ಅಡಿಕೆ ತೆಂಗು ಹಾಗೆಯೇ ಇನ್ನೂ ಕೆಲವು ಬೆಳೆ ಬೆಳೆಯುವ ಬೆಳೆಗಾರರು ತಮ್ಮ ತೋಟದ ಒಳಗೆ ಒಮ್ಮೆ ಎಲ್ಲಾ ಮರ, ಸಸಿಗಳನ್ನು ಗಮನಿಸುತ್ತಾ ತಿರುಗಾಡಿ. ಅಲ್ಲಿ ನಮ್ಮ ಗಮನಕ್ಕೆ ಬರುವುದು ಬಿದ್ದ ಬೀಜ ನಮ್ಮ ಕಣ್ಣು ತಪ್ಪಿಸಿ ಅಲ್ಲೇ ಉಳಿದು ಮೊಳೆತು ಸಸಿಯಾಗಿರುವ “ಉರಲು ಹುಟ್ಟಿದ ಸಸಿ” ಎಷ್ಟೊಂದು ಚೆನ್ನಾಗಿ ಬೆಳೆಯುತ್ತದೆ, ಮತ್ತು ಅದರಲ್ಲಿ ಎಷ್ಟು ಚೆನ್ನಾಗಿ ಫಲ ಬರುತ್ತದೆ ಎಂಬ ಅಂಶ. ಇದು ಪ್ರತೀಯೊಬ್ಬ ಬೆಳೆಗಾರನ ತೋಟದಲ್ಲೂ ಕಾಣಲು ಸಿಗುತ್ತದೆ. ಮನಸ್ಸು ಹೇಳುತ್ತದೆ, ಊರಲು ಹುಟ್ಟಿದ ಸಸಿ ನಾವು ಮಾಡಿದ ಸಸಿಗಿಂತ ಚೆನ್ನಾಗಿದೆ ಎಂದು. ಆದರೆ ಅದನ್ನೇ ನೆಡಲು ಮತ್ತೊಂದು ಮನಸ್ಸು ಒಪ್ಪುವುದಿಲ್ಲ. ನಿಜವಾಗಿ ಈ ಗಿಡಗಳು ಎಲ್ಲಾ ದೃಷ್ಟಿಯಲ್ಲೂ ಉತ್ತಮ.
ಹಿಂದೆ ನಮ್ಮ ಕುಟುಂಬ ಪದ್ದತಿಯಲ್ಲಿ ಮನೆಯಲ್ಲಿ ಹತ್ತಾರು ಮಕ್ಕಳು ಇರುತ್ತಿದ್ದುದು ಬಹುತೇಕ ಎಲ್ಲರಿಗೂ ಗೊತ್ತು. ಮಕ್ಕಳು ಬೀಳುವುದು, ಗಾಯ ಮಾಡಿಕೊಳ್ಳುವುದು,ನೆಗಡಿ ಇತ್ಯಾದಿ ಖಾಯಿಲೆಗಳಿಗೆ ತುತ್ತಾಗುವುದು ಹಾಗೆಯೇ ಯಾವುದೇ ಗಾಬರಿಗಳಿಲ್ಲದೆ ಗುಣಮುಖವಾಗುವುದು ಸಾಮಾನ್ಯ. ಸುಮಾರು 50-55 ವರ್ಷ ಹಿರಿಯ ತಲೆಮಾರಿನವರಿಗೆಲ್ಲಾ ಇದು ಗೊತ್ತಿರುವ ವಿಚಾರ. ಅದಕ್ಕೆ ಕಾರಣ ಇಷ್ಟೇ ರಪ್ ಆಂಡ್ ಟುಫ್. ಮಗು ಒಂದೆಡೆ ಅಳುತ್ತಿರುತ್ತದೆ. ತಾಯಿ ಅವಳ ಕೆಲಸ ಮಾಡುತ್ತಿರುತ್ತಾಳೆ. ಇದು ಪ್ರೀತಿ ಇಲ್ಲವೆಂಬ ಕಾರಣಕ್ಕೆ ಅಲ್ಲ. ಅವರ ಕೆಲಸವನ್ನು ಅವರೇ ಮಾಡಬೇಕಾದ ಅನಿವಾರ್ಯತೆ ಇತ್ತು. ಇತ್ತೀಚೆಗೆ ಮಿತ್ರರೊಂದಿಗೆ ಹರಟೆ ಹೊಡೆಯುವಾಗ ಒಂದು ಚರ್ಚೆ ಆಯಿತು. ಹಿಂದೆ ಅಡಿಕೆ ಮರಗಳಿಗೆ ಮರ ಹತ್ತುವವರು ಒಂದು ಮರ ಹತ್ತಿ ಅದೇ ಮರವನ್ನು ಸ್ವಲ್ಪ ವಾಲುವಂತೆ ಮಾಡಿ ಮತ್ತೊಂದು ಮರಕ್ಕೆ ಬದಲಾಯಿಸಿ ಕೊಯಿಲು, ಮಾಡುತ್ತಿದ್ದರು. ಆಗ ಮರಗಳು ಮುರಿದು ಬೀಳುವುದು ಇತ್ಯಾದಿ ಆವಘಡಗಳಾಗುತ್ತಿರಲಿಲ್ಲ. ಈಗ ಅಂತಹ ಸಾಹಸ ಮಾಡುವವರೂ ಇಲ್ಲ.ಮಾಡಿದರೆ ಮರ ಮುರಿದು ಅವಘಡಗಳಾಗಲೂ ಬಹುದು. ಇದಲ್ಲದೆ ಇನ್ನೊಂದು ವಿಚಾರ ಚರ್ಚೆಗೆ ಬಂತು ಅದುವೇ ತೆಂಗಿನ ಸಸಿ ನೆಡುವ ವಿಚಾರ. ನೆಲ ಹೊಂಡ ಮಾಡದೆ ಮೇಲುಸ್ತರದಲ್ಲಿ ನೆಟ್ಟ ತೆಂಗಿನ ಸಸಿ, ಹಾಗೆಯೇ ಹೆಕ್ಕದೆ ಬಾಕಿಯಾಗಿ ಬುಡದಲ್ಲಿ ಹುಟ್ಟಿದ ಗಿಡಕ್ಕೆ ಸುಳಿ ಕೊಳೆ ರೋಗ ಇಲ್ಲ. ಯಾವ ದಾಡಿಯೂ ಇಲ್ಲದೆ ಫಲ ಕೊಡುತ್ತದೆ. ಇವೆಲ್ಲಾ ವಿಚಾರಗಳನ್ನು ಅಲ್ಲಗಳೆಯುವಂತಿಲ್ಲ.
- ಹಿಂದೆ ನಮ್ಮ ಅಡಿಕೆ ಬೆಳೆಗಾರರು ಅದರಷ್ಟಕ್ಕೆ ಬಿದ್ದು ಹುಟ್ಟಿದ ಸಸಿಗಳನ್ನೇ ನೆಟ್ಟು ತೋಟ ವಿಸ್ತರಿಸುತ್ತಾ ಬಂದಿರುತ್ತಾರೆ ಎಂಬುದಾಗಿ ಕೆಲವು ಹಿರಿಯ ತೋಟಗಾರರು ಈಗಲೂ ಹೇಳುವುದುಂಟು.
- ಅದು ಸುಮಾರು 1985 ನೇ ಇಸವಿ ಇರಬೇಕು. ಅಡಿಕೆ ಗಿಡ ಮಾಡುವ ನರ್ಸರಿಗಳು ಹುಟ್ಟಿಕೊಂಡದ್ದು.
- ಆ ತನಕ ಅಡಿಕೆ ಸಸಿ ಮಾಡುವವರು ಕೆಲವರು ಬೀಜ ತಂದು ಸಸಿ ಮಾಡಿಕೊಳ್ಳುತ್ತಿದ್ದರು.
- ಹೆಚ್ಚಿನವರು ತೋಟ ಇದ್ದವರ ಮನೆಯಲ್ಲಿ ಬಿದ್ದು ಹುಟ್ಟಿದ ಗಿಡಗಳನ್ನು ತಂದು ನೆಟ್ಟು ಬೆಳೆಸುತ್ತಿದ್ದರು.
