ಮಣ್ಣಿನ pH ಸ್ಥಿತಿ ಅವಲಂಭಿಸಿ ಫಸಲು ಮತ್ತು ಆರೋಗ್ಯ.

ರಸಸಾರ pH ಸರಿ ಇರುವ ಮಣ್ಣು ಹೀಗಿರುತ್ತದೆ.

ಮಣ್ಣಿನ ಆರೋಗ್ಯ ಸ್ಥಿತಿಯನ್ನು ಅಳೆಯುವ ಮಾಪಕ pH (Potential of Hydrogen)  ಮೌಲ್ಯ. pH ಮೌಲ್ಯ ತಟಸ್ಥವಾಗಿದ್ದರೆ (ಸಮಸ್ಥಿತಿ)   ಅದು ಸಹನಾ ಸ್ಥಿತಿ ಯುಳ್ಳ ಮಣ್ಣು ಎನ್ನಿಸುತ್ತದೆ.   ಬೆಳೆ ಬೆಳೆಯುವ ಮಣ್ಣು  ಸಮಸ್ಥಿತಿಯಲ್ಲಿದ್ದರೆ ( nutral) ಅಲ್ಲಿ ಬೆಳೆಯುವ ಬೆಳೆಗೆ ನಾವು ಕೊಡುವ ಎಲ್ಲಾ ಪೋಷಕಗಳೂ ಸಮರ್ಪಕವಾಗಿ ದೊರೆತು  ಬೆಳೆಯಲ್ಲಿ ಫಸಲು ಉತ್ತಮವಾಗುತ್ತದೆ. ಮಣ್ಣಿನ ಆರೋಗ್ಯ ಸಹ ಉತ್ತಮವಾಗಿದ್ದು,  ರೋಗ ಕೀಟ ಬಾಧೆಯೂ ಕಡಿಮೆಯಾಗುತ್ತದೆ.

 • ಬಹುತೇಕ ನಾವೆಲ್ಲಾ ತಾಂಬೂಲ ತಿಂದು ಬಲ್ಲವರು. ತಾಂಬೂಲ  ಜಾಗಿಯುವಾಗ  ವೀಳ್ಯದೆಲೆ, ಸುಣ್ಣ ಮತ್ತು ಅಡಿಕೆ ಮೂಲವಸ್ತುಗಳು.
 • ಈ ಮೂರರ ಪ್ರಮಾಣ ಎಷ್ಟು ಬೇಕೋ  ಅಷ್ಟೇ ಇದ್ದರೆ  ಅದು ತಿನ್ನಲು ರುಚಿಯಾಗಿರುತ್ತದೆ.
 • ಬಾಯಿ ಕೆಂಪಗಾಗುತ್ತದೆ. ಒಂದು ವೇಳೆ ಸುಣ್ಣ ಹೆಚ್ಚಾದರೆ ಬಾಯಿ ಸುಡುತ್ತದೆ.
 • ಸುಣ್ಣ ಕಡಿಮೆಯಾದರೆ  ಬಾಯಿ ಹುಳಿ ಹುಳಿಯಾಗುತ್ತದೆ.ಸುಡುವ ಸ್ಥಿತಿಗೆ ಕ್ಷಾರ ಎಂತಲೂ, ಹುಳಿಯಾಗುವ ಸ್ಥಿತಿಗೆ ಆಮ್ಲೀಯ ಎಂತಲೂ , ಕೆಂಪಾಗಿ ರುಚಿಕಟ್ಟಾಗಿರುವ ಸ್ಥಿತಿಗೆ ಸಮಸ್ಥಿತಿ ಎಂತಲೂ ಕರೆಯಲಾಗುತ್ತದೆ.
 • ಮಣ್ಣು ತನ್ನ ಗುಣವನ್ನು ಸಮಸ್ಥಿತಿಯಲ್ಲಿ ಇಟ್ಟುಕೊಂಡಿದ್ದರೆ ಅದು ಎಲ್ಲಾ ಪೊಷಕಗಳನ್ನೂ ಬಳಸಿಕೊಳ್ಳುತ್ತದೆ.
 • ಒಂದು ವೇಳೆ ಆಮ್ಲೀಯ ಅಥವಾ ಕ್ಷಾರೀಯ ಆದಾಗ ಅದು ಬೇರೆ  ಬೇರೆ ತೊಂದರೆಗೆ ಒಳಗಾಗುತ್ತದೆ.
 •  ಮನುಷ್ಯ ಪ್ರಾಣಿಗಳಿಗೂ ಹಾಗೆಯೇ ದೇಹದ ರಸ ಸಾರ ಸ್ಥಿತಿ ತಟಸ್ಥ ಆಗಿದ್ದರೆ ರೋಗ ನಿರೋಧಕ ಶಕ್ತಿ  ಹೆಚ್ಚು ಇರುತ್ತದೆ.

