ದೇಶದಲ್ಲಿ ಸಕ್ಕರೆ ಉತ್ಪಾದನೆ ಹೆಚ್ಚಾಗಿದೆ. ಹಾಗಾಗಿ ಕಬ್ಬು ಬೆಳೆಯುವ ರೈತರು ಇನ್ನು ಬೆಳೆಯಬೇಡಿ. ಬೆಳೆ ಪರಿವರ್ತನೆ ಮಾಡಿ, ಇಂಧನ ಮತ್ತು ಶಕ್ತಿ ಉತ್ಪಾದನೆ ಕಡೆಗೆ ಗಮನಹರಿಸಬೇಕು ಎಂಬುದು ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಮಂತ್ರಿಗಳಾದ ನಿಥಿನ್ ಗಡ್ಕರಿಯವರ ಮಾತು. ಭಾರತ ದೇಶದಲ್ಲಿ ಕಬ್ಬು ಬೆಳೆ ಹೆಚ್ಚಾಗುತ್ತಿದ್ದು, ಎಲ್ಲರೂ ಸಕ್ಕರೆ ಕಾರ್ಖಾನೆಗೆ ಕಬ್ಬು ಹಾಕುತ್ತಾರೆ. ಉತ್ಪಾದಿಸಿದ ಸಕ್ಕರೆ ಮಿಗತೆಯಾಗಿ ಕಾರ್ಖಾನೆಗಳು ನಷ್ಟಕ್ಕೊಳಗಾಗುತ್ತಿವೆಯಂತೆ.
ನಮ್ಮ ದೇಶದಲ್ಲಿರುವ ಬಹುತೇಕ ಸಕ್ಕರೆ ಕಾರ್ಖಾನೆಗಳು ಈಗ ಸಕ್ಕರೆ ಉತ್ಪಾದನೆಗಾಗಿ ಕೆಲಸ ಮಾಡುತ್ತಿಲ್ಲ. ಬದಲಿಗೆ ಇಥೆನಾಲ್ ಉತ್ಪಾದನೆಗಾಗಿ ಕೆಲಸ ಮಾಡುತ್ತಿವೆ. ನಮ್ಮ ದೇಶದ ಒಟ್ಟು ಸಕ್ಕರೆ ಬೇಡಿಕೆ 280 ಲಕ್ಷ ಟನ್ನುಗಳು. ಆದರೆ ನಮ್ಮಲ್ಲಿ ಈಗ 360 ಟನ್ ಗೂ ಹೆಚ್ಚು ಸಕ್ಕರೆ ಉತ್ಪಾದನೆಯಾಗುತ್ತಿದೆ. ಕಾರ್ಖಾನೆಗಳು ಸಾಧ್ಯವಾದಷ್ಟು ಸಕ್ಕರೆ ಉತ್ಪಾದನೆ ಕಡಿಮೆ ಮಾಡಿದರೂ ಅನಿವಾರ್ಯವಾಗಿ ಇಷ್ಟು ಉತ್ಪಾದನೆ ಆಗುತ್ತಿವೆ. ಮಿಗತೆ ಸಕ್ಕರೆಯನ್ನು ಬೇರೆ ಬೇರೆ ಉದ್ದೇಶಗಳ ಬಳಕೆಗೆ ಪೂರೈಸಲಾಗುತ್ತಿದೆ. ಸಿಹಿಯ ಇನ್ನೊಂದು ವಸ್ತುವಾದ ಬೆಲ್ಲವನ್ನೂ ಸಹ ಬಹಳಷ್ಟು ಕಡೆ ಸಕ್ಕರೆಯನ್ನು ಬಳಸಿಯೇ ತಯಾರಿಸಲಾಗುತ್ತಿದೆ. ಸಕ್ಕರೆ ಕಾರ್ಖಾನೆಗಳೇನೋ ಇಥೆನಾಲ್ ಉತ್ಪಾದಿಸಿ, ಹಾಗೆಯೇ ಕಾಕಂಬಿ ತ್ಯಾಜ್ಯದಿಂದ ಇನ್ನಿತರ ಉತ್ಪನ್ನಗಳನ್ನು ತಯಾರಿಸಿ ನಡೆಯಬಹುದು. ಆದರೆ ಕಬ್ಬು ಬೆಳೆಗಾರರು ಬೇಡಿಕೆ ಕಡಿಮೆಯಾಗಿ ಬೆಲೆ ಕುಸಿದರೆ ಕಂಗಾಲಾಗಬೇಕು. ಹಾಗಾಗಿ ಕಬ್ಬು ಬೆಳೆಯನ್ನು ಕಡಿಮೆಮಾಡಿ, ಇಂಧನ ಕ್ಷೇತ್ರ ಹಾಗೂ ಶಕ್ತಿ ಉತ್ಪಾದನಾ ಕ್ಷೇತ್ರಗಳತ್ತ ಗಮನಹರಿಸಬೇಕು ಎಂಬುದು ಮಂತ್ರಿಗಳ ಕಳಕಳಿ.
ಕಬ್ಬು ಬೆಳೆಗಾರರಿಗೆ ಹಣ ಸಿಗುತ್ತಿಲ್ಲ ಕಾರಣ:
- ಕೆಲವು ರಾಜ್ಯಗಳಲ್ಲಿ ಕಬ್ಬು ಬೆಳೆದು ಕಾರ್ಖಾನೆಗೆ ಹಾಕಿದರೆ ಅದಕ್ಕೆ ಹಣ ಸಿಗುತ್ತಿಲ್ಲ.
- ಸರಕಾರದ ನಿಯಮಗಳಂತೆ ಹಣ ಕೊಡಲು ಕಾರ್ಖಾನೆಗಳಿಗೆ ಸಾಧ್ಯವಾಗುತ್ತಿಲ್ಲ.
- ಹಾಗಾಗಿ ಮುಂದೆ ಈ ಸಮಸ್ಯೆ ಇನ್ನೂ ಹೆಚ್ಚಾಗಿ ಕಾಡಬಹುದು.
- ನಮ್ಮ ದೇಶದಲ್ಲಿ ಸಕ್ಕರೆ ಬಳಕೆಯೂ ಸ್ವಲ್ಪ ಸ್ವಲ್ಪವೇ ಕಡಿಮೆಯಾಗುತ್ತಿದೆ.
- ಅನಿವಾರ್ಯವಾಗಿ ಮುಂದಿನ ದಿನಗಳಲ್ಲಿ ಕಬ್ಬು ಬೆಳೆಯ ಉತ್ತೇಜನ ಕಡಿಮೆಯಾಗುತ್ತದೆ.
- ಕಬ್ಬನ್ನು ಸಕ್ಕರೆ ಉತ್ಪಾದನೆ ಅಲ್ಲದೆ ಇಥೆನಾಲ್ ಉತ್ಪಾದನೆಗಾಗಿ ಬೆಳೆದರೆ ರೈತರಿಗೆ ಹೆಚ್ಚು ಲಾಭವಾಗುವುದಿಲ್ಲ.
- ಹಾಗಾಗಿ ಕಬ್ಬು ತಂದು ಹಾಕಿದ ರೈತರಿಗೆ ಹಣ ಸಿಗುವುದು ವಿಳಂಬವಾಗುತ್ತಿದೆ.
- ಜನ ಗಲಾಟೆ ಮಾಡುತ್ತಾರೆ. ಸ್ವಲ್ಪ ಸ್ವಲ್ಪ ಕೊಟ್ಟು ಒಮ್ಮೆಗೆ ಸಮಾಧಾನ ಮಾಡಲಾಗುತ್ತದೆ.

ಕಬ್ಬಿಗೆ ಬದಲಿ ಬೆಳೆ ಯಾವುದು?
ಕಬ್ಬು ಬೆಳೆ ಬೆಳೆಯುವ ಹೊಲಗಳಲ್ಲಿ ಭತ್ತದ ಬೆಳೆ ಬೆಳೆಯಬಹುದು. ಆದರೆ ಭತ್ತದ ಬೆಳೆಯಲ್ಲೂ ಅಂತಹ ಲಾಭವಿಲ್ಲ.ಭತ್ತದ ಹುಲ್ಲಿನಿಂದ ಜೈವಿಕ CNG ತಯಾರಿಸಲಿಕ್ಕೆ ಆಗುತ್ತದೆ. ಬೇರೆ ಬೇರೆ ತ್ಯಾಜ್ಯಗಳಿಂದಲೂ CNG ಉತ್ಪಾದಿಸಬಹುದು.ಆದರೆ ಅದೆಲ್ಲಾ ಉದ್ದಿಮೆದಾರರಿಗೆ ಲಾಭದಾಯಕವೇ ಹೊರತು ಕೃಷಿಕರಿಗೆ ಅಲ್ಲ.
ಕೃಷಿಕರು ಕಷ್ಟ ಅನುಭವಿಸಬೇಕಾಗಬುದು:
- ಕಬ್ಬು ಬೆಳೆಗಾರರಿಗೆ ಬಾಕಿ ಪಾವತಿಸಲು ಸರಕಾರ ಸಕ್ಕರೆ ಕಾರ್ಖಾನೆಗಳಿಗೆ ನೆರವು ನೀಡಿ, ತತ್ಕಾಲಕ್ಕೆ ಸಮಸ್ಯೆ ಬಗೆಹರಿಸಬಹುದು.
- ಆದರೆ ಶಾಶ್ವತವಾಗಿ ಬಗೆಹರಿಸಲು ಸಾಧ್ಯವಿಲ್ಲ. ಕೃಷಿಕರನ್ನು ಕೆಲವು ಬೆಳೆ ಬಿಟ್ಟು ಬೇರೆ ಕ್ಷೇತ್ರಕ್ಕೆ ಹೋಗಿ ಎಂದರೆ ಹೋಗುವುದು ಅಷ್ಟು ಸುಲಭವೇ?
- ಅದಕ್ಕೆ ಬೇಕಾಗುವ ಬಂಡವಾಳವನ್ನು ಹೊಂದಿಸಿಕೊಳುವಷ್ಟು ಕೃಷಿಕ ಸಧೃಢವಾಗಿಲ್ಲ.
- ಈಗ ಕಬ್ಬು ಬೆಳೆ ಕಡಿಮೆ ಮಾಡಬೇಕು ಎನ್ನುತ್ತಾರೆ. ಮುಂದೆ ಅಕ್ಕಿಗೂ ಇದೇ ಪರಿಸ್ಥಿತಿ ಉಂಟಾಗಬಹುದು.
- ಮುಂದಿನ ದಿನಗಳಲ್ಲಿ ಇಂಧನ ಕ್ಷೇತ್ರಕ್ಕೆ ಹೆಚ್ಚಿನ ಬೇಡಿಕೆ ಇದೆ ಎನ್ನಲಾಗುತ್ತಿದೆಯಾದರೂ ಇದರಿಂದ ರೈತರು ಸಂಪಾದಿಸುವುದು ಅಷ್ಟಕ್ಕಷ್ಟೇ.
- ಶಕ್ತಿ ( ವಿದ್ಯುತ್ ) ಉತ್ಪಾದನೆಯಲ್ಲಿ ಲಾಭವಿದೆ ಎನ್ನುತ್ತಾರೆ.
- PM KUSUM ಯೋಜನೆ ಪ್ರಾರಂಭವಾಗುವಾಗ ರೈತರ ಹೊಲ, ಖಾಲಿ ಸ್ಥಳಗಳಲ್ಲಿ ಸೋಲಾರ್ ಪ್ಯಾನೆಲ್ ಹಾಕಿ ಶಕ್ತಿ ಉತ್ಪಾದನೆ ಮಾಡಿ ಗ್ರಿಡ್ ಗೆ ಮಾರಬಹುದು ಎಂದಿತ್ತು.
- ಸಾಕಷ್ಟು ಕಾರ್ಪೊರೇಟ್ ಸಂಸ್ಥೆಗಳು ತಕ್ಷಣ ಅದನ್ನು ಮಾಡಿಕೊಂಡವು.
- ಇತರರು ಈ ಕ್ಷೇತ್ರವನ್ನು ಆಯ್ಕೆ ಮಾಡುವ ಕಾಲಕ್ಕೆ ಈ ಅವಕಾಶವನ್ನು ಮೊಟಕುಗೊಳಿಸಲಾಯಿತು.
- ಹಿಂದಿನವರು ಮಾಡಿದ್ದು ಅಭಾಧಿತ. ಅವರ ಕೊಡು ಕೊಳ್ಳುವ ಅಗ್ರೀಮೆಂಟ್ ಅಭಾಧಿತ.
- ಈಗ ಮಾಡುವವರಿಗೆ ಹತ್ತು ಹಲವು ಶರ್ತಗಳು.
- ಪ್ರಾರಂಭದಲ್ಲಿ ಸೌರಶಕ್ತಿ ಉತ್ಪಾದನೆ ಮಾಡಿದರೆ ಗ್ರೀಡ್ ನವರು ಅದಕ್ಕೆ ಯುನಿಟ್ ಗೆ 11 ರೂ, ಗಳಿಗೆ ಕೊಳ್ಳುತ್ತಿದ್ದರು.
- ಈಗ ಅದು ರೂ.4 ಕ್ಕೆ ಇಳಿದಿದೆ. ಅವರವರ ಮನೆ ಛಾವಣಿಯಲ್ಲಿ ಉತ್ಪಾದಿಸಿದ ಶಕ್ತಿಯನ್ನು ಮಾರಬಹುದು.
- ಹೊಲದಲ್ಲಿ ಪ್ಯಾನೆಲ್ ಹಾಕಿ ಉತ್ಪಾದಿಸಿದ್ದನ್ನು ಅವರ ಸ್ವಂತ ಬಳಕೆಗೆ ಮಾತ್ರ ಉಪಯೋಗಿಸಬಹುದು.
- ಒಟ್ಟಿನಲ್ಲಿ ಸಾಮಾನ್ಯ ಜನಕ್ಕೆ ಅವಕಾಶಗಳ ಸರದಿ ಬರುವಾಗ ಅದಕ್ಕೆ ಬೆಲೆಯೇ ಇರುವುದಿಲ್ಲ.
ಸರಕಾರ ಕೃಷಿಕರ ಅಭಿವೃದ್ದಿಗಾಗಿ ಏನೆಲ್ಲಾ ಮಾಡುತ್ತದೆ, ಅದರೆ ಬೇಡಿಕೆ ಮತ್ತು ಉತ್ಪಾದನೆ ಅನುಗುಣವಾಗಿ ಬೆಳೆ ಯೋಜನೆ ಹಾಕಿಕೊಳ್ಳುವ ಕುರಿತಾಗಿ ಏನೂ ಮಾಡುತ್ತಿಲ್ಲ. ನಾಳೆ ನಾವು ಬೆಳೆಯುತ್ತಿರುವ ಬೆಳೆಗೆ ಬೇಡಿಕೆ ಕಡಿಮೆಯಾದರೆ ಬೆಲೆ ಕುಸಿಯುತ್ತದೆ. ಆಗ ರೈತರ ಆದಾಯ ಕುಸಿತವಾಗುತ್ತದೆ. ಸುಸ್ಥಿರತೆ ಎಂಬುದು ಇರಬೇಕಾದರೆ ಬೇಡಿಕೆಗೆ ತಕ್ಕುದಾಗಿ ಉತ್ಪಾದನೆ ಇರಬೇಕಾಗುತ್ತದೆ. ನಾಳೆ ನಾವೆಲ್ಲಾ ಬೆಳೆಯುವ ಅಡಿಕೆಯಂತಹ ಬೆಳೆಗೆ ಬೇಡಿಕೆ ಕುಸಿತವಾದರೆ ಜನಜೀವನ ಎಂಬುದು ಏನಾಗಬಹುದು ಎಂಬುದನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ.