ತರಕಾರಿ ಬೆಳೆಗಳೆಂದರೆ ಅವು ತಕ್ಷಣ ಕೊಯಿದು, ತಕ್ಷಣ ತಿನ್ನುವ ವಸ್ತುಗಳಾಗಿದ್ದು, ಇದಕ್ಕೆ ವಿಷ ರಾಸಾಯನಿಕ ಉಳಿಕೆಗಳಿರುವ ಯಾವುದೇ ಸಸ್ಯ ಸಂರಕ್ಷಕಗಳನ್ನು ಬಳಸುವುದು ಸೂಕ್ತವಲ್ಲ.
ತರಕಾರಿಗಳಿಗೆ ರಾಸಾಯನಿಕ ವಿಷ ರಾಸಾಯನಿಕಗಳನ್ನು ಬಳಸಬಾರದು ನಿಜ. ಅದರೆ ಬೆಳೆದ ಬೆಳೆಯನ್ನು ಉಳಿಸಿಕೊಳ್ಳಲು ಏನು ಮಾಡಬೇಕು? ಹೂಡಿದ ಬಂಡವಾಳಕ್ಕೆ ಪ್ರತಿಫಲವನ್ನು ಪಡೆಯಬೇಡವೇ? ಇದೆಲ್ಲಾ ಸಹಜವಾಗಿ ಉದ್ಭವಿಸುವ ಸಮಸ್ಯೆಗಳು. ಇದೆಲ್ಲಾ ನಿಜ. ವಿಷ ರಾಸಾಯನಿಕಗಳಿಲ್ಲದೆ ಹೇಗೆ ಕೃಷಿ ಮಾಡುವುದು ಇದು ಹೇಗೆ ಮಿತವ್ಯಯಿಯಾಗುತ್ತದೆ, ಎಂಬ ಕುರಿತಾಗಿ ಇಲ್ಲಿದೆ ಕೆಲವು ಅವಶ್ಯ ಮಾಹಿತಿಗಳು.
- ಇದು ಸುರಕ್ಷಿತ, ಸಾವಯವ, ಎಂದು ಹಲವರು ಹಲವು ಉತ್ಪನ್ನಗಳನ್ನು ಮಾರಾಟ ಮಾಡುತ್ತಾರೆ.
- ಯಾರಿಗೂ ಅದರಲ್ಲಿ ಪ್ರಯೋಗ ಮಾಡಿಕೊಂಡು ಕುಳಿತುಕೊಳ್ಳುವ ತಾಳ್ಮೆ ಇರುವುದಿಲ್ಲ.
- ಜೊತೆಗೆ ಅವೆಲ್ಲಾ ವಿಷ ರಾಸಾಯನಿಕಗಳಿಗಿಂತ ದುಬಾರಿಯೂ ಆಗಿರುತ್ತದೆ.
- ಯಾವುದೇ ಇದ್ದರೂ ಅದು ಭಾರೀ ದುಬಾರಿ ಆಗಬಾರದು.
- ಅಳವಳಡಿಸಿಕೊಳ್ಳಲು ಸುಲಭವಾಗಬೇಕು. ಈ ಉತ್ಪನ್ನಕ್ಕಾಗಿ ಅಲ್ಲಲ್ಲಿ ಅಲೆಯುವ ಪ್ರಮೇಯವೂ ಇರಬಾರದು.
- ಇಂತಹ ಕೆಲವು ಸರಳ ಸಸ್ಯ ಸಂರಕ್ಷಗಳ ವಿವರ ಇಲ್ಲಿದೆ.
ಕೀಟ ನಿಯಂತ್ರಣ:
- ತರಕಾರಿ ಬೆಳೆಸುತ್ತೀರಾ? ಅದು ಯಾವ ತರಕಾರಿ. ಅದಕ್ಕೆ ಬರುವ ಮುಖ್ಯ ಕೀಟಗಳು ಯಾವುವು.
- ಯಾವ ಹಂತದಲ್ಲಿ ಅವು ಧಾಳಿ ಮಾಡುತ್ತವೆ ಎಂಬುದು ಪ್ರಥಮಥ ನಿಮ್ಮ ಗಮನದಲ್ಲಿ ಇರಲಿ.
- ಇದು ನೀವು ಯಾವ ಸಮಯದಲ್ಲಿ ಅದಕ್ಕೆ ಸೂಕ್ತ ಕ್ರಮ ಕೈಗೊಳ್ಳಬಹುದು ಎಂಬುದಕ್ಕೆ ದಿಕ್ಸೂಚಿಯಾಗಿರುತ್ತದೆ.
- ಸಾಮಾನ್ಯವಾಗಿ ತರಕಾರಿಗಳಿಗೆ ಬರುವ ಕೀಟಗಳು ಎಫಿಡ್ಸ್ (Aphids) ಹಣ್ಣು ನೊಣ, ಕಾಯಿ ಕೊರಕ, ಎಲೆ ತಿನ್ನುವ ಹುಳಗಳು ಮತ್ತು ಎಲೆ ಮತ್ತು ಕಾಯಿಯನ್ನು ಮುರುಟುವಂತೆ ಮಾಡುವ ಹೇನು (Mite) ಗಳು.
- ಎಲೆ ಹೆಚ್ಚು ಬಿಡುವಾಗ ಎಲೆ ತಿನ್ನುವ ಹುಳ ಬರುತ್ತದೆ. ಆಗಲೇ ನುಶಿಯೂ ಬರುತ್ತದೆ.
- ಕಾಯಿಗಳಾಗುವಾಗ ಕಾಯಿ ಕೊರಕ ಜಾಸ್ತಿ. ಕಾಯಿ ಬಲಿಯುವಾಗ ಹಣ್ಣು ನೊಣ ಜಾಸ್ತಿ.
- ಇದೆಲ್ಲಾ ರೈತರಿಗೆ ತಿಳಿದಿರಬೇಕಾದ ಸಂಗತಿ.
ಹುಳಗಳ ನಿಯಂತ್ರಣ:
- ಎಲೆ ತಿನ್ನುವ ಹುಳಗಳು ಸಾಮಾನ್ಯವಾಗಿ ಸಸಿ ಚಿಗುರಿ ಬೆಳೆಯುವ ಸಮಯದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ.
- ಬೀಜ ಬಿತ್ತಿ ಸಸಿ ಬೆಳವಣಿಗೆ ಆಗುವಾಗ ಈ ಬಗ್ಗೆ ಜಾಗರೂಕರಾಗಿರಬೇಕು.
- ಈ ಹಂತದಲ್ಲಿ ಪತಂಗಗಳು ನಿಮ್ಮ ಹೊಲದ ಸುತ್ತ ಹಾರಾಡುವುದನ್ನು ಗಮನಿಸಿ.
- ಅವು ಎಲೆಯಲ್ಲಿ ಮೊಟ್ಟೆ ಇಡುತ್ತದೆ. ಮೊಟ್ಟೆ ಇಟ್ಟ ಎಲೆಯ ಭಾಗ ಮಡಚಿಕೊಂಡು ಇರುತ್ತದೆ.
- ಅದು ತುದಿ ಭಾಗದ ಎಲೆಗಳಲ್ಲೇ ಹೆಚ್ಚಾಗಿ ಮೊಟ್ಟೆ ಇಡುವ ಕಾರಣ ತರಕಾರಿ ಹೊಲದಲ್ಲಿ ಓಡಾಡುವಾಗ ಎಲೆ ಮಡಚಿದ್ದು ಕಂಡು ಬಂದರೆ ಅದನ್ನು ತಕ್ಷಣ ತೆಗೆದು ಕಾಲಿನಲ್ಲಿ ಹಿಚುಕಿ ಹಾಕಿದರೆ ಮರಿ ಮತ್ತು ಮೊಟ್ಟೆ ಹಂತದಲ್ಲಿ ಹುಳಗಳ ಸಂತತಿ ಕಡಿಮೆಯಾಗುತ್ತದೆ.
- ಚಿಟ್ಟೆಗಳು (Butterflies) ಬೇರೆ, ಪತಂಗಗಳು(Moth) ಬೇರೆ. ಚಿಟ್ಟೆಗಳ ರೆಕ್ಕೆ ಕೂತಾಗ ಮಡಚಿ ಇರುತ್ತವೆ.
