ಕಳೆದ ಒಂದು ವಾರದಿಂದ ಕರಿಮೆಣಸು ಬೆಲೆ ಎರಿಕೆಯಾಗಲು ಪ್ರಾರಂಭವಾಗಿದೆ. ಕೇರಳದ ಮಳೆ, ಶ್ರೀಲಂಕಾದ ಉತ್ಪಾದನೆ ಕುಸಿತ, ವಿಯೆಟ್ನಾಂ ನ ಬೆಳೆ ಬದಲಾವಣೆ ಮೆಣಸಿನ ಬೇಡಿಕೆಯನ್ನು ಹೆಚ್ಚಿಸಿದ್ದು, ಬಹುಷಃ ಕರಿಮೆಣಸಿನ ಬೆಲೆ ಭಾರೀ ನೆಗೆತ ಕಾಣಲಿದ್ದು,500 ದಾಟಬಹುದು, 600 ಆದರೂ ಅಚ್ಚರಿ ಇಲ್ಲ ಎಂಬುದಾಗಿ ಹೇಳುತ್ತಿದ್ದಾರೆ. ಮೆಣಸು ದಾಸ್ತಾನು ಉಳ್ಳವರು ಮಾರಾಟ ಮಾಡದಿರುವುದೇ ಉತ್ತಮ.
ಕರಾವಳಿಯಲ್ಲಿ ಚಾಲಿ ಬೆಲೆ ಯಾಕೆ ಬಾರೀ ಕುಸಿತ ಆಗುವುದಿಲ್ಲ ಎಂಬುದಕ್ಕೆ ಮೂಲ ಕಾರಣ ಬೆಳೆಗಾರರ ದೃಢ ನಿರ್ಧಾರ. ಅಡಿಕೆ ಬೆಳೆಗಾರರು ತುರ್ತು ಅಗತ್ಯ ಇದ್ದರೆ ಮಾತ್ರ ಮಾರಾಟ ಮಾಡುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಅಡಿಕೆಗೆ ಬೇಡಿಕೆ ಇದೆ. ಬೆಲೆ ಬಂದೇ ಬರುತ್ತದೆ ಎಂಬುದು ಕಳೆದ ಕೊರೋನಾ ಸಮಯದಲ್ಲಿ ಬೆಳೆಗಾರರಿಗೆ ಮನವರಿಕೆಯಾಗಿದೆ. ಈ ತನಕ ಆಮದು ಎಂಬೆಲ್ಲಾ ಕಾರಣಗಳಿಂದ ಅಡಿಕೆಗೆ ಉತ್ತಮ ಬೆಲೆ ಬಂದಿರಲಿಲ್ಲ. ಆಮದು ನಿಲ್ಲಿಸಿದರೆ ಚಾಲಿ ಅಡಿಕೆಗೆ ಸರಾಸರಿ 500 ರೂ. ಖಾತ್ರಿ ಎಂದು ತಿಳಿದ ಬೆಳೆಗಾರರು ಅದಕ್ಕಿಂತ ಕಡಿಮೆಗೆ ಕೊಡುತ್ತಿಲ್ಲ. ವ್ಯಾಪಾರಿಗಳು ದರ ಬೀಳಿಸಲು ಹಿಂದೇಟು ಹಾಕುತ್ತಿದ್ದಾರೆ. ಅಡಿಕೆಗೆ ಬೆಲೆ ಇದೆ. ಕೊಡುವವರು ಇಲ್ಲ ಎಂಬ ಸ್ಥಿತಿ ಉಂಟಾಗಿದೆ. ಇದೇ ಸ್ಥಿತಿ ಮೆಣಸಿನ ವಿಚಾರದಲ್ಲೂ ಆಗಬೇಕಾಗಿದೆ. ಈಗ ಬೆಲೆ ಏರಿದೆ ಎಂದು ಯಾರೂ ಮಾರಾಟಕ್ಕೆ ಮುಂದಾಗಬೇಡಿ. ಬೆಲೆ ಈ ವರ್ಷವೇ 500 ದಾಟಬಹುದು.ಬಿಳೀ ಮೆಣಸಿಗೆ ಆಗಲೇ ರೂ. 500 ದಾಟಿದ್ದು, ಬೇಡಿಕೆ ಹೆಚ್ಚಾಗಿದೆ. ಮುಂದಿನ ವರ್ಷದಿಂದ ಇನ್ನೂ ಹೆಚ್ಚಳವಾಗಬಹುದು ಎಂಬ ವರದಿಗಳಿವೆ.
