ಸಿರಿ ಧಾನ್ಯಗಳ (Minor millets) ಸಾಲಿನಲ್ಲಿ ಪ್ರಮುಖವಾದ ನವಣೆಗೆ ಬೇಡಿಕೆ ಚೆನ್ನಾಗಿದ್ದು, ಕಡಿಮೆ ಇಳುವರಿ ಕೊಡಬಲ್ಲ ಖುಷ್ಕಿ ಭತ್ತದ ಹೊಲದಲ್ಲಿ ಇದನ್ನು ಬೆಳೆದರೆ ಲಾಭವಿದೆ.
“ ನವಣೆಯನ್ನು ತಿನ್ನುವನು ಹವಣಾಗಿಹನು ಸರ್ವಜ್ಞ” ನವಣೆ ಆರೋಗ್ಯ ಹಾಗೂ ದೇಹ ಸೌಂದರ್ಯ ಕಾಪಾಡುವುದಕ್ಕೆ ಒಳ್ಳೆಯದು ಎಂದು ಸರ್ವಜ್ಞ ತಿಳಿಸಿದ್ದಾನೆ. ಒಂದು ಕಾಲದಲ್ಲಿ “ಬಂಗಾರಕ್ಕಿ ಅನ್ನ” ಎಂದೇ ಪ್ರಸಿದ್ದಿಯಾಗಿತ್ತು ನವಣೆ ಅಕ್ಕಿ. ಹಿಂದಿನವರಿಗೆ ನವಣೆಯ ಬಿಸಿ ಅನ್ನಕ್ಕೆ ತುಪ್ಪ ನಮ್ಮ ರೈತರ ದಿನನಿತ್ಯದ ಆಹಾರವಾಗಿತ್ತು. ಈಗ ಅದು ಕಣ್ಮರೆಯಾಗಿದೆ. ಇಂದು ನಮ್ಮ ಮುಂದೆ ಇದೆ. ಸಕ್ಕರೆ ಕಾಯಿಲೆ, ಹೃದಯ ರೋಗಿಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಇದಕ್ಕೆಲ್ಲಾ ಮೂಲ ಕಾರಣ ನಮ್ಮ ಸಂಪ್ರದಾಯಿಕ ಆಹಾರಾಭ್ಯಾಸದ ಬದಲಾವಣೆ.
- ನಾವು ನಮ್ಮ ಮಕ್ಕಳು ಆರೋಗ್ಯಪೂರ್ಣ ಕಿರುಧಾನ್ಯಗಳನ್ನು ಬಳಸಬೇಕು.
- ಇಂತಹ ಕಿರು ಧಾನ್ಯಗಳು ಆರೋಗ್ಯವಂತ ಸಮಾಜವನ್ನು ಸೃಷ್ಟಿಸಲು ನೆರವಾಗುವುದು.
ನವಣೆಯಲ್ಲಿ ಏನಿದೆ:
- ನವಣೆಯು (Foxtail millet) ಸಸಾರಜನಕ ಮತ್ತು ಎಲ್ಲಾ ಅವಶ್ಯಕ ಅಮ್ಯನೋ ಆಮ್ಲಗಳನ್ನು ಒಳಗೊಂಡಿದೆ.
- ದೇಹದ ಬೆಳವಣಿಗೆಗೆ ಮತ್ತು ನಿರ್ವಹಣೆಗೆ ಸಹಕಾರಿಯಾದ ಆಹಾರ.
- ಅಂದು ಸರ್ವಜ್ಞ ಹೇಳಿದ ಮಾತನ್ನು ಇಂದು ವಿಜ್ಞಾನವೂ ಒಪ್ಪಿಕೊಂಡಿದೆ.
- ನವಣೆಯಲ್ಲಿನ ಪಿಷ್ಟ ಪದಾರ್ಥ ನಿಧಾನವಾಗಿ ಜೀರ್ಣವಾಗುವುದರಿಂದ ಸಕ್ಕರೆ ಕಾಯಿಲೆಯಿಂದ ಬಳಲುವವರಿಗೆ ಸೂಕ್ತ ಆಹಾರ.
