ಶ್ರೀಗಂಧ ಚಿನ್ನ ಚಿನ್ನವೇ. ಆದರೆ ನಮಗೆ ಅದನ್ನು ಉಳಿಸಿ ಅನುಭವಿಸುವ ಭಾಗ್ಯ ಬೇಕು! ಶ್ರೀಗಂಧ ಬೆಳೆಸಿ ಕೋಟಿ ನಿರೀಕ್ಷೆಯಲ್ಲಿ ನಿರಂತರ ಜೇಬಿನಲ್ಲಿ ಕೆಂಡ ಇಟ್ಟುಕೊಂಡು ಜೀವನ ಕಳೆಯುವ ಬದಲು ಇದ್ಯಾವುದರ ಭಯವೂ ಇಲ್ಲದೆ ಸಾಗುವಾನಿ ಬೆಳೆಸಿ ಬದುಕಬಹುದು. ಕೋಟಿಯಲ್ಲದಿದ್ದರೂ ಲಕ್ಷಾಂತರ ಆದಾಯ ಕೊಡಬಲ್ಲ ಬೆಳೆ ಸಾಗುವಾನಿ ಮರ. ಇದು ರೈತರೆಲ್ಲರ ಗಮನದಲ್ಲಿ ಇರಬೇಕು. ಸಾಗುವಾನಿ ಅರವನ್ನು ಯಾರೂ ಕದ್ದುಕೊಂಡು ಹೋದಾರು ಎಂಬ ಭಯ ಇಲ್ಲ. ನೀವು ಇಚ್ಚಿಸಿದವರಿಗೆ ಮಾರಬಹುದು. ಎಷ್ಟು ಬೆಳೆಯಿತೋ ಅಷ್ಟು ಮೌಲ್ಯ ಹೆಚ್ಚಾಗುತ್ತದೆ.
ಅಸಾಮಾನ್ಯ ಮರ:
- ಒಂದು ಸಾಗುವಾನಿ ಮರ ಸುಮಾರು 30 ವರ್ಷ ಬೆಳೆದರೆ ಸಾಕು ಅದಕ್ಕೆ ಕನಿಷ್ಟ 1 ಲಕ್ಷದಷ್ಟು ಬೆಲೆ ಬಂದೇ ಬರುತ್ತದೆ.
- ವರ್ಷ ಕಳೆದಂತೇ ಇದರ ಬೆಲೆ ಹೆಚ್ಚುತ್ತಾ ಹೋಗುವುದೇ ಹೊರತು ಕಡಿಮೆಯಾಗುವುದಿಲ್ಲ. ಕಳ್ಳ ಕಾಕರ ಭಯ ಇಲ್ಲ. ಬಂದೂಕು ಬೇಡ.
- ಸಾಗುವಾನಿ ಮರಕ್ಕೆ ಸರಿಸಾಟಿಯಾದ ಮರಮಟ್ಟು ಬೇರೊಂದಿಲ್ಲ.
- ಅದಕ್ಕಾಗಿಯೇ ಇದನ್ನು ಹೊನ್ನಿನ ಮರ ಎಂದು ಕರೆದಿದ್ದಾರೆ.
- ಎಲ್ಲೆಲ್ಲಿ ಸ್ಥಳಾವಕಾಶ ಇದೆಯೋ ಅಲ್ಲೆಲ್ಲಾ ಸಾಗುವಾನಿ ಸಸಿ ಬೆಳೆಸಿ.
- ಅದು ತೋಟದ ಮಧ್ಯೆಯೂ ಅಗಬಹುದು. ಇದು ಸುರಕ್ಷಿತ ನಿರಖು ( ಫಿಕ್ಸೆಡ್ ಡೆಪೋಸಿಟ್) ಠೇವಣಿ.
ಸಾಗುವಾನಿ ಎಲ್ಲೆಲ್ಲಿ ಬೆಳೆಯುತ್ತದೆ:
ಸಾಗುವಾನಿಯ ಮಹತ್ವ ಮತ್ತು ಅದರ ಭವಿಷ್ಯದ ಬೇಡಿಕೆಯನ್ನು ಅರಿತ ಕೇರಳದ ಜನ ಸಾಗುವಾನಿಯನ್ನು ಚಿನ್ನದ ಮರವಾಗಿ ಬೆಳೆಸಿ ಉಳಿಸುತ್ತಿದ್ದಾರೆ. ಕೇರಳದಲ್ಲಿ ಎಲ್ಲಿ ಕಂಡರೂ ಸಾಗುವಾನಿ. ಸಾಗುವಾನಿ ಸಸಿ ನೆಟ್ಟು ಬೆಳೆಸುವ ಪದ್ದತಿ ಬೆಳೆದು ಬಂದುದೇ ಕೇರಳದವರಿಂದ.