pH ಮೌಲ್ಯ  ತಿಳಿಯುವುದು ಹೇಗೆ:

 • ಇದನ್ನು ತಿಳಿಯಲು ಪ್ರಯೋಗಾಲಯದಲ್ಲಿ ಇರುವ ವಿಧಾನವೇ ಬೇರೆ. ಸರಳವಾಗಿ ರೈತರು ತಿಳಿಯಬಹುದಾದ ವಿಧಾನವೇ ಬೇರೆ ಇರುತ್ತದೆ.
 • ಸರಳವಾಗಿ ಹೇಳಬೇಕೆಂದರೆ ಮಣ್ಣು ಬೇಸಿಗೆಯಲ್ಲಿ ತುಂಬಾ ಗಟ್ಟಿಯಾಗುವ ಸ್ಥಿತಿಯಲ್ಲಿದ್ದರೆ ಅದು ಹುಳಿ ಮಣ್ಣು ಎಂತಲೂ, ಸಡಿಲತೆಯಲ್ಲಿದ್ದರೆ ಅದು ತಟಸ್ಥ ಮಣ್ಣು ಎಂದೂ ಹೇಳಬಹುದು.
 • ಇದು ಸರಳ ಉದಾಹರಣೆ ಅಷ್ಟೇ. ಅಧಿಕ ಮಳೆಯಾಗುವ ಪ್ರದೇಶಗಳಲ್ಲಿ ಮಣ್ಣಿನಲ್ಲಿರುವ ಸುಣ್ಣ , ಮೆಗ್ನೀಶಿಯಂ ಹಾಗೂ ಇತರ ಪ್ರತ್ಯಾಮ್ಲಗಳು ಕರಗಿ ಹೋಗಿ ಮಣ್ಣು ಹುಳಿಯಾಗಿರುತ್ತವೆ.
 • ಇಲ್ಲೆಲ್ಲಾ ಬೇಸಿಗೆಯಲ್ಲಿ ಮಣ್ಣು ಗಟ್ಟಿಯಾಗುತ್ತದೆ. ಕಡಿಮೆ ಮಳೆಯಾಗುವ  ಪ್ರದೇಶಗಳಲ್ಲಿ ಮಣ್ಣು ಕ್ಷಾರೀಯವಾಗಿರುತ್ತದೆ.
 • ಇಲ್ಲಿ ವರ್ಷದ ಎಲ್ಲಾ ಸಮಯದಲ್ಲೂ ಮಣ್ಣು ಮೆದುವಾಗಿ ಇರುತ್ತದೆ.
 • ಯಾವ ಮಣ್ಣಿನಲ್ಲಿ ನೀರು ಚೆನ್ನಾಗಿ ಬಸಿದು ಹೋಗುತ್ತದೆಯೋ ಆ ಮಣ್ಣು ಹುಳಿ ಮಣ್ಣಾಗಿರುತ್ತದೆ.
 • ಈ ಮಣ್ಣಿಗೆ ನೀರು ಹಿಡಿದಿಟ್ಟುಕೊಳ್ಳುವ ಶಕ್ತಿ ಇರುವುದಿಲ್ಲ.
 • ಕೆಲವು ಕಡೆ ಉತ್ತರ ಕರ್ನಾಟಕದಲ್ಲಿ  ಒಂದು ಮಳೆ ಬಂದರೆ ವಾರ ತನಕವೂ ನೀರು ನೆಲದ ಮೇಲೆಯೆ ಇರುತ್ತದೆ.
 • ಇಳಿಯುವುದೇ ಇಲ್ಲ. ಅಂತಹ ಮಣ್ಣು ಕ್ಷಾರ ಮಣ್ಣು ಆಗಿರುತ್ತದೆ. ಇದಕ್ಕೆ  ನೀರನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ  ಅಧಿಕ ಇರುತ್ತದೆ.

ಸಾಮಾನ್ಯವಾಗಿ ಮಣ್ಣಿನ  pH  4 ರಿಂದ 10 ತನಕ ಇರುತ್ತದೆ. ಇದರ ಒಟ್ಟಾರೆ ಮೌಲ್ಯ 1 ರಿಂದ 14 ತನಕ. ಇದು 7 ರಲ್ಲಿ ಇದ್ದರೆ ಅದು ಉತ್ತಮ ಸಹನಾ ಸ್ಥಿತಿಯೂ , 6-7 ರ ಆಸು ಪಾಸಿನಲ್ಲಿದ್ದರೆ ಸ್ವಲ್ಪ ಮಟ್ಟಿಗೆ ಧಕ್ಕೆ ಸಹನೆ ತಡೆಯುವ ಶಕ್ತಿಯನ್ನು ಹೊಂದಿರುತ್ತದೆ. ಅದರೆ 6 ರಿಂದ ಕೆಳಕ್ಕೆ ಬಂದರೆ  ಆಮ್ಲೀಯ ವೆಂದೂ 8 ರಿಂದ  ಮೇಲೆ ಹೋದರೆ ಕ್ಷಾರೀಯ ಅಥವಾ ಸಹನಾ ಶಕ್ತಿಗಿಂತ ಹೆಚ್ಚು ಎಂದು ಹೇಳಲಾಗುತ್ತದೆ.