- ಕೆಲವು ವಾಳ್ಯದ ಅಡಿಕೆ ತೋಟಗಳು ಅಲ್ಲಿ ವಿಸ್ತರಣೆ ಆದದ್ದು ಸಹ ಬಿದ್ದು ಹುಟ್ಟಿದ ಅಡಿಕೆ ಗಿಡಗಳನ್ನು ಆರಿಸಿ ನೆಟ್ಟು.

ಉರಲು ಹುಟ್ಟಿದ ಸಸಿಯ ವಿಶೇಷ ಏನು:
- ಉರಲು ಹುಟ್ಟಿದ ಗಿಡ, ಅದು ಅಡಿಕೆ ತೆಂಗು, ಅಥವಾ ಇನ್ಯಾವುದೇ ಬೀಜದಿಂದಾಗುವ ಸಸ್ಯವಿರಲಿ, ಅದರಷ್ಟಕ್ಕೆ ಹುಟ್ಟಿ ಬೆಳೆದರೆ ಅದರ ಬೆಳವಣಿಗೆ ಮತ್ತು ಬದುಕುವ ಶಕ್ತಿಯೇ ಬೇರೆ.
- ಇದಕ್ಕೆ ನಿಖರ ಕಾರಣ ಹೀಗೆ ಎಂದು ಹೇಳಲಿಕ್ಕೆ ಬರುವುದಿಲ್ಲ.
- ಪ್ರಕೃತಿಯ ಮುಂದೆ ಮಾನವ ಕುಬ್ಜ ಎಂದೇ ಹೇಳಬೇಕು.
- ಹೆಚ್ಚು ನಿಗಾ ತೆಗೆದುಕೊಂಡಷ್ಟೂ ರೋಗ ರುಜಿನಗಳು ಜಾಸ್ತಿ.
- ಇವುಗಳಿಗೆ ಅದರದ್ದೇ ಆದ ನಿರೋಧಕ ಶಕ್ತಿ ಇರುತ್ತದೆ.
- ಅಡಿಕೆ ಮರದಿಂದ, ತೆಂಗಿನ ಮರದಿಂದ ಬಿದ್ದು ಹೆಕ್ಕದೆ ಬಾಕಿಯಾದ ಕೆಲವು ಬೀಜಗಳು ಅದರಷ್ಟಕ್ಕೆ ಹುಟ್ಟಿ ಬೆಳೆಯುತ್ತವೆ.
- ಅವು ಬೇಗ ಮೊಳಕೆಯೂ ಬರುತ್ತವೆ. ಉತ್ತಮ ಬೆಳವಣಿಗೆಯನ್ನೂ ಪಡೆದಿರುತ್ತವೆ.
- ಇವುಗಳ ಉತ್ತಮ ಬೆಳವಣಿಗೆಗೆ ಕಾರಣ ಅವು ಕ್ಲಿಷ್ಟಕರವಾದ ಸನ್ನಿವೇಶದಲ್ಲಿಯೂ ಮೊಳಕೆಯೊಡೆಯುವುದು ಮತ್ತು ಬದುಕಿರುವುದು.
- ಬೆಟ್ಟದ ತುದಿಯಲ್ಲಿ ಹುಟ್ಟಿದಾ ವೃಕ್ಷಕ್ಕೆ ಕಟ್ಟೆಯನು ಕಟ್ಟಿ ನೀರೆರೆದವರು ಯಾರಯ್ಯಾ? ಆದರೂ ಅದು ಹುಲುಸಾಗಿ ಬೆಳೆಯಲು ಕಾರಣ ಏನು? ಇದೇ ಅದರ ಪೂರ್ಣ ರಹಸ್ಯ.
- ವೈಜ್ಞಾನಿಕವಾಗಿ ಹೇಳಬೇಕೆಂದರೆ ಹೀಗೆ ಬಿದ್ದ ಬೀಜಗಳು ಕೆಲವು ಅನುಕೂಲಕರ ಪರಿಸ್ಥಿತಿಯಲ್ಲಿ ಇರುವ ಕಾರಣ ನಮ್ಮ ಕಣ್ಣು ತಪ್ಪಿ ಉಳಿದಿರುತ್ತವೆ.
