ಸರಕಾರ ಈಗ ಅರಣ್ಯ ಇಲಾಖೆಯ ಸುಪರ್ದಿಯಲ್ಲಿದ್ದ ಸುಮಾರು 23 ಲಕ್ಷ ಎಕ್ರೆ ಅರಣ್ಯ ( ಡೀಮ್ದ್ ಫೋರೆಸ್ಟ್ )ನಲ್ಲಿ 15 ಲಕ್ಷ ಎಕರೆ ಭೂಮಿಯನ್ನು ಸರಕಾರ ಕಂದಾಯ ಇಲಾಖೆಗೆ ವರ್ಗಾಯಿಸಲು ನಿರ್ಧರಿಸಿದೆ. ಈಗಲೇ ಅರಣ್ಯ ನಾಶದಿಂದ ಕೃಷಿಕರ 10- 20 % ದಷ್ಟು ಬೆಳೆ ಕಾಡು ಪ್ರಾಣಿಗಳ ಪಾಲಾಗುತ್ತಿದೆ. ಒಂದು ವೇಳೆ ಇನ್ನೂ ಕಾಡು ಕಡಿಮೆಯಾದರೆ ಕೃಷಿಕರ ಹೊಲದಲ್ಲೇ ಕಾಡು ಪ್ರಾಣಿಗಳು ವಾಸಮಾಡಬಹುದು. ಬೆಳೆಗಳು ಕೋತಿ, ಆನೆ ಕಾಡೆಮ್ಮೆಗಳ ಪಾಲಾಗಬಹುದು. ಹಟ್ಟಿಯಲ್ಲಿರುವ ಹಸುಗಳು ಹುಲಿ, ಚಿರತೆಯ ಪಾಲಾದರೂ ಅಚ್ಚರಿ ಇಲ್ಲ.
- ಈಗಾಗಲೇ ಜಗತ್ತೇ ಹವಾಮಾನ ವೈಪರೀತ್ಯಗಳ ಸವಾಲನ್ನು ಎದುರಿಸುತ್ತಿದೆ.
- ಗ್ಲೋಬಲ್ ವಾರ್ಮಿಂಗ್ ಮನುಕುಲದ ಮೇಲೆ ಭಾರೀ ಪ್ರಹಾರವನ್ನು ಮಾಡುತ್ತಾ ಇದೆ.
- ವರ್ಷದಿಂದ ವರ್ಷಕ್ಕೆ ಪರಿಸರ ಮಾನವನ ಮೇಲೆ ತಿರುಗಿ ಬೀಳುತ್ತಿದೆ.
- ಇದಕ್ಕೆಲ್ಲಾ ಕಾರಣ ಮಾನವ ಪ್ರಕೃತಿಯ ಮೇಲೆ ಮಾಡುವ ಪ್ರಹಾರಗಳು.
ಸರಕಾರ ಅರಣ್ಯ ನಾಶವೇ ಮುಂತಾದ ತಾಪಮಾನದ ಏರಿಕೆಗೆ ಕಾರಣವಾಗುವ ಕೆಲಸಗಳನ್ನು ಮಾಡಿ, ನಮ್ಮ ಮಕ್ಕಳು, ಮರಿಮಕ್ಕಳು ಕ್ಷಮಿಸದ ಅಪರಾಧವನ್ನು ನಮ್ಮ ಆಡಳಿತ ವ್ಯವಸ್ಥೆ ಮಾಡುತ್ತಿದೆ.
ಯಾವ ಉದ್ದೇಶಕ್ಕೆ ಈ ಭೂಮಿ:
- ಅರಣ್ಯ ಇಲಾಖೆ ಕಾಡು ಉಳಿಸುವುದಿಲ್ಲ, ಅವರಿಂದ ಅರಣ್ಯ ಸಂರಕ್ಷಣೆ ಸಾಧ್ಯವಿಲ್ಲ.
- ಅದನ್ನು ಸರಕಾರವೇ ಮಾಡುತ್ತೇವೆ ಎಂದು ಅಲ್ಲ. ಬದಲಿಗೆ ಅದನ್ನು ಹರಿದು ಹಂಚುವುದಕ್ಕಾಗಿ.
- ರಾಜ್ಯದಲ್ಲಿ ಒಂದಷ್ಟು ಜನ ಬಗೈರ್ ಹುಕುಂ ಅಂದರೆ ಅನುಮತಿ ಇಲ್ಲದೆ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿ ಅಲ್ಲಿ ಕೃಷಿ ಮಾಡಿದವರಿದ್ದಾರೆ.
- ಅವರಿಗೆ ಅದರ ಹಕ್ಕು ಪತ್ರ ನೀಡಿ ಕೃತಾರ್ಥರಾಗಬೇಕಿದೆ.
- ಅಲ್ಲದೆ ಜನ ಸಂಖ್ಯೆ ಹೆಚ್ಚಾದಂತೆ ಅವರಿಗೆಲ್ಲಾ ನಿವೇಶನಕ್ಕೆ ಜಾಗ ಹಂಚಲು ಸರಕಾರದ ಕಂದಾಯ ಇಲಾಖೆಯಲ್ಲಿ ಭೂಮಿ ಇಲ್ಲವಂತೆ.