- ಸಕ್ಕರೆ ಕಾಯಿಲೆ ಕೌಟಂಬಿಕ ಹಿನ್ನಲೆಯುಳ್ಳವರು ಇದನ್ನು ಬಳಸುವುದರಿಂದ ಕಾಯಿಲೆ ಬರದಂತೆ ತಡೆಯುವಲ್ಲಿ ಸಹಕಾರಿಯಾಗಿದೆ.
- ಹೃದಯರೋಗ, ಕ್ಯಾನ್ಸರ್, ಮೂಲವ್ಯಾಧಿ, ಮಲಬದ್ಧತೆ ಮೊದಲಾದ ರೋಗಗಳ ವಿರುಧ್ಧ ರಕ್ಷಣೆ ನೀಡುವ ನವಣೆ ನಿತ್ಯ ಆಹಾರವಾಗಬೇಕು.
- ನವಣಕ್ಕಿಯಿಂದ ಅನ್ನ ಗಂಜಿ, ಮುದ್ದೆ, ತಾಲಿಪಟ್ಟು, ಇಡ್ಲಿ, ದೋಸೆ ಮಾಡಬಹುದು.
- ಮಕರ ಸಂಕ್ರಾತಿಯಂದು ಮಾಡುವ ಹುರಕ್ಕಿ ಹೋಳಿಗೆ ಹಾಗೂ ನಾಗರಪಂಚಮಿಯಂದು ನಾಗದೇವತೆಗೆ ನೈವದ್ಯಕ್ಕೆಂದು ಮಾಡುವ ತಂಬಿಟ್ಟು ನವಣಕ್ಕಿಯಿಂದ ತಯಾರಿಸುವುದು ಸಾಂಪ್ರದಾಯ.
ಪ್ರತಿ 100 ಗ್ರಾಂ. ನವಣೆಯಲ್ಲಿ ಈ ಎಲ್ಲಾ ದೇಹ ಪೋಷಕಗಳು ಇವೆ. ಇವುಗಳಲ್ಲಿ ಪೋಷಕಾಂಶಗಳು, ಖನಿಜ ಲವಣಗಳು ಮತ್ತು ಅಮೈನೋ ಆಮ್ಲಗಳು ಸೇರಿವೆ.
- ಸಸಾರಜನಕ –12.30 ಗ್ರಾಂ.
- ಸುಣ್ಣ – 0.03 ಗ್ರಾಂ.
- ಐಸೋಲ್ಯುಸಿನ್ -7.60
- ಪಿಷ್ಟ ಪದಾರ್ಥ–63.70 ಗ್ರಾಂ.
- ರಂಜಕ- 0.29 ಗ್ರಾಂ.
- ಲ್ಯಸಿನ್ -16.20
- ನಾರಿನಾಂಶ- 8.00 ಗ್ರಾಂ.
- ಕಬ್ಬಿಣ –0.63 ಗ್ರಾಂ.
- ಮಿಥಿಯೋನಿನ್ -2.80
- ಖನಿಜಾಂಶ – 3.30 ಗ್ರಾಂ.
- ಖನಿಜಾಂಶ-0.33 ಗ್ರಾಂ
- ವ್ಯಾಲಿನ್ -6.90
ನವಣೆಯನ್ನು ಹೇಗೆ ಬೆಳೆಯುವುದು?
- ನವಣೆ ಒಂದು ಪ್ರಮುಖ ಕಿರುಧಾನ್ಯ ಬೆಳೆಯಾಗಿದೆ.
- ಅಲ್ಪಾವಧಿ ಬೆಳೆಯಾಗಿದ್ದು 85-90 ದಿನಗಳಲ್ಲಿ ಕಟಾವಿಗೆ ಬರುತ್ತದೆ.
