ಜೇನು ನೊಣಗಳು ಇನ್ನು ಮನೆಯಲ್ಲೂ ವಾಸಮಾಡಬಹುದು ಎಚ್ಚರ!

ಜೇನು ನೊಣಗಳು ಇನ್ನು ಮನೆಯಲ್ಲೂ ವಾಸಮಾಡಬಹುದು ಎಚ್ಚರ!

ಜೇನು ನೊಣಗಳಿಗೆ ಈಗ ವಾಸಕ್ಕೆ ಅವಕಾಶವೇ ಇಲ್ಲದೆ ನಮ್ಮ ಮನೆಯ ಒಳಗೆ ಬಂದು ಕುಳಿತರೂ ಅಚ್ಚರಿ ಇಲ್ಲ ಸ್ವಚ್ಚಂದವಾಗಿ ಅವುಗಳಷ್ಟಕ್ಕೆ ಬದುಕುತ್ತಿದ್ದ ಜೇನು ನೊಣಗಳಿಗೆ ಈಗ ಇಂಥಹ ದುರ್ಗತಿ ಬಂದಿದೆ. ಸಿಕ್ಕ ಸಿಕ್ಕಲ್ಲಿ ವಾಸಸ್ಥಳ ಅರಸುವಂತಾಗಿದೆ. ನೀವು ನಂಬುತ್ತೀರೋ ಬಿಡುತ್ತೀರೋ. ಹುತ್ತ, ಮರದ ಪೊಟರೆಯಲ್ಲಿ  ಮಾತ್ರ ವಾಸಮಾಡುವ ಪ್ರವೃತ್ತಿಯ ಜೇನು ನೊಣಗಳು ಮುಂದೆ, ತೆರೆದ ವಾತಾವರಣದಲ್ಲಿ ಬದುಕಬೇಕಾಗಿ ಬಂದರೂ ಅಚ್ಚರಿ ಇಲ್ಲ.  ನಮ್ಮ ದೇಶದ ಸ್ಥಳೀಯ ತೊಡುವೆ ಜೇನು (Apis Indiaca) ನೊಣಗಳು, ಮುಜಂಟಿ ನೊಣಗಳು ಈಗ ತಮ್ಮ ಮೂಲ ವಾಸ ಕ್ರಮವನ್ನು ಅನಿವಾರ್ಯವಾಗಿ ಬದಲಾಯಿಸುತ್ತಿವೆ. ಇದು ನಮ್ಮ ಪರಿಸರ ಯಾವ ಮಟ್ಟಕ್ಕೆ ಹೋಗಿದೆ ಎಂಬುದನ್ನು ತಿಳಿಸುತ್ತದೆ.

ಶಂಕರ ಎಂಬ ನಮ್ಮಲ್ಲಿಗೆ ಆಗಾಗ ಬರುತ್ತಿದ್ದ ವ್ಯಕ್ತಿಯೊಬ್ಬ ಕಳೆದ ವರ್ಷ ಬಂದು ಹೇಳಿದ. ನಮ್ಮ ಮನೆಯ ಮಾಡಿನಲ್ಲಿ ಒಂದು ಜೇನು ಕುಟುಂಬ ಇದೆ. ಮೂಲೆ ಪಕ್ಕಾಕಿನ ಬದಿಯಲ್ಲಿ ವಾಸಿಸಿದೆ. ತಟ್ಟಿ (ಎರಿ)ಇದೆ. ಪೆಟ್ಟಿಗೆಗೆ ಹಾಕುವುದಿದ್ದರೆ  ಹಾಕಿ ಎಂದ. ಅದೆಲ್ಲಾ ಪೆಟ್ಟಿಗೆಯಲ್ಲಿ ಕೂಡಿಸುವ ನೊಣ ಅಲ್ಲ. ಅದು ಕೋಲ್ಜೇನು ಇರಬೇಕು. ಸರಿ ನೋಡಿದ್ದಿಯಾ? ಒಂದು ಎರಿ ಮಾತ್ರ ಇದೆಯಲ್ಲವೇ? ನೊಣ ಸಣ್ಣದಿಲ್ಲವೇ ಎಂದು ಪ್ರಶ್ಣೆ ಹಾಕಿದೆ. ಇದಕ್ಕೆ ತಟ್ಟಿ ನಾಲ್ಕು ಇದೆ.  ಒಂದು ಸ್ವಲ್ಪ ದೊಡ್ಡದು. ಉಳಿದವು ಚಿಕ್ಕದು. ಹೆಚ್ಚು ಸಮಯ ಆಗಲಿಲ್ಲ.  ಕಳೆದ ವಾರ  ನಾನು ಮನೆಗೆ ಬಂದಿದ್ದಾಗ ಇರಲಿಲ್ಲ ಎಂದ. ಅವನ ಸಮಾಧಾನಕ್ಕೆ ಫರ್ಲಾಂಗು ದೂರ ಇರುವ ಮನೆಗೆ ಹೋಗಿ ನೋಡಿದರೆ  ಅದು ತೊಡುವೆ ಜೇನೇ ಆಗಿತ್ತು.  ಹಾಗೆ ತೊಡುವೆ ಜೇನು ವಾಸ್ತವ್ಯ ಇಲ್ಲದ ಮನೆಯ ಮಾಡಿನ ಮೂಲೆಯಲ್ಲಿ ವಾಸ್ತವ್ಯ ಹೂಡುವುದನ್ನು ಈ ಹಿಂದೆ (2000 ನೇ ಇಸವಿ) ಬಂಟ್ವಾಳದ ನರಿಕೊಂಬು ಎಂಬಲ್ಲಿ ಒಂದು ಮನೆಯಲ್ಲಿ ನೋಡಿದ್ದೆ.  ನಾನು ಜೇನು ಹಿಡಿಯುವ ವೃತ್ತಿ ಮಾಡುತ್ತಿದ್ದೆನಾದರೂ ಈಗ ಅದರ ಗೋಜಿಗೆ ಹೋಗುವುದನ್ನು ಬಿಟ್ಟಿದ್ದೇನೆ.  ಜೇನು ಮನುಷ್ಯರಿಗೆ ಅನಿವಾರ್ಯವಲ್ಲ. ಒಂದು ವೇಳೆ ಬೇಕೆಂದಾದರೆ  ನಮ್ಮ ತೋಟದಲ್ಲಿ ಅಲ್ಲಲ್ಲಿ 10 ಕ್ಕೂ ಹೆಚ್ಚು ಪಟ್ಟಿಗೆಗಳನ್ನು ಇಟ್ಟಿದ್ದೇವೆ. ಈ ಪಟ್ಟಿಗೆಗಳಲ್ಲಿ ವರ್ಷಕ್ಕೊಮ್ಮೆ ಬಹುತೇಕ ಎಲ್ಲದರಲ್ಲೂ ಜೇನು ಕುಟುಂಬ ಬರುತ್ತದೆ. ಕೆಲವು  ಹೆಚ್ಚು ಸಮಯ ಇರುತ್ತವೆ. ಮತ್ತೆ ಕೆಲವು ಸ್ವಲ್ಪ ಸಮಯದಲ್ಲಿ ಹೋಗುತ್ತವೆ. ಅದರಲ್ಲಿ ಜೇನು ಎರಿಗಳನ್ನು ಮಾತ್ರ  ತೆಗೆದು ಹಿಂಡಿ ಜೇನನ್ನು ಬೇಕಾದಾಗ ಪಡೆಯುತ್ತೇನೆ. ನಾನು ಈಗ ಜೇನು  ಹಿಡಿಯುವುದಿಲ್ಲ. ಅದು ಅದರಷ್ಟಕ್ಕೆ ಹೋಗಬಹುದು ಎಂದೆ.

