ಅರೆಮಲೆನಾಡು ಪ್ರದೇಶದಲ್ಲೂ ಏಲಕ್ಕಿ ಬೆಳೆಯಬಹುದು- ಇವರು ಬೆಳೆದು ತೋರಿಸಿದ್ದಾರೆ.

ಅರೆಮಲೆನಾಡಿನಲ್ಲಿ ಎಲಕ್ಕಿ

ಅರೆಮಲೆನಾಡು ಪ್ರದೇಶವಾದ ಹಾಸನ ಜಿಲ್ಲೆಯ ಅರಕಲಗೂಡುವಿನ ಲಕ್ಷ್ಮೀ  ಫಾರಂ ನ ಮಾಲಿಕ ರಂಗಸ್ವಾಮಿ ಎಂಬ ಪ್ರಗತಿಪರ ಕೃಷಿಕ ತಮ್ಮ ಪ್ರದೇಶದ ಹವಾಮಾನ ಸ್ಥಿತಿಯನ್ನು ಜಾಣ್ಮೆಯಿಂದ ಕೆಲವು  ಮಾರ್ಪಾಡುಗಳನ್ನು ಮಾಡುವ ಮೂಲಕ ಮಲೆನಾಡಿನ ಪ್ರದೇಶದಲ್ಲಿ   ಏಲಕ್ಕಿ  ಬೆಳೆದಿದ್ದಾರೆ. ಅಧಿಕ ಅದಾಯದ ಮಿಶ್ರ ಬೆಳೆ  ಬಯಸುವವರಿಗೆ ಇದು ಒಂದು ಮಾದರಿ ಬೆಳೆ ಪ್ರಾತ್ಯಕ್ಷಿಕೆ ತೋಟ.

ಮಿಶ್ರ ಬೆಳೆಯಾಗಿ ಏಲಕ್ಕಿ:

  • ಏಲಕ್ಕಿ ಎಲ್ಲಿ ಬೆಳೆಯುತ್ತದೆ. ತಕ್ಷಣ ಎಲ್ಲರ ಉತ್ತರ ಅದು ಮಲೆನಾಡಿನ ತಂಪು ಹವಾಗುಣದಲ್ಲಿ.
  • ಅದಕ್ಕೆ ಎತ್ತರ ತಗ್ಗಿನ ಕಣಿವೆ  ಪ್ರದೇಶದಲ್ಲಿ ಬೆಳೆಯುವ ಅತೀ ಸೂಕ್ಷ್ಮ ಹವಾಮಾನ ಬಯಸುವ ಬೆಳೆ ಎನ್ನುತ್ತಾರೆ.
  • ಆದರೆ ಅರೆ ಮಲೆನಾಡಾದ ಅರಕಲಗೂಡಿನ ಈ ಪ್ರದೇಶದಲ್ಲಿ ಶ್ರೀಯುತ  ರಂಗಸ್ವಾಮಿಯವರು ಸುಮಾರು 30 ಎಕ್ರೆ ವಿಸ್ತೀರ್ಣದಲ್ಲಿ ಏಲಕ್ಕಿ ಬೆಳೆದಿದ್ದಾರೆ.
  • ಅದಕ್ಕೆ ಈಗ 6  ವರ್ಷ ಕಳೆದಿದೆ.

ಇವರದ್ದು ಅಡಿಕೆ ತೋಟ. ಈ ತೋಟದಲ್ಲಿ ಬೇರೆ ಬೇರೆ ಮಿಶ್ರಬೆಳೆಗಳಿವೆ. ಹಿಂದೆ ವನಿಲ್ಲಾ ಬೆಳೆ ಉಛ್ರಾಯ ಸ್ಥಿತಿಯಲ್ಲಿದ್ದಾಗ ಅಷ್ಟೂ ತೋಟದಲ್ಲಿ ವನಿಲ್ಲಾ ಬೆಳೆಸಿದ್ದರಂತೆ. ಟನ್ ಗೂ ಹೆಚ್ಚು ಸಂಸ್ಕರಿತ ವನಿಲ್ಲಾ ಬೆಳೆಸಿದ್ದರಂತೆ. ವನಿಲ್ಲಾ ಹೇಗೆ ಬಂತೋ  ಹಾಗೇ ಹೋಯಿತು. ಆ ನಂತರ ತೋಟದ ಕಳೆ ಹೋಗಲು ಬೇರೆ ಮಿಶ್ರ ಬೆಳೆ ಬೇಕಿತ್ತು. ಅದಕ್ಕೆ  ಯಾವುದು ಆಗಬಹುದು ಎಂದು ಯೋಚಿಸಿ ಆಯ್ಕೆ  ಮಾಡಿದ್ದು ಏಲಕ್ಕಿಯನ್ನು.