- ಅದಕ್ಕೆಲ್ಲಾ ಈಗ ಉಳಿದಿರುವುದು ಬರೇ ಅರಣ್ಯ ಭೂಮಿ ಮಾತ್ರ.
- ಅದೂ ಮುಗಿದರೆ ಮತ್ತೆ ಮೀಸಲು, ಹಾಗೂ ರಕ್ಷಿತ ಅರಣ್ಯವೇ ಗತಿ.
- ಇದು ಜನರಿಗಾಗಿಯೋ ಅಥವಾ ಚುನಾವಣೆಯಲ್ಲಿ ಮತ ಕೇಳುವ ಉದ್ದೇಶಕ್ಕೋ ತಿಳಿಯದಾಗಿದೆ.
ಅರಣ್ಯವೇ ಬೇಕೇ? ಬೇರೆ ಇಲ್ಲವೇ?
- ಈ ಹಿಂದಿನ ಸರಕಾರ ವಸತಿ ರಹಿತರಿಗೆ ಭೂಮಿ ಹಂಚಲು ಸಾಕಷ್ಟು ಭೂಮಿಯನ್ನು ಕಂದಾಯ ಭೂಮಿಯಾಗಿ ಪರಿವರ್ತಿಸಿದೆ.
- ಪಶುಗಳು ಮೇಯಲೆಂದು ಮೀಸಲಿಟ್ಟ ಭೂಮಿಯನ್ನೂ ಆಗಿನ ಸರಕಾರ ಹರಿದು ಹಂಚಿ ತಿಲತರ್ಪಣ ಮಾಡಿದೆ.
- ಈ ಸರಕಾರ ಮತ್ತೆ ಸ್ವಲ್ಪ ಮುಂದೆ ಹೋಗಿದೆ. ಅರಣ್ಯ ಪ್ರದೇಶವೆಂದು ಪರಿಗಣ್ಣಿಸಲ್ಪಟ್ಟ ( ಮೀಸಲು ಮತ್ತು ರಕ್ಷಿತ ಅರಣ್ಯ ಅಲ್ಲ) ಅರಣ್ಯಕ್ಕೆ ತನ್ನ ದೃಷ್ಟಿ ಹರಿಸಿದೆ.
- ಬಹುಷಃ ಈ ಭೂಮಿಯಲ್ಲಿ ಅರಣ್ಯ ಇದ್ದ ಕಾರಣದಿಂದಲೇ ಇಂದು ಸ್ವಲ್ಪವಾದರೂ ಪ್ರಾಕೃತಿಕ ಸಮತೋಲನ ಉಳಿದುಕೊಂಡಿದೆ.
- ಏಕೆಂದರೆ ಅಲ್ಲಿ ಅರಣ್ಯ ಇಲಾಖೆಯ ಅನುಮತಿ ಇಲ್ಲದ ಕಾರಣ ಜನ ಕಾಡು ಕಡಿದಿಲ್ಲ.
- ಇದನ್ನು ಅಧಿಕೃತವಾಗಿ ಕಂದಾಯ ಭೂಮಿಯಾಗಿ ಪರಿವರ್ತಿಸಿದರೆ ಕಾಡು ಹೋಗಿ ಕಟ್ಟಡಗಳು ಏಳಬಹುದು.
- ಮೋನೋ ಕಲ್ಚರ್ ಕೃಷಿ ಆಗಬಹುದು.
ಜನರಿಗೆ ಹಂಚಲು ನಮ್ಮಲ್ಲಿ ಸಾಕಷ್ಟು ನಿರುಪಯುಕ್ತ ಭೂಮಿ ಇದೆ. ಕೆಲವರು ಸಾಗುವಳಿ ಮಾಡದೆ ಸಾವಿರಾರು ಹೆಕ್ಟೇರು ಭೂಮಿಯನ್ನು ಅನಧಿಕೃತವಾಗಿ ದಾಖಲೆ ಇಲ್ಲದೆ ಅನುಭವಿಸುತ್ತಿದ್ದಾರೆ. ಅದೆಷ್ಟೋ ಜನ ಉಳುವವನೇ ಹೊಲದೊಡೆಯ ಎಂದು ಭೂಮಿ ಪಡೆದು ಅದನ್ನು ಕೃಷಿ ಮಾಡದೆ ಪಾಳು ಬಿಟ್ಟವರಿದ್ದಾರೆ.
- ಸರಕಾರ ಇಂತಹ ಭೂಮಿಯನ್ನು ವಶಪಡಿಸಿಕೊಂಡರೂ ಸಹ ಬಡವರಿಗೆ ಹಂಚಲು ಬೇಕಾಗುವ ಭೂಮಿ ಲಭ್ಯ.