- ಸಾಗುವಾನಿ ಭಾರತ, ಮಯನ್ಮಾರ್( ಬರ್ಮಾ),ಲಾವೋಸ್ ಇಂಡೋನೇಶಿಯಾ, ಮತ್ತು ಥೈಲಾಂಡ್ ದೇಶಗಳ ಉಷ್ಣ ಪ್ರದೇಶದ ಕಾಡುಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತಿರುವ ಮರಮಟ್ಟು.
- ಸಾಗುವಾನಿಯ ವೈಜ್ಞಾನಿಕ ಹೆಸರು. grandis ಇದು ವರ್ಬಿನೇಸಿ. Verbenacea ಕುಟುಂಬಕ್ಕೆ ಸೇರಿದೆ.
- ಕರ್ನಾಟಕ, ಕೇರಳ ರಾಜ್ಯಗಳು ಸಾಗುವಾನಿ ಮರಗಳಿಗೆ ಹೆಸರುವಾಸಿಯಾದ ರಾಜ್ಯಗಳು.
- ಕರ್ನಾಟಕದ ಪಶ್ಚಿಮ ಘಟ್ಟ, ವ್ಯಾಪ್ತಿಯಲ್ಲಿ ಬರುವ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು ಜಿಲ್ಲೆಗಳಲ್ಲಿ ನೈಸರ್ಗಿಕವಾಗಿ ಸಾಗುವಾನಿ ಬೆಳೆಯುತ್ತದೆ.
ಈಗ ಮೈಸೂರು, ಧಾರವಾಡ, ತುಮಕೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ ಮತ್ತು ಬೆಳಗಾವಿ ಜಿಲ್ಲೆಗಳಲ್ಲೂ ಬೆಳೆಯಲಾಗುತ್ತಿದೆ. ಬಯಲು ಸೀಮೆಯ ತುಮಕೂರಿನ ಸಿದ್ದರಬೆಟ್ಟ, ರಾಮದೇವರ ಬೆಟ್ಟ, ತಿಮ್ಮಲಾಪುರ ಕಾಡು, ಬಳ್ಳಾರಿಯ ಸಂಡೂರು, ಗುಲ್ಬರ್ಗಾ ಜಿಲ್ಲೆಯ ಚೆಂಚೋಳಿಗಳಲ್ಲಿ ಇದು ನೈಸರ್ಗಿಕವಾಗಿ ಬೆಳೆದಿದೆ.
- ಇದಲ್ಲದೆ ಬೇರೆ ಬೇರೆ ಕಡೆ ರೈತರು ತಮ್ಮ ಹೊಲದ ಬದುಗಳಲ್ಲಿ ಬೆಳೆಸಿದ ಹಲವಾರು ಉದಾಹರಣೆಗಳಿವೆ.
- ನಮ್ಮ ದೇಶದಲ್ಲಿ ಕರ್ನಾಟಕ ಕೇರಳವಲ್ಲದೆ, ಮಹಾರಾಷ್ಟ್ರ, ಗೋವಾ, ಗುಜರಾತ್ , ಆಂದ್ರ ಪ್ರದೇಶ, ಮಧ್ಯಪ್ರದೇಶ, ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಲ ಅಸ್ಸಾ, ಅಂಡಮಾನ್, ತಮಿಳುನಾಡುಗಳಲ್ಲೂ ಈಗ ಸಾಗುವಾನಿ ಬೆಳೆಯಲಾಗುತ್ತಿದೆ.
ವೈವಿಧ್ಯತೆ:
- ನಮ್ಮ ದೇಶದ ತೇಗದಲ್ಲಿ ವೈವಿಧ್ಯತೆ ಹೆಚ್ಚು. ಸ್ಥಳೀಯವಾಗಿಯೇ ಭಿನ್ನ ಭಿನ್ನ ತಳಿಗಳಿರುತ್ತವೆ.
- ಆದರೆ ಬರ್ಮಾ ತೇಗದಲ್ಲಿ ( ಮಯನ್ಮಾರ್ ತೇಗ) ವೈವಿಧ್ಯತೆ ಅತೀ ಕಡಿಮೆ.
- ತೇಗವು ತೇವಾಂಶ ಹೆಚ್ಚು ಇರುವ ಕಾರಣ ಅಘಾಧ ಗಾತ್ರದಲ್ಲಿ ಬೆಳೆಯುತ್ತದೆ.
- ಆದರೂ ಮಯನ್ಮಾರ್ ತೇಗಕ್ಕೂ, ದಕ್ಷಿಣ ಭಾರತದ ತೇಗಕ್ಕೂ ಬಾಳ್ವಿಕೆಯಲ್ಲಿ ಅಂತಹ ವೆತ್ಯಾಸ ಇಲ್ಲ.