ಅರೆಮಲೆನಾಡಿನ ಏಲಕ್ಕಿ ಬೆಳೆಗಾರ ರಂಗಸ್ವಾಮಿ
  • ಅಡಿಕೆ ತೋಟದಲ್ಲಿ ಅಲ್ಲಲ್ಲಿ ಒಂದಷ್ಟು ಕರಿಮೆಣಸೂ ಇದೆ.
  • ಕಡಿಮೆ ಏನೂ ಅಲ್ಲ. 10- 15 ಟನ್ ಮೆಣಸನ್ನೂ ಉತ್ಪಾದಿಸುತ್ತಾರೆ.
  • ಜಾಯೀ ಕಾಯೀಯೂ ಇದೆ. ಮುಖ್ಯ ಮಿಶ್ರ ಬೆಳೆ ಏಲಕ್ಕಿ.
  • ನಲ್ಲಾನಿ ಗೋಲ್ಡ್ ತಳಿಯ ಏಲಕ್ಕಿ ತಳಿಯನ್ನು ಕೇರಳದ ಇಡುಕ್ಕಿಯಿಂದ ತಂದು ಬೆಳೆಸಿದ್ದಾರೆ.

ಬೆಳೆ ಕ್ರಮ:

ತಾಪಮಾನ ನಿಯಂತ್ರಣಕ್ಕೆ ನೆರಳುಬಲೆ
ತಾಪಮಾನ ನಿಯಂತ್ರಣಕ್ಕೆ ನೆರಳುಬಲೆ
  • ಏಲಕ್ಕಿ ಬೆಳೆಗೆ ವಾತಾವರಣ ತಂಪು ಇರಬೇಕು ನಿಜ. ಬೇಸಿಗೆಯ ಗರಿಷ್ಟ ತಾಪಮಾನ ಸುಮಾರು 30-32  ಡಿಗ್ರಿಯಷ್ಟು.
  • ಅದಕ್ಕಿಂತ ಹೆಚ್ಚಾದಾಗ  ಗರಿಗಳಿಗೆ ಸೂರ್ಯ ಕಿರಣದ ಘಾಸಿ ಉಂಟಾಗಿ ಇಳುವರಿ ಕಡಿಮೆಯಾಗುತ್ತದೆ.
  • ಅದನ್ನು ಹೋಗಲಾಡಿಸಲು ಇವರು ಅಡಿಕೆ ಮರಗಳ ಕಾಂಡಕ್ಕೆ ಮೇಲ್ಭಾಗದಲ್ಲಿ ನೆರಳು ಬಲೆಯನ್ನು ಹಾಕಿ ತಂಪು ಮಾಡಿಕೊಂಡಿದ್ದಾರೆ.
  • ಅಡಿಕೆ ತೆಗೆಯುವಾಗ ಆ ನೆರಳು ಬಲೆಗಳು ಅಡಿಕೆ ಹೆಕ್ಕುವ ಕೆಲಸಕ್ಕೂ ಅನುಕೂಲಮಾಡಿಕೊಡುತ್ತವೆ.
  • ನೆಲಕ್ಕೆ ಬೀಳುವ ಅಡಿಕೆ ಕಡಿಮೆ. ಹೆಚ್ಚಿನವು ಆಲ್ಲಿ ಸಂಗ್ರಹವಾಗುತ್ತದೆ.
  • ಅದನ್ನು ಸಂಗ್ರಹಿಸುವುದು ಯದ್ವಾತದ್ವ ಬಿದ್ದದ್ದನ್ನು ಸಂಗ್ರಹಿಸುವುದಕ್ಕಿಂತ ಸುಲಭವಂತೆ.

ನೆರಳು ಬಲೆಗಳ ಅಡಿಯಲ್ಲಿ ಏಲಕ್ಕಿ ಗಿಡಗಳಿಗೆ ಅವಶ್ಯಕವಾದ ತಂಪು ವಾತಾವರಣವನ್ನು ಕಲ್ಪಿಸಿಕೊಡಲು ಸಹಾಯಕವಾಗಿದೆ.

