ಹೂವು ಗೊಂಚಲು ಚೆನ್ನಾಗಿ ಬರಲು ರಂಜಕ ಗೊಬ್ಬರ ಅಗತ್ಯ.

ಹೂ ಗೊಂಚಲು ಚೆನ್ನಾಗಿ ಬರಲು ರಂಜಕ ಗೊಬ್ಬರ

ಕರಾವಳಿ ಮಲೆನಾಡಿನಲ್ಲಿ ಅಡಿಕೆ , ತೆಂಗು, ಕರಿಮೆಣಸು ಬೆಳೆಗಾರರು  ಕೊಳೆ ರೋಗಕ್ಕೆ ರಾಮಬಾಣವಾಗಿ ಬಳಸಿದ್ದ ಪೊಟ್ಯಾಶಿಯಂ ಫೋಸ್ಪೋನೇಟ್ ಎಂಬ ತಯಾರಿಕೆಯಲ್ಲಿ ಇದ್ದದ್ದು ಬಹುಪಾಲು ರಂಜಕ. ಇದು ಸಸ್ಯಗಳಿಗೆ ರೋಗ ನಿರೋಧಕ ಶಕ್ತಿ ಕೊಡುವ  ತಾಕತ್ತು ಇದೆ. ಸರಿಯಾದ ಪ್ರಮಾಣದಲ್ಲಿ ಇದನ್ನು ಕೊಟ್ಟರೆ ಅದು ಫಸಲು ಹೆಚ್ಚಳಕ್ಕೂ ಸಹಾಯಕ.

ಸಸ್ಯಕ್ಕೆ ಜೀವ ಕೊಡುತ್ತದೆ:

 • ಒಂದು ಸಸ್ಯ ಬದುಕಬೇಕಾದರೆ ಅದಕ್ಕೆ ಬೇರು ಬರಲೇ ಬೇಕು.
 • ಈ ಬೇರು ಬರಲು ಪ್ರೇರಣೆ ಕೊಡುವ ಪೊಷಕ ಎಂದರೆ ಅದು ರಂಜಕ.
 • ಇದು ಸಸ್ಯಗಳಿಗೆ ಮಾತ್ರವಲ್ಲ ಎಲ್ಲಾ ಜೀವಿಗಳಿಗೂ ಅವಶ್ಯಕವಾದ ಪೊಷಕ.
 • ಪ್ರತೀ ಸಸ್ಯ ಕೋಶಗಳಲ್ಲಿ  ಎಲ್ಲಾ ಅಂಗಾಂಶಗಳಲ್ಲಿ  ಮತ್ತು ಅಂಗಗಳಲ್ಲಿ  ರಂಜಕ ಇರುತ್ತದೆ.
 • ಕೊಬ್ಬು ಹಾಗೂ ಸಾಸಾರಜನಕ ಅಭಿವೃದ್ಧಿಯಲ್ಲಿ ಇದರ ಪಾತ್ರ ಇರುತ್ತದೆ.
 •  ಸಸ್ಯದ ಆಹಾರೋತ್ಪಾದನಾ ಕಾರ್ಯಗಳು ಸಮರ್ಪಕವಾಗಿ ನಡೆಯಲು ಇದು ಬೇಕು.

ಕೆಲವು ಕಡೆ ಸಸ್ಯಗಳು ಚೆನ್ನಾಗಿ ಬೆಳೆಯುವುದೇ ಇಲ್ಲ. ಇನ್ನು ಕೆಲವು ಕಡೆ ಉತ್ತಮ ಬೆಳೆವಣಿಗೆ ಹಾಗೆಯೇ ಗುಣಮಟ್ಟದ ಫಸಲು. ಇದೆಲ್ಲಾ ನಿರ್ಧಾರವಾಗುವುದು  ಸಸ್ಯಗಳಿಗೆ ಲಭ್ಯವಾಗುವ  ರಂಜಕ ಸತ್ವದ ಮೇಲೆ.