ವಾಸಿಸಲು ಸೂಕ್ತ ಸ್ಥಳವಿದೆ ಎಂದು ಅರಸುತ್ತಾ
ವಾಸ ಸ್ಥಳ ಹುಡುಕುವ ಮುಂಚೆ ನೊಣಗಳ ಗುಂಪು ಹೀಗೆ ವಿಶ್ರಮಿಸುವಂತದ್ದು ಈಗ ಮಾಮೂಲು.

ಜೇನು ಕುಟುಂಬಗಳಿಗೆ ಆಶ್ರಯ ಇಲ್ಲ:

  • ಜೇನು ನೊಣಗಳಿಗೂ ಪ್ರಕೃತಿಗೂ ಅವಿನಾಭಾವ ಸಂಬಂಧ.
  • ಪ್ರಕೃತಿಯ ಮರಮಟ್ಟುಗಳು, ಹಳೆಯ ಹುತ್ತಗಳು, ಪೊಟರೆಗಳು, ಬಿರುಕುಗಳಲ್ಲಿನ ಅವಕಾಶಗಳು (Cavity) ಅವುಗಳ ಅಸ್ತಿತ್ವಕ್ಕೆ ಅನಿವಾರ್ಯ.
  • ಹಾಗೆಯೇ ಮರಮಟ್ಟುಗಳ ಪುಷ್ಪ, ಮೇಣ, ನೀರು ಇವೆಲ್ಲಾ ಅವುಗಳ ಆಹಾರ.
  • ಇವುಗಳ ನೆರವು ಇಲ್ಲದೆ ಯಾವುದೇ ಪ್ರಭೇಧದ ಜೇನು ನೊಣಗಳೂ ಬದುಕಲಾರವು.
  • ಕೆಲವೊಂದಷ್ಟು ಸಮಯ ತಮ್ಮ ಅಸ್ತಿತ್ವಕ್ಕಾಗಿ ಹೋರಾಟ ನಡೆಸಿ ಬದುಕಬಹುದಾದರೂ ಧೀರ್ಘಾವಧಿ ತನಕ ಇದು ಮುಂದುವರಿಯುವುದಿಲ್ಲ.
  • ಈಗ ನಮ್ಮಲ್ಲಿ ಅದರಲ್ಲೂ ವಿಶೇಷವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ಜೇನು ನೊಣಗಳಿಗೆ ಆಶ್ರಯ ಕಡಿಮೆಯಾಗುತ್ತಿದೆ.
  • ಅದರೊಂದಿಗೆ ಅವುಗಳಿಗೆ ಆಹಾರವೂ ಕ್ಷೀಣಿಸುತ್ತಿದೆ.
  • ಎಲ್ಲೆಂದರಲ್ಲಿ ಕೃಷಿ ವಿಸ್ತರಣೆ, ಭೂ ಅತಿಕ್ರಮಗಳ  ಕಾರಣದಿಂದ ಮರಮಟ್ಟುಗಳು ನಾಶವಾಗಿ  ಬೆಳೆಗಳು  ಕಾಣಿಸುತ್ತಿವೆ.
  • ಇವುಗಳು ಜೇನು ನೊಣಗಳಿಗೆ  ಸ್ವಲ್ಪ ಮಟ್ಟಿಗೆ ಆಹಾರ ಕೊಡಬಹುದಾದರೂ  ಬದುಕಲು ಆಶ್ರಯ ನೀಡಲಾರವು.  
  • ಎಲ್ಲಿ ವಾಸಿಸಲು ಸೂಕ್ತ ಸ್ಥಳವಿದೆ ಎಂದು ಅರಸುತ್ತಾ ಸಿಕ್ಕ ಸಿಕ್ಕ ಕಡೆ ನೆಲೆಯೂರಿ, ಅಲ್ಲಿ ತೊಂದರೆಯಾದಾಗ ಬೇರೆಡೆಗೆ ಹಾರಿ ಬದುಕಿಗಾಗಿ ಹೋರಾಡುವ ಸ್ಥಿತಿ ಬಂದೊದಗಿದೆ.
  • ಪ್ರಾಕೃತಿಕ ಆಶ್ರಯಗಳು ಮಾತ್ರ ಅವುಗಳ ಸ್ವಚ್ಚಂದ ಜೀವನಕ್ಕೆ ಸಹಕಾರಿಯಾಗುತ್ತದೆ.