  • ಬರೇ ಇಷ್ಟೇ ಅಲ್ಲ. ಅಡಿಕೆ ಮರ ಎಂದಾಕ್ಷಣ ಅದರಲ್ಲಿ ಗರಿಗಳು ಆಗಾಗ ಬೀಳುವುದು ದೊಡ್ಡ ಸಮಸ್ಯೆ.
  • ಇದರಿಂದ ಬುಡ ಭಾಗದಲ್ಲಿರುವ ಏಲಕ್ಕಿ ಸಸಿಗಳಿಗೆ ಹಾನಿಯಾಗುತ್ತದೆ.
  • ಅದರ ಹೊಡೆತವನ್ನು ತಪ್ಪಿಸಲೂ ಸಹ ಈ ನೆರಳು ಬಲೆ ಸಹಾಯಕ.

ಏಲಕ್ಕಿ ಬೆಳೆಯಲು ಬೇಕಾಗುವ ಸೂಕ್ಷ್ಮ ತಂಪು ವಾತಾವರಣವನ್ನು ಕಲ್ಪಿಸಿಕೊಡಲು ಬುಡ ಭಾಗದಲ್ಲಿ ಮೈಕ್ರೋ ಸ್ಪ್ರಿಂಕ್ಲರ್ ಅಳವಡಿಸಿಕೊಂಡಿದ್ದಾರೆ. ಇದರಲ್ಲಿ ಅವಶ್ಯಕತೆಗೆ ತಕ್ಕಂತೆ  ನೀರಾವರಿ ಮಾಡುತ್ತಿದ್ದರೆ ಆರ್ಧ್ರತೆ  ಜೊತೆಗೆ ಇಡೀ ಹೊಲ ತಂಪಾಗಿರುತ್ತದೆ. 

  • ಅರೆ ಮಲೆನಾಡಿನ ಈ ಭಾಗದಲ್ಲಿ ಬಿಸಿಲಿನ ಝಳ ಅಧಿಕ.
  • ಸುಮಾರು 38 ಡಿಗ್ರಿ ತನಕವೂ ತಾಪಮಾನ ಏರಿಕೆಯಾಗುತ್ತದೆ.
  • ಆದರೆ ಇವರ ತೋಟದಲ್ಲಿ ವರ್ಷ ಪೂರ್ತಿ ಒಂದೇ ರೀತಿಯ ಹವಾಮಾನ.
  • ಅದು 30-32  ಡಿಗ್ರಿ ಮೀರುವುದಿಲ್ಲ. ಏಲಕ್ಕಿ ಎಲೆ ಮುಟ್ಟಿದರೆ ತಣ್ಣಗೆ ಇರುತ್ತದೆ.
  • ಹೊಲದ ಸುತ್ತಲೂ ಮೌಲ್ಯ ಉಳ್ಳ  ಮರಮಟ್ಟು ನೆಟ್ಟಿದ್ದಾರೆ. ಇದು ನೆರಳಿಗೆ , ಗಾಳಿ ತಡೆಗೆ ಸಹಾಯಕ.
ಏಲಕ್ಕಿ ಇಳುವರಿ

ಏಲಕ್ಕಿ ಇಳುವರಿ:

  • ಏಲಕ್ಕಿ ಬೆಳೆಯುವ ಸಾಂಪ್ರದಾಯಿಕ ಪ್ರದೇಶಗಳಲ್ಲಿ ಜೂನ್ ತಿಂಗಳಿನಿಂದ ಪ್ರಾರಂಭವಾಗಿ ಗರಿಷ್ಟ ಎಂದರೆ ಸಪ್ಟೆಂಬರ್ ಅಕ್ಟೋಬರ್ ತನಕ ಏಲಕ್ಕಿಯ ಕೊಯಿಲು ಇರುತ್ತದೆ.
  • ಇಲ್ಲಿ ವರ್ಷದ 10 ತಿಂಗಳು ಕೊಯಿಲು ಇರುತ್ತದೆ.
  • ಪ್ರತೀ ಸಸಿಗೆ ಸರಾಸರಿ 6-7 ಕಿಲೋ ಇಳುವರಿ ದೊರೆಯುತ್ತದೆ.
  • ಅಗತ್ಯಕ್ಕನುಗುಣವಾಗಿ ಸಾವಯವ ಮತ್ತು ರಾಸಾಯನಿಕ ಗೊಬ್ಬರಗಳನ್ನು ಕೊಡುತ್ತಾರೆ.
  • ಇಲಿ, ಮತ್ತು ಶೂಟ್ ಬೋರರ್ ಬಿಟ್ಟರೆ ಬೇರೆ ಸಮಸ್ಯೆ ಇಲ್ಲ.