- ಬರಗಾಲದ ಬೆಳೆ (Drought resistant )ಎಂದೇ ಪ್ರಸಿದ್ಧಿಯಾದ ನವಣೆ ಹವಾಗುಣ ವೈಪರಿತ್ಯಗಳಿಗೆ ಹೊಂದಿಕೊಳ್ಳಬಲ್ಲದ್ದು.
- ಫಲವತ್ತತೆ ಕ್ಷೀಣಿಸಿದ, ಕಡಿಮೆ ಆಳದ ನೆಲ, ಗುಡ್ಡದ ಇಳಿಜಾರು, ಕಲ್ಲುಗಿಚ್ಚಿನಿಂದ ಕೂಡಿದ ಭೂಮಿ ಹೀಗೆ ಗುಣ ಕ್ಷೀಣಿಸಿದ ಎಲ್ಲಾ ನೆಲಗಳಲ್ಲಿಯೂ ನವಣೆ ಬೆಳೆದು ನಿಲ್ಲಬಲ್ಲದು.
- ಅತೀ ಕಡಿಮೆ ಮಳೆ ಶುಷ್ಕ ವಾತಾವರಣವಿರುವ ಮಳೆಯಾಶ್ರಿತ ಪ್ರದೇಶಗಳಲ್ಲಿ ಒಂದೆರೆಡು ಮಳೆ ಉದರಿದರೂ ಸಾಕು ನವಣೆ ಭರವಸೆಯ ಬೆಳೆ.
- ಬರೇ ಕುಲಬರ್ಗಿ ಮಾತ್ರವಲ್ಲ ಕಡಿಮೆ ಮಳೆಯಾಗುವ ಎಲ್ಲಾ ಭಾಗಗಳಲ್ಲೂ ಇದನ್ನು ಖುಷ್ಕಿ ಬೆಳೆಯಾಗಿ ಬೆಳೆಸಬಹುದು.
ಬಿತ್ತನೆ ಕಾಲ :
- ಜೂನ್ ತಿಂಗಳ ದಿಂದ ಆರಂಭಿಸಿ ಜುಲೈ ತಿಂಗಳವರೆಗೂ ಬಿತ್ತನೆಗೆ ಸಕಾಲ.
- ತಡವಾಗಿ ಬಿತ್ತುವುದರಿಂದ ಇಳುವರಿ ಕಡಿಮೆಯಾಗಬಹುದು,
- ಮುಂಗಾರಿನ ಆರಂಭದಲ್ಲಿಯೇ ಬಿತ್ತುವುದು ಹೆಚ್ಚು ಸೂಕ್ತ.
- ಅಧಿಕ ಇಳುವರಿ ಕೊಡುವ ತಳಿಗಳು.
- ತಳಿಗಳು: ಎಚ್ಎಂಟಿ (HMT) 100-1
- ಡಿಎಚ್ಎಫ್ಟಿಎಮ್ವಿ (DHFTMV) 109-3
- ಎಚೆನ್ (HN) – 46
- ಬೀಜ : 2-3 ಕಿ.ಗ್ರಾಂ./ಎಕರೆಗೆ ಬೀಜ ಬೇಕು.
- ಸಾವಯವ ಗೊಬ್ಬರಗಳು : ಕೊಟ್ಟಿಗೆ ಗೊಬ್ಬರ/ ಕಾಂಪೋಸ್ಟ್ ಗೊಬ್ಬರ 2.5 ಟನ್
- ಜೈವಿಕ ಗೋಬ್ಬರ (ಅಜೋಸ್ಪಿರಿಲ್ಲಂ) 500 ಗ್ರಾಂ
ಭೂಮಿಯ ಫಲವತ್ತತೆ ಹೊಂದಿಕೊಂಡು ರಸಾಯನಿಕ ಗೊಬ್ಬರಗಳನ್ನು ಬಳಸಬೇಕು. ಸಾವಯವದಲ್ಲೂ ಅಧಿಕ ಪ್ರಮಾಣದ ಗೊಬ್ಬರ ಕೊಟ್ಟು ಬೆಳೆಯಬಹುದು. ರಾಸಾಯನಿಕ ಕೊಡುವುದಿದ್ದರೆ (ಕಿ.ಗ್ರಾಂ./ಎಕರೆಗೆ) : ಸಾರಜನಕ 12, ರಂಜಕ 6 ಮತ್ತು ಪೊಟ್ಯಾಷ್ 15 ಬೇಕು.