ರಂಜಕ ಮಣ್ಣಿನಲ್ಲೇ ಇರುತ್ತದೆ:

 • ವಿಟ್ಲ ಸುತ್ತಮುತ್ತ, ರತ್ನಗಿರಿ ಸುತ್ತಮುತ್ತ ಕೆಲವು ಭಾಗಗಳಲ್ಲಿ ಬೆಳೆಯುವ ಅಡಿಕೆ ಗುಣಮಟ್ಟದಲ್ಲಿ ಸರ್ವಶ್ರೇಷ್ಟ .
 • ಕಾರಣ ಇಷ್ಟೇ. ಇಲ್ಲಿನ ಮಣ್ಣು.
 • ಜಂಬಿಟ್ಟಿಗೆ ಮಣ್ಣು (ಮುರ) ಇರುವ ಈ ಪ್ರದೇಶಗಳಲ್ಲಿ ಯಾವುದೇ ಬೆಳೆಯೂ ಚೆನ್ನಾಗಿ ಬರುತ್ತದೆ
 • ಈ ಮಣ್ಣಿನಲ್ಲಿ ರಂಜಕದ ಅಂಶ ಸುಮಾರಾಗಿ 3-4 % ದಷ್ಟು ಇರುತ್ತದೆ.
 • ಜಂಬಿಟ್ಟಿಗೆ ಕಡಿದ ಮಣ್ಣನ್ನು ಹಾಕಿದಾಗ ರಂಜಕದ ಅಂಶ ಸಸ್ಯಗಳಿಗೆ ಲಭ್ಯವಾಗುತ್ತದೆ ಎನ್ನುತ್ತಾರೆ ಕೆಲವು ವಿಜ್ಞಾನಿಗಳು.

ರಂಜಕ ಎಂಬುದು ಘನ ರೂಪದಲ್ಲಿರುವ ಒಂದು ಖನಿಜ.  ನೈಸರ್ಗಿಕ ರಂಜಕವು ಶಿಲೆಗಳ ರೂಪದಲ್ಲಿರುತ್ತವೆ.ಯಾವ ಶಿಲೆಗಳಲ್ಲಿ ಅಪಟೈಟ್ ಅಂಶ ಇದೆಯೋ ಅದು ರಂಜಕ ಶಿಲೆಯಾಗಿರುತ್ತದೆ. ಮಣ್ಣಿನಲ್ಲಿ ರಂಜಕದ ಅಂಶ ಇರುತ್ತದೆ. ಇದು ನೀರಿನಲ್ಲಿ ಕರಗುವುದಿಲ್ಲ.

ಬೆಳೆಗಳು ಮತ್ತು ರಂಜಕ:  

 • ಸಸ್ಯ ದ ಬೆಳೆವಣಿಗೆಯ ಪ್ರಾಮುಖ್ಯ ಅಂಗವಾದ ಬೇರಿನ ಬೆಳೆವಣಿಗೆಯಲ್ಲಿ ರಂಜಕ ಪ್ರಮುಖ ಪಾತ್ರ ವಹಿಸುತ್ತದೆ.
 • ಬೇರುಗಳು ಹೆಚ್ಚಾದರೆ ,ಮಣ್ಣಿನಿಂದ ಹೆಚ್ಚು ಪೋಷಕಾಂಶಗಳನ್ನು  ಹೀರಿಕೊಂಡು ಸಸ್ಯಕ್ಕೆ ಬೇಕಾದ ಪ್ರಮಾಣದಲ್ಲಿ ಒದಗಿಸುತ್ತವೆ.
 • ಇದರಿಂದ ಇಳುವರಿ ಹೆಚ್ಚುತ್ತದೆ. ಮರದ /ಸಸ್ಯದ ಅರೋಗ್ಯ ಉತ್ತಮವಾಗಿರುತ್ತದೆ.
 • ಎಲೆ ಮತ್ತು  ಕಾಂಡವನ್ನು  ಬಲಿಷ್ಟ ಗೊಳಿಸುವ ಶಕ್ತಿ ರಂಜಕಕ್ಕೆ ಇದೆ.
 • ರಂಜಕ ಬೇಕಾದಷ್ಟು ಲಭ್ಯವಾದರೆ ಅಂತಹ ಕಡೆಗಳಲ್ಲಿ ಸಸ್ಯ /ಮರ ಅಡ್ಡ ಬೀಳುವುದಿಲ್ಲ.
 •  ಬೆಳೆಯುತ್ತಿರುವ ಮತ್ತು ಮೂಡುವ ಎಲೆಗಳಲ್ಲಿ ರಂಜಕದ ಅಂಶ ಹೆಚ್ಚು ಇರುತ್ತದೆ.
 • ಪರಾಗ ಮತ್ತು ಮೊಗ್ಗುಗಳಿಗೆ ರಂಜಕದ ಅಂಶ ಬೇಕು.
 • ಸಸ್ಯಗಳ ಉಸಿರಾಟಕ್ಕೆ,  ಕಾರ್ಬೋಹೈಡ್ರೇಟುಗಳ ರೂಪಾಂತರಕ್ಕೆ , ದ್ಯುತಿಸಂಸ್ಲೇಶಣ ಕ್ರಿಯೆಗೆ ನೆರವಾಗುವ ಪೊಷಕವಾಗಿದೆ.
 • ಇದು ಇಲ್ಲದೆ ಸಸ್ಯಗಳು ಬದುಕಲು ಸಾಧ್ಯವಿಲ್ಲ. ಇದು ಸಸ್ಯಗಳಲ್ಲಿ ಶಕ್ತಿಯ ವಾಹಕವಾಗಿದೆ.