- ಚಿಟ್ಟೆಗಳದ್ದು ಹಗಲು ಹೊತ್ತು ಚಟುವಟಿಕೆ. ಪತಂಗಗಳು ರಾತ್ರೆ ಹೊತ್ತು ಚಟುವಟಿಕೆ.
- ಅವುಗಳ ರೆಕ್ಕೆಯಲ್ಲಿ ಧೂಳು ಹಾರುತ್ತದೆ. ರೆಕ್ಕೆ ಬಿಡಿಸಿ ಕುಳಿತುಕೊಳ್ಳುತ್ತವೆ.
- ಎರಡೂ ಸಂತಾನಾಭಿವೃದ್ದಿ ಮಾಡುವುದು ಎಲೆಗಳಲ್ಲಿ ಮೊಟ್ಟೆ ಇಟ್ಟು.
- ಎರಡೂ ಲಾರ್ವೆ( Larvae) ಹಂತದಲ್ಲಿ ಎಲೆಯ ಭಕ್ಷಕಗಳೇ.
- ಇವುಗಳು ನೀವು ಬೆಳೆದ ತರಕಾರಿ ಹೊಲದಲ್ಲಿ ಗುಂಪು ಗುಂಪಾಗಿ (2-4 ಸಂಖ್ಯೆಯಲ್ಲಿ) ಹಾರಾಡುತ್ತಿದ್ದರೆ ಅದು ಜೋಡಿಯಾಗುವ ಸೂಚನೆ.
ಹಾತೆಗಳು, ನುಶಿಗಳ ನಿಯಂತ್ರಣ:
- ತರಕಾರಿ ಬೆಳೆಯುವವರು ತಪ್ಪದೆ ತಮ್ಮ ಬೆಳೆ ಸ್ಥಳದಲ್ಲಿ ಅಲ್ಲಲ್ಲಿ (ಸಂಖ್ಯೆ ಹೆಚ್ಚಾದರೆ ಅನುಕೂಲ) ಹಳದಿ ಮತ್ತು ನೀಲಿ ಅಂಟಿನ ಹಾಳೆಗಳನ್ನು ನೇತಾಡಿಸಿರಿ.
- ಇದು ಸಸಿ ಬೆಳೆಯುವ ಸಮಯದಲ್ಲೇ ಪ್ರಾರಂಭಿಸಿರಿ. ಇದಕ್ಕೆ ಪತಂಗ, ನುಶಿಗಳು ಆಕರ್ಷಣೆಯಾಗುತ್ತದೆ.
- ಅವು ಅಂಟಿಕೊಂಡು ಮುಂದೆ ಹೋಗಲಾರದೆ ಸಾಯುತ್ತವೆ.
- ಇದಕ್ಕೆ ಭಾರೀ ಬೆಲೆ ಇಲ್ಲ. ಸುಮಾರು (150-250 ರೂ. ಗಳಿಗೆ 10 ಅಂಟಿನ ಹಾಳೆಗಳು ಲಭ್ಯ. ಆನ್ಲೈನ್ ನಲ್ಲೂ ತರಿಸಿಕೊಳ್ಳಬಹುದು.
ಕೃಷಿಕರ ಮನೆಗಳಲ್ಲಿ ಬಿಸಿ ನೀರು ಕಾಯಿಸುವ ವ್ಯವಸ್ಥೆ ಮಾಯವಾಗಿ ಈಗ ಸೋಲಾರ್, ಗ್ಯಾಸ್ ಹೀಟರ್ ಆದ ಕಾರಣದಿಂದ ಕೀಟಗಳ ಉಪಟಳ ಜಾಸ್ತಿಯಾಗಿದೆ ಎಂದೇ ಹೇಳಬಹುದು. ನಿರ್ದಿಷ್ಟವಾಗಿ ಇಂತಹ ಕೀಟಗಳೇ ನಿಯಂತ್ರಣ ಆಗುತ್ತವೆ ಎಂದಲ್ಲವಾದರೂ ಮರ ಸುಟ್ಟ ಬೂದಿಯನ್ನು ಎಲೆಗಳ ಮೇಲೆ ಚಿಮುಕಿಸುವುದು. ಇದನ್ನು ಚಿಮುಕಿಸಿದಾಗ ಕೀಟಗಳಿಗೆ ಅದು ಅಡ್ಡಿಯಾಗುತ್ತದೆ. ಕಾರಣ ಎಲೆಯಲ್ಲಿ ಇದು ಲೇಪನವಾದಾಗ ಯಾವುದೋ ಒಂದು ಹೊಸ ವಸ್ತು ಇದ್ದಂತೆ ಭಾಸವಾಗಿ ಅವು ದೂರವಾಗುತ್ತದೆ.