- ಕೆಲವು ಹುಲ್ಲು ರಾಶಿಯ ಎಡೆಯಲ್ಲೋ, ತರಗೆಲೆ, ಗೊಬ್ಬರದ ಎಡೆಯಲ್ಲೋ ಉಳಿದುಕೊಂಡು ನಮ್ಮ ಕಣ್ಣಿಗೆ ಬೀಳದೆ ಉಳಿದಿರುತ್ತವೆ.
- ಅಲ್ಲಿ ಅವುಗಳಿಗೆ (ಅದರ ಬ್ರೂಣಕ್ಕೆ )ಜೀವಂತವಾಗಿ ಉಳಿಯಲು ಬೇಕಾದ ಅನುಕೂಲ ಇರುತ್ತದೆ.
- ಹೆಚ್ಚಾಗಿ ಸ್ಪ್ರಿಂಕ್ಲರ್ ನೀರಾವರಿ ಇದ್ದಲ್ಲಿ ಅವುಗಳು ಬೇಕಾದಷ್ಟೇ ತೇವಾಂಶವನ್ನು ಹೀರಿಕೊಂಡು ಮೊಳಕೆ ಒಡೆಯುತ್ತವೆ.
- ಇಂತಹ ನೀರಾವರಿ ಇಲ್ಲದ ಕಡೆ ಮಳೆ ನೀರು ಬೀಳುವ ತನಕ ತೇವಾಂಶದಲ್ಲೇ ಬದುಕಿರುತ್ತದೆ.
- ಇದು ಅವುಗಳ ಮೊಳಕೆ ಬರಲು ಅವಶ್ಯಕವಾದ ತೇವಾಂಶವಾಗಿರುತ್ತದೆ.ಕ್ಲಿಷ್ಟಕರ ಸನ್ನಿವೇಶದಲ್ಲೂ ಅವು ಬದುಕಿ ಬೆಳೆಯುವ ಶಕ್ತಿ ಪಡೆದಿರುವುದೇ ಅದರ ವೈಶಿಷ್ಟ್ಯ.
- ಇನ್ನೂ ಒಂದು ವಿಶೇಷ ಏನೆಂದರೆ ಯಾವಾಗಲೂ ನೆಲಕ್ಕೆ ಬೀಳುವ ಬೀಜಗಳು ಅಡ್ದವಾಗಿಯೇ ಬೀಳುತ್ತವೆ.
- ಅಡಿಕೆ ಬೀಜ ನೆಲಕ್ಕೆ ಬಿದ್ದುದನ್ನು ಸೂಕ್ಷ್ಮವಾಗಿ ಗಮನಿಸಿ. ಅದು ಬಹುತೇಕ ಸಂದರ್ಭಗಳಲ್ಲಿ ಅಡ್ದಕ್ಕೆ ಬಿದ್ದಿರುತ್ತದೆ.
- ಹಾಗೆಯೇ ತೆಂಗಿನ ಕಾಯಿಯೂ ಸಹ. ಗೇರು ಬೀಜ,ಕಾಫೀ, ಕರಿಮೆಣಸು, ಅದೇ ರೀತಿ ಪ್ರತೀಯೊಂದೂ ಬೀಜಗಳೂ.
- ಒಂದು ವೇಳೆ ಅದು ಮೆದು ಮಣ್ಣಿನ ಮೇಲೆ ನೇರವಾಗಿ ಬಿತ್ತೆಂದರೆ ಮಾತ್ರ ಅದು ನೇರವಾಗಿ ಇರುತ್ತದೆ.
- ಹಾಗಾಗಿ ಅವು ಮೊಳಕೆ ಒಡೆಯುವ ಸಂದರ್ಭದಲ್ಲಿ ಮೊದಲು ಬೇರನ್ನು ಮಣ್ಣಿಗೆ ತಾಗಿಸಿಯೇ ನಂತರ ಮೊಳಕೆ ಹೊರ ಹಾಕುತ್ತವೆ.
