“ಮಾಗಿ ಉಳುಮೆ” ಮಾಡುವುದರಿಂದ ಪ್ರಯೋಜನ

ploughing

ಬೆಳೆ ಬೆಳೆಯುವ ಮಣ್ಣು ಪ್ರಾಕೃತಿಕವಾಗಿ ಸೂರ್ಯನ ಬೆಳಕಿನಿಂದ ವರ್ಷ ವರ್ಷವೂ ಪುನಶ್ಚೇತನ ಆಗಬೇಕು. ಅದಕ್ಕೆ ನೆರವಾಗುವ ಒಂದು ಬೇಸಾಯ ಕ್ರಮ ಮಾಗಿ ಉಳುಮೆ.

  • ಕೃಷಿ ಮಾಡುವಾಗ ಮಣ್ಣಿನ ಉತ್ಪಾದಕತೆ ಎಂಬುದು ಅತೀ ಪ್ರಾಮುಖ್ಯ. ಹೊಲದ ಉತ್ಪಾದಕತೆಯು ಮಣ್ಣಿನ ಗುಣಲಕ್ಷಣಗಳು ಆರೋಗ್ಯ ಮತ್ತು ಪ್ರಮುಖವಾಗಿ ಮಣ್ಣಿನ ಫಲವತ್ತತೆಯನ್ನು ಅವಲಂಬಿಸಿದೆ.
  • ಸಸ್ಯಗಳ ಬೆಳವಣಿಗೆಗೆ ಅತ್ಯವಶ್ಯವಿರುವ ನೀರು ಮತ್ತು ಗಾಳಿಯನ್ನು ಹಿಡಿದಿಟ್ಟುಕೊಳ್ಳುವುದು, ಅಗತ್ಯವಾದಷ್ಟು ಪೋಷಕಾಂಶಗಳನ್ನು ಒದಗಿಸುವುದು ಮಣ್ಣು.
  • ಮಣ್ಣು ಪೋಷಕಾಂಶಗಳ ಆಗರ..ಮಣ್ಣು ಸವೆತದೊಂದಿಗೆ ಮಣ್ಣಲ್ಲಿನ ಉಪಯುಕ್ತವಾದ ಪ್ರಧಾನ ಮತು ಲಘು ಪೋಷಕಾಂಶಗಳು ನಾಶವಾಗುತ್ತವೆ.
  • ಈಗಾಗಲೇ ಶೇ. 33% ಮಣ್ಣು ತನ್ನ ಫಲವತ್ತತೆ ಕಳೆದುಕೊಂಡಿದೆ.
  • ಈ ಸಜೀವಿ ಮಣ್ಣು ಒಮ್ಮೆನಾಶವಾದರೆ ಪುನರ್ ಪಡಿಯಲಾಗದು.ಹೀಗಾಗಿ ಮಣ್ಣಿನ ಆರೋಗ್ಯ ರಕ್ಷಣೆ ಅತ್ಯಂತ ಪ್ರಮುಖವಾದ ಸಂಗತಿ.

ಯುರೋಪಿಯನ್‍ ಕಮಿಶನ್‍ನ ಸಮೀಕ್ಷೆಯ ಪ್ರಕಾರ  2030 ರ ಸುಮಾರಿಗೆ  ಜನತೆಗೆ ಆರೋಗ್ಯಕರ ಆಹಾರ, , ಪ್ರಾಕೃತಿಕ ಸಮತೋಲನ ಇರಬೇಕಾದರೆ  ಶೇ. 75 ರಷ್ಟು  ಮಣ್ಣು ಆರೋಗ್ಯವಾಗಿರಬೇಕಂತೆ. ಆದ್ದರಿಂದ ರೈತರು ಮಣ್ಣಿನ ಆರೋಗ್ಯದ ಕುರಿತು ಹೆಚ್ಚಿನ ಕಾಳಜಿ ವಹಿಸಿ ಕೃಷಿಯ ಪುರಾತನ ಚಟುವಟಿಕೆಯಾದ ಮಾಗಿ ಉಳುಮೆಗೆ ಎಲ್ಲಿಲ್ಲದ ಮಹತ್ವ ಕೊಡಬೇಕಾಗಿದೆ.

ಮಾಗಿ ಉಳುಮೆ ಎಂದರೇನು:

Summer plough
  • ಮಾಗಿ ಉಳುಮೆ (Summe Ploughing) ಎಂದರೆ ಮುಂಗಾರಿಗಿಂತ ಮುಂಚೆ ಹಾಗೂ ಹಿಂಗಾರು ಬೆಳೆಗಳ ಕಟಾವಿನ ನಂತರ ಅಂದರೆ ಬೇಸಿಗೆಯಲ್ಲಿ ಕೈಗೊಳ್ಳಬೇಕಾದ ಕಡಿಮೆ ಖರ್ಚಿನ ನೆಲ ಅಗೆತ ಅಥವಾ ತಿರುವಿ  ಹಾಕುವಿಕೆ.
  • ಹಿಂದೆ ಎಲ್ಲಾ ರೈತರೂ ಇದನು ತಪ್ಪದೆ ಅನುಸರಿಸುತ್ತಿದ್ದರು.
  • ಇತ್ತೀಚೆಗೆ ಅನೇಕ ರೈತರು ಮಾಗಿ ಉಳುಮೆಯ ಮಹತ್ವವನ್ನರಿಯದೇ ನಿರ್ಲಕ್ಷ್ಯವಹಿಸುತ್ತಿದ್ದಾರೆ. 

ಮಾಗಿ ಉಳುಮೆಯಿಂದಾಗುವ ಪ್ರಯೋಜನಗಳು:

  • ಜಮೀನಿನ ಮಣ್ಣಿನ ಮೇಲೆ ಪರಿಣಾಮ:ಬೇಸಿಗೆಯಲ್ಲಿ ಮಾಗಿ ಉಳುಮೆಯಿಂದ ತಯಾರಾದ ಜಮೀನು ಮುಂಗಾರು ಮಳೆಯಾಗುತ್ತಿದ್ದಂತೆ ಹರಗಿ ಬಿತ್ತಲು ಸುಲಭವಾಗುತ್ತದೆ.
  • ಕೃಷಿ ಭೂಮಿಯಲ್ಲಿನ ಮಣ್ಣು ತಿರುವು ಮುರುವಾಗಿ ಸಡಿಲವಾಗಿ ಬಿದ್ದಂತಹ ಮಳೆ ನೀರನ್ನು ಸುಲಭವಾಗಿ ಅಲ್ಲಿಯೇ ಇಂಗಿಸುತ್ತದೆ.
  • ಭೂಮಿಯ ಅಂತರ್ಜಲ ಮಟ್ಟ ಮತ್ತು ತೇವಾಂಶದ ಪ್ರಮಾಣ ಹೆಚ್ಚಾಗಿ ಮಳೆ ನೀರನ್ನು ಸಾಕಷ್ಟು ಪ್ರಮಾಣದಲ್ಲಿ ಇಂಗುವದಕ್ಕೆ ಸಹಕಾರಿಯಾಗುತ್ತದೆ.
  • ಜೊತೆಗೆ ಬಿತ್ತಿದ ಬೀಜಗಳ ಮೊಳಕೆ ಪ್ರಮಾಣ ಹಾಗೂ ಸದೃಢ ಸಸಿಗಳ ಸಂಖ್ಯೆ ಹೆಚ್ಚಾಗಿ ಅಧಿಕ ಇಳುವರಿ ಪಡೆಯಲು ಅನುಕೂಲವಾಗುತ್ತದೆ.
  • ಮಣ್ಣಿನ ಮೇಲ್ಪದರ ಸಡಿಲಗೊಂಡಿರುವುದರಿಂದ ಬೇರುಗಳು ಸರಾಗವಾಗಿ ಆಳಕ್ಕೆ ಇಳಿದು ಬೆಳೆಗಳ ಬೆಳವಣಿಗೆಯಿಂದ ಉತ್ತಮ ಫಸಲನ್ನು ಪಡೆಯಬಹುದು.
  • ಮಾಗಿ ಉಳುಮೆಯನ್ನು ಇಳಿಜಾರಿಗೆ ಅಡ್ಡಲಾಗಿ ಮಾಡುವುದರಿಂದ ಮಣ್ಣು, ನೀರಿನ ಸಂರಕ್ಷಣೆ ಮತ್ತು ಮಳೆ ನೀರು ಸಂಗ್ರಹಣೆ ಹಾಗೂ ಅದರ ದಕ್ಷ ಉಪಯೋಗವನ್ನು ಹೆಚ್ಚಿನ ಖರ್ಚಿಲ್ಲದೆ ಮಾಡಬಹುದು.
Tractor plough

ಕಳೆಗಳ ನಿಯಂತ್ರಣ:

  • ಮಾಗಿ ಉಳುಮೆ ಕೈಗೊಳ್ಳುವ ಮೂಲಕ ಕರಿಕೆಯ ಬೇರುಗಳು ಹಾಗೂ ಜೇಕಿನ ಗಡ್ಡೆಗಳನ್ನು ಮತ್ತು ಇನ್ನಿತರ ಕಳೆಗಳ ಅವಶೇಷಗಳನ್ನು ಸುಲಭವಾಗಿ ಆರಿಸಿ ತೆಗೆಯಲು ಸಹಾಯವಾಗುತ್ತದೆ.
  • ಮುಂದಿನ ಬೆಳೆಗಳಲ್ಲಿ ಇಂತಹ ಕಳೆಗಳನ್ನು ಪ್ರಥಮ ಹಂತದಲ್ಲಿಯೇ ಹತೋಟಿ ಮಾಡಬಹುದು.
  • ಇವುಗಳ ನಿಯಂತ್ರಣಕ್ಕಾಗಿ ತಗಲುವ ಕೂಲಿ ಮತ್ತು ಕಳೆನಾಶಕಗಳ ವೆಚ್ಚ ಮತ್ತು ಸಮಯವನ್ನು ಕಡಿಮೆಗೊಳಿಸಬಹುದಾಗಿದೆ.

ಕೀಟಗಳುಮತ್ತು ರೋಗಾಣುಗಳ ನಿಯಂತ್ರಣ:

  •  ಹಿಂಗಾರು ಹಂಗಾಮಿನಲ್ಲಿ ಬೆಳೆದ ಬೆಳೆಗಳಿಗೆ ಸಂಬಂಧಿಸಿದ ಕೀಟಗಳ ಕೋಶ ಮತ್ತು ಅವುಗಳ ತತ್ತಿಗಳು ಸೂರ್ಯನ ಶಾಖಕ್ಕೆ ಒಡ್ಡಲ್ಪಡುತ್ತದೆ.
  • ಇದರಿಂದ ಜಮೀನಿನ ಒಳಗೆ ಇರಬಹುದಾದ ಪೈರಿನ ವೈರಿಗಳಾದ ಕೆಲವು ಕೀಟಗಳು ಮತ್ತು ಸಸ್ಯ ರೋಗಗಳ ರೋಗಾಣುಗಳನ್ನು ಕೋಶದ ಹಂತದಲ್ಲಿಯೇ ಕಡಿಮೆ ಖರ್ಚಿನಲ್ಲಿ ಹತೋಟಿ ಮಾಡಬಹುದು.
  • ಇದರಿಂದ  ಮುಂದೆ ಆಗಬಹುದಾದ ಹೆಚ್ಚಿನ ಹಾನಿಯನ್ನು ಪ್ರಾಥಮಿಕ ಹಂತದಲ್ಲಿಯೇ ನಿಯಂತ್ರಿಸಿ ಕೀಟನಾಶಕಗಳಿಗೆ ತಗಲುವ ಅನಾವಶ್ಯಕ ಖರ್ಚನ್ನು ಕಡಿಮೆಗೊಳಿಸಬಹುದು.

ಬೆಳೆ ಉಳಿಕೆಗಳು:

Plough
  • ಬೆಳೆ ಕಟಾವಿನ ನಂತರ ಉಳಿದ ಬೆಳೆ ಉಳಿಕೆಗಳು ಮತ್ತು ತ್ಯಾಜ್ಯವಸ್ತುಗಳು ಮಣ್ಣಿನಲ್ಲಿ ಬೇಗನೆ ಕೊಳೆತು ಉತ್ತಮ ಸಾವಯವ ಗೊಬ್ಬರವಾಗಿ ಮುಂಬರುವ ಬೆಳೆಗಳಿಗೆ ಪೂರೈಕೆಯಾಗುತ್ತದೆ.
  • ಭೂ ಮೇಲ್ಮೈ ಸಾವಯವ ಹೊದಿಕೆ ಹಾಗೂ ಮಣ್ಣಿನಲ್ಲಿ ತೇವಾಂಶವನ್ನು ಹಿಡಿದಿಟ್ಟುಕೊಂಡು ಸಾವಯವ ಅಂಶ ಉಳಿಸುವುದರಿಂದ ಕೃಷಿ ಪರಿಸರದಲ್ಲಿ ಸಾವಯವ ಪದಾರ್ಥಗಳಿಂದ ಮಣ್ಣಿನ ಭೌತಿಕ ಮತ್ತು ರಾಸಾಯನಿಕ ಗುಣಧರ್ಮಗಳು ಉತ್ತಮಗೊಳ್ಳುತ್ತದೆ.
  • ಫಲವತ್ತತೆ ಹಾಗೂ ಉತ್ಪಾದಕತೆ ಹೆಚ್ಚಿಸುವ ಮೂಲಕ ಸ್ವಾಭಾವಿಕ ಕ್ರಿಯೆಗಳನ್ನು ತ್ವರಿತಗೊಳಿಸಿದಂತಾಗುತ್ತದೆ.