 ಜೇನು ನೊಣ ಮಾತ್ರವಲ್ಲ:

  • ಪ್ರಕೃತಿಯಲ್ಲಿ  ಹೂ ಬಿಡುವ ಸಸ್ಯಗಳು ಪರಾಗಸ್ಪರ್ಶಕ್ಕೆ ಒಳಗಾಗಿ ಕಾಯಿ ಕಚ್ಚಿ, ಬೀಜೋತ್ಪಾದನೆ ನಡೆಯಲು  ಬೇರೆ ಬೇರೆ  ಪರಾಗದಾನಿಗಳ ಸಹಕಾರ  ಅಗತ್ಯವಾಗಿ ಬೇಕು.
  • ಮಿಸ್ರಿ (ಮೊಜಂಟಿ)ಎಂಬ ಸಣ್ಣ ಪ್ರಕಾರದ ಜೇನು ನೊಣ ಹಿಂದೆ ಮರದ ಪೊಟರೆಗಳಲ್ಲೇ  ಕಾಣಸಿಗುತ್ತಿತ್ತು.
  • ಅದರ ಜೇನು ತೆಗೆಯುವುದೆಂದರೆ ಹರ ಸಾಹಸ. ಈಗ ಹಾಗಿಲ್ಲ. 
  • ಮನೆಯಲ್ಲಿ ಎಲ್ಲಿಯಾದರೂ ಪಾತ್ರೆ ಕವುಚಿ ಹಾಕಿದರೂ ಅದರೊಳಗೆ ಬಂದು ಕೂರುತ್ತದೆ.
  • ಖಾಲಿ ಜೇನು ಪೆಟ್ಟಿಗೆ ಇಟ್ಟಿದ್ದರೆ ಅದರಲ್ಲಿ ನಿರಾಯಾಸವಾಗಿ ಬಂದು ವಾಸವಾಗುತ್ತದೆ.    
  •  ಪರಾಗದಾನಿಗಳಿಗೆ ಆಶ್ರಯ ಇಲ್ಲದಾಗಿದೆ. ಅವು ಇಲ್ಲದ ಪ್ರಕೃತಿ ಬಂಜೆ ಎಂದರೂ ತಪ್ಪಾಗಲಾರದು.
  • ಜೇನು ನೊಣಗಳು ಮಾತ್ರ ಪರಾಗಸ್ಪರ್ಶ ಮಾಡುವುದಲ್ಲ. ಅಸಂಖ್ಯಾತ ವಿಧದ ಹಾರುವ ದುಂಬಿಗಳು, ಇರುವೆಗಳು ಈ ಕೆಲಸದಲ್ಲಿ ಭಾಗಿಯಾಗುತ್ತವೆ.
  • ಇವೆಲ್ಲವೂ ನೆಲದಲ್ಲಿ, ಮರದ ಪೊಟರೆಗಳಲ್ಲಿ ವಾಸಿಸುವ  ಜೀವಿಗಳಾಗಿದ್ದು, ಅವುಗಳಿಗೂ  ಆಶ್ರಯ ತಾಣಗಳೂ ಇಲ್ಲದಾಗುತ್ತಿದೆ.
  • ಒಟ್ಟಾರೆಯಾಗಿ ಪರಾಗದಾನಿಗಳಿಗೆ ಬದುಕಲು ಆಶ್ರಯ ಇಲ್ಲದೆ ಸಂಖ್ಯೆ ಕ್ಷೀಣಿಸಲಾರಂಭಿಸಿದೆ.
  • ಕೆಲವೊಂದು ಜಾತಿಯ ಇರುವೆಗಳು, ದುಂಬಿಗಳು ಅವನತಿಯಾಗಲಾರಂಭಿಸಿದೆ.
  • ಇದರಿಂದಾಗಿ ಅಸಮತೋಲನ ಉಂಟಾಗಿ ಕೆಲವು ಹಾನಿಕಾರಕ ಕೀಟಗಳ ಸಂತತಿ ಹೆಚ್ಚಾಗುತ್ತಿದೆ.
  • ಅವುಗಳಿಂದ ಬೆಳೆಗಳ ಇಳುವರಿ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಲಾರಂಭಿದೆ.
  • ಇದು ಎಲ್ಲಿಯ ತನಕ ತಲುಪುವುದೋ ತಿಳಿಯದು. 

