ತೆಂಗಿನ ಸಸಿಗಳಲ್ಲಿ ಗಿಡ್ದ, ಎತ್ತರದ ತಳಿಗಳು ಎಂಬ ಎರಡು ಬಗೆ. ಗಿಡ್ಡ ತಳಿಗಳು ನಾಟಿ ಮಾಡಿ ಮೂರು ವರ್ಷಕ್ಕೆ ಹೂ ಗೊಂಚಲು ಬಿಟ್ಟರೆ ಎತ್ತರದ ತಳಿ ನಾಟಿ ಮಾಡಿ 5 ವರ್ಷಕ್ಕೆ ಹೂಗೊಂಚಲು ಬಿಡುವುದು ವಾಡಿಕೆ.
- ಕೆಲವೊಮ್ಮೆ ಇದು ತಡವಾಗಬಹುದು, ಬೇಗವೂ ಆಗಬಹುದು.
- ಆದರೆ ಕೆಲವು ಮರಗಳು ತಮ್ಮ ಜೀವನ ಪರ್ಯಂತ ಇಳುವರಿ ಕೊಡುವುದೇ ಇಲ್ಲ. ಕಾರಣ ಅದರ ವಂಶ ಗುಣ.
- ತೆಂಗಿನ ಸಸಿ ಇಳುವರಿ ಪ್ರಾರಂಭಿಸುವುದಕ್ಕೆ ತಳಿ ಗುಣದ ಜೊತೆಗೆ ಆರೈಕೆಯೂ ಅಗತ್ಯ.
- ಪ್ರಾರಂಭಿಕ ಆರೈಕೆ ತಳಿಗುಣವನ್ನು ಬೆಂಬಲಿಸುತ್ತದೆ.
- ತಳಿ ಗುಣ ಸರಿಯಾಗಿಲ್ಲದಿದ್ದರೆ ಯಾವ ಆರೈಕೆಯೂ ಫಲಿಸದು.
- ಆದುದರಿಂದ ನೆಡುವ ತೆಂಗಿನ ಸಸಿಯ ತಳಿಗುಣವನ್ನು ಸ್ವಲ್ಪವಾದರೂ ತಿಳಿದೇ ನಾಟಿ ಮಾಡುವುದು ಉತ್ತಮ.
ಏನು ತಳಿ ಗುಣ:
- ಸಸಿ (ಬೀಜ) ಆರಿಸುವಾಗ ತಾಯಿ ಮರ ಆಯ್ಕೆ ಪ್ರಮುಖ ಅಂಶ.
- ಆರೋಗ್ಯವಂತ ತಾಯಿ ಮರದಿಂದ ಬೀಜದ ಆಯ್ಕೆ ಮಾಡಿರಬೇಕು.
- ಬೀಜ ಆಯ್ಕೆ ಮಾಡುವ ಮರದ ಸುತ್ತಮುತ್ತ ಅನುತ್ಪಾದಕ, ತೀರಾ ಕಡಿಮೆ ಇಳುವರಿ ಕೊಡಬಲ್ಲ, ಬೆಳವಣಿಗೆ ನ್ಯೂನತೆ ಉಳ್ಳ. ಪೊಳ್ಳು ಕಾಯಿ ಬಿಡುವ ಮರಗಳು ಇರಬಾರದು.
- ಕೇರಳದ ಕುಟ್ಯಾಡಿ ಎಂಬಲ್ಲಿ ಈ ರೀತಿಯಲಿ ಬೀಜದ ಕಾಯಿಗಳನ್ನು ಆರಿಸುವ ವಿಧಾನ ಸುಮಾರು 25 ವರ್ಷದ ಹಿಂದೆ ನೋಡಿದ್ದೇನೆ.
ಯಾವಾಗಲೂ ಬೀಜ ತಂದು ಸಸಿ ಮಾಡುವುದು ಒಳ್ಳೆಯದು. ತೀರಾ ನಂಬಿಗಸ್ತರಾಗಿದ್ದರೆ ಮಾತ್ರ ಸಸಿಯನ್ನು ತರಬಹುದು.ಹಾಗೆಂದು ಸಸಿಯಲ್ಲಿ ಅನುತ್ಪಾದಕ ಸಸ್ಯಗಳಾಗುವ ಪ್ರಮಾಣ ಗರಿಷ್ಟ ಶೇ. 5 ಕ್ಕಿಂತ ಹೆಚ್ಚು ಇಲ್ಲ.ಕಡಿಮೆ ಇಳುವರಿಯವು ಸ್ವಲ್ಪ ಹೆಚ್ಚು ಇರುತ್ತದೆ.
- ಬೀಜವನ್ನೇ ತರುವಾಗ ಮರಗಳನ್ನು ಅವರವರೇ ಗಮನಿಸಬಹುದು.
- ಮರದ ಗರಿಯ ಬಣ್ಣ ಮತ್ತು ನಾವು ಬೀಜ ತಂದು ಸಸಿ ಮಾಡುವಾಗ ಅದರಲ್ಲಿ ಬರುವ ಎಲೆಗಳ ಬಣ್ಣ ಏಕಪ್ರಕಾರವಾಗಿದ್ದರೆ ಅದು ತಾಯಿ ಮರದ ನೈಜ ಗುಣವನ್ನು ಹೊಂದಿದೆ ಎಂದು ಭಾವಿಸಬಹುದು.
- ಒಂದು ವೇಳೆ ಸ್ವಲ್ಪ ಬಣ್ಣ ವ್ಯತ್ಯಾಸ ಬಂದರೆ ಅದು ಮಿಶ್ರ ಪರಾಗ ಸ್ಪರ್ಶ ಆಗಿರುವ ಸಾಧ್ಯತೆ ಹೆಚ್ಚು.
- ಇದು ಸುತ್ತಮುತ್ತ ಇರುವ ಮರದ ಮಿಶ್ರ ಪರಾಗ ಸ್ಪರ್ಶದಿಂದಾಗಿ ಆದದ್ದು.
- ಇದು ನೈಸರ್ಗಿಕ ಸಂಕರಣ ತಳಿಯಾಗಿರುತ್ತದೆ.
- ಆದರೆ ಇಳುವರಿ ಕೊಡುವ ಅವಧಿಯನ್ನು ಇದರ ಮೇಲೆ ಅಂದಾಜು ಮಾಡಲು ಬರುವುದಿಲ್ಲ.
- ಸುತ್ತಮುತ್ತ ಒಳ್ಳೆಯ ಇಳುವರಿ ಕೊಡುವ ಮರಗಳೇ ಇದ್ದರೆ ಆ ಸಸ್ಯ ಬಹುತೇಕ ಉತ್ತಮ ಇಳುವರಿಯನ್ನೇ ಕೊಡುತ್ತದೆ.
ತೆಂಗಿನಲ್ಲಿ ತಳಿಗೆಳೆಷ್ಟು:
- ತೆಂಗಿನಲ್ಲಿ ಎತ್ತರ ಮತ್ತು ಗಿಡ್ಡ ಎಂಬ ಎರಡು ವರ್ಗಗಳಲ್ಲದೆ ಲಕ್ಷಾಂತರ ಸಂಖ್ಯೆಯ ನೈಸರ್ಗಿಕ ಪರಾಗಸ್ಪರ್ಶದಿಂದಾಗಿ ಉಂಟಾದ ತಳಿಗಳಿವೆ.
- ಇದರಲ್ಲಿ ತಳಿ ಮೇಲ್ದರ್ಜೆಗೆ ಏರಿರಲೂಬಹುದು, ಕುಂಠಿತವಾಗಿರಲೂ ಬಹುದು.
- ಹಸುರು ಬಣ್ಣದ ಗರಿಯ ಮರಗಳು, ಹಸುರು ಮಿಶ್ರಕಂದು, ಕೆಂಪು ಮಣ್ಣಿನ ಬಣ್ಣದ ಹೀಗೆಲ್ಲಾ ವ್ಯತ್ಯಾಸಗಳಾದುದು ಹಲವಾರು ವರ್ಷಗಳಲ್ಲಿ ನೈಸರ್ಗಿಕ ಮಿಶ್ರ ಪರಾಗಸ್ಪರ್ಶದಿಂದ.