ಏಲಕ್ಕಿ ತೋಟದಲ್ಲಿ ಇಳುವರಿ ಹೆಚ್ಚಳಕ್ಕೆ ಏನೆಲ್ಲಾ ಬೇಕೋ ಅದನ್ನೆಲ್ಲಾ ಮಾಡಿದ್ದಾರೆ. ಜೇನು ಪೆಟ್ಟಿಗೆಗಳನ್ನು ಇಟ್ಟು ಪರಾಗಸ್ಪರ್ಷಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ.

  • ಏಲಕ್ಕಿ ಬೆಳೆಯಲ್ಲಿ ಇವರು ತೃಪ್ತರು. ಅವರ ನಿರೀಕ್ಷೆಯಂತೆ  ಇಲ್ಲಿ ಬೆಳೆ ಬಂದಿದೆ, ಇಳುವರಿಯೂ ಬಂದಿದೆ ಎನ್ನುತ್ತಾರೆ.

ತಂತ್ರಜ್ಞಾನ ಬದಲಾಗಿದೆ:

  • ಹಿಂದೆ ಕೆಲವು ಬೆಳೆಗಳು ಕೆಲವು ಪ್ರದೇಶಗಳಲ್ಲಿ ಮಾತ್ರ ಯಶಸ್ವಿಯಾಗಿ ಬೆಳೆಯಬಹುದು ಎಂದಿತ್ತು. ಕಾರಣ ಆಗ ಇದ್ದ ವ್ಯವಸ್ಥೆಗಳು ಅಷ್ಟೇ.
  • ಈಗ ತಂತ್ರಜ್ಞಾನ ಬದಲಾಗಿದೆ. ಉದಾಹರಣೆಗೆ ಹಾಸುರು ಮನೆ ಬಂದು ಎಲ್ಲಾ ಪ್ರದೇಶದಲ್ಲೂ ಯಾವ ಬೆಳೆಯನ್ನೂ ಬೆಳೆಯಬಹುದು.
  • ಇದೇ ರೀತಿ ಉಳಿದ ಕೆಲವು ಬೆಳೆಗಳೂ ಸಹ. ಹಿಂದೆ ನೀರಾವರಿ ವ್ಯವಸ್ಥೆಗೂ ಇತಿ ಮಿತಿಗಳಿತ್ತು. ಈಗ ಅದರಲ್ಲೂ ಭಾರೀ ಬದಲಾವಣೆ ಆಗಿದೆ.
  • ಸಸ್ಯ ಪೊಷಕಗಳಲ್ಲೂ ಬದಲಾವಣೆ ಆಗಿದೆ. ವೈವಿಧ್ಯಮಯ ನೀರಿನಲ್ಲಿ ಕರಗುವ ವಿಶೇಷ ಗೊಬ್ಬರಗಳು ಬಂದಿವೆ. ಸೂಕ್ಷ್ಮ ಪೊಷಕಾಂಶಗಳು ಬಂದಿವೆ.
  • ಬೆಳೆವಣಿಗೆ ಪ್ರಚೋದಕಗಳು, ಹೀಗೆ ಹಲವು ಬೆಳೆ ಪೊಷಕಗಳು ಲಭ್ಯವಿವೆ.
  • ವಾತಾವರಣ ಬದಲಾವಣೆ ಮಾಡುವುದಕ್ಕೆ ಬೇಕಾದ ವ್ಯವಸ್ಥೆಗಳೂ ಲಭ್ಯವಿದೆ.
  • ಇದು  ಯಾವುದೇ ಬೆಳೆಯನ್ನೂ  ಎಲ್ಲೂ ಬೆಳೆಯಬಹುದಾದ ಅವಕಾಶವನ್ನು ತಂದು ಕೊಟ್ಟಿದೆ.

ಅನ್ವೇಶಣಾ ಮನೋಭಾವದ ಕೃಷಿಕರಿಂದ ಸಮುದಾಯಕ್ಕೆ ಹೊಸ ಪ್ರೇರಣೆ ದೊರೆಯಬಲ್ಲುದು. ಈ ನಿಟ್ಟಿನಲ್ಲಿ  ರಂಗಸ್ವಾಮಿಯವರ  ಸಾಧನೆ ಎಲ್ಲರಿಗೂ ಮಾದರಿ.

Leave a Reply

Your email address will not be published. Required fields are marked *

error: Content is protected !!