ರಂಜಕ ಸಾಕಷ್ಟು ದೊರೆತಾಗ  ಇಳುವರಿ ಹೆಚ್ಚುತ್ತದೆ. ಹಣ್ಣುಗಳು , ಹೂವುಗಳು ಹೆಚ್ಚುತ್ತವೆ. ಬೇರುಗಳು (tap roots)  ಹೆಚ್ಚು ಆಹಾರವನ್ನು ಸಂಗ್ರಹಿಸುತ್ತವೆ. ಸಸ್ಯ ಬೆಳವಣಿಗೆಯನ್ನು  ವೇಗಗೊಳಿಸುತ್ತದೆ. ಚಳಿಗಾಲದಲ್ಲಿ ಮರಕ್ಕೆ ಚಳಿಯನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಕೊಡುತ್ತದೆ.

ರಂಜಕ ಕೊರತೆ ಆದರೆ ಏನಾಗುತ್ತದೆ:

 • ಸಸ್ಯಗಳು ಹೆಚ್ಚು ಎಲೆಗಳನ್ನು ಹೊಂದಿ, ಹೆಚ್ಚು ಗೆಲ್ಲುಗಳನ್ನೂ ಹೊಂದಿರುತ್ತವೆ.
 • ಸಸ್ಯಗಳಿಗೆ ರೋಗ ನಿರೋಧಕ ಶಕ್ತಿ ಕೊಡುವ ಪೋಷಕ ಇದ್ದರೆ ಅದು ರಂಜಕ.
 • ಬಹಳಷ್ಟು ಬೆಳೆಗಳಿಗೆ ರೋಗ ಸಾಧ್ಯತೆ ಹೆಚ್ಚುವುದು ರಂಜಕದ ಕೊರತೆಯ ಕಾರಣದಿಂದ.
 • ರಂಜಕ ಕಡಿಮೆಯಾದರೆ ಎಲೆಗಳು ಸಣ್ಣದಾಗುತ್ತವೆ.
 • ಎಲೆಗಳು ನೀಲಿ ಮಿಶ್ರ ಹಸುರು ಬಣ್ಣಕ್ಕೆ ತಿರುಗುತ್ತವೆ.
 • ಎಲೆಗಳ ಬಣ್ನ ಬದಲಾಗುವುದಕ್ಕೆ ರಂಜಕದ  ಕೊರತೆ ಕಾರಣ.
 • ಎಲೆಗಳ ಅಲಗುಗಳು ಮೇಲ್ಭಾಗಕ್ಕೆ  ಮಡಚಿಕೊಂಡರೆ ರಂಜಕದ ಕೊರೆತೆ ಇದೆ ಎಂದರ್ಥ.
 • ಜೋಳ , ತೃಣಧಾನ್ಯ ಮುಂತಾದ ಬೆಳೆಗಳು ರಂಜಕದ ಕೊರತೆಯಲ್ಲಿ  ಗಿಡ್ದವಾಗಿ ಬೆಳೆಯುತ್ತವೆ. ಎಲೆಗಳ ಬಣ್ಣ  ನೇರಳೆಯಾಗುತ್ತದೆ.
 • ಹತ್ತಿ ಬೆಳೆಯಲ್ಲಿ ರಂಜಕದ ಕೊರತೆಯಿಂದ  ಎಲೆಗಳು ದಟ್ಟ ಹಸುರು ಬಣ್ಣಕ್ಕೆ ತಿರುಗುತ್ತವೆ.
 • ರಂಜಕದ ಕೊರತೆ ಇರುವ ಮಣ್ಣಿನಲ್ಲಿ ದ್ವಿದಳ ಧಾನ್ಯಗಳಲ್ಲಿ  ಕಾಳು ಕಡಿಮೆಯಾಗುತ್ತದೆ. ಬೇರುಗಳು ಬೆಳೆಯಲಾರವು.