- ಒಟ್ಟಿನಲ್ಲಿ ನಾವು ಆಯ್ಕೆ ಮಾಡುವ ತಳಿಗಳಲ್ಲಿ ಹೈಬ್ರಿಡ್ ಹೊರತಾಗಿ ಯಥಾವತ್ ಮಾತೃ ಗುಣ ಹೊಂದಿದ ತಳಿ ಎಂದು ಹೇಳುವಂತಿಲ್ಲ.
ಯಾಕೆ ಅನುತ್ಪಾದಕವಾಗುತ್ತದೆ:
- ಬೀಜದ ಆಯ್ಕೆ ಮಾಡುವಾಗ ಪಾಲಿಸಬೇಕಾದ ನಿಯಮಗಳನ್ನು ಅನುಸರಿಸದೇ ಇದ್ದಲ್ಲಿ ಹೀಗಾಗುತ್ತದೆ.
- ಉತ್ತಮ ಇಳುವರಿ ಕೊಡಬಲ್ಲ ಮರದ ಸುತ್ತಮುತ್ತ ಯಾವುದಾದರೂ ಅನುತ್ಪಾದಕ ಮರ ಇದ್ದರೆ,
- ಅದರಿಂದ ಮಿಶ್ರ ಪರಾಗಸ್ಪರ್ಶ ಹೊಂದಿ ಬೀಜ ನ್ಯೂನ್ಯತೆಗೊಳಗಾಗಬಹುದು.
- ಅದು ಅನುತ್ಪಾದಕವಾಗಲೂಬಹುದು.
ಬೀಜದ ಕಾಯಿಯನ್ನು ಯಾವಾಗಲೂ ಮರದಿಂದ ಇಳಿಸಬೇಕು. ತುಂಬಾ ಎತ್ತರದ ಮರಗಳಿಂದ ಅದನ್ನು ಕೆಳಕ್ಕೆ ಹಾಕಿದರೆ ಬೀಜದ ಬ್ರೂಣಕ್ಕೆ ಘಾಸಿಯುಂಟಾಗುವ ಸಾಧ್ಯತೆಯೂ ಇಲ್ಲದಿಲ್ಲ. ಬ್ರೂಣಕ್ಕೆ ಘಾಸಿ (ಶಾಕ್) ಉಂಟಾದರೆ ಅದರಲ್ಲಿ ಇಳುವರಿ ಅಥವಾ ಬೆಳೆವಣಿಗೆ ನ್ಯೂನತೆ ಉಂಟಾಗುವ ಸಾಧ್ಯತೆ ಇದೆ.
- ತೆಂಗಿನ ತೋಟ ಮಾಡುವವರಿಗೆ ತಾವು ಬೆಳೆಸುವ ಹತ್ತಾರು ಮರಗಳಲ್ಲಿ ಒಂದು ಎರಡು ಅನುತ್ಪಾದಕ ಮರಗಳಾದರೆ ಆದರೆ ಅದನ್ನು ಕಡಿದು ತೆಗೆಯಬಹುದು.
- ಮನೆ ಹಿತ್ತಲಲ್ಲಿ ನೆಟ್ಟು ಬೆಳೆಸುವವರಿಗೆ ಹೀಗಾದರೆ ತುಂಬಾ ನಷ್ಟ.
- ಅವರು ಖಾತ್ರಿಯ ಇಳುವರಿ ಕೊಡಬಲ್ಲ ಹೈಬ್ರೀಡ್ ತಳಿಯನ್ನು ಆಯ್ಕೆ ಮಾಡುವುದು ಸೂಕ್ತ.
ಉತ್ತಮ ಸಸ್ಯದ ಆಯ್ಕೆ ವಿಧಾನ:
- ಸಸ್ಯವನ್ನೇ ಆಯ್ಕೆ ಮಾಡುವಾಗ ಮುಖ್ಯವಾಗಿ ಗಮನಿಸಬೇಕಾದ್ದು,
- ಆ ಸಸ್ಯದ ಬುಡದ ದಪ್ಪ. ಸುಮಾರು 6 ತಿಂಗಳ ಸಸ್ಯ ಹೆಬ್ಬೆರಳು ಮತ್ತು ತೋರುಬೆರಳಿನ ಮಧ್ಯದ ಅವಕಾಶದಷ್ಟಾದರೂ ದಪ್ಪ ಇರಬೇಕು.
