್ತದೆ.
 • ಒಬ್ಬ ಕಳ್ಳನನ್ನೂ ಒಂದೆರಡು ದಿನ ಸಮಾಜ ಮಾತಾಡಿಕೊಳ್ಳುತ್ತದೆ.
 • ಮತ್ತೆ ಮರೆತೇ ಬಿಡುತ್ತದೆ, ಹೀಗಿರುವಾಗ ಇದು ಯಾವ ಲೆಕ್ಕ.
 • ನಿಮ್ಮ ಆಚಾರ ವಿಚಾರಗಳಿಗೆ ಹೊಂದಿಕೆಯಾಗುವ ಗೊತ್ತು ಪರಿಚಯ ಇರುವವವರನ್ನು ಮದುವೆಯಾಗಿ. ದಲ್ಲಾಳಿಗಳ ಸಹವಾಸ ಮಾಡದೆ ಸ್ಥಳೀಯವಾಗಿ ಆಗಿ.

ಮದುವೆ ಆಗಲು ಯಾವಾಗಲೂ ತಡ ಮಾಡಬೇಡಿ. 25-28 ವರ್ಷದ ಒಳಗೆ ಮದುವೆ ಆಗಿ. ಕಾರಣ ನಿಮ್ಮ ಮಕ್ಕಳು ವಿಧ್ಯಾಭ್ಯಾಸ ಮಾಡಿ ಉದ್ಯೋಗ ಮಾಡಿ ಅಥವಾ ಮೆರೆಯುವುದನ್ನು ನೀವು ನೋಡಬೇಕು. ನಿಮ್ಮ ಮೊಮ್ಮಕ್ಕಳು ನಿಮ್ಮನ್ನು ನೋಡಬೇಕು. ಹೀಗಾಗಬೇಕಾದರೆ ಬೇಗ ಮದುವೆ ಆಗಿ. ಜವಾಬ್ಧಾರಿ ತನ್ನಷ್ಟಕ್ಕೇ ಬರುತ್ತದೆ. ಜೀವನಕ್ಕೆ ಒಂದು ಉತ್ತಮ ಆಯಾಮವೂ ಸಿಗುತ್ತದೆ. ದುರಭ್ಯಾಸವನ್ನು ಕಲಿಯದೆ, ಅರೋಗ್ಯವಾಗಿ ಬದುಕುವುದೇ ಶ್ರೀಮಂತಿಕೆ.

Leave a Reply

Your email address will not be published. Required fields are marked *

error: Content is protected !!