ನಿಮ್ಮ ಹೊಲದಲ್ಲಿ ರಂಜಕದ ಕೊರತೆಯನ್ನು ಪರೀಕ್ಷಿಸಲು ಕೆಲವು ದ್ವಿದಳ ಸಸ್ಯಗಳನ್ನು ನೆಡಿ. ಸುಮಾರು 2 ತಿಂಗಳ ತರುವಾಯ ಅದರನ್ನು ಕಿತ್ತು ಬೇರನ್ನು ಪರೀಕ್ಷಿಸಿದರೆ ಅದರಲ್ಲಿ ಬೇರುಗಂಟುಗಳು  ಇರುವುದು ತುಂಬಾ ಕಡಿಮೆ ಇರುತ್ತದೆ, ಬೇರುಗಳ ಸಂಖ್ಯೆಯೂ ಕಡಿಮೆ ಇರುತ್ತದೆ. ರಂಜಕದ ಪೂರೈಕೆ ಸಾಕಷ್ಟು  ಇದ್ದರೆ ಮಾತ್ರ ದ್ವಿದಳ ಸಸ್ಯಗಳ ಬೇರುಗಳಲ್ಲಿ ಪ್ರಾಕೃತಿಕವಾಗಿ  ರಂಜಕ ಸ್ಥಿರೀಕರಣ ಆಗುತ್ತದೆ. ಇದರಿಂದ ಸಾರಜನಕ  ಮಟ್ಟವೂ ಹೆಚ್ಚುತ್ತದೆ.

 • ರಂಜಕದ ಕೊರತೆ ಇದ್ದಾಗ ಎಲೆಗಳಲ್ಲಿ ಕೆಂಪು ನೇರಳೆ ವರ್ಣದ ಚುಕ್ಕೆಗಳು ಕಾಣಿಸುತ್ತವೆ.  ಜಾಸ್ತಿ ಕೊರತೆಯಾದರೆ ಎಲೆ ಹಳದಿಯಾಗಿ ಅಲ್ಲಲ್ಲಿ ಚುಕ್ಕೆಗಳು ಕಾಣಿಸುತ್ತವೆ. ಇಳುವರಿ  ತೀರಾ ಕಡಿಮೆಯಾಗುತ್ತದೆ.
 • ಹಾಗೆಂದು ಫೋಸ್ಪರಸ್ ಹೆಚ್ಚಾದರೂ ಇಳುವರಿ ಕಡಿಮೆಯಾಗುತ್ತದೆ.ಬೆಳೆಗಳು ಬೇಗ ಬೆಳೆಯುತ್ತವೆ.

ಎಲ್ಲಾ ರೈತರೂ ತಾವು ಬೆಳೆಯುವ ಬೆಳೆಗೆ ಎಷ್ಟು NPK  ಗೊಬ್ಬರ ಬೇಕು ಅಷ್ಟು ಪ್ರಮಾಣದಲ್ಲಿ ಕೊಡಬೇಕು. ಇದರಲ್ಲಿ ಅಸಮತೋಲನ ಉಂಟಾಗಬಾರದು. ರಂಜಕ ಎಂದರೆ P  ಗೊಬ್ಬರ.ಇದನ್ನು ಕಡಿಮೆ ಮಾಡಲೇ ಬಾರದು.

Leave a Reply

Your email address will not be published. Required fields are marked *

error: Content is protected !!