- ಅವುಗಳ ಬೇರಿಗೆ ತಕ್ಷಣ ಲಭ್ಯವಾಗುವುದು ಫಲವತ್ತಾದ ಮೇಲ್ಮಣ್ಣು.ಸಧೃಢ ಮೊಳಕೆ ಮತ್ತು ಆರೋಗ್ಯಕರ ಬೆಳವಣಿಗೆಗೆ ಇದೂ ಒಂದು ಕಾರಣ ಇರಬಹುದು.
- ಇನ್ನೂ ಒಂದು ಸಂಗತಿ ಗಮನಿಸಿ. ನೆಲಕ್ಕೆ ಬೀಳುವ ಬೀಜದ ಮೇಲೆ ಯಾವುದೇ ಹೊದಿಕೆ ಇರುವುದಿಲ್ಲ.
- ಒಂದು ವೇಳೆ ತರಗೆಲೆ ಇದ್ದರೂ ಸಹ ಅದರ ಮೊಳಕೆಗೆ ಕಿರಿ ಕಿರಿ ಉಂಟಾಗುತ್ತದೆ.
- ನಾವು ಸಸಿ ಮಾಡುವಾಗ ಆ ಕ್ರಮವನ್ನು ಅನುಸರಿಸುವುದಿಲ್ಲ.
- ಅಡಿಕೆ, ತೆಂಗಿನ ಕಾಯಿ ಗೇರು ಬೀಜ ಎಲ್ಲವೂ ತನ್ನ ಬೀಜದ 80% ಕ್ಕೂ ಹೆಚ್ಚಿನ ಭಾಗವನ್ನು ನೆಲದ ಮೇಲೆ ಉಳಿಸಿಕೊಂಡಿರುತ್ತವೆ.
- ಹಾಗಾಗಿ ಅವುಗಳ ಮೊಳಕೆಗೆ ಯಾವುದೇ ಅಡ್ಡಿಗಳು ಇರುವುದಿಲ್ಲ.

ಬಿದ್ದು ಹುಟ್ಟಿದ ಗಿಡಗಳನ್ನು ನೆಡುವುದರಲ್ಲಿ ತಪ್ಪಿಲ್ಲ:
- ಹೆಚ್ಚಿನವರ ಅಡಿಕೆ ತೆಂಗಿನ ತೋಟದಲ್ಲಿ ಬಿದ್ದು ಹುಟ್ಟುವ ಸಸಿಗಳು ಇದ್ದರೆ ಅದನ್ನು ವ್ಯರ್ಥ ಎಂದು ಕಡಿದು ಬಿಸಾದಬೇಡಿ.
- ಅದನ್ನು ಒಂದು ವರ್ಷ , ಎರಡು ವರ್ಷ ಅಲ್ಲೇ ಬಿಟ್ಟು ಸ್ವಲ್ಪ ಗೊಬ್ಬರ ಕೊಡುತ್ತಿದ್ದರೆ ಆ ಸಸ್ಯ ನಾವು ಬೆಳೆಸಿ ಉತ್ಪಾದಿಸುವ ಸಸಿಗಿಂತ ದುಪ್ಪಟ್ಟು ಸಧೃಢವಾಗಿ ಬೆಳೆದಿರುತ್ತದೆ.
- ಅಂತಹ ಸಸಿಗಳನ್ನು ನೆಟ್ಟರೆ ವ್ಯರ್ಥ ಎಂದೆಣಿಸದಿರಿ. ಅದು ಚೆನ್ನಾಗಿಯೇ ಫಲ ಕೊಡುತ್ತದೆ.
- ಸಣ್ಣ ಗಿಡಗಳನ್ನು ವರ್ಗಾಯಿಸಿ ನೆಡುವ ಬದಲಿ 1-1.5-2 ವರ್ಷ ಅಲ್ಲೇ ಉಳಿಸಿ ನಂತರ ಅದನ್ನು ಬುಡದ ಬೇರಿನ ಮಣ್ಣು ಹೆಚ್ಚು ಹಾನಿಯಾಗದಂತೆ ತೆಗೆದು ನಾಟಿ ಮಾಡಿದರೆ ಬಹಳ ಚೆನ್ನಾಗಿ ಬೆಳೆಯುತ್ತದೆ.