- ಶನಿವಾರ ಕ್ಯಾಂಪ್ಕೋ ಸಂಸ್ಥೆ 42200 ಕ್ಕೆ ದರ ನಿರ್ಧರಣೆ ಮಾಡಿದೆ.
- ಶನಿವಾರ ಸೆಕೆಂಡ್ ಶನಿವಾರ ಆದ ಕಾರಣ ಉಳಿದೆಡೆ, ಶಿರಸಿ, ಸಿದ್ದಾಪುರ, ಸಾಗರ ಕಡೆ ಮಾರುಕಟ್ಟೆ ಇರಲಿಲ್ಲ.
- ಆದ ಕಾರಣ ಟೆಂಡರ್ ಆಗಿಲ್ಲ. ಬಾನುವಾರ ಮೂಡಿಗೆರೆಯಲ್ಲಿ ಗರಿಷ್ಟ 44500 ಕ್ಕೆ ವ್ಯಾಪಾರ ಆಗಿದೆ.
- ಶುಕ್ರವಾರ ಶಿರಸಿಯಲ್ಲಿ ಗರಿಷ್ಟ 45499 ಸರಾಸರಿ 44197 ಯಲ್ಲಾಪುರ ಗರಿಷ್ಟ 44000 ಸರಾಸರಿ 42599 ಸಿದ್ದಾಪುರ ಗರಿಷ್ಟ 44909 ಸರಾಸರಿ 44809 ಖರೀದಿ ನಡೆದಿದೆ.
- ಇಂದು ಸಹ ಇದಕ್ಕಿಂತ ಮೇಲೆ ದರ ನಿರ್ಧಾರ ಆಗುವ ಸಾಧ್ಯತೆ ಇದ್ದು, ಮೆಣಸು ಅತೀ ಕಡಿಮೆ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುತ್ತಿದೆ.
- ಇಂದು ಕ್ಯಾಂಪ್ಕೋ ಪ್ರಕಟಿಸಿದ ಖರೀದಿ ದರ ಕಿಲೋ ಮೇಲೆ 8 ರೂ. ಹೆಚ್ಚು ಇದ್ದು, ಇದು ಬೇಡಿಕೆಯನ್ನು ಸೂಚಿಸುತ್ತದೆ.
ಮೆಣಸು ಇಲ್ಲ ಬೇಡಿಕೆ ಇದೆ:
- ಕಳೆದ ವಾರದಿಂದ ಖಾಸಗಿ ವ್ಯಾಪಾರಿಗಳು ಖರೀದಿಯ ಭರದಲ್ಲಿದ್ದಾರೆ.
- ಕ್ಯಾಂಪ್ಕೋ ದರಕ್ಕಿಂತ 15-20 ರೂ. ಹೆಚ್ಚಿನ ದರಕ್ಕೆ ಖರೀದಿ ಮಾಡುತ್ತಿದ್ದಾರೆ.
- ಈಗ ಬರುತ್ತಿರುವ ಮೆಣಸು ಚೆನ್ನಾಗಿ ಗೇರಿ ಆಯ್ದ ಮೆಣಸಾಗಿದ್ದು, ಇದು ಗಾರ್ಬಲ್ಡ್ ಮೆಣಸಾಗಿ ಮಾರಾಟವಾಗುತ್ತಿದೆ ಎಂಬ ವದಂತಿಗಳಿವೆ.