- ಅಂತರ ರಾಷ್ಟ್ರೀಯ ತೇಗದ ತಳಿ ಪ್ರಯೋಗ ತಾಕುಗಳಲ್ಲಿ ಭಾರತ ದೇಶದ ತೇಗ “ಕೊನ್ನ” ಸರ್ವೋತ್ತಮ ಎಂಬ ಶಿಫಾರಸು ಇದೆ.
ಉತ್ತರಕನ್ನಡದಲ್ಲಿ ‘ತೆಲಿ’ ಎಂಬ ಹೆಸರಿನ ತಳಿ ಬೇಗ ಬೆಳೆಯುತ್ತದೆ, ಮರದಲ್ಲಿ ಎಣ್ಣೆ ಅಂಶ ಹೆಚ್ಚು ಇದ್ದು, ಬಡಗಿ ಕೆಲಸಕ್ಕೆ ಉತ್ತಮ ಮತ್ತು ಗಟ್ಟಿ ಮರ.
- ತೇಗವನ್ನು ಒಣ ತೇಗ, ಮತ್ತು ತೇವ ತೇಗ ಎಂದು ಎರಡು ವರ್ಗೀಕರಣ ಮಾಡಲಾಗಿದೆ.
- ಹುಣಸೂರು, ಮೈಸೂರು ಸುತ್ತಮುತ್ತಲಿನ ತೇಗ ಒಣ ತೇಗ.
- ದಾಂಡೇಲಿ, ಶಿವಮೊಗ್ಗ, ದಕ್ಷಿಣ ಕನ್ನಡ ಕೇರಳದ್ದು ತೇವ ತೇಗ.
ಒಣ ತೇಗವನ್ನು ಜನ ಹೆಚ್ಚು ಇಷ್ಟ ಪಡುತ್ತಾರೆ. ಒಣ ತೇಗವನ್ನು ಬೇಗ ಬೆಳೆಸಲಿಕ್ಕೂ ಆಗುತ್ತದೆ. ತೇವ ತೇಗದಲ್ಲಿ ನೀರಿನ ಅಂಶ ಹೆಚ್ಚು ಇರುತ್ತದೆ. ಎಣ್ಣೆ ಅಂಶ ಕಡಿಮೆ ಇರುತ್ತದೆ.ನೀರಾವರಿ ಗೊಬ್ಬರ ಹಾಕಿ ಬೆಳೆದ ತೇಗವೂ ಸಹ ತೇವ ತೇಗದ ತರಹವೇ. ತೇವ ತೇಗದಲ್ಲಿ ವಿಶೇಷ ಗುಣಗಳು ಸ್ವಲ್ಪ ಕಡಿಮೆಯಾದರೂ ಸಹ ದಿಮ್ಮಿ ಮರಗಳಿಗಿಂತ ಉತ್ತಮವಾಗಿರುತ್ತವೆ.
- ನೀರಾವರಿಯಲ್ಲಿ ಬೆಳೆದ ತೇಗವನ್ನು ಕಡಿಯುವಾಗ ಒಂದು ವರ್ಷಕ್ಕೆ ಮುಂಚೆ ನೀರಾವರಿ ನಿಲ್ಲಿಸಬೇಕು.
- ಆಗ ಎಣ್ಣೆ ಅಂಶ ಶೇಖರಣೆಗೊಳ್ಳುತ್ತದೆ. ಮಳೆಗಾಲಕ್ಕೆ ಮುಂಚೆ ಕಡಿದರೆ ಮರ ಸೀಳಲಾರದು.
ಸಾಗುವಾನಿಯನ್ನು ಯಾವುದೇ ಕೆತ್ತನೆಗೆ ಬಳಸಬಹುದು. ಶತ ಶತಮಾನಗಳಿಂದ ತೇಗಕ್ಕೆ ಮಾನವ ಉತ್ಕೃಷ್ಟ ಮರಮಟ್ಟಿನ ಸ್ಥಾನವನ್ನು ಕೊಟ್ಟಿದ್ದಾನೆ. ಯಾವುದೋ ಗೊತ್ತುಗುರಿ ಇಲ್ಲದ ಮರಮಟ್ಟು ಬೆಳೆಸುವ ಬದಲಿಗೆ ಹೊಲದ ಬದು ಹಾಗೂ ಖಾಲಿ ಸ್ಥಳದಲ್ಲಿ ಸಾಗುವಾನಿ ಬೆಳೆಸಿ. ನಿವೃತ್ತಿ ಜೀವನಕ್ಕೆ ಆದಾರವಾಗಿ ಇದೇ ಸಾಕು.