ರಜೆಯ ಈ ದಿನಗಳಲ್ಲಿ ಕಲಿಯಿರಿ – ಸರಳ ಕಸಿ ವಿಧಾನ.

ಈಗ   ಕಲಿಯಲು ಬೇಕಾದಷ್ಟು  ಬಿಡುವು ಇದೆ. ಇದು ಮಾಡಿ ಕಲಿಯುವ ಸಮಯ. ಯಾರೋ ಕಸಿ ಮಾಡಿದ ಗಿಡವನ್ನು ತಂದು ನೆಡುವ ಬದಲಿಗೆ ನಿಮ್ಮಲ್ಲೇ ಇರುವ ಅನುತ್ಪಾದಕ ಮರಕ್ಕೆ ಕಸಿ ಮಾಡಿ ಅದರಲ್ಲೇ ಫಲ ಪಡೆಯಬಹುದು.

  • ಬಹಳ ಜನ  ನಮ್ಮ ಮನೆಯಲ್ಲಿ ಒಂದು ಮಾವಿನ ಮರ ಇದೆ. ಮಾವೇ ಆಗುತ್ತಿಲ್ಲ ಎನ್ನುತ್ತಾರೆ.
  • ಹಾಗೆಯೇ ಲಿಂಬೆ, ಮೂಸಂಬಿ, ನೇರಳೆ, ಗೇರು ಯಾವುದೇ ಅನುತ್ಪಾದಕ  ಮರಗಳಿರುವುದೂ  ಇದೆ.
  • ಇಲ್ಲಿ ನಾವು ಒಂದು ಮರದಲ್ಲಿ ಹಲವು ಬಗೆಯ ಮಾವು ಪಡೆಯುವ ವಿಧಾನವನ್ನು ತಿಳಿಸುತ್ತಿದ್ದೇವೆ.
  • ಇದು ಹೊಸ ವಿಷಯ ಅಲ್ಲ. ಎಲ್ಲಾ ಕಡೆ ಓದಿದ್ದೀರಿ. ಕೇಳಿದ್ದೀರಿ. ಆದರೆ ಮಾಡಿದ್ದೀರಾ ಇಲ್ಲ.
  • ಇಲ್ಲಿ ನಾವು ಹೇಳುವುದು ನೀವೇ ಇದನ್ನು ಮಾಡುವ ಕಲೆಯನ್ನು.
  • ಬರೇ ಮಾವು ಮಾತ್ರವಲ್ಲ. ಕಸಿ ಮಾಡಿ ಹೊಸ ತಳಿ ಮಾಡಬಹುದಾದ  ಎಲ್ಲಾ ಸಸ್ಯಗಳಿಗೂ ಇದೇ ರೀತಿ ಕಸಿ ಮಾಡಬಹುದು.

ಈಗ ನಿಮ್ಮ ತೋಟ , ಹಿತ್ತಲಿನ ನಿರ್ವಹಣೆಯಲ್ಲಿ ಹೆಚ್ಚು ಸಮಯ ಕಳೆಯಬಹುದು.ಈ ಸುಸಂದರ್ಭದಲ್ಲಿ ನಾವು ಕಲಿಯಬೇಕಾದ ಹಲವಾರು ಸಂಗತಿಗಳಿವೆ. ಅದರಲ್ಲಿ ಒಂದು ಕಸಿಗಾರಿಕೆ.

ಇದು ತಯಾರಿ

ಕಸಿಗಾರಿಕೆಗೆ ಇದು ಸಕಾಲ:

  • ಈ ಸಮಯದಲ್ಲಿ ಕಸಿ ಮಾಡಿದರೆ ಅದರ ಯಶಸ್ಸು ಹೆಚ್ಚು.
  • ಚಳಿಗಾಲ, ಮಳೆಗಾಲ ಯಾವುದೂ ಇದಕ್ಕೆ ಅಷ್ಟು ಸೂಕ್ತವಲ್ಲ.
  • ಈಗ  ಕಸಿ ಕೂಡುವಿಕೆ ಬೇಗ. ಯಾವುದೇ ಸೋಂಕು ಸಹ ಉಂಟಾಗುವುದಿಲ್ಲ.
  • ಗೂಟಿ, ಮೃದು ಕಾಂಡ, ಕಣ್ಣುಕಸಿ ಎಲ್ಲವನ್ನೂ ಈ ಸಮಯದಲ್ಲಿ ಮಾಡಿದರೆ ಅದರ ಫಲಿತಾಂಶ ಹೆಚ್ಚು.

ಹೇಗೆ ಪುನಶ್ಚೇತನ:

  • ವ್ಯಾವಹಾರಿಕ ಉದ್ಡೇಶದ ಕಸಿಗಾರಿಕೆ ಮಾಡುವವರಿಗೆ ಸೂಕ್ತ ಸಮಯ ಮತ್ತು ಇನ್ನಿತರ ಕಸಿ ಸೂಕ್ಷ್ಮಗಳು ಚೆನ್ನಾಗಿ ಗೊತ್ತು.
  • ಅವರು ಅದಕ್ಕನುಗುಣವಾಗಿ ಕಸಿ ಮಾಡುತ್ತಾರೆ.
  • ಆಕಾಲದಲ್ಲಿ ಕಸಿ ಮಾಡುವುದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನೂಇವರು ಇಟ್ಟುಕೊಂಡಿರುತ್ತಾರೆ.

ಸಾಮಾನ್ಯ ಕೃಷಿಕರಿಗೆ ಇದು ಗೊತ್ತಿರುವುದಿಲ್ಲ. ಕಲಿಯಬೇಕೆಂಬ ಆಸಕ್ತಿ ಇರುತ್ತದೆ. ಕಲಿತರ ಕರಗತವಾಗಿಯೇ ಬಿಡುತ್ತದೆ. ಎಲ್ಲರೂ ಇದೇ ರೀತಿ ಕಲಿತವರು.

  • ನಿಮ್ಮ ಹೊಲದಲ್ಲಿ ಯಾವುದಾದರೂ ಒಂದು ಕಾಡು ಜಾತಿಯ ಮಾವಿನ ಮರ ಇದೆಯೇ  ಅಥವಾ  ಅನುತ್ಪಾದಕ ಮರ ಇದೆಯೇ,
  • ಅದನ್ನು ಈ ಕಸಿಗೆ ಬಳಸಿಕೊಳ್ಳಿ. ಅದರಲ್ಲಿ ನಿಮಗೆ ಬೇಕಾದ ರುಚಿಯ ಮಾವನ್ನು ಪಡೆಯಬಹುದು.

ಕಸಿ ವಿಧಾನ:

  • ಮಾವಿನ ಮರದ ಕೈಗೆಟಕುವ ದಪ್ಪದ ಗೆಲ್ಲನ್ನು ಮರದ ಕಾಂಡ ಸಿಗಿಯದಂತೆ ಕಡಿಯಿರಿ.
  • ಕಡಿದ ಗಾಯದ ಭಾಗಕ್ಕೆ ಮಣ್ಣು ಇಲ್ಲವೇ ಸಗಣಿಯನ್ನು ಲೇಪಿಸಿರಿ. ಹಾಗೆಯೇ ಬಿಡಿ.
  • ಸುಮಾರು 1 ತಿಂಗಳ ಅವಧಿಯಲ್ಲಿ ಅದರಲ್ಲಿ ಹೊಸ ಚಿಗುರುಗಳು  ಹುಟ್ಟಿಕೊಳ್ಳುತ್ತವೆ.
  • ಅದರಲ್ಲಿ ಬಲಿಷ್ಟವಾದ ಒಂದು ಎರಡು ಉಳಿಸಿ ಉಳಿದವುಗಳನ್ನು ತೆಗೆಯಿರಿ.

  • ಈ ಚಿಗುರುಗಳನ್ನು ಕಸಿ ಮಾಡಲು ಬಳಕೆ ಮಾಡಬೇಕು.
  • ನಿಮಗೆ ಯಾವ ತಳಿಯ ಮಾವು ಬೇಕು, ಅದು ಮಲ್ಲಿಕಾವೋ, ಅಪೂಸೋ, ಮುಡಪ್ಪವೂ, ಬಂಗನಪಲ್ಲಿಯೋ, ರತ್ನ, ದಶೇರಿ, ರತ್ನ, ಕೇಸರ ಅಥವಾ ನಿಮ್ಮ ಆಯ್ಕೆಯ ಯಾವುದಾದರೂ ಇತರ ಮಾವು ಸಹ ಆಗಬಹುದು.
  • ಆ ಮರದ ಒಂದು ಮೊಗ್ಗು ಇರುವ ಸುಮಾರು ¾  ಅಡಿ ಉದ್ದದ ಒಂದು ಗೆಲ್ಲನ್ನು ಅದರ ಎಲೆಗಳನ್ನು ಬುಡ ಅಲ್ಲೇ ಉಳಿಸಿ ಕತ್ತರಿಸಿ ತುಂಡು ಮಾಡಿ ತರಬೇಕು.
  • ಚಿಗುರಿದ ಗೆಲ್ಲು ಬರೇ ಎಳೆಯದಾಗಿರಬಾರದು ತೀರಾ ಬೆಳೆಯಲೂ ಬಾರದು. ಸ್ವಲ್ಪ ವರ್ಣ ಬದಲಾಗಬೇಕು.
  • ಅದರ ತುದಿ ಭಾಗವನ್ನು ಮಟ್ಟಕ್ಕೆ ಕತ್ತರಿಸಿ  ತುಂಡು ಮಾಡಬೇಕು.
  • ತುಂಡು ಮಾಡಿದ ಭಾಗವನ್ನು ಸುಮಾರು 1 ಇಂಚು ಉದ್ದಕ್ಕೆ ಸೀಳಬೇಕು. 

  • ಕಸಿ ಕಟ್ಟಲು ತಂದ ಕಸಿ ಕಡ್ಡಿಯ ಬುಡ ಭಾಗವನ್ನು V ಆಕಾರದಲ್ಲಿ ಎರಡೂ ಬದಿಯಲ್ಲಿ ಕೆರೆದು ತೆಗೆದು ಅದನ್ನು ಸಿಗಿದ ಭಾಗಕ್ಕೆ ತುರುಕಬೇಕು.

ತುರುಕಿ ಆ ಭಾಗವನ್ನು ಕಸಿ ಪಟ್ಟಿಯಲ್ಲಿ ಗಾಳಿಯಾಡದಂತೆ ಕಟ್ಟಿ ಮೇಲೆ ಒಂದು ಪಾಲಿಥೀನ್ ಲಕೋಟೆಯನ್ನು ಕಸಿ ಸಂದಿನ ತನಕ ಬರುವಂತೆ ಮುಚ್ಚಬೇಕು.

  • ಸುಮಾರು 1 ತಿಂಗಳಲ್ಲಿ  ನೀವು ಕಟ್ಟಿದ ಭಾಗ ಕೂಡಿ ಕೊಳ್ಳುತ್ತದೆ.
  • ಕಟ್ಟಿದ ಕಸಿ ಪಟ್ಟಿ ಪಾರದರ್ಶಕವಾದ ಕಾರಣ ಕೂಡಿದ್ದು ಕಾಣಿಸುತ್ತದೆ.
  • ಹೊಸತಾಗಿ ಸೇರಿಸಿದ ಗೆಲ್ಲಿನಲ್ಲಿ ಚಿಗುರು ಬರಲು ಪ್ರಾರಂಭವಾದ ನಂತರ ಮೇಲೆ  ಹೊದಿಸಿದ ಲಕೋಟೆಯನ್ನು ತೆಗೆಯಬೇಕು.
  • ಸರಿಯಾಗಿ  ಮೂರು ನಾಲ್ಕು ಎಲೆ ಬಂದ ನಂತರ ಎರಡನ್ನೂ ಸೇರಿಸಿ ಕಟ್ಟಿದ ಕಸಿ ಪಟ್ಟಿಯನ್ನು ಬಿಡಿಸಬೇಕು.

ಆ ನಂತರ ಕಸಿ ಮಾಡಿದ ಗೆಲ್ಲಿನಲ್ಲಿ  ಕಸಿ ಸಂದಿನ ಕೆಳಗಡೆ ಇರುವ ಚಿಗುರುಗಳನ್ನು  ತೆಗೆಯುತ್ತಾ ಇದ್ದರೆ ಆಹಾರ ಸರಬರಾಜು ಲಭ್ಯವಾಗಿ ಕಸಿ ಮಾಡಿದ ಗೆಲ್ಲು ಚಿಗುರುತ್ತಾ ಬೆಳೆಯುತ್ತದೆ. ಮುಂದಿನ ವರ್ಷ ಅದರಲ್ಲಿ ನೀವು ಆಯ್ಕೆ ಮಾಡಿದ ತಳಿಯ ಮಾವು ಪಡೆಯಬಹುದು.

ಇದು ತರಬೇತು ಆದವರೇ ಮಾಡಬೇಕಾದ ಕಸಿ ಅಲ್ಲ. ಒಂದು ವೇಳೆ ಕಸಿ ಸರಿಯಾಗಲಿಲ್ಲ ಎಂದಾದರೆ ಮತ್ತೊಮ್ಮೆ ಪ್ರಯತ್ನಿಸಬಹುದು.  ಇಲ್ಲಿ ಹತ್ತಾರು ಚಿಗುರುಗಳಿಗೆ ಕಸಿ ಮಾಡಲು ಅವಕಾಶ ಇರುವ ಕಾರಣ ಒಂದಿಲ್ಲೊಂದು ಸರಿಯಾಗಿರುತ್ತದೆ.

 

Leave a Reply

Your email address will not be published. Required fields are marked *

error: Content is protected !!