- ಇದನ್ನು ವಾರಕ್ಕೊಂದಾವರ್ತಿ ಮಾಡಬೇಕು. ಹಳತಾದ ಬೂದಿಯನ್ನೇ ಬಳಕೆ ಮಾಡಬೇಕು.
- ಬೂದಿ ಕ್ಷಾರಿಯ ಗುಣ ಕೂಡ ಹೊಂದಿದೆ. ಇದು ಕೂಡ ಒಂದು ಕಾರಣ.
- ತರಕಾರಿ ಯಾವುದೇ ಇರಲಿ ಹೂ ಬರುವ ಸಮಯಕ್ಕೆ ಸರಿಯಾಗಿ ವಿಸ್ತೀರ್ಣ ಅವಲಂಭಿಸಿ ಹಣ್ಣು ನೊಣದ ಟ್ರಾಪುಗಳನ್ನು ನೇತಾಡಿಸಬೇಕು.
- ಎಕ್ರೆಗೆ 5-10 ಸಂಖ್ಯೆಯಲ್ಲಿ ನೇತಾಡಿಸಬೇಕು. ಹೂ ಬರುವಾಗ ನೇತಾಡಿಸಿದರೆ ಪ್ರಯೋಜನ.
- ಮಿತವ್ಯಯದಲ್ಲಿ IIHR ತಯಾರಿಕೆಯ ಟ್ರಾಪುಗಳನ್ನು ಬಳಸಬಹುದು.
- ಸಣ್ಣ ಪ್ರಮಾಣದ ಬೆಳೆಗಾರರು ಮಳೆ ಇಲ್ಲದಾಗ ತರಕಾರಿ ಅದು ಹೀರೆ, ಮುಳ್ಳೂ ಸೌತೆ, ಹಾಗಲ, ಪಡುವಲ, ಬೆಂಡೆ ಇತ್ಯಾದಿ ಬೆಳೆಯುವವರು ಕಾಯಿಗಳಿಗೆ ಕಾಗದ ಇಲ್ಲವೇ ಪ್ಲಾಸ್ಟಿಕ್ ಅನ್ನು ಸುತ್ತುವುದರಿಂದ ಬೆಳೆಗೆ ಕೀಟಗಳಿಂದ ರಕ್ಷಣೆ ಸಿಗುತ್ತದೆ.ಸೌತೆ, ಮುಳ್ಳು ಸೌತೆ, ಕುಂಬಳ ಸಿಹಿ ಕುಂಬಳ ಬೆಳೆಯುವಾಗ ನೆಲಕ್ಕೆ ವೀಡ್ ಮ್ಯಾಟ್( weed mat) ಹಾಕಿ ಬೆಳೆದರೆ 50% ರೋಗ ಕಡಿಮೆ.
ಮುಖ್ಯವಾಗಿ ಯಾವುದೇ ಬೆಳೆ ಬೆಳೆಯುವಾಗ ಸುತ್ತಲೂ ಬಲೆ ಬೆಳೆಗಳನ್ನು ಬೆಳೆಸುವುದು ಅವಶ್ಯಕವಾಗಿ ಮಾಡಬೇಕು. ಇದು ಲಾಭಕ್ಕಲ್ಲದಿದ್ದರೂ ಇದರಿಂದ ಕೀಟಗಳ ಹಾವಳಿ ಮುಖ್ಯ ಬೆಳೆಗೆ ತಪ್ಪುತ್ತದೆ.