- ಹಾಗಾಗಿ ಗುಣಮಟ್ಟ ನೋಡದೆಯೇ ಖಾಸಗಿ ವ್ಯಾಪಾರಿಗಳು 45000 ರೂ. ತನಕ ಖರೀದಿ ಮಾಡಲಾರಂಭಿಸಿದ್ದಾರೆ.
- ಆಮದು ಮಾಡಲು ಮೆಣಸು ಇಲ್ಲ ಎಂಬ ಸ್ಥಿತಿ ಉಂಟಾಗಿದೆ. ಶಿರಸಿ, ಸಿದ್ದಾಪುರಗಳಲ್ಲಿ ಮೆಣಸನ್ನು 46000 ತನಕವೂ ಖಾಸಗಿ ವ್ಯಾಪಾರಿಗಳು ಖರೀದಿ ಮಾಡುತ್ತಿದ್ದಾರೆ ಎಂಬ ಮಾಹಿತಿ ಇದೆ.
- ಇಷ್ಟಕ್ಕೂ ಕಾರಣ ಈಗ ರೆಸ್ಟೊರೆಂಟುಗಳು , ಬಾರುಗಳು ತೆರೆದಿದ್ದು, ಮೆಣಸಿನ ಬಳಕೆ ಹೆಚ್ಚಳವಾಗಿದೆ.
- ಬೇಡಿಕೆ ಹೆಚ್ಚಿದ ಕಾರಣ ಬೆಲೆ ಏರಿಕೆ ಆಗುತ್ತಿದೆ.
- ವಿದೇಶಗಳಿಂದಲೂ ನಮ್ಮ ದೇಶದ ಮೆಣಸಿಗೆ ಬೇಡಿಕೆ ಉಂಟಾಗಿದ್ದು, ರಪ್ತು ಉದ್ದೇಶಕ್ಕೂ ಮೆಣಸಿನ ಅಗತ್ಯ ಇದೆ.
ಬೆಲೆ ಏರಿಕೆಗೆ ಕಾರಣ:
- ನಮ್ಮ ದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೆಣಸು ಉತ್ಪಾದನೆಯಾಗುವ ರಾಜ್ಯಗಳೆಂದರೆ ಮೊದಲ ಸ್ಥಾನದಲ್ಲಿ ಕರ್ನಾಟಕ.
- ನಂತರ ಕೇರಳ, ಅದನಂತರ ತಮಿಳುನಾಡು. ಕೇರಳ ತಮಿಳುನಾಡಿನ ಮೆಣಸು ಬೆಳೆಯುವ ಪ್ರದೇಶಗಳಲ್ಲಿ ಭಾರೀ ಮಳೆಯಿಂದಾಗಿ ಮೆಣಸಿನ ಬೆಳೆಗೆ ಭಾರೀ ಹಾನಿಯಾಗಿದೆ.
- ಇಲ್ಲಿ ಮೊದಲೇ ಉತ್ಪಾದನೆ ಕಡಿಮೆಯಾಗಿದ್ದು, ಮಳೆಯ ಕಾರಣ ಮತ್ತೆ ಬಳ್ಳಿಗಳು ರೋಗಕ್ಕೆ ತುತ್ತಾಗಿ ಸಾಯುತ್ತಿವೆ.
- ಕರ್ನಾಟಕದಲ್ಲೂ ಮೆಣಸಿಗೆ ಮಳೆಯಿಂದಾಗಿ ತುಂಬಾ ತೊಂದರೆ ಆಗಿದ್ದು,
- ಬಲಿಯುತ್ತಿರುವ ಕಾಳು ಮೆಣಸಿನ ಕರೆಗಳೇ ತೊಟ್ಟು ಕೊಳೆತು ಉದುರುತ್ತಿವೆ.