- ಎಲ್ಲಿಲ್ಲಿ ಗ್ಯಾಪ್ ಫಿಲ್ಲಿಂಗ್ ಇರುತ್ತದೆಯೋ ಅಲ್ಲಿಗೆ ಅಂತಹ ಗಿಡಗಳನ್ನು ನಾಟಿ ಮಾಡುವುದು ಸೂಕ್ತ.
- ಅವು ಅಲ್ಲಿನ ನೆರಳು , ಬಿಸಿಲಿನ ಲಭ್ಯತೆಗೆ ಹೊಂದಿಕೊಂಡು ಬೆಳೆಯುತ್ತವೆ.ಸ್ಥಳದ ವಾತಾವರಣಕ್ಕೆ ಹೊಂದಿಕೆಯಾಗಿರುವ ಯಾವುದೇ ಸಸಿ ಮುಂದೆ ಯಾವ ರೋಗ ರುಜಿನಗಳಿಗೂ ಬೇಗನೆ ತುತ್ತಾಗಲಾರದು.
ದೊಡ್ಡ ಸಸಿ ನೆಟ್ಟರೆ ಉತ್ತಮ:
- ಬಿದ್ದ ಸಸಿಗಳನ್ನು ಅಲ್ಲೇ ಗೊಬ್ಬರ ಹಾಕಿ ಬೆಳೆಯಲು ಬಿಟ್ಟರೆ ಬಹಳ ಒಳ್ಳೆಯದು. ಅದರೆ ಎಲ್ಲಾ ಸಂಧರ್ಭಗಳಲ್ಲೂ ಇದನ್ನು ಉಳಿಸಿಕೊಳ್ಳಲು ಆಗುವುದಿಲ್ಲ.
- ವರ್ಗಾಯಿಸಿ ಬೇರೆ ಕಡೆ ನಾಟಿ ಮಾಡುವುದೇ ಆದಲ್ಲಿ ಗಿಡಕ್ಕೆ 2 ವರ್ಷ ಆದ ಮೇಲೆ ಜಾಗರೂಕತೆಯಿಂದ ಮಣ್ಣು ಸಮೇತ ತೆಗೆದು ಅದನ್ನು ಇಡುವಷ್ಟು ಆಳದ ಗುಂಡಿ ತೆಗೆದು ನೆಟ್ಟರೆ ಮತ್ತೆ 2-3 ವರ್ಷಕ್ಕೆ ಅದು ಫಲ ಕೊಡಲು ಸಜ್ಜಾಗುತ್ತದೆ.
- ಇಂದು ವೇಳೆ ಅದನ್ನು ಎಡೆ ಸಸಿಯಾಗಿ ನೆಟ್ಟರೂ ಸಹ ಸಣಕಲು ಆಗಿ ಬೆಳೆಯಲಾರದು.
ಬಿದ್ದ ಅಡಿಕೆ, ತೆಂಗಿನ ಕಾಯಿ ಅಥವಾ ಇನ್ಯಾವುದೇ ಸಸಿಗಳನ್ನು ಅವು ಪ್ರಯೋಜನ ಇಲ್ಲದ್ದು, ಅನುತ್ಪಾದಕ ಎಂದು ನಿರ್ಲಕ್ಷ್ಯ ಮಾಡಬೇಡಿ. ಅದನ್ನು ಬೆಳೆಸಿ ಎಲ್ಲಾದರೂ ನೆಡಿ. ಅದು ನಾವು ಮಾಡಿದ ಅಥವಾ ಕೊಂಡು ತಂದ ಗಿಡಕ್ಕಿಂತ ಚೆನ್ನಾಗಿ ಬೆಳೆಯುತ್ತದೆ. ಫಲ ಕೊದುತ್ತದೆ. ಇದರ ಅನುಭವ ಬಹಳಷ್ಟು ಜನರಿಗೆ ಇರಬಹುದು. ಈ ಬಗ್ಗೆ ನಿಮ್ಮ ಅನುಭವವನ್ನು ಹಂಚುಕೊಳ್ಳಲು ಇಲ್ಲಿ ಅವಕಾಶ ಇದೆ.
.