- ತರಕಾರಿ ಬೆಳೆಯುವಾಗ ಸುತ್ತಮುತ್ತ ಕಳೆ ಬೆಳೆಯದಂತೆ ನೋಡಿಕೊಳ್ಳಬೇಕು.
- ಕಳೆಗಳಲ್ಲಿ ಸಂತಾನಾಭಿವೃದ್ದಿಯಾಗಿ ಬೆಳೆಗೆ ಹಾನಿ ಮಾಡುವ ಬಂಬು ಕೀಟವೇ ಮುಂತಾದವುಗಳಿಗೆ ಆಶ್ರಯ ಇಲ್ಲದಾಗಬೇಕು.
- ಕೆಲವೊಂದು ಸಮಯದಲ್ಲಿ ಎಲೆ ಮುರುಟುವಿಕೆ ಮುಂತಾದ ಹೇನುಗಳ ಕಾಟ ಉಂಟಾದಲ್ಲಿ ಸುರಕ್ಷಿತ ಕೀಟ ನಾಶಕ ವೆಟ್ಟೆಬಲ್ ಸಲ್ಫರ್ (Wetteble sulpher) ಸಿಂಪಡಿಸಬಹುದು.
- ಇದನ್ನು ಸಿಂಪಡಿಸಿದ ಮರುದಿನವೇ ಅದನ್ನು ಬಳಕೆ ಮಾಡಬಹುದು.
ರೋಗ ನಿರ್ವಹಣೆ:
- ರೋಗಗಳು ಹೆಚ್ಚಾಗಿ ಬರುವುದು ಮಣ್ಣಿನ ಸಿಡಿತದಿಂದ.
- ಮಣ್ಣು ಸಿಡಿತ ಎಲೆ- ಕಾಯಿಯ ಮೇಲೆ ಆದಾಗ ಅಲ್ಲಿ ರೋಗಾಣುಗಳ ಪ್ರವೇಶ ಆಗುತ್ತದೆ.
- ಇದನ್ನು ತಡೆಯಲು ನೆಲಕ್ಕೆ ಪಾಲಿಥೀನ್ ಶೀಟು ಹೊದಿಸಬೇಕು.
- ಸಣ್ಣ ಸಣ್ಣ ಬೆಳೆಗಾರರು ಪ್ಲಾಸ್ಟಿಕ್ ಗೋಣಿ ಚೀಲವನ್ನು ಹೊದಿಸುವುದರಿಂದ ಮಣ್ಣು ಸಿಡಿತ ತಪ್ಪುತ್ತದೆ.
- ಕಳೆ ನಿಯಂತ್ರಣವೂ ಆಗುತ್ತದೆ.
ಯಾವಾಗಲೂ ಕೊಳೆತ ಯಾವುದೇ ಎಲೆ, ಕಾಯಿಯನ್ನು ಅಲ್ಲೇ ಎಸೆಯಬಾರದು.ಎಲೆ, ಕಾಯಿ ಸಸಿ ಬುಡ ಕೊಳೆಯುವ ಸೂಚನೆ ಕಂಡು ಬಂದರೆ ಪ್ರಾರಂಭದಲ್ಲೇ ಅದನ್ನು ತೆಗೆದು ಸುಡಬೇಕು. ಆಗ ಹರಡುವಿಕೆ ನಿಲ್ಲುತ್ತದೆ. ನೀರು ಹೆಚ್ಚಾಗಿ ಕೊಡಬಾರದು.ತರಕಾರಿ ಬೆಳೆಯುವ ನೆಲದಲ್ಲಿ ಬಹಳ ಸ್ವಚ್ಚತೆ ಇರಬೇಕು. ಬಿದ್ದ ಎಲೆ, ಹಾಳಾದ ಫಲ ಎಲ್ಲವನ್ನೂ ಅಲ್ಲಿ ಉಳಿಸದೆ ದೂರ ಹಾಕಬೇಕು. ಮಳೆಗಾಲದಲ್ಲಿ ನೀರು ನಿಲ್ಲಬಾರದು.
- ಮಾನವ ಮೂತ್ರವನ್ನು ಬೆಳೆಗಳಿಗೆ ಸ್ವಲ್ಪ ದ್ರವೀಕರಿಸಿ ಕೊಡುವುದರಿಂದ ಸ್ವಲ್ಪ ಮಟ್ಟಿಗೆ ರೋಗಗಳು ಕಡಿಮೆಯಾಗುತ್ತದೆ.
- ಹಿಂದಿನವರು ಕೀಟನಾಶಕ ಇಲ್ಲದಾಗ ಇಂತಹ ಕ್ರಮಗಳನ್ನೆ ಅನುಸರಿಸಿ ಉತ್ತಮ ರೀತಿಯಲ್ಲಿ ಬೆಳೆ ಬೆಳೆಯುತ್ತಿದ್ದರು.
- ಕೀಟ ನಾಶಕ – ರೋಗ ನಾಶಕಗಳನ್ನು ಕೆಲವು ಸಮಯ ಬಳಸದೆ ಇದ್ದರೆ ಅಲ್ಲಿ ನೈಸರ್ಗಿಕ ಕೀಟ ಭಕ್ಷಕಗಳು natural predators ಹೆಚ್ಚುತ್ತವೆ.
- ಸಾವಯವ ಎಂದು ಬರೇ ಕೊಟ್ಟಿಗೆ ಗೊಬ್ಬರವನ್ನು ಮಾತ್ರ ಕೊಡುವುದಲ್ಲ. ಜೊತೆಗೆ ಪೊಟ್ಯಾಶ್ ಸತ್ವ ಕೊಡುವ ಬೂದಿಯ ಬಳಕೆ ಮಾಡಲೇ ಬೇಕು.
- ಕೊಟ್ಟಿಗೆ ಗೊಬ್ಬರ ಒಂದನ್ನೇ ಕೊಟ್ಟರೆ ಕೀಟ ಸಮಸ್ಯೆ ಹೆಚ್ಚು.
- ಅದು ದಷ್ಟ ಪುಷ್ಟವಾಗಿ ಬೆಳೆದ್ದಾಗ ಕೀಟಗಳಿಗೆ ಅದು ಪ್ರಿಯವಾಗುತ್ತದೆ.
- ಮೂತ್ರ ಮತ್ತು ಬೂದಿಯ ಸಮ್ಮಿಶ್ರಣ ಬೆಳೆಗಳಲ್ಲಿ ಹೂವು ಹೆಚ್ಚಿಸುತ್ತದೆ.
- ಸಸ್ಯವನ್ನು ರೋಗ ಮುಕ್ತವಾಗಿ ಬೆಳೆಸುತ್ತದೆ.
ತರಕಾರಿ ಬೆಳೆಸುವವರು ಸಾಧ್ಯವಾದಶ್ಟು ಕೀಟನಾಶಕದ ಬಳಕೆ ಕಡಿಮೆ ಮಾಡಬೇಕು. ಯಾಕೆಂದರೆ ಸಿಂಪಡಿಸುವ ಕೃಷಿಕರು ಇದರ ಮೊದಲ ಫಲಾನುಭವಿಗಳು. ಬಳಕೆದಾರರು ಅದನ್ನು ತೊಳೆದು , ಬೇಯಿಸಿ ತಿನ್ನುತ್ತಾರೆ.ಆಗ ಅದರ ಉಳಿಕೆ ಕಡಿಮೆಯಾಗಬಹುದು. ಆದರೆ ಸಿಂಪಡಿಸುವವರು ನೇರವಾಗಿ ಅದರ ವಾಸನೆಯನ್ನು ಆಘ್ರಾಣಿಸುವರು. ಮೈ ಕೈಗೆ ತಗಲಿಸಿಕೊಳ್ಳುವವರು. ಹೆಚ್ಚಿನ ಹಾನಿ ನಮಗೇ ಆದ ಕಾರಣ ಸಾಧ್ಯವಾದಷ್ಟೂ ಅದರ ಬಳಕೆ ಕಡಿಮೆ ಮಾಡುವುದು ಶ್ರೇಯಸ್ಕರ.