- ಸಸಿಯಲ್ಲಿ ನಾಲ್ಕು ಎಲೆಗಳಾದರೂ ಇರಬೇಕು.
- ಕೊನೆಯ ಅರಳಿದ ಎಲೆಯಲ್ಲಿ ಗರಿಗಳು ಕಡ್ಡಿ ಬಿಟ್ಟಿರಬೇಕು.
- ತೀರಾ ದೊಡ್ದ ಸಸಿಯನ್ನು ಆಯ್ಕೆ ಮಾಡುವುದು ಸೂಕ್ತವಲ್ಲ.
- ಮನೆ ಹಿತ್ತಲಿನಲ್ಲಿ ಒಂದೆರಡು ಸಸಿ ನೆಡುವವರು ಗಿಡ್ದ ಜಾತಿಯ ತಳಿಗಳಾದ ಕಿತ್ತಳೆ ಹಳದಿ ಹಸುರು,(ಚೌಘಾಟ್ಆರೆಂಜ್, ಚೌ.ಯಲ್ಲೋ, ಗ್ರೀನ್ ಡ್ವಾರ್ಪ್ ಮುಂತಾದ ಕೆಲವು ತಳಿಗಳಿದ್ದು,
- ಅದನ್ನು ಆರಿಸಿದರೆ ಅದರಲ್ಲಿ ತಳಿ ವ್ಯತ್ಯಾಸ ಬರುವುದು ಕಡಿಮೆ.
- ಕಾರಣ ಇವು ಹೆಚ್ಚಾಗಿ ಸ್ವಕೀಯ ಪರಾಗಸ್ಪರ್ಶಕ್ಕೆ ಒಳಗಾದವುಗಳಾಗಿರುತ್ತವೆ.
- ಆದರೂ ಇದು 100% ಖಾತ್ರಿಯಲ್ಲ.
ತೆಂಗಿನ ತೋಟ ಮಾಡುವವರು ಬೀಜವನ್ನು ಪ್ರಾದೇಶಿಕತೆಗೆ ಹೊಂದುವ ಉತ್ತಮ ಬೀಜವನ್ನು ಆಯ್ಕೆ ಮಾಡಿ, ಅವರೇ ಸಸಿ ಮಾಡಿಕೊಂಡು ಅದರಲ್ಲಿ ಉತ್ತಮ ಶಕ್ತಿಯುತ ಸಸಿಗಳನ್ನು ಮಾತ್ರ ನಾಟಿಗೆ ಬಳಸುವುದು ಉತ್ತಮ.
ತೆಂಗಿನ ಸಸಿ ನೆಟ್ಟು ಉತ್ತಮ ಆರೈಕೆ ಮಾಡಿದಾಗ 6 ವರ್ಷದ ಒಳಗೆ ಇಳುವರಿಗೆ ಪ್ರಾರಂಭವಾಗುತ್ತದೆ. ಆಗದಿದ್ದರೆ ಅದನ್ನು ಅನುತ್ಪಾದಕ ಎಂದು ಪರಿಗಣಿಸಬಹುದು.ಗರಿಗಳು ಅಗಲಕ್ಕೆ ಬಿಡಿಸಿ ಬೆಳೆಯುವ ಸಸಿ ಇಳುವರಿ ಕೊಡುವ ಸಾಧ್ಯತೆ ಹೆಚ್ಚು. ನೇರವಾಗಿ ಬೆಳೆಯುವವು ಅನುತ್ಪಾದಕವಾಗುವ ಸಾಧ್ಯತೆ ಹೆಚ್ಚು.
end of the article: ———————————————————
search words: why coconut palm unprductive? # less productivity of coconut palm# Coconut# good yield of coconut# seed selection# coconut plant#