- ಇದು ಬಿಟ್ಟು ಮನುಕುಲದ ಮೇಲೆ ತೊಂದರೆ ಮಾಡುವ ಅರಣ್ಯ ಭೂಮಿಗೇ ಕಣ್ಣು ಹಾಕಿದ ಈ ಸರಕಾರದ ಬಗ್ಗೆ ಪಬ್ಲಿಕ್ ಟಿವಿಯ ರಂಗನಾಥ್ ರವರು ಕೆಟ್ಟ ಭಾಷೆಯಲ್ಲಿ ಹೇಳುವುದು ನಿಜವೇನೋ ಅನ್ನಿಸುತ್ತದೆ.
ಭೂಮಿ ಹಂಚಿಕೆ ಯಾವಾಗಲೂ ಮುಗಿಯದ ಅಧ್ಯಾಯ:
- ದೇಶದಲ್ಲಿ ಸ್ವಂತ ಭೂಮಿ ಮತ್ತು ಸ್ವಂತ ಮನೆ ಇಲ್ಲದ ಕುಟುಂಬ ಇಲ್ಲ ಎಂದು ಅಗುವುದಕ್ಕೆ ಸಾಧ್ಯವೇ ಇಲ್ಲ.
- ಯಾಕೆಂದರೆ ಜನಸಂಖ್ಯೆ ಹೆಚ್ಚಳವಾಗುತ್ತಲೇ ಇದೆ. ಭೂಮಿ ಪಡೆದವರೂ ಅದನ್ನು ಮಾರಾಟ ಮಾಡಿ ಮತ್ತೆ ಭೂಮಿ ಕೇಳುತ್ತಾರೆ.
- ಹಾಗಾದ ಕಾರಣ ಆವರಿಗೆ ಹಂಚಲು ಬಹುಷಃ ನಿರಂತರವಾಗಿ ಭೂಮಿ ಬೇಕೇ ಬೇಕು.
- ನಮ್ಮ ದೇಶದಲ್ಲಿ ಭೂಮಿ ಹೊಂದುವುದು ಎಂದರೆ ಅದು ಪ್ರತಿಷ್ಟೆಯ ವಿಚಾರ ಆದ ಕಾರಣ ಪ್ರತೀಯೊಬ್ಬನ ಜೀವನದ ಏಕೈಕ ಗುರಿ ಭೂಮಿ ಹೊಂದಿ ಸ್ವಂತ ಮನೆ ಕಟ್ಟಿ ಕೊಳ್ಳುವುದು.
- ಇದು ತಪ್ಪಲ್ಲ. ಅದರೆ ಒಟ್ಟಾರೆ ನಮ್ಮ ಪರಿಸ್ಥಿತಿ ಮುಂದೆ ಏನಾಗಬಹುದು ಎಂಬ ಬಗ್ಗೆ ಯೋಚಿಸಬೇಡವೇ?
ಮುಂದಿನ ದಿನಗಳಲ್ಲಿ ತಾಪಮಾನ 2-3 ಡಿಗ್ರಿ ಹೆಚ್ಚಳವಾದರೆ ನಾವು ಬದುಕುವುದು ಹೇಗೆ? ಅಕಾಲಿಕ ಮಳೆ , ನೀರಿನ ತೀವ್ರ ಕೊರತೆ , ,ಮುಂತಾದ ಪ್ರಾಕೃತಿಕ ವಿಕೋಪಕಗಳಾದರೆ ಮಾನವನ ಸಕಲ ಐಶ್ವರ್ಯಗಳ ಗತಿ ಏನು? ಈ ಘನ ಘೋರ ಘಟನಾವಳಿಗಳ ಕನಿಷ್ಟ ಜ್ಞಾನವೂ ನಮ್ಮ ಆಡಳಿತ ಮಾಡುವವರಿಗೆ ಇಲ್ಲದಿರುವುದು ನಮ್ಮ ದುರದೃಷ್ಟ.
ಇನ್ನೂ ಅನುಮತಿ ಸಿಕ್ಕಿಲ್ಲ:
ಸರಕಾರದ ಕಂದಾಯ ಸಚಿವರು ಮತ್ತು ಅರಣ್ಯ ಸಚಿವರ ಸಮಿತಿ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಈ ಬಗ್ಗೆ ಸುಪ್ರೀಮ್ ಕೋರ್ಟ್ ಗೆ ಪ್ರಮಾಣಪತ್ರ ಸಲ್ಲಿಸಿ ಅನುಮತಿ ಪಡೆಯಬೇಕಿದೆ. ಅದು ಅಷ್ಟು ಸುಲಭದ ವಿಚಾರ ಅಲ್ಲ. ಸರಕಾರ ಈ ಸಮಾಜ ವಿರೋಧಿ ಕಾರ್ಯವನ್ನು ಜನತೆ ಪ್ರತಿಭಟಿಸಿದರೆ ಕೇಂದ್ರ ಸರಕಾರ ಮತ್ತು ಸಂಬಂಧಿಸಿದವರಿಗೆ ಪರಿಸ್ಥಿತಿಯ ಅರಿವು ಉಂಟಾಗಿ ಇಂತಹ ಕಾರ್ಯಗಳಿಗೆ ಹಿನ್ನಡೆ ಆಗಬಹುದು.
end of the article:———————————————————————
search words: land de-notification # Forest land # forest encroachment# Environment# Wild animals# Agriculture# wild animals in agriculture land#