- ಇದರಿಂದಾಗಿ ಕರ್ನಾಟಕದಲ್ಲೂ 25% ಬೆಳೆ ಕಡಿಮೆಯಾಗಬಹುದು ಎಂಬುದಾಗಿ ಶಿರಸಿ, ಸಾಗರ, ಸಿದ್ದಾಪುರದ ಕೆಲವು ಬೆಳೆಗಾರರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
- ಕೆಲವು ಬೆಳೆಗಾರರ ತೋಟಗಳಿಗೆ ನೆರೆಯಂತೆ ನೀರು ನುಗ್ಗಿ ಬಳ್ಳಿ ಭಾರೀ ಪ್ರಮಾಣದಲ್ಲಿ ಹಾನಿಯಾಗಿವೆ ಎಂಬ ವರದಿಗಳಿವೆ.
ಶ್ರೀಲಂಕಾದ ಕಥೆ ಬೇರೆಯೇ ಆಗಿದ್ದು, ಸಾವಯವ ಕೃಷಿಗೆ ಪರಿವರ್ತನೆಯಾಗುವ ಭರದಲ್ಲಿ ಚೀನಾದಿಂದ ತರಿಸಿದ ಸಾವಯವ ಗೊಬ್ಬರದಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾ ಇದ್ದು, ಬೆಳೆಗಳ ಬೆಳವಣಿಗೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿದೆ. ಈ ಬ್ಯಾಕ್ಟೀರಿಯಾಗಳು ಮಣ್ಣಿನಲ್ಲಿ ಇರುವ ಸತ್ವಾಂಶವನ್ನೂ ಬಾಂಡಿಂಗ್ ಮಾಡಿ, ಬೆಳೆ ಕುಂಠಿತವಾಗುವಂತೆ ಮಾಡಿದೆ.
ವಿಯೆಟ್ನಾಂ ದೇಶದಲ್ಲಿ ಏಕ ಬೆಳೆಯಾಗಿ ಮೆಣಸು ಬೆಳೆಸುತ್ತಿದ್ದಾರೆ. ಈ ರೀತಿ ಮೆಣಸು ಬೆಳೆಯುವಾಗ ಅದರ ನಿರ್ವಹಣೆ ಖರ್ಚು ಹೆಚ್ಚಾಗಿರುತ್ತದೆ. ಇವರು ಅಧಿಕ ಉತ್ಪಾದನೆಯೇನೋ ಮಾಡುತ್ತಾರೆ.ಆದರೆ ಪ್ರತೀ ಕಿಲೋ ಮೆಣಸಿಗೆ ಇವರು ಪಡೆಯುವ ಬೆಲೆ ಭಾರತೀಯ ಕರೆನ್ಸಿಯಲ್ಲಿ 125-150 ರೂ. ಗಳು ಮಾತ್ರ. ಈ ಬೆಲೆಗೆ ಅದು ಪೂರೈಸುವುದಿಲ್ಲ ಎಂಬ ಕಾರಣಕ್ಕಾಗಿ ಈಗ ಅಲ್ಲಿ ಮೆಣಸಿನ ಬೆಳೆಯೇ ನಿರ್ಲಕ್ಷ್ಯಕ್ಕೆ ಒಳಗಾಗಿದೆ.
- ರೈತರು ಕಾಫೀ, ಏಲಕ್ಕಿ , ಬಾಳೆ ಮುಂತಾದ ಕೆಳಗಿನಿಂದಲೇ ನಿರ್ವಹಣೆ ಮಾಡಲು ಸಾಧ್ಯವಿರುವ ಬೆಳೆಗಳತ್ತ ಬದಲಾಗುತ್ತಿದ್ದಾರೆ.
- ಹಾಗೆಯೇ ಖರ್ಚು ಇಲ್ಲದ ಅಕೇಶಿಯಾ ದಂತಹ ಮರಮಟ್ಟಿನ ಬೆಳೆಗಳನ್ನು ಬೆಳೆಸಲು ಮುಂದಾಗಿದ್ದಾರೆ ಎಂಬ ಮಾಹಿತಿ ಇದೆ.