ವ್ಯವಸ್ಥೆಯ  ವೈಪಲ್ಯ ಇದಕ್ಕೆ ಕಾರಣ:

  • ಪ್ರಕೃತಿ ಮತ್ತು ಜೀವ ವೈವಿಧ್ಯಗಳ ನಂಟಿನ ಬಗ್ಗೆ ಸಾಮಾನ್ಯ ಜನರಿಗೆ ತಿಳುವಳಿಕೆ ಕಡಿಮೆ ಇರಬಹುದು. 
  • ಆದರೆ  ಆ ಬಗ್ಗೆ ಶಿಕ್ಷಣ ಪಡೆದವರು ಇದನ್ನು ಜನತೆಗೆ ತಿಳಿಸಬೇಕು.
  • ಸ್ಥಳೀಯಾಡಳಿತ ವ್ಯವಸ್ಥೆಯಾದ ಪಂಚಾಯತುಗಳು ಅಲ್ಲಿನ ಅಭಿವೃದ್ದಿ ಅಧಿಕಾರಿಗಳು, ಸದಸ್ಯರು ಈ ಕೆಲಸವನ್ನು ಮಾಡುವುದು ಸುಲಭ.
  • ಪಂಚಾಯತುಗಳ ಅನುಮತಿ ರಹಿತವಾಗಿ ಮನೆ ಕಟ್ಟುವುದು, ಕೃಷಿ ವಿಸ್ತರಣೆ ಮುಂತಾದ ಕೆಲಸ ನಡೆಸುವುದು ಅಸಾಧ್ಯವಾದ ಕಾರಣ ಅವರಿಗೆ ಹಿಡಿತ ಇರುತ್ತದೆ.
  • ಪರಿಸರ ಬಗ್ಗೆ ಕಳಕಳಿ ಉಳ್ಳವರು ಎಷ್ಟು ಬೊಬ್ಬಿಟ್ಟರೂ ಅವರ ಕೂಗಿನ ಬಲ ಸಾಲದು.
  • ಇವೆಲ್ಲವೂ ಕಾನೂನಾತ್ಮಕವಾಗಿ  ನಡೆದರೆ ಹೆಚ್ಚು ಫಲ.

ಸಾರ್ವಜನಿಕ ಸ್ಥಳಗಳ ಹಿಡಿತ ಸರಕಾರಕ್ಕೆ ಇರಬೇಕು:

  • ಅವರವರ ಸ್ವಂತ ಸ್ಥಳದಲ್ಲಿ ಇರುವ ಮರಮಟ್ಟು ಕಡಿಯುವುದು, ನೆಲ ಸಮತಟ್ಟು ಮಾಡುವ ಬಗ್ಗೆ ಆಕ್ಷೇಪಣೆ ಮಾಡುವಂತಿಲ್ಲ.
  • ಆದರೆ ಸಾರ್ವಜನಿಕ ಸ್ಥಳಗಳಲ್ಲಿ ಈ ಕೆಲಸಗಳು ಆಗದಂತೆ ನೋಡಿಕೊಳ್ಳಬೇಕು.
  • ಹಿಂದೆ ಗ್ರಾಮದ ಕರಣಿಕರು  ಮರ ಕಡಿದರೆ, ಮಣ್ಣು ಅಗೆದರೆ, ಒತ್ತುವರಿ ಮಾಡಿದರೆ ತಕ್ಷಣ ಬಂದು ಅದನ್ನು ತಡೆಯುತ್ತಿದ್ದರು.
  • ಈಗ ಅವರು ಕಚೇರಿ ಕೆಲಸ ಬಿಟ್ಟು ಬೇರೆ ಕೆಲಸದ ಉಸಾಬರಿಗೇ ಬರುವುದಿಲ್ಲ.
  • ಹಾಗಾಗಿ ಈಗ ಅತಿಕ್ರಮಣಕ್ಕೆ ಲಂಗು ಲಗಾಮು ಇಲ್ಲದಂತಾಗಿದೆ.
  • ಸರಕಾರ ತಮ್ಮ ಸ್ವಾದೀನದ ಭೂಮಿಯನ್ನು ಒತ್ತುವರಿಗೆ ಅವಕಾಶ ಕೊಡದೆ ಬಂದೋಬಸ್ತು ಮಾಡುವುದರಿಂದ  ಎಲ್ಲವೂ ಸರಿಯಾಗುತ್ತದೆ.

ಯಾಂತ್ರಿಕ ಕೆಲಸಗಳಿಗೆ ಕಡಿವಾಣ ಇರಬೇಕು:

  • ಯಾಂತ್ರೀಕರಣ ಅಗತ್ಯವಾಗಿ ಬೇಕು. ಇದರಿಂದಾಗಿಯೇ ನಾವು ಇಂದು ಬದುಕುತ್ತಿದ್ದೇವೆ ಎಂದರೂ ತಪ್ಪಾಗಲಾರದು.
  • ಮಾನವ ಶ್ರಮದಿಂದ ಆಗದ ಕೆಲಸಗಳು ಕಡಿಮೆ ಸಮಯದಲ್ಲಿ ಯಂತ್ರಗಳಿಂದ ಸಾಧ್ಯವಾಗಿದೆ.
  • ಈ ಯಂತ್ರಗಳ ಬಳಕೆಯಲ್ಲಿ ಸ್ವೇಚ್ಚಾಚಾರ ಇರಬಾರದು.  ಇವುಗಳಿಂದ ಎನನ್ನೂ ಮಾಡಬಹುದು ಎಂದು ಅದನ್ನೆಲ್ಲಾ ಮಾಡುವುದಲ್ಲ.
  • ಉದಾಹರಣೆಗೆ ಮಣ್ಣು ಅಗೆಯುವ ಯಂತ್ರಗಳು (excavetors).
  • ಇವುಗಳ ಮೂಲಕ ಅಗೆತವನ್ನು ಮಾಡಬೇಕಾದರೆ ಹೀಗೆಯೇ ಮಾಡಬೇಕು  ಎಂಬ ನಿಬಂಧನೆಗಳು ಇರಬೇಕು.
  • ಈ ವರ್ಷ ಅಲ್ಲಲ್ಲಿ ಭೂ ಕುಸಿತ  ಆದ ಘಟನಾವಳಿಯನ್ನು ನಾವು ನೋಡುತ್ತಿದ್ದೇವೆ.
  • ಇದು ಯಾಕೆ ಆಯಿತು  ಎಂದು  ಹುಡುಕುತ್ತಾ ಹೋದರೆ ಅದರಲ್ಲಿ ಅವೈ ಜ್ಝಾನಿಕ  ಭೂ ಅಗೆತವೂ ಒಂದು ಕಾರಣ ಎನ್ನುತ್ತಾರೆ.
  • ಅದಕ್ಕೂ ಇದಕ್ಕೂ ತಾಳೆ ಮಾಡುವುದಲ್ಲ. ಜೀವಿಪರಿಸ್ಥಿತಿ ಬಗ್ಗೆ ಹೇಳುವಾಗ ಭೂ ಅಗೆತ ಮಾಡುವ ಯಂತ್ರಗಳ ಪಾತ್ರ ದೊಡ್ಡದಿರುತ್ತದೆ.
  • ಇವುಗಳು ನೆಲವನ್ನು  ಮರ ಮಟ್ಟುಗಳನ್ನು  ಮುಲಾಜಿಲ್ಲದೆ ಬುಡಮೇಲು ಮಾಡುವಾಗ ಅಲ್ಲಿನ  ಜೀವ ವೈವಿಧ್ಯಗಳು  ಅವನತಿಯಾಗಿವೆ.
  • ಭೂ ಅಗೆತದ ಯಂತ್ರಗಳಿಂದ ಪರಿಸರಕ್ಕೆ ಹನಿಯಾಗದ ರೀತಿಯಲ್ಲಿ ಕೆಲಸ ಮಾಡಿಸಿಕೊಳ್ಳಬಹುದು.
  • ವಿದೇಶಗಳಲ್ಲಿ ಈ ನಿಯಮವನ್ನು ಪಾಲನೆ ಮಾಡಲಾಗುತ್ತದೆ.  ಇದನ್ನು ನಮ್ಮಲ್ಲೂ  ಪಾಲಿಸಬೇಕು.

ಅದಲ್ಲದೆ  ಮರಕತ್ತರಿಸಲು  ಬಂದ ಯಾಂತ್ರಿಕ ಗರಗಸಗಳು. ಇವು ಎಷ್ಟು ಉಪಯುಕ್ತವೋ ಅಷ್ಟೇ ಅನಾಹುತಕಾರಿ ಸಹ. ಹಿಂದೆ ಇಂತಹ ಯಂತ್ರ ಗರಗಸಗಳು ಇಲ್ಲದೆ ಇದ್ದಾಗ ಮರಮಟ್ಟುಗಳ ಬಲಿಗೆ ಮಿತಿ ಇತ್ತು.ಈಗ ಅದಿಲ್ಲ. ಯಾವ ಮರವಾದರೂ  ಈ ಗರಗಸ ಬಗ್ಗಿಸುತ್ತದೆ. ಹಾಗಾಗಿ ಬೇಕಾದದ್ದು ಬೇಡದ್ದು ಎಲ್ಲವೂ ಬಲಿಯಾಗುತ್ತದೆ. ಯಾಂತ್ರಿಕ ಗರಗಸಗಳು ಇರಲಿ. ಆದರೆ ಅವುಗಳ ಬಳಕೆಗೆ ಅಂಕುಶ ಇರಲಿ. ಇಂತಹ ನೀತಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಅಳಿದುಳಿದ ಮರಮಟ್ಟುಗಳಾದರೂ ಉಳಿಯಬಹುದು.

ಪ್ರಕೃತಿಯಲ್ಲಿ ಬರೇ ಮಾನವ ಮಾತ್ರ ಬದುಕುವುದಲ್ಲ. ಮಾನವನ ಸುಂದರ ಬದುಕಿಗೆ ಉಳಿದ ಜೀವ ವೈವಿಧ್ಯಗಳೂ ಬೇಕು.  ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಪ್ರಕೃತಿಯ ಮುನಿಸನ್ನು ಮಾನವನಿಂದ ತಡೆಯಲು ಸಾಧ್ಯವಿಲ್ಲ. ಸಮತೋಲನವೊಂದೇ ಇದನ್ನು  ಸುಸ್ಥಿತಿಯಲ್ಲಿ ಇಡಲು ಸಾಧ್ಯ.

Leave a Reply

Your email address will not be published. Required fields are marked *

error: Content is protected !!