ನೈಸರ್ಗಿಕ ಹಾಗೂ ಜೈವಿಕ ಪರಿಸರದಮೇಲೆ ಪರಿಣಾಮ:

  • ಮಾಗಿ ಉಳುಮೆಯಿಂದ ಕೀಟಗಳ ಕೋಶಗಳು ಮತ್ತು ರೋಗಾಣುಗಳನ್ನು ಕೊಕ್ಕರೆ ಮತ್ತು ಮುಂತಾದ ಪಕ್ಷಿಗಳು ಹೆಕ್ಕಿ ತಿನ್ನುತ್ತವೆ.
  • ಇದರಿಂದ ಜೈವಿಕವಾಗಿ ಕೀಟ ಮತ್ತು ರೋಗಗಳನ್ನು ಹತೋಟಿ ಮಾಡಿ ಮಣ್ಣಿನ ಆರೋಗ್ಯ, ಪರಿಸರ ಮತ್ತು ಆಹಾರದಲ್ಲಿ ರಾಸಾಯನಿಕಗಳ ಪ್ರಮಾಣವನ್ನುಕಡಿಮೆಗೊಳಿಸಬಹುದು.
  • ಮಣ್ಣಿನಲ್ಲಿ ಜೈವಿಕ ಕ್ರಿಯೆಯನ್ನು ಹೆಚ್ಚಿಸಲು ಸಹಕಾರಿಯಾದಂತಾಗುತ್ತದೆ. ಸೂರ್ಯನ ಬೆಳಕು ಬೀಳುವುದರಿಂದ ಮಣ್ಣಿನ ಶಕ್ತಿ ಹೆಚ್ಚುತ್ತದೆ.

ಹೀಗಾಗಿ ರೈತರು ಬೇಸಿಗೆಯಲ್ಲಿ ಮಾಗಿ ಉಳುಮೆ ಕೈಗೊಂಡು ನೈಸರ್ಗಿಕ  ಹಾಗೂ ಜೈವಿಕ ವಿಧಾನಗಳಿಂದ ಪ್ರಕೃತಿದತ್ತವಾದ ಮಣ್ಣಿನ ಸಂಪತ್ತನ್ನು ಸಂರಕ್ಷಿಸುವುದು ಹಾಗೂ ಸಮರ್ಪಕ ರೀತಿಯಿಂದ ಬಳಸುವುದು ನಮ್ಮಕೈಯಲ್ಲಿಯೇ ಇದೆ. ಮಣ್ಣಿನ ಆರೋಗ್ಯ ಮತ್ತು ಫಲವತ್ತತೆಯನ್ನುರಕ್ಷಿಸುವುದರ ಜೊತೆಗೆ ಕಡಿಮೆ ಖರ್ಚಿನ ಬೇಸಾಯವನ್ನು ಕೈಗೊಂಡು ತಮ್ಮ ಆದಾಯವನ್ನೂ ಸಹ ಹೆಚ್ಚಿಸಿಕೊಳ್ಳಬಹುದು.

“ಆರೋಗ್ಯಯುತಮಣ್ಣು… ಆರೋಗ್ಯಯುತ ಆಹಾರ… ಆರೋಗ್ಯಯುತಸಮಾಜ…”

ಲೇಖಕರು– 1. ಡಾ. ಶ್ರೀನಿವಾಸ ಬಿ. ವಿ .ವಿಜ್ಞಾನಿ (ಮಣ್ಣು ವಿಜ್ಞಾನ), ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿ, 2  ಡಾ. ಜಹೀರ್‍ಅಹೆಮದ್, ವಿಜ್ಞಾನಿ (ಸಸ್ಯರೋಗ), ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿ, 3 ಡಾ. ರಾಜು ಜಿ. ತೆಗ್ಗಳ್ಳಿ ,  ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು, ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿ ,4.ಡಾ. ಪುಷ್ಪಲತಾ. ಎಂ, 5.  ನಿಸರ್ಗ ಹೆಚ್. ಎಸ್

Leave a Reply

Your email address will not be published. Required fields are marked *

error: Content is protected !!