- ಜೊತೆಗೆ ಮೊನ್ನೆ ಈ ಭಾಗದಲ್ಲೂ ಭಾರೀ ನೆರೆ ಬಂದು ಬೆಳೆ ಹಾನಿ ಉಂಟಾಗಿದೆ.
- ಆ ಕಾರಣ ಮೆಣಸಿಗೆ ಜಾಗತಿಕ ಬೇಡಿಕೆ ಹೆಚ್ಚಾಗಲಿದ್ದು, ಭಾರತದ ಮೆಣಸಿನ ಗುಣಮಟ್ಟಕ್ಕೆ ಇನ್ನು ಸ್ವಲ್ಪ ಸಮಯ ಉತ್ತಮ ಬೆಲೆ ಬರಲಿದೆ.
ಕೆಲವು ಮೂಲಗಳ ಪ್ರಕಾರ ಈ ವರ್ಷದ ಡಿಸೆಂಬರ್ ಒಳಗೆ ಮೆಣಸಿನ ಬೆಲೆ 600 ತಲುಪುವ ಸಾಧ್ಯತೆ ಇದೆಯಂತೆ. ಸಾಗರ, ಕೋಣಂದೂರು, ಸಿದ್ದಾಪುರ, ಮುಂತಾದ ಕಡೆಯ ವ್ಯಾಪಾರಿಗಳು ದಾಸ್ತಾನಿಗೆ ಮುಂದಾಗಿದ್ದು, ಇದು ಏರಿಕೆಯ ಮುನ್ಸೂಚನೆ ಎನ್ನಲಾಗುತ್ತಿದೆ.
ಚಾಲಿ ಮತ್ತು ಕೆಂಪಡಿಕೆ:
ಚಾಲಿ ದರ ಇನ್ನು ಒಂದು ವಾರದಲ್ಲಿ ಮತ್ತೆ 500 ರ ಗಡಿ ದಾಟಿ 51000 ರೂ. ತನಕ ಏರಬಹುದು ಎಂಬ ವದಂತಿಗಳಿವೆ. ಕೆಂಪಡಿಕೆಯೂ ಸಹ ನಿನ್ನೆ ತೀರ್ಥಹಳ್ಳಿಯಲ್ಲಿ ರಾಶಿ ದರ 46899 -49099 ಕ್ಕೆ ವ್ಯವಹಾರ ಆಗಿದೆ. ಚಿತ್ರದುರ್ಗ, ಹೊನ್ನಾಳಿ , ದಾವಣಗೆರೆಯಲ್ಲಿ ಹಸಿ ಅಡಿಕೆ ದರ ಇಂದು 6600 ಕ್ಕೆ ಖರೀದಿ ನಡೆಯುತ್ತಿದ್ದು, ದರ ಏರಿಕೆ ಆಗಬಹುದು.
ಕರಿಮೆಣಸು ಉಳ್ಳವರು ತಕ್ಷಣ ಮಾರಾಟ ಮಾಡಬೇಡಿ. ಸ್ವಲ್ಪ ಕಾಯಿರಿ. ಕಿಲೋ 500 ಸಧ್ಯವೇ ಆಗಲಿದ್ದು, ಆ ನಂತರ ಮಾರಾಟಕ್ಕೆ ನಿರ್ಧರಿಸಿ. ಚಾಲಿ ಬೆಳೆಗಾರರೂ ಸ್ವಲ್ಪ ಕಾಯುವುದು ಸೂಕ್ತ. ಕೆಂಪಡಿಕೆ ಬಹುಷಃ 50000 ದಾಟುವ ಸಾದ್ಯತೆ ಇದೆ. ಚೆನ್ನಾಗಿ ಬಿಸಿಲು ಬರುವ ತನಕ ದರ ಹೀಗೆ ಮುಂದುವರಿಯಲಿದೆ.