- ಬಿತ್ತನೆಗೆ 2-3 ವಾರಗಳ ಮುಂಚಿತವಾಗಿ ಸಾವಯವ ಗೊಬ್ಬರ ಕೊಡಬೇಕು.
- ಪ್ರತಿಶತ 50 ರಷ್ಟು ಸಾರಜನಕ, ಪೂರ್ಣ ಪ್ರಮಾಣದ ರಂಜಕವನ್ನು ಹಾಗೂ ಪೊಟ್ಯಾಷನ್ನು ಬಿತ್ತುವ ಕಾಲದಲ್ಲಿ ಸಾಲಿನಲ್ಲಿ ಕೊಡಬೇಕು.
- ಉಳಿದ 50 ರಷ್ಟು ಭಾಗ ಸಾರಜನಕವನ್ನು ಬಿತ್ತಿದ 30 ದಿನಗಳಲ್ಲಿ ಮೇಲು ಗೊಬ್ಬರವಾಗಿ ಕೊಡಬೇಕು.
ಬಿತ್ತನೆ :
- ಬೀಜವನ್ನು ಅಜೋಸ್ಪಿರಿಲ್ಲಂ ಜೈವಿಕ ಗೊಬ್ಬರದಿಂದ ಬೀಜೋಪಚಾರ ಮಾಡುವುದರಿಂದ ಬಿತ್ತಿದ ಬೇರುಗಳು ಸಮೃದ್ಧವಾಗಿ ಬೆಳೆಯುವುದು.
- 4 ಸೆಂ.ಮೀ. ಗಿಂತ ಹೆಚ್ಚು ಆಳದಲ್ಲಿ ಬಿತ್ತಬಾರದು.
- ಸಾಲಿನಿಂದ ಸಾಲಿಗೆ 22.50 ರಿಂದ 30 ಸೆಂ.ಮೀ. ಅಂತರ ಹಾಗೂ ಎರಡು ಸಸಿಗಳ ಮಧ್ಯೆ 5-7.5 ಸೆಂ.ಮೀ. ಅಂತರ ಇರುವಂತೆ ಬಿತ್ತನೆ ಮಾಡಬೇಕು.
- ಅಂತರ ಬೇಸಾಯ : ಬಿತ್ತನೆಯ 3 ವಾರದ ನಂತರ 15 ದಿನಗಳಿಗೊಮ್ಮೆ ಅಂತರ ಬೇಸಾಯ ಮಾಡುವುದರಿಂದ ಬಿದ್ದ ಮಳೆಯ ನೀರು ನೆಲದಲ್ಲಿ ಇಂಗಲು ಸಹಾಯವಾಗುತ್ತದೆ.
- ಇದರಿಂದ ಉತ್ತಮ ಕಳೆ ನಿಯಂತ್ರಣ ಸಹ ಸಾಧ್ಯ.
- ಬಿತ್ತಿದ ಒಂದು ತಿಂಗಳ ಒಳಗಾಗಿ ಒಮ್ಮೆ ಕಳೆ ತೆಗೆಯುವುದು ಒಳ್ಳೆಯದು.
- ಮಿಶ್ರ ಬೆಳೆ : ನವಣೆಯಲ್ಲಿ ತೊಗರಿ, ಎಳ್ಳು ಬೆಳೆಗಳನ್ನು 4:2 ಪ್ರಮಾಣದಲ್ಲಿ ಮಿಶ್ರ ಬೇಳೆ ಚೆನ್ನಾಗಿ ಬೆಳೆಯುವುದು.
ರೋಗ ಕೀಟ ಬಾಧೆ:
- ಈ ಬೆಳೆಗೆ ಹೆಚ್ಚಿನ ರೋಗ ಕೀಟ ಬಾಧೆ ಇರುವುದಿಲ್ಲ.
- ಆದಾಗ್ಯೂ ಕೆಲವು ಸಂದರ್ಭಗಳಲ್ಲಿ ಬರುವ ರೋಗಗಳು ಇವು.
- ಬೆಂಕಿರೋಗ ರೋಗ ಮತ್ತು ಕಂದು ಚುಕ್ಕೆ ರೋಗ.
- ಇದು ಕಾಣಿಸಿಕೊಂಡರೆ ಶಿಲೀಂದ್ರನಾಶಕ ಮ್ಯಾಂಕೋಜೆಬ್75 ಡಬ್ಲೂಪಿ 2 ಗ್ರಾಂ. ಔಷಧಿಯನ್ನು 1 ಲೀ. ನೀರಿನಲ್ಲಿ ಬೆರೆಸಿ ಸಿಂಪಡಿಸುವುದರಿಂದ ರೋಗಗಳನ್ನು ತಡೆಗಟ್ಟಬಹುದು.
ಕಾಡಿಗೆ ರೋಗ:
ಲಕ್ಷಣ ಮತ್ತು ಹಾನಿ : ತೆನೆಯಲ್ಲಿ ಕೆಲವು ಕಾಳುಗಳ ಮೇಲೆ ರೋಗ ಕಂಡು ಬಂದು ಕಾಳಾಗಿ ಬೆಳೆಯುವ ಬದಲು ಶೀಲೀಂದ್ರ ಕೋಶಗಳಾಗಿ ಮಾರ್ಪಾಟಾಗುತ್ತವೆ.
ನಿವಾರಣಾ ಕ್ರಮಗಳು : ಈ ರೋಗದ ಹತೋಟಿಗೆ ಬೀಜೋಪಚಾರ ಬಹುಮುಖ್ಯವಾದ ಆಂಶ. ಒಂದು ಕೆ.ಜಿ. ಬೀಜಕ್ಕೆ 2 ಗ್ರಾಂ. ಪ್ರಮಾಣದ ಎಮಿಸಾನ್-6 ಶಿಲೀಂದ್ರನಾಶಕದಿಂದ ಬೀಜೋಪಚಾರ ಮಾಡಿ ಬಿತ್ತನೆ ಮಾಡಬೇಕು.
ಹಸಿರು ತೆನೆರೋಗ;
ಲಕ್ಷಣ ವiತ್ತು ಹಾನಿ: ತೆನೆಯು ಹುವಿನಿಂದ ಕೂಡಿರದೆ ಸಣ್ಣ ಸಣ್ಣ ಹಲವಾರು ಎಲೆಗಳಾಗಿ ಮಾರ್ಪಾಡಾಗುತ್ತವೆ.
ನಿವಾರಣಾ ಕ್ರಮಗಳು : ಒಂದು ಕಿ.ಗ್ರಾಂ. ಬೀಜಕ್ಕೆ 2 ಗ್ರಾಂ. ರಿಡೋಮಿಲ್ ಎಮ್. ಜೆಡ್. 72 ಡಬ್ಲೂಪಿ ಶಿಲೀಂದ್ರನಾಶಕದಿಂದ ಬೀಜೋಪಚಾರಮಾಡಿ ಬಿತ್ತಬೇಕು.
ಇಳುವರಿ :
- ಕಾಳು: 7-8 ಕ್ವಿಂಟಾಲ್/ಎಕರೆಗೆ
- ಮೇವು : 16-18 ಕ್ವಿಂಟಾಲ್/ಎಕರೆಗೆ
ಲೇಖಕರು – ಡಾ. ಯುಸುಫ್ಅಲಿ ನಿಂಬರಗಿ, ಡಾ. ಶ್ರೀನಿವಾಸ ಬಿ. ವಿ, ಡಾ. ರಾಜು ಜಿ. ತೆಗ್ಗಳ್ಳಿ, ನಿಸರ್ಗ ಹೆಚ್. ಎಸ್. ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