ಹುಳಿ – ಕ್ಷಾರ ಮಣ್ಣಿನ ಫಲ:

 • ಹುಳಿ ಮಣ್ಣಿನಲ್ಲಿ ಕೆಲವು ಪೋಷಕಾಂಶಗಳು ಬೆಳೆಗಳಿಗೆ ಲಭ್ಯವಾಗುವುದಿಲ್ಲ.
 • ಅವು ಬಂಧಿಯಾಗಿರುತ್ತದೆ. ಕ್ಷಾರ ಮಣ್ಣಿನಲ್ಲೂ ಕೆಲವು ಪೋಷಕಗಳು ಕೆಲಸ ಮಾಡುವುದಿಲ್ಲ.
 • ಹುಳಿ ಮಣ್ಣಿನಲ್ಲಿ ಯಾವಾಗಲೂ ಸುಣ್ಣ ಮತ್ತು ಮೆಗ್ನೀಶಿಯಂ ಕೊರತೆ ಇರುತ್ತದೆ.
 • ಕ್ಷಾರ ಮಣ್ಣಿನಲ್ಲಿ ಇದು ಹೆಚ್ಚು ಇರುತ್ತದೆ.
 • ಆಮ್ಲೀಯ ಸ್ಥಿತಿಯಲ್ಲಿ ಲಘು ಪೋಷಕಾಂಶಗಳಾದ ಅಲ್ಯೂಮೀನಿಯಂ ಮತ್ತು ಕಬ್ಬಿಣ ದ್ರವರೂಪಕ್ಕೆ ಬಂದು ಪ್ರಮಾಣ ಹೆಚ್ಚಾಗಿ ಬೆಳೆಗಳಿಗೆ ವಿಷವಾಗಿ ಪರಿಣಮಿಸುತ್ತದೆ.
 • ತಟಸ್ಥ ಸ್ಥಿತಿಗೆ ಬಂದಂತೆ ಇದರ ಲಭ್ಯತೆ ಕಡಿಮೆಯಾಗುತ್ತದೆ.
 •  ಇದನ್ನು ಸರಿಪಡಿಸಿಕೊಂಡು ಪೋಷಕಾಂಶಗಳನ್ನು ಕೊಟ್ಟರೆ  ಸಸ್ಯಗಳು ಅದನ್ನು ಸರಿಯಾಗಿ ಬಳಕೆ ಮಾಡಿಕೊಳ್ಳುತ್ತವೆ.
 • ಮಣ್ಣಿನ ಈ ಸ್ಥಿತಿಗತಿಗಳು ಆಗಾಗ ಅಲ್ಪ ಸ್ವಲ್ಪ ಬದಲಾವಣೆಯೂ ಆಗುತ್ತದೆ.

 ಪೋಷಕಗಳು ಮತ್ತು ರಸಸಾರ:

 • ಮಣ್ಣಿನ pH 5-7  ರ ಆಸುಪಾಸಿನಲ್ಲಿದ್ದರೆ ಬೋರಾನಿನ ಲಭ್ಯತೆ ಉತ್ತಮವಾಗಿರುತ್ತದೆ.
 • ಸುಣ್ಣ  ಹಾಕಿದಾಗ ಬೋರಾನಿನ ಲಭ್ಯತೆಗೆ  ತೊಂದರೆ ಉಂಟಾಗುತ್ತದೆ.
 • ಮಣ್ಣು ಆಮ್ಲೀಯವಾಗಿದ್ದಾಗ ರಂಜಕದ ಕರಗುವಿಕೆಗೆ ಅಡ್ಡಿಯಾಗಿ ಅದು ಸಸ್ಯಗಳಿಗೆ ಲಭ್ಯವಾಗುವುದಿಲ್ಲ.
 • ಮಣ್ಣು ತಟಸ್ಥವಾದಾಗ ಸರಿಯಾಗಿ ಲಭ್ಯವಾಗುತ್ತದೆ.
 • ಪಿ ಎಚ್ 9 ಕ್ಕಿಂತ ಹೆಚ್ಚಾದಾಗಲೂ ರಂಜಕದ ಲಭ್ಯತೆ ಹೆಚ್ಚುತ್ತದೆ.
 • ಹುಳಿ ಮಣ್ಣಿಗೆ ಶಿಲಾ ರಂಜಕ ಬಳಸಿ ಎನ್ನುವುದಕ್ಕೆ ಕಾರಣ, ಮಣ್ಣಿನ ಆಮ್ಲಗಳು ಈ ಶಿಲಾ ರಂಜಕವನ್ನು ಕರಗಿಸಿ ಕೊಡುತ್ತವೆ.
 • .ಕ್ಷಾರೀಯ ಮಣ್ಣಿನಲ್ಲಿ ಸಿಂಗಲ್ ಸೂಪರ್ ಫೋಸ್ಫೇಟ್,DAP  ಮುಂತಾದ ರಂಜಕ ಗೊಬ್ಬರಗಳು ಹೆಚ್ಚು ಲಭ್ಯವಾಗುತ್ತದೆ.
 • ಮಣ್ಣಿನ pH  ಮೌಲ್ಯ 7.5  8.5  ತನಕ ಇದ್ದಾಗ ಪೊಟ್ಯಾಶಿಯಂ ಲಭ್ಯತೆ ಸಮರ್ಪಕವಾಗಿರುವುದಿಲ್ಲ. 8.5 ರಿಂದ ಹೆಚ್ಚಾದಾಗ ಲಭ್ಯತೆ ಹೆಚ್ಚುತ್ತದೆ.
 • ಮಣ್ಣಿನ pH ಮೌಲ್ಯ 5.5 ರಿಂದ ಕಡಿಮೆಯಾದರೆ ಸೂಕ್ಷ್ಮಾಣು ಜೀವಿಗಳು(ಬ್ಯಾಕ್ಟೀರಿಯಾಗಳು ಅಕ್ಟಿನೊಮೈಸಿಟುಗಳು) ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ.
 • 6-9 ತನಕ ಇದರ ಚಟುವಟಿಕೆ ಹೆಚ್ಚಿ ಫಲ ಕೊಡುತ್ತವೆ.
 • ಶಿಲೀಂದ್ರಗಳು ಹೆಚ್ಚಾಗಿ ಆಮ್ಲ ಮಣ್ಣಿನಲ್ಲಿ ಚೆನ್ನಾಗಿ ಕಾರ್ಯ ನಿರ್ವಹಿಸುತ್ತದೆ.
 • ಸಾರಜನಕದ ಲಭ್ಯತೆಯು ಮಣ್ಣಿನ pH  ಮೌಲ್ಯ 5.5 ಕ್ಕಿಂತ ಹೆಚ್ಚು ಇದ್ದಾಗ ಚೆನ್ನಾಗಿರುತ್ತದೆ.
 • ಇಂತಹ ಮಣ್ಣಿನಲ್ಲಿ ದ್ವಿದಳ ಸಸ್ಯಗಳು ಸಾರಜನಕ ಸ್ಥಿರೀಕರಣವನ್ನು ಮಾಡಿಕೊಡುತ್ತವೆ.
 • ಹಾಗೆಂದು ಶಿಲೀಂದ್ರಗಳು ಈ ಕಾರ್ಯವನ್ನು ನೆರವೇರಿಸುವುದರಿಂದ ಕಡಿಮೆ ಪಿ ಎಚ್ ನಲ್ಲೂ ಅದು ನಿಧಾನವಾಗಿ ಲಭ್ಯವಾಗುತ್ತದೆ.
 •  ಗಂಧಕ pH  ವ್ಯತ್ಯಾಸವಾದಾಗಲೂ ಕಾರ್ಯನಿರ್ವಹಿಸುತ್ತದೆ.

ಒಟ್ಟಿನಲ್ಲಿ pH 6-7.5  ರ ಸನಿಹದಲ್ಲಿದ್ದಾಗ ಮಣ್ಣು ಆರೋಗ್ಯವಾಗಿದ್ದು, ಎಲ್ಲಾ ದರ ಬೌತಿಕ, ಜೈವಿಕ ಮತ್ತು ರಾಸಾಯನಿಕ ಕ್ರಿಯೆಗಳು ಹೈತಕರವಾಗಿ ನಡೆಯುತ್ತವೆ. ರೈತರು ಮಣ್ಣಿನ pH ವಿಚಾರದಲ್ಲಿ ಸ್ವಲ್ಪ ಹೆಚ್ಚು  ಗಮನ ಹರಿಸಿದರೆ ಕೃಷಿ ಉತ್ಪಾದನೆ  ಹೆಚ್ಚು ಮಾಡಿ ಲಾಭ ಮಾಡಿಕೊಳ್ಳಬಹುದು.

Leave a Reply

Your email address will not be published. Required fields are marked *